ಪ್ರಶಸ್ತಿ ಅಂಕಣ

ಕತೆಯಾಗದ ಕತೆ: ಪ್ರಶಸ್ತಿ

ಅದೆಷ್ಟೋ ಕಥೆಗಳು ಹುಟ್ಟೋ ಮೊದಲೇ ಸತ್ತಿರುತ್ತವೆ. ಒಂಚೂರು ಕಾಯೋ ತಾಳ್ಮೆಯಿಲ್ಲದ ಕತೃವಿನಿಂದ,ಖ್ಯಾತಿಯ ಹಿಂದೇ ಕಳೆದು ಹೋದ ಸ್ಪೂರ್ತಿಯಿಂದ. ಒಮ್ಮೆ ವಾವೆನಿಸಿದ್ದನ್ನೇ ಮತ್ತೆ ಮರುಸೃಷ್ಠಿಸೋ ಧಾವಂತದಲ್ಲಿ,ಹೊಸ ಪ್ರಯತ್ನ ಮತ್ತೆ ಸೋಲಿನತ್ತ ದೂಕಬಹುದೇನೋ ಎಂಬ ಆತಂಕದಲ್ಲಿ,ಬಾರದ ಬಹುಮಾನಗಳ ಕನವರಿಕೆಯಲ್ಲಿ, ಹಾರ-ತುರಾಯಿಗಳ, ಸನ್ಮಾನದ ಶಾಲುಗಳ ಮತ್ತೆ ಮತ್ತೆ ಹೊಚ್ಚಿಕೊಳ್ಳೋ ಹಪಾಹಪಿಯಲ್ಲಿ ಮುಂಚಿನ ಕತೆಗಾರ ಕಳೆದುಹೋಗಿರುತ್ತಾನೆ. ಬಹುಪರಾಕುಗಳ ಪಟಾಕಿಯ ಸದ್ದು ಕಿವಿಯ ಕಿವುಡಾಗಿಸೋ ಮುನ್ನ ಪ್ರಸಿದ್ದಿಯ ನಗರಿಯಿಂದ ಒಂದಿಷ್ಟು ದೂರ ಬಂದು ಒಂದಿಷ್ಟು ತಣ್ಣಗಿರೋ ಬೆಟ್ಟ ಹತ್ತಿ ಒಂದರೆಗಳಿಗೆ ಕೂತರೆ, ದೂರದೂರದ ದೃಶ್ಯ ಅಂತಸಃತ್ವವನ್ನು ಕಲಕಬಹುದೇನೋ. ಹತ್ತಿದ ಬೆಟ್ಟ ದೊಡ್ಡದಾದರೂ ದೂರದೂರದವರೆಗೂ ಇನ್ನೆಷ್ಟೋ ಬೆಟ್ಟಗಳಿವೆಯೆಂಬ ಅರಿವು ಮೂಡಬಹುದೇನೋ. ಅದರಾಚೆಯಿನ್ನಷ್ಟು, ಅದರಾಚೆ ಮತ್ತಷ್ಟು ಜೀವಮಾನವಿಡೀ ಹತ್ತಿದರೂ ಮುಗಿಯದಷ್ಟು ಬೆಟ್ಟಗಳಿವೆ, ನೋಡಿ ಮುಗಿಯದಷ್ಟು ಜಾಗಗಳು, ಬರೆದು ಮುಗಿಯದಷ್ಟು ವಿಷಯಗಳಿವೆಯೆಂಬ ಭಾವ ಹೊಮ್ಮಬಹುದೇನೋ. 

ಭಾನುವಾರದ ಬೆಳಗ್ಗೆ ಬೆಂಗಳೂರಿಗೆಲ್ಲಾ ಬೆಳಗಾದ್ರೂ ಪುಟ್ಟನಿಗಿನ್ನೂ ಮಧ್ಯರಾತ್ರಿ ! ಬಾಯಾರಿದವ ಗಬಗಬನೆ ಕುಡಿಯುವಂತೆ ಎಡಬಿಡದೇ ನೋಡಿದ್ದ ಜಂಗಲ್ ಬುಕ್ ಮತ್ತು ಕ್ಯಾಪ್ಟನ್ ಅಮೇರಿಕಾ, ಸಿವಿಲ್ ವಾರೆಂಬ ಸಿನಿಮಾಗಳ ಹಿಂದಿನ ದಿನ . ನೋಡಿ ಹಾಗೇ ಮರೆತುಬಿಡೋಕೆ ಅದೇನು ವೀಕೆಂಡಿನ ಕಾಮಿಡಿ ಶೋವೇ ? ಜಂಗಲ್ ಬುಕ್ಕಿನ ಮೋಗ್ಲಿಯಷ್ಟೇ ಅದರಲ್ಲಿ ಬರೋ ರಕ್ಷ ಎಂಬ ತೋಳ ಮತ್ತು ಅದರ ಅಕೇಲ ಎಂಬ ಮಗು ಮತ್ತಿತರ ಪರಿವಾರ, ಶೇರ್ ಖಾನ್ ಎಂಬ ಹುಲಿ, ಬಬ್ಲು ಕರಡಿ ಮತ್ತು ಭಗೀರಾ ಎಂಬ ಕಪ್ಪು ಚಿರತೆಗಳೂ ನೆನಪಲ್ಲುಳಿದಿತ್ತು. ಒಂದು ಉರಿ ಹೇಗೆ ಕಾಡೆಲ್ಲಾ ಹತ್ತಿ ಉರಿಯುವಂತೆ ಮಾಡುತ್ತೆಂಬ ಸಿನಿಮಾದ ಸನ್ನಿವೇಶ ಪುಟ್ಟನಿಗೆ ಉತ್ತರಾಖಂಡವನ್ನು ನೆನಪಿಸಿ ರಾತ್ರಿಯೆಲ್ಲಾ ಕಾಡುತ್ತಿತ್ತು. ಆಗಾಗ ಕಾ ಎಂಬ ಹಾವು ತನ್ನನ್ನೇ ನುಂಗಬಂದಂತೆ, ತಾನೂ ಮೋಗ್ಲಿಯಾಗಿ ಮರ ಹತ್ತಿ ಒಡಿದಂತೆ ನೆನಪು. ತಾನೂ ಮರ ಹತ್ತಿ ಹಾರುವಂತೆ ಮಂಚದಿಂದ ಬೀಳಲಿದ್ದವನಿಗೆ ಜೊತೆಗಿದ್ದ ಮೊಬೈಲು ಕೆಳಗೆ ಬಿದ್ದ ಸದ್ದಿಂದ ಎಚ್ಚರವಾಗಿತ್ತು ! ಮತ್ತೆ ನಿದ್ದೆ ಹತ್ತೊ ಹೊತ್ತಿಗೆ ಸಿವಿಲ್ ವಾರಿನ ಕನಸು !

ಕ್ಯಾಪ್ಟನ್ ಅಮೇರಿಕ, ಐರನ್ ಮ್ಯಾನ್, ವಿಷನ್, ಸ್ಪೈಡರ್ ಮ್ಯಾನ್, ಸ್ಕಾರ್ಲೆಟ್ ವಿಚ್, ಆಂಟ್ ಮ್ಯಾನ್, ಹಕ್ಕಿ ಮನುಷ್ಯ(ಫಾಲ್ಕನ್), ಕ್ಲೈಂಟ್ ಬಾರ್ಟನ್, ಕಪ್ಪು ಹಾವು(ಬ್ಲಾಕ್ ಪಾಂಥರ್) ಮುಂತಾದ ಹತ್ತು ಹಲವು ಸೂಪರ್ ಹೀರೋಗಳ ಮುಖಾಮುಖಿಯ ಚಿತ್ರ ಮೊದಮೊದಲು ಕಣ್ಣಿಗೆ ಹಬ್ಬವಾಗಿತ್ತು. ನಂತರ ಹೆಚ್ಚಿನ ಶಕ್ತಿಯ ಜೊತೆಗೆ ಹೆಚ್ಚಿನ ಜವಾಬ್ದಾರಿಗಳೂ ಬರುತ್ತವೆ ಎನ್ನೋ ಹೀರೋಗಳೇ ಪರಸ್ಪರ ಬಡಿದಾಡಿಕೊಳ್ತಾರಲ್ಲ. ಸ್ವಲ್ಪವೂ ವಿವೇಚನೆಯಿಲ್ವಾ ಅವರಿಗೆ ಎಂಬ ಪ್ರಶ್ನೆ ಕಾಡತೊಡಗಿತ್ತು, ಶಕ್ತಿಯಿರೋದನ್ನ ಒಳ್ಳೇದಕ್ಕೆ ಬಳಸ್ರಪ್ಪ ಅಂದ್ರೆ ಯಾರು ಮೇಲೆಂಬ ತಮ್ಮೊಳಗಿನ ಕಿತ್ತಾಟಕ್ಕೆ ಬಳಸ್ತಾರಲ್ಲ. ಶಕ್ತಿ ಜಾಸ್ತಿಯಾದಂಗೆ ವಿವೇಚನೆ ಕಮ್ಮಿಯಾಗುತ್ತಾ ಹೋಗುತ್ತಾ ಅನ್ನೋ ಪ್ರಶ್ನೆ ರಾತ್ರಿಯಿಡೀ ನಿದ್ದೆಗೊಡದ ಪ್ರಭಾವ ಬೆಳಗ್ಗೆ ಗೊತ್ತಾಗುತ್ತಿತ್ತು, ಬೆಳಗ್ಗೆಯೆದ್ರೆ ಅಮ್ಮಂದಿರ ದಿನ !

ಇವತ್ತು ಅಮ್ಮಂದಿರ ದಿನ ಅಂತ ನೆನಪಾಗಿ ಅದಕ್ಕೆ ಏನಾದ್ರೂ ಬರೀಬೇಕು ಅಂತ ಯೋಚಿಸೋ ಹೊತ್ತಿಗೆ ಮಧ್ಯಾಹ್ನವಾಗಿತ್ತು ! ಬರಿಯೋಕೆ ಭಾವಗಳಿಲ್ಲವೆಂದಲ್ಲ, ಶುರು ಮಾಡೋದೆಲ್ಲಿಂದ ಎಂಬ ದ್ವಂದ್ವದಲ್ಲೇ ಇವತ್ತು ತಿಥಿ ನೋಡೋಕೆ ಹೋಗ್ಬೋದೆಂಬ ಅರಿವಾಗಿತ್ತು, ಗಬ ಗಬ ಊಟ ಮಾಡಿ ಥಿಯೇಟ್ರಿಗೆ ಹೋದ್ರೆ ಅರ್ಧ ಘಂಟೆ ಮುಂಚೆಯೇ ಎಲ್ಲಾ ಟಿಕೇಟ್ಗಳು ಬುಕ್ಕಾಗಿ ಆರು ಕಿ.ಮೀ ಹೋದ ಶ್ರಮದ ತಿಥಿಯಾಗಿತ್ತು ! ಕನ್ನಡ ಸಿನಿಮಾ ಹೌಸ್ ಫುಲ್ಲಾಗಿದೆ ಅಂತ ಖುಷಿಪಡೋದಾ ? ಎಲ್ಲೋ ಮೂಲೆಯ ಥಿಯೇಟ್ರಲ್ಲಿಗೆ ದಿನಕ್ಕೆ ಒಂದೇ ಶೋ ಓಡಿಸುವಂತ ಪರಿಸ್ಥಿತಿ ಕರ್ನಾಟಕದಲ್ಲಿನ ಕನ್ನಡ ಚಿತ್ರಗಳಿಗೆ ಬಂದಿದೆಯೆಂದು ಬೇಜಾರು ಪಟ್ಕೊಳ್ಳೋದಾ ಗೊತ್ತಾಗುತ್ತಿರಲಿಲ್ಲ !

ಹಿಂದಿನ ದಿನ ಎರಡು ಚಿತ್ರ ನೋಡಿದ್ರೂ ಅದು ಅವತ್ತಿಗಾಯ್ತು. ಇವತ್ತಿಗೇನಿಲ್ವಲ್ಲ ಅನ್ನೋ ಬೇಜಾರಿಗೆ ಸಿಕ್ಕಿದ್ದು ಹಿಂದಿ ಚಿತ್ರ ಬಾಘಿ. ಫೈಟಿಂಗ್ ಅಂದರೆ ಚೈನೀಸ್ ಚಿತ್ರಗಳಂತ ಅಂದ್ಕೊಳ್ಳುವವರ ಕಣ್ಣು ತೆರೆಸುವಷ್ಟರ ಮಟ್ಟಿಗೆ ಫೈಟಿಂಗ್ ಮತ್ತು ಸ್ಟಂಟುಗಳಿರೋ ಅದನ್ನ ನೋಡುನೋಡ್ತಾ ಸಂಜೆಯ ನಿದ್ರೆ, ಕರೆಂಟ್ ಹೋದ ಬೇಜಾರು ಕಳೆದುಹೋಗಿತ್ತು. ತಪಸ್ಸು ಘೋರವಾಗಲೆಂದು ರಾವಣ ತನ್ನ ಕಾಲ ಬೆರಳುಗಳ ಮೇಲೆ ನಿಂತು ತಪಸ್ಸು ಮಾಡುತ್ತಿದ್ದನೆಂದು ಓದಿದ್ದ ಪುಟ್ಟ,ಎರಡು ಕೈಗಳ ಮೇಲೆ ನಿಲ್ಲೋದು ನೋಡಿದ್ದ. ಆದ್ರೆ ಚಿತ್ರದಲ್ಲಿ ಎರಡು ಬೆರಳುಗಳ ಮೇಲೆ ನಿಲ್ಲೋ ದೃಶ್ಯಗಳ ನೋಡಿ ಮಂತ್ರಮುಗ್ದ. ಫೈಟಿಂಗಂದ್ರೆ ಬರೀ ಚೀನಾದ್ದು ಅಂದುಕೊಂಡವನಿಗೆ ಕೇರಳದ ಕಳರಿಪಯಟ್ಟಿನ ಝಲಕ್ಕು, ರಸ್ತೆ ದೃಶ್ಯಗಳು ಕಂಡ್ರೂ ಪದೇ ಪದೇ ಎದುರಾಗೋ ಮಳೆ ಸನ್ನಿವೇಶಗಳು, ವಿಲನ್ ಕತ್ತಿಯಿಂದ ಹೀರೋ ಅವಿತ ಗೋಡೆ ಇರಿಯುವ ಸನ್ನಿವೇಶ, ಹುಷಾರಿಲ್ಲದ ಬಾಲಕನ ಚಿಕಿತ್ಸೆಗೆ ಕೆಲಸ ಒಪ್ಪಿಕೊಳ್ಳೋ ಹೀರೋ ಈ ತರದ್ದನ್ನ ಎಲ್ಲೋ ನೋಡಿದ್ದೇನಲ್ಲ ಅನ್ನೋ ಪ್ರಶ್ನೆಯೆಬ್ಬಿಸಿತ್ತು. ನಿರ್ಮಾಣದ ದೃಷ್ಠಿಯಿಂದ ಮೂರೂ ಚಿತ್ರಗಳು ಶ್ರೀಮಂತವಾಗಿದ್ರೂ ಚಿತ್ರ ಮುಗಿದ ಮೇಲೆ ಅದ್ರ ಬಗ್ಗೆ ಯೋಚಿಸಿದ್ರೆ ಭಿನ್ನ ಧಾರೆಗಳು ಹರಿದು ಹೌದಲ್ವಾ ಅನಿಸುತ್ತಿದ್ದುದು ಯಾಕೇ ಗೊತ್ತಿಲ್ಲ. ದಿನಾ ಸಂಜೆ ಐದೂವರೆಗೆ ಜಡಿ ಮಳೆ ಸುರಿತಾ ಇದ್ರೆ, ದಿನದ ಧಗೆಯಲ್ಲ ಕಳೆದು ಆಹ್ಲಾದದ ಭಾವ. ಆ ಭಾವದಲ್ಲೇ ನಿದ್ದೆಗೆ ಜಾರಿದ್ರೆ ಆ ದಿನ ಬರೆಯಬೇಕೆಂದಿದ್ದ ಪದಗಳೆಲ್ಲಾ ಕನಸಲ್ಲಿ ಕರಗಿಹೋಗುತ್ತಿದ್ದವು. ಗುಂಡಣ್ಣನೂ ಮೂಡಿದ ಎಳೆಗಳ ಬೀಜಗಳನ್ನು ನೆನಪ ನೀರಲ್ಲಿ ನೆನೆಹಾಕಿದ್ದಾನೆ. ಇನ್ನಷ್ಟು ಬೆಳೆಯಲೆಂದು, ಜೀವದಾಯಿಯಾಗಲೆಂದು, ಸ್ಪೂರ್ತಿಯ ಸೆಲೆಯೊಡೆಯಲೆಂದು.. 


 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಕತೆಯಾಗದ ಕತೆ: ಪ್ರಶಸ್ತಿ

Leave a Reply

Your email address will not be published.