ಅವತ್ತಿನ ದಿನಾಂಕ ನೆನಪಿಲ್ಲ. ನೆನಪಿಟ್ಕೊಬೇಕು ಅಂತ ಯಾವತ್ತು ಅನಿಸಿಲ್ಲ. ಆದರೆ ಈಗದರ ಅವಶ್ಯಕತೆ ಇತ್ತು ಅಂತ ಅನಿಸ್ತಾ ಇದೆ. ಯಾಕಂದ್ರೆ ಹೀಗೊಂದು ಘಟನೆಯ ಬಗ್ಗೆ ಬರೀತೀನಿ ಅಂತ ನನ್ಯಾವತ್ತು ಅಂದ್ಕೊಂಡಿರ್ಲಿಲ್ಲ. ಆದರೆ ಬರೀಬೇಕು ಅಂತ ತುಂಬಾ ಅನ್ನಿಸಿ ಬಿಡ್ತು…..
ಯಾಕಿಷ್ಟು ಪೀಠಿಕೆ ಅಂತ ಯೋಚ್ನೆ ಮಾಡ್ತ ಇದ್ದೀರ ?? ತುಂಬಾ ಉದ್ದ ಎಳೀದೆ ಆರಂಭಿಸ್ತೀನಿ…..
ನಮ್ಮನೇಲೊಬ್ಬ ಪುಟ್ಟ ಪಾರ್ಥ. ಹೊಟ್ಟೆಯೊಳಗಿದ್ದಾಗಿನಿಂದ್ಲೇ ನಮಗೆ ಸಂಭ್ರಮ ನೀಡ್ತ ಇದ್ದ ಪೋರ. ಹತ್ತು-ಹದಿನೈದು ವರ್ಷಗಳ ನಂತರ ಮಗುವಿನ ಅಳು-ಕೇಕೆ, ಪುಟ್ಟ-ಪುಟ್ಟ ಕಾಲ್ಗಳ ಗೆಜ್ಜೆ ಸದ್ದು, ನಮ್ಮನೆಯನ್ನ ತುಂಬೋಕೆ ತಯಾರಾಗ್ತಾ ಇತ್ತು. ಹುಡುಗಾನೊ ಹುಡುಗೀನೋ ಗೊತ್ತಿಲ್ದೇನೆ ಎಲ್ರೂ ಪ್ರೀತಿಸೋಕೆ ಶುರು ಮಾಡಿದ್ವಿ. ಬಂದಿದ್ದು ಪಾರ್ಥ ಅಂತ ಹೆಸ್ರೂ ತಗೊಂಡಿದ್ದು ಆಗಿ ಈಗ ತನ್ನ ತುಂಟಾಟದಿಂದ ಮನೆಯವ್ರನ್ನೆಲ್ಲಾ ಓಡಾಡಿಸ್ತಾನೆ. ಕಳ್ಳ ನಾಟಕದಿಂದ ಕೃಷ್ಣನ ಹಾಗೆ ಮನ ತಣಿಯೋವಷ್ಟು ನಗಿಸ್ತಾನೆ. ಅತ್ತೆ ಅಂತ ತನ್ನ ಪುಟ್ಟ ಬಾಯಿಯಿಂದ ಕರೆದು ತನ್ನ ಮುಗ್ಧ ಪ್ರೀತಿಯಿಂದ ನನ್ನ ಕಣ್ಣಂಚಲ್ಲಿ ನೀರು ತರಿಸ್ತಾನೆ.
ಇದನ್ನೆಲ್ಲಾ ಯಾಕೆ ಹೇಳ್ತ ಇದ್ದೀನಿ ?? ಅವನನ್ನ ನೋಡಿದಾಗ ನನ್ನ ಬಾಲ್ಯದ ನೆನಪಾಗತ್ತೆ ನನಗೆ. ಹೀಗೇ ಇದ್ನ ನಾನು ?? ಅಮ್ಮ ಹೇಳಿದ ಹಾಗೆ ಇದಕ್ಕಿಂತ್ಲೂ ಹೆಚ್ಚಿನ ತುಂಟಾಟಗಳನ್ನ ಅಲ್ಲ ಕೆಟ್ಟ ಚೇಷ್ಟೆಗಳನ್ನ ಮಾಡ್ತಾ ಇದ್ನಾ ?? ದೊಡ್ಡಪ್ಪನ ಬೆನ್ನ ಹಿಂದೇನೇ ತೋಟ ಸುತ್ತಾಡ್ತಿದ್ನಾ ?? ಯಾಕಿದೆಲ್ಲ ನಮಗೆ ನೆನಪಿರಲ್ಲ, ಇದ್ನ ನೋಡಿದಾಗ ಮರೆವು ಶಾಪ ಅನಿಸಿದ್ದುಂಟು……
ಐದನೇ ತರಗತಿ ವರೆಗೆ ಅಜ್ಜ-ಅಜ್ಜಿಯ ಅಕ್ಕರೆಯ ಕೂಸಾಗಿದ್ದ ನಾನು ಅಪ್ಪ-ಅಮ್ಮನ ಪ್ರೀತಿಯನ್ನು ಕಳೆದುಕೊಂಡಿದ್ನೋ ಗೊತ್ತಿಲ್ಲ. ತಂಗಿಯನ್ನು ಮುದ್ದು ಮಾಡುವ ಜಾಗದಲ್ಲಿ ಅಸೂಯೆ ನೆಲೆ ಮಾಡಿತ್ತ ನನ್ನಲ್ಲಿ ತಿಳಿದಿಲ್ಲ. ಅಜ್ಜ-ಅಜ್ಜಿಯ ಪ್ರೀತಿ ಏನೆಂದು ತಿಳಿಯದ ವಯಸ್ಸು ಆಗ, ಹಠಮಾರಿ. ಆಗ ಬಂದ ಸಂತೋಷದ ಸುದ್ದಿ ಏನಪ್ಪ ಅಂದ್ರೆ ಮುಂದಿನ ಓದನ್ನು ನಾನು ಮನೆಗೆ ಬಂದು ಮುಂದುವರೆಸಲಿದ್ದೆ.ನಂತರದ ಐದು ವರ್ಷಗಳು ನನಗೆ ಮಲೆನಾಡಿನ ಭೋರ್ಗರೆವ ಮಳೆ, ಕಿವಿಗಡಚ್ಚಿಕುವ ಗುಡುಗು, ಕಣ್ಣು ಕೋರೈಸುವ ಮಿಂಚಿನ ಸವಿಯುಣ್ಣಿಸಿದವು. ಮೈ ಕೊರೆಯುವ ಛಳಿಯಲ್ಲಿ, ಮಂಜಿನಡಿಯಲ್ಲಿ ಶಾಲೆಗೆ ನಡೆದೆ.ಬಿಸಿಲಿನ ಧಗೆಯಲ್ಲಿ ಶಾಲೆಯ ಗ್ರೌಂಡಿನ ಧೂಳೆಬ್ಬಿಸಿದೆ. ಆಗ ನನಗೆ ಸಂದ ಬಹುಮಾನಗಳೆಷ್ಟೋ !!
ಆರು ಕಿ. ಮೀ ದೂರದ ಕಛ್ಛಾ ರಸ್ತೆಯ ನಮ್ಮ ಮನೆಗೆ ನನ್ನನ್ನು ಕರೆ ತರಲು ಅಪ್ಪ ಪಡುತ್ತಿದ್ದ ಪಾಡೇನೋ ?? ಅಮ್ಮ ಸಂಗೀತಕ್ಕೆ ಸೇರ್ತೇನೆ, ಅಮ್ಮ ನಾಟಕ, ಅಮ್ಮ ಡ್ಯಾನ್ಸ್, ಅಮ್ಮ ಸ್ಪೋರ್ಟ್ಸ್, ಯಕ್ಷಗಾನ….. ಯಾವುದೊಂದಕ್ಕೂ ಬೇಡ ಅನ್ನದೆ ಹೋಗು ಅನ್ನುವ ಉತ್ತರ ಮಾತ್ರ. ಪಿ.ಯುನಲ್ಲಿ ಸೈನ್ಸ್ ಬೇಕು, ನಾನು ಹೇಳಿದಲ್ಲಿಯೇ ಟ್ಯುಶನ್ ಗೆ ಹೋಗ್ಬೇಕು. ಅದಕ್ಕೂ ಆಯ್ತು ಅನ್ನೋ ಉತ್ತರ. ಚಳಿಗಾಲದ ಮುಂಜಾವಿನಲ್ಲಿ ಐದು ಗಂಟೆಗೆದ್ದು ಬೇಯಿಸಿದ ಆ ಅಡಿಕೆಯ ಬೆವರಿನ ಬೆಲೆಯ ಅರಿವಿರಲಿಲ್ಲ ಆಗ ನನಗೆ.
ಎಲ್ಲದನ್ನೂ ಡಿಮ್ಯಾಂಡ್ ಮಾಡ್ತಿದ್ದ ನಾನು ಮನಸ್ಸನ್ನು ಹುಚ್ಚು ಹರಿಯಲು ಬಿಟ್ಟು ತಲೆ ತಗ್ಗಿಸಿ ಅಪ್ಪ-ಅಮ್ಮನ ಮುಂದೆ ನಿಂತಾಗಲೂ," ಆದ ತಪ್ಪಿಗೆ ಇನ್ನೇನು ಮಾಡಕ್ಕಗತ್ತೆ, ಮುಂದೆ ಜಾಗ್ರತೆ", ಎಂಬ ಸಾಂತ್ವಾನದ ನುಡಿ. ನಾನೇ ಆರಿಸಿಕೊಂಡ ಇಂಜಿನೀರಿಂಗ್, ಕೊನೆಗೆ ನನ್ನದಲ್ಲ ಎಂಬ ಭಾವ ಮೂಡಿಸಿ ಬಿಟ್ಟಿತ್ತು. ಅಪ್ಪ ಹೇಳಿದಂತೆ ಬಿ.ಕಾಮ್ ಮಾಡ್ಬೋದಿತ್ತಲ್ಲ, ದೊಡ್ಡಮ್ಮ ಹೇಳಿದಂತೆ ಜೆರ್ನಲಿಸಮ್ ಮಾಡ್ಬೋದಿತ್ತಲ್ಲಾ ಅಂತ ಅರ್ಥವಾಗದ ಸಬ್ಜೆಕ್ಟ್ ಮುಂದೆ ಕೂತು ಅತ್ತಾಗ ಕಣ್ಣ ಹನಿಗಳು ನನ್ನ ಆಡ್ಕೋಳ್ತ ಇದ್ವು. ಯಕ್ಷಗಾನ ಅಂತ ಕೆಲಸದ ಗೋಜಿಗೆ ಹೋಗದೆ ಮನೆಯಲ್ಲೇ ದಿಂಗಿಣ ಹಾರ್ತ ಇದ್ದರೂ ಏನೋ ಅವಳಿಷ್ಟ ಅಂತ ಬೆನ್ನು ತಟ್ಟೀದರೇ ಹೊರತು ಅವರ ಅಭಿಪ್ರಾಯಗಳನ್ನೆಂದೂ ನನ್ನ ಮೇಲೆ ಹೊರಿಸಿಲ್ಲ.
ಒಂದೊಂದು ಸಲ ಮನಸ್ಸು ಲಂಗು ಲಗಾಮಿಲ್ಲದ ಕುದುರೆ ಥರ ಓಡೋಕೆ ಶುರು ಮಾಡಿದಾಗ ಅನಿಸೋದುಂಟು. ಎಲ್ಲವನ್ನೂ ನನಗೇ ಬಿಟ್ಟು ತಪ್ಪು ಮಾಡಿದ್ರಾ? ತುಂಬಾ ಸ್ವಾತಂತ್ರ್ಯ ಕೊಟ್ಟಿದ್ದನ್ನ ಸ್ವೇಚ್ಛೆ ಮಾಡ್ಕೊಂಬಿಟ್ನಾ ನಾನು. ಏನೇ ಇರಲಿ, ಅವತ್ತು ಸೆಪ್ಟೆಂಬರ್ ೧೪. ಹೊಸ ಬದುಕನ್ನು ಕಟ್ಟಿಕೊಳ್ಳೋಕೆ ಹೊರಟಿದ್ದೆ. ಅದೂ ನನ್ನದೇ ಆಯ್ಕೆ. ಚಿಕ್ಕಂದಿನಿಂದ್ಲೂ ಕೆಲಸ ಹೇಗೆ ಮಾಡಿಸ್ಬೇಕು ಅನ್ನೊದ್ನ ಕಲ್ಸಿದ್ದ ಅವರು ಹುಟ್ಟು ಲೀಡರ್. ದೊಡ್ಡದಾದ ಕಮ್ಯಾಂಡಿಂಗ್ ವಾಯ್ಸ್, ಮಲ್ಟಿಟಾಸ್ಕಿಂಗ್ ಕಪಾಸಿಟಿ,ಅಂದ್ಕೊಂಡಿದ್ನ ಮಾಡಿ ಮುಗ್ಸೋ ವಿಲ್ ಪವರ್. ಅಲ್ಲಿ ಯಶಸ್ಸು ಸಿಗೋಕೆ ಇಷ್ಟು ಸಾಕಿತ್ತು. ನೋಡ್ತಾ ನೋಡ್ತಾ ಇದ್ದ ಹಾಗೆ ತಿಂಗಳ ಕೊನೆ ಆಗೇ ಹೋಯ್ತು. ಕಷ್ಟ ಪಟ್ಟಿದ್ದ ನಮ್ಮ ಕೈಗಿತ್ತಿದ್ದರು ಅಷ್ಟು ದಿನಗಳ ಪ್ರತಿಫಲ. ಕೇಳಿದ ಫ್ರೆಂಡ್ಸ್ಗೆಲ್ಲಾ ಇನ್ನೂ ಕೊಟ್ಟಿಲ್ಲಪ್ಪಾ ಸಂಬಳ ಅಂತ ಸುಳ್ಳು ಹೇಳಿದ್ದೆ. ಆ ದುಡ್ಡನ್ನೇನು ಮಾಡ್ಬೇಕಿತ್ತೋ ಹಾಗೇ ಮಾಡ್ಬೇಕಿತ್ತು ನನಗೆ, ಟ್ರೀಟ್ ಹೆಸ್ರಲ್ಲಿ ಹೋಟೇಲ್ ಗೆ ಹಾಕೋ ಇರಾದೆ ಇರಲಿಲ್ಲ.
ಬಂದಿದ್ದೆ ಮನೆಗೆ ಆ ಸಣ್ಣ ಗಂಟು ಹಿದಿದು. ನನ್ನ ಕಷ್ಟದ, ನಿದ್ದೆಗೆಟ್ಟ, ಊಟ-ತಿಂಡಿ ಬಿಟ್ಟು ದುಡಿದ ಆ ಕಷ್ಟದ ಹಣ್ಣನ್ನು ಹಿಡಿದು ರಾಜಗಾಂಭೀರ್ಯದಲ್ಲಿಟ್ಟಿದ್ದೆ ಹೆಜ್ಜೆಗಳನ್ನು. ಅದು ವರೆಗೆ ತರ್ಲೆ ಆಗಿದ್ದ ನನಗೆ ನಾನೇ ಪ್ರೌಢಳೆನಿಸಿದ್ದೆ. ಮಾತು ನೇಪಥ್ಯಕ್ಕೆ ಸರಿದಿತ್ತು. ಮೌನ ನೆಲೆವೂರಿತ್ತು ಆ ಜಾಗದಲ್ಲಿ. ಕಣ್ಣ ಮುಂದೆ ಜೀವನದ ಕಷ್ಟವನ್ನರಿತ ಚಿತ್ರ ಕೇಕೆ ಹಾಕಿ ನಗ್ತಾ ಇತ್ತು. ತಂದೆ-ತಾಯಿಯರ ಮುಂದೆ ಮತ್ತೆ ಚಿಕ್ಕವಳಾಗಿದ್ದೆ. ಅದೇ ಅಂಬೆಗಾಲಿಕ್ಕುವ ಮಗುವಾಗಿದ್ದೆ. ಅಜ್ಜ-ಅಜ್ಜಿಯರೊಂದಿಗಿದ್ದಾಗ ಐದು ರೂಪಾಯಿಯ ಕ್ಯಾಂಡಿಗಾಗಿ ಶನಿವಾರ ಬರಲು ಕಾಯುತ್ತಿದ್ದ ಆ ತಾಳ್ಮೆ ಅಭ್ಯಾಸವಾಗಿತ್ತು. ೫೦ ಪೈಸೆಯ ಪುಟ್ಟ ಮಿಠಾಯಿಗೆ ಯಾಕಷ್ಟು ಕಾಡಬೇಕಿತ್ತು ಅಜ್ಜನನ್ನು ಅಂತ ಅರ್ಥವಾಗತೊಡಗಿತ್ತು.
ಏನೋ ಕೆಲಸದ ಗಲಾಟೆಯಲ್ಲಿದ್ದ ಅಮ್ಮನನ್ನು, ಬೈತಾ ಓಡಾಡ್ತಿದ್ದ ಅಪ್ಪನನ್ನು ಕೈ ಹಿಡಿದು ಬನ್ನಿ ಅಂದಿದ್ದೆ. ಏನು-ಏನು ಅಂತ ತನ್ನ ಅದೇ ಅಪ್ಪನ ಶೈಲಿಯಲ್ಲಿ ಕೇಳಿದ ಅಪ್ಪನೊಂದಿಗೆ ಅಮ್ಮ ನೀನೂ ಬಾ ಅಂದಿದ್ದೆ. ಮೇಲಿನ ಜಗಲಿಯಲ್ಲಿ ಕೂತಿದ್ದ ಅಪ್ಪನ ಕೈಯಲ್ಲಿಟ್ಟಿದ್ದ ಆ ನೋಟುಗಳು, ಅವರ ಪಾದದಲ್ಲಿಟ್ಟಿದ್ದ ನನ್ನ ಹಣೆ ವಿವರಿಸಲಾಗದ ಭಾವ ತುಂಬಿತ್ತು ಆ ಸನ್ನಿವೇಷಕ್ಕೆ. ಅವರ ಕಣ್ಣಲ್ಲಿ ನೀರು. ನನ್ನಲ್ಲೂ ಮಾತಿಲ್ಲ. ಏನು ಅಂತ ಮಾತಾಡಲಿ. ಜನ್ಮ ಕೊಟ್ಟದ್ದಕ್ಕೆ ಕೃತಜ್ನತೆಯೇ? ೨೨ ವರ್ಷ ಸಾಕಿದ್ದಕ್ಕೆ ಬೆಲೆಯೇ ? ಮಾಡಿದ ತಪ್ಪನ್ನೆಲ್ಲ ಕ್ಷಮಿಸಿದ್ದಕ್ಕೆ ಅಲ್ಲ ಕೊಟ್ಟ ನೋವಿಗೆ ಉಡುಗೊರೆಯೆನ್ನಲೇ?
ಹಾಗೇ ಕೈಯಲ್ಲಿ ಹಿಡಿದು ಒಳ ನಡೆದಿದ್ದರು ಅಪ್ಪ. ಮೂವರ ಕಣ್ಣಲ್ಲೂ ಜಾರಿದ ಆ ಕಣ್ಣೀರಿಗೆ ಅರ್ಥ ಹುಡುಕುವ ನಿರರ್ಥಕ ಪ್ರಯತ್ನಕ್ಕೆ ಕೈ ಹಾಕದೆ ಸದಾ ಆ ಕ್ಷಣಗಳ ಭಾವವನ್ನು ನೆನೆದು ಕಣ್ ತುಂಬಿಸಿಕೊಳ್ಳುವ ನಿಮ್ಮ ಮಗಳು, ಅದೇ ಪುಟ್ಟ ಚೈತ್ರಾ…..
*****
ನನಗೆ ತುಂಬಾ ಇಷ್ಟವಾಯಿತು ನಿಮ್ಮ ಬರಹ… ಅದೆಲ್ಲಾ ಯಾವ ಶಬ್ದಗಳಿಗೂ ನಿಲುಕುವಂಥದ್ದಲ್ಲ ಬಿಡ್ರಿ ಅಪ್ಪ ಅಮ್ಮನ ವಾತ್ಸಲ್ಯ…
Dhanyavadagalu…