ಸುಮ್ ಸುಮನಾ ಅಂಕಣ

ಕಣ್ಣಂಚಿನ ಪ್ರೀತಿ:ಸುಮನ್ ದೇಸಾಯಿ ಅಂಕಣದಲ್ಲಿ ಕತೆ


 ನನ್ನ ಮಕ್ಕಳ ಕ್ರಿಸ್ ಮಸ್ ಸೂಟಿ ಶೂರು ಆಗಿದ್ವು. ಹದಿನೈದ ದಿನಾ ರಜಾ ಇದ್ವು. ನನ್ನ ಮಕ್ಕಳಿಬ್ಬರು ಎಲ್ಲೆರೆ ಪ್ರವಾಸಕ್ಕ ಹೋಗೊಣ ಅಂತ ಗಂಟಬಿದ್ದಿದ್ರು. ನನ್ನ ಮಗಳು "ಅಮ್ಮಾ ಗೋವಾಕ್ಕ ಹೋಗೊಣು ಅಲ್ಲೆ ಕ್ರಿಸ್ ಮಸ್ ಹಬ್ಬಾನ ಭಾಳ ಮಸ್ತ ಸೆಲೆಬ್ರೇಟ್ ಮಾಡತಾರಂತ, ಮತ್ತ ಗೋವಾದಾಗ ಬೀಚನ್ಯಾಗ ಮಸ್ತ ಆಟಾನು ಆಡಬಹುದು" ಅಂದ್ಲು. ಪ್ರೀತಿ ಮಗಳು ಕೇಳಿದ್ದನ್ನ ಇಲ್ಲಾ ಅನ್ಲಿಕಾಗ್ಲಿಲ್ಲಾ ನಾ ಯೆಸ್ ಅಂದೆ. ಇನ್ನ ಹೆಂಡತಿ ಡಿಸೈಡ ಮಾಡಿದ್ದನ್ನ ಬ್ಯಾಡ ಅನ್ಲಿಕ್ಕೆ ಸಾಧ್ಯನ ಇಲ್ಲಂತ ನಮ್ಮನಿಯವರನು ಒಪ್ಪಿಗಿ ಕೊಟ್ರು. ಒಟ್ಟಿನ್ಯಾಗ ನಮ್ಮ ಗೋವಾಕ್ಕ ಹೋಗೊ ಪ್ಲಾನ್ ಅಂತು ನಕ್ಕಿ ಆತು. ಈಗಿನ ಕಾಲದ ಹುಡುಗುರು ತಾವು ಆಸೆ ಪಟ್ಟಿದ್ದನ್ನ ಸಾಧಿಸ್ಕೊಂಡಬಿಡತಾರ. ನಾವ ಸಣ್ಣವರಿದ್ದಾಗ ಇದ್ದೂರಾಗಿನ ಸಿಧ್ಧಾರೂಢಮಠಾನ ಒಂದಸಲಾನು ನೆಟ್ಟಗ ನೋಡ್ಲಿಕ್ಕಾಗಿದ್ದಿಲ್ಲಾ. ಖರೆ ಹೇಳ್ಬೇಕಂದ್ರ ಈಗಿನ ಮಕ್ಕಳು ಪುಣ್ಯವಂತ್ರು.

 ಗೋವಾಕ್ಕ ಹೋಗೊ ತಯಾರಿ ಎಲ್ಲಾ ಆಗಿತ್ತು. ಗೋವಾದಾಗ ನಾವು ಕಳದ ಹಿಂದಿನ ನೆನಪುಗೊಳ ಒಂದೊಂದ ಹೊರಗ ಬಂದು ಕುಣಿಲಿಕತ್ವು. ನಾ ಮೊದಲನೆ ಸಲಾ ಎನಲ್ಲಾ ಅಲ್ಲೆ ಹೋಗೊದು. ನಾನು, ನನ್ನ ತಮ್ಮಾ, ನಮ್ಮ ಮಾವಶಿ ಮಗಳು, ಮಾಮಾನ ಮಗಳು, ಮಗಾ ಎಲ್ಲಾರು ಹೈಸ್ಕೂಲಿದ್ದಾಗ ಗೋವಾಕ್ಕ ಸೂಟಿಗೆ ಅಂತ ಹೋಗತಿದ್ವಿ. ನಮ್ಮ ಮಾಮಾ ಅಲ್ಲೆ ಕೆಲಸಾ ಮಾಡತಿದ್ರು. ಎಷ್ಟ ಮಸ್ತ ಎಂಜಾಯ್ ಮಾಡತಿದ್ವಿ ನಾವೆಲ್ಲಾರು. ನಮ್ಮ ಮಾಮಾಂದು ಇನ್ನು ಮದವಿ ಆಗಿದ್ದಿಲ್ಲಾ. ಆಂವಾ ಬಿಚೊಲಿಯಂನ್ಯಾಗ ಇರತಿದ್ದಾ. ಸಣ್ಣ ಊರಾದ್ರು ಭಾಳ ಶಾಂತ ಮತ್ತ ಸ್ವಚ್ಛ ಊರದು. ಆಂವಾ ಕೆಲಸಾ ಮಾತ್ರ ಸ್ಯಾಂಕೊಲಿಯಂ (ಸಾಖಳಿ)ನ್ಯಾಗ್ ಮಾಡತಿದ್ದಾ. ಮುಂಝಾನೆ 8.30ಕ್ಕ ಡ್ಯೂಟಿಗೆ ಹೋದ್ರ ಬರೊದು ಸಂಜಿಮುಂದ 6.30 ಆಗತಿತ್ತು. ಅಲ್ಲಿ ತನಕಾ ನಾವ ಹುಡುಗುರದ ರಾಜ್ಯ. ನಮ್ಮ ಧಾಂಧಲೆ ಮನ್ಯಾಗ ಅಷ್ಟ ಅಲ್ಲಾ ಓಣ್ಯಾಗು ಇರತಿತ್ತು. ಮೊದಲ ಶಾಂತ ಕಾಲೋನಿಯೊಳಗ ನಮ್ಮ ಗದ್ದಲಾ ಒಂಥರಾ ಅಲ್ಲಿದ್ದವರಿಗೆಲ್ಲಾ ಮಜಾ ಅನಿಸಿತ್ತು. ಅವರೆಲ್ಲಾ ನಮ್ಮನ್ನ ಹಣಿಕಿ ಹಾಕಿ ನೋಡಿ ನೋಡಿ ಹೋಗತಿದ್ರು. ಮೊದಲ ನಾವ ಹೇಳಿಕೇಳಿ ಉಡಾಳ ಟಪ್ಪುಗೊಳು, ಇನ್ನ ಹೇಳೊವರ ಕೇಳೊವರು ಯಾರು ಇಲ್ಲಂದ್ರ ಕೇಳಬೇಕ ನಮ್ಮ ಊರೊಣಗಿ ತಡೆಯುವರ ಯಾರು ಇದ್ದಿಲ್ಲಾ.

ಮೊದಲನೆ ಸಲಾ ಗೋವಾಕ್ಕ ಹೋದಾಗ ಖರೇನು ನಮಗ ಅಲ್ಲಿ ಮಂದಿಯ ಇರೋಣಕಿ ನೋಡಿ ಮಜಾ ಅನಿಸಿತ್ತು. ನಾವು ಊರಿಗೆ ಹೋದಾಗ ರಾತ್ರಿ ಆಗಿತ್ತು. ಮರುದಿನಾ ಮುಂಝಾನೆ ಎದ್ದು ಹಿತ್ತಲಿಗೆ ಬಂದಾಗ ಅಲ್ಲೆ ಮನಿ ಮಾಲಕರ ಮಗಳು ಒಂದ ದೊಡ್ಡ ಇಳಗಿ ಇಟ್ಕೊಂಡು ಒಂದ ಬುಟ್ಟ್ಯಾಗ ನೀರ್ ಇಟಗೊಂಡ ಬದನಿಕಾಯಿ ಹೆಚ್ಚಿಧಂಗ ಮೀನಾ ಹೆಚ್ಚಿ ಹೆಚ್ಚಿ ನೀರಾಗ ಹಾಕಲಿಕತ್ತಿದ್ಲು. ಆಕಿ ಸುತ್ತ ಎರಡ ಬೆಕ್ಕುಗೊಳ ತಮಗೂ ಒಂದ ಚೂರು ಮೀನಾ ರುಚಿ ನೋಡ್ಲಿಕ್ಕೆ ಸಿಗತಾವೆನೊ ಅನ್ನೊವರ ಹಂಗ ಅಲ್ಲೆ ಗಿರಕಿ ಹೊಡಿಲಿಕತ್ತಿದ್ವು. ನಾವೆಲ್ಲ ಹುಡುಗುರು ಘಾಬರಿಯಾಗಿ ನೊಡಕೋತ ನಿಂತಿದ್ವಿ. ಯಾಕಂದ್ರ ಬರೆ ಬಾಜು ಮನಿಯಿಂದ ಉಳ್ಳಾಗಡ್ಡಿ, ಬಳ್ಳೊಳ್ಳಿನ ವಾಸನಿ ಬಂದ್ರ ಸುಧ್ಧಾ ಮೈಲಿಗಿ ಅನ್ನೊ ವಾತಾವರಣದಾಗ ಬೆಳೆದ ನಮಗ ಮೀನಾ ಹೆಚ್ಚೊದ ನೋಡಿ, ಯಾರದೊ ಖೂನಿ ಆಗಲಿಕತ್ತದ್ದನ್ನ ಕಣ್ಣಾರೆ ನೋಡಿದವರಂಘ ದಂಗ ಬಡದು ಬಾಯಿತಕ್ಕೊಂಡ ನೋಡಕೊತ ನಿಂತಿದ್ವಿ. ಅಲ್ಲೆ ಒಂದಕಡೆ ಹಾಳಿಯೊಳಗ ಸಣ್ಣ ಸಣ್ಣ ಮೀನಾ ಒಣಗಸಲಿಕ್ಕೆ ಇಟ್ಟಿದ್ರು. ಇಷ್ಟ ದಿನಾ ಮೆಣಸಿನಕಾಯಿ ಬಾಳಕಾ, ಹಪ್ಪಳಾ, ಸಂಡಿಗಿ ಒಣಗಿಸಿದ್ದಷ್ಟ ನೋಡಿದ್ವಿ. ಹಿಂಗ ಮೀನಾ ಒಣಗಿಸಿದ್ದ ನೋಡಿದ್ದಿಲ್ಲಾ. ಹಗಲೆಲ್ಲಾ ಅಲ್ಲೆ ಹೋಗಿ ಮೂಗು ಮುಚಗೊಂಡ ನಿಂತು ಅದನ್ನ ನೋಡೊದ ಒಂಥರಾ ಮಜಾ ಅನಿಸ್ತಿತ್ತು. ನಮ್ಮ ಕಡೆ ಸುಗ್ಗ್ಯಾಗ ಎಲ್ಲಾರ ಮನಿ ಮುಂದನು ಜ್ವಾಳಾ, ಗೋಧಿ,ಕಾಳುಗೊಳನ್ನ ರಾಶಿ ಮಾಡಿ ಬಿಸಲಿಗೆ ಹಾಕಿಧಂಗ ಅಲ್ಲೆ ಗೊಡಂಬಿ ಹಾಕಿದ್ದನ್ನ ಬೆರಗಾಗಿ ನೋಡತಿದ್ವಿ. ಮತ್ತ ಸಣ್ಣ ಮಕ್ಕಳಿಂದ ಹಿಡಕೊಂಡು ಅಜ್ಜಿಗೊಳ ಸುದ್ಧಾ ಫ್ರಾಕ್ ಹಾಕ್ಕೊಳ್ಳೊದ ನೋಡಿ ಕಿಸಿ ಕಿಸಿ ನಗತಿದ್ವಿ.

ನಮ್ಮ ಕಂಪೌಂಡನ್ಯಾಗನ ನಮ್ಮ ಬಾಜು ಮನಿಯೊಳಗ ಕರ್ನಾಟಕದವರನ ಬಾಡಿಗಿ ಇದ್ರು. ಗಂಡಾ-ಹೆಂಡತಿ ಇಬ್ರ ಇದ್ರು. ಅವರಿಗೆ ಮಕ್ಕಳಿದ್ದಿಲ್ಲಾ. ಅಂಕಲ್ ಕೆಲಸಕ್ಕ ಹೋದಮ್ಯಾಲೆ ಆಂಟಿ ಒಬ್ಬರ ಮನ್ಯಾಗ ಇರತಿದ್ರು. ಮಕ್ಕಳಿಲ್ಲದ ಸುರೇಖಾ ಆಂಟಿ ನಮ್ಮನ್ನ ಭಾಳ ಅಚ್ಛಾದಿಂದ ನೋಡ್ಕೊತಿದ್ರು. ಅವರ ಪ್ರೀತಿ ಅಂತಃಕರಣ ಅಂತು ಜೀವ ಇರೊತನಕಾ ಮರಿಲಿಕ್ಕಾಗುದಿಲ್ಲಾ. ನಮ್ಮ ಧಾಂಧಲೆನ್ನ ಅಂತು ಭಾಳ ಸಮಾಧಾನದಿಂದ ಸಹಿಸ್ಕೊತಿದ್ರು. ನಾವು ಕೇಳಿದ್ದನ್ನ ರುಚಿ ರುಚಿಯಾಗಿ ಮಾಡಿಕೊಡತಿದ್ರು. ಪ್ರತಿ ಸಲಾ ಊರಿಗೆ ಹೋದಾಗ ನಾವಿರೊತನಕಾ ಮನಿಯೊಳಗ ಮೀನದ ಅಡಗಿ ಮಾಡತಿರಲಿಲ್ಲಾ ಅವರು. ಆಂಟಿ ಮಾಡಿಕೊಡತಿದ್ದ ಎಗ್ ಲೆಸ್ ಕೇಕ್ ನ ರುಚಿಯಂತು ಮರೆಯೊಹಂಗಿಲ್ಲಾ. ನಾವು ವಾಪಸ ಊರಿಗೆ ಹೋಗೊ ಮುಂದ ನಮಗ ಕಾಣಧಂಗ ಆಂಟಿ ಕಣ್ಣಿರ ಹಾಕಿದ್ದನ್ನ ನೆನಿಸ್ಕೊಂಡ್ರಂತು ಈಗನು ಜೀವಾ ಚಡಪಡಸ್ತದ.

ನಂಗಿನ್ನು ನೆನಪದ ನಾವು ಕಡಿ ಸಲಾ ಗೋವಾಕ್ಕ ಹೋದದ್ದು ನಾ ಪಿ.ಯು.ಸಿ ಇದ್ದಾಗ. ಆ ಸಲಾ ಹೋದಾಗ ಮನಿ ಮಾಲಕರ ಮನಿಯೊಳಗ ಹೊಸಾದೊಂದ ಮುಖಾ ಕಾಣಿಸ್ತು. ಮಾಲಕರ ಆಂಟಿ ಅಣ್ಣನ ಮಗಾ ಅನಿಲ ಕ್ರಿಸ್ ಮಸ್ ಹಬ್ಬಕ್ಕಂತ ಬಂದಿದ್ದಾ. ಮಾಲಕರ ಮಗಳು ಸುನಿತಾ ಆಂವನ್ನ ನಮಗೆಲ್ಲಾ ಪರಿಚಯ ಮಾಡಿಕೊಟ್ಲು. ಅವರಿಗೆ ಕನ್ನಡ ಬರತಿದ್ದಿಲ್ಲಾ. ನಮಗ ಕೊಂಕಣಿ ಬರತಿದ್ದಿಲ್ಲಾ. ಆದ್ರ ನಮಗ ಬರೊ ಮರಾಠಿ ಮತ್ತ ಹಿಂದಿಯೊಳಗನ ನಮ್ಮ ಸ್ನೇಹ ಬೆಳೆದಿತ್ತು. ಗೆಳೆತನಕ್ಕ ಅಥವಾ ಆತ್ಮೀಯತೆಯ ಭಾವನೆಗಳು ಬೆಳಿಲಿಕ್ಕೆ ಯಾವುದೇ ಭಾಷೆಯ ಗರಜ ಇಲ್ಲಾ ಅನ್ನೊದು ಖರೆ ಅದ.

ಅನಿಲ ಒಂದ ಇಪ್ಪತ್ತೆರಡ ವರ್ಷ ಇರಬಹುದು ಸಾದಗಪ್ಪ ಇದ್ರು ಲಕ್ಷಣ ಇದ್ದಾ. ಯಾವಾಗಲು ನಗುವ ಕಣ್ಣು. ಆಂವಾ ಕಣ್ಣುಗಳಿಂದನ ಮಾತಾಡ್ತಾನೆನೊ ಅನಿಸ್ತಿತ್ತು. ಹತ್ತನೇಯತ್ತಾ ಆದಿಂದ ಕಲಿಲಿಕ್ಕೆ ಮನಸ್ಸಿರಲಾರದ ಅಪ್ಪನ ಬೇಕರಿ ನೋಡ್ಕೊತಿದ್ದಾ. ಈ ಸಲ ಹಬ್ಬಕ್ಕ ಬಂದಿದ್ದಾ. ಯಥಾಪ್ರಕಾರ ಯಾವ ಭಾಷೆಯ ಸಂಕೋಲೆ ಇರಲಾರದ ಅವನ ಜೊತಿಗೆನೂ ನಮ್ಮ ಗೆಳೆತನಾ ಶುರುವಾತು. ಸ್ವಭಾವತಃ ಸೌಮ್ಯ ಇದ್ದ ಆಂವಗ ನಮ್ಮ ಉಡಾಳ ಕಂಪನಿ ಜೋಡಿ ಸರಿಗಟ್ಟಲಾರದ ಹೈರಾಣ ಆಗತಿದ್ದಾ. ಆದರು ನಮ್ಮ ನೆರಳಿನಂಘ ನಮ್ಮ ಜೊತಿಗೆನ ಇರತಿದ್ದಾ.

ಬರಬರತ ಅನಿಲ ನನ್ನ ಜೊತಿ ನಡಕೊಳ್ಳೊ ರೀತಿ ಬದಲಾಗಲಿಕತ್ತು. ನಾ ಎಲ್ಲೆ ಹೊದ್ರು ಆಂವನ ಕಣ್ಣು ನನ್ನ ಹಿಂಬಾಲಿಸ್ತಿದ್ವು. ಆಂವಾ ನನ್ನ ನೊಡೊ ನೋಟದೊಳಗ ಅದೇನೊ ಒಂಥರಾ ಆರಾಧನಾ ಭಾವ ಇರತಿತ್ತು. ಏನೊ ಹೇಳಲಿಕ್ಕಾಗದ ತೊಳಲಾಡತಿದ್ದಾ. ನನಗಾಗಿ ಅವನೊಳಗ ಆಗತಿರುವ ಭಾವನೆಗಳ ಕುಲುಕಾಟಗಳನ್ನ ಅರಿಯಲಾರದಷ್ಟೇನು ಮುಗ್ಧಳಿರಲಿಲ್ಲ ನಾನು. ನಂಗು ಹದಿನಾರರ ಹರೆಯ ಆವಾಗ. ಮನಸ್ಸಿನೊಳಗಿನ ಸುಪ್ತ ಬಯಕೆಗಳು ಮೂಡಿಸುವ ಕಂಪನಗಳಿಗೆ ರೂಪ ಕೊಟ್ಟು ಕನಸು ಕಾಣೊ ವಯಸ್ಸು. ಸಹಜವಾಗಿ ನಂಗ ಅನಿಲನ ನೋಟದೊಳಗಿನ ಆರಾಧನೆ, ಪ್ರೀತಿ ಮನಸಿಗೆ ಹಿತಾ ಅನಿಸ್ತಿತ್ತು. ನನ್ನ ನೋಡಿದಾಗೊಮ್ಮೆ ಆಂವ ನೋಡುವ ತುಂಟ ನೋಟಕ್ಕಾಗಿ ಕಾಯ್ತಿದ್ದೆ. ಆ ಸ್ವಲ್ಪ ದಿನಗಳೊಳಗನ ನಂಗ ಏನ ಸೇರತದ ಏನ ಇಲ್ಲಾ, ನನ್ನ ಸ್ವಭಾವ ಏನು ಅಂತ ನಂಗಿಂತಾ ಹೆಚ್ಚಾಗಿ ಆಂವಗ ಗೊತ್ತಾಗಿತ್ತು. ಆವತ್ತ ಒಂದಿನಾ ಮಾಯಮ್ ಲೇಕ್ ಗೆ ಹೋದಾಗ ಬೋಟಿಂಗ್ ಮಾಡೊವಾಗ ಎಲ್ಲಾರು ಒಂದ ಬೋಟ್ ಹತ್ತಿದ್ರು. ನಂಗ ಜಾಗಾ ಇರಲಿಲ್ಲಾ. ನಾನು ಅನಿಲ್ ಮತ್ತ ಸುನಿತಾ ಮತ್ತೊಂದ ಬೋಟ್ ನ್ಯಾಗ ಹತ್ತಿದ್ವಿ. ಸುನಿತಾಗ ಬ್ಯಾರೆ ಯಾವದು ಲಕ್ಷ ಇದ್ದಿಲ್ಲಾ. ಆಕಿ ಮಸ್ತ ಬೋಟಿಂಗ್ ಎಂಜಾಯ್ ಮಾಡ್ಲಿಕತ್ತಿದ್ಲು. ಆವತ್ತ ಅನಿಲ ಮುಖದೊಳಗಿನ ಖುಷಿ ನೋಡಿ ನಂಗ ಆಶ್ಚರ್ಯ ಆಗಿತ್ತು. ಮೊದಲ ಡಿಸೆಂಬರ್ ತಿಂಗಳಾ, ಸಂಜೆಯ ಎಳೆಬಿಸಲು, ಚುಮು ಚುಮು ಛಳಿಯ ಸುಳಿಗಾಳಿ, ಸುತ್ತಲ ಹಸುರಿನ ರಕ್ಷಾಕೋಟೆಯೊಳಗ ಬೆಚ್ಚಗ ಅಡಗಿಕೊಂಡ ಕೂತಿರೊ ಸುಂದರ ಸರೋವರ, ಮ್ಯಾಲಾಗಿ ಬೆಚ್ಚನೆಯ ಆಸೆಗಳ ಹೊತ್ತ ಹದಿಹರೆಯದ ಹುಚ್ಚು ಮನಸ್ಸು. ಅನಿಲನ ಸಾಮಿಪ್ಯ ನಂಗೂ ಖುಷಿ ಅನಿಸಿತ್ತು. ಆವತ್ತ ಆಂವಾ ಬೋಟಿಂಗ್ ಮುಗಿಯೊ ತನಕಾನು ಇನ್ನೆಂದು ನಾನು ಸಿಗೊದೆಯಿಲ್ಲೇನೊ ಅನ್ನೊವರಹಂಗ ಕಣ್ತುಂಬ ತುಂಬಿಕೊಳ್ಳೊಹಂಗ ನೋಡಿದ್ದಾ. ತನ್ನ ಕಣ್ಣನೋಟದಿಂದನ ನನ್ನ ಇಡಿಯಾಗಿ ಮುದ್ದಿಸಿದ್ದಾ. ಆವತ್ತ ಆಂವನ ನೋಟವನ್ನ ಎದುರಿಸಲಿಕ್ಕೂ ಆಗದ ತಪ್ಪಿಸಿಕೊಳ್ಳಿಕ್ಕೂ ಆಗಲಾರದ  ಒದ್ದಾಡಿದ್ದೆ. ಬೋಟಿಂಗ್ ಮುಗಿಸಿ ಗಾರ್ಡನ್ ನ್ಯಾಗ ಬಂದುಕೂತಾಗ ನಂಗಾಗಿ ನಂಗ ಭಾಳ ಇಷ್ಟ ಆಗೊ ಸ್ಟ್ರಾಬೇರ್ರಿ ಐಸ್ ಕ್ರೀಮ್ ತಂದುಕೊಟ್ಟಾಗ ಆಂವಗ ನನ್ನ ಇಷ್ಟಾನಿಷ್ಟಗಳ ಬಗ್ಗೆ ಇದ್ದ ಕಾಳಜಿ ನೋಡಿ ಮನಸ್ಸತುಂಬಿ ಬಂದಿತ್ತು. ಹಿಂಗ ಯಾವಾಗಲೂ ಮೌನವಾಗಿ ನನ್ನ ಸುತ್ತ ಸುತ್ತಾಡಕೊತ ನಂಗ ಗೊತ್ತಾಗಧಂಗ ತಿಳಿಮನಸ್ಸಿನ ಕೊಳದೊಳಗ ಆಸೆಯ ಅಲೆಗಳು ಹೃದಯಕ್ಕ ಅಪ್ಪಳಿಸೊ ಹಂಗ ಮಾಡತಿದ್ದಾ. ಆದ್ರ ಆಂವಾ ಒಮ್ಮೆನು ತನ್ನ ಮನಸ್ಸಿನ ಮಾತುಗಳನ್ನ ನಂಗ ಹೇಳಲೇಯಿಲ್ಲಾ. ನಮ್ಮ ರಜಾ ಮುಗಿಲಿಕ್ಕೆ ಬಂದಿದ್ವು. ಮರುದಿನಾ ನಾವು ವಾಪಸ ಊರಿಗೆ ಹೋಗೊವರಿದ್ವಿ. ಮುಂಝಾನೆ ಲಗು ಹೋಗಬೇಕಾಗಿತ್ತು. ಅದಕ್ಕ ರಾತ್ರಿ ಊಟಾ ಆದಮ್ಯಾಲೆ ಸುನಿತಾನ್ನ ಮಾತಾಡಸಬೇಕಂತ ಅವರ ಮನಿಗೆ ಹೋಗಿದ್ದೆ. ಅನಿಲ ಅಲ್ಲೆ ಟಿವ್ಹಿ ನೋಡಕೊತ ಕೂತಿದ್ದಾ. ಅಂವನ ಮುಖಾ ಸಪ್ಪಗಿತ್ತು. ಆವತ್ತ ಈಡಿ ದಿನಾ ಆಂವಾ ನನ್ನ ಕಣ್ಣ ತಪ್ಪಿಸಿ ಅಡ್ಡ್ಯಾಡಿದ್ದಾ. ನನಗೂ ಏನೊ ಕಳಕೊಳ್ಳಿಕತ್ತೇನೆನೊ ಅನ್ನೊ ತಳಮಳ ಶುರುವಾಗಿತ್ತು. ಇಷ್ಟುದಿನದ ಆಂವನ ಒಡನಾಟದಿಂದ ಎನೋ ಒಂದು ಸಿಹಿ ಸಂಬಂಧದ ಎಳಿ ನಮ್ಮಿಬ್ಬಿರನ್ನ ಕಟ್ಟಿ ಹಾಕಿತ್ತು. ಆ ಎಳಿ ಸಣ್ಣಾಗಿ ಕಟಗರಿಸಲಿಕತ್ತದ ಅನಿಸಿ, ಯಾವದೊ ಒಂದು ಅವ್ಯಕ್ತ ನೋವಿನ ಅನುಭವ ಆಗಲಿಕತ್ತಿತ್ತು. ಭಾಳ ಮಾಡಿ ಆಂವಗು ಹಿಂಗ ಅನಸಿರಬೇಕು ಅದಕ್ಕ ನನ್ನ ಕಣ್ಣ ತಪ್ಪಿಸಿ ಅಡ್ಡ್ಯಾಡಲಿಕತ್ತಿದ್ದಾ. ಸುನಿತಾನ ಜೊತಿ ಮಾತಾಡಕೋತ ಕೂತಾಗ ಆಂವಾ ತನ್ನಷ್ಟಕ್ಕ ತಾನ “ಚಾಂದನಿ ಚಾಂದ ಸೆ ಹೊತಿ ಹೈ, ಸಿತಾರೊಸೆ ನಹಿ.. ಪ್ಯಾರ ಏಕ ಸೆ ಹೊತಿ ಹೈ ಹಜಾರೊ ಸೆ ನಹಿ”…” ಅಂತ ಶಾಯರಿ ಹೇಳಲಿಕತ್ತಿದ್ದಾ. ನಾ ಹೊಳ್ಳಿ ಆಂವನ ಕಡೆ ನೋಡಿದೆ. ನನ್ನನ್ನೆ ನೋಡಲಿಕತ್ತ ಆಂವನ ನೋಟದೊಳಗ “ನನ್ನ ಬಿಟ್ಟು ಹೋಗಬ್ಯಾಡಾ“ ಅನ್ನೊ ನಿವೇದನೆ ಇತ್ತು. ನಂಗ್ಯಾಕೊ ಅಳು ತಡಲಿಕ್ಕಾಗಲಿಲ್ಲಾ ನಾ ಓಡಿ ಮನಿಗೆ ಬಂದೆ. ಮ್ಯಾಲೆ ಆಂಟಿ “ಮುಂಝಾನಿಂದ ನೀ ಏನು ತಿಂದಿಲ್ಲಾ, ಏನ ಆಗೇದ ನಿಂಗ“ ಅಂತ ಅನಿಲನ್ನ ಬೈಲಿಕತ್ತಿದ್ದು ಕೇಳಿಸ್ತು.

ಹೊತ್ತು ಯಾರ ಸಲುವಾಗಿನು ನಿಲ್ಲುದಿಲ್ಲಾ. ರಾತ್ರಿ ಸರದು ಬೆಳಕಾಗೆ ಬಿಡ್ತು. ಬೆಳಿಗ್ಗೆ ಆರು ಗಂಟೆ ಅಂದ್ರ ನಾವು ಬಸ್ ಸ್ಟ್ಯಾಂಡನ್ಯಾಗ ಇದ್ವಿ. ಪ್ರತಿ ಸಲಾ ಊರಿಗೆ ಹೋಗಬೇಕಾದ್ರ ಯಾವ ಭಾವನೆಗಳು ಇರ್ತಿದ್ದಿಲ್ಲಾ. ಆದರ ಈ ಸಲಾ ಮನಸ್ಸು ಭಾರ ಆಗಿತ್ತು. ಒಂದೊಂದ ಸಲಾ ಅನಿಸ್ತದ ಬಾಲ್ಯ ಎಷ್ಟ ಛಂದ ಇರ್ತದ. ಯಾವ ಚಿಂತಿ ಇರುದಿಲ್ಲಾ. ಮನಸಿನ ಬಯಕೆಗಳು, ನೋವುಗಳು, ಯಾವದನ್ನು ಪಡಕೊಳ್ಳೊ ಖುಷಿ, ಕಳಕೊಳ್ಳೊ ನೋವು ಇರುದಿಲ್ಲಾ. ಸ್ವಚ್ಛ ಮನಸ್ಸಿರ್ತದ. ಆದ್ರ ಈ ಹುಚ್ಚು ಹರೆಯ ಹಿಂಗ್ಯಾಕ ಕಾಡ್ತದ ಅಂತ ಗೊತ್ತಾಗುದಿಲ್ಲಾ. ಮುಂಝಾನೆ ಆರು ಗಂಟೆ ಹೊತ್ತು ಇನ್ನು ಛಂದಾಗಿ ಬೆಳಕಾಗಿದ್ದಲ್ಲಾ ಎಲ್ಲಾ ಕಡೆ ಮಂಜು ತುಂಬಿತ್ತು. ಬಸ್ ಸ್ಟ್ಯಾಂಡ್ ಎದುರಿಗಿನ ಗ್ರೌಂಡ ಹತ್ರ ಸೈಕಲ್ ಮ್ಯಾಲೆ ಯಾರೊ ನಿಂತಿದ್ರು. ದಿಟ್ಟಿಸಿ ನೋಡಿದ್ರ ಅದು ಅನಿಲ ಆಗಿದ್ದಾ. ಅಷ್ಟರಾಗ ಬಸ್ ಬಂದಬಿಡ್ತು. ಸುತ್ತಲು ಇಬ್ಬನಿ ಇದ್ದದ್ದರಿಂದ ಆಂವನ ಮುಖಾ ಸುದ್ಧಾ ಛಂದಾಗಿ ಕಾಣಲಿಲ್ಲ. ಯಾಕೊ ಅವನಿಂದ ದೂರಾ ಆದಾಗ ಭಾಳ ನೋವಾತು. ಆವಾಗ ನಂಗೇನ ಗೊತ್ತಿತ್ತು ನಾ ಆಂವನ್ನ ನೋಡೊದು ಇದ ಕಡಿ ಸಲಾ ಅಂತ. ಹೌದು ಆಮೇಲೆ 4 ತಿಂಗಳದಾಗ ನಮ್ಮ ಮಾಮಾ ವಾಪಸ ಕರ್ನಾಟಕಕ್ಕ ಟ್ರಾನ್ಸಫರ್ ಮಾಡಿಸ್ಕೊಂಡ ಬಂದಾ. ಮುಂದ ಸ್ವಲ್ಪ ದಿವಸದ ತನಕಾ ಸುರೇಖಾ ಆಂಟಿ ಪತ್ರ ಬರಿತಿದ್ರು ಅಲ್ಲಿಯ ಸುದ್ದಿ ಚೂರು ಪಾರು ಗೊತ್ತಾಗತಿತ್ತು. ಹಿಂಗ ಒಂದ ಸಲಾ ಸುನಿತಾ ನ ಪತ್ರದಿಂದ ಗೊತ್ತಾತು ಅನಿಲಗ ಮದವಿ ಮಾಡೊ ಪ್ರಯತ್ನ ಮಾಡಲಿಕತ್ತಾರಂತ. ಆದರ ಆಂವಾ ಯಾವ ಹುಡಗಿನ್ನ ನೋಡಿದ್ರು ಒಲ್ಲೇ ಅನಲಿಕತ್ತಾನಂತ.

ಹವರಗ ಬರಬರತ ಪತ್ರ ವ್ಯವಹಾರಗೊಳು ನಿಂತ್ವು. ಸುರೇಖಾ ಆಂಟಿಯವರಗು ಟ್ರಾನ್ಸಫರ್ ಆಗಿತ್ತು ಅವರು ಮುಂಬೈಕ್ಕ ಹೋಗಿದ್ರು. ಹಿಂಗಾಗಿ ಗೋವಾದ್ದ ನೆನಪುಗಳು ದೂರ ಆಕ್ಕೊತ ಹೊದ್ವು. ಅದ್ರ ಇಷ್ಟ ದಿನದ್ದ ಮ್ಯಾಲೆ ಮತ್ತ ಆ ಹೂ ನೆನಪುಗಳು ಅರಳಿ ಸುವಾಸನಿ ಹರಡಲಿಕತ್ತಿದ್ವು.

ಒಂದು ಸುಂದರ ಮುಂಝಾನೆ ನಾವೆಲ್ಲಾ ಸಹಕುಟುಂಬ ಸಹಪರಿವಾರ ಗೋವಾಕ್ಕ ಪ್ರಯಾಣ ಬೆಳಿಸಿದ್ವಿ. ಇಡಿ ಗೋವಾ ಕ್ರಿಸ್ ಮಸ್ ಹಬ್ಬದ ಸಂಭ್ರಮದೊಳಗಿತ್ತು. ಇಡಿ ಊರು ಬಣ್ಣದ ಲೈಟಿನಿಂದ, ರಸ್ತೆಯ ತುಂಬ ಕಟ್ಟಿದ್ದ ಪ್ರಕಾಶಮಾನವಾದ ಕೃತಕ ನಕ್ಷತ್ರಗಳಿಂದ ಹೋಳಿಲಿಕತ್ತಿದ್ವು. ‘ಮಾಫ್ಸಾ’ ಬೀಚ್ ಗೆ ಮಕ್ಕಳನ್ನ ಕರಕೊಂಡ ಹೋಗಿದ್ವಿ. ಅದರ ಹತ್ರ ಒಂದು ‘ರಾಣಿ ಕ್ರೀಮ್ ಲ್ಯಾಂಡ್’ ಅಂತ ಒಂದು ಐಸ್ ಕ್ರೀಮ್ ಪಾರ್ಲರ್ ಇತ್ತು. ನನ್ನ ಮಗಾ ಅಮ್ಮಾ ನಿನ್ನ ಹೆಸರಿನ ಐಸ್ ಕ್ರೀಮ್ ಅಂಗಡಿ ಅದ ಹೋಗೊಣ ಅಂತ ಮಸ್ಕಾ ಹೋಡಿಲಿಕತ್ತಾ. ಒಳಗ ಹೋದ್ವಿ. ಒಬ್ಬ ವೇಟರ್ ಬಂದು ಏನ ಬೇಕು ಅಂತ ಕೇಳಿದ್ದಕ್ಕ ನಮ್ಮವರು ನಿಮ್ಮಲ್ಲಿ ಏನ ಸ್ಪೇಷಲ್ ಅದ ಅದನ್ನ ಕೊಡು ಅಂದಿದ್ದಕ್ಕ ಆಂವಾ “ರಾಣಿ ಕ್ರೀಮ್ ಲ್ಯಾಂಡ್’’ ನ್ಯಾಗ ಸ್ಟ್ರಾಬೇರ್ರಿ ಸ್ಪೇಷಲ್ ಅದ ಅಂದಾ. ಆತು ಅದನ್ನ ಆರ್ಡರ್ ಮಾಡಿ ಕೂತಿದ್ವಿ.  ಮುಂದ ಹತ್ತು ನಿಮಿಷನ್ಯಾಗ ಸ್ಟ್ರಾಬೇರ್ರಿ ಸ್ಪೇಷಲ್ ನಮ್ಮ ಮುಂದ ಇತ್ತು. ಅದನ್ನ ತಂದು ಇಟ್ಟಂವನ ಎಲ್ಲೊ ನೋಡಿದ್ದ ನೆನಪು. ಒಂದ ಘಳಿಗಿ ನನ್ನ ಉಸಿರನ ನಿಂಥಂಗಾತು. ಹೌದು ಆಂವಾ ಅನೀಲ. ಸ್ವಲ್ಪ ದಪ್ಪ ಆಗಿದ್ದಾ. ಮಾತಾಡಿಸಿದೆ. ನಮ್ಮವರಿಗೆ ಪರಿಚಯನು ಮಾಡಿಸಿಕೊಟ್ಟೆ. ಸುನಿತಾನ ಮದವಿ ಆಗಿದ್ದು. ಮಾಲಕರ ಆಂಟಿ ತಿರಿಕೊಂಡಿದ್ದು ಎಲ್ಲಾ ಹೇಳಿದಾ. ಆಂವಾ ಮದವಿ ಮಾಡಿಕೊಂಡಿಲ್ಲಾ ಅಂತನು ಗೊತ್ತಾತು. ಯಾಕ ಅಂತ ಕೇಳಿದೆ. ಮತ್ತ ಅದೇ “ಪ್ಯಾರ ಏಕಸೆ ಹೊತಾ ಹೈ, ಹಜಾರೊಂಸೆ ನಹಿ” ಅಂತ ಶಾಯರಿ ಹೇಳಿದಾ. "ಜಿನೆ ಕೆಲಿಯೇ ಉಸಕಾ ಇಸ್ ಜಹಾಂ ಮೇ ಹೊನೆಕಿ ಎಕ್ ಎಹಸಾಸ್ ಹಿ ಕಾಫಿ ಹೈ… ಮುಝೆ ಕುಛ ನಹಿ ಚಾಹಿಯೇ, ಮೈ ಖುಷ ಹೂಂ…" ಅಂದಾ. ಅದೇ ಪ್ರೀತಿ ತುಂಬಿದ ಆರಾಧನೆಯ ನೋಟಾ. ನನಗ ಏನ ಹೇಳಬೇಕೊ ಗೊತ್ತಾಗಲಿಲ್ಲಾ. ಆಂವಾ ಪ್ರೀತಿಯಿಂದ ತಂದುಕೊಟ್ಟ  ಸ್ಟ್ರಾಬೇರ್ರಿ ತಿಂದು ಮುಗಸಿ ಹೊಗಬೇಕಾದ್ರ ನನ್ನ ಕಣ್ಣು ಆಂವನ್ನ ಹುಡುಕಿದ್ವು. ಆದ್ರ ಆಂವಾ ನಂಗ ಕಾಣಲೇಯಿಲ್ಲಾ.  ಅನಿಲ ನನ್ನ ಪಾಲಿಗೆ ವಯಸ್ಸಿನ ಆಕರ್ಷಣೆಯಾಗಿದ್ದ ಅಷ್ಟೆ. ಆದರ ಆಂವಾ  ಮಾತ್ರ ತನ್ನ ತಾನು ನನಗ ಅರ್ಪಣೆ ಮಾಡಿಕೊಂಡಿದ್ದಾ. ಇದೆಂಥಾ ಪ್ರೀತಿ. ನಾವು ಯಾರನ್ನ ಪ್ರೀತಿ ಮಾಡತೇವೊ ಅವರು ನಮ್ಮವರಲ್ಲಾ, ನಮಗ ಸಿಗೂದಿಲ್ಲಾ ಅಂತ ಗೊತ್ತಿದ್ರು. ಮನಸ್ಸಿನ ತುಂಬ ಅವರಿಗಾಗಿ ಪ್ರೀತಿನ ತುಂಬಿಕೊಂಡು ಅವರ ಜೊತಿಗಿನ ಸಿಹಿ ಕ್ಷಣಗಳ ನೆನಪೊಳಗ ಜೀವನಪೂರ್ತಿ ಕಳೆಯೊದು ಹೆಂಗ ಸಾಧ್ಯ. ಇದು  ಮೋಹವನ್ನ ಮೀರಿ ಬಂದ ಯೋಗಿಗಳಿಗೆ ಮಾತ್ರ ಸಾಧ್ಯ. ಅನಿಲ ನನ್ನ ಕಣ್ಣಿಗೆ ಅಂಥಾ ಒಬ್ಬ ಪ್ರೇಮ ಯೋಗಿಯಂಘ ಕಂಡಾ.

ಅರ್ಧಾ ತಾಸಿನ ಈ ನಮ್ಮ ಭೇಟಿಯ ಋಣಾ ಇನ್ನು ಬಾಕಿ ಇತ್ತು ಅನಿಸ್ತದ. ಅದಕ್ಕ ವಿಧಿ  ಮತ್ತ ನಮ್ಮನ್ನ ಒಬ್ಬರಿಗೊಬ್ಬರ ಮುಂದ ತಂದು ನಿಂದರಿಸಿತ್ತು.  ಜೀವನದಾಗ ನಾ ಅನಿಲನ್ನ ಮತ್ತೊಮ್ಮೆ ನೋಡತೇನಿ ಅಂತ ನಂಗೆಂದು ಅನಿಸಿರಲಿಲ್ಲಾ. ಈ ವಿಧಿನು ವಿಚಿತ್ರ ಇರತದ ನಾವು ನೆನಪಿಡಬೇಕಾದ ಹೊತ್ತಿನ್ಯಾಗ ನಮ್ಮ ಮನಸ್ಸಿಗೆ ಮಂಕುಬಡಿಸಿ ಎಲ್ಲಾ ಮರೆಯೊಹಂಗ ಮಾಡಿಬಿಡತದ. ಯಾವ ಕ್ಷಣಗಳೊಳಗ ಎಲ್ಲಾನು  ಮರೆತು ಇರೊದನ ಛೊಲೊ ಇರತದೊ ಅವಾಗ ಸೂತ್ತ ಕಟ್ಟಿದ ಮಬ್ಬಹರಿಸಿ ನಿಚ್ಚಳಾಗೊ ಹಂಗ ಮಾಡಿ ಚಡಪಡಿಸೊ ಹಂಗ ಮಾಡತದ. ಈ ಸಲದ ಭೇಟಿ ಖರೇನು ಕಡೆಯದು ಅನಿಸ್ತು. ಯಾಕಂದ್ರ ಇನ್ನ ಮುಂದ ಆಂವಾ ನನ್ನ ನೋಡಿದ್ರು ನನ್ನ ಎದುರಿಗೆ ಬರುದಿಲ್ಲಾ ಅಂತ ಗೊತ್ತಾಗಿತ್ತು ನಂಗ. ಕಡಿಕೂ ಆಂವಾ ತನ್ನ ಮನಸ್ಸಿನ ಭಾವನೆಗಳನ್ನ ನನ್ನ ಮುಂದ ಹೇಳಲೆಯಿಲ್ಲಾ. ಹುಚ್ಚು ಮನಸ್ಸು ಇನ್ನೊಮ್ಮೆ ಆಂವನ್ನ ನೋಡಿ ಮಾತಾಡಬೇಕನಿಸ್ತಿತ್ತು. ಆದ್ರ ಆಂವಾ ಕಣ್ಣಂಚಿನಲ್ಲೆ ಮಾತಾಡಿ. ಕಣ್ಣಂಚಿನಿಂದನ ಪ್ರೀತಿ ಮಾಡಿ, ಕಣ್ಣಳತಿಯಿಂದ ಮರೆಯಾಗಿ ಹೋಗಿದ್ದಾ.


ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಕಣ್ಣಂಚಿನ ಪ್ರೀತಿ:ಸುಮನ್ ದೇಸಾಯಿ ಅಂಕಣದಲ್ಲಿ ಕತೆ

  1.   ಬಾಳ ಚಂದದರಿ, ನಮ್ಮೂರು ರೇಖಾ ಕಾಖಂಡಕಿಯವರು ಕಾದಂಬರಿ ತುಣು,ಕು ಓದಿದ್ದಂಗಾತು.

Leave a Reply

Your email address will not be published. Required fields are marked *