ಕ್ಲಾಸಿನಲ್ಲಿ ಪಾಠ ಓದಲು ಎದ್ದು ನಿಂತ ಪುಟ್ಟ ಕಂದಮ್ಮ ಭಯಗೊಂಡಿದ್ದಾನೆ, ಸಣ್ಣನೆಯ ನಡುಕ ಮೈ ತುಂಬಾ ಹರಡಿ ತುಟಿಯ ತುದಿಯಲ್ಲಿ ಕುಳಿತಿದೆ, ತೊದಲಿದರೆ ಎನ್ನುವ ಆತಂಕ ಆ ಚಿಕ್ಕ ಕಣ್ಣುಗಳನ್ನು ದಾಟಿ ಹೊರ ಬರುತ್ತಿದೆ, ಕೈಯಲ್ಲಿ ಅಂಗಿಯ ತುದಿಯನ್ನು ಹಿಡಿದು ಎಳೆಯುತ್ತಿದ್ದಾನೆ, ಶಕ್ತಿಮೀರಿ ಹೊರಡಿಸಿದ ಮಾತು ಬೆಚ್ಚನೆಯ ಗೂಡಿನಿಂದ ಕೆಳಬಿದ್ದ ನಡುಗುವ ಗುಬ್ಬಚ್ಚಿಯಂತೆ,ಮುದ್ದಾಗಬೇಕಿದ್ದ ಮಾತು ಮೊದ್ದಾಗಿದೆ, ತೊದಲು. ಕಂದಮ್ಮನ ಕಣ್ಣಿನಿಂದ ಮಾತು ಹೊರಬರುತ್ತಿಲ್ಲ ಶಬ್ದಗಳು ಹನಿಗಳಾಗಿವೆ.
ಇಲ್ಲಿಯೂ ಹಾಗೆ ಕಥೆಯ ನಾಯಕ ಅಂತಿಥವನಲ್ಲ, ಅವನು ಬ್ರಿಟಿಷರ ರಾಜನಾಗಬೇಕಾದವನು, ತೊದಲಿಗೆ ಯಾರದಾರೇನು ? ಅಂತಸ್ತು ಏನಿದ್ದರೇನು, ಎಲ್ಲವೂ ದೇಹವಲ್ಲವೆ ?
ಇದು ೧೯೨೫ ರ ಕಾಲ ಆಲ್ಬರ್ಟ್, ಡ್ಯೂಕ್ ಆಫ್ ಯಾರ್ಕ್, ಬ್ರಿಟನ್ನಿನ ಯುವರಾಜ, ಒಂದು ದಿನ ಸಮಸ್ತ ಬ್ರಿಟನ್ನಿಗೆ ರಾಜನಾಗಬೇಕಾದವನು, ಅಂಥವನಿಗೆ ಮಾತನಾಡುವಾಗ ತೊದಲುವ ತೊಂದರೆ. ಇದು ಸಾಧಾರಣ ತೊದಲುವಿಕೆ ಅಲ್ಲ ಒಮ್ಮೊಮ್ಮೆ ಮಾತನಾಡುವಾಗ ನಿಮಿಷಗಳಷ್ಟು ಕಾಲ ಮಾತು ಹೂತುಹೋಗಿ ಒದ್ದಾಡುತ್ತಿದ್ದುದು ಇದೆ.
ಚಿತ್ರದ ಶುರುವಾತಿನಲ್ಲಿ ನಿಜ ಘಟನೆಯೊಂದನನ ತೋರಿಸಲಾಗಿದೆ. ಡ್ಯೂಕ್ ನ ತಂದೆ ಪ್ರಸ್ತುತ ಮಹಾರಾಜ, ಬೃಹತ್ ಸಾರ್ವಜನಿಕ ಸಮಾರಂಭದ ಸಮಾರೋಪ ಭಾಷಣ ಮಾಡಲು ಅವರ ಕಿರಿಯ ಮಗನನ್ನು ನಿಯೋಜಿಸಿದ್ದಾರೆ. ಕೇವಲ ಅಲ್ಲಿ ನೆರೆದಿರುವ ಸಾವಿರಾರು ಮಂದಿಯನ್ನು ಉದ್ದೇಶಿಸಿ ಮಾತ್ರವಲ್ಲ, ಬಿಬಿಸಿ ರೇಡಿಯೋದಲ್ಲಿ ನೇರ ಪ್ರಸಾರವಾಗಲಿರುವ ಈ ಭಾಷಣವನ್ನು ಜಗತ್ತಿನಾಂದ್ಯಂತ ಕೋಟ್ಯಾಂತರ ಮಂದಿ ಆಲಿಸಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಒತ್ತಡ ಸಹಜವಲ್ಲವೇ ? ಚಿತ್ರದ ಶುರುವಾತಿನ ಈ ದೃಶ್ಯದಲ್ಲಿ ನೀವು, ಡ್ಯೂಕ್ ಪಾತ್ರ ನಿರ್ವಹಿಸಿರುವ ಕೊಲಿನ್ ಫರ್ತ ಅವರ ಅಭಿನಯ ನೋಡಬೇಕು,ಒಂದು ಮಾತಿಲ್ಲದೆ ಕೇವಲ ಅಭಿನಯದ ಮೂಲಕ ಅಂಜಿಕೆ ಮತ್ತು ಹತಾಶೆಯ ಹಿಡಿತದಲ್ಲಿರುವ ಸೋತ ವ್ಯಕ್ತಿಯ ಭೌತಿಕ ಭಾವವನ್ನು ತಲುಪಿಸುವ ಮಾಧ್ಯಮವಾಗಿದ್ದಾರೆ. ಕ್ರೀಡಾಗಂಣದ ವಿಸ್ತಾರದೊಳಗೆ ತಮ್ಮನ್ನು ತಾವು ಅಡಗಿಸಿಡುವ ಶೋಚನಿಯ ಸ್ಥಿತಿಯಲ್ಲಿ ಡ್ಯೂಕ್ ನಿದ್ದಾನೆ. ವಿಸ್ತಾರದ ಅಂಗಣ ಹೊರಜಗತ್ತಿನ ಪ್ರತೀಕವಾಗಿದೆ. ತನ್ನನು ತಾನು ಬಲಾತ್ಕಾರವಾಗಿ ಸ್ಟೇಜಿನ ಪೋಡಿಯಂ ಮತ್ತು ಮೈಕ್ ಎಡೆಗೆ ಎಳೆದುಕೊಂಡು ಬರುವಂತೆ ಕಾಣಿಸುವ, ಅಸಹಾಯಕತೆಯ ಕೊನೆಯ ಹಂತಗಳಲ್ಲಿರುವ ಡ್ಯೂಕ್ ಗೆ ಸುತ್ತಲಿನ ಪರಿವಾರದ ಮಂದಿ ಧೈರ್ಯ ತುಂಬುತ್ತಿದ್ದಾರೆ. ಸೋಲುವೆನೆಂಬ ಸೈನಿಕನಿಗೆ ಯುಧ್ಧದಲ್ಲಿ ಆವೇಶ ತುಂಬಿದ ಹಾಗೆ.
ಡ್ಯೂಕ್ ಇವೆಲ್ಲವನ್ನೂ ಅಡಗಿಸಿಡುವ, ಶಾಂತ ಮತ್ತು ಭಾವಶೂನ್ಯ ಕಾಣಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾನೆ ಆದರೆ ಕರುಳಿನಾಳದಲ್ಲಿ ಮಥಿಸುತ್ತಿರುವ ಭಯ ಆತಂಕ ನಡುಗುತ್ತಿರುವ ಕೈ ಬೆರಳುಗಳಿಂದ, ಅರಳಿದ ಕಣ್ಣುಗಳಿಂದ ಸಣ್ಣದಾಗಿ ಸೋರುತ್ತಿದೆ. ವೇದಿಕೆಯ ಮೇಲಕ್ಕೆ ಕೊನೆಯದಾಗಿ ಬರುವ ಡ್ಯೂಕ್, ಮೊತ್ತ ಮೊದಲ ಬಾರಿಗೆ ಅಪಾರ ಜನಸಂದಣಿಯತ್ತ ಮುಖಕೊಟ್ಟು ಮಾತನಾಡಲು ಹೊರಟಿದ್ದಾನೆ, ಅವನ ಕಣ್ಣಿನಲ್ಲಿರುವ ದಿಗಿಲು ಮಾತನಾಡದ ಡ್ಯೂಕ್ ಮನಸ್ಸಿನಲ್ಲಿರುವದು ಏನೆಂದು ಮಾತನಾಡುತ್ತಿದೆ. ಓ ಜೀಸಸ್ ನನ್ನನ್ನು ಕಾಪಾಡು !
ಏಕಕಾಲದಲ್ಲಿ ವೇದಿಕೆಯ ಮೇಲೆ ಪ್ರಸರಣ ಕಾಲದ ಮುಂಚಿನ ಕೆಂಪು ಬೆಳಕು ಮಿನುಗುತ್ತದೆ : ಒಂದು ಬಾರಿ ಎರಡು ಬಾರಿ, ನಂತರ ಮೂರು ಬಾರಿ.ಈಗ ಡ್ಯೂಕ್ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾನೆ : ಒಂದು ಶತಮಾನ ಸ್ತಗ್ಧವಾಗಿರುವ ಶಾಪಿತ ಕಾಲ ಸುತ್ತಲಿದೆಯೇನೊ ಎನ್ನುವಂತೆ, ಡ್ಯೂಕ್ ಮಾತನಾಡಲು ಹೊರಟಿದ್ದಾನೆ :
ಮ್ ಮ್ ಮ್ ಮ್ಮ್ ನನ್ನ ತಂದೆಯವರು…..
ಕೇವಲ ಎರಡು ಶಬ್ಧಗಳು. ಅಷ್ಟೇ. ಮತ್ತೇನು ಮಾತನಾಡಲಿಕ್ಕಾಗುತ್ತಿಲ್ಲ, ಅಷ್ಟೇ ಸುತ್ತಲಿನ ನಿಶ್ಯಬ್ಧದಲ್ಲಿ ಡ್ಯೂಕ್ ನ ಪ್ರಯಾಸ, ಶಬ್ಧಗಳಿಗೆ ತಡಕಾಡುವ ಹತಾಶ ಸ್ಥಿತಿ, ಮಾತು ಹೊರಡದ ತುಟಿಗಳಿಂದ ಸಣ್ಣನೆಯ ನರಳಾಟ, ತೊದಳುವಿಕೆಯ ಭೀಕರ ಅಟ್ಟಹಾಸ ಸ್ಟೇಡಿಯಂ ದಾಟಿ ಸುತ್ತಲಿನ ದೇಶದ ಎಲ್ಲ ಬೀದಿ ಬೀದಿಗಳಲ್ಲೂ ಆವರಿಸಿದೆ, ಬಿಬಿಸಿ ಯ ನೇರ ಪ್ರಸಾರ ಜಗತ್ತಿನ ಮೂಲೆ ಮೂಲೆಯಲ್ಲಿ ಡ್ಯೂಕ್ ನ ತೊದಲಿನ ಗಾಢ ವಿಷಾದ ಕಪ್ಪು ಮೋಡದಂತೆ ಆವರಿಸಿದೆ.
ದುರಂತ ಕತೆಯೊಂದರ ಮುನ್ನುಡಿಯಂತೆ ಶುರುವಾಗುವ ಸಿನಿಮಾಕ್ಕೆ ಅಗಾಧವಾದ ತಿರುವು ಸಿಗುವದು ಡ್ಯೂಕ್ ನ ಪತ್ನಿ ಎಲಿಜಬೆತ್, ಡ್ಯೂಕ್ ನನ್ನು ಕೊಸ್ಮೋ ಲ್ಯಾಂಗ್ ಎನ್ನುವ ವಾಕ್ ಚಿಕಿತ್ಸಾ ತಜ್ಞನ ಬಳಿ ಕರೆದೊಯ್ದಾಗ. ಸಿ ಡುಕಿನ, ತಾಳ್ಮೆಯಿಲ್ಲದ ಸ್ವಯಂ ದ್ವೇಷಿಸುವುವ ಡ್ಯೂಕ್ ನನ್ನು ಅಸಾಧ್ಯ ತಾಳ್ಮೆಯ, ಹಾಸ್ಯಪ್ರಜ್ಞೆಯ ಮತ್ತು ಕ್ರಿಸ್ತನಂತ ಶಾಂತಿಯ ಲ್ಯಾಂಗ್, ನಡುವಿನ ಘಟನೆಗಳನ್ನ ಸಿನಿಮಾ ಬಿಚ್ಚಿಡುತ್ತಾ ಹೋಗುತ್ತದೆ.
ಸಿನಿಮಾ ಕೇವಲ ಡ್ಯೂಕ್ ಎನ್ನುವ ಯುವರಾಜನ ಕಥೆಯಲ್ಲ, ಬದಲಾಗಿ ತೊದಲು ಮಾತಿನ ತೊಂದರೆಯಿಂದ ಬಳಲುತ್ತಿರುವ ಸಾವಿರಾರು ಮಂದಿಯ ಪ್ರತೀಕವಾಗಿ ಡ್ಯೂಕ್ ನನ್ನು ತೆರೆದಿಡುತ್ತದೆ. ಸಹೋದರ ಎಡ್ವರ್ಡ್ VIII ( ಗೈ ಪಿಯರ್ಸ್ ) ಡ್ಯೂಕ್ ನ ತೊದಲು ಮಾತನ್ನು ಅಣಕಿಸುವಾಗ, ಉತ್ತರಿಸಲಾಗದೆ ಒದ್ದಾಡುವಾಗ,, ಡ್ಯೂಕ್ ನ ಅಪ್ಪ ಮಗನ ತೊದಲು ವಿಕೆಯ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದಾಗ, ಹೇಳಬೇಕೆಂದುಕೊಂಡ ಮಾತು ಗಂಟಲಿನಲ್ಲೆ ಉಳಿದು ಕೇವಲ ಶಬ್ದಗಳ ತುಣುಕುಗಳೊಂದು ವಿಕಲವಾಗಿ ಹೊರಬಂದಾಗ, ಕಣ್ಣೀರು, ನೋವು ಮತ್ತು ಅವಮಾನಗಳೇ ಉಳಿದಾಗ ಡ್ಯೂಕ್ ರಾಜನಾಗಿಯಲ್ಲ ಬದಲಾಗಿ ನಾವು ಇಲ್ಲಿಯೇ ಎಲ್ಲೋ ನೋಡಿದ ಕೇಳಿದ ತೊದಲಿನ ತೊಂದರೆಯ ಹುಡುಗನೋ ಹುಡುಗಿಯೋ ಆಗಿ ಕಾಣಿಸುತ್ತಾನೆ.
ಇಡೀ ಸಿನಿಮಾದ ತುಂಬ ಡ್ಯೂಕ್ ನ ಸ್ವಯಂ ದ್ವೇಷ, ತೊದಲುವಿಕೆಯಿಂದ ಸಾಯುತ್ತಿರುವ ಆತ್ಮವಿಶ್ವಾಸ ಮತ್ತು ಇವೆಲ್ಲವುಗಳನ್ನು ದಾಟಿಸಿ ತೀರದೆಡೆಗೆ ಕರೆದೊಯ್ಯುವ ಜೆಫ್ರಿ ರಶ್ ಅವರ ಥೆರಪಿ ಕಾಣಸಿಗುತ್ತದೆ.
ಈ ಚಿತ್ರದಲ್ಲಿ ತೊದಲುವಿಕೆಯ ಬಗ್ಗೆ ತಿಳಿಯಲು ಅನೇಕ ಪಾಠಗಳಿವೆ. ಯಾರೂ ತೊದಲುವವರಾಗಿ ಹುಟ್ಟಿರುವದಿಲ್ಲ ಎನ್ನುವ ಲ್ಯಾಂಗ್ ಡ್ಯೂಕ್ ಗೆ ಆತ್ಮವಿಶ್ವಾಸವನ್ನು ತುಂಬುವ ಕೆಲಸದಲ್ಲಿ ತೊಡಗಿದ್ದಾನೆ. ರಾಜನೆಂಬ ಪೊರೆ ಕಳಚಿ ಹೊರಬರಲು ಸಹಾಯ ಮಾತನಾಡುತ್ತಿದ್ದಾನೆ. ತೊದಲುವಿಕೆಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವೇ ಇಲ್ಲ ಎನ್ನುತ್ತಲೇ ಲ್ಯಾಂಗ್, ತೊದಲುವಿಕೆ ಶುರುವಾಗುವದು ಸಾಮಾನ್ಯವಾಗಿ ಐದನೆಯ ವಯಸ್ಸಿನ ಆಸುಪಾಸಿನಲ್ಲಿ ಮತ್ತು ಸಣ್ಣ ವಯಸ್ಸಿನಲ್ಲಿ ಯಾವುದಾದರು ಘಟನೆಗಳು ಬಲವಂತವಾಗಿ ನಡೆದುಹೋದರೆ ತೊದಲುವದು ಶುರುವಾಗುತ್ತದೆ ಎನ್ನುತ್ತಾನೆ. ಇವೆಲ್ಲವುಗಳ ಮಧ್ಯೆ ಡ್ಯೂಕ್, ಚಿಕ್ಕವನಿದ್ದಾಗ ಎಡಚನಾಗಿದ್ದ ತನ್ನನ್ನು ಬಲಗೈ ಗೆ ಬಲವಂತವಾಗಿ ಬದಲಿಸಿದ ಘಟನೆಗಳನ್ನು ನೆನಪಿಸಿಕೊಳ್ಳುತ್ತಾನೆ.
ಕಿಂಗ್ಸ್ ಸ್ಪೀಚ್ ಕೇವಲ ಮನರಂಜನೆಯ, ಅಲ್ಬರ್ಟ್ ದಿ ಡ್ಯೂಕ್ ಎನ್ನುವ ರಾಜನ ಕಥೆಯಲ್ಲ, ಬದಲಾಗಿ ಈ ಚಿತ್ರ ಪ್ರೀತಿ, ಸ್ನೇಹ, ನಂಬಿಕೆ,ಆತ್ಮವಿಶ್ವಾಸ ಮತ್ತು ಸತತ ಪ್ರಯತ್ನದ ಬಗ್ಗೆ ಸಹ. ಆಲ್ಬರ್ಟ್ ಪತ್ನಿ ಎಲಿಜಬೆತ್ ಅವರಿಗೆ ಸಹಾಯ ಮಾಡುವ ಒಂದು ವಾಕ್ ಚಿಕಿತ್ಸಕನ ಪಡೆಯುವ ಸತತ ಪ್ರಯತ್ನ ಮತ್ತು ಆಲ್ಬರ್ಟನ ತೊದಲುವಿಕೆಯನ್ನು ಹೋಗಲಾಡಿಸಬಹುದೆಂಬ ನಂಬಿಕೆ. ನಮ್ಮ ಸುತ್ತಲಿನ,ತೊದಲಿನ ತೊಂದರೆ ಇರುವವರಿಗೂ ನಾವು ನೀಡಿದರೆ..
ಅಂತಿಮ ದೃಶ್ಯವಿದು, ಈಗ ರಾಜನ ಭಾಷಣವಿದೆ, ಸಮಸ್ತ ಬ್ರಿಟನ್ ಉದ್ದೇಶಿಸಿ, ಬ್ರಿಟನ್ ಯಾಕೆ ಯುದ್ಧಕ್ಕೆ ಹೋಗಬೇಕಿದೆ ಎನ್ನುವದರ ಕುರಿತು ಸ್ಪೂರ್ತಿದಾಯಕ ಭಾಷಣ ಮಾಡಬೇಕಿದೆ. ಮೊದಲ ದೃಶ್ಯದಲ್ಲಿನ ಎಲ್ಲ ಕರುಣಾಜನಕ ಸ್ಥಿತಿಯನ್ನು ಮೀರಿ ಡ್ಯೂಕ್ ಜನರನ್ನು ಉದ್ದೇಶಿಸಿ ಅದ್ಭುತ ಭಾಷಣ ಮಾಡಿದ್ದಾನೆ, ತೊದಲು ಒಂದು ವೈಕಲ್ಯವಲ್ಲ ಎನ್ನುವದನ್ನು ಸಾಬೀತುಪಡಿಸಿದ್ದಾನೆ. ತೊದಲುವಿಕೆಯಿಂದ ನಗೆಪಾಟಲಿಗೀಡಾಗಿದ್ದ ಡ್ಯೂಕ್ ನ ಭಾಷಣ ಒಂದು ದೇಶದ ಜನರನ್ನು ಯುದ್ಧಕ್ಕೆ ಸನ್ನದ್ಧರಾಗಲು ಪ್ರೇರೆಪಿಸಿದೆ. ಸತತ ಪ್ರಯತ್ನ, ಆತ್ಮವಿಶ್ವಾಸ ಮತ್ತು ಸುತ್ತಲಿನವರ ಬೆಂಬಲ ತೊದಲನ್ನು ದೂರ ಓಡಿಸಿದೆ.
ಕ್ಲಾಸಿನಲ್ಲಿ ಪಾಠ ಓದಲು, ಎಲ್ಲರೆದೆರು ಮಾತನಾಡಲು, ಜಗಳವಾಡಲು, ಹಾಡಲು ತೊದಲುವೆನೆಂದು ಹೆದರುವ ಪುಟ್ಟ ಕಂದಮ್ಮಗಳಿಗೆ ನಮ್ಮದೊಂದು ಸಣ್ಣ ಸ್ನೇಹದ ದೃಷ್ಟಿ ಬೇಕಿದೆ, ಮುಂದಕ್ಕೆ ಓಡಲು ವಿಶ್ವಾಸವೊಂದು ನೀಡಬೇಕಿದೆ.
ಸಿನಿಮಾ : ದ ಕಿಂಗ್ಸ್ ಸ್ಪೀಚ್ (The King's Speech)
ಭಾಷೆ : ಇಂಗ್ಲೀಶ್
ದೇಶ : ಅಮೇರಿಕ
ನಿರ್ದೇಶನ : ಟಾಮ್ ಹೂಪರ್
Final Cut :
ಅದ್ಭುತ ಭಾಷಣ ಮಾಡಿದ ನಂತರ ಆಲ್ಬರ್ಟ್ ದಿ ಡ್ಯೂಕ್ ಮತ್ತು ಲ್ಯಾಂಗ್ ನಡುವಿನ ಸಂಭಾಷಣೆ
"ನೀವು ಕೇವಲ ಒಂದು ಪದವನ್ನು ಹೇಳುವಾಗ ಮಾತ್ರ ಎಡವಿದ್ದೀರಿ " ಲ್ಯಾಂಗ್
ಡ್ಯೂಕ್ " ಅಲ್ಲವೇ ಮತ್ತೇ ? ಮಾತನಾಡಿದ್ದು ನಾನೇ ಎಂದು ಎಲ್ಲರಿಗೂ ತಿಳಿಯುವದು ಬೇಡವೇ ? "
ಇಂತಿ,
ಸಚೇತನ
*****