ಪಂಜು-ವಿಶೇಷ

ಕಣ್ಣುಗಳನ್ನು ನೋಡಿದೆ ಕಣ್ಣಾಲಿಗಳಲ್ಲಿ ನೀರಾಡುತ್ತಿತ್ತು: ಡಾ. ಗವಿ ಸ್ವಾಮಿ


 

ಮೊನ್ನೆ ಒಬ್ಬ ರೈತ ಎತ್ತುಗಳನ್ನು ಹೊಡೆದುಕೊಂಡು ಬಂದಿದ್ದ. ಎತ್ತುಗಳು ಕುಂಟುತ್ತಿದ್ದವು. ಕಾಲುಗಳಲ್ಲಿ ಗಾಯಗಳಾಗಿದ್ದವು.

ಏನಪ್ಪಾ ಆಯ್ತು.. ಇಷ್ಟೊಂದು ಗಾಯಗಳಾಗಿವೆಯಲ್ಲ ಅಂದೆ.

''ಯಾನೇಳ್ಳಿ ಸೊಮಿ ಎಲ್ಲಾ ನಮ್ ಹಣಬರ'' ಅಂದು ಹಣೆ ಕುಟ್ಟಿಕೊಂಡ.

ಅದೇನ್ ಸ್ಪಷ್ಟವಾಗಿ ಹೇಳಪ್ಪ ಅಂದೆ.

'' ಓದುಡ ಓದುಡ ಅಂತ್ ಬಡ್ಕಂಡಿ… ಬಡ್ಡಿಕೂಸು ಕಿಂವಿಗೇ ಹಾಕನಿಲ್ಲ… ಎಸ್ಸೆಲ್ಸಿ ಪೈಲ್ ಮಾಡ್ಕತು. ನಿನ್ ಹಣಾಲ್ ಬರದಾಗಾಬುಡು ನಡ ಆರಂಬನ್ಯಾರು ಕಲ್ತಗ ಅಂತ ಆರಂಬ ಕಲಸ್ದಿ''

'' ಬಡ್ಡಿಕೂಸು ಇವತ್ಯಾನ್ ಮಾಡ್ತು ಅಂದ್ರ.. ಕಟ್ಟಿರ ಏರ್ನೂ ಅಂಗೆ ಬುಟ್ಬುಟ್ಟು ಮರದ್ ನೆಳ್ಳ್ಗೋಗಿ ಮನಿಕಬುಟ್ಟದ. ಮರದ ಮ್ಯಾಲ ಗೂಡ್ ಕಟ್ಟಿದ್ದ ಹಕ್ಕೆವು ಇದ್ದಕ್ಕಿದ್ದಾಗಿಯ ಇಕಾರ್ಬಕಾರವಾಗಿ ಸದ್ದ್ ಮಾಡ್ಕಂಡು ಎದ್ಬುಟ್ಟವ. ಆ ಸದ್ಗಾ ಎತ್ನವು ಬೆದರಿ ನೇಗುಲ್ನು ಎಳ್ಕಂಡು ಹೊಲ್ ತುಂಬಾ ಓಡಾಡ್ಬುಟ್ಟವ. ಗುಳು ತಾಗ್ಬುಟ್ಟು ಹಿಂಗ ಗಾಯ ಮಾಡ್ಕಂಡವ ಕಾ ಸಾ… ತಕ್ಕಳಿ ನಮ್ ಹಣಬರ '' ಎಂದು ಮುಖದ ಬೆವರೊರೆಸಿಕೊಂಡ.

ಹೋಗಲಿ ಬಿಡಪ್ಪ ಬೇಜಾರ್ ಮಾಡ್ಕಬೇಡ ಅಂದೆ.

''ಇಷ್ಟಾದಕೆನಾ ಸರಿ. ಕೊಳ್ಬೇ ಹೊಂಟಗಿದ್ರ. ಯಾರಿದ್ದರು ಸಾ ನಮ್ಗ. ಇದೇ ಜೀವ್ಣ..''

ಮುಂದಕ್ಕೆಲ್ಲ ಅವನೇ ಮಾತನಾಡಿದ. ವ್ಯವಸ್ಥೆಯ ಮೇಲಿನ ಆಕ್ರೋಶವನ್ನು ನನ್ನ ಮೇಲೆ ತೀರಿಕೊಳ್ಳುವವನಂತೆ ಮಾತನಾಡುತ್ತಾ ಹೋದ. ಅವನ ನೋವು ಅರ್ಥವಾಗುತ್ತಿತ್ತು. ಕೇಳಿಸಿಕೊಳ್ಳುತ್ತಾ ಹೋದೆ .

''ನನ್ ಒಟ್ಟನಂವು ಆ ಥರಾ ಅದಕಸಾ. ಚೆನ್ನಾಗ್ ಬೆಳತ್ತಿದ್ದಂತ ರೈತ ನಾನು. ನೂರಾರ್ ಮೂಟ ಬೆಳತಿದ್ದಿ..ಹತ್ತಾರ್ ಜನಕ್ಕ ಅನ್ನ ಹಾಕ್ತಿದ್ದಿ. ಇವತ್ತೂವ ಕಣಜಗಳವ ಏಡು. ನಾ ನಿಜ ಏಳುದ್ರು ಹೂಂಕತಿದ್ದರಿ ಸುಳ್ಳೇಳುದ್ರು ಹೂಂಕತಿದ್ದರಿ. ಹಂಗನ್ಬುಟ್ಟು ಸುಳ್ಳೇಳಕಾದ್ದ ಸಾ. ಬೂಮ್ತಾಯಾಣ್ಗು ನಾ ಸುಳ್ಳೇಳ್ತಾ ಇಲ್ಲ ಸಾ… ''

ಕಣ್ಣುಗಳನ್ನು ನೋಡಿದೆ. ಕಣ್ಣಾಲಿಗಳಲ್ಲಿ ನೀರಾಡುತ್ತಿತ್ತು.

'' ಇವತ್ತು ನಿಮ್ ಮುಂದ ಕಣ್ಣೀರಾಕ ಪರಿಸ್ಥಿತಿ ಬಂದದ ಸಾ. ನಮ್ ಕಷ್ಟ ಒಂದಾ ಎರಡಾ.. ಆ ನಮ್ಮಪ್ಪನ್ಗೂ ನಮ್ ಮ್ಯಾಲ ಕ್ವಾಪ [ಮೇಲೆ ನೋಡುತ್ತಾ ] ಬೂಮ್ತಾಯಿ ಒಣಗ್ತಾ ಅವ್ಳ. ಕುಡಿಯಕ ನೀರಿಲ್ಲ. ದನಗಳ್ಗ ಮೇವಿಲ್ಲ. ಮಾರಂವು ಅಂದ್ರ ಅಡ್ಡಾದಿಡ್ಡಿಗ್ ಕೇಳ್ತರ… ''

ಒಂದೆರಡು ಕ್ಷಣ ಮೌನವಾದ. ಬಿಡಿ ಒಳ್ಳೇದಾಗುತ್ತೆ ದೇವರು ಕಣ್ಣು ಬಿಡ್ತಾನೆ ಅಂದೆ.

'' ಎಷ್ಟ ದಿನಾ ಅಂತ ನೋಡ್ಬೇಕು ಸಾ ಇ ದುರಂತನ. ತಿನ್ನಕ ಯಾನು ಇಲ್ಲ. ಪಾತ್ರ ಪನ್ನಂಗ ಗಿರು ಇಡಮಟ್ಗ ಬಂದ್ಬುಟ್ಟದ ನಮ್ ಪರಿಸ್ಥಿತಿ. ನಂಟ್ರು ಎತ್ರು ಬಂದ್ರ ಸಂತ್ರೈಸಕ್ಕಾಯ್ತಿಲ್ಲ. ಎಷ್ಟೊತ್ಗ ಹೊಂಟೊದರಾ ಸಿವಾ ಅನಸ್ತದ. ಏನ್ ಮಾಡ್ತಿರಿ. ಅಕ್ಕಿ ರೇಟು ನಲ್ವತ್ರುಪಾಯಾಗದ. ಎಲ್ಲಿಂದ್ ತರಂವು. ನಾವ್ಯಾವತ್ತ ಎಲ್ಲರ್ ಸಮ್ಕೂ ಕೂತ್ಗಳದು''.

ಅವನ ಸಿಟ್ಟು ನನ್ನೆಡೆಗೆ ತಿರುಗಿತು. '' ನಿಮ್ಗ್ಯಾನ ಸೊಮಿ. ಗಂಟ ವಡ ಸಂಬ್ಳ ತಕ. ಏಣಸ್ಗತ್ತಿದ್ದರಿ. ಟೀವೆಂತ ಸೋಪಸೆಟ್ಟಂತ ಮಜಾಕಂತ. ನಮಗ್ ಕೊಟ್ಟರ್ಯಾ ನೀವು''

ವ್ಯವಸ್ಥೆಯ ಮೇಲಿನ ಸಿಟ್ಟನ್ನು ನನ್ನೆಡೆಗೆ ತಿರುಗಿಸುತ್ತಾ, '' ರೈತನ್ನ ಕಿತ್ತು ತಿಂತಿದರಿ ಕಾ ಸೊಮಿ ನೀವು. ಕರೆಂಟ್ ಚಾರ್ಜ್ ಕಟ್ನಿಲ್ಲ ಅಂದ್ರ ಕಿತ್ತಾಕ್ತಿದರಿ, ರೇಸನ್ ಕಾರ್ಡ್ ಕೊಡಕ ತಿರುಗಿಸ್ತಿದರಿ. ನಿಮ್ಮ ಅಪ್ನ ಎಸ್ರೇನಾ, ನಿಮ್ ತಾತ್ನ ಎಸ್ರೇನಾ ಅನ್ನದು. ಯಾನಾ ಒಂದ್ ತಪ್ ಬರದ್ಬುಡದು. ಹೊಗುಡ ಇನ್ನೊಂದ್ ಸತು ಅರ್ಜಿ ಬರ್ಕಬಾ ಅನ್ನದು. ತಿರ್ಗ್ಸೀ ತಿರ್ಗ್ಸೀ ತಿರ್ಗ್ಸೀ ಆಮೇಲ್ ಕೊಡದು…''

''ನಿಮಗ ಎತ್ಗಳ್ ಕೊಡ್ತಿಂವಿ, ಟ್ಯಾಕುಟ್ರು ಕೊಡ್ತಿಂವಿ, ಲೋನ್ ಕೊಡ್ತಿಂವಿ ಅನ್ನದು,ನಿಮ್ನ ಬೆಟ್ಟ ಅತ್ತುಸ್ತಿಂವಿ ಅನ್ನದು, ಆಸಬಾಸ್ನ ಕೊಡದು… ಇದೇ ಆಗೋಯ್ತಲ್ಲಾ ಸಾ.. ''

ಅವನ ಆಕ್ರೋಶ ಹೆಚ್ಚುತ್ತಾ ಹೋಯ್ತು.

''ರೈತರ ಬೂಮಿ ಕಿತ್ಗತಿದ್ದರಿ, ನಮ್ನ ಒಕ್ಲೇಳ್ಸಿ ಪ್ಯಾಕ್ಟ್ರಿ ಕಟ್ಗತಿದ್ದರಿ, ಬಂಗ್ಲ ಕಟ್ಗತಿದರಿ,  ಹಂಚಿಸಾ ನೂರಾರ್ ಕೋಟಿನಾ ರೈತರಗಾ ಪಾಪ ತಿನ್ಲಿ. ನಿಮ್ಮಪ್ಪನಮನಗಂಟ್ಯಾನೋದ್ದು ಸಾ..ಅಯ್ಯ ಬುಡಿ ಸಾ ನಿಮ್ಮೊಂದಿಗೇಳಿದ್ರ ನಮ್ ಕಷ್ಟ ತೀರಿದಾ. ಬತ್ತಿನಿ ಸಾ… ನಾ ಈಗಂದಿ ಅಂತ ಬೇಜಾರ್ ಮಾಡ್ಕಬೇಡಿ''
ಎಂದವನೇ ಎತ್ತುಗಳನ್ನು ಹೊಡೆದುಕೊಂಡು ಬಿರಬಿರನೆ ಹೊರಟು ಹೋದ.

-ಡಾ. ಗವಿ ಸ್ವಾಮಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

8 thoughts on “ಕಣ್ಣುಗಳನ್ನು ನೋಡಿದೆ ಕಣ್ಣಾಲಿಗಳಲ್ಲಿ ನೀರಾಡುತ್ತಿತ್ತು: ಡಾ. ಗವಿ ಸ್ವಾಮಿ

  1. ವ್ಯವಸ್ಥೆಯ ಮೇಲಿನ ಆಕ್ರೋಶ ಅಸಹಾಯಕತೆಯಿಂದ ವ್ಯಕ್ತಿಗತವಾಗುವ ಪ್ರಕ್ರಿಯೆಯನ್ನ ಅದರ ಬೀಜರೂಪದಲ್ಲಿ ಚಿತ್ರಿಸಿದ್ದೀರಿ.  ಭಾಷೆಯೂ ಸೊಗಸಾಗಿದೆ.  ಯೋಚನೆಗೆ ಹಚ್ಚುವ ಬರಹ.

    1. ನಿಮ್ಮ ಅಭಿಪ್ರಾಯ ಅತ್ಯಂತ ಅರ್ಥಪೂರ್ಣ ಮತ್ತು ಪ್ರೋತ್ಸಾಹದಾಯಕವಾಗಿದೆ. thank u so much for ur valuable  compliments

    2. ನಿಮ್ಮ ಅಭಿಪ್ರಾಯ ಅತ್ಯಂತ ಅರ್ಥಪೂರ್ಣ ಮತ್ತು ಪ್ರೋತ್ಸಾಹದಾಯಕವಾಗಿದೆ.thank u so much for your valuable compliments

  2. ನಿಮ್ಮ ಅಭಿಪ್ರಾಯ ಅತ್ಯಂತ ಅರ್ಥಪೂರ್ಣ ಮತ್ತು ಪ್ರೋತ್ಸಾಹದಾಯಕವಾಗಿದೆ . thank u so much for your valuable compliments

  3. thank u so much for ur valuable opinion . ನಿಮ್ಮ ಅಭಿಪ್ರಾಯ ಅತ್ಯಂತ ಪ್ರೋತ್ಸಾಹದಾಯಕವಾಗಿದೆ.

  4. ವಾಸ್ತವ.  ಇಷ್ಟವಾಯ್ತು. ಇಂಥ ವಸ್ತುಸ್ಥಿತಿ ಆಧಾರಿತ ಕಥೆಗಳು ಇನ್ನಷ್ಟು ಬರಲಿ.

  5. ಓದಿದವರಿಗೆ ಹಾಗು ತಮ್ಮ ಅಮೂಲ್ಯ ಅಭಿಪ್ರಾಯ ಗಳನ್ನು ಬರೆದಿರುವವರಿಗೆ ಧನ್ಯವಾದಗಳು thank u so much

Leave a Reply

Your email address will not be published. Required fields are marked *