ಒಂದು ಕೃತಿಯ ಜೀವಾಳವೆಂದರೆ ಸಾರ್ವತ್ರಿಕ ಕಾಲವನ್ನು ಹಿಡಿದಿಡುವ ಶಕ್ತಿಯನ್ನು ಹೊಂದಿರುವಂಥದ್ದು. ಆಳವಾದ ಅನುಭವ, ಜ್ಞಾನದ ಅನುಭಾವ, ಸಂತೃಪ್ತ ಭಾವಗಳು ಎಲ್ಲಿ ಮೇಳೈಸಿಕೊಂಡಿರುತ್ತವೋ ಅಲ್ಲಿ ಪ್ರದರ್ಶನಕ್ಕಿಂತ ಪರಾಮರ್ಶನಕ್ಕೆ ಹೆಚ್ಚಿನ ಆದ್ಯತೆ ಇರುತ್ತದೆ. ಕಲಾಕಾರರು ತಮ್ಮ ಅನುಭವ ಮತ್ತು ಜೀವನದ ವಿರೋಧಾವಿರೋಧಗಳನ್ನೆಲ್ಲ ಕೃತಿಯಾಗಿಸುವ ನಿಟ್ಟಿನಲ್ಲಿಯೇ ಉತ್ಸುಕರಾಗಿರುತ್ತಾರೆ. ಅಭಿವ್ಯಕ್ತಿ ಅನ್ನುವುದು ಕೂಡ ಕಲಾದೃಷ್ಟಿಯ ಅಂತಃಪಠ್ಯವಾಗಿ ಸತ್ಯಶೋಧನೆ ಹುಡುಕಾಟದಲ್ಲಿ ತೊಡಗಿರುತ್ತದೆ. ವಾಸ್ತವವನ್ನು ಗ್ರಹಿಸುವುದೇ ಸಿನೆಮಾ ಮಾರ್ಗದಲ್ಲಿ ಮೂಲ ಪಠ್ಯವಾಗಿರುತ್ತದೆ. ಲೂಮಿಯೇರ್ ಸಹೋದರರು ತಮ್ಮ ಮೊದಲ ಚಿತ್ರಗಳನ್ನು ಇಂಥ ವಾಸ್ತವಿಕ ಅಂಶಗಳನ್ನು ಸೆರೆಹಿಡಿಯುವ ಮೂಲಕ ಆರಂಭಿಸಿದರು. ಸಾಂದರ್ಭಿಕ ತುರ್ತುಗಳಿಗೆ ಸಂವಾದಿಯಾಗಿ ಲಲಿತಕಲೆಗಳಲ್ಲಿ ಪ್ರಯೋಗಗಳು ನಡೆಯುತ್ತಿರುತ್ತವೆ. ಆ ಒಟ್ಟು ಪ್ರಕ್ರಿಯೆಯನ್ನು ನಂತರದಲ್ಲಿ ಪಂಥಗಳನ್ನಾಗಿ ಬಿಡಿಸಿ ಅಭ್ಯಸಿಸುವುದು ಚಾಲ್ತಿಯಲ್ಲಿರುವ ಕಾರಣ ತತ್ವಗಳು ಹುಟ್ಟಿಕೊಳ್ಳುತ್ತಿರುತ್ತವೆ. ಸಿನೆಮಾದಲ್ಲಿ ಅನುಭವ – ಅಭಿವ್ಯಕ್ತಿಗಳನ್ನು ನಿರ್ವಹಿಸುವ ಕೆಲಸವನ್ನು ಸಂಕಲನ ಮಾಡುತ್ತದೆ ಆದ್ದರಿಂದ ವಾಸ್ತವದ ಜೊತೆ ವ್ಯವಹರಿಸುವ ಭಾಗಗಳನ್ನು ಮೊಂಟೇಜ್ ಮತ್ತು ಚುಟುಕು ಚಿತ್ರಗಳು ಕೂಡಿಸುತ್ತವೆ. ಆಗ ನಟನ ವರ್ತನೆಯ ಯಾವ ಗಳಿಗೆಯನ್ನು ಬೇಕಾದರೂ ಕತೆಯ ಜೊತೆ ಜೋಡಿಸಬಹುದಾಗಿರುತ್ತದೆ. ಚಿತ್ರಕತೆಯ ಸೀಮಿತ ಚೌಕಟ್ಟನ್ನು ಮೀರಿಯೂ ಹೋಗುತ್ತವೆ.
ವಿಜೃಂಬಿತ ಚಿತ್ರಕತೆಯಲ್ಲಿ ನಾಯಕ ನಾಯಕಿಯರ ಪರದೆ ಪ್ರವೇಶವನ್ನು ವಿಶೇಷ ಮಾದರಿಯಲ್ಲಿ ಸಂಕಲಿಸಿ ತೋರಿಸುವುದು ಬರೀ ತಂತ್ರ ಮಾತ್ರವಲ್ಲ ಅದು ಸಿನೆಮಾದ ಸೂತ್ರವೇ ಆಗಿಬಿಟ್ಟಿದೆ. ಬಂಗಾಳಿಗಳ ವ್ಯಾಪಾರೀ ಮನೋಭಾವದ ಜಾತ್ರಾ ಎಂಬ ಜನಪದ ಶೈಲಿಯಲ್ಲಿ ಕತೆಯ ಶ್ರೇಷ್ಠಭಾಗವನ್ನು ಮೊದಲು ತೋರಿಸುವುದರಿಂದಲೋ, ಧಣಿಕನೊಬ್ಬನ ಅಟ್ಟಹಾಸ, ಇಲ್ಲವೇ ಕೊಲೆ, ದರೋಡೆಗಳ ಮುಖಾಂತರವೋ ನಾಟಕವನ್ನು ಆರಂಭಿಸುವ ರೀತಿಯೊಂದಿದೆ. ಅದೇ ಮಾದರಿಯಲ್ಲಿ ದೊಂಬಿಗಳೊಂದಿಗೆ, ಕೊಲೆ, ಸುಲಿಗೆ, ದರೋಡೆಗಳಿಂದ ಎಷ್ಟೋ ಸಿನೆಮಾಗಳು ಆರಂಭವಾಗುವುದಿದೆ. ಬಹುತೇಕ ಎಲ್ಲ ಅಭಿವ್ಯಕ್ತಿಯಲ್ಲೂ ಆದಿ ಮತ್ತು ಅಂತ್ಯಗಳು ಕೆಲವೇ ಮಾದರಿಗಳಲ್ಲಿ ನಿರ್ವಹಿಸಲಾಗುತ್ತವೆ. ಸೂರ್ಯ ಹಗಲಿಗೆ ನಿಷ್ಠನಾಗಿರುವಂತೆ ಮೂಡುತ್ತಾನೆ, ಮುಳುಗುತ್ತಾನೆ ಹೇಗೊ ಹಾಗೆಯೇ ಆರಂಭ ಅಂತ್ಯಗಳಿರುತ್ತವೆ. ಹೀಗಲ್ಲದಿದ್ದರೆ ಹಾಗೆ – ಹಾಗೆಯೂ ಇಲ್ಲವೆಂದಾದಲ್ಲಿ ಇಂತೆ ಎಂಬಂತ ಸೂತ್ರಗಳು ಕತೆಯ ನಿರೂಪಣಾ ಶೈಲಿಯನ್ನು ಸರಳಗೊಳಿಸಿರುತ್ತವೆ.
ಚಂದ್ರನ ಸಂಕುಲಕ್ಕೆ ಹುಣ್ಣಿಮೆಯೊಂದೇ ಸಾಕ್ಷಿ ಆದ್ದರಿಂದ ಕಲಾತ್ಮಕ ನಿರ್ದೇಶಕ ಒಂದು ಕಲಾಕೃತಿ ಕಟ್ಟುವಾಗ ಭಾವತನ್ಮಯತೆಗಿಂತ ಹೆಚ್ಚು ವಿಮರ್ಶಾತ್ಮಕ ದೃಷ್ಟಿಕೋನವನ್ನು ಹೊಂದಿರಬೇಕಾಗುತ್ತದೆ. ಚಣಹೊತ್ತಿನ ಸಂಚಾರಿ ಭಾವಗಳ ಗ್ರಹಿಕೆಯನ್ನು ವ್ಯವಧಾನದಿಂದ ಆಲೋಚಿಸಿ, ಧ್ಯಾನಿಸಿ ಫ್ರೇಮಿನೊಳಗಿಡಬೇಕಾಗುತ್ತದೆ. ವಾಸ್ತವ ಬದುಕಿನ ಹತ್ತೆಂಟು ಚಿತ್ರಗಳು ಕೂಡ, ದೃಶ್ಯ ಸಂಬಂಧಿಯಾಗಿ ಮನದ ಮುಂದೆ ಹೊಯ್ದಾಡುತ್ತಿರುತ್ತವೆ. ಆ ಎಲ್ಲ ಅನುಭವಗಳ ನೆಲೆಯನ್ನು ಚಿತ್ರಕತೆಯ ಹಂದರದಲ್ಲಿ ಜೋಡಿಸಿಕೊಂಡು ಸಮಕಾಲೀನ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮಾರ್ಪಾಡುಗಳನ್ನೊಳಗೊಂಡು, ಕ್ರಿಯಾಶೀಲ ಮಾಧ್ಯಮವೊಂದರಲ್ಲಿ ಅತ್ಯುತ್ಕೃಷ್ಟ ಕಲಾಕೃತಿ ಒಡಮೂಡುತ್ತದೆ.
ಒಂದೆಡೆ ಮನಃಪಟಲದಲ್ಲಿ ಹಾಕಿಕೊಳ್ಳುವ ಸೀಮಿತ ಚೌಕಟ್ಟು. ಮತ್ತೊಂದೆಡೆ ಕಲಾಕಾರನ ಸೂಪ್ತಪ್ರಜ್ಞೆಯಲ್ಲಿ ಬಚ್ಚಿಟ್ಟುಕೊಂಡಿರುವ ಹೇಳಿಕೊಳ್ಳಲಿಕ್ಕಾಗದ ಭಾವಗಳು ಈ ಎರಡೂ ರೇಖೆಗಳನ್ನು ಸಮಸಮವಾಗಿ ಕೃತಿಯ ನಿರೂಪಣೆಯಲ್ಲಿಟ್ಟು ಹೆಣೆಯುವ ಜಾಣ್ಮೆ ನಿರ್ದೇಶನದ ಜವಾಬ್ದಾರಿಯಾಗಿರುತ್ತದೆ. ಕುಲುಮೆಯಲ್ಲಿ ಕಭ್ಭಿಣವನ್ನು ಹದವಾಗಿ ಕಾಯಿಸುವ – ಕಾಯ್ದ ಕಬ್ಬಿಣಕ್ಕೆ ಏಟುಕೊಟ್ಟು ಚೂಪು ಮಾಡುವ ಕಾಯಕದಂತೆ ಇದೂ ಒಂದು ಕೌಶಲವಾಗಿರುತ್ತದೆ. ಈ ಹಂತದ ಅಸ್ಪಷ್ಟ ಗೊಂದಲಗಳಲ್ಲಿಯೂ ಕ್ರಿಯಾಶೀಲ ಮನಸ್ಸು ಎರಡಾಗಿ ಆಳದ ಏಕಾಂತದಲ್ಲಿ ತನ್ನನ್ನೇ ತಾನು ಪ್ರಶ್ನಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತದೆ. ಇಲ್ಲಿ ಆನಂದದ ಉನ್ಮಾದ, ಅರಿವಿನ ಪ್ರಜ್ಞೆಗಳು ಬೆಸೆದುಕೊಳ್ಳುತ್ತಿದ್ದಂತೆಯೇ ಆತ್ಮರತಿಯ ಸದಭಿರುಚಿ ಗುಣಲಕ್ಷಣಗಳು ಮೂರ್ತಗೊಳ್ಳಲು ಪ್ರಾರಂಭಿಸುತ್ತವೆ. ಹೀಗೆ ಭಾವಪ್ರಪಂಚವು ಬದುಕಿನೊಂದಿಗೆ ವಿಶ್ಲೇಷಣಾತ್ಮಕವಾಗಿ ವ್ಯವಹರಿಸಿದರೆ ಕಲಾಕೃತಿಯ ಆಶಯವು ಸಹೃದಯನನ್ನು ತೀವ್ರವಾಗಿ ತಟ್ಟುತ್ತದೆ. ಇಂಥದೇ ಉಮಿಯ ಶಾಖದಲ್ಲಿ ಹಣ್ಣಾಗುವ ಸರಳಗ್ರಹಿಕೆಯ ಸಿನೆಮಾಗಳು ಜನಮಾನಸವನ್ನು ಬರೀ ಮುಟ್ಟುವುದಲ್ಲ ಅದರಾಚೆಗಿನ ಜೀವಜಗತ್ತಿನಲ್ಲೂ ಪ್ರೇಕ್ಷಕನನ್ನು ಜಾಗೃತಗೊಳಿಸಬಹುದು. ಹಾಗಾಗಿ ಸಿನೆಮಾ ಭಾಷೆಯೂ ಕಾವ್ಯದಂತೆಯೇ ವಿಸ್ತಾರ ಹರವಿನ ಪ್ರತಿಮೆಗಳೊಂದಿಗೆ ಆಂತರಿಕ ಸುಖ ಸಂತೃಪ್ತ ತೊಳಲಾಟದ ಗೂಢಜಗತ್ತನ್ನು ಸದಾ ಕೆಣಕುತ್ತಲಿರುತ್ತದೆ.
ಸದಭಿರುಚಿ ಸಿನೆಮಾ ನಿರ್ದೇಶಕರುಗಳು ತಮ್ಮ ಕೃತಿಗಳಲ್ಲಿ ಬದುಕು-ಭಾವಕ್ಕಿಂತ ಹೆಚ್ಚಾಗಿ ಅದು ಪ್ರಕಟವಾಗುವ ನಿರೂಪಣಾ ಮಾದರಿಯ ಹುಡುಕಾಟಕ್ಕಾಗಿ ತುಂಬ ಶ್ರಮಪಡುತ್ತಾರೆ. ಕಾವ್ಯದಂತೆ ಸಿನೆಮಾ ಅನ್ನುವುದಾದರೆ ಅಭಿವ್ಯಕ್ತಿಯ ಶೈಲಿಗಾಗಿ ಕಸರತ್ತು ಮಾಡುವುದು ಅನಿವಾರ್ಯವೇ ಆಗುತ್ತದೆ. ತಾವೇ ಸೃಷ್ಟಿಸಿಕೊಂಡಿದ್ದ ಹಿಂದಿನ ಸಿದ್ಧಮಾದರಿಗಳನ್ನು ತಾವೇ ಒಡೆದು ಮುರಿದು ಕಟ್ಟಲು ಪ್ರಯತ್ನಿಸುವ ಕತೆಗಳನ್ನು – ಸಂವಾದಗಳಲ್ಲಿ ಭಾಗವಹಿಸಿರುವ ಎಲ್ಲ ನಿರ್ದೇಶಕರು ಹೇಳಿಕೊಂಡಿದ್ದಾರೆ. ಈ ಸಂವಾದದ ಟಿಪ್ಪಣಿಗಳನ್ನು ಗಮನಿಸಿದರೆ ಸಿನೆಮಾ ಕೌಶಲದ ಮೀಮಾಂಸೆಯ ಸೂತ್ರಗಳು ಬದಲಾಗುತ್ತಿರುವುದನ್ನು ಗುರುತಿಸಬಹುದು. ಒಳ್ಳೆಯ ಕಲಾಕೃತಿ ಬರಬೇಕಾದರೆ ಕೃತಿಯ ವಿನ್ಯಾಸದಲ್ಲಿ ನಿರ್ದೇಶಕ ಕಲೆಗಾರನಾಗಿಯೂ ಕಲಾವಿಮರ್ಶಕನಾಗಿಯೂ ಬಹುಮುಖಿ ಆಯಾಮಗಳನ್ನು ದೃಶ್ಯಗಳಲ್ಲಿ ಕಟ್ಟುತ್ತಿರುತ್ತಾನೆ. ಎಲ್ಲ ಮುಗಿದಾದ ಮೆಲೆ ನಿರ್ದೇಶಕ ಮೊದಲ ಪ್ರದರ್ಶನವನ್ನು ಅತೃಪ್ತ ಭಾವಗಳೊಟ್ಟಿಗೆ ಅಸಮಾಧಾನ, ಆತಂಕಗಳಿಂದ ತಾನೂ ಸಾಮಾನ್ಯ ಪ್ರೇಕ್ಷಕನಾಗಿ, ಮುಂದಲ ಸಿನೆಮಾದ ಧ್ಯಾನದಲ್ಲಿ ತಲ್ಲೀನನಾಗಿ ತನ್ನ ಕೃತಿಯ ತಾ ನೋಡುವುದರೊಂದಿಗೆ ಹೊಸಚೈತನ್ಯ ಪಡೆದುಕೊಳ್ಳುತ್ತಿರುತ್ತಾನೆ. ಹಾಗಾದಲ್ಲಿ ನಿರ್ದೇಶಕನ ಸಿದ್ಧ ಶೈಲಿಯ ಸಾಧ್ಯತೆಗಳು ಪ್ರಯೋಗಾತ್ಮಕ ಮಾದರಿಯಲ್ಲಿ ಬೆಳೆಸಲು ಸಾಧ್ಯವಾಗುತ್ತದೆ.
ಒಬ್ಬನೇ ನಿರ್ದೇಶಕ ಐದು ಆರು ಸಿನೇಮಾಗಳನ್ನು ನಿರ್ದೇಶಿಸಿದ್ದರೆ ಎಲ್ಲ ಚಲನಚಿತ್ರಗಳು ಒಂದೇ ಮಾದರಿಯ ಶೈಲಿಯಲ್ಲಿ ರೂಪುಗೊಂಡಿರುವುದಿಲ್ಲ. ತಾಂತ್ರಿಕತೆಯ ಹೊರತಾಗಿ ನಿರ್ದೇಶಕನ ಭಾಷೆ ಮತ್ತು ಆಶಯಗಳು ಒಂದೊಂದು ಸಿನೇಮಾದಲ್ಲೂ ಬದಲಾಗುತ್ತ ಹೋಗಿರುತ್ತವೆ. ಹೆಚ್ಚಿನವರು ನಿರ್ದೇಶಕನನ್ನು ಸಿದ್ಧಮಾದರಿ ಶೈಲಿಯೊಂದರ ಸಹಾಯದಿಂದ ಗ್ರಹಿಸುತ್ತಿರುತ್ತಾರೆ. ಇವರು ಇದೇ ಮಾದರಿಯ ಕಲಾಪ್ರವೃತ್ತಿವುಳ್ಳವರೆಂದು ಸುಲಭವಾಗಿ ಗುರುತಿಸಿ ಪಟ್ಟಕಟ್ಟುತ್ತಾರೆ. ಆದರೆ ಕಥಾವಸ್ತುವಿನ ಸಂವೇದನೆಯೊಂದಿಗೆ ನಿರ್ದೇಶಕನ ಸ್ಪಂದನೆಯೂ, ಗ್ರಹಿಕೆಯೂ ಬೇರೆಬೇರೆ ಆಗುತ್ತ ಕಲಾಮಾದರಿಯು ವಿಭಿನ್ನ ರೀತಿಯಲ್ಲಿ ಅಬಿವ್ಯಕ್ತಗೊಂಡಿರುತ್ತದೆ.
ಸಭಾದಲ್ಲಿ ಸಂಗೀತ ವಿದೂಷಿ ತನ್ನ ಸತ್ವಪೂರ್ಣ ರಾಗವನ್ನು ಸ್ವರದಲ್ಲಿ ವಿಸ್ತರಿಸುತ್ತ ಆಳವಾದ ಧ್ವನಿಯಲ್ಲಿ ಹಾಡುತ್ತಿರುವಾಗ – ಪೂರ್ವನಿರ್ಧರಿತ ಖಚಿತವಾದ ಸ್ಥಾನವನ್ನು ಸ್ವರ ತಲುಪುತ್ತಿದ್ದಂತೆಯೇ, ಹಾಗೂ ಸೀಮಿತ ಗಡಿರೇಖೆಯನ್ನು ದಾಟಿ ಸ್ವರ ವಿನ್ಯಾಸವು ಬಹುವಿಸ್ತಾರದೊಂದಿಗೆ ಬೆಳೆಯುತ್ತಿದ್ದಂತೆಯೇ ವಿದೂಷಿ ತನಗೆ ತಾನೇ ‘ಶಹಬಾಷ್’ ‘ಬೇಷ್’ ಎಂಬ ಉದ್ಘಾರಗಳನ್ನು ಹೇಳಿಕೊಳ್ಳುತ್ತಾನೆ. ಇದು ಸಂಗೀತ ಕಲಾಮಾಧ್ಯಮದ ಆತ್ಮರತಿ ಸಂವಾದದ ವಿಶೇಷ ಲಕ್ಷಣ. ಆತ್ಮ ಸಂವಾದದ ಈ ಮೀಮಾಂಸೆ ಉಳಿದ ಎಲ್ಲ ಕಲಾಪ್ರಕಾರಗಳಲ್ಲೂ ಅಂತರ್ಗತ ನಿಯಮವಾಗಿರುತ್ತದೆ. ಅಂಥದ್ದೊಂದು ಗುಣ ಕಲೆಗಾರನಿಗೂ ಇಲ್ಲದೇ ಹೋದಲ್ಲಿ ಅಭಿವ್ಯಕ್ತಿಯೂ ಜೊಳ್ಳೆನಿಸಿಬಿಡುತ್ತದೆ. ಆ ಆತ್ಮರತಿ ಬರೀ ಅಹಂ ಆಗಿರುವುದಿಲ್ಲ ಅದು ತನ್ನ ತಾ ಪರೀಕ್ಷಿಸಿಕೊಳ್ಳುವ ಬುದ್ಧಿ ವಿಚಾರಗಳ ತತ್ವದ ಮಾರ್ಗವನ್ನು ತೆರೆದಿಡುತ್ತಿರುತ್ತದೆ. ಶಂಕರ ಮೊಕಾಶಿ ಪುಣೇಕರ ಅವರು ಸೃಜನಶೀಲತೆಯನ್ನು ವ್ಯಾಖ್ಯಾನಿಸುತ್ತ “ಜೀವನ ಕಲೆಯನ್ನು ಪಳಗಿಸಲು ಬೇಕಾದ ಸಾಮಗ್ರಿ ನಮ್ಮ ಸಂಸ್ಕೃತಿಯಿಂದಲೇ ನಾವು ಪಡೆಯುವುದು ಸಾಧ್ಯ” ಎಂದಿದ್ದಾರೆ. ಸಂಸ್ಕೃತಿಯ ಡೈನಾಮಿಕ್ಸ್ ಸೃಜನಶೀಲತೆಯನ್ನು ರೂಪಿಸುತ್ತದೆ ಅನ್ನುವ ಆ ನಿಲುವು ಈ ಕಲಾಮಾರ್ಗದ ಕಟ್ಟುವ ಕ್ರಿಯೆಯಲ್ಲಿ ಕೆಲಸ ಮಾಡುತ್ತಿರುತ್ತದೆ. ಹಾಗಾಗಿ ಸಂಸ್ಕೃತಿಯ ಕುರಿತಾದ ಕಾಳಜಿಗಳೂ ಕೂಡ ಆತ್ಮರತಿಯಲ್ಲಿ ನಿರಂತರ ವ್ಯವಹರಿಸುತ್ತಿರುತ್ತವೆ. ಹೀಗೆ ಹದವರಿತು ತಯಾರಿಸಲ್ಪಡುವ ಸಿನೆಮಾಗಳು ಕಾವ್ಯಪ್ರತಿಮೆಗಳಾಗಿ ತೋರುತ್ತವೆ.
ಮಹದೇವ ಹಡಪದ್
ಸಂಗ್ರಹಯೋಗ್ಯ ಮತ್ತು ಅಧ್ಯಯನಯೋಗ್ಯ ಪ್ರೌಢ ಲೇಖನ, ಈ ಮೊದಲು ಬೇರೆ ಪತ್ರಿಕೆಗಳಲ್ಲಿ ಬಂದ 'ಮಹಾದೇವ ಹಡಪದ' ಅವರ ಲೇಖನಗಳನ್ನು ಅವಲೋಕಿಸಿದಾಗ ಈ ಲೇಖನವು ಹೆಚ್ಚು ಮಾಹಿತಿಪೂರ್ಣ, ಹರಿತ ಭಾಷಾಪ್ರಯೋಗದಿಂದ ಬಹುಕಾಲ ನೆನಪಲ್ಲಿ ಉಳಿಯುತ್ತದೆ. ಲೇಖಕರಿಗೂ ಮತ್ತು ಪ್ರಕಟಿಸಿದ ಎಲ್ಲರಿಗೂ ಶುಭದಿನ….
ಮಾಹಿತಿ ಪೂರ್ಣ ಲೇಖನ
ಮಾಹಿತಿಪೂರ್ಣ, ಪ್ರೌಢ ಲೇಖನ. ಸಾಮಾನ್ಯರಿಗೆ ಅರ್ಥವಾಗುವ ಸರಳ ಶಬ್ದಗಳನ್ನು ಹೆಚ್ಚಾಗಿ ಬಳಸಿದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದು ನನ್ನ ಅನಿಸಿಕೆ.