ಕಾವ್ಯಧಾರೆ

ಕಣ್ಮುಚ್ಚಿ ತವಕಿಸುವ ಜೀವೋನ್ಮಾದ: ರಘುನಂದನ ಹೆಗಡೆ

 

 

ಕ್ಲಬ್ಬಿನಲಿ ಕವಿದ
ಮಬ್ಬು ಬೆಳಕಿನ ಮುಸುಕಿನಲ್ಲಿ
ಉನ್ಮಾದದ ಝಲಕು
ಮೂಲೆಯಲಿ ಒತ್ತಿ ನಿಂತವರ
ಸುತ್ತ ಸೆಂಟಿನ ಘಾಟು
ಬಣ್ಣ ಬಣ್ಣದ ಶೀಷೆಗಳಲ್ಲಿ
ಕಣ್ಮುಚ್ಚಿ ತವಕಿಸಿದೆ ಜೀವೋನ್ಮಾದ
ಇಲ್ಲಿ ಪರಿಮಳವೂ ಉಸಿರುಗಟ್ಟಿಸುತ್ತದೆ
ಬೆಳಕೂ ಕಪ್ಪಿಟ್ಟಿದೆ…
 
ರಾತ್ರಿ ಪಾಳಿಯ ಬಡ ದೇಹಕ್ಕೂ
ದುಬಾರಿ ಸಿಗರೇಟೇ ಬೇಕು ಸುಡಲು
ನಗರ ವ್ಯಾಮೋಹದ ಕಿಡಿಯಲ್ಲಿ
ಹಳ್ಳಿಗಳೆಲ್ಲ ವೃದ್ಧರ ಗೂಡು-ಸುಡುಗಾಡು
ಇಲ್ಲ ಶಹರದಲಿ ತಾರೆಗಳ ಹೊಳಪು
ಇರುಳೆಲ್ಲ ಕೃತಕ ದೀಪಗಳ ಬಿಳುಪು
ನುಗ್ಗಿ ಬರುವ ಪತಂಗಗಳ
ಜೀವ ಭಾವ – ರೆಕ್ಕೆಗೆ ಬೆಂಕಿ,
ಕೆಂಪು ನೋಟೊಳಗೆ ಗಾಂಧಿಯ ನಗು
ಸುತ್ತಮುತ್ತೆಲ್ಲ ಗಾಂಧಾರಿಯ ಮಕ್ಕಳು
 
ಅರ್ಥ ಮಾಡಿಸ ಹೊರಟ ಬುದ್ಧಿಜೀವಿಗಳ
ಮಾತಲ್ಲಿ ಅಪಾರ್ಥಗಳ ತಳುಕು
ಧರ್ಮ ಕರ್ಮಗಳ ವಿಪರೀತಾರ್ಥದಲ್ಲಿ
ನಶೆಯೇರಿದ ದಾನವತೆಯ ಕೊಳಕು
ಕಣ್ ಕತ್ತಲಿಟ್ಟಿದೆ ನಗರ-ಬೆಳಕು
ಕೊಳೆತ ಮನಸುಗಳ ಘಾಟು ಕಳೆಯಲು
ಶೀಷೆ ತುಂಬಿದ ದ್ರಾವಕಗಳ ಉನ್ಮಾದ
ಮುಖ ನೋಡಲಾರದ ಕಣ್ಗಳಿಗೆ
ಮುಖವಾಡಗಳ ಬಣ್ಣ ವಿಷಾದ…!
 
– ರಘುನಂದನ ಹೆಗಡೆ
ಕನ್ನಡದ ಬರಹಗಳನ್ನು ಹಂಚಿ ಹರಡಿ

12 thoughts on “ಕಣ್ಮುಚ್ಚಿ ತವಕಿಸುವ ಜೀವೋನ್ಮಾದ: ರಘುನಂದನ ಹೆಗಡೆ

  1. ದ್ವಂದ್ವಗಳು ಮತ್ತು ಕೃತಕತೆಯ ತುಂಬಾ ಚೆನ್ನಾದ ಚಿತ್ರಣ ರಘು.. ಅಭಿನಂದನೆಗಳು

  2. ಗಟ್ಟಿ ಕವಿತೆ ಗೆಳೆಯಾ, ಇಷ್ಟವಾಯ್ತು………….

  3. ಧನ್ಯವಾದ ಹೇಳದಿರಲಾರೆ. ಪಂಜುವಿನಲ್ಲಿ ನನ್ನ ಅಕ್ಷರವ ಬೆಳಗಿಸಿದ್ದಕ್ಕೆ, ಪ್ರೋತ್ಸಾಹಿಸಿದ್ದಕ್ಕೆ…
    ಪ್ರತಿಕ್ರಿಯೆಗಳಿಂದ ಹಾರೈಸಿದ ನಿಮ್ಮೆಲ್ಲರ ಓದಿಗೂ, ಪ್ರೀತಿಗೂ ಶರಣು.
    ಪಂಜುವಿನ ಬೆಳಕಲ್ಲಿ ಮತ್ತಷ್ಟು ಅಕ್ಷರಗಳು ಬೆಳಗಲಿ… ಒಳಿತಾಗಲಿ.

Leave a Reply

Your email address will not be published. Required fields are marked *