ಅದೊಂದು ಸಂಜೆ ಮುಳುಗಿ ಕತ್ತಲಾವರಿಸುತ್ತಿದ್ದಂತೆ ಅವನು ಮನೆಯಲ್ಲಿ ಯಾಕೋ ಇರುಸುಮುರುಸುಂಟಾಗಿ ತೇರು ಬಯಲಲ್ಲಿ ಬಂದು ಕುಳಿತ. ನೋಡಿದರೆ ಮನೆಯಲ್ಲಿ ಲಕ್ಷ್ಮಿ ಪೂಜೆ… ಉಳಿದವರಿಗೆ ದೀಪಾವಳಿ ಹಬ್ಬ. ಈ ಹಬ್ಬಗಳೆಂದರೆ ಇವನಲ್ಲಿ ಖುಷಿಗಿಂತ ಒಂಟಿತನವೇ ಆವರಿಸುತ್ತದೆ. ಮೊದಲಿಂದಲೂ ಅಷ್ಟೇ. ಕಾರಣ ಏನಂತ ಅವನಿಗೂ ಗೊತ್ತಿಲ್ಲ. ಬಹುಶಃ ಚಿಕ್ಕವನಿದ್ದಾಗಿನ ಮನೆಯ ಬಡತನ, ಅವರಿವರಲ್ಲಿ ಕೇಳಿ ಪಡೆದು ಮತಾಪು ಸುಡುವಾಗಿನ ಹಿಂಜರಿಕೆ ಏನೋ ಇರಬಹುದಾ? ಅವನಿಗೂ ಸ್ಪಷ್ಟವಿಲ್ಲ. ಆದರೆ ಬೆಳೆಯುತ್ತಾ ದೇವರು, ದೇವರ ಮನೆ, ಕೈ ಮುಗಿಯುವುದು, ಬೇಡಿಕೊಂಡು ಗಲ್ಲ ಬಡಿದುಕೊಳ್ಳುವುದೆಲ್ಲಾ ಮರೆತೇ ಹೋಗಿತ್ತು. ಯಾಕೆ ಜ್ಞಾಪಿಸಿಕೊಂಡನೋ. ತೇರು ಬಯಲಲ್ಲಿ ಯಾರೆಂದರೆ ಯಾರೂ ಇರಲಿಲ್ಲ. ಅಲ್ಲಲ್ಲಿ ದೂರದ ಕತ್ತಲಾಕಾಶದಲ್ಲಿ ಅರಳುತ್ತಿರುವ ಬಣ್ಣ ಬಣ್ಣದ ಮತಾಪು. ಮುದ್ದಿನ ಮಾವ ಸಿನಿಮಾದ ಅಣ್ಣಾವ್ರ ಹಾಡು ದೀಪಾವಳಿ…… sssss ದೀಪಾವಳಿ…,ssssss …
ಅಲ್ಲಿಯವರೆಗೂ ಅವನಿಗೆ ತಾನು ಮೊಬೈಲ್ ಮನೆಯಲ್ಲಿ ಬಿಟ್ಟು ಬಂದಿರುವುದು ನೆನಪೇ ಇಲ್ಲ. ಏನನ್ನೋ ಕಳೆದುಕೊಂಡವನಂತೆ ಓಡಿದ… ಓಡಿದ್ದು ಅವನು ಮೊಬೈಲ್ ಅಡಿಕ್ಟ್ ಆಗಿದ್ದ ಅನ್ನುವುದು ಕಾರಣವೇ ಅಲ್ಲ… ಅವನೊಂದು ವಾಟ್ಸಪ್ ಮೆಸೇಜ್ ಕಾಯುತ್ತಿದ್ದ. ಬಂದಿತಾ? ಇಲ್ಲವಾ? ಅದೂ ಕುತೂಹಲ. ಮೊಬೈಲ್ ಸೀದಾ ತೇರು ಬಯಲಿಗೆ ತಂದು ನೆಟ್ ಆನ್ ಮಾಡಿ ನೋಡಿದ. ಆಗಲೇ ಎರಡು ಮಿಸ್ಡ್ ಕಾಲ್ ಇದ್ದವು…. ಒಂದು ಸ್ಯಾಡ್ ಇಮೋಜಿ ವಾಟ್ಸಪ್ಪಲ್ಲಿ…. ತಕ್ಷಣ ಒಂದು ಸೆಲ್ಫಿ ಫೋಟೋ ಬಂದಿತು… ಅವಳು ದೇವರ ಮುಂದೆ ಸುಂದರವಾದ ಸೀರೆಯುಟ್ಟು ಬೆಳಗುತ್ತಿರುವ ಆರತಿ ತಟ್ಟೆ ಮುಖದಂಚಿಗೆ ಹಿಡಿದು ನಗೆ ಬೀರಿದ್ದಳು.
ಈ ಫೋಟೋ, ಇಮೋಜಿ, ಚಾಟ್, ಭಯಂಕರ ಜೋಕುಗಳು, ಭಿಡೆಯಿಲ್ಲದೇ ಮುಕ್ತವಾಗಿ ಹೆಣ್ಣು ಗಂಡಿನ ಸ್ನೇಹ, ಸಂಬಂಧ, ಪ್ರೀತಿ, ದೋಖಾ, ಸೆಕ್ಸು ಕಿಕ್ ಔಟ್ ಎಲ್ಲವೂ ಅವಳೊಂದಿಗೆ ಚರ್ಚಿತ ವಿಷಯಗಳೇ.. ತುಂಬಾ ವರ್ಷಗಳಿಂದ ಅವಳೊಂದಿಗೆ ಪರಿಚಯ ಕೂಡ ಇಲ್ಲದವನು…ಯಾಕೆ, ಹೇಗೆ ಯಾವ ಸಂದರ್ಭದಲ್ಲಿ ಭೇಟಿ ಆದರೋ ಸ್ನೇಹ, ಸಲುಗೆ, ಹಾಸ್ಯ ಸಂಪರ್ಕವಾಗಿ ನೆನೆಪಿಸಿಕೊಂಡ ಭರ್ತಿ ಮೂರು ವರ್ಷ.
ಅಷ್ಟೊಂದು ಮುಕ್ತವಾಗಿ ಮಾತಾಡಿದರೇನು ಬಂತು ಎದೆಯ ಮಾತು ಹೇಳುವ ಧೈರ್ಯ ಇದ್ದಿಲ್ಲ. ಒಂದಿನ “when you will depart from this place?! ” ಅಂದುಬಿಟ್ಟ…. “ನಾನು ಅಷ್ಟೊಂದು ಕಾಡುತ್ತೇನಾ?! ಅವಳ ಪ್ರಶ್ನೆ. ಹೂಂ ಅಂದ. ಅವತ್ತಿಂದ ಕೆಲ ದಿನಗಳ ಮಾತೇ ನಿಂತವು, ಬೇಟಿಯಂತೂ ದೂರ. ಅಗತ್ಯ ವಿದ್ದಾಗ ಒಂದು ಕಾಲ್ ಅಪರೂಪಕ್ಕೆ ಸಿಕ್ಕರೆ ಒಮ್ಮೆ ನಗು..
ಅದೊಂದಿನ ಊರ ಜಾತ್ರೆ ಲಕ್ಷಾಂತರ ಸೇರುವ ಜನ. ಜಾತ್ರೆ ಬಯಲು ಪಕ್ಕದಲ್ಲೇ ಅವಳ ಗಾಜಿನ ಚಿತ್ತಾರ ತುಂಬಿದ ಮನೆ. ಇವನದು ಮೂರನೇ ಕ್ರಾಸಿನ ಹಂಚಿನ ಮನೆ… ಬೆಳಗಿನ ಜಾವ ನಾಲ್ಕಕ್ಕೆ ಮಡಿ ಸೀರೆಯುಟ್ಟು ಬರಿಗಾಲಲ್ಲೇ ಮಂತ್ರಗಳನ್ನು ಮಣಮಣಿಸುತ್ತಾ ಮಠದ ಹೆಬ್ಬಾಗಿಲ ಕಡೆ ಹೊರಟಿದ್ದಳು, ಹೆಜ್ಜೆ ನಮಸ್ಕಾರ ಹಾಕಲು… ಏನು ಬೇಡಿಕೊಂಡಿದ್ದಳೋ ?!! ಅವಳ ಶ್ರದ್ಧೆ ದೊಡ್ಡದು. ಓದಿದ್ದಳು, ಸಣ್ಣ ವಯಸ್ಸಿಗೇ ದೊಡ್ಡ ಜವಾಬ್ದಾರಿ, ಒಬ್ಬ ವಿದ್ಯಾರ್ಥಿಗೆ ಕೇವಲ ಹತ್ತು ರೂಪಾಯಿ ಫೀಸು ಮನೆಪಾಠ ಹೇಳಲು… ಅಲ್ಲಿಂದ ಶುರುವಾಗಿ ಸಾವಿರಗಟ್ಟಲೇ ಎಣಿಸುವಂಥ ಸ್ಥಿತಿಗೆ ತಲುಪಿದ್ದಳು.
ದೇವರು ತಥಾಸ್ತು ಅಂದಿದ್ದನೋ ಏನೋ ಮಾರನೇ ದಿನವೇ ಮೊದಲಿನಂತೆ ಖಿಲ್ಲನೆ ನಗು. ಹರಟೆ, ಮಾತಿನೊಂದಿಗೆ ರಾಜಿಯಾಗಿದ್ದಳು. ರಾಜಿಯಾದ ಒಂದು ವರ್ಷದ ನಂತರ ಬಂದ ಎಷ್ಟೋ ಸುಂದರ ಮೆಸೇಜ್ ಗಳ ನಂತರ ಆ ದೀಪಾವಳಿ ದಿನದ ಬೆಳಕಿನೊಂದಿಗೆ ನಗುವ ಸೆಲ್ಫಿ ಹಾಕಿದ್ದು…. ಮತ್ತು ಅವತ್ತೇ ಅವನು ಮೊದಲ ಬಾರಿಗೆ ಉತ್ತರ ಬರೆದಿದ್ದ; ಮೂರೇ ಪದ… “ಲವ್ ಯೂ ಬಂಗಾರ.” ಆ ಕ್ಷಣಕ್ಕೆ ಅವಳು ನಿರುತ್ತರ… ಆದರೆ….. ಆ ಮೂರು ಪದ ಪ್ರತಿ ದಿನ ಅದೆಷ್ಟು ಬಾರಿ ಬರೀತಿದ್ದನೋ ಲೆಕ್ಕವಿಲ್ಲ.
ಈಗ ಜೀವನವೆಂದರೆ ಸುಂದರ, ಹೊಸ ನಗು, ಅವಳಿಲ್ಲದೇ ದಿನದ ಶುಭೋದಯವಿಲ್ಲ. ರಾತ್ರಿ ಮಲಗುವ ಮುನ್ನ ಸಿಹಿಮುತ್ತು. ಇಷ್ಟು ವರ್ಷಗಳಲ್ಲಿ ಬದುಕಿದ್ದಕ್ಕಿಂತಲೂ ಈಗ ಬದುಕುವ ಅವನ ಆಸೆಗೆ ಸಾವಿರ ಕನಸು. ಹೌದು, ದುಡಿಮೆ ಇದೆ ದುಡ್ಡೂ ಇದೆ. ತಿರುಗಾಟ, ಸ್ನೇಹಿತರು, ಸಿನಿಮಾ, ಎಲ್ಲದರಿಂದ ದೂರಾದದ್ದು ಅವನ ಅರವಿಗೆ ಬರಲೇ ಇಲ್ಲ, except smoke n occasion drink. ” ನೀನೆಂದರೆ ನನಗೆ ಇಷ್ಟ ಕಣೇ….. ” ಹಾಡೇ ಹಾಡಾದ. ಅದಾದ ಮೇಲೂ ಇಬ್ಬರಲ್ಲೂ ಅಕರ್ಷಣೆ, ಒಲವು, ತುಡಿತ, ನಗು ಎಲ್ಲವೂ…. ಮಧ್ಯೆ ಶರಂಪರ ಕಿತ್ತಾಡುವಷ್ಟು ಸಿಟ್ಟು, ಮುನಿಸು ಮತ್ತು ಹಠ ಕೂಡ ಇತ್ತು. ಕೆಲಸ ದುಡಿಮೆ ಅಂತೆಲ್ಲ ಅಲೆದಾಟ ಇದ್ದಾಗಲೆಲ್ಲಾ ದಿನಗಟ್ಟಲೇ ಭೇಟಿ ಅಸಾಧ್ಯ. ಮಾತಂತೂ ಇದ್ದೇ ಇದ್ದವು. ಇನ್ನೇನು ತುಂಬಾ ಮಿಸ್ ಮಾಡುತ್ತಿದ್ದೇವೆ ಅನ್ನಿಸಿದಾಗೆಲ್ಲಾ ” ಹೋದ ಜನ್ಮದಲ್ಲಿ ನಾವಿಬ್ರು ಏನಾಗಿದ್ದಿರಬಹುದು?!! “ಗಂಡ ಹೆಣ್ತೀನಾ?” ಅಂತ ಇವನು. ” ಅಲ್ಲ ಹಾವು ಮುಂಗಸಿ” ಅಂತ ಅವಳು..
ಒಮ್ಮೆ ಅಮವಾಸ್ಯೆ ದಿನ ಮಠದ ಹೆಬ್ಬಾಗಿಲಲ್ಲೇ ಸಿಕ್ಕಳು. ಎಂದೂ ಹೋಗದವನು ಅಂದು “ಬಂಗಾರ” ಬರುತ್ತಾಳೆಂದೇ ಕಾದು ಕುಳಿತಿದ್ದ. ಮುಖದಲ್ಲಿ ನಗುವೇ ಇರಲಿಲ್ಲ. ದೇವರಿಗೆ ಖಡಾಖಂಡಿತವಾಗಿ ಹೇಳಿಯೇ ಬಂದಿರಲಿಕ್ಕೂ ಸಾಕು. ಅವಳ ಹುಬ್ಬಿನ ನಡುವೆ ಕುಂಕುಮದ ಬೊಟ್ಟು ಮಾತ್ರ ಇವನ ಬೊಗಸೆಯೊಳಗೆ ಅವಳ ಕೆನ್ನೆ ತುಂಬಿಸಿತ್ತು.
ಒತ್ತರಿಸುತ್ತಿದ್ದ ದು:ಖವನ್ನು ತೋರಗೊಡದೇ “ಈ ಜನ್ಮದಲ್ಲೂ ನಾವು ಗಂಡ ಹೆಂಡತಿಯೇ ಅದರೆ, ಕಿತ್ತಾಡುವುದು ತಪ್ಪಿದ್ದಲ್ಲ… ಇರಲಿ, I have got more responsibility in my family… Its inevitable.. ಮುದುವೆ?!! ಬಹುಶಃ ನೀನು ಕಾಯಲಾರೆ.. ಅಥವಾ ನಾನೇ ಹೂಂ ಅನ್ನಲಾರೆನೋ. ಕ್ಷಮಿಸು…. ಇನ್ಮೇಲೇ ಏನಾದ್ರೂ ವಿಷಯ ಇದ್ರೆ ಮಾತಾಡು.. ಪದೇ ಪದೇ ಕಾಲ್ ಮಾಡಬೇಡ. I may not pick it. Surely I will call whenever I am in need. Don’t mistake. ಮರೆತಿದ್ದೆ; ಇನ್ಮೇಲೆ ” ಲವ್ ಯೂ ಅನ್ನಬೇಡ” ಅಂದುಬಿಟ್ಟಳು…
“ಥೋ, ಏನಾಯ್ತೇ ಬಂಗಾರ ನಿಂಗೆ, ಅಂಥಾದ್ದೇನಾಯ್ತೀಗ, ಯಾಕೆ ಹೀಗೆ ಮಾತಾಡ್ತೀಯಾ?! ” ಅವನ ಮಾತು ಕೇಳಿಸಿಕೊಳ್ಳುವ ಸ್ಥಿತಿಯಲ್ಲೇ ಇರಲಿಲ್ಲ ಅವಳು.. ತಿರುಗಿ ನೋಡದೇ ಆ್ಯಕ್ಟೀವಾದಲ್ಲಿ ಹೊರಟೇಬಿಟ್ಟಳು. ಅದಾಗಿ ಕಾಲ್ ಮಾಡಿದ, ಅವಳು ಪಿಕ್ ಮಾಡಲಿಲ್ಲ. ಮೆಸೇಜ್ ಮಾಡಿದ ಒಂದಕ್ಕೂ ಉತ್ತರವಿಲ್ಲ. ಲವ್ ಯೂ ಬಂಗಾರ ಅಂದಾಗ ಮಾತ್ರ ಇನ್ನೊಮ್ಮೆ “ಲವ್ ಯೂ ಬಂಗಾರ” ಎಂದು ಮೆಸೇಜ್ ಮಾಡಿದ್ದೇ ಆದರೆ ಬ್ಲಾಕ್ ಮಾಡಿಬಿಡ್ತೇನೆ” ಅನ್ನುತ್ತಾಳೆ. ಅವನದೂ ತುಂಬಾ ಪ್ರೀತಿಸಿದ ಜೀವ. ನೋವಾದರೂ ಅವಳ ಮನಸ್ಸು ನೋಯಿಸಬಾರದೆಂದು ವಾಟ್ಸಪ್ಪಲ್ಲಿ ಬರೀ ಮೂರು ಡಾಟ್ ಟೈಪ್ ಮಾಡಿ ಕಳಿಸುತ್ತಾನೆ.
ಆಕೆಗೆ ಅರ್ಥವಾಗದೇ ” ?” ಕೇಳುತ್ತಾಳೆ. ” ಲವ್ ಯೂ ಬಂಗಾರ ” ಅನ್ನುತ್ತಾನೆ, ನೋಡಿ. ಸಿಟ್ಟು ತಡೆಯಲಾರದೇ ಫೋನ್ ಮಾಡಿ ಬೈಯಲೇಬೇಕೆಂದು ಕರೆ ಮಾಡುತ್ತಾಳೆ… ಅವನು ತಕ್ಷಣಕ್ಕೆ ಪಿಕ್ ಮಾಡುವುದೇ ಇಲ್ಲ.. ಆ ಕಡೆಯಿಂದ ಕಾಲರ್ ಟ್ಯೂನ್ ಮಾತ್ರ ಕೇಳಿಸುತ್ತದೆ;
“ಪ್ರೇಮದ ಹೂಗಾರ,ಈ ಹಾಡುಗಾರ
ಹೂ ನೀಡುತಾನೆ, ಮುಳ್ಳು ಬೇಡುತಾನೆ.
ಬೆಲ್ಲದ ಬಣಗಾರ ಈ ಹಾಡುಗಾರ
ಸಿಹಿ ನೀಡುತಾನೆ…… ಕಹಿ ಬೇಡುತಾನೆ…”
ಬಂಗಾರ ಬದಲಾಗಿದ್ದಕ್ಕೆ ಕಾರಣ ನಿಜವಾಗಲೂ ಅವಳು ಹೇಳಿದ್ದಾ?!! ಅಥವಾ ತನ್ನದೇ ಹ್ಯಾಬಿಟ್ಟಾ??? ಕೆದಕುತ್ತಾ ಕುಳಿತ ಇವನ ಎದೆಯಲ್ಲಿ ಮತಾಪು ಸಿಡಿದ ಸದ್ದು….. ಮತ್ತವಳ ಕಣ್ಣಲ್ಲಿ ಜಿನುಗು ಹನಿ…..
-ಅಮರದೀಪ್