ಮೂರು ದಿನದ ಹಿಂದೆ ಮನೆಯಲ್ಲಿ ಬೀಳುವ ಎಳೆ ಬಿಸಿಲಿಗೆ ಕುಳಿತ ಮಗನ ಮುಖದ ಮೇಲೆ ಕಿರಣಗಳು ಫಳಫಳಿಸುತ್ತಿದ್ದವು. ಅವನ ಮುಂದೆ ಫೈಬರ್ ಛೇರ್ ನೊಳಗೆ ಇಣುಕುವ ತುಂಡು ತುಂಡು ಚೌಕಾಕಾರದ ಕತ್ತಲು ಅವನ ಮುಖದ ಮೇಲಿತ್ತು. ತಕ್ಷಣವೇ ಕ್ಯಾಮೆರಾ ತೆಗೆದುಕೊಂಡು ಫೋಟೋ ಕ್ಲಿಕ್ಕಿಸಿದೆ. ಬ್ಯಾಕ್ ಟು ಬ್ಯಾಕ್ ನನಗೆ ಕತ್ತಲು ಬೆಳಕಿನ ಚಿತ್ರ ತೆಗೆವ ನನ್ನ ಕುತೂಹಲದ ಕಡೆ ಗಮನ ತೇಲಿತು.
ಯಾಕೆ ನಾನು ಈ ಕತ್ತಲು ಬೆಳಕಿನ ಚಿತ್ರಗಳ ಸೆಳೆತಕ್ಕೆ ಬಿದ್ದೆ? ಯಾವಾಗಿನಿಂದ ಈ ಫೋಟೋ ಗೀಳಿಗಂಟಿದೆ? ತಕ್ಷಣಕ್ಕೆ ಯಾವುದೂ ಹೊಳೆಯಲಿಲ್ಲ. ಆದರೆ, ಕತ್ತಲು ಮತ್ತು ಬೆಳಕು ಪದಗಳು ಮಾತ್ರ ನನಗೆ ಕಾಡಲು ಶುರುವಾಯಿತು. ನನ್ನ ಹೆಸರಿನ ಕೊನೆಯೆರಡು ಅಕ್ಷರ ಬೆಳಕನ್ನು ಸೂಚಿಸಿದರೆ, ನಾನು ವರ್ಷಗಳ ಹಿಂದೆ ಬಿದ್ದ ” ಸೆಳೆತ” ಕ್ಕೆ ಪರ್ಯಾಯ ಪದ ಕತ್ತಲು ಎಂದಾಗುತ್ತದೆ.
ಜೀವ ಕಳೆವಾಮೃತಕೆ ಒಲವೆಂದು ಹೆಸರಿಡಬಹುದೇ? ಪ್ರಾಣ ಉಳಿಸೋ ಖಾಯಿಲೆಗೆ ಪ್ರೀತಿಯೆಂದೆನ್ನಬಹುದೇ?!! ಆಹಾ…. ಭಟ್ರು ಯಾಕೋ ನೆನಪಾದ್ರು.. ಬಿಡಿ, ಎಂದೋ ಬಿದ್ದ ಕತ್ತಲೆಯಿಂದ ಹೊರಬಂದು ಬೆಳಕಿನ ಬೆರಳಿಡಿದು ಜೀವನ ರೂಪಿಸಿಕೊಂಡಿದ್ದಕ್ಕಿರಬಹುದು ಅಥವಾ ಉಜ್ವಲ ಬದುಕಿನಿಂದ ಯಾವುದೋ ವಿಷ ಘಳಿಗೆಯಲ್ಲಿ ಕತ್ತಲೆ ಪಾಲಾದ ಕುರುಹಿಗೋ ಒಟ್ಟಿನಲ್ಲಿ ಈ ಕತ್ತಲು ಮತ್ತು ಬೆಳಕು ಎರಡೂ ಒಂದರ ಹಿಂದೆ ಅಥವಾ ಒಂದರ ಮುಂದೆ ಪರಸ್ಪರವಿದ್ದೇ ಇರಬಹುದು.
ಈ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದ ಶಾನುಭೋಗ ಹೊಸ ಖಾತಾಕಿರ್ದಿ ಯಾವುದೂ ಇಲ್ಲದ ಕಾರಣಕ್ಕೆ ತನ್ನ ಹಳೇ ಟ್ರಂಕು ತೆಗೆದು ಲೆಕ್ಕ ಹಾಕುವಾಗ ವರ್ಷಗಳ ಹಿಂದಿನ ಬಾಕಿ ವಸೂಲಿನ ಚೀಟಿ ಸಿಕ್ಕವನಂತೆ ಪತ್ರಗಳನ್ನು ಹರವಿಕೊಂಡು ಕುಳಿತೆ… ಮಡಚಿಟ್ಟ ಪದರುಗಳಲ್ಲಿ ವರ್ಷಗಳ ಆಯಸ್ಸು ಬಿಡಿಸಿಕೊಂಡು ಪಕಳೆಗಳಂತಾದವು. ನಾನು ಬರೆದದ್ದು, ಗೆಳೆಯರು, ಅಪ್ಪ, ಬರೆದದ್ದು. ಕೊನೆಗೆ “ಕತ್ತಲು” “ಬೆಳಕಿಗೆ” ಬರೆದ ಪತ್ರಗಳು,ಹಾಸ್ಟಲ್ ನಲ್ಲಿದ್ದಾಗ ದುಡ್ಡು ಕಳಿಸಲು ಕೋರಿ ಬರೆಯುತ್ತಿದ್ದ ಪತ್ರಗಳಿಗೆ ಬಂದ ಉತ್ತರಗಳು. ಹೀಗೆ ಓದುತ್ತಾ ಕುಳಿತವನಿಗೆ ಆಗಿನ ತಲ್ಲಣಗಳು ಈಗ ಪಿಚ್ಚೆನಿಸಿದವು. ಕೆಲವು ಆಪ್ತ ಮತ್ತು ಹಲವು ಭಾವುಕ. .
ಇವೆಲ್ಲದರ ಹೊರತಾಗಿಯೂ ಪ್ರೀತಿ ವಿಷಯದಲ್ಲಾಗುವ ಎಡವಟ್ಟುಗಳು, ತಮಾಷೆ, ಗಿಲ್ಟು, ಗಿಮಿಕ್ಕು, ಖುಷಿ, ವಿರಹ ಒಂದೊಂದಲ್ಲ. ವಿಚಿತ್ರವೆಂದರೆ, ನಾನು ಮೆಜಾರಿಟಿಗೆ ಬಂದ ನಂತರ ಆರಂಭದಲ್ಲಿ ಒಬ್ಬರಿಗೂ ನನ್ನ ಪರವಾಗಿ ಒಂದೂ ಪ್ರೇಮ ಪತ್ರವನ್ನು ಬರೆದಿಲ್ಲ. ಮೆಜಾರಿಟಿ ಅಂತ ಪರ್ಟಿಕ್ಯೂಲರ್ ಆಗಿ ಯಾಕೆ ಬರೆದೆನೆಂದು ಕೊನೆಗೆ ನೋಡಿ.. ಬರೆದಿದ್ದೆಲ್ಲ ನಂತರವೇ.
ಈಗಲೂ ನನಗೆ ತಿಂಗಳಿಗೊಂದು ಹಸ್ತಾಕ್ಷರವಿರುವ ಪ್ರೇಮ ಪತ್ರ ತಲುಪುತ್ತದೆ. ನಾನು ಅಪ್ಪಿತಪ್ಪಿ ಓದದೇ ಅದನ್ನು ಸಾದಾ ಸೀದ ತೂಕ ಅಳತೆ ಮಾಡುವವನ ಕೈಗಿಡುತ್ತೇನೆ. ಪ್ರತಿಯಾಗಿ ಒಂದು ಮೂಟೆ ಕಟ್ಟಿ ಕೊಡುತ್ತಾನೆ. ಸುಂಕದ ರೂಪದಲ್ಲಿ ಎಣಿಸಿ ದುಡ್ಡು ಕೊಟ್ಟುಬಿಡುತ್ತೇನೆ. ಮನೆಗೆ ಬಂದು ಆ ಪತ್ರದಲ್ಲಿ ರುವಂತೆ ಅಳತೆಗನುಗುಣವಾಗಿ ಮೂಟೆಯ ಸರಕಿದ್ದಲ್ಲಿ ಮಾತ್ರ ನನ್ನ ಪ್ರೀತಿಗೆ ಗೆಲುವು ಫಲಿಸಿದಂತೆ…
ಇಪ್ಪತ್ತೈದು ವರ್ಷಗಳ ಹಿಂದೆ ಆಗತಾನೇ ಜನುಮದ ಜೋಡಿ ಸಿನಿಮಾ ರಿಲೀಜ್ ಆಗಿತ್ತು… ಅದರಲ್ಲಿ “ಶಿವಣ್ಣ” ಹೀರೋ.. “ಶಿಲ್ಪ” ಹೀರೋಯಿನ್ನು. ಅದೇ ಹೆಸರಿರುವ ಒಂದು ಜೋಡಿಯ ಲವ್ ಸ್ಟೋರಿ ಮಾತ್ರ ಪಕ್ಕಾ ಚೆಲುವಿನ ಚಿತ್ತಾರದ ಅಮ್ಮೂ ಏಜಿನದು.. ನಾನು ಬರೆದುಕೊಟ್ಟ ಅದೊಂದು ಪತ್ರ ಮದುವೆಯ ಹಂತಕ್ಕೆ ತಂದು ನಿಲ್ಲಿಸಿತ್ತು… ಯಾವಾಗ ಏನಾಗುತ್ತೋ ಯಾರೂ ಹೇಗೆ ಬದಲಾಗುತ್ತಾರೋ? ಪರಿಸ್ಥಿತಿ ಯಾರನ್ನು ಹೇಗೆ ದೈನೇಸಿಯನ್ನಾಗಿಸು ತ್ತದೋ? ಗೊತ್ತೇ ಆಗುವುದಿಲ್ಲ. “ಯಾವ ಹೂವು ಯಾರ ಮುಡಿಗೋ….” ಹಾಡಿನಂತಾದರು. ಈಗವರು ಸಂತೃಪ್ತ ಬದುಕು ಕಂಡಿದ್ದಾರೆ; ಬೇರೆ ಬೇರೆ ದಂಪತಿಯಾಗಿ.
ಆದರೆ ಆ ಪತ್ರ ಬರೆಯುವ ಉಮ್ಮೇದಿಯಿತ್ತಲ್ಲ? ಅಮ್ಮೂ ಮೇಲಿನ ಪ್ರೀತಿಯನ್ನು ಚಿತ್ತಾರದ ಗಣಿಗೆ ಹೇಳಲಾಗದಿದ್ದರೂ ನಮ್ಮ ನಡುವಿನ ಗಣಿಯ ತಲ್ಲಣಗಳನ್ನು ಇಡೀ ಪತ್ರದಲ್ಲಿ ನಾನೇ ಅನುಭವಿಸಿದಂತೆ ಬರೆದುಕೊಟ್ಟಿದ್ದು ಅಷ್ಟರ ಮಟ್ಟಿಗೆ ಚೆಲುವು ಉಲ್ಲಾಸದ ಹೂ ಮಳೆಯಂತಾಗಿತ್ತು.. ಏನೇ ಹೇಳಿ ಪತ್ರಕ್ಕಿರುವ ಘಮ ಜಂಗಮವಾಣಿಯ ತರಂಗಿಣಿಗಿಲ್ಲ. ಕೈ ಬೆರಳಿಗಂಟುವ ಅಕ್ಷರಗಳ ನೆನಪು, ಕುಟ್ಟುವ ಸ್ಮಾರ್ಟ್ ಫೋನಿನ ಕೀ ಪ್ಯಾಡ್ ಗಿಲ್ಲ.
ಅದು ಬಿಡಿ, ಅಪ್ರಾಪ್ತ ವಯಸ್ಸಿನಲ್ಲೇ ನಾನು ಪ್ರೇಮ ಪತ್ರವನ್ನು ಬರೆದುಕೊಟ್ಟಿದ್ದೆನೆಂದರೆ ನೀವು ನಂಬಲೇಬೇಕು. ಆಗಿನ್ನು ಐದನೇ ಕ್ಲಾಸೋ ಆರು ಓದುತ್ತಿದ್ದೆ. “ನಾವ್ ಅಚ್ಚ ಕನ್ನಡಾ ಮೀಡಿಯಮ್ಮು”. ಅಷ್ಟೇ ಅಲ್ಲ, ಒಂಚೂರು ದುಂಡಗೂ ಬರೆಯುತ್ತಿದ್ದೆನು. ಆಗ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಹುಡುಗಿಯೊಬ್ಬಳು ಯಾವುದೋ ಹಳ್ಳಿಯಿಂದ ಬಸ್ಸಿಳಿದು ನಮ್ಮ ಮನೆ ಮುಂದಿನಿಂದ ಹಾದು ಶಾಲೆಗೆ ಹೋಗುತ್ತಿದ್ದಳು. ಅದೇ ಪ್ರಿಮೈಸಸ್ ನಲ್ಲಿದ್ದ ಹುಡುಗನೊಬ್ಬನಿಗೆ ಲೈಟಾಗಿsssssss ಟೀಚರಮ್ಮನ ಮ್ಯಾಲೆ ಲವ್ವಾಗಿದೆ. ಸ್ಮೈಲಾಯ್ತು, ಹಾಯ್ ಆಯ್ತು. ಮಾತು ಶುರುವಾಯ್ತು. ಭೇಟಿಯಾಗಲು ಬರುತ್ತಿದ್ದ ಬಸ್ಸೇ ರಾಯಭಾರಿ. ಬಸ್ ಸ್ಟಾಂಡೇ ಹಾಟ್ ಸ್ಪಾಟು.
ಇನ್ನೇನಿದ್ದರು ಪ್ರೇಮ ನಿವೇದನೆ. ಪತ್ರ ಬರೀಬೇಕು. ಹುಡುಗನಿಗೆ ಪತ್ರ ಬರೆಯಲಾಗುತ್ತಿಲ್ಲ. ಭಾವನೆಗಳಿವೆ, ಬರೆಯುವುದಕ್ಕೆ ಪದಗಳಿಲ್ಲ… ಹೊಳೆದರೂ ಬರೆಯಲಾಗುತ್ತಿಲ್ಲ, ಬರೆದರೂ ಇಂಪ್ರೆಸ್ ಆಗುವಂಥ ಬರವಣಿಗೆ ಏನಿಲ್ಲ.. ಹೇಗಾದರೂ ಸರಿ ಪತ್ರ ಬರೆಯಬೇಕು. ಹುಡುಗ ಬಸ್ ನಿಲ್ದಾಣಕ್ಕೆ ಹೊರಡುವುದು ಲೇಟಾದರೆ ಆಕೆ ಬಾಯಲ್ಲೂ ಕೂಡ ಬೆಳಿಗ್ಗೆ ಏಳು ಗಂಟೆ ನಲವತ್ತೈದು ನಿಮಿಷದ ಹೊತ್ತಿಗೆ ಶಾಲೆಗೆ ಹೊರಡುವ ಸಮಯದಲ್ಲಿ ನಮ್ಮ ಮನೆ ಮುಂದೆ ಆಕಾಶವಾಣಿ ಧಾರವಾಡ ಸ್ಟೇಷನ್ನಲ್ಲಿ ಬರುವ ” ಓ ಗುಣವಂತ….. ಓ ಗುಣವಂತ… ನಿನ್ನಾssssss ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ….” ಕಣ್ಣು ಹಾಯಿಸುತ್ತಾ ಗುನುಗುವ ಹಾಡು…
ಇಂಥ ಸಮಯದಲ್ಲೇ ಅಪ್ರಾಪ್ತ ವಯಸ್ಸಿನ ನನ್ನ ಕೈಯಲ್ಲಿ ಆ ಯುವಕ ತನ್ನ ಇಂಗಿತದ ಪ್ರೇಮಪತ್ರವನ್ನು ಬರೆಸಿಕೊಂಡು ಆ ಟೀಚರಮ್ಮನಿಗೆ ಕೊಟ್ಟು “ಮುಗುಳು ನಗೆ” ನಕ್ಕಿದ್ದ…. ಮುಂದೇನಾಯಿತು?! ಅದು ಈಗ ಅಪ್ರಸ್ತುತ.
ಈಗಿನಂತಾಗಿದ್ದರೆ ಹುಡುಗರು ಹೊಡಿ ಒಂಭತ್ತ್ ಎನ್ನುತ್ತಾ ಚಿಲ್ ಆಗಿರುತ್ತಿದ್ದರು… ಒಟ್ಟಿನಲ್ಲಿ ನನ್ನ ಮಗನ ಒಂದಷ್ಟು ಫೋಟೋ ತೆಗೆಯಲು ನೆರವಾದ ಕತ್ತಲು ಬೆಳಕು ಹಳೆಯ ಪತ್ರಗಳನ್ನು ಕೆದಕಿ ಓದುವಂತಾಗಿದ್ದಲ್ಲದೇ ಕೆಲವು ಪ್ರೇಮ ಪತ್ರಗಳು ಹುಟ್ಟಿಸಿದ ಪ್ರಸಂಗಗಳನ್ನೂ ನೆನಪಿಸಿತು….
–ಪಿ.ಎಸ್. ಅಮರದೀಪ್.