ಕಡ್ಲೆಕಾಳು ಗಣೇಶನಿಗೆ ಜೈ ಎನ್ನುತ್ತಾ: ಪ್ರಶಸ್ತಿ

ಏಕಶಿಲಾ ನಂದಿಯ ಬಳಿಯಿದ್ದ ಸೈಕಲ್ ಪಡೆದ ನಾವು ಹಂಪಿಬಜಾರಿನ ಮೂಲಕ ಹಂಪಿ ಬಸ್ಟಾಂಡವರೆಗೆ ಬಂದೆವು. ಇಲ್ಲೇ ಹತ್ತಿರದಲ್ಲಿರೋದ್ರಿಂದ ಕಡ್ಲೆಕಾಳು ಗಣೇಶ ಮತ್ತು ಹೇಮಕೂಟದಲ್ಲಿರೋ ದೇಗುಲಗಳನ್ನು ನೋಡೋಣ ಅಂತ ಸೈಕಲ್ ಅತ್ತ ತಿರುಗಿಸಿದೆವು. ಘಂಟೆ ನಾಲ್ಕಾಗುತ್ತಾ ಬಂದಿದ್ದರೂ ಮಧ್ಯಾಹ್ನದ ಊಟ ಮಾಡಿಲ್ಲವೆಂಬ ಚಿಂತೆ ಕಾಡುತ್ತಿರಲಿಲ್ಲ. ಬಾಡಿಗೆ ಸೈಕಲ್ ತಗೊಂಡಿದ್ರೂ ನಡೆದಾಟದಲ್ಲೇ ಅರ್ಧದಿನ ಕಳೆದಾಗಿದೆ. ಮುಂದಿನ ಸ್ಥಳಗಳನ್ನಾದರೂ ಸೈಕಲ್ಲಲ್ಲಿ ನೋಡಬೇಕೆಂಬ ಬಯಕೆ ಆಲೋಚನೆ ಮೂಡುತ್ತಿತ್ತು. ಆ ಆಲೋಚನೆಯಲ್ಲೇ ಕಡ್ಲೆಕಾಳು ಗಣೇಶ ದೇವಸ್ಥಾನಕ್ಕೆ ಸಾರೋ ಏರುಹಾದಿಯಲ್ಲಿ ಸೈಕಲ್ ಓಡಿಸಿದೆವು. ಸೈಕಲ್ಲಿನ ಬಂಪರ್ ಇಂದ ಇಳಿಯದೇ ಏರನ್ನು ಹತ್ತಿಸೋಕೆ ಸ್ವಲ್ಪ ಶಕ್ತಿ ಬೇಕು. ಸೈಕಲ್ ತುಳಿದು ಅಭ್ಯಾಸವೂ ಇರಬೇಕು. ಹೈಸ್ಕೂಲ್ ದಿನಗಳಲ್ಲಿ ನಮ್ಮೂರಿಂದ ಕೆಳದಿಗೆ ಸಾಗೋ ಹಾದಿಯಲ್ಲಿನ ಸುಮಾರು ಅರ್ಧ ಕಿ.ಮೀ ಏರನ್ನ, ಹೈಸ್ಕೂಲಿಗೆ ಸಾಗುವಾಗ ಸಿಗೋ ಎ.ಪಿ.ಎಂ.ಸಿ ಏರು, ಸೊರಬ ರಸ್ತೆಯ ಸಿದ್ದೇಶ್ವರ ಶಾಲೆಯ ಪಕ್ಕದಿಂದ ಬಂದು ಶಿವಮೊಗ್ಗ ರಸ್ತೆಗೆ ಸೇರೋ ರಸ್ತೆಯ ಕೊನೆಯಲ್ಲಿ ಇಂಡಸ್ಟ್ರಿಯಲ್ ಎಸ್ಟೇಟ್ನ ಏರನ್ನ ಬಂಪರಿಂದ ಇಳಿಯದೇ ಹತ್ತಿಸುತ್ತಿದ್ದರೂ ವರ್ಷಗಳಿಂದ ಸೈಕಲ್ಲೇ ತುಳಿಯದೇ ಅಭ್ಯಾಸ ಬಿಟ್ಟು ಹೋದ ಕಾರಣ ಈ ಏರು ಸ್ವಲ್ಪ ತ್ರಾಸ್ ಕೊಟ್ಟಿದ್ದು ನಿಜ ! ಆ ದಿನಗಳ ನೆನಪು ಹಸಿರಾಗಿಸಿದ್ದೂ ನಿಜ.

ಹೇಮಕೂಟ: 
ವಿರೂಪಾಕ್ಷ ದೇಗುಲಕ್ಕೆ ಸಾಗೋ ಮೊದಲು ಸಿಗೋ ಬೆಟ್ಟವೇ ಹೇಮಕೂಟ. ಕಡಲೇಕಾಳು ಗಣೇಶ, ಸಾಸಿವೇಕಾಳು ಗಣೇಶ, ಪ್ರಸನ್ನ ಆಂಜನೇಯ ಮೊದಲಾದ ೩೩ ದೇಗುಲಗಳಿವೆಯಿಲ್ಲಿ. ಒಂಭತ್ತನೇ ಶತಮಾನದಿಂದ ೧೪ನೇ ಶತಮಾನದ ಆದಿಯವರೆಗೆ ನಿರ್ಮಾಣವಾದ ಇಲ್ಲಿನ ದೇಗುಲಗಳ ಮಧ್ಯೆ ಸೂರ್ಯಾಸ್ತ ವೀಕ್ಷಣಾ ಸ್ಥಾನವೂ ಇದೆ. 

ಕಡಲೇಕಾಳು ಗಣೇಶ:
ಹೇಮಕೂಟದಲ್ಲಿರೋ ಮೂವತ್ಮೂರು ದೇಗುಲಗಳಲ್ಲಿ ಮೊದಲನೆಯದು ಕಡಲೇಕಾಳು ಗಣೇಶ ದೇವಸ್ಥಾನ.ಗಣಪನ ಹೊಟ್ಟೆ ಕಡಲೇಕಾಳಿನ ಆಕಾರದಲ್ಲಿದೆ ಎಂಬ ಕಾರಣಕ್ಕೆ ಆ ಹೆಸರಂತೆ. ಹದಿನೈದನೇ ಶತಮಾನದಲ್ಲಿ ನಿರ್ಮಾಣವಾದ ಈ ದೇಗುಲದ ಗರ್ಭಗೃಹದಲ್ಲಿ ಚತುರ್ಭುಜನಾದ ಗಣಪನಿದ್ದರೆ ಹೊರಾಂಗಣದಲ್ಲಿ ದೇವಾನುದೇವತೆಗಳ ಕೆತ್ತನೆಗಳಿವೆ .

ಸಾಸಿವೇಕಾಳು ಗಣೇಶ:
ಆ ದೇಗುಲವನ್ನು ನೋಡಿ ವಾಪಾಸ್ ಬಂದರೆ ಸಿಗುವುದೇ ಸಾಸಿವೇಕಾಳು ಗಣೇಶ. ಇದಕ್ಕೆ ಯಾಕೆ ಈ ಹೆಸರಂತ ನೀವು ಈಗಾಗಲೇ ಊಹಿಸಿರುತ್ತೀರಿ 🙂 ಈ ಗಣಪನಿಗೆ ತನ್ನದೇ ಆದ ಗುಡಿಯಿರದಿದ್ದರೂ ಅವನನ್ನು ಗಾಳಿ ಮಳೆಗಳಿಂದ ರಕ್ಷಿಸಲೋಸುಗವೇ ಒಂದು ಮಂಟಪವಿದೆ. ಗಣಪನ ಬಳಿ ಹೋಗಿ ಅದನ್ನ ಮುಟ್ಟಿ ಹಾಳು ಮಾಡದಂತೆ ಈಗ ಬೇಲಿಯೊಂದನ್ನು ಹಾಕಲಾಗಿದೆ. ಈ ಗಣಪನನ್ನು ಹಿಂಭಾಗದಿಂದ ನೋಡಿದಾಗ ದೇವಿ ಪಾರ್ವತಿಯ ರೂಪ ಕಾಣುವಂತೆ ಕೆತ್ತಿರುವುದು ಶಿಲ್ಪಿಯ ಕೈಚಳಕ. 

ಇದನ್ನು ನೋಡೋ ಹತ್ತಿಗೆ ನಾಲ್ಕೂವರೆಯಾಗುತ್ತಾ ಬಂದಿತ್ತು. ಯಾವುದಾದರೂ ದೂರದ ಸ್ಥಳವ ನೊಡಲೇಬೇಕಯ್ಯಾ ಅಂತ ಹಜಾರರಾಮ ದೇವಸ್ಥಾನದತ್ತ ಸೈಕಲ್ ತುಳಿದೆವು. ಆ ದಾರಿಯಲ್ಲಿ ಮೊದಲು ಸಿಕ್ಕಿದ್ದು ಅಂತಃಪುರ ಆವರಣ

ಅಂತಃಪುರ ಆವರಣ/zanana enclosure
ಪಂಚಕೋನಾಕೃತಿಯ ಆವರಣದಲ್ಲಿರೋ ಅಂತಃಪುರ(ದ ಅವಶೇಷಗಳು) ಕೋಟೆಯ ಉತ್ತರಭಾಗದಲ್ಲಿತ್ತು ಎನ್ನುತ್ತೆ ಇತಿಹಾಸ. ಇಲ್ಲಿಂದ ಶುರುವಾಗೋ ಕಟ್ಟಡಗಳಲ್ಲಿ ರಾಣಿ ಅರಮನೆಯ ಅಧಿಷ್ಠಾನ(basement), ಜಲಮಹಲ್ , ಎರಡಂಸ್ತಿನ ಗಗನಮಹಲ್, ರಾಣಿಯರ ಸ್ನಾನದ ಕೊಠಡಿ ಮುಂತಾದ ರಚನೆಗಳಿವೆ.ಇಲ್ಲಿಂದ ಮುಂದೆ ಸಾಗುತ್ತಿದ್ದಂತೆ ಖಜಾನೆ, ಟಂಕಸಾಲೆ ಮುಂತಾದ ಬೋರ್ಡುಗಳು ಕಾಣುತ್ತೆ. ಅಲ್ಲಲ್ಲಿ ನಿಂತು ಒಂದಿಷ್ಟು ಅಡ್ಡಾಡಿದರೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರೋ ಕಲ್ಲುಗಳು ಗತವೈಭವ ಸಾರಿದಂತೆ ಭಾಸವಾಗುತ್ತೆ. 

ರಾಣಿ ಅರಮನೆಯ ಅಧಿಷ್ಠಾನ:
ಇದ್ದಿರಬಹುದಾದ ರಾಣಿ ಅರಮನೆಯ ಕುರುಹಾಗಿ ಈಗ ಉಳಿದಿರುವುದು ಅದರ ಅಧಿಷ್ಠಾನವಷ್ಟೇ.ಇದರಲ್ಲಿ ಅಂತಹ ಕುಸುರಿ ಕೆಲಸಗಳು ಕಾಣದಿದ್ದರೂ ಒಳಗಿದ್ದ ಅರಮನೆಯ ಆಕಾರವನ್ನು ತೋರುತ್ತದೆ.

ಗಗನಮಹಲ್:
ರಾಣಿ ಅರಮನೆಯ ಅಧಿಷ್ಠಾನವನ್ನು ದಾಟಿ ಮುಂದೆ ಬಂದಾಗ ಸಿಗೋದೇ ಗಗನಮಹಲ್. ಇಂಡೋ ಇಸ್ಲಾಮಿಕ್ ಶೈಲಿಯ ಈ ಕಟ್ಟಡದ ಕಮಾನುಗಳು ಕಮಲದ ಪಕಳೆಗಳಂತೆ ಇರೋದರಿಂದ ಇದ್ರ ಹೆಸರು ಕಮಲಮಹಲ್ ಅಂತೇ ನನ್ನ ಬಾಯಿಗೆ ಬರೋದು. ಆಮೇಲೆ, ಇದು ಕಮಲವಲ್ಲ, ಗಗನಮಹಲ್ ಅಂತ ಸಾವರಿಸಿಕೊಳ್ಳೋ ಪ್ರಮೇಯ. 

ಗಜಶಾಲೆ:
ಅಲ್ಲಿಂದ ಹಾಗೇ ಮುಂದೆ ಬಂದರೆ ಸಿಗೋದೇ ಗಜಶಾಲೆ. ಹನ್ನೊಂದು ಗುಮ್ಮಟಗಳುಳ್ಳ ಇಂಡೋ ಇಸ್ಲಾಮಿಕ್ ಶೈಲಿಯ ಈ ಕಟ್ಟಡಗಳಲ್ಲಿ ಉನ್ನತವಾದ ಕಮಾನುಗಳ್ಳ್ಳ ದ್ವಾರಗಳಿವೆ. ವಿಜಯನಗರ ಸಾಮ್ರಾಜ್ಯ ಅಂದ್ರೆ ಅದರ ಸೈನ್ಯವೂ ದೊಡ್ಡದಿತ್ತೆಂದು ಓದಿರುತ್ತೇವೆ. ಅಷ್ಟು ದೊಡ್ಡ ಸೇನೆಯ ಆನೆಗಳಿವೆ ಬರೀ ಹನ್ನೊಂದು ಆನೆಗಳ ಕಟ್ಟುವಷ್ಟು ದೊಡ್ಡದ ಶಾಲೆ ಸಾಕಾ ಎನ್ನುವ ಅನುಮಾನ ಯಾರಿಗಾದರೂ ಬಾರದಿರದು. ಆದರೆ ಇಲ್ಲಿ ಅರಮನೆಯ ಪಟ್ಟದ ಆನೆಗಳನ್ನು ಮಾತ್ರ ಕಟ್ಟಲಾಗುತ್ತಿತ್ತು. ಉಳಿದವುಗಳನ್ನ ಬೇರೆಡೆ ಕಟ್ಟಲಾಗುತ್ತಿತ್ತು ಎನ್ನುವುದು ಹಲವರ ಅಭಿಪ್ರಾಯ. ಇಲ್ಲಿನ ಸುತ್ತಲಿನ ಕೆತ್ತನೆಗಳಲ್ಲಿ ಚೀನೀ/ಮಂಗೋಲಿಯನ್ ಮನುಷ್ಯರಿಬ್ಬರು ಆಯುಧಗಳೊಂದಿಗೆ ಸೆಣೆಸುತ್ತಿರುವ ಕೆತ್ತನೆಯಿದೆ. ಇಲ್ಲಿ ಯೋಧರ ಶಸ್ತ್ರಾಭ್ಯಾಸ ನಡೆಯುತ್ತಿತ್ತು, ಯೋಧರಿಗೆ ತರಬೇತಿ ನೀಡಲು ವಿದೇಶಗಳಿಂದಲೂ ಗುರುಗಳನ್ನು ಕರೆಸಲಾಗುತ್ತಿತ್ತು ಎಂದು ಈ ಶಿಲ್ಪವನ್ನು ಉಲ್ಲೇಖಿಸುವ ಜನರು ಹೇಳುತ್ತಾರೆ. ಇಲ್ಲಿ ಮೇಲೆ ಹೋಗಲಿರುವ ಮೆಟ್ಟಿಲುಗಳನ್ನು ನೋಡಿದಾಗ, ಮಧ್ಯಭಾಗದ ಗುಮ್ಮಟದಲ್ಲಿರುವ ರಚನೆಗಳನ್ನು ನೋಡಿದಾಗ ಮೇಲಂತಸ್ತಿನಲ್ಲೂ ಕೆತ್ತನೆಗಳಿರಬಹುದಾದ ಕುರುಹುಗಳು ಗೋಚರಿಸುತ್ತೆ. ಗಜಶಾಲೆಯನ್ನೇ ನೋಡುತ್ತಾ ಬಂದರೆ ಪಕ್ಕದಲ್ಲೆರುಡು ಕತ್ತರಿಸಲ್ಪಟ್ಟ ಆನೆಗಳ ಮೂರ್ತಿಗಳು, ಅದರ ಪಕ್ಕದಲ್ಲೊಂದು ದ್ವಾರವೂ ಕಾಣುತ್ತೆ. ಆ ದ್ವಾರ ವಾಸ್ತವವಾಗಿ ಒಂದು ಮುಚ್ಚಲ್ಪಟ್ಟ ಮ್ಯೂಸಿಯಂನ ಹೆಬ್ಬಾಗಿಲು ! ನಾವು ಹೋಗೋದು ಲೇಟಾಗಿದ್ದ ಕಾರಣ ಆ ಮ್ಯೂಸಿಯಂ ಬಾಗಿಲು ಹಾಕಿದಂತೇನು ಕಾಣುತ್ತಿರಲಿಲ್ಲ. ಅತ್ತ ಯಾರೂ ಸುಳಿಯದೇ ಬಾಗಿಲು ತೆಗೆಯದೇ ಯಾವ ಕಾಲವಾಯಿತೋ ಎಂದನಿಸುತ್ತಿತ್ತು. ಮುಂದಿನ ಬಾರಿ ಹಂಪಿಗೆ ಹೋದರೆ ಆ ಮ್ಯೂಸಿಯಂ ಯಾವಾಗ ತೆರೆಯುತ್ತೆ ಅಂತ ಯಾರಿಗಾದರೂ ಕೇಳೇ ಹೋಗಬೇಕೆಂದುಕೊಂಡೆವು ! ಅಲ್ಲಿನ ಮೂಲೆಯಲ್ಲಿ ಆಗಿನ ಕಾಲದ ಬೇಹುಕಾರಿಕಾ ಬುರುಜು(watch tower) ಒಂದು ಕಾಣುತ್ತೆ. ಈ ಬುರುಜು ದೂರದಿಂದಲೇ ಅಂತಃಪುರದ ಆವರಣದ ಹಾದಿಹೇಳುವಂತಿದೆ. ಈ ಬುರುಜಿನ ಹಿನ್ನೆಲೆಯಲ್ಲಿ ಸೂರ್ಯಾಸ್ತದ ಸೊಬಗನ್ನು ಸವಿಯೋದು ಅದ್ಭುತ ಅನುಭವ !

ಅಂತಃಪುರದ ಆವರಣದಿಂದ ಹೊರಬರೋಕೆ ಎರಡು ದಾರಿ. ಒಂದು ಗಗನಮಹಲ್ ಬಳಿಯಿಂದ ನಾವು ಒಳಹೊಕ್ಕ ದಾರಿ. ಮತ್ತೊಂದು ಅದರ ಹಿಂಬದಿಯಿಂದ ಬಂದು ಸೇರೋ ಹಾದಿ. ಎರಡನೆಯ ದಾರಿಯಲ್ಲಿ ಹಲವು ಪಾಳುಬಿದ್ದ ದೇಗುಲಗಳು ಸಿಗುತ್ತೆ. ಕೆಲವಕ್ಕೆ ಸಂರಕ್ಷಿತ ಸ್ಮಾರಕ ಅಂತ ಬೋರ್ಡು ಸಿಕ್ಕಿದ್ರೆ ಕೆಲವಕ್ಕೆ ಏನೂ ಇಲ್ಲ. ಒಂದೆಡೆ ಕೋಟೆಯಿಂದ ಹೊರಹೋಗೋ ಹೆಬ್ಬಾಗಿಲು ಕಾಣುತ್ತೆ. ಅಲ್ಲಿಯವರೆಗೂ ಹೋದ ನಾವು ವಾಪಾಸ್ ಬರುತ್ತಾ ರಂಗದೇವಾಲಯದ ಬಳಿ ಬಂದೆವು.
 
ರಂಗ/ಮಾಧವ ದೇಗುಲ, ದೇವಿಯ ದೇವಸ್ಥಾನ:
ಶಾಸನಗಳಲ್ಲಿ ಮಾಧವದೇಗುಲವೆಂದು ಕರೆಯಲ್ಪಡುವ ಈ ದೇಗುಲಕ್ಕೆ ರಂಗದೇವಾಲಯವೆಂದು ಹೆಸರುಂಟು.ಇದರ ನಿಖರಕಾಲನಿರ್ಣಯವಿರದಿದ್ದರೂ ಇಲ್ಲಿಯ ಶಾನನವೊಂದರ ಪ್ರಕಾರ ದೇವಾಲಯದಲ್ಲಿನ ನೃತ್ಯ, ಸಂಗೀತ ಕಾರ್ಯಕ್ರಮಗಳಿಗಾಗಿ ಇಲ್ಲಿನ ರಂಗಮಂಟಪವನ್ನು ಸದಾಶಿವರಾಯನ ಕಾಲದಲ್ಲಿ ಅಂದರೆ ಕ್ರಿ.ಶ ೧೫೪೫ರಲ್ಲಿ  ವಲ್ಲಭರಾಜುವಿನ ಪುತ್ರ ತಿಮ್ಮರಾಜು ಎಂಬುವವನು ಈ ದೇಗುಲವನ್ನು ಕಟ್ಟಿಸಿದನೆಂದು ತಿಳಿದುಬರುತ್ತದೆ. ಈ ಸಂಕೀರ್ಣದಲ್ಲಿ ಪಶ್ಚಿಮಕ್ಕಿರುವ ಮಾಧವದೇಗುಲವಲ್ಲದೇ,ಪೂರ್ವಕ್ಕಿರುವ ದೇವಿ ದೇವಸ್ಥಾನವೂ ಇದೆ.ಗರ್ಭಗೃಹ, ಶುಕನಾಸಿ,ಹದಿನೆಂಟು ಕಂಬಗಳ ಮುಖಮಂಟಪವನ್ನು ಹೊಂದಿರೋ ದೇಗುಲಕ್ಕೆ ನಾವು ಹೋದಾಗ ಬೀಗಬಿದ್ದಿದ್ದರೂ ಮುಖಮಂಟಪದ ಉತ್ತರಗೋಡೆಗೆ ಮುಖಮಾಡಿರೋ ಸುಮಾರು ೩ ಮೀ ಎತ್ತರದ ಆಜಾನುಬಾಹು ಹನುಮನ ದರ್ಶನಭಾಗ್ಯ ಸಿಕ್ಕಿತು. ದೇವಿಯ ದೇಗುಲವನ್ನೂ ಎತ್ತರದ ಅಡಿಪಾಯದ ಮೇಲೆ ಕಟ್ಟಲಾಗಿದ್ದು ಈ ದೇಗುಲಗಳಲ್ಲಿ ದಶಾವತಾರ ಮತ್ತು ಗರುಡ,ಸೂರ್ಯ ಮೊದಲಾದ ಪೌರಾಣಿಕ ಕೆತ್ತನೆಗಳನ್ನು ಕಾಣಬಹುದು.ಅಲ್ಲಿಂದ ಹಾಗೇ ಬಂದ ನಾವು ವಾಚ್ ಟವರನ್ನು ನೋಡುತ್ತಾ ಹಿಂದೆ ಬಂದ ಮುಖ್ಯ ಹಾದಿಯನ್ನು ಹಿಡಿದು ಹಜಾರರಾಮ ದೇಗುಲದತ್ತ ಸಾಗಿದೆವು. 

ಮ್ಯೂಸಿಯಂ:
ಗನಶಾಲೆ/ಆನೆಲಾಯದಿಂದ ಹೊರಬಂದು ಮುಂದೆ ಸಾಗೋ ಹಾದಿಯಲ್ಲೇ ಒಂದು ಮ್ಯೂಸಿಯಂ ಸಿಗುತ್ತೆ. ಗಗನಮಹಲ್ಲಿಗೆ ತೆಗೆದುಕೊಂಡ ಪಾಸ್ ಇಲ್ಲಿಗೆ ಕೂಡ ನಡೆಯುತ್ತೆ. ಆದರೆ ನಾವು ಹೋದ ದಿನ ಅಕ್ಟೋಬರ್ ೨ರ ಸಾರ್ವತ್ರಿಕ ರಜಾದಿನವಾದ್ದರಿಂದ ಮ್ಯೂಸಿಯಂ ತೆಗೆದಿರದೇ ಅದನ್ನು ಹೊರಗಿನಿಂದ ಮಾತ್ರ ನೋಡಿಕೊಂಡು ಮುಂದೆ ಸಾಗಬೇಕಾಯಿತು. 

ಹಜಾರ ರಾಮಚಂದ್ರ ದೇವಾಲಯ:
ರಾಣಿ ವಾಸಸ್ಥಾನದಿಂದ ಮುಂದೆ ಬಂದರೆ ಸಿಗೋದು ರಾಜವಾಸಸ್ಥಾನ.ಅಲ್ಲಿ ನಿರ್ಮಿಸಲ್ಪಟ್ಟಿರೋ ಏಕೈಕ ದೇವಸ್ಥಾನ ಹಜಾರ ರಾಮಚಂದ್ರ ದೇವಸ್ಥಾನ.ಈ ದೇವಾಲಯ ರಾಜನ ವಾಸಸ್ಥಾನದ ಆವರಣ(ಹಜಾರ)ದಲ್ಲಿ ಬರುವುದರಿಂದ ಮತ್ತು ರಾಮಾಯಣದ ಹಲವು ದೃಷ್ಯಾವಳಿಗಳನ್ನು ಹೊಂದಿರೋ ಕಾರಣ ಇದಕ್ಕೆ ಹಜಾರ ರಾಮಚಂದ್ರ ದೇಗುಲವೆಂಬ ಹೆಸರಂತೆ. ಹದಿನೈದನೇ ಶತಮಾನಕ್ಕೆ ಸೇರಿದ ಈ ದೇಗುಲದ ವಾಸ್ತುಶಿಲ್ಪಗಳು ದ್ರಾವಿಡ ಶೈಲಿಯಲ್ಲಿವೆ ಎನ್ನುತ್ತಾರೆ.ಗರ್ಭಗೃಹ, ಅಂತರಾಳ, ಅರ್ಧಮಂಟಪ ಮತ್ತು ನರ್ತನಮಂಟಪ/ರಂಗಮಂಟಪಗಳನ್ನು ಹೊಂದಿರೋಈ ದೇಗುಲದಲ್ಲಿ ಭಾಗವತದ ಕೆಲವು ಕೆತ್ತನೆಗಳಿದ್ದರೂ ಇದರ ಹೆಸರೇ ಹೇಳುವಂತೆ ಇದು ಪ್ರಸಿದ್ದಿಯಾಗಿರುವುದು ರಾಮಾಯಣದ ಕೆತ್ತನೆಗಳಿಗೆ.ಮೂರು ಹಂತದಲ್ಲಿ ಜೋಡಿಸಿರುವ ರಾಮ ರಾವಣ ಕಾಳಗ, ರಾಮನ ಪಟ್ಟಾಭಿಷೇಕ, ಲವ-ಕುಶರ ಕೆತ್ತನೆಗಳೇ ಮೊದಲಾದ ಶಿಲ್ಪಗಳು ಕಣ್ಮನ ಸೆಳೆಯುತ್ತವೆ. ಇಲ್ಲಿನ ಒಳಗಿರುವ ಗರ್ಭಗೃಹಗಳು ಸದ್ಯಕ್ಕೆ ಖಾಲಿಯಿವೆಯಾದರೂ ಒಳಗಿನ ಕರಿಗಲ್ಲುಗಳ ಸ್ಥಂಭಗಳ ಕೆತ್ತನೆಗಳು ಮತ್ತೆ ಗಮನ ಸೆಳೆಯುತ್ತವೆ. ಹೊರಭಾಗದಲ್ಲಿ ಕಾಣಸಿಗೋ ಸ್ಮಶಾನಭೈರವಿಯ ಶಿಲ್ಪ ಹೊಯ್ಸಳ ಶೈಲಿಯ ಪ್ರಭಾವವೂ ಇದರ ಮೇಲೆ ಬಿದ್ದಿರಬಹುದಾ ಎಂಬ ಆಲೋಚನೆಯನ್ನು ಹುಟ್ಟಿಸುತ್ತದೆ

ಮಹಾನವಮಿ ದಿಬ್ಬ:
ಅಲ್ಲಿಂದ ಹಾಗೇ ಮುಂದಕ್ಕೆ ಬಂದ ನಾವು ಹೊಕ್ಕಿದ್ದು ಮಹಾನವಮಿ ದಿಬ್ಬವಿದ್ದ ಆವರಣಕ್ಕೆ. ಈ ಆವರಣದಲ್ಲೊಂದು ಸ್ನಾನದ ಕೊಳ, ಅಂತರ್ಗತ ಮಂದಿರ ಮುಂತಾದ ರಚನೆಗಳೂ ಸಿಗುತ್ತೆ. ಅದನ್ನೆಲ್ಲ ಆಮೇಲೆ ನೋಡೋಣ ಎಂದು ನಾವು ಧಾವಿಸಿದ್ದು ಎತ್ತರಕ್ಕೆ ಗೋಚರಿಸುತ್ತಿದ್ದ ಮಹಾನವಮಿ ದಿಬ್ಬಕ್ಕೆ.ರಾಜಪ್ರಾಂಗಣದಲ್ಲಿ ಪಶ್ಚಿಮಾಭಿಮುಖವಾಗಿ ನಿರ್ಮಿಸಿರುವ ಈ ದಿಬ್ಬವು ಸುಮಾರು ೮ ಮೀಟರಿನಷ್ಟು ಎತ್ತರವಿದೆ ಎನ್ನುತ್ತಾರೆ. ಮೂರಂತಸ್ತಿನ ಈ ದಿಬ್ಬದ ಮೇಲ್ಗಡೆಯವರೆಗೂ ಹತ್ತಿಹೋಗಲು ಮೆಟ್ಟಿಲುಗಳಿವೆ. ಆ ಮೆಟ್ಟಿಲುಗಳ ಪಕ್ಕದ ರಚನೆಯೂ ಅಮೋಘ. ಹದಿಮೂರನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ಕಟ್ಟಡವನ್ನು ಹದಿನೈದನೇ ಶತಮಾನದಲ್ಲಿ ಸುಂದರ ಫಲಕಗಳಿಂದ ಹೊದಿಸಲಾಯಿತು ಎನ್ನಲಾಗುತ್ತೆ. ಇದಕ್ಕೆ ಪೂರ್ವ,ಪಶ್ಚಿಮ, ದಕ್ಷಿಣದಿಕ್ಕಿನಿಂದ ಹತ್ತಿಬರಲು ಮೆಟ್ಟಿಲುಗಳಿದ್ದು ದಕ್ಷಿಣದ ಮೆಟ್ಟಿಲುಗಳ ಪಕ್ಕ ಆನೆ ಮುಂತಾದ ಕೆತ್ತನೆಗಳಿವೆ. ಪಶ್ಚಿಮದ ಮೆಟ್ಟಿಲುಗಳು ಕಟ್ಟಡದ ಮಧ್ಯಭಾಗದಲ್ಲಿ ಬಂದು ಸೇರಿದರೆ ಪೂರ್ವದ್ದು ಕಟ್ಟಡದೊಳಗಿರುವ ಒಂದು ಕೋಣೆಯೊಂದರಿಂದ ಹೊರಬರುತ್ತೆ. ಕೆಳಗಡೆಯಿರುವ ಸಾಮಾಜಿಕ ಶಿಲ್ಪಗಳಲ್ಲದೇ ವೇದಿಕೆಯ ಮೇಲ್ಭಾಗದಲ್ಲೂ ಸ್ಥಂಭ ಮತ್ತು ಪೀಠಗಳ ಕುರುಹುಗಳು ದೊರಕಿದ್ದು ಅಲ್ಲೊಂದು ಸುಸಜ್ಜಿತವಾದ ವೇದಿಕೆಯಿದ್ದಿರಬಹುದು ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ವಿಜಯದಶಮಿಯ ಮತ್ತು ಮಹಾನವಮಿಯ ದಿನ ಮಹಾರಾಜರು ಈ ವೇದಿಕೆಯ ಮೇಲಿನಿಂದ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರೆಂದು ಆಗಿನ ಇತಿಹಾಸಕಾರರಾದ ಅಬ್ದುಲ್ ರಜಾಕ್(ಕ್ರಿ.ಶ ೧೫೨೦)ಮತ್ತು ಡೊಮಿಂಗೋ ಪಾಯೆಸ್(ಕ್ರಿ.ಶ ೧೪೪೨-೪೩) ರ ಬರಹಗಳಲ್ಲಿ ದಾಖಲಿಸಿದ್ದಾರಂತೆ. 

ಭೂಮ್ಯಾಂತಗ್ರತ ಕೊಠಡಿ:
ರಾಜರ ಕಾಲದಲ್ಲಿ ಶಸ್ತ್ರಾಗಾರವೋ, ರಹಸ್ಯ ಕೋಠಿಯೋ ಆಗಿದ್ದಿರಬಹುದಾದ ಇದಕ್ಕೆ ಕೆಳಗೆ ಇಳಿದುಹೋಗಲು ಮೆಟ್ಟಿಲುಗಳಿವೆ. ಸದ್ಯಕ್ಕೆ ಇದರ ಮೇಲ್ಛಾವಣಿ ಒಂದೆಡೆ ಬಿದ್ದುಹೋಗಿದೆಯಾದರೂ ಮೆಟ್ಟಿಲುಗಳನ್ನಿಳಿದು ಕೆಳ ಪ್ರವೇಶಿಸಿ ಒಂದು ಸುತ್ತಿ ಹಾಕಿಬರೋಣವೆಂದರೆ ಕತ್ತಲೋ ಕತ್ತಲು !ನಮ್ಮಲ್ಲಿದ್ದ ಮೊಬೈಲ್ ಬ್ಯಾಟರಿಗಳಲ್ಲೇ ಬೆಳಕು ಕಂಡುಕೊಂಡು ಒಂದು ಸುತ್ತು ಹಾಕಿ ಬಂದದ್ದು ಒಂಥರಾ ಅಡ್ವೆಂಚರ್ ಅನುಭವವನ್ನು ಕೊಟ್ಟಿದ್ದು ಸುಳ್ಳಲ್ಲ

ಚತುರ್ಭುಜ ಸ್ನಾನದ ಕೊಳ:
ಮಹಾನವಮಿ ದಿಬ್ಬದ ಪಕ್ಕದಲ್ಲೇ ಇರೋ ಈ ಸ್ನಾನದ ಕೊಳಕ್ಕಿಂತಲೂ ಅದಕ್ಕೆ ನೀರನ್ನು ತರಲು ಮಾಡಿರೋ ವ್ಯವಸ್ಥೆ ಅದ್ಭುತ ಅನಿಸುತ್ತೆ. ದೂರದಿಂದ ನೀರು ತರೋಕೆ ಚಪ್ಪಡಿಗಳ ಓಣಿ ನಿರ್ಮಿಸಿ ಅದರಲ್ಲೂ ನೀರಿನ ಓಟವನ್ನು ಕರಾರುವಕ್ಕಾಗಿ ಲೆಕ್ಕ ಹಾಕಿ ನಿರ್ಮಿಸಿದ ನೀರು ಸರಬರಾಜ್ ವ್ಯವಸ್ಥೆಯನ್ನು ನೋಡಿದವರಿಗೆ ನಮ್ಮ ಪೂರ್ವಜರ ಬಗ್ಗೆ ಹೆಮ್ಮೆಯಾಗದೇ ಇರೋಕೆ ಸಾಧ್ಯವೇ ಇಲ್ಲ. ಅಲ್ಲಲ್ಲಿ ಕಲ್ಲುಗಳು ಬಿದ್ದುಹೋಗಿವೆಯಾದರೂ ೯೦% ಕಲ್ಲುಗಳು ೫೦೦ ವರ್ಷಗಳ ನಂತರವೂ ಹಾಗೇ ನಿಂತಿರೋದು ಅಚ್ಚರಿಯೇ ಸರಿ. ಈ ಕೊಳಕ್ಕೆ ಇಳಿಯೋಕೆ ಎರಡು ಹಂತದಲ್ಲಿ ಐದೈದು ಮೆಟ್ಟಿಲುಗಳ ರಚನೆಯಿದೆ. ಇನ್ನೂ ಇರಬಹುದಾದ ರಚನೆ ಸದ್ಯಕ್ಕೆಂತೂ ಇಲ್ಲಿನ ನೀರಿಂದ ಮುಚ್ಚಿಹೋಗಿದೆ. ಇಲ್ಲಿನ ಪ್ರತೀ ಕಲ್ಲಿನ ಮೇಲೂ ಏನಾದರೊಂದು ಹಳಗನ್ನಡಲಿಪಿಯಲ್ಲಿ ಬರೆದಿರೋದು ಈ ಕೊಳಕ್ಕೊಂದು ಪೂಜ್ಯ ಸ್ಥಾನ ತಂದುಕೊಟ್ಟಿದೆ ಎಂದು ಅನೇಕರು ಅಭಿಪ್ರಾಯಪಡುತ್ತಾರೆ

ಪಾನ್ ಸುಪಾರಿ ಬಜಾರ್:
ಅಲ್ಲಿಂದ ಹಾಗೇ ಮುಂದೆ ಬಂದಾಗ ಸಿಗೋದು ಪಾನ್ ಸುಪಾರಿ ಬಜಾರ್.ಹಂಪೆಯ ಎಲ್ಲಾ ಬಜಾರುಗಳಿಗೂ ಇಕ್ಕೆಲದಲ್ಲಿ ಕಲ್ಲಿನ ಪಡಸಾಲೆಯಿದ್ದರೆ ಈ ಬಜಾರಿಗೆ ಆ ತರದ ಯಾವ ರಚನೆಯೂ ಇಲ್ಲ. ಈ ಬಜಾರು ಈಗ ಎಲ್ಲೆಡೆಯಿರೋ ಖಾಲಿ ಮೈದಾನದಂತೇ ಇದೆ. ಅದರ ಪಕ್ಕದಲ್ಲಿ ಮುಂದೆ ಹೋದರೆ ಒಂದು ಧ್ವಜ ಸ್ಥಂಭ ಮತ್ತು ಪಾಳುಬಿದ್ದ ದೇಗುಲದ ರಚನೆ ಕಾಣುತ್ತೆ. 

ಬ್ಯಾಂಡ್ ಟವರ್ ಮತ್ತು ಗೋರಿ:
ಹಾಗೇ ಮುಂದೆ ಸಾಗೋ ರಸ್ತೆಯ ಹಿಡಿದು  ಹೋದರೆ ಮಹಮದ್ದೇನ್ ಗೋರಿ ಮತ್ತು ಬ್ಯಾಂಡ್ ಟವರ್ ಕಾಣುತ್ತೆ. ಬ್ಯಾಂಡ್ ಟವರಿನಿಂದ ಹೊರಬರೋ ಹೊತ್ತಿಗೆ ಹಜಾರರಾಮಕ್ಕೆ ಹೋದ ಟಾರ್ ರಸ್ತೆಗೆ ಮತ್ತೆ ಸೇರುತ್ತೆವೆ. ಅದರ ಎದುರಿಗೆ ಒಂದು ಬಂಡೆ ಮತ್ತೆ ಅದರ ಮೇಲಕ್ಕೆ ಹತ್ತುವಂತಹ ಮೆಟ್ಟಿಲುಗಳು ಕಾಣುತ್ತೆ. ಅದೇ ಕಮಾಂಡರ್ಸ್ ಕ್ವಾಟರ್ಸ್. ಹಾಗೇ ಮುಂದೆ ಬಂದರೆ ಭೂಮ್ಯಾಂತರ್ಗತ ದೇಗುಲ, ಅಕ್ಕ-ತಂಗಿ ಬಂಡೆ, ಉದ್ದಾನವೀರಭದ್ರ ದೇಗುಲ, ಚಂಡಿಕೇಶ್ವರ ದೇಗುಲ, ಲಕ್ಷ್ಮೀನರಸಿಂಹ ದೇಗುಲ ಮುಂತಾದವು ಸಿಗುತ್ತಾ ಹೋಗುತ್ತೆ.. ಆಗಲೇ ಕತ್ತಲು ಕವಿಯುತ್ತಾ ಬಂದಿದ್ದರಿಂದ ಉಳಿದವನ್ನು ನಾಳೆ ನೋಡೋಣವೆಂಬ ಉದ್ದೇಶದಿಂದ ವಿರೂಪಾಕ್ಷ ದೇಗುಲದತ್ತ ಬಂದೆವು. ಸೈಕಲ್ ವಾಪಾಸ್ ಮಾಡಿ ಸಂಜೆಯ ಬೆಳಕಲ್ಲಿ ವಿರೂಪಾಕ್ಷನ ದೇಗುಲದ ಸವಿಯನ್ನು ಸವಿದು ಹೊಸಪೇಟೆಯ ಬಸ್ಸನ್ನು ಹತ್ತಿದೆವು. 

ಮುಂದಿನ ಭಾಗದಲ್ಲಿ:
ಭೂಗತ ಶಿವಾಲಯದ ಒಳಕ್ಕಿಳಿದು


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x