ಕಾಲೇಜು ದಿನಗಳಲ್ಲಿ ಲವಲವಿಕೆಯಿಂದ ತುಂಟತನ ತರಲೆ ಮಾಡಿಕೊಂಡು ದಿನಕಳೆಯುತ್ತಿದ್ದ ನಾವು ಎಷ್ಟು ಸಂತೋಷದಿಂದ ಇರುತ್ತಿದ್ದೆವು. ಓದು , ಆಟದ ಜೊತೆಗೆ ಜಗಳ, ಗಲಾಟೆ, ಮುಷ್ಕರ, ಪ್ರೀತಿ-ಪ್ರೇಮ ಸಂತೆ ಎಲ್ಲವನ್ನೂ ಅಲ್ಲಿ ಇಲ್ಲಿ ನೋಡಿ, “ನಾವೆಲ್ಲ ಹಾಗಿಲ್ಲಪ್ಪ…” ನಮ್ಮದು “ಓನ್ಲೀ ಫ್ರೆಂಡ್ ಶಿಪ್ ” ಓದು, ಮನೆ… ಅಷ್ಟೇ ಎಂದು ಎಂಜಾಯ್ ಮಾಡುತ್ತಿದ್ದೆವು. ರಕ್ತ ಸಂಬಂಧಗಳ ಮೀರಿದ ಬಂಧವಿದು ಎಂದು ಹಾಡು ಹೇಳುತ್ತ ಖುಷಿ-ಖುಷಿಯಾಗಿದ್ದೆವು.
ಆಮೇಲೆ?
ಮುಂದೇನು? ಕಾಲೇಜು ಜೀವನದ ಕೊನೆಯ ವರುಷ ಎರಡು ಸೆಮಿಸ್ಟರ್, ಪ್ರೊಜೆಕ್ಟ್ ಮಾಡಿ ಅಧ್ಯಾಪಕರ ಮುಂದಿಡುವ ಸವಾಲು ಒತ್ತಡ, ಮಂಡೆಬಿಸಿ ಎಲ್ಲವೂ ಮಿಕ್ಸ್ ಆಗಿ ಊಟ, ನಿದಿರೆಗೆ ಸಜೆ ಇತ್ತು. ಆ ಒಂದು ವರುಷ ಹೇಗೆ ಕಳೆದೆವು ಒಮ್ಮೆ ನೆನೆದರೆ ಈಗಲೂ ಮೈಎಲ್ಲ ಬಿಸಿಯಾಗಿ ಜ್ವರ ಬರುತ್ತದೆ.
ಈಗ ಎಲ್ಲವೂ ಮುಗಿದು ಅಧ್ಯಾಯ. ಪುಟ ತಿರುಗಿಸಿ ಓದುವುದೊಂದೇ ಈಗಿರುವುದು. ಕಾಲೇಜು ಜೀವನ ಮುಗಿಸಿದ ಮೇಲಿನ ಕತೆ? ಅಯ್ಯೋ!! ಯಾರಿಗೆ ಕೇಳ್ತೀರಿ?
ಉದ್ಯೋಗ ಹುಡುಕುವ ತವಕ, ಕೆಲವರ ಮನೆಯಲ್ಲಿ ಹೆಣ್ಮಕ್ಕಳಿಗೆ ಮದುವೆ ಮಾಡಿಸುವ ಆತುರ. ಒಂದೊಳ್ಳೆಯ ಗಂಡನ್ನು ಹುಡುಕಿ ಮದುವೆ ಮಾಡಿಸಿದರೆ, ಮುಂದಿನ ಜವಾಬ್ದಾರಿ ಅವರಿಗೆ ಎಂಬ ಭಾವನೆ, ಅಭಿಪ್ರಾಯ ಕೆಲವು ಹೆತ್ತವರದ್ದು. ಹುಡುಗರಿಗೆ ಉದ್ಯೋಗ ಹುಡುಕಲೇ ಬೇಕಾದ ಅನಿವಾರ್ಯ. ಈಗಿನ ಹೆಣ್ಮಕ್ಕಳೂ ಸುಮ್ಮನೆ ಕೂರುವುದಿಲ್ಲ ಬಿಡಿ. ಅವರೂ ಉದ್ಯೋಗ ಹುಡುಕುತ್ತ ನಗರದ ಕಡೆಗೆ ಮುಖಮಾಡಿದರೆ ಮನೆ ಖಾಲಿ-ಖಾಲಿ. ಮದುವೆ ಮಾಡಿಸಿ ಕಳುಹಿಸಿಕೊಟ್ಟರೂ ಮನೆ ಖಾಲಿಯೇ ತಾನೆ. ಕಾಲ ಬದಲಾಗಿದೆ. ಹೆತ್ತವರನ್ನು ಬಿಟ್ಟರೆ ಈಗ ಮನೆಯಲ್ಲಿ ಯಾವ ಮಕ್ಕಳೂ ಉಳಿದಿಲ್ಲ. ವಿಷಯ ಅದಲ್ಲ.
ಮದುವೆಯಾದ ನಮ್ಮ ಗೆಳೆತಿಯರು ಇಲ್ಲ ಉದ್ಯೋಗ ಮಾಡುತ್ತಿರುವ ಗೆಳತಿಯರು ಈಗ ಎಲ್ಲಿದ್ದಾರೆ? ಹೇಗಿದ್ದಾರೆ? ಅವರ ಜೀವನ ಹೇಗೆ ನಡೆಯುತ್ತಿದೆ? ಮದುವೆಯಾಗಿದೆಯಾ? ಮಕ್ಕಳು? ಅತ್ತೆಮಾವ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರಾ? ಇವರು ಗಂಡನ ಮನೆಯಲ್ಲಿ ಹೊಂದಿಕೊಂಡು ಹೋಗುತ್ತಿದ್ದಾರಾ? ಮದುವೆಯಾದ ಮೇಲೆ ಜಾಬ್ ಗೆ ಹೋಗುತ್ತಿದ್ದಾರಾ? ಕಿರಿಕಿರಿ ಮಾಡೋ ಅತ್ತೆ ಸಿಕ್ಕಿದ್ದಾರಾ? ಗಂಡ ಜೋರಾಗಿದ್ದಾನಾ? ಗಂಡನ ಸಂಬಳ ಸಾಕಾಗುತ್ತಾ ಜೀವನ ನಿರ್ವಹಣೆಗೆ? ನಿನಗೂ ಕೆಲಸಕ್ಕೆ ಹೋಗುವ ಅನಿವಾರ್ಯ ಇದೆಯಾ? ಪ್ರಶ್ನೆಗಳು ನೂರಾರಿದೆ. ಆದರೆ ಕೇಳೋಣವೆಂದರೆ ಗೆಳತಿಯರೇ ಸಂಪರ್ಕದಲ್ಲಿಲ್ಲ.
ನಮ್ಮ ಕಾಲೇಜು ಗೆಳೆಯ-ಗೆಳತಿಯರ ಒಂದು ವಾಟ್ಸ್ ಆಪ್ ಗ್ರೂಪ್ ಇದೆ. ಆದರೆ ಅಲ್ಲಿ ಯಾರೂ ಸಕ್ರಿಯವಾಗಿಲ್ಲ. ಯಾವ ಪೋಸ್ಟ್ ಗೂ ಉತ್ತರಿಸುವವರಿಲ್ಲ. ಏಕೆ ಹೀಗೆ? ಅಷ್ಟು ಬಿಝಿಯಾಗಿ ಬಿಡುತ್ತಾರಾ? ಮದುವೆ ಆದ ಮೇಲೆ ತಾವೆ ಒಂದು ಚೌಕಟ್ಟು ಹಾಕಿಕೊಂಡು ಗಂಡನ ಮನೆಯಲ್ಲಿ ಬದುಕು ನಡೆಸುತ್ತಿರುತ್ತಾರಾ? ಮಕ್ಕಳು, ಅತ್ತೆ -ಮಾವನ ಸೇವೆಯಲ್ಲಿಯೇ ಮುಳುಗಿರುತ್ತಾರಾ? ಇಲ್ಲ ಹಗಲು ರಾತ್ರಿ ಎನ್ನದೇ ದುಡಿದು ಮೀಟಿಂಗ್, ಮೈಲ್ ಚೆಕ್, ಕಲೀಗ್ಸ್ ಅಂತೆಲ್ಲ ಕಳೆದು ಹೋಗಿದ್ದಾರಾ?
ನಿಜ. ಕೆಲವು ಗಂಡಸರಿಗೆ ಹೆಂಡತಿ ಕೆಲಸಕ್ಕೆ ಹೋಗುವುದು ಇಷ್ಟವಿರುವುದಿಲ್ಲ. ಅಷ್ಟೇ ಅಲ್ಲ ಹಳೆಯ ಸ್ನೇಹಿತರ ಜೊತೆ ಮಾತನಾಡುವುದು ಇಷ್ಟವಿರುವುದಿಲ್ಲ. ಈ ಸಾಮಾಜಿಕ ಜಾಲತಾಣಗಳಲ್ಲಿ ಇದ್ದರಂತೂ ಕೇಳುವುದೇ ಬೇಡ. ಜಗಳ ಮಾಡಿಯಾದರೂ ಅದರಿಂದ ದೂರವಿರಲು ಹೇಳುತ್ತಾರೆ. ಆಗೊಮ್ಮೆ ಈಗೊಮ್ಮೆ ಫೇಸ್ಬುಕ್ ಗೆ ಬಂದು ಇಣುಕಿ ಹೋಗುವುದು ಮಾಡಿದರೆ ಅದೇ ಹೆಚ್ಚು. ಹಳೆಯ ಮೊಬೈಲ್ ನಂಬರ್ ಬದಲಾಯಿಸಿದರಂತೂ ಕೇಳುವುದೇ ಬೇಡ. ಯಾರ ಸಂಪರ್ಕ ಕ್ಕೂ ಸಿಗದೇ ತಮ್ಮ ಪಾಡಿನ ಜೀವನ ನಡೆಸುತ್ತಿರುತ್ತಾರೆ.
ಜೀವನ ಎಂದರೆ ಹೀಗೇನಾ? ಮನದಲ್ಲಿ ಇಷ್ಟು ಗಂಭಿರತೆ ಮನೆಮಾಡುತ್ತದೆಯಾ? ಚಂಚಲತೆ ದೂರವಾಗುವ ಸಮಯ ಇದೆ ತಾನೆ. ಮಕ್ಕಳ ಸಾಕಿ ಬೆಳೆಸುವ ಜವಾಬ್ದಾರಿ ತಮ್ಮ ಹೆಗಲಮೇಲಿದೆ ಎಂದಾಕ್ಷಣ ಉಳಿದ ಬಂಧಗಳನ್ನೆಲ್ಲ ಬಿಡಿಸಿಕೊಂಡು ಹೊರಬರಬೇಕಾ? ಇಲ್ಲ ಯಾವ ಗೋಜಿಗೂ ಹೋಗದೇ ಅಲ್ಲಲ್ಲೇ ಬಿಟ್ಟು ಮೈಕೊಡವಿಕೊಂಡು ನಡೆಯುವುದು ಎಂದರೆ ಇದೇನಾ?
ವರುಷ ಇಪ್ಪತ್ತೈದು ಮೂವತ್ತಾದರೂ ಇನ್ನೂ ಮದುವೆ ಆಗಲಿಲ್ಲ ಎಂಬ ಯೋಚನೆ ಕೆಲವು ಸ್ನೇಹಿತರಿಗಿದೆ. ಹಾಗಾಗಿ ಮಾತುಕತೆ ನಿಲ್ಲಿಸಿರುತ್ತಾರೆ. ಅವರದೇ ಲೋಕದಲ್ಲಿ ಮುಳುಗಿರುತ್ತಾರೆ. ಡಿಪ್ರೆಶನ್ ಗೆ ಹೋಗಿರುತ್ತಾರೆ. ಎಲ್ಲರ ಜೀವನ ನಾವು ಎನಿಸಿದಂತೆ ಇರಬೇಕೆಂದಿಲ್ಲವಲ್ಲ. ಮದುವೆ ಮಕ್ಕಳು ಒಳ್ಳೆ ಮನಸ್ಸಿರುವ ಗಂಡ, ಗಂಡನ ಮನೆಯವರು ಹೀಗೆ ಎಲ್ಲವೂ ಸರಿಯಾಗಿರುವುದು ಸಿಕ್ಕಿದರೆ ಅದರ ಕತೆಯೇ ಬೇರೆ.
ಇದರ ನಡುವೆ ತಮ್ಮ ಆಸಕ್ತಿ ಅಭಿರುಚಿಗಳಿಗೆ ಬೆಲೆ ಕೊಡದೇ ಅದರ ಕಡೆ ಗಮನವೂ ಹರಿಸದೇ ಕೇವಲ ಗಂಡು- ಮಕ್ಕಳು, ಗಂಡನ ಮನೆಯವರಿಗಾಗಿ ಬದುಕುವ ಹೆಣ್ಮಕ್ಕಳು ತುಂಬಾ ಜನರಿದ್ದಾರೆ. ಕೆಲವರಂತೂ ಏನೋ ಒಂದು ಕೊರತೆಯಿಂದ ನೊಂದುಕೊಂಡಿರುತ್ತಾರೆ. ಅಲ್ಲದೇ ಅವರಿಗೆ ತತ್ಕ್ಷಣ ಸಾಂತ್ವಾನ ಹೇಳುವ ಮನಸ್ಸು ಸಿಕ್ಕರೇ ಅದೇ ಖುಷಿ. ಕಾಲೇಜು ದಿನದ ಗೆಳೆಯರನ್ನೇ ತಮ್ಮ ಜೀವನದುದ್ದಕ್ಕೂ ಕರೆದುಕೊಂಡು ಹೋಗಬೇಕೆಂದೇನು ಇಲ್ಲವಲ್ಲ. ತಮ್ಮ ಸುತ್ತ ಇರುವ ಒಂದೆರಡು ಸಮಾನ ಮನಸ್ಸಿನ ಗೆಳತಿಯರು ಸಿಕ್ಕರೂ ದಿನಕಳೆಯಬಹುದು ತಾನೆ.
ಏನೊ?! ಒಂದೂ ಅರಿಯದು. ಕೆಲವೊಮ್ಮೆ ಸುಮ್ಮನೆ ಕುಳಿತಾಗ ಇದೇ ನೆನಪಾಗುವುದು. ನಮ್ಮ ಕಾಲೇಜು ಜೀವನದ ಗೆಳತಿಯರೆಲ್ಲ ಈಗ ಎಲ್ಲಿದ್ದಾರೆ? ಎಷ್ಟೊದು ಕುಚೇಷ್ಟೆ ಮಾಡುತ್ತಿದ್ದ ಹುಡುಗರು ಈಗ ಏನು ಮಾಡುತ್ತಿದ್ದಾರೆ? ಅವರವರ ಜೀವನ ಜಂಜಾಟದಲ್ಲಿ ಕಳೆದುಹೋಗಿದ್ದಾರೆ. ಯಾರಾದರೂ ಹುಡುಕಿಕೊಡಿ.
-ಸಿಂಧು ಭಾರ್ಗವ್.