ಕತೆ: ಸೂರಿ ಹಾರ್ದಳ್ಳಿ


ಕಂಪನಿಯೊಂದರಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದು ಆರಂಕಿಯ ಸಂಬಳ ಪಡೆಯುತ್ತಿದ್ದ ಕಾಶೀಪತಿಗೆ ಸಾಲದ ತುರ್ತು ಅವಶ್ಯಕತೆಯೇನೂ ಇರದಿದ್ದರೂ ಆ ಜಾಹಿರಾತು ಅವನ ತಲೆಯಲ್ಲಿ ದುಷ್ಟ ಯೋಚನೆಗಳನ್ನು ತುಂಬಿದ್ದಂತೂ ನಿಜ. ಪತ್ರಿಕೆಯೊಂದರಲ್ಲಿ ಪ್ರಕಟವಾದ ‘ವೈಯಕ್ತಿಕ ಸಾಲ ಬೇಕಾಗಿದೆಯೇ? ಕೇವಲ ಮೂರು ಪರ್ಸೆಂಟ್ ಬಡ್ಡಿಯಲ್ಲಿ ಎರಡು ಕೋಟಿ ರೂ.ಗಳ ತನಕ ಸಾಲ ಪಡೆಯಿರಿ. ಸಂಪರ್ಕಿಸಿ..’ ಎಂಬ ಕ್ಲಾಸಿಫೈಡ್ ಜಾಹೀರಾತು ಬೆಳಗಿನ ಬಿಸಿ ಬಿಸಿ ಕಾಫಿ ಹೀರುತ್ತಿದ್ದ ಕಾಶೀಪತಿಯ ಕಣ್ಣಿಗೂ ಬಿದ್ದಿತ್ತು, ಅವನ ಹೆಂಡತಿ ಮಾದೇವಿಯ ಕಣ್ಣಿಗೂ ಬಿದ್ದಿತ್ತು. ಕಾಶೀಪತಿ ಪತ್ರಿಕೆಯ ಇತರ ಸುದ್ದಿಗಳನ್ನು ನಿರ್ಲಿಪ್ತತೆಯಿಂದ ಓದುವಂತೆ ಸುಮ್ಮನೆ ಇದನ್ನೂ ನೋಡಿದ್ದ, ಮರೆತೇಬಿಟ್ಟಿದ್ದ. ಆದರೆ ಅವನ ಧರ್ಮಪತ್ನಿ ರಾಗ ಎಳೆದಿದ್ದಳು. ‘ನೋಡ್ರೀ, ಬ್ಯಾಂಕಿನವರೂ ಹತ್ತು-ಹನ್ನೆರಡು ಪರ್ಸೆಂಟ್ ಬಡ್ಡಿ ವಿಧಿಸುತ್ತಾರೆ. ಮೂರು ಪರ್ಸೆಂಟ್ ಎಂದರೆ ಥ್ರೋ ಅವೇ ಬಡ್ಡಿ. ಯಾಕೆ ಸಾಲ ಮಾಡಬಾರದು?’ ಎಂದಳು. ‘ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗರು ಬಂದು ಸೆಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ,’ ಎಂಬ ಮಾತು ಅವನ ಬಾಯಿಗೆ ಬಂದರೂ, ಹಾಗನ್ನುವುದು ಹೆಂಡತಿಯ ಮಂದಬುದ್ಧಿಯೊಳಗೆ ಹೋಗುವುದಿಲ್ಲ ಎಂದು ಗೊತ್ತಿದ್ದರೂ, ಒಳಗೊಳಗಿನ ಮನಸ್ಸಿನೊಳಗೇ ಯಾಕೆ ಪ್ರಯತ್ನಿಸಬಾರದು ಎನಿಸಿತ್ತು. ಬ್ಯಾಂಕಿನಲ್ಲಿ ನಿಗದಿತ ಠೇವಣಿ ಇಟ್ಟರೂ ಎಂಟು ಶೇಕಡಾ ಬಡ್ಡಿ ಬರುತ್ತದೆ. ಆದರೂ ಹೆಂಡತಿ ಹೇಳಿದ ಮಾತಿಗೆ ಕೋಲೆ ಬಸವನ ಹಾಗೆ ಅವನು ತಲೆ ಆಡಿಸುವವನಲ್ಲ.

‘ನಮಗ್ಯಾಕೇ ಸಾಲ? ಮನೆಗೇನಾದರೂ ಬೇಕಾಗಿದೆಯೇ? ಎಲ್ಲಾ ಇದೆ. ಎಲ್ಲಾಕ್ಕಿಂತ ಹೆಚ್ಚಿಗೆಯೇ ಇದೆ. ಇನ್ನೇನಾದರೂ ತೆಗೆದುಕೊಂಡರೂ ಇಡೋಕೆ ಜಾಗ ಎಲ್ಲಿದೆ? ಮತ್ತೆ ಕಾರು? ಮೊನ್ನೆ ಮೊನ್ನೆಯಷ್ಟೇ ಹೊಸತನ್ನ ಕೊಂಡಾಗಿದೆ. ಕೊಳ್ಳುಬಾಕ ಸಂಸ್ಕøತಿ ಒಳ್ಳೆಯದಲ್ಲ. ಈಗ ಸಂತೋಷವಾಗಿದ್ದೀವಿ, ಅಷ್ಟೇ ಸಾಕು,’ ಎಂದ ಕಾಶೀಪತಿ.

ತಲೆಗೆ ಹುಳ ಹೊಕ್ಕರೆ ಅದನ್ನು ಸುಮ್ಮನೆ ಬಿಡುವವಳಲ್ಲ ಮಾದೇವಿ. ಗಂಡ ಹೀಗೆ ಕೇಳುತ್ತಾನೆ ಎಂದು ಆಗಲೇ ನಿರ್ಧರಿಸಿದವಳಂತೆ, ಅದನ್ನು ನಿರ್ಧರಿಸಬೇಕಿಲ್ಲ, ಪ್ರತೀ ಬಾರಿಯೂ ಇದರ ಪುನರಾವರ್ತನೆ ಆಗುತ್ತಲೇ ಇರುತ್ತದೆ, ಅದಕ್ಕೆ ಬೇಕಾದ ಉತ್ತರವನ್ನೂ ಸಿದ್ಧಪಡಿಸಿಕೊಂಡಿದ್ದಳು. ‘ಈಗ ಬೇಸಿಗೆಯಲ್ಲಿ ಸೆಖೆ ಜಾಸ್ತಿ ಆಗುತ್ತಲೇ ಇದೆ. ಫ್ಯಾನು ಹಾಕಿದರೂ ಬರೀ ಬಿಸಿ ಗಾಳಿಯೇ ಬರುತ್ತದೆ. ಮನೆಗೆ, ಇಡೀ ಮನೆಗೆ ಬೇಡ, ಕೊನೆಗೆ ನಮ್ಮ ಬೆಡ್ ರೂಮಿಗಾದರೂ ಏಸಿ ಹಾಕೋಣವಾ? ತುಂಬಾ ಖರ್ಚೇನೂ ಆಗೋಲ್ಲ. ಒಳ್ಳೆಯ ಕ್ವಾಲಿಟಿ ಬ್ರಾಂಡೆಡ್ ಪ್ರೊಡಕ್ಟ್‍ಗೆ ಎರಡು ಲಕ್ಷಗಳ ಒಳಗೇ ಆಗುತ್ತದೆ. ನಮ್ಮ ಬೀದಿಯ ಕಮಲಳ ಮನೆಯಲ್ಲಿಯೂ ಹಾಕಿದ್ದಾರೆ. ಹೊರಗೆ ಬಿಸಿಲಲ್ಲಿ ಸುತ್ತಿ, ಒಳಗೆ ಹೋದೆ ಥೇಟ್ ಅಂಟಾರ್ಕಟಿಕಾದಲ್ಲಿ ಇದ್ದೇವೋ ಏನೋ ಅನಿಸುತ್ತದೆ,’ ಎಂದು ರಾಗ ಎಳೆದಳು.

‘ಹೌದು, ಹಾಗಂತ ಅದಕ್ಕೆ ಮೈ ಒಗ್ಗಿಸಿಕೊಂಡರೆ ಅದಿಲ್ಲದೇ ಇರೋಕೆ ಆಗೋಲ್ಲ. ನಮ್ಮ ಬಾಡಿ ಎಲ್ಲಕ್ಕೂ ಅಡ್‍ಜಸ್ಟ್ ಆಗಬೇಕು. ರಾಯಚೂರಿನಷ್ಟು, ರಾಜಾಸ್ತಾನದಷ್ಟು ಬಿಸಿಲು ಇಲ್ಲಿ ಇಲ್ಲ,’ ಎಂದು ಕಾಶಿ ರಾಗ ಎಳೆದ. ತನ್ನಪ್ಪನ ಹಾಗೆ ಹೆಂಡತಿ ಏನೇ ಹೇಳಿದರೂ ಸುಲಭವಾಗಿ ಒಪ್ಪುವುದು ಗಂಡಸ್ತನ ಅಲ್ಲ ಎಂಬುದು ಅವನ ವಾದವಾದರೂ ಒಳಗೊಳಗೇ ಹೆಂಡತಿ ಎನ್ನುವುದು ಸರಿಯೇ ಎಂದು ಮನಸ್ಸು ಹೇಳುತ್ತಿತ್ತು.
‘ನಾನು ಏನೇ ಅಂದರೂ ಇವರದ್ದು ಕೊಂಕು ಇದ್ದೇ ಇರುತ್ತದೆ. ಸಾಯುವಾಗ ನಾವು ಈ ಬ್ಯಾಂಕ್ ಬ್ಯಾಲೆನ್ಸ್ ಹೊತ್ತುಕೊಂಡು ಹೋಗುತ್ತೇವೆಯೇ?’ ಎಂದು ಗೊಣಗುತ್ತಲೇ ಅವಳು ಅಡುಗೆ ಮನೆಯತ್ತ ಸಾಗಿದಳು. ಕಾಶೀಪತಿ ಟಿವಿಯ ಸೌಂಡ್ ಜಾಸ್ತಿ ಮಾಡಿದ.

ಹೆಂಡತಿಯೆದುರು ಕಾಶೀಪತಿ ಹಾಗೆಂದರೂ ಅವಳು ಅತ್ತ ಹೋಗುತ್ತಲೇ ಫೋನ್ ಎತ್ತಿಕೊಂಡು ಪತ್ರಿಕೆಯಲ್ಲಿ ಸೂಚಿಸಿದ ನಂಬರನ್ನು ಡಯಲಿಸಿದ. ತರುಣಿಯೊಬ್ಬಳ ಮೃದುಮಧುರವಾದ ದನಿ ಕೇಳಿಸಿತು. ‘ಗುಡ್ ಮಾರ್ನಿಂಗ್. ಇದು ಜನಸೇವಾ ಅಸೋಸಿಯೇಟ್ಸ್. ಮೇ ಐ ಹೆಲ್ಪ್ ಯು?’ ಆ ದನಿ ಕೇಳಿ ಅದೇಕೋ ಕಾಶೀಪತಿಗೆ ಅವಳಲ್ಲಿ ನಂಬಿಕೆ ಮೂಡಿಬಂತು. ತಾನೂ ಗುಡ್ ಮಾರ್ನಿಂಗ್ ಹೇಳೋಣವೇ ಎನಿಸಿದರೂ ಗ್ರಾಹಕನೆಂಬ ಬಿಂಕ ಅದನ್ನು ತಡೆಯಿತು.

‘ಪತ್ರಿಕೆಯಲ್ಲಿ ನಿಮ್ಮ ಜಾಹಿರಾತು ನೋಡಿದೆ. ನಿಮ್ಮ ಕಂಡೀಶನ್ ಏನು?’ ಕೇಳಿದ.
‘ಟು ಲ್ಯಾಕ್‍ಗಳ ರುಪೀಸ್ ವರೆಗೆ ಲೋನನ್ನು ವರ್ಷಕ್ಕೆ ಥ್ರೀ ಪರ್ಸೆಂಟ್ ಇಂಟರೆಸ್ಟ್‍ನಲ್ಲಿ ಯಾವುದೇ ಗ್ಯಾರಂಟಿ ಇಲ್ಲದೇ ಕೊಡ್ತೀವಿ. ಅಪ್‍ಟು ಟೆನ್ ಲ್ಯಾಕ್ ಫೋರ್ ಪರ್ಸೆಂಟು. ಅದಕ್ಕಿಂತ ಹೆಚ್ಚು ಫೈಯು ಪರ್ಸೆಂಟು. ಇವಕ್ಕೆ ಪ್ರಾಪರ್ಟಿ ಅಥವಾ ಇನ್ನಾವುದೋ ಪ್ಲೆಜ್ ಮಾಡಬೇಕು. ನಿಮಗೆ ಎಷ್ಟು ರೂಪಾಯಿ ಲೋನು ಬೇಕು?’ ಎಂದಳು. ಇತ್ತೀಚೆಗೆ ಜನರು ಸಂಖ್ಯೆ ಹೇಳಿದ ನಂತರ ರೂಪಾಯಿ ಎಂಬ ಪದವನ್ನು ಬಳಸುವುದನ್ನೇ ಬಿಟ್ಟುಬಿಟ್ಟಿದ್ದಾರೆ ಎಂದು ಗೊಣಗುತ್ತಿದ್ದ ಕಾಶೀಪತಿಗೆ ಅವಳು ಹೇಳಿದ ಆ ಪದ ಕೇಳಿ ಖುಷಿಯಾಯಿತು.
‘ಅಷ್ಟು ಕಡಿಮೆ ಬಡ್ಡಿಗೆ ಹೇಗೆ ಸಾಲ ಕೊಡ್ತೀರಿ? ನಷ್ಟ ಆಗೋಲ್ಲವೇ?’ ತನ್ನ ತಲೆಯಲ್ಲಿರುವುದನ್ನು ಹೊರಗೆ ಹಾಕಿದ.

‘ಎಲ್ಲರೂ ಇದೇ ಕ್ವಶ್ಚನನ್ನೇ ಮೊದಲು ಕೇಳೋರು. ವಿಷಯ ಇಷ್ಟು, ನಮ್ಮ ಬಾಸ್ ವಿದೇಶದಲ್ಲಿ ದೊಡ್ಡ ಇಂಡಸ್ಟ್ರಿಯಲಿಸ್ಟ್ ಆಗಿದ್ದರು. ಈಗ ಅದನ್ನು ಮಾರಿ ಭಾರತಕ್ಕೆ ಬಂದಿದ್ದಾರೆ. ತಮ್ಮ ಹಣವನ್ನು ಬ್ಯಾಂಕಿನಲ್ಲಿ ಇಟ್ಟು, ಬರೋ ಜುಜುಬಿ ಬಡ್ಡಿಗೆ ಥರ್ಟಿಒನ್ ಪರ್ಸೆಂಟ್ ತೆರಿಗೆ ಕಟ್ಟೋದಕ್ಕಿಂತ ಜನಸಾಮಾನ್ಯರಿಗೆ ಕಡಿಮೆ ಬಡ್ಡಿಗೆ ಕೊಟ್ಟರೆ ದೇಶಸೇವೆ ಮಾಡಿದ ಹಾಗೆ ಆಗುತ್ತದೆ ಎಂಬುದು ಅವರ ವಾದ. ಹಾಗಾಗಿ…’ ಎಂದು ಅವಳು ಹೇಳುತ್ತಲೇ ಇದ್ದರೂ ಅದು ಕಾಶಿಯ ಕಿವಿಗೆ ಹೋಗಲಿಲ್ಲ. ಆಗಲೇ ಅವನು ತಮ್ಮ ಮನೆಯ ಗೋಡೆಗಳ ನಡುಗೆ ಹವಾನಿಯಂತ್ರಣದ ತಂಪಾದ ಗಾಳಿ ಬೀಸುತ್ತಿರುವ ಅನುಭವವನ್ನು ಹೊಂದತೊಡಗಿದ್ದ.

ತುಸು ಹೊತ್ತಿನ ನಂತರ ಅವಳು ಮುಂದುವರಿಸಿದಳು. ‘ನಾವು ನಿಮಗೆ ನೇರವಾಗಿ ಲೋನ್ ಕೊಡೋಲ್ಲ. ಹಣ ಸುಮ್ಮನೆ ಟ್ರಾನ್ಸ್‍ಫರ್ ಮಾಡಿದರೆ ಇನ್‍ಕಮ್ ಟ್ಯಾಕ್ಸ್ ಡಿಪಾರ್ಟ್‍ಮೆಂಟಿನವರು ನೋಟ್ ಮಾಡ್ತಾರೆ. ನಿಮ್ಮ ಮನೆಗೆ ಏನು ಬೇಕೋ ಅದನ್ನು ಖರೀದಿಸುವಾಗ ಆ ಡೀಲರ್ ಜೊತೆಗೇ ನಾವು ವ್ಯವಹರಿಸುತ್ತೇವೆ. ಹಣವನ್ನು ಅವನಿಗೇ ಕೊಡುತ್ತೇವೆ.’ ಕಾಶೀಪತಿ ಹೂಂ ಅನ್ನುತ್ತಲೇ ಇದ್ದ. ‘ನೀವು ಮೊದಲ ವರ್ಷ ಬರೀ ಬಡ್ಡಿ ಕಟ್ಟಿದರೆ ಸಾಕು. ಮುಂದಿನ ವರ್ಷದಿಂದ ಇನ್‍ಸ್ಟಾಲ್‍ಮೆಂಟ್ ಜೊತೆಗೆ ಬಡ್ಡಿ ಕೊಡಬೇಕು. ಬಾಕಿ ಕಡಿಮೆಯಾಗುತ್ತಿದ್ದಂತೆಯೇ ಬಡ್ಡಿಯೂ ಕಡಿಮೆ ಆಗುತ್ತದೆ. ನೀವು ನಮ್ಮ ಕಂಪನಿಯ ಶೇರ್ ಹೋಲ್ಡರ್ ಆಗೋದಕ್ಕೆ ಇನೀಷಿಯಲ್ ಡಿಪಾಸಿಟ್ ಎಂದು ಹತ್ತು ಸಾವಿರ ರೂಪಾಯಿಗಳನ್ನು ಮೊದಲು ಕೊಟ್ಟರೆ ಸಾಕು. ನಿಮ್ಮ ಲೋನ್‍ಗಳ ಕೊನೆಯ ಇನ್‍ಸ್ಟಾಲ್‍ಮೆಂಟಿನಲ್ಲಿ ಅದನ್ನು ವಜಾ ಮಾಡಲಾಗುವುದು,’ ಎಂದು ಹೇಳಿ ಅವನ ಮನ ಸೂರೆಗೊಂಡಳು.

‘ಸರಿ, ನಿಮ್ಮ ಕಂಪನಿ ಎಲ್ಲಿದೆ? ಯಾವಾಗ ನಾನು ಬರಬಹುದು?’ ಕೇಳಿದ ಕಾಶಿ. ಅಡುಗೆ ಮನೆಯಲ್ಲಿದ್ದುಕೊಂಡೇ ಈ ಸಂಭಾಷಣೆಗಳನ್ನು ಕೇಳುತ್ತಿದ್ದ ಮಾದೇವಿಗೆ ತನ್ನ ಗಂಡನ ಬಗ್ಗೆ ಹೆಮ್ಮೆ, ಪ್ರೀತಿ ಉಕ್ಕಿ ಹರಿಯಿತು. ಇವತ್ತು ಯಾವತ್ತೂ ಹಾಗೆ, ಹೆಂಡತಿಯ ಮಾತನ್ನು ಮೀರುವುದಿಲ್ಲ. ಆದರೆ ಒಣ ಬಿಂಕ ಬೇರೆ! ಇವತ್ತು ಅವರಿಗೆ ಇಷ್ಟವಾಗುವ ಕೇಸರಿಬಾತ್ ಮಾಡಬೇಕು. ಹವಾನಿಯಂತ್ರಿತ ಕೊಠಡಿಯಲ್ಲಿ ನಾವಿಬ್ಬರು, ಮಗ ಮಲಗಿರುವ, ಮಗನು ಇನ್ನೂ ತಂಪು ಮಾಡು ಎಂದು ಕೇಳಿದಾಗ ‘ಹೆಚ್ಚಿಗೆ ಚಳಿ ಇರಬಾರದು, ಮೈಗೆ ಒಳ್ಳೆಯದಲ್ಲ,’ ಎಂದು ತಾನು ಗದರಿಸುವ, ‘ಇರಲಿ ಬಿಡೇ, ಮಗು ಆಸೆ ಪಡುತ್ತೆ. ಇಪ್ಪತ್ತಕ್ಕೆ ಇಳಿಸು,’ ಎಂದು ಕಾಶೀಪತಿ ಹೇಳುವ, ‘ಹೌದು, ಎಲ್ಲಾ ಮಗ ಹೇಳಿದ ಹಾಗೇ ಆಗಬೇಕು. ನನ್ನ ಮಾತಿಗೆ ಏನೂ ಬೆಲೆ ಇಲ್ಲ. ನಾನು ಇಲ್ಲಿ ಒಬ್ಬ ಕೆಲಸ ಆಳು ಅಷ್ಟೇ,’ ಎಂದು ಮುಖ ಊದಿಸಿಕೊಂಡು ವಯ್ಯಾರದಿಂದ ಅಂದಂತೆ, ಅವಳ ತಲೆಯಲ್ಲಿ ಯೋಚನೆಗಳ ಸರಣಿಯೇ ಮುಂದುವರಿಯಿತು. ತಮ್ಮ ಮನೆಗೆ ಊರಿಂದ ಅಪ್ಪ ಅಮ್ಮ ಬಂದರೆ ಇದೇ ಕೋಣೆಯಲ್ಲಿಯೇ ಹಾಸಿಗೆ ಹಾಸಿಕೊಟ್ಟರಾಯಿತು. ಕೆಲ ದಿನ ಹಾಸಿಗೆ ಸಂನ್ಯಾಸತ್ವ ಮಾಡಿದರೆ ಪ್ರಪಂಚವೇನೂ ಮುಳುಗುವುದಿಲ್ಲ.

ಸ್ಪಷ್ಟ ಮತ್ತು ಮೃದುವಾದ ದನಿಯಲ್ಲಿ ದೂರವಾಣಿಯ ಅತ್ತಕಡೆ ಇದ್ದ ಆಕೆ ಹೇಳಿದಳು, ‘ಹೇಳಿ, ನಿಮಗೆ ಯಾಕೆ ಸಾಲ ಬೇಕು?’
‘ಮನೆಗೆ ಏಸಿ ಹಾಕಬೇಕು ಎಂದುಕೊಂಡಿದ್ದೇವೆ. ಒಳ್ಳೆಯ ಕ್ವಾಲಿಟಿದೇ ಬೇಕೆಂದರೂ ಎರಡು ಲಕ್ಷ ರೂಪಾಯಿ ಬೇಕು. ಸಾಲವೂ ಅಷ್ಟೇ ಸಾಕು.’ ಎಂದ. ಇಷ್ಟು ಹೇಳಿದರೆ ಸಾಕೇ ಅಥವಾ ಒಂದಿಷ್ಟು ತನ್ನ ಬಗ್ಗೆಯೂ ಹೇಳಿಕೊಳ್ಳಬೇಕೇ ಎಂದು ಯೋಚಿಸುವಷ್ಟರಲ್ಲಿ ಆಕೆ ಮತ್ತೆ ಮುಂದುವರಿಸಿದಳು.

‘ನಾವು ಅಸಲಿನ ಮೇಲೆ ನೂರೈವತ್ತು ಪರ್ಸೆಂಟ್ ಸಾಲ ಕೊಡ್ತೀವಿ. ಆದರೆ ಹಾಗೆ ತೆಗೆದುಕೊಳ್ಳಬೇಕೆಂದೇನೂ ಇಲ್ಲ,’ ಎಂದವಳು ಮರುದಿನವೇ ಅವಳ ಕಂಪನಿಯ ರೆಪ್ರಸೆಂಟೇಟಿವ್ ಮನೆಗೇ ಬರುತ್ತಾನೆ ಎಂದವಳು ಹತ್ತು ಸಾವಿರ ರೂಪಾಯಿಗಳ ನಗದು ಮತ್ತು ಏಸಿ ಕಂಪನಿಯ ಪ್ರೊಫೋರ್ಮಾ ಇನ್‍ವಾಯಿಸ್ ಸಿದ್ಧವಾಗಿರಿಸಿಕೊಳ್ಳಲು ಹೇಳಿದಳು. ‘ಸರಿ, ನಿಮ್ಮ ಡಿಟೈಲ್ಸ್ ಕೊಡಿ, ಅಂದರೆ ನಿಮ್ಮ ಹೆಸರು, ಅಡ್ರೆಸ್, ಲೊಕೇಶನ್..’ ಕಾಶಿ ಒದಗಿಸಿದ.

ಸಿಕ್ಕ ಅವಕಾಶವನ್ನು ತಪ್ಪಿಸಿಕೊಳ್ಳುತ್ತಾನೆಯೇ ಕಾಶೀಪತಿ? ಅದೇ ಸಂಜೆ ದೊಡ್ಡ ಬೋರ್ಡಿರುವ ಕಂಪನಿಯೊಂದಕ್ಕೆ ಹೆಂಡತಿಯೊಂದಿಗೆ ಹೋಗಿ, ಒಂದು ಎಸಿ ಯಂತ್ರ ಆರಿಸಿದ. ಅದರ ಡೆಲಿವರಿ, ಇನ್‍ಸ್ಟಾಲ್‍ಮೆಂಟ್, ಇವನ್ನೆಲ್ಲಾ ವಿಚಾರಿಸಿ ಪ್ರೊಫೋರ್ಮಾ ಇನ್‍ವಾಯಿಸ್ ಅನ್ನು ತನ್ನ ಹೆಸರಿನಲ್ಲಿ ಪಡೆದುಕೊಂಡು ಬಂದ. ತಲೆಯಲ್ಲಿ ಕೊರೆಯುತ್ತಿದ್ದ ಯೋಜನೆಯಂತೆ ಏಸಿ ಬೆಲೆ ಐವತ್ತೇ ಸಾವಿರ ರೂಪಾಯಿ ಆದರೂ ಅಂಗಡಿಯವನ ಜೊತೆ ಮಾತನಾಡಿ, ಹೆಚ್ಚಿನ ಹಣಕ್ಕೆ ಇತರ ಐಟಮ್ಮುಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಒಪ್ಪಿಸಿ ಎರಡು ಲಕ್ಷ ರೂಪಾಯಿಗಳಿಗೆ ಇನ್‍ವಾಯ್ಸ್ ಪಡೆದ.

ಮರುದಿನ, ಹೇಳಿದ ಸಮಯಕ್ಕೆ ಸರಿಯಾಗಿ ಗರಿ ಗರಿ ಬಟ್ಟೆ ತೊಟ್ಟು, ಕತ್ತಿಗೆ ಟೈ ಕಟ್ಟಿಕೊಂಡು ಮಿಂಚುತ್ತಿದ್ದ ಯುವಕನೊಬ್ಬ ಕಾಶೀಪತಿಯ ಮನೆಗೆ ಬಂದ. ‘ಗುಡ್ ಮಾರ್ನಿಂಗ್ ಸರ್,’ ಎಂದು ಶುಭಕೋರಿ ತಾನು ಜನಸೇವಾ ಸಂಸ್ಥೆಯವನು ಎಂದು ತನ್ನನ್ನು ಪರಿಚಯಿಸಿಕೊಂಡ. ಮಾದೇವಿಯಂತೂ ಮುಖವೆಲ್ಲಾ ನಗು ತುಂಬಿಕೊಂಡು ಅವನನ್ನು ಸ್ವಾಗತಿಸಿದ್ದಲ್ಲದೇ ಕಾಫಿಯನ್ನೂ ಮಾಡಿಕೊಟ್ಟಳು. ಬಂದವನು ವಿನಯದಿಂದಲೇ ಅದನ್ನು ಸ್ವೀಕರಿಸಿ, ಕಾಫಿಯನ್ನು ಸದ್ದು ಮಾಡದೇ ಹೀರಿ, ಲೋಟವನ್ನು ಕೆಳಗಿಟ್ಟು ತನ್ನ ಸೂಟ್‍ಕೇಸಿನಿಂದ ಅರ್ಜಿ ಫಾರಂ ತೆಗೆದ. ಕಾಶಿಗೇನೂ ಕೆಲಸ ಕೊಡದೇ ಅವನ್ನೆಲ್ಲಾ ತಾನೇ ಭರ್ತಿ ಮಾಡಿದ. ಆಧಾರ್ ಸಂಖ್ಯೆ, ಪಾನ್ ನಂಬರ್, ಎಲ್ಲಾ ಕೇಳಿದ. ಕಾಶಿಯಿಂದ ಸಹಿ ತೆಗೆದುಕೊಂಡು, ಕಂಪನಿಯವರು ಕೊಟ್ಟ ಪ್ರೊಫಾರ್ಮ ಇನ್‍ವಾಯಿಸ್ ನೋಡಿ, ‘ಎಲ್ಲಾ ಸರಿಯಾಗಿದೆ ಸರ್. ನೀವು ಇನೀಶಿಯಲ್ ಪೇಮೆಂಟ್ ಹತ್ತು ಸಾವಿರ ರೂಪಾಯಿ ಕೊಟ್ಟರೆ ರಿಸೀಟ್ ಕೊಡ್ತೀನಿ. ಎರಡು ವರ್ಕಿಂಗ್ ಡೇಸ್‍ಗಳಲ್ಲಿ ಇನ್‍ವಾಯಿಸ್ ಕೊಟ್ಟ ಅಂಗಡಿಗೆ ನಮ್ಮ ಕಂಪನಿ ಪೇಮೆಂಟ್ ಮಾಡುತ್ತದೆ. ಅವರು ಕಾಂಟ್ರಾಕ್ಟ್ ಪ್ರಕಾರ ಡೆಲಿವರಿ ಮತ್ತು ಇನ್‍ಸ್ಟಲೇಶನ್ ಮಾಡುತ್ತಾರೆ,’ ಎಂದ.

‘ಹತ್ತು ಸಾವಿರ ರೂಪಾಯಿ ಕ್ಯಾಷ್ ಕೊಡಬೇಕೋ? ಚೆಕ್ ಕೊಟ್ಟರೆ ಆಗುತ್ತದೋ?’ ಕಾಶೀಪತಿ ಕೇಳಿದ.
‘ಚೆಕ್ ಅಂದರೆ ಕ್ಲಿಯರೆನ್ಸ್ ಟೈಂ ತಗೊಳ್ಳುತ್ತೆ. ಅದಲ್ಲದೇ ಆ ಹಣ ಟ್ಯಾಕ್ಸ್ ಸ್ಲ್ಯಾಬ್‍ನಲ್ಲಿ ಬರುತ್ತೆ. ಹಾಗಾಗಿ ನಾವು ಕ್ಯಾಶೇ ಪ್ರಿಫರ್ ಮಾಡೋದು,’ ಎಂದ ಆ ಯುವಕ. ಸರಿಯಲ್ಲವೇ ಅನಿಸಿತು ಕಾಶೀಪತಿಗೆ. ಹಣ ಕೊಟ್ಟ. ‘ರಸೀದಿ?’
‘ನೋಡಿ ಮಿಸ್ಟರ್ ಕಾಶೀಪತಿ, ಸೆಪರೇಟ್ ರಸೀಟ್ ಇಲ್ಲ. ನಮ್ಮ ಫಾರ್ಮು ಮತ್ತು ಪ್ರೊಫಾರ್ಮಾ ಇನ್‍ವಾಯಿಸ್, ಇವನ್ನು ಫೊಟೊಕಾಪಿ ಮಾಡಿ ಕೊಡ್ತೀನಿ. ಅದೇ ಸಾಕಾಗುತ್ತೆ,’ ಎಂದ. ಕಾಶೀಪತಿ ತಲೆ ಆಡಿಸಿದ.

ಹಣ ಪಡೆದು, ಶುಭಾಶಯ ಹೇಳಿ ಆ ಯುವಕ ಹೊರಟುಹೋದ. ಇನ್ನು ತುಸು ಹೊತ್ತಿನಲ್ಲಿಯೇ ಆತ ಮರಳಿ ಬಂದು ರಸೀದಿ ಕೊಡುತ್ತಾನೆ ಎಂದು ಕಾದ ಕಾಶೀಪತಿ.

ಒಮ್ಮೆಲೇ ತನ್ನ ತೂಕ ಹೆಚ್ಚಾದಂತೆ ಅನಿಸಿತು ಮಾದೇವಿಗೆ. ‘ರಾಜು,’ ಆಕೆ ಮಗನನನ್ನು ಉದ್ದೇಶಿಸಿ ಎಂದಳು, ‘ಮನೆಗೆ ಏಸಿ ಬರುತ್ತೆ ಕಣೋ. ನೀನು ಕಿಟಕಿ ತೆಗೆದು ಆಚೆ ಮನೆ ರಾಣಿ ಜೊತೆಗೆ ಮಾತಾಡುತ್ತಾ ನಿಲ್ಲಬಾರದು, ಏಸಿ ಲೀಕ್ ಆಗುತ್ತೆ,’ ಎಂದವಳು ಜವಾಬ್ದಾರಿಯುಳ್ಳವಳಂತೆ ಗಂಡನಿಗೆ ಎಂದಳು. ‘ರೀ, ರೂಮಿನ ಕಿಟಕಿಯಲ್ಲಿ ಎಲ್ಲಿಯೂ ತೂತಿಲ್ಲ ತಾನೇ? ಏಸಿ ಲೀಕ್ ಆದರೆ ಸುಮ್ಮನೇ ಕರೆಂಟು ಖರ್ಚು. ಒಂದು ಸಲ ಪರೀಕ್ಷೆ ಮಾಡಿಸಿ, ರಿಪೇರಿ ಬೇಕಾದರೆ ಮಾಡಿಸಿಬಿಡಿ, ಅಡ್ವಾನ್ಸ್ ಆಗಿ.’
ತುಸು ಹೊತ್ತಿನಲ್ಲಿಯೇ ಮಾದೇವಿ ತನ್ನ ಅಮ್ಮನಿಗೆ ಫೋನ್ ಮಾಡಿದಳು. ‘ಹೇಗಿದ್ದಿ ಅಮ್ಮ, ಮಂಡಿ ನೋವು ಹೇಗಿದೆ,’ ಎಂಬ ಉಭಯ ಕುಶಲೋಪರಿ ಮಾತಿನ ನಂತರ ಒಮ್ಮೆಗೇ ಶೀನಿದಳು. ಸಹಜವಾಗಿ ಹೃದಯವೇ ಬಾಯಿಯಾಗಿರುವ ತಾಯಿ ಆತಂಕದಿಂದಲೇ ಕೇಳಿದಳು, ‘ಏನಾಯ್ತೇ? ಶೀತನಾ?’
ಮಾದೇವಿ ಎಂದಳು. ‘ಏನೂ ಇಲ್ಲವಮ್ಮ. ನಮ್ಮ ಮನೆಗೆ ಏಸಿ ಹಾಕಿದ್ದೆವಲ್ಲ, ಆ ಥಂಡಿಗೆ ಮೂಗು ಕಟ್ಟಿಕೊಂಡಿದೆ ಅಷ್ಟೇ. ಎರಡು ದಿನ ಆದರೆ ಮೂಗು ಹೊಂದಿಕೊಳ್ಳುತ್ತೆ ಬಿಡು.’ ಇನ್ನೂ ಮನೆಗೆ ಏಸಿ ಬಂದಿಲ್ಲ, ಆಗಲೇ ತನ್ನ ತಾಯಿಯೊಂದಿಗೆ ಇವಳು ಸುಳ್ಳು ಹೇಳುತ್ತಾಳಲ್ಲ, ಎಂದು ಕಾಶೀಪತಿಗೆ ಅಚ್ಚರಿಯಾಯಿತು. ಮಾತನಾಡಲು ಏನೂ ವಿಷಯ ಇಲ್ಲದಾಗಲೂ ಸುಮ್ಮನೆ ತನ್ನ ತಾಯಿಗೆ ಡಯಲಿಸಿದ್ದಳೆಂದರೆ ಇಂತಹ ಏನೋ ವಿಷಯ ಇರಬೇಕು ಎಂದು ಅವನು ಆಗಲೇ ಯೋಚಿಸಿದ್ದ. ಒಣ ಪ್ರತಿಷ್ಠೆ.

ಅವಳ ತಾಯಿ ಹರ್ಷ ತೋರ್ಪಡಿಸುತ್ತಾ ಎಂದಳು, ‘ಹೌದೇನೇ? ಏಸಿ ಹಾಕಿಸಿಕೊಂಡೆಯಾ?’
‘ಹೂಂ ಕಣಮ್ಮಾ. ಇಡೀ ಮನೆಗೇ ಹಾಕ್ತೀನಿ, ಎಂದರು. ನಾನೇ ಬೇಡ, ರೂಮಿಗೆ ಸಾಕು, ಎಂದೆ. ಹಣ ಇದೇಂತ ವ್ಯರ್ಥವಾಗಿ ಖರ್ಚು ಮಾಡಬಾರದಲ್ಲ.’ ಎಂದುತ್ತರಿಸಳು ಮಾದೇವಿ. ‘ರಾಜು ಏನೋ ಕೂಗ್ತಾನೆ. ಆಮೇಲೆ ಮಾತನಾಡ್ತೀನಿ,’ ಎಂದು ಫೋನ್ ಕತ್ತರಿಸಿಳು.
ರಸೀದಿ ಕೊಡುತ್ತೇನೆ ಎಂದು ಹೋದ ರೆಪ್ರಸೆಂಟೇಟಿವ್ ಅರ್ಧಗಂಟೆಯಾದರೂ ಮರಳಲಿಲ್ಲ. ಬಹುಶಃ ಬೆಳಗ್ಗೆ ಅಂಗಡಿಗಳು ತೆರೆದಿರಲಿಕ್ಕಿಲ್ಲ. ತಂದುಕೊಟ್ಟಾಗ ಇಟ್ಟುಕೊ, ಎಂದು ಹೆಂಡತಿಗೆ ಹೇಳಿ ಕಾಶೀಪತಿ ಕೆಲಸಕ್ಕೆ ಹೋದ.

ಸಂಜೆ ನೆನಪಾಗಿ ಹೆಂಡತಿಗೆ ಕರೆ ಮಾಡಿದ. ಅವಳು ಕೂಡಾ ರಸೀದಿ ಬಂದಿಲ್ಲ ಎಂಬುದನ್ನು ಮರೆತೇ ಬಿಟ್ಟಿದ್ದಳು. ಹೋದರೇನಾಯ್ತು, ಫೋನ್ ಮಾಡಿ ಕೇಳಿದರಾಯಿತು, ಎಂದಳು.
ಮರುದಿನ ಮೂರು ಬಾರಿ ಕಾಶೀಪತಿ ಏಸಿ ಮಾರುವ ಕಂಪನಿಗೆ ಫೋನ್ ಮಾಡಿದ. ಇನ್ನೂ ಹಣ ವರ್ಗಾವಣೆ ಆಗಿಲ್ಲ, ಎಂಬ ಉತ್ತರ ಪ್ರತೀ ಬಾರಿಯೂ ಬಂತು. ಸಾಲ ಕೊಡುವ ಕಂಪನಿಗೆ ಫೋನ್ ಮಾಡಿದ. ಈ ನಂಬರ್ ಚಲಾವಣೆಯಲ್ಲಿ ಇಲ್ಲ, ಎಂಬ ಧ್ವನಿ ಕೇಳಿಸಿತು.
ಕಾಶೀಪತಿಯ ಹತ್ತು ಸಾವಿರ ರೂಪಾಯಿ ಅದಾರ ಜೇಬನ್ನೋ ಸೇರಿತು. ತಣ್ಣಗಿನ ಹವೆಯ ಕೋಣೆಯೊಳಗೆ ಮಲಗಬೇಕೆಂಬುವ ಮಾದೇವಿಯ ಕನಸು ನನಸಾಗಲೇ ಇಲ್ಲ.

ಇಲ್ಲಿಗೆ ಕತೆ ಮುಗಿಸಬಹುದಿತ್ತು. ನೀವು ಅಂದುಕೊಂಡಂತೆ ಸಾಲ ಕೊಡುವ ಆ ಕಂಪನಿಯು ಬೋಗಸ್, ಮೋಸ ಮಾಡಿದೆ. ಎಂದಿನಂತೆ ಕಾಶೀಪತಿ ಒಬ್ಬ ಬಲಿಪಶು. ಇಂತಹವು ಎಂದಿಗೂ ನಡೆಯುತ್ತದೆ. ಮೂರ್ಖರಿರುವ ತನಕ ವಂಚಿಸುವವರು ಇದ್ದೇ ಇರುತ್ತಾರೆ. ಕುರಿಗಳಿರುವ ತನಕ ತೋಳ ಇರುತ್ತದೆ. ಹೀಗೆ ಎಂದು ಕತೆಗೆ ‘ಶುಭಂ’ ಹೇಳಿದರೆ ಕತೆಯಲ್ಲ್ಲಿ ಅಂತಹ ವಿಶೇಷವೇನೂ ಇರೋಲ್ಲ. ಇನ್ನೂ ಮುಂದುವರಿಸೋಣ ಅಲ್ಲವೇ?
ಅದರ ಮರುದಿನ ಶನಿವಾರ. ಮಧ್ಯಾಹ್ನ ಟಿವಿಯಲ್ಲಿ ಬರುತ್ತಿದ್ದ ಸಿನೆಮಾ ನೋಡುತ್ತಿದ್ದ. ಹತ್ತು ಸಾವಿರ ರೂಪಾಯಿಯು ಕಂಡು ಕಾಣದವರ ಪಾಲಾಗಿದ್ದ ನೋವು ತುಸುವೇ ಕಡಿಮೆಯಾಗಿತ್ತು. ಮರೆವು ದೇವರು ಮನುಷ್ಯನಿಗೆ ಕೊಟ್ಟ ವರ. ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು ಕಾರಣೀಭೂತರನ್ನಾಗಿಸಿಕೊಂಡು ದೂಷಿಸಿದ್ದರೂ ಅದು ನೂರಕ್ಕೆ ನೂರರಷ್ಟು ಸರಿಯಲ್ಲ ಎಂಬುದು ಇಬ್ಬರಿಗೂ ಗೊತ್ತಿತ್ತು. ಮನೆಗೆ ಬಂದವರೊಡನೆ, ಮನೆಗೆ ಬಾರದವರೊಡನೆ, ಹೀಗೆಲ್ಲಾ ಮಾತನಾಡುವಾಗ ತಮ್ಮ ಮನೆಯ ಹವಾನಿಯಂತ್ರಣ ಯಂತ್ರದ ಬಗ್ಗೆ ಮಾತನಾಡುತ್ತಿದ್ದ ಮಾದೇವಿ ಬಾಯಿಗೆ ಬೀಗ ಜಡಿದುಕೊಂಡುಬಿಟ್ಟಿದ್ದಳು.

ಯಾರೋ ಬೆಲ್ ಮಾಡಿದರು. ಬಾಗಿಲು ತೆರೆದ. ಠಾಕು ಠೀಕಾಗಿ ಬಟ್ಟೆ ತೊಟ್ಟ ಒಬ್ಬ ಯುವಕ ಅಲ್ಲಿ ನಿಂತಿದ್ದ.
‘ನೀವು ಕಾಶೀಪತಿ ಅಲ್ಲವೇ?’ ಬಂದಾತ ಪ್ರಶ್ನಿಸಿದ. ‘ಹೌದು. ನೀವು ಯಾರು?’
‘ಸಾರಿ ಸರ್, ನಾನು ಫೋನ್ ಮಾಡಿ ನಿಮ್ಮ ಅಪಾಯಿಂಟ್‍ಮೆಂಟ್ ತೆಗೆದುಕೊಳ್ಳಬೇಕಾಗಿತ್ತು. ಆದರೆ ನಾನು ಬರೆದುಕೊಂಡ ನಿಮ್ಮ ಫೋನ್ ನಂಬರ್ ತಪ್ಪಾಗಿ, ರಾಂಗ್ ನಂಬರ್ ಅಂತ ಧ್ವನಿ ಕೇಳಿಸುತ್ತಿತ್ತು. ಹೇಗೂ ನಿಮ್ಮ ವಿಳಾಸ ಇದೆ. ಬಂದೇ ಹೋಗೋಣ ಎಂದು ಕೇಳದೇ ಬಂದೆ,’ ಎಂತ ಆತ ತನ್ನ ಜೇಬಿನಿಂದ ತನ್ನ ವಿಸಿಟಿಂಗ್ ಕಾರ್ಡು ತೆಗೆದು ಅವನಿಗೆ ಕೊಟ್ಟ.

ಕಾಶೀಪತಿ ಅದನ್ನು ನೋಡುತ್ತಿರುವಾಗಲೇ ಆಗಂತುಕ ಎಂದ, ‘ನೀವು ನಮ್ಮ ಕಂಪನಿಗೆ ಫೋನ್ ಮಾಡಿ ಏಸಿ ಕೊಳ್ಳಲು ಸಾಲ ಕೇಳಿದ್ದಿರಲ್ಲ. ಸಾಲ ಸ್ಯಾಂಕ್ಷನ್ ಆಗಿದೆ. ಅದರ ಫಾರ್ಮಾಲಿಟೀಸ್ ಮುಗಿಸಬೇಕಿತ್ತಲ್ಲ, ಅದಕ್ಕೆ ಬಂದೆ,’ ಎಂದ.

ಹಾಗಾದರೆ ಅವನಾರು ಮೊನ್ನೆ ಬಂದವನು? ತನ್ನಿಂದ ಹತ್ತು ಸಾವಿರ ರೂಪಾಯಿ ಪಡೆದುಕೊಂಡು ಮೋಸ ಮಾಡಿ ಹೋದವನು? ಕಾಶೀಪತಿಗೆ ಏನೂ ಗೊತ್ತಾಗಲಿಲ್ಲ. ‘ಮೊನ್ನೆ ಯಾರೋ ಬಂದರಲ್ಲ, ನನ್ನಿಂದ…’ ಎಂದವನು ತಾನು ಮೋಸ ಹೋಗಿದ್ದನ್ನು ಅವನಿಗೆ ಯಾಕೆ ಹೇಳಬೇಕೆಂದುಕೊಂಡು ಸುಮ್ಮನಾದ.
‘ಇಲ್ಲ ಸರ್, ಈ ಏರಿಯಾಕ್ಕೆಲ್ಲಾ ನಾನೇ ಇನ್‍ಚಾರ್ಜ್. ಇನ್ನು ಯಾರೂ ಬರೋಲ್ಲ.’
ಕಾಶೀಪತಿ ಒಮ್ಮೆ ಹೆಂಡತಿಯ ಮುಖ ನೋಡಿದ, ನಂತರ ಆ ಯುವಕನ ಮುಖವನ್ನು. ಮಾದೇವಿ ಇಬ್ಬರನ್ನೂ ನೋಡಿದಳು. ಏನು ಉತ್ತರಿಸಬೇಕೆಂದು ತಿಳಿಯದೇ ಯೋಚನೆಯ ಕೂಪದಲ್ಲಿ ಬಿದ್ದರು. ಅಷ್ಟರಲ್ಲಿ ಆ ಯುವಕನೇ ಹೇಳಿದ, ‘ನೀವು ಕರೆ ಮಾಡಿದ ಫೋನ್ ಕಳೆದುಹೋಗಿತ್ತು. ಹಾಗಾಗಿ ನಂಬರ್ ಬ್ಲಾಕ್ ಮಾಡಿದ್ದರು. ಹೊಸ ಫೋನ್ ತೆಗೆದುಕೊಂಡು, ಪುನಃ ಆ್ಯಕ್ಟಿವೇಟ್ ಮಾಡೋಕೆ ಎರಡು ದಿನ ಆಯ್ತು. ಸರ್, ಬೇಗ ಫಾರ್ಮಾಲಿಟೀಸ್ ಮುಗಿಸೋಣವೇ? ನಿಮ್ಮ ಹತ್ತಿರ ಕಂಪನಿಯ ಪ್ರೊಫಾರ್ಮಾ ಇನ್‍ವಾಯ್ಸ್ ಇದೆ ತಾನೇ?’
ಏನು ಮಾಡುವುದೋ ತಿಳಿಯಲಿಲ್ಲ ಕಾಶೀಪತಿಗೆ. ತುಸು ಹೊತ್ತು ಯೋಚಿಸಿ ಎಂದ, ‘ಈಗ ನನ್ನ ಆಫೀಸ್ಗೆ ಲೇಟಾಗಿದೆ. ನಾಳೆ ಬರ್ತೀರ?’ ಸರಿ ಎಂದ ಯುವಕ ತನ್ನ ಬೈಕ್ ಸ್ಟಾರ್ಟ್ ಮಾಡಿದ.
ಕಾಶೀಪತಿ ಕಚೇರಿಯಲ್ಲಿ ಕುಳಿತಿರುವಾಗ ಫೋನ್ ರಿಂಗಣಿಸಿತು. ಅದು ಪತ್ರಿಕೆಯ ಜಾಹಿರಾತಿನಲ್ಲಿ ಪ್ರಕಟವಾದ ಮತ್ತು ಎರಡು ದಿನಗಳ ಹಿಂದೆ ಕಾಶೀಪತಿ ನಂಬರಿಸಿದ ಸಂಖ್ಯೆ. ಹೆಣ್ಣೊಂದು ಮೃದು ಮಧುರ ಧ್ವನಿಯಲ್ಲಿ ಹೇಳಿತು, ‘ಸಾರಿ ಸರ್. ಫೋನ್ ಕಳೆದು ಹೋಗಿ ನಿಮ್ಮನ್ನು ಕಾಂಟಾಕ್ಟ್ ಮಾಡೋಕೆ ಆಗಲಿಲ್ಲ. ನೀವು ಲೋನ್ ಕೇಳಿದ್ದಿರಲ್ಲ, ಅದು ಸ್ಯಾಂಕ್ಷನ್ ಆಗಿದೆ. ನಿಮ್ಮ ಮನೆಗೆ ನಮ್ಮ ರೆಪ್ರೆಸೆಂಟೇಟಿವ್‍ನ ಯಾವಾಗ ಕಳುಹಿಸಲಿ?’

ಸೂರಿ ಹಾರ್ದಳ್ಳಿ
**

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಭಾರ್ಗವಿ
ಭಾರ್ಗವಿ
4 years ago

ತಮಾಷೆಯಾಗಿ ಹೇಳಿದ್ರು ವಾಸ್ತವದ ಚಿತ್ರಣ

1
0
Would love your thoughts, please comment.x
()
x