ಇಂಗ್ಲಿಶ್ ಮೂಲ: ಗ್ರಹಾಂ ಗ್ರೀನ್
ಅನುವಾದ: ಜೆ.ವಿ.ಕಾರ್ಲೊ
ಬೆಳಕು ಮೂಡುತ್ತಿದ್ದಂತೆ ಪೀಟರನಿಗೆ ತಕ್ಷಣ ಎಚ್ಚರವಾಯಿತು. ಕಿಟಕಿಯ ಗಾಜಿನ ಮೇಲೆ ಮಳೆ ರಪರಪನೆ ಬಡಿಯುತ್ತಿತ್ತು. ಅಂದು ಜನವರಿ ಐದು
ಅವನ ಕಣ್ಣುಗಳು ಪಕ್ಕದ ಮಂಚದ ಮೇಲೆ ಮುಸುಕು ಎಳೆದುಕೊಂಡು ಇನ್ನೂ ಮಲಗಿದ್ದ ಅವನ ತಮ್ಮ ಫ್ರಾನ್ಸಿಸನ ಮೇಲೆ ನೆಲೆಗೊಂಡವು. ಅವನಿಗೆ ತನ್ನ ಪ್ರತಿರೂಪವನ್ನೇ ನೋಡಿದಂತಾಯಿತು! ಅದೇ ಕೂದಲು, ಕಣ್ಣುಗಳು, ತುಟಿಗಳು, ಕೆನ್ನೆ..
ಅವನ ತುಟಿಗಳ ಮೇಲೆ ಮಂದಹಾಸ ಮೂಡಿತು.
ಜನವರಿ ಐದು. ಮಿಸೆಸ್ ಫಾಲ್ಕನಳ ಮಕ್ಕಳ ಪಾರ್ಟಿ ನಡೆದು ಆಗಾಗಲೇ ಒಂದು ವರ್ಷವಾಯಿತೆಂದು ನಂಬಲು ಅವನಿಗೆ ಆಗಲೇ ಇಲ್ಲ.
ಅಷ್ಟರಲ್ಲಿ ಫ್ರಾನ್ಸಿಸ್ ತನ್ನ ತೋಳನ್ನು ಬಾಯಿ ಮುಚ್ಚಿ ಕೊಳ್ಳುವಂತೆ ಮುಖದ ಮೇಲೆ ಒಗೆದು ಮಗ್ಗಲು ಬದಲಾಯಿಸಿದ. ಒಂದು ನಮೂನೆಯ ಆತಂಕದಿಂದ ಪೀಟರನ ಎದೆ ಬಡಿದುಕೊಳ್ಳಲಾರಂಭಿಸಿತು. ಅವನು ಹಾಸಿಗೆಯಲ್ಲಿ ಎದ್ದು ಕುಳಿತು, ಫ್ರಾನ್ಸಿಸನಿಗೆ,
“ಎದ್ದೇಳೋ!” ಅಂದ.
ಫ್ರಾನ್ಸಿಸ್ ಮುಖದ ಮೇಲಿದ್ದ ಕೈಯಿಂದ ಮುಷ್ಠಿ ಬಿಗಿದು ಗಾಳಿಗೊಮ್ಮೆ ಗುದ್ದಿದನಾದರೂ ಕಣ್ಣು ತೆರೆದಂತೆ ಕಾಣಿಸಲಿಲ್ಲ. ಪೀಟರನಿಗೆ ಒಂದು ದೊಡ್ಡ ಪಕ್ಷಿಯೊಂದು ಹಾರಿ ಬಂದು ಕೋಣೆಯೊಳಗೆ ಒಮ್ಮೆಲೆ ಕತ್ತಲು ಆವರಿಸಿಕೊಳ್ಳುತ್ತಿರುವಂತೆ ಭಾಸವಾಯಿತು.
“ಫ್ರಾನ್ಸಿಸ್, ಎದ್ದೇಳೋ!” ಅವನು ಮತ್ತೊಮ್ಮೆ ಕೂಗಿ ಹೇಳಿದ. ಮಳೆ ಕಿಟಕಿಯ ಮೇಲೆ ಬಡಿಯುತ್ತಲೇ ಇತ್ತು.
ಫ್ರಾನ್ಸಿಸ್ ಕಣ್ಣುಗಳನ್ನು ಉಜ್ಜಿಕೊಳ್ಳುತ್ತಾ, “ನನ್ನ ಕರೆದೆಯೇನೋ?” ಅಂದ ಗೊಗ್ಗರು ದನಿಯಲ್ಲಿ.
“ನೀನೊಂದು ಕೆಟ್ಟ ಕನಸು ಕಾಣುತ್ತಿದ್ದೆಯಲ್ವಾ?” ಅವರಿಬ್ಬರ ಮನಸ್ಸೂ ಹೇಗೆ ಒಂದನೊಂದು ಕನ್ನಡಿಯಂತೆ ಫ್ರತಿಫಲಿಸುತ್ತವೆಂದು ಅವನಿಗೆ ಅರ್ಥವಾಗಿತ್ತು, ಫ್ರಾನ್ಸಿಸ್ ಭೂಮಿಗೆ ಇಳಿಯಲು ಸಂಘರ್ಶ ನಡೆಸುತಿದ್ದ ಕೆಲವೇ ನಿಮಿಷಗಳ ಮೊದಲು ಅವನು ಬೆಳಕನ್ನು ಕಂಡಿದ್ದ. ಆ ಕೆಲ ನಿಮಿಷಗಳ ಅಂತರವಷ್ಟೇ ಅವನನ್ನು ಸ್ವಾವಲಂಬಿ ‘ಅಣ್ಣ’ ನನ್ನಾಗಿಸಿತ್ತು. ಅವನ ತಮ್ಮ ಫ್ರಾನ್ಸಿಸನಿಗೆ ಬಹಳಷ್ಟು ವಿಚಾರಗಳಲ್ಲಿ ಅಂಜಿಕೆ ಇತ್ತು. ಪೀಟರ್, ಅಣ್ಣನಾಗಿ ಅವನನ್ನು ಕಾಯುವುದು ತನ್ನ ಕರ್ತವ್ಯವೆಂದು ಭಾವಿಸಿದ್ದ.
“ನಾನು ಸಾಯುತ್ತಿರುವಂತೆ ಕನಸು ಬಿದ್ದಿತ್ತು ಕಣೋ” ಎಂದ ಫ್ರಾನ್ಸಿಸ್.
“ಹೇಗೆ?”
“ಈಗ ನೆನಪಾಗುತ್ತಿಲ್ಲ.”
“ನಿನಗೊಂದು ದೊಡ್ಡ ಪಕ್ಷಿಯ ಕನಸು ಬಿದ್ದಿತ್ತು ಅಲ್ವ?
“ಹೌದಾ?! ಜ್ಞಾಪಕವಿಲ್ಲ.”
ಅವರಿಬ್ಬರೂ ಕೆಲಹೊತ್ತು ಒಬ್ಬರನ್ನೊಬ್ಬರನ್ನು ಗಮನಿಸುತ್ತಾ ಹಾಗೇ ಬಿದ್ದುಕೊಂಡರು. ಅವೇ ಹಸಿರು ಕಂಗಳು, ತುದಿಯಲ್ಲಿ ತುಸುವೇ ಮೇಲ್ಮುಖವಾಗಿ ಬಾಗಿದ ಮೂಗು, ನುಣುಪಾದ ಕೆನ್ನೆಗಳು, ಸ್ಪಷ್ಟವಾಗಿ ಎದ್ದು ಕಾಣುತ್ತಿರುವ ತುಟಿಗಳು. ಪೀಟರ್ ಮತ್ತೊಮ್ಮೆ ಜನವರಿ ಐದರ ಬಗ್ಗೆ ಯೋಚಿಸಲಾರಂಭಿಸಿದ., ಸ್ಪೂನು ಮತ್ತು ಮೊಟ್ಟೆಯ ಸ್ಪರ್ಧೆ (ಸ್ಪೂನಿನೊಳಗೆ ಮೊಟ್ಟೆಯನ್ನು ಇಟ್ಟು ಅದು ಕೆಳಗೆ ಬೀಳಿಸದಂತೆ ಓಡುವ ಸ್ಪರ್ಧೆ), ನೀರಿನಿಂದ ಸೇಬನ್ನು ಕಚ್ಚಿ ಹೊರತೆಗೆಯುವ (ಟಬ್ಬಿನಲ್ಲಿ ತೇಲುತ್ತಿರುವ ಸೇಬು ಹಣ್ಣನ್ನು ಕೈಗಳನ್ನು ಬಳಸದೆಯೇ ಬಾಯಿಂದ ಕಚ್ಚಿ ಹೊರತೆಗೆಯುವುದು) ಆಟ ಅವನ ಮನಸ್ಸಿನ ಪರದೆಯ ಮೇಲೆ ಮೂಡಿ ಬಂದು ಕೇಕುಗಳಿಂದ ಹಿಡಿದು ಸ್ಪರ್ಧೆಗೆ ಇಟ್ಟಿರಬಹುದಾದ ಇತರೆ ಬಹುಮಾನಗಳ ಚಿತ್ರಗಳೂ ಮೂಡತೊಡಗಿದವು.
“ನಾನು ಪಾರ್ಟಿಗೆ ಬರೋದಿಲ್ಲ ಕಣೋ.” ಫ್ರಾನ್ಸಿಸ್ ಖಡಾಖಂಡಿತವಾಗಿ ಹೇಳಿದ. “ಅಲ್ಲಿಗೆ ಈ ವರ್ಷಾನೂ ಆ ಜಾಯ್ಸ್ ಮತ್ತು ಮೇಬಲ್ ವಾರೆನ್ ಬಂದಿರುತ್ತಾರೆ ಅಲ್ವ?” ಅವರಿಬ್ಬರು ಭಾಗವಹಿಸುವ ಪಾರ್ಟಿಗಳಲ್ಲಿ ತಾನು ಭಾಗಿಯಾಗುವುದು ಅವನಿಗೆ ಇಷ್ಟವಿರಲಿಲ್ಲ. ಆ ಹುಡುಗಿಯರಿಬ್ಬರೂ ವಯಸ್ಸಿನಲ್ಲಿ ಅವನಿಗೆ ಹಿರಿಯರಾಗಿದ್ದರು. ಜಾಯ್ಸ್ ಹನ್ನೊಂದು ಮತ್ತು ಮೇಬಲ್ ಹದಿಮೂರು. ಎರಡು ಜಡೆಗಳ ಮೇಬಲ್ ಅಂತೂ ಪಕ್ಕಾ ಗಂಡುಬೀರಿಯಾಗಿದ್ದಳು. ಅವರಿಬ್ಬರೂ ಸೇರಿ ಕೊಂಡು ಫ್ರಾನ್ಸಿಸನಿಗೆ ಕಿಚಾಯಿಸಿ ವಿಕೃತ ಆನಂದ ಪಡೆಯುತ್ತಿದ್ದರು.
“ಯಾಕೋ? ಏನಾಯ್ತು?” ಪೀಟರ್ ಕೇಳಿದ.
“ನನಗೆ ನೆಗಡಿಯಾಗಿದೆ. ಕಿರಿಕಿರಿಯಾಗುತ್ತಿದೆ.”
“ಏಯ್ ಫ್ರಾನ್ಸಿಸ್, ಅದೇನು ಅಷ್ಟೊಂದು ಗಂಭೀರವಾದ ನೆಗಡಿ ಏನೋ!” ಪೀಟರ್ ಆಶ್ಚರ್ಯದಿಂದ ಕೇಳಿದ.
“ಪಾರ್ಟಿಗೆ ಹೋದರಂತೂ ನಾನು ಖಂಡಿತ ಸಾಯುತ್ತೀನಿ ಕಣೋ”
“ಹಾಗಾದರೆ ನೀನು ಬರಲೇ ಬೇಡ ಬಿಡು.” ಪೀಟರ್ ಒಂದೇ ಮಾತಿನಲ್ಲಿ ಅನುಮೋದಿಸಿದಾಗ ಫ್ರಾನ್ಸಿಸನಿಗೆ ನಿರಾಳವೆನಿಸಿ ಸಮಧಾನವಾಯಿತು. ಆದರೂ, ಪೀಟರನ ಕಡೆಗೆ ಮುಖ ತಿರುಗಿಸಲು ಅವನಿಗೆ ಸಾಧ್ಯವಾಗಲೇ ಇಲ್ಲ. ಕಳೆದ ವರ್ಷ ಕಣ್ಣಾಮುಚ್ಚಾಲೆ ಆಡುವಾಗ, ಕಗ್ಗತ್ತಲ ಮನೆಯಲ್ಲಿ ಒಮ್ಮೆಲೇ ಗಂಡುಬೀರಿ ಮೇಬಲ್ ಬಂದು ಅವನ ಭುಜವನ್ನು ತಟ್ಟಿದಾಗ ಅವನು ಸತ್ತು ಹೋದಂತೆ ಅರಚಿದ್ದರ ನೆನಪಿನ ಛಾಯೆ ಈಗಲೂ ಅವನ ಕೆನ್ನೆಗಳ ಮೇಲೆ ಮೂಡಿತ್ತು. ಅವಳು ಹಿಂದುಗಡೆಯಿಂದ ಮೆಲ್ಲಗೆ ಬೆಕ್ಕಿನ ಹಾಗೆ ನಡೆದು ಬಂದಿದ್ದು ಅವನಿಗೆ ಗೊತ್ತೇ ಆಗಿರಲಿಲ್ಲ.
ನರ್ಸ್ ಬಿಸಿ ನೀರನ್ನು ಹಿಡಿದು ಒಳಗೆ ಬಂದಾಗ ಫ್ರಾನ್ಸಿಸ್ ಏನೂ ಮಾತನಾಡಲಿಲ್ಲ. ಎಲ್ಲವನ್ನೂ ಪೀಟರ್ ನಿಭಾಯಿಸುತ್ತಾನೆಂಬ ಧೈರ್ಯದಲ್ಲಿ ನೆಮ್ಮದಿಯಿಂದಿದ್ದ.
“ಫ್ರಾನ್ಸಿಸನಿಗೆ ಮೈ ಹುಶಾರಿಲ್ಲ… ಅವನಿಗೆ ಸಖತ್ ನೆಗಡಿಯಾಗಿದೆ.” ಅವನ ಪರವಾಗಿ ಪೀಟರ್ ನರ್ಸ್ ಗೆ ಹೇಳಿದ.
ಒಗೆದು ಮಡಚಿಟ್ಟಿದ್ದ ಗರಿಗರಿಯಾದ ಟವಲ್ಲುಗಳನ್ನು ಅವರ ಮಂಚದ ಮೇಲೆ ಹರವುತ್ತಾ ನರ್ಸ್, “ಸರಿ, ಸರಿ. ಈಗ ಎದ್ದೇಳಿ ಮಕ್ಕಳೇ..” ಎಂದಳು.
“ಫ್ರಾನ್ಸಿಸ್ ಆರಾಮ ಮಾಡಿಕೊಳ್ಳಲಿ ಅಲ್ವಾ?”
“ಬೆಳಗಿನ ಹೊತ್ತು ಸ್ವಲ್ಪ ಹೊತ್ತು ಹುಲ್ಲು ಹಾಸಿನ ಮೇಲೆ ವಾಕಿಂಗ್ ಮಾಡಿದರೆ ನೆಗಡಿ ಶೀತ ಎಲ್ಲಾ ಮಾಯವಾಗುತ್ತದೆ ಮಕ್ಕಳೆ. ಈಗ ಇಬ್ಬರೂ ಎದ್ದೇಳಿ. ಕ್ವಿಕ್! ” ಎಂದು ಬಾಗಿಲು ಮುಚ್ಚಿ ಹೊರನಡೆದಳು ನರ್ಸಮ್ಮ.
“ಸಾರಿ ಕಣೋ. ನೀನೇನು ಹೆದರಬೇಡ. ಹಾಗೇ ಮಲಗಿಬಿಡು. ನಾನು ಅಮ್ಮನ ಬಳಿ ಮಾತನಾಡುತ್ತೇನೆ.” ಪೀಟರ್ ಧೈರ್ಯ ಹೇಳಿದ. ಆದರೆ ಇದು ಆಗದ ಮಾತು ಎಂದು ಫ್ರಾನ್ಸಿಸನಿಗೆ ಗೊತ್ತಿತ್ತು. ಹುಶಾರಿಲ್ಲವೆಂದು ಹೇಳಿದಾಕ್ಷಣ ಅಮ್ಮ ಡಾಕ್ಟರರಿಗೆ ಹೇಳಿ ಕಳಿಸುತ್ತಾಳೆ. ಡಾಕ್ಟರ್ ಬಂದು ಅವನ ಎದೆ ತಟ್ಟಿ, ಕಣ್ರೆಪ್ಪೆ ಎಳೆದು ನಾಲಗೆ ತೋರಿಸು ಎನ್ನುತ್ತಾರೆ. ಸ್ತೆಥೆಸ್ಕೋಪ್ ಎದೆ ಮೇಲೆ ಇಟ್ಟು ಇವನಿಗೆ ಏನೂ ಆಗಿಲ್ಲ ನಾಟಕ ಆಡುತ್ತಿದ್ದಾನೆ ಎನ್ನುತ್ತಾರೆ! ನಿಜ, ಅವನ ಎದೆ ಡವಗುಟ್ಟುತ್ತಿತ್ತು. ಸ್ವಲ್ಪ ಮೈ ಯೂ ಬಿಸಿಯಾಗಿತ್ತು. ಆದರೆ ಅದು ನೆಗಡಿಯಿಂದಲ್ಲ! ಪಾರ್ಟಿಯ ಹೆದರಿಕೆಯಿಂದ, ಕಗ್ಗತ್ತಲ ಹೆದರಿಕೆಯಿಂದ. ಕತ್ತಲ ರೂಮಿನಲ್ಲಿ, ಧೈರ್ಯಕ್ಕೆ ಜೊತೆಯಲ್ಲಿ ಪೀಟರ್ ಇರುವುದಿಲ್ಲ ಎಂಬ ಹೆದರಿಕೆಯಿಂದ. ಅವನು ಹೊದಿಕೆಯನ್ನೆಸೆದು ಎದ್ದು ಕುಳಿತ.
“ಇಲ್ಲ, ನಾನು ಎದ್ದೇಳುತ್ತೇನೆ. ಆದರೆ ದೇವರಾಣೆಗೂ ನಾನು ಮಿಸೆಸ್ ಫಾಲ್ಕನಳ ಪಾರ್ಟಿಗೆ ಹೋಗುವುದಿಲ್ಲ.” ಅವನೆಂದ. ‘ನಾನು ಆಣೆ ಇಟ್ಟ ದೇವರು ಖಂಡಿತ ನನ್ನ ಕೈ ಬಿಡುವುದಿಲ್ಲ.’ ಫ್ರಾನ್ಸಿಸ್ ತನ್ನಷ್ಟಕ್ಕೇ ಸಮಧಾನ ಮಾಡಿಕೊಂಡ. ‘ಸಂಜೆ ನಾಲ್ಕರವರೆಗೆ ಸಮಯವಿದೆ. ಅದರೊಳಗೆ ಏನು ಬೇಕಾದರೂ ಆಗಬಹುದು. ನನ್ನ ಕಾಲೇ ಮುರಿದು ಹೋಗಬಹುದು. ನಿಜವಾಗಿ ನೆಗಡಿಯೇ ಆಗಬಹುದು. ಯಾರಿಗೆ ಗೊತ್ತು? ದೇವರು ಕಾಪಾಡುತ್ತಾನೆ.’
ತಿಂಡಿ ತಿನ್ನುವಾಗ ಅಮ್ಮ ಕೇಳಿದಳು: “ಏನಪ್ಪಾ ಫ್ರಾನ್ಸಿಸ್, ನಿನಗೆ ನೆಗಡಿಯಂತೆ?.. ಛೆ, ಛೆ.. ಸಂಜೆ ಈ ಪಾರ್ಟಿ ಬೇರೆ ಇದೆಯಲ್ಲೋ?”
ಫ್ರಾನ್ಸಿಸ್ ಸುಮ್ಮನೆ ನಕ್ಕ. ತನ್ನ ಬಗ್ಗೆ ಈ ಅಮ್ಮನಿಗೆ ಕಿಂಚಿತ್ತೂ ಗೊತ್ತಿಲ್ಲದಿರುವುದು ಅವನಿಗೆ ಆಶ್ಚರ್ಯವಾಯಿತು.
ಅಂದು ಬೆಳಗಿನ ವಾಕಿಂಗ್ ಸಮಯದಲ್ಲಿ ಈ ಜಾಯ್ಸ್ ಎದುರಾಗಿರದಿದ್ದಲ್ಲಿ ಅವನ ನೆಮ್ಮದಿ ಇನ್ನಷ್ಟು ಹೊತ್ತು ಬಾಳುತ್ತಿತ್ತೇನೋ!
ಅಂದು ನರ್ಸಮ್ಮನೊಟ್ಟಿಗೆ ಅವನೊಬ್ಬನೇ ವಾಕಿಂಗ್ ಹೊರಟಿದ್ದ. ಪೀಟರನಿಗೆ ಅರ್ಧ ತಯಾರಿಸಿಟ್ಟಿದ್ದ ಮೊಲದ ಗೂಡು ಪೂರ್ಣಗೊಳಿಸುವ ಕೆಲಸ ಬಾಕಿ ಇತ್ತೆಂದು ಅವನು ಬಂದಿರಲಿಲ್ಲ. ನರ್ಸಮ್ಮ, ಹೆಚ್ಚು ಕಮ್ಮಿ ಅವನೊಬ್ಬನ ನರ್ಸೇ ಎಂಬಂತಾಗಿದ್ದಳು. ಅವನೊಬ್ಬನಿಗೇ ವಾಕಿಂಗಿಗೆ ಕಳುಹಿಸುತ್ತಿರಲಿಲ್ಲ. ಅವರಿಗೆ ಎದುರಾಗಿ ಜಾಯ್ಸ್, ಒಬ್ಬಳೇ ನಡೆದುಕೊಂಡು ಬರುತ್ತಿದ್ದಳು. ಅವಳು ಅವನಿಗಿಂತ ಎರಡೇ ವರ್ಷ ಹಿರಿಯಳಾಗಿದ್ದಳು. ಜತೆಯಲ್ಲಿ ಪೀಟರ್ ಇದ್ದಿದ್ದರೆ ಅವನು ಇಷ್ಟೊಂದು ಆತಂಕಗೊಳ್ಳುತ್ತಿರಲಿಲ್ಲ.
ಜಾಯ್ಸ್ ಇವರಿಗೆ ಎದುರಾಗುತ್ತಾ ಬಂದು ಫ್ರಾನ್ಸಿಸನ ಕಡೆಗೆ ಒಂದು ನಿರ್ಲಕ್ಷದ ದೃಷ್ಟಿ ಬೀರಿ ನರ್ಸಮ್ಮನ ಕಡೆಗೆ ತಿರುಗಿ, “ಹಲೋ ನರ್ಸ್! ಇವತ್ತಿನ ಪಾರ್ಟಿಗೆ ಫ್ರಾನ್ಸಿಸನನ್ನೂ ಕರ್ಕೊಂಡು ಬರ್ತಾ ಇದೀಯಾ ತಾನೆ? ನಾನು, ಮೇಬಲ್ ಇಬ್ಬರೂ ಬರ್ತಾ ಇದೀವಿ.” ಎನ್ನುತ್ತಾ , ಉತ್ತರಕ್ಕೂ ಕಾಯದೆ ಮೇಬಲಳ ಮನೆಯ ಕಡೆಗೆ ಆತ್ಮವಿಶ್ವಾಸದಿಂದ ಜಿಗಿಯುತ್ತಾ ನಡೆದಳು.
“ಎಷ್ಟೊಳ್ಳೆ ಹುಡುಗಿ ಅಲ್ವ?” ನರ್ಸಮ್ಮ ಹೇಳಿದಳು. ಫ್ರಾನ್ಸಿಸ್ ಏನೂ ಮಾತನಾಡಲಿಲ್ಲ.
ಪಾರ್ಟಿಯ ಸಮಯ ಹತ್ತಿರವಾಗುತ್ತಲೇ ಇತ್ತು. ಅವನ ದೇವರು ತಟಸ್ಥನಾಗಿದ್ದ.
ಸಮಯ ಎಷ್ಟು ಬೇಗ ಜಾರಿ ಹೋಗುತಿತ್ತೆಂದರೆ ಅವನಿಗೆ ಮುಂಬರುವ ಸಂಕಷ್ಟಕ್ಕೆ ತಯಾರಾಗಲು ಸಮಯವೇ ಸಿಕ್ಕಿರಲಿಲ್ಲ. ಅಷ್ಟರಲ್ಲಿ ನರ್ಸಮ್ಮ ಅವನಿಗೆ ಪಾರ್ಟಿಯ ಉಡುಪನ್ನು ಉಡಿಸಿ ಹೊರಬಾಗಿಲ ಅಂಚಿನ ಬಳಿ ನಿಲ್ಲಿಸಿ ಟಾರ್ಚನ್ನು ಉರಿಸಿದಳು. ಹೊರಗೆ ಕತ್ತಲ ಜತೆಗೆ ತಣ್ಣನೆಯ ಗಾಳಿಯೂ ಬೀಸುತ್ತಿತ್ತು. ಅವನ ಹಿಂದೆ ಹಾಲಿನಲ್ಲಿ ಬೆಳಕಿತ್ತು. ಅವನ ತಂದೆ ತಾಯಿಯವರಿಗೆ ಟೇಬಲಿನ ಮೇಲೆ ಊಟ ಬಡಿಸುವ ತಯಾರಿ ನಡೆದಿತ್ತು. ಅವನಿಗೆ ಅಲ್ಲಿಂದ ಹಿಂದಕ್ಕೆ ಮನೆಯೊಳಗೆ ಓಡಿ, “ಅಮ್ಮಾ, ನಾನು ಪಾರ್ಟಿಗೆ ಹೋಗುವುದಿಲ್ಲ!” ಎಂದು ಕೂಗಿ ಹೇಳಬೇಕೆನಿಸಿತು. ಅವಳೇನೂ ಅವನು ಪಾರ್ಟಿಗೆ ಹೋಗಲೇ ಬೇಕೆಂದು ಹಟ ಹಿಡಿಯುತ್ತಿರಲಿಲ್ಲ. ಅವನಿಗೆ ತನ್ನ ಹೆದರಿಕೆಗಳನ್ನು ಮುಕ್ತವಾಗಿ ತನ್ನ ತಾಯಿಯ ಬಳಿ ನಿವೇದಿಸಿ ಮನಸ್ಸು ಹಗುರ ಮಾಡಿಕೊಳ್ಳಬೇಕೆನಿಸಿತು.
“ಇಲ್ಲಮ್ಮ, ನಾನು ಪಾರ್ಟಿಗೆ ಹೋಗುವುದಿಲ್ಲ. ನನಗೆ ಹೆದರಿಕೆಯಾಗುತ್ತದೆ. ನನಗೆ ಕತ್ತಲಲ್ಲಿ ಅವಿತುಕೊಳ್ಳಲು ಹೇಳುತ್ತಾರೆ. ನನಗೆ ಕತ್ತಲು ಅಂದರೆ ತುಂಬಾ ಹೆದರಿಕೆಯಾಗುತ್ತದೆ. ನಾನು ಕಿರುಚಿ, ಕಿರುಚಿ , ಕಿರುಚಿ ಖಂಡಿತ ಸಾಯುತ್ತೇನೆ!” ಎಂದು ಹೇಳ ಬೇಕೆನಿಸಿತು
ಅವನಿಗೆ ತಾಯಿಯ ಮುಖದ ಮೇಲಾಗುವ ಬದಲಾವಣೆಗಳನ್ನು ಅಂದಾಜು ಮಾಡುವುದು ಕಷ್ಟವಾಗಲಿಲ್ಲ.
“ಅಯ್ಯೋ, ಹುಚ್ಚು ಹುಡುಗ! ಏನೆಲ್ಲಾ ಹುಚ್ಚು ಯೋಚನೆಗಳು! ನಾವು ಈಗಾಗಲೇ ಮಿಸೆಸ್ ಫಾಲ್ಕನಳ ಆಮಂತ್ರಣವನ್ನು ಸ್ವೀಕರಿಸಿದ್ದೇವೆ.ಹೆದರಿಕೆ ಎಲ್ಲಾ ನಿನ್ನ ಭ್ರಮೆ. ಏನೂ ಆಗುವುದಿಲ್ಲ” ಎನ್ನುತ್ತಾಳೆ.
ನರ್ಸಮ್ಮ ಈಗಾಗಲೇ ಮೆಟ್ಟಿಲು ಇಳಿದಿದ್ದಳು. “ಇಲ್ಲಾಮ್ಮ, ನನಗೆ ಮೈ ಹುಶಾರಿಲ್ಲ. ಅಲ್ಲದೆ, ನನಗೆ ಕತ್ತಲೆಂದರೆ ಯಾಕೋ ಹೆದರಿಕೆ.”
“ಹುಚ್ಚಪ್ಪ, ಕತ್ತಲೆ ಬಗ್ಗೆ ಹೆದರುವಂತದ್ದು ಏನಿದೆ ಅಂತ.” ಅಮ್ಮ ಅಪಹಾಸ್ಯದಿಂದ ಹೇಳುವುದಂತೂ ಖಂಡಿತ. ಈ ದೊಡ್ವವರು ಎಷ್ಟೊಂದು ಆಷಾಢಭೂತಿಗಳೆಂದರೆ, ಸಾವಿನ ಬಗ್ಗೆಯೂ ಹೆದರಿಕೊಳ್ಳುವಂತದ್ದು ಏನೂ ಇಲ್ಲವೆಂದು ನಮಗೆ ಹೇಳುತ್ತಾರೆ. ಆದರೆ ತಾವು ಮಾತ್ರ ಎಷ್ಟೊಂದು ಹೆದರಿಕೊಂಡಿರುತ್ತಾರೆ!. ಆದರೆ ಅವರು ತನ್ನನ್ನು ಒತ್ತಾಯದಿಂದ ಪಾರ್ಟಿಗೆ ಕಳುಹಿಸಲಾರರು. ಹಾಗೇನಾದರೂ ಕಳುಹಿಸಿದರೆ ನಾನು ಜೋರಾಗಿ ಕಿರುಚುತ್ತೇನೆ..”
“ಫ್ರಾನ್ಸಿಸ್, ನಡಿ ಹೋಗೋಣ.” ಟಾರ್ಚಿನ ಹಳದಿ ಬೆಳಕನ್ನು ಅವನೆಡೆಗೆ ಬೀರುತ್ತಾ ನರ್ಸ್ ಹೇಳಿದಳು.
“ಬಂದೆ, ಬಂದೆ.” ಫ್ರಾನ್ಸಿಸ್ ಉತ್ತರಿಸಿದ.
ತನ್ನ ಜೀವ ಹಿಂಡುತ್ತಿರುವ ಗುಪ್ತ ಹೆದರಿಕೆಗಳನ್ನು ತಾಯಿಗೆ ಹೇಗೆ ಅರ್ಥ ಮಾಡಿಸಿ ಮಿಸೆಸ್ ಫಾಲ್ಕನಳ ಪಾರ್ಟಿಯಿಂದ ತಪ್ಪಿಸಿಕೊಳ್ಳುವುದೆಂದು ಅವನಿಗೆ ಅರ್ಥವಾಗಿರಲಿಲ್ಲ.
ಕೊನೆಗೆ, ಮಿಸೆಸ್ ಫಾಲ್ಕನಳ ಮೊರೆ ಹೋಗುವುದೇ ಲೇಸೆಂದು ಬಗೆದು ಅವಳ ಮನೆ ತಲುಪುತ್ತಿದ್ದಂತೆ ಪುಟ್ಟ ರೂಮಿನಲ್ಲಿ ಕುಳಿತ್ತಿದ್ದ ದಢೂತಿ ಫಾಲ್ಕನಳ ಕಡೆಗೆ ಮೆಲ್ಲಗೆ ಹೆಜ್ಜೆ ಹಾಕತೊಡಗಿದ. ಅವನ ಎದೆ ನಗಾರಿಯಂತೆ ಬಡಿದುಕೊಳ್ಳುತ್ತಿತ್ತು. ಆದರೂ ದನಿಯಲ್ಲಿ ತೋರ್ಗೊಡದೆ, “ಗುಡ್ ಈವ್ನಿಂಗ್ ಮಿಸೆಸ್ ಫಾಲ್ಕನ್. ನೀವು ನನ್ನನ್ನೂ ಪಾರ್ಟಿಗೆ ಆಮಂತ್ರಣ ಕೊಟ್ಟಿರುವುದಕ್ಕಾಗಿ ಧನ್ಯವಾದಳು.” ಎಂದ.
ಅಯ್ಯೋ, ಪುಟ್ಟಾ!! ” ತಾಯಿ ಹೇಂಟೆಯಂತೆ ಮಿಸೆಸ್ ಫಾಲ್ಕನ್ ಮಕ್ಕಳನ್ನೆಲ್ಲಾ ಅವಳ ವಿಶಾಲ ರೆಕ್ಕೆಗಳೊಳಗೆ ಎಳೆದುಕೊಳ್ಳುವಂತೆ ಅವರಿಗೆಲ್ಲಾ ಎಂದಿನಂತೆ ಸೇಬು ಕಚ್ಚುವ, ಮೊಟ್ಟೆ ಟೀ ಸ್ಪೂನು, ಮೂರು ಕಾಲಿನೋಟ ಆಟಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಳು. ಈ ಆಟಗಳ ಮಧ್ಯೆ ದೊರೆಯುವ ಬಿಡುವಿನಲ್ಲಿ ಏನು ಮಾಡುವುದೆಂದು ಗೊತ್ತಾಗದೆ ಫ್ರಾನ್ಸಿಸ್, ಮೇಬಲ್ ವಾರೆನ್ನಳ ಕುತ್ಸಿತ ನೋಟವನ್ನು ತಪ್ಪಿಸಿ ಒಂದು ಮೂಲೆಯಲ್ಲಿ ನಿಂತು ಮುಂದೆ ಎದುರಾಗುವ ಕತ್ತಲಾಟವನ್ನು ಹೇಗೆ ಸಂಭಾಳಿಸಬಹುದೆಂದು ಗೊತ್ತಾಗದೆ ಚಡಪಡಿಸುತ್ತಿದ್ದ. ಮಿಸೆಸ್ ಫಾಲ್ಕನ್ ಅವಳ ಜನ್ಮದಿನದ ಕೇಕನ್ನು ಕತ್ತರಿಸುವವರೆಗೆ ಯಾವುದೇ ಸಮಸ್ಯೆಗಳಿರುತ್ತಿರಲಿಲ್ಲ. ಅವನ ಸಮಸ್ಯೆ ಶುರುವಾಗಿರುತ್ತಿದ್ದುದ್ದೇ ಅದರ ನಂತರ. ಕೇಕ್ ಕತ್ತರಿಸುತ್ತಿದ್ದುದ್ದನ್ನೇ ಕಾಯುತ್ತಿದ್ದ ಜಾಯ್ಸ್ ತಾರಕ ಸ್ವರದಲ್ಲಿ ಕೂಗಿ ಹೇಳುತ್ತಿದ್ದಳು:
“ಮುಂದಿನ ಆಟ, ಕತ್ತಲ ಕಣ್ಣುಮುಚ್ಚಾಲೆ!!”
“ಫ್ರಾನ್ಸಿಸನ ಮುಖಭಾವವನ್ನು ಗಮನಿಸುತ್ತಿದ್ದ ಪೀಟರ್, “ಇದು ನಾವೆಲ್ಲಾ ಪ್ರತಿ ವರ್ಷವೂ ಆಡುತ್ತಲೇ ಇದ್ದೀವಿ. ಈ ಭಾರಿ ಬೇಡವಿತ್ತೇನೋ?” ಎಂದ.
“ಆದರೆ ಅದು ಇಂದಿನ ಕಾರ್ಯಕ್ರಮದಲ್ಲಿದೆ. ನಾನೇ ನೋಡಿದ್ದೇನೆ. ಚಹಾದ ನಂತರ ಕತ್ತಲಲ್ಲಿ ಕಣ್ಣುಮುಚ್ಚಾಲೆ ಆಟ. ಇದಿಷ್ಟು ಇಂದಿನ ಕಾರ್ಯಕ್ರಮದ ಪಟ್ಟಿಯಲ್ಲಿದೆ.” ಪೀಟರ್ ಅವಳೊಡನೆ ವಾದ ಬೆಳೆಸಲು ಹೋಗಲಿಲ್ಲ. ಕಾರ್ಯಕ್ರಮದ ಪಟ್ಟಿಯಲ್ಲಿ ಕಣ್ಣು ಮುಚ್ಚಾಲೆ ಇದ್ದಿರುವುದಾದರೆ ಏನೂ ಮಾಡುವ ಹಾಗಿರಲಿಲ್ಲ. ಅವನು ಮತ್ತೊಂದು ತುಂಡು ಬರ್ಥ್ ಡೇ ಕೇಕನ್ನು ಪಡೆದು ಟೀ ಕುಡಿಯತೊಡಗಿದ. ಫ್ರಾನ್ಸಿಸನಿಗೆ ಈ ಕಣ್ಣುಮುಚ್ಛಾಲೆ ಆಟದ ತಯಾರಿ ನಡೆಸಲು ಸಾಕಷ್ಟು ಸಮಯ ಕೊಡುವ ಇರಾದೆಯಿಂದ ಪೀಟರ್ ಅದನ್ನು ಮುಂದೂಡಲು ಪ್ರಯತ್ನಪಟ್ಟ. ಎಲ್ಲರೂ ಕಣ್ಣು ಮುಚ್ಚಾಲೆ ಆಟಕ್ಕೆ ತಯಾರಾಗಿದ್ದಿದ್ದರಿಂದ ಅದು ಸಾಧ್ಯವಾಗಲಿಲ್ಲ. ಕೇಕು ಟೀಯನ್ನು ಮುಗಿಸಿ ಎಲ್ಲರಿಗಿಂತ ಕೊನೆಗೆ ಎದ್ದವರೆಂದರೆ ಪೀಟರ್ ಮತ್ತು ಫ್ರಾನ್ಸಿಸ್ ಇಬ್ಬರೇ.
ಅವರಿಬ್ಬರೂ ಹಜಾರಕ್ಕೆ ಬಂದಾಗ ಎಲ್ಲರೂ ಅವರು ಬರುವುದನ್ನೇ ಕಾತರದಿಂದ ಎದುರುನೋಡುತ್ತಿದ್ದರು. ಮಿಸೆಸ್ ಫಾಲ್ಕನ್ ಅಸಹನೆಯಿಂದ, “ಸರಿ, ಸರಿ. ಹೊತ್ತಾಯ್ತು. ಈಗ ಕತ್ತಲ ಕಣ್ಣಾಮುಚ್ಚಾಲೆ ಆಟ ಶುರುವಾಗಲಿ..” ಎಂದಳು.
ಫ್ರಾನ್ಸಿಸನ ಮುಖ ಬಿಗಿಗೊಳ್ಳುತ್ತಿರುವುದನ್ನು ಪೀಟರ್ ಗಮನಿಸಿದ. ಫ್ರಾನ್ಸಿಸ್, ಪಾರ್ಟಿಯ ಈ ಗಳಿಗೆಗೆ ದಿಗಿಲುಗೊಂಡಿದ್ದನಾದರೂ ಈವರೆಗೆ ಯಾವುದೋ ಮೊಂಡು ಧೈರ್ಯದಿಂದ ತನ್ನ ಹೆದರಿಕೆಯನ್ನು ಹತೋಟಿಯಲ್ಲಿಡಲು ಯಶಸ್ವಿಯಾಗಿದ್ದ. ಆದರೆ, ಮಿಸೆಸ್ ಫಾಲ್ಕನ್ ಕತ್ತಲಿನಲ್ಲಿ ಕಣ್ಣುಮುಚ್ಚಾಲೆ ಆಟ ಘೋಷಿಸುತ್ತಿದ್ದಂತೆ ಅವನ ಧೈರ್ಯ ಜರ್ರನೆ ಇಳಿಯಿತು.
ಉಳಿದ ಮಕ್ಕಳೆಲ್ಲಾ ಕೇಕೆ ಹಾಕುತ್ತಾ ಕಣ್ಣಾಮುಚ್ಚಾಲೆ ಆಟವನ್ನು ಸ್ವಾಗತಿಸಿದರು. “ಪಂಗಡವನ್ನು ಆರಿಸಿಕೊಳ್ಳಬೇಕು” “ನಿಷಿದ್ಧ ಜಾಗಗಳು ಯಾವುವು?” “ಮೂಲ ಮನೆ ಯಾವುದು?” ಎಲ್ಲರೂ ಒಮ್ಮೆಲೇ ಕೇಳತೊಡಗಿದರು.
ಫ್ರಾನ್ಸಿಸ್ ಮಿಸೆಸ್ ಫಾಲ್ಕನಳ ಕಡೆಗೆ ನಡೆಯತೊಡಗಿ, “ಮಿಸೆಸ್ ಫಾಲ್ಕನ್, ನನ್ನನ್ನು ಕರೆದುಕೊಂಡು ಹೋಗಲು ಇನ್ನೇನು ನನ್ನ ನರ್ಸ್ ಬರುತ್ತಾಳೆ. ಆದ್ದರಿಂದ ನಾನು ಹೊರಗುಳಿಯುತ್ತೇನೆ. ಆಡುವುದಿಲ್ಲ.” ಎಂದ.
“ಇರಲಿ ಬಿಡೋ ಫ್ರಾನ್ಸಿಸ್. ನಿನ್ನ ನರ್ಸ್ ಬಂದರೆ ಕಾಯುತ್ತಿರುತ್ತಾಳೆ..” ಎನ್ನುತ್ತಾ ಮಿಸೆಸ್ ಫಾಲ್ಕನ್. ಜೋರಾಗಿ ಚಪ್ಪಾಳೆ ತಟ್ಟುತ್ತಾ ಮಕ್ಕಳನ್ನೆಲ್ಲಾ ತನ್ನ ಬಳಿ ಕರೆದಳು. ಹಾಗೆಯೇ ಫ್ರಾನ್ಸಿಸನಿಗೆ, “ನಿನ್ನ ಮಮ್ಮಿಗೆ ನಾನು ಹೇಳ್ಕೋತಿನಿ ಬಿಡೊ.ನೀನೇನು ಹೆದರಿಕೊ ಬೇಡ” ಎಂದಳು.
ಕಣ್ಣಾಮುಚ್ಚಾಲೆ ಆಟದಿಂದ ಹೊರಗುಳಿಯುವ ಫ್ರಾನ್ಸಿಸನ ಉಪಾಯ ಅಲ್ಲಿಗೇ ಕೊನೆಗೊಂಡಿತು. ಪಾಪ, ಎಷ್ಟೊಂದು ಯೋಚಿಸಿ ಅವನು ಈ ಉಪಾಯವನ್ನು ಹೆಣೆದಿದ್ದ. ಅದು ಈ ರೀತಿ ಉಲ್ಟಾ ಆಗುತ್ತದೆಂದು ಅವನು ಅಂದಾಜಿಸಿರಲೇ ಇಲ್ಲ.
“ಆದರೂ, ಯಾಕೋ ಈ ಆಟ ಆಡಬೇಕೆಂದು ನನಗನಿಸುತ್ತಿಲ್ಲ.” ಅವನು ನಿರ್ಭಾವುಕನಾಗಿ ಹೇಳಿ ಅಲ್ಲೇ ನಿಂತು ಕೊಂಡ.
ಆದರೆ, ಅವನ ಅಂತರಾಳದ ದಿಗಿಲು ಅವನ ಸಹೋದರ ಪೀಟರನ ಮಿದುಳಿಗೆ ತಟ್ಟಿತು. ದೀಪಗಳೆಲ್ಲಾ ಆರಿ ಕತ್ತಲು ಆವರಿಸುತ್ತಿದ್ದಂತೆ, ಮಕ್ಕಳ ಹೆಜ್ಜೆಗಳ ಅಡ್ಡಾದಿಡ್ಡಿ ಚಲನೆಯ ಸಪ್ಪಳ ಕೇಳುತ್ತಲೇ ಅವನಿಗೆ ಜೋರಾಗಿ ಹುಯಿಲಿಡುವ ಮನಸ್ಸಾಯಿತು. ಆದರೆ ಮರುಕ್ಷಣದಲ್ಲೇ ಅದು ತನ್ನ ಹೆದರಿಕೆಯಲ್ಲ, ತನ್ನ ತಮ್ಮನದೆಂದು ಅರಿವಾಯಿತು. ಆದರೂ, ಅವನು, “ಮಿಸೆಸ್ ಫಾಲ್ಕನ್ , ಫ್ರಾನ್ಸಿಸನಿಗೆ ಕತ್ತಲೆಂದರೆ ಆಗುವುದಿಲ್ಲ. ಅವನು ಆಡದಿದ್ದರೆ ಒಳಿತು.” ಎಂದ.
ಅವನು ಹಾಗೆ ಹೇಳಬಾರದಿತ್ತೇನೋ… ಕೆಲವು ಮಕ್ಕಳು, “ಹೆದರು ಪುಕ್ಲಾ, ಫ್ರಾನ್ಸಿಸ್ ಹೆದರು ಪುಕ್ಲಾ…” ಎಂದು ಫ್ರಾನ್ಸಿಸನ ಕಡೆಗೆ ತಿರುಗಿ ಗೇಲಿಮಾಡತೊಡಗಿದರು.
.”ನಾನು ಆಟ ಆಡ್ತಿನಿ ಬಿಡೋ ಪೀಟರ್. ನಾನಗೇನೂ ಹೆದರಿಕೆಯಿಲ್ಲ…” ಫ್ರಾನ್ಸಿಸ್ ಮೊಂಡು ಧೈರ್ಯದಿಂದ ಹೇಳಿದ.
“ಸರಿ. ನೀವು ಮನೆಯೊಳಗೆ ಎಲ್ಲಿ ಬೇಕಾದರೂ ಅವಿತುಕೊಳ್ಳಬಹುದು. ಯಾವುದೇ ನಿಷಿದ್ಧ ಜಾಗಗಳಿಲ್ಲ. ಬೀರುಗಳೊಳಗೂ, ಮಹಡಿಯ ಮೇಲೂ ಅವಿತುಕೊಳ್ಳಬಹುದು. ಮೂಲ ಮನೆ ಅಂತ ಯಾವುದೂ ಇಲ್ಲ.” ಎಂದಳು ಮಿಸೆಸ್ ಫಾಲ್ಕನ್.
ಪೀಟರನ ಪರ ವಹಿಸಿಕೊಂಡು ಮಾತನಾಡಿದ ಪೀಟರನಿಗೆ ಪಿಚ್ಚೆನಿಸಿತು. ಎಲ್ಲರ ಮುಂದೆ ತನ್ನನ್ನು ಹೆದರುಪುಕ್ಲನಂತೆ ಬಿಂಬಿಸಿದ್ದ ಪೀಟರನ ಕುರಿತು ಫ್ರಾನ್ಸಿಸನಿಗೆ ಸರಿಕಾಣಿಸಿರಲಿಲ್ಲವೆಂದು ಪೀಟರನಿಗೆ ಹೊಳೆಯಿತು. ಬಹಳಷ್ಟು ಮಕ್ಕಳು ಮಹಡಿಯ ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೋಗುತ್ತಿದ್ದಂತೆ ಮಹಡಿಯ ದೀಪಗಳೆಲ್ಲಾ ಆರಿದವು. ಬಾವಲಿಯ ರೆಕ್ಕೆಗಳಂತೆ ಮೆಟ್ಟಿಲುಗಳ ಮೇಲೆ ಕತ್ತಲು ಆವರಿಸಿಕೊಂಡಿತು. ಕೆಳಗಿನ ಕೊಠಡಿಗಳಲ್ಲೂ ದೀಪಗಳು ನಂದಿ ಒಂದೊಂದಾಗಿ ಕತ್ತಲಾವರಿಸಿಕೊಳ್ಳತೊಡಗಿತು. ಮತ್ತೊಂದು ಪಂಗಡದ ಮಕ್ಕಳು ಹಾಲಿನ ಮಂದ ಬೆಳಕಿನಲ್ಲಿ ಕಾಯತೊಡಗಿದರು.
“ನೀನು ಮತ್ತು ಫ್ರಾನ್ಸಿಸ್ ಅವಿತುಕೊಳ್ಳುವ ತಂಡದೊಳಗಿದ್ದೀರಿ.” ಎಂದು ಎತ್ತರದ ಹುಡುಗಿಯೊಬ್ಬಳು ಅವರಿಗೆ ಹೇಳಿದರು. ಆ ಕ್ಷಣ ದೀಪಗಳೆಲ್ಲಾ ಆರಿ ಕತ್ತಲು ಆವರಿಸಿಕೊಂಡಿತು. ನೆಲಹಾಸು ಕಂಬಳಿಯ ಮೇಲೆ ಅವಿತುಕೊಳ್ಳುವ ಗಡಿಬಿಡಿಯಲ್ಲಿದ್ದ ಮಕ್ಕಳ ಹೆಜ್ಜೆ ಸಪ್ಪುಳ ವಿಚಿತ್ರ ಕಂಪನವನ್ನುಂಟುಮಾಡಿತು.
“ಫ್ರಾನ್ಸಿಸ್ ಎಲ್ಲಿ ಮರೆಯಾದ?” ಕತ್ತಲು ತುಂಬಿದ ಹಾಲಿನ ಮಧ್ಯದಲ್ಲಿ ನಿಂತಿದ್ದ ಪೀಟರ್ ದಿಗಿಲುಗೊಂಡು ಯೋಚಿಸತೊಡಗಿದ. ಆ ಕಗ್ಗತ್ತಲಿನಲ್ಲಿ ಫ್ರಾನ್ಸಿಸ್ ತನ್ನ ಎರಡೂ ಕಿವಿಗಳನ್ನು ಬೆರಳುಗಳಿಂದ ಮುಚ್ಚಿ ಬಲವಾಗಿ ಕಣ್ಣುಗಳನ್ನು ಮುಚ್ಚಿಕೊಂಡು ಒಂದು ಮೂಲೆಯನ್ನು ಆರಿಸಿಕೊಂಡಿದ್ದ. “ನಾನು ಬಂದೆ!!” ಎಲ್ಲಿಂದಲೋ ತೂರಿಕೊಂಡು ಬಂದ ಈ ಮಾತಿನಿಂದ ಪೀಟರ್ ಕಂಪಿಸತೊಡಗಿದ. ಅದು, ತಮ್ಮನನ್ನು ರಕ್ಷಿಸಬೇಕೆನ್ನುವ ಉತ್ಕಂಟತೆಯಿಂದ ಅವನೊಳಗಿನಿಂದಲೇ ಹೊರಟಿತ್ತು.
“ನಾನೇ ಫ್ರಾನ್ಸಿಸನಾಗಿದ್ದರೆ ಎಲ್ಲಿ ಅವಿತುಕೊಳ್ಳುತ್ತಿದ್ದೆ?” ಅವನು ತನ್ನಷ್ಟಕ್ಕೆ ಕೇಳಿಕೊಂಡ. ತಾನು ಫ್ರಾನ್ಸಿಸ್ ಅಲ್ಲದಿದ್ದರೂ ಅವನ ಪ್ರತಿಬಿಂಬನಾಗಿದ್ದರಿಂದ ಅವನಿಗೆ ಉತ್ತರ ಕಂಡುಹಿಡಿಯುವುದು ಅಷ್ಟೇನೂ ಕಷ್ಟವಾಗಲಿಲ್ಲ. ಫ್ರಾನ್ಸಿಸ್, ಸ್ಟಡಿ ರೂಮಿನ ಪುಸ್ತಕದ ಕಪಾಟು ಮತ್ತು ಆರಾಮ ಕುರ್ಚಿಯ ಮಧ್ಯದ ಖಾಲಿ ಜಾಗದಲ್ಲಿ ಕುಳಿತಿದ್ದ. ಅವರ ಮಧ್ಯೆ ಟೆಲಿಪತಿ ಗಿಲಿಪತಿ ಅಂತಾದ್ದು ಯಾವುದೂ ಇರಲಿಲ್ಲ. ಒಂದೇ ಗರ್ಭವನ್ನು ಹಂಚಿಕೊಂಡಿದ್ದ ಬಾಂಧವ್ಯ, ಅಷ್ಟೇ! ಅದೇ, ಅವರನ್ನು ಒಟ್ಟುಗೂಡಿಸಿದ್ದ ಶಕ್ತಿ..
ಪೀಟರ್ ಬೆಕ್ಕಿನ ಹೆಜ್ಜೆಗಳನ್ನಿಕ್ಕುತ್ತಾ ಫ್ರಾನ್ಸಿಸ್ ಅವಿತುಕೊಂಡಿದ್ದ ಜಾಗದ ಕಡೆಗೆ ನಡೆಯತೊಡಗಿದ. ಅವನ ಹೆಜ್ಜೆಯ ಭಾರಕ್ಕೆ ಅಲ್ಲೊಂದು ಇಲ್ಲೊಂದು ಮರದ ನೆಲಹಾಸು ಕಿರಗುಟ್ಟತೊಡಗಿತ್ತಾದ್ದರಿಂದ ಅವನು ಬಗ್ಗಿ ತನ್ನ ಶೂಗಳ ಲೇಸುಗಳನ್ನು ಬಿಚ್ಚಿ ಸದಿಳಗೊಳಿಸಿದ. ಅದೂ ಸರಿಯಲ್ಲವೆಂದು ಶೂಗಳನ್ನು ಕೈಯಲ್ಲಿಡಿದು ಕಾಲುಚೀಲದಲ್ಲೇ ಮುಂದುವರೆದ. ಅವನಿಗೆ ತನ್ನ ತಮ್ಮನ ಬಳಿ ತಲುಪಿದಂತಾಯಿತು. ಕೈಗಳನ್ನು ಚಾಚಿ ಅವನು ಫ್ರಾನ್ಸಿಸನ ಮುಖವನ್ನು ಮೆತ್ತಗೆ ನೇವರಿಸಿದ.
ಫ್ರಾನ್ಸಿಸ್ ಕಿಂಚಿತ್ತೂ ಪ್ರತಿಕ್ರಿಯಿಸಲಿಲ್ಲ. ಆದರೆ ತಾಳ ತಪ್ಪಿದಂತೆ ಬಡಿಯುತ್ತಿದ್ದ ಅವನ ಹೃದಯದಿಂದಲೇ ಫ್ರಾನ್ಸಿಸ್ ಅನುಭವಿಸುತ್ತಿರುವ ಗಾಬರಿಯ ತೀವ್ರತೆ ಅವನಿಗೆ ಅರಿವಾಯಿತು.
“ಫ್ರಾನ್ಸಿಸ್, ನೀನು ಭಯಪಡಬೇಡ. ನಾನಿದ್ದೇನೆ.” ಎನ್ನುತ್ತಾ ಅವನು ಬಗ್ಗಿ ಕೆಳಗೆ ಕುಳಿತಿದ್ದ ತಮ್ಮನ ಮೇಲೆ ಕೈಯಾಡಿಸಿ ಮುಷ್ಠಿ ಬಿಗಿಹಿಡಿದು ಕುಳಿತ್ತಿದ್ದ ಅವನ ಕೈಗಳನ್ನು ಮೆಲ್ಲಗೆ ಹಿಡಿದ.
ಅವರಿಬ್ಬರ ಮಧ್ಯದ ಅನ್ಯೋನ್ಯತೆ ಎಷ್ಟೊಂದು ಗಾಢವಾಗಿತ್ತೆಂದರೆ ಪೀಟರನಿಗೆ ಮುಂದೆ ಮಾತನಾಡಬೇಕು ಎಂದೆನಿಸಲಿಲ್ಲ. ಅವನ ಕೈ ಸ್ಪರ್ಶ ಮಾತ್ರದಿಂದಲೇ, ಮಾತುಕತೆ ಇಲ್ಲದೆಯೂ ತಮ್ಮನಿಗೆ ಧೈರ್ಯ ತುಂಬಬಹುದೆಂದು ಅವನು ತಿಳಿದಿದ್ದ. ಅವನ ಇರುವಿನಿಂದ ಫ್ರಾನ್ಸಿಸನ ಗಾಬರಿ ಕಡಿಮೆಯಾಗಲಿಲ್ಲವಾದರೂ ತಕ್ಕ ಮಟ್ಟಿಗೆ ಶಮನವಾಗಿದೆ ಎಂದು ಪೀಟರ್ ಅಂದಾಜಿಸಿದ. ಆ ಹೆದರಿಕೆ ಪೂರ್ಣವಾಗಿ ಅವನ ತಮ್ಮನದು, ತನ್ನದಲ್ಲವೆಂಬ ಅರಿವೂ ಅವನಿಗಿತ್ತು. ತನ್ನ ಪಾಲಿಗೆ ಕತ್ತಲೆ ಎಂಬುದು ಕೇವಲ ಬೆಳಕಿಲ್ಲದಿರುವುದು.
“ಫ್ರಾನ್ಸಿಸ್, ಏನೂ ಗಾಬರಿಯಾಗಬೇಡ. ಇನ್ನೇನು ದೀಪಗಳು ಬೆಳಗುತ್ತವೆ. ಅವೆಲ್ಲಾ ಹೆಜ್ಜೆ ಸಪ್ಪುಳಗಳು ಆ ಮೇಬಲ್ ಮತ್ತು ಜಾಯ್ಸ್ ಅವಿತಿರುವವರನ್ನು ಹುಡುಕುತ್ತಿರುವುದು. ಬೇರೇನೂ ಅಲ್ಲ.”ಅವನು ಮಾನಸಿಕವಾಗಿಯೇ ತಮ್ಮನಿಗೆ ಧೈರ್ಯದ ಸಂದೇಶಗಳನ್ನು ರವಾನಿಸತೊಡಗಿದ. ಆದರೂ, ಕೆಳಗೆ ಮುದುರಿ ಕುಳಿತಿದ್ದ ತಮ್ಮನೊಳಗಿನಿಂದ ಹೊರಹೊಮ್ಮುತ್ತಿದ್ದ ಗಾಬರಿಯ ಕಂಪನಗಳು ಕಿಂಚಿತ್ತೂ ಕಡಿಮೆಯಾಗಲಿಲ್ಲ.
“ಇನ್ನೇನು ದೀಪಗಳು ಹತ್ತಿಕೊಳ್ಳುತ್ತವೆ. ನಮ್ಮನ್ನು ಹುಡುಕಿ ಹುಡುಕಿ ಅವರಿಬ್ಬರೂ ಸುಸ್ತಾಗಿ ಏನೋ ಪಿಸಿ ಪಿಸಿ ಮಾತನಾಡುತ್ತಿದ್ದಾರೆ.”
ನೆಲಕಂಬಳಿಯ ಮೇಲೆ ಹೆಜ್ಜೆಗಳ ಸಪ್ಪುಳ, ಗೋಡೆಯ ಮೇಲೆ ಕೈ ಸರಿಯುವಿಕೆ, ಬಾಗಿಲ ಪರದೆ ಸರಿಸಿದ ಶಬ್ಧ, ಚಿಲಕ ಎಳೆದ ಶಬ್ಧ, ಬೀರುವಿನ ಬಾಗಿಲು ‘ಕಿರ್ರೋ..’ ಎಂದು ತೆರೆದ ಶಬ್ಧ.
“ಹೆದರಬೇಡ ಫ್ರಾನ್ಸಿಸ್.. ಅದು ಜಾಯ್ಸ್ ಮತ್ತು ಮೇಬಲ್ ಅಥವಾ ಮಿಸೆಸ್ ಫಾಲ್ಕನ್..” ಪೀಟರ್ ಆಶ್ವಾಸನೆಯ ಸಂದೇಶವನ್ನು ರವಾನಿಸಿದ.
ಎಷ್ಟೋ ಹೊತ್ತಿನ ನಂತರವೆಂಬಂತೆ ಹಜಾರದ ಗೊಂಚಲು ದೀಪಗಳು ಒಮ್ಮೆಲೆ ಹೂವಿನಂತೆ ಬಿರಿದು ಬೆಳಗಿದವು.
“ಹೋ..” ಎಂದು ಕೇಕೆ ಹಾಕುತ್ತಾ ಮಕ್ಕಳೆಲ್ಲಾ ದೀಪ ಉರಿಯುತ್ತಿದ್ದ ಹಜಾರಕ್ಕೆ ಓಡೋಡುತ್ತಾ ಬಂದರು.
“ಪೀಟರ್ ಎಲ್ಲಿ?”
“ಮಹಡಿ ಮೇಲೆ ನೋಡಿದ್ರಾ?”
“ಫ್ರಾನ್ಸಿಸ್ ಎಲ್ಲಿ?”
ಅಷ್ಟರಲ್ಲಿ ಮಿಸೆಸ್ ಫಾಲ್ಕನ್ ಭಯಾನಕವಾಗಿ ಚೀರಿದ್ದು ಕೇಳಿ ಎಲ್ಲಾ ಮಕ್ಕಳು ಗರಬಡಿದಂತೆ ಒಮ್ಮೆಲೇ ಸ್ತಬ್ಧರಾದರು. ಎಲ್ಲರ ದೃಷ್ಟಿ ಮೂಲೆಯ ಗೋಡೆಗೆ ಎರಡೂ ಮುಷ್ಠಿಗಳನ್ನು ಬಿಗಿ ಹಿಡಿದು ಒರಗಿ ಕುಳಿತಿದ್ವ ಫ್ರಾನ್ಸಿಸನ ಕಡೆಗೆ ಹರಿಯಿತು.
ಫ್ರಾನ್ಸಿಸ್ ಸತ್ತು ಹೋಗಿದ್ದ.
ಅವನ ಕೈಯನ್ನು ಗಟ್ಟಿಯಾಗಿ ಹಿಡಿದು ಗರಬಡಿದವನಂತೆ ಬಿಳುಚಿಕೊಂಡಿದ್ದ ಪೀಟರ್, ಫ್ರಾನ್ಸಿಸನ ಕೈಯ ನಾಡಿಯಿಂದ ಈಗಲೂ ಹೊರಪ್ರವಹಿಸುತಿದ್ದ ಭಯದ ಅಲೆಗಳ ತೀವ್ರತೆಯಿಂದ ದಂಗಾಗಿ ಹೋಗಿದ್ದ.
-ಜೆ.ವಿ.ಕಾರ್ಲೊ
ಬ್ರಿಟಿಷ್ ಲೇಖಕ ಹೆನ್ರಿ ಗ್ರಾಹಾಂ ಅವರ The End of the Party ಕತೆಯ ಅನುವಾದ
ಬ್ರಿಟಿಷ್ ಲೇಖಕ ಹೆನ್ರಿ ಗ್ರಾಹಾಂ ಗ್ರೀನ್ (1904-1991) ರನ್ನು ಇಪ್ಪತ್ತನೇ ಶತಮಾನದ ಒಬ್ಬ ಪ್ರಮುಖ ಲೇಖಕರೆಂದು ಪರಿಗಣಿಸುತ್ತಾರೆ. ಅವರು ಇಪ್ಪತ್ತೈದಕ್ಕಿಂತಲೂ ಹೆಚ್ಚು ಕಾದಂಬರಿ, ನಾಟಕ, ಕವಿತೆಗಳು, ಮಕ್ಕಳ ಕತೆಗಳು ಮತ್ತು ಹಲವಾರು ಸಣ್ಣ ಕತೆಗಳನ್ನು ಬರೆದಿದ್ದಾರೆ. 1966-67 ರಲ್ಲಿ ಅವರ ಹೆಸರನ್ನೂ ಕೂಡ ನೋಬೆಲ್ ಸಾಹಿತ್ಯ ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗಿತ್ತು. ಬ್ರೈಟನ್ ರಾಕ್, ದಿ ಪವರ್ ಆಂಡ್ ದಿ ಗ್ಲೋರಿ, ಕಾನ್ಫಿಡೆನ್ಶಿಯಲ್ ಏಜೆಂಟ್ ಇತ್ಯಾದಿ ಅವರ ಪ್ರಮುಖ ಕಾದಂಬರಿಗಳು. 2005 ರಲ್ಲಿ ಅಮೆರಿಕಾದ TIME ವಾರ ಪತ್ರಿಕೆ ಆಯ್ಕೆ ಮಾಡಿದ 20 ನೇ ಶತಮಾನದ ಉತ್ಕೃಷ್ಟ ನೂರು ಕಾದಂಬರಿಗಳ ಪಟ್ಟಿಯಲ್ಲಿ ಗ್ರಹಾಂ ಗ್ರೀನರ ‘ದಿ ಪವರ್ ಆಂಡ್ ಗ್ಲೋರಿ’ ಕೂಡ ಸೇರಿತ್ತು.