ಕಟಾವು: ವೀಣಾ ನಾಗರಾಜು

‘ಲಚ್ಚೀ ಏ ಲಚ್ಚೀ ಅದೇನು ಮಾಡ್ತಾ ಇದ್ದೀಯಮ್ಮೀ ಒಳಗೇ ಆಗಲೇ ಏಟೋತ್ತಾಗದೆ ಬಿರನೆ ಒಂದೆರಡು ತುತ್ತು ಉಂಡು ಬರಬಾರದಾ.? ಮಧ್ಯಾಹ್ನಕ್ಕೆ ಅಂತಾ ಒಂದು ಮುದ್ದೆ ಹೆಚ್ಚಾಗಿ ಬುತ್ತಿ ಕಟ್ಕೋ ಉಂಬಕೆ ವಸಿ ಸಮಯ ಆದರೂ ಸಿಗ್ತದೇ. ನೀ ಹಿಂಗೇ ಉಂಡಿದ್ದೆಲ್ಲಾ ಕೈಗೆ ಕಾಲಿಗೆ ಇಳಿಸ್ಕೊಂಡು ಕುಂತರೇ ಇವೊತ್ತೂ ಆ ಗುತ್ತಿಗೆದಾರ ಶಾಮಣ್ಣನ ತಾವ ಉಗಿಸಿಕೊಳ್ಳೋದರ ಜೊತಿಗೆ ಒಂದು ಗಂಟೆ ಸಂಬಳಕ್ಕೂ ಕತ್ತರಿ ಹಾಕಿಸ್ಕೋಬೇಕಾಗುತ್ತೆ. ಮೊದಲೇ ನಮ್ಮ ಗ್ರಹಚಾರ ಬೇರೆ ಸರಿ ಇಲ್ಲಾ ನಿನ್ನೆ ಸ್ವಲ್ಪ ತಡವಾಗಿ ಹೋಗಿದ್ದಕ್ಕೆ ವಾಪಸ್ಸು ಹೋಗಿರಿ ಅಂತಾ ಗದರಿಸಿಬಿಟ್ಟಾ”.

ತಿಪ್ಪೇಶ ಆಚೆ ಗೊಣಗುತ್ತಲೇ ಇದ್ದ, ಇತ್ತ ಗಂಡನ ಮಾತಿಗೆ ಹೆದರಿದ ಲಚ್ಚಿಯ ಕೈಯ್ಯಲ್ಲಿದ್ದ ಕೊನೆಯ ತುತ್ತು ಬಾಯಿಂದ ಗಂಟಲು ಸೇರುವಷ್ಟರಲ್ಲಿ ಕೈ ತೊಳೆದು ಮೇಲೆದ್ದವಳೇ ಏಕೋ ಹೊಟ್ಟೆಯೆಲ್ಲಾ ಹಿಂಡಿದಂತಾಯಿತಲ್ಲಾ ಏನಾಯ್ತಪ್ಪಾ ಛೇ ಎಂದವಳೇ ಹಿಂದಿನ ಬಾಗಿಲಿನಿಂದ ಸರ ಸರ ಹಿತ್ತಲಿನತ್ತ ನಡೆದಳು. ಎಷ್ಟು ಹೊತ್ತಾದರೂ ಆಚೆ ಬಾರದ ಲಚ್ಚಿಯ ಮೇಲೆ ಉಕ್ಕಿ ಬಂದ ಕೋಪದಿಂದ ತೊಡೆಯ ಮೇಲಿದ್ದ ವಸ್ತ್ರವನ್ನು ಹೆಗಲ ಮೇಲೆ ಎಸೆದು ಕೊಂಡು ಮೇಲೆದ್ದವನೇ ಮತ್ತೆ ಒಳಗೆ ಇಣುಕು ಹಾಕಿದ ಹೆಂಡತಿ ಅಲ್ಲಿರದಿದ್ದುದನ್ನು ಕಂಡು ‘ಲಚ್ಚೀ ಏ ಲಚ್ಚೀ’ ಜೋರಾಗಿ ಕೂಗಲಾರಂಭಿಸಿದ. ಅಷ್ಟರಲ್ಲಿ ಆಚೆಯ ಬಯಲಿನಲ್ಲಿ ಶಾಲೆಯಲ್ಲಿ ನೀಡಿದ್ದ ಮನೆಗೆಲಸವನ್ನು ಮಾಡುತ್ತಿದ್ದ ದೊಡ್ಡ ಮಗಳು ಕೆಂಪವ್ವ ಓಡಿ ಬಂದು ಅವ್ವ ಕಟ್ಟಿದ್ದ ಹಿಟ್ಟಿನ ಗಂಟನ್ನು ಮುಂದೆ ಹಿಡಿದು “ಅಪ್ಪಯ್ಯ ಅದೂ ಇವೊತ್ತು ಅವ್ವ ಕೆಲಸಕ್ಕೆ ಬರಾಕಿಲ್ವಂತೆ ನೀ ಬಿರನೇ ಹೋಗಬೇಕಂತೆ” ಹೆದರುತ್ತಲೇ ಹೇಳಿದಳು. “ಏನಾಯ್ತಂತೆ ಅವಳಿಗೆ ಈಟೊತ್ತು ಸಂದಾಗೇ ಇದ್ದಳು ಈಗ ಬರಾಕಾಗಕಿಲ್ಲಾ ಅಂದರೇ ಹೆಂಗೆ?. ಇತ್ತೀಚೆಗೆ ನಿಮ್ಮವ್ವ ಬಾಳ ಕಳ್ಳಾಟ ಆಡ್ಲಿಕ್ಕತ್ತೌಳೆ ಕೆಲಸಕ್ಕೆ ಬರೋದ ತಪ್ಪಿಸಿಕೊಳ್ಳೋಕೆ ಖಾಯಿಲೆ ಕತೆ ಬೊಗಳ್ತಾವ್ಳೆ ನಿಮ್ಮವ್ವಂಗೆ ಹೇಳು ನಾನು ತಲೆಕೆಟ್ಟೋನು, ಇಂತಾ ನಾಟಕ ಎಲ್ಲಾ ನನ್ನತ್ರ ನಡೆಯಾಕಲ್ಲಾ ಅಂತಾ” ಕಣ್ಗಳನ್ನು ಕೆಂಪಗೆ ಮಾಡಿಕೊಂಡು ಮಗಳತ್ತ ದುರುಗುಡುತ್ತಲೇ ಹೇಳಿದ.

“ಅಪ್ಪಯ್ಯ ಅದೂ ಅವ್ವಾ ಹೊರಿಕ್ಕಾಗೌಳಂತೆ ಹಿತ್ತಲಾಗಿಂದ ಹಂಗೇ ಊರ ಆಚೆಗಿರೋ ಮರದತ್ರ ಹೋದಳು ನಿಮ್ಮಪ್ಪಂಗೆ ಬಿರನೇ ವಿಷಯ ತಿಳಿಸಿ ಬುತ್ತಿ ಕೊಡು ಅಂತಾ ಹೇಳಿ ಕಳಿಸಿದಳು ಅದಕ್ಕೆ ನಾ ಓಡಿ ಬಂದೆ ಅಪ್ಪಯ್ಯ ಭಯದಿಂದ ನಡುಗುತ್ತಲೇ ಅಪ್ಪನ ಕೈಗೆ ಬುತ್ತಿಯ ಗಂಟಿಟ್ಟಳು. “ ಅಲ್ಲಾ ಇವಳು ಹೋದ ಸಾರಿ ಹೊರಿಕ್ಕಾದಾಗ್ಲಿಂದಲೂ ಕೆಲಸಕ್ಕೆ ಹೋಗಿರೋದು ಇಪ್ಪತ್ತೇ ದಿನ ಈಟು ಬೇಗ ಆಚೆ ಕೂತೌಳೆ ಎಲ್ಲಾ ಹೆಂಗಸರೂ ತಿಂಗಳಿಗೊಂದು ಸಾರಿ ಆದರೇ ಇವಳದು ಸ್ಪೆಷಲ್” ಗೊಣಗುತ್ತಿದ್ದವನನ್ನು “ಅಪ್ಪಯ್ಯ ನಾನು ಬಿರನೇ ಅವ್ವಂಗೆ ನೀರು ಹಾಕಿ ಶಾಲಿಗೆ ಹೋಗಬೇಕು” ಬರ್ತೀನಿ ಎಂದವಳೇ ಹಿತ್ತಲಿನಲ್ಲಿ ಜೋಡಿಸಿದ್ದ ಮೂರು ಕಲ್ಲಿನ ಮೇಲೆ ಇರಿಸಿದ್ದ ಮಡಿಕೆಗೆ ಒಂದೆರಡು ಬಿಂದಿಗೆ ನೀರು ಹಾಕಿ ಕಟ್ಟಿಗೆ ತರುವುದಕ್ಕಾಗಿ ಆಚೆ ನಡೆದಳು.

ಕೆಂಪವ್ವ ಕೊಟ್ಟ ಬುತ್ತಿಯನ್ನು ಕೈಯ್ಯಲ್ಲಿಡಿದು ಒಂದೆರಡು ಹೆಜ್ಜೆ ಮುಂದಿಡುವಷ್ಟರಲ್ಲಿ ಪಕ್ಕದ ಮೂಲೆಯಲ್ಲಿ ಅಮ್ಮಾsss… ಅಮ್ಮಾsss… ಕೊರಗಿದ ಶಬ್ಧ ಒಂದೆರಡು ಹೆಜ್ಜೆ ಅತ್ತ ಇಟ್ಟ ತಿಪ್ಪೇಶ ಇಡೀ ದೇಹವನ್ನೇ ಆವರಿಸಿದ್ದ ಕರೀ ಕಂಬಳಿಯನ್ನು ತೆಗೆದು “ಅವ್ವಾ ಯಾಕವ್ವಾ ಕೊರಗ್ಲಿಕ್ಕತ್ತಿದ್ದೀಯಾ ಬಾಳ ನೊಯ್ತ್ತಾಯ್ತೇನವ್ವಾ ಮಾತ್ರೆ ನುಂಗ್ತೀಯೇನು”? ಬೇಸರದಿಂದ ಕೇಳಿದ ‘ಬ್ಯಾಡ ಮಗಾ ಮಾತ್ರೆ ನುಂಗೀ ನುಂಗೀ ಈ ದೇಹ ಮಾತ್ರೆ ಗುಡಾಣ ಆಗಿಬುಟ್ಟದೇ ಇನ್ನೂ ಏಸೂ ಅಂತಾ ಮಾತ್ರೆ ನುಂಗಲಪ್ಪಾ ನೀ ಏನು ನನಗೆ ಆಪರೇಷನ್ ಮಾಡಿಸ್ತೀಯೇ ಇಲ್ಲಾ ಹಿಂಗೇ ಸಾಯಲಿ ಅಂತಾ ತೀರ್ಮಾನ ಮಾಡಿದ್ದೀಯೇನು? ಮೊದಲೇ ವಯಸ್ಸಾದ ಜೀವ ಇವಳು ನೆಗೆದು ಬಿದ್ದರೆ ಎರಡೊತ್ತಿನ ಊಟನಾದರೂ ಉಳಿತಾದ ಅಂತ ನಿನ್ನೆಂಡರು ಏನಾರ ಕಿವಿ ಊದೌಳೋ ಏನೋ ನನ್ನ ನೋವ ಯಾರ ಹತ್ರ ಹೇಳಲಪ್ಪಾ’ ತಲೆ ತಲೆ ಬಡಿದು ಕೊಳ್ಳಲಾರಂಭಿಸಿದ ಅವ್ವನನ್ನು ಕಂಡು ಕಣ್ಣೀರು ತುಂಬಿದ ಕಣ್ಗಳಿಂದ “ಹಂಗನ್ನಬ್ಯಾಡವ್ವಾ ಹೆತ್ತ ಶಾಪ ನಮಗೆ ಬದುಕಾಕೆ ಬುಡ್ತಾದ ನಾನೂ ನನ್ನ ಶಕ್ತಿ ಮೀರಿ ಪ್ರಯತ್ನ ಪಡ್ತೀವ್ನಿ ಏನು ಮಾಡಿದ್ರೂ ದುಡ್ಡು ಹೊಂದಿಸೋಕೆ ಆಗ್ತಾ ಇಲ್ಲವ್ವ ಈ ಕಬ್ಬಿನ ಹಂಗಾಮು ಮುಗಿಯೋದ್ರೋಳಗ ಏನಾರ ಮಾಡಿ ನಿನಗೆ ಈ ಕಾಯಿಲೆಯಿಂದ ಮುಕ್ತಿ ಕೊಡ್ಸೇ ಕೊಡುಸ್ತೀನವ್ವಾ ಇವಾಗ, ಮಾತ್ರ ನುಂಗಿ ಮಲಕ್ಕೊ” ಯಾವುದೋ ನೋವು ನಿವಾರಕ ಮಾತ್ರೆಯನ್ನು ಅವ್ವನ ಬಾಯಿಗೆ ಹಾಕಿ ನೀರು ಕುಡಿಸಿದವನೇ ಆಚೆಯ ಮೂಲೆಯಲ್ಲಿ ಅಳತೆ ಕೊಟ್ಟು ಚರ್ಮದಿಂದ ನೇಯಿಸಿದ್ದ ಜೋಡುಗಳನ್ನು ತನ್ನ ಕಾಲಿಗೆ ತೂರಿಸಿಕೊಂಡು ಕಬ್ಬಿನ ಗದ್ದೆಯತ್ತ ಹೆಜ್ಜೆ ಹಾಕಲಾರಂಭಿಸಿದ.

ಮಾಗಿಯ ಸೂರ್ಯ ಪಡುವಣದಲ್ಲಿ ಮರೆಯಾಗಲು ಇನ್ನೇನು ಕೆಲವು ನಿಮಿಷಗಳು ಮಾತ್ರ ಬಾಕಿ ಉಳಿದಿದೆ ಅಂದು ಎಲ್ಲರಿಗೂ ಸಂತಸವೋ ಸಂತಸ ವಾರದಿಂದ ಸುರಿಸಿದ್ದ ಬೆವರಿಗೆ ಪ್ರತಿಫಲ ದೊರೆಯುವ ಸಮಯ ಗುತ್ತಿಗೆದಾರ ಶಾಮಣ್ಣ ತನ್ನ ಲೆಕ್ಕದ ಪುಸ್ತಕವನ್ನು ತೆಗೆದು ಒಂದೊಂದೇ ಹೆಸರನ್ನು ಕೂಗುತ್ತಾ ಅವರ ಹೆಸರಿನ ಮುಂದಿದ್ದ ಹಾಜರಿಯನ್ನು ಪರಿಗಣಿಸಿ ಬ್ಯಾಗಿನೊಳಗಿಂದ ತೆಗೆದ ನೋಟುಗಳನ್ನು ಎಣಿಸಿ ಅವರಿಗೆ ಕೊಟ್ಟು ಅವರ ಹೆಸರಿನ ಮುಂದೆ ಸಹಿಯನ್ನು ಪಡೆದು ಕಳಿಸುತ್ತಿದ್ದ. ಸರತಿಯ ಸಾಲಿನ ಕೊನೆಯಲ್ಲಿ ನಿಂತಿದ್ದ ತಿಪ್ಪೇಶನ ಕಣ್ಗಳು ಮಾತ್ರ ಶಾಮಣ್ಣನ ಕೈಯಲ್ಲಿನ ನೋಟುಗಳನ್ನೇ ಎವೆಯಿಕ್ಕದೆ ದಿಟ್ಟಿಸುತ್ತಿವೆ. ಆದರೆ ಮನಸ್ಸು ಮಾತ್ರ ಗೂರಿನಿಂದ ನರಳುತ್ತಿರುವ ಅಪ್ಪಾ, ಹಾಸಿಗೆ ಬಿಟ್ಟು ಕದಲದ ಅಜ್ಜ ಹರಿದ ಚಡ್ಡಿಯಲ್ಲಿ ಆಡುತ್ತಿದ್ದ ಮಗನನ್ನು ನೋಡಿ ಹಿಂದಿರುಗಿ ಲೆಕ್ಕಾಚಾರಕ್ಕೆ ಸಿದ್ದವಾಗುತ್ತಿದೆ. ಮನೆಗೆ ಬೇಕಾದ ದಿನಸಿ, ಅಪ್ಪನ ಔಷದಿ, ಮಡದಿಯ ಕುಪ್ಪಸ ತಯಾರಾಗಿ ತಿಂಗಳುಗಳೇ ಕಳೆದು ದರ್ಜಿಯವನ ಕೂಲಿ ಕೊಡಲು ಸಾಧ್ಯವಾಗದೆ ಇವರ ದಾರಿಯನ್ನೇ ಕಾಯುತ್ತಾ ಕುಳಿತಿದೆ. ದೀಪದ ಸೀಮೆಎಣ್ಣೆ ಮುಗಿದು ಹೊತ್ತು ಮುಳುಗುವ ಮುಂಚೆಯೇ ಎಲ್ಲಾ ಕೆಲಸ ಕಾರ್ಯಗಳನ್ನು ಮುಗಿಸುವ ಹರಸಾಹಸ ಬಿಡುವಿಲ್ಲದೇ ಸಾಗುತ್ತಿದೆ. ಅವ್ವನ ಗರ್ಭಕೋಶದಲ್ಲಿರುವ ಗೆಡ್ಡೆ ದಿನಕ್ಕೊಂದು ಆಕಾರ ಪಡೆಯುತ್ತಾ ಬೆಳೆದು ವೈದ್ಯರು ನೀಡುತ್ತಿರುವ ಔಷದಿಯ ಜೊತೆಗೆ ಕಾಳಗಕ್ಕೆ ಸಿದ್ದವಾಗುತ್ತಿದೆ. ಕೆಲವೇ ದಿನಗಳಲ್ಲಿ ಅದನ್ನು ತೆಗೆಯದಿದ್ದರೇ ಜೀವಕ್ಕೇ ಅಪಾಯ ಅದು ಕ್ರಮೇಣ ಕ್ಯಾನ್ಸರ್‍ಗೆ ತಿರುಗಬಹುದು ವೈದ್ಯರು ಪದೇ ಪದೇ ಎಚ್ಚರಿಸುತ್ತಿದ್ದಾರೆ.

“ತಿಪ್ಪೇಶ ತಿಪ್ಪೇಶ ಲೇ ತಿಪ್ಪೇಶ ಏನು ಸಂಜೆ ಕನಸಾ….? ಎಲ್ಲಾರೂ ಹೋಗಿ ಅವರವರ ಮನಿ ಸೇರ್ಕಂಡೌರೇ ನೀನು ಏನೋ ಯೋಚನೆ ಮಾಡ್ತಾ ನಿಂತಿದ್ದೀಯಲ್ಲಾ” ಶಾಮಣ್ಣನ ಕೂಗಿಗೆ ಬೆಚ್ಚಿದ ತಿಪ್ಪೇಶ ಹತ್ತಿರ ಬಂದು ಕೈಕಟ್ಟಿ ಬಾಗಿ ನಿಲ್ಲುವನು. ಪುಸ್ತಕ ನೋಡುತ್ತಾ. ಒಂದು, ಎರಡೂ ಮೂರು…… ಎಣಿಸಿದ ಶಾಮಣ್ಣ ಐನೂರರ ನಾಲ್ಕು ನೋಟುಗಳನ್ನು ಜೇಬಿಗಿರಿಸಿ ಉಳಿದದ್ದನ್ನು ತಿಪ್ಪೇಶನ ಕೈಗಿಡುವನು “ಧಣ್ಯಾರೇ ಅದೂ ಈ ಸಾರಿನೂ ನೀವಿಂಗೆ ಹಣ ಹಿಡ್ಕಂಡ್ರೇ ಹ್ಯಾಂಗ್ರೀ…..? ಮನಿ ತುಂಬಾ ಜನಾ ಹೊಟ್ಟಿಗಾದರೇ ಬಟ್ಟೆಗಾಗಕಿಲ್ಲಾ ಬಟ್ಟೆಗಾದರೆ ಹೊಟ್ಟೆಗಾಗಕಿಲ್ಲಾ ಹಿಂಗೇ ಆದರೆ ಹೆಂಗಾ ಧಣ್ಯಾರೇ…? ತಾವು ಕೃಪೆ ತೋರಿಸಿ ಇದೊಂದು ತಿಂಗಳು ಪೂರಾ ಸಂಬಳ ಕೊಟ್ಟರೆ ಮುಂದಿನ ತಿಂಗಳು ಒಂದೂ ರಜಾ ಹಾಕಕಿಲ್ಲಾ” ಪೆಚ್ಚು ಮೋರೆ ಹಾಕಿದ ತಿಪ್ಪೇಶ ಗೋಗರೆಯಲಾರಂಭಿಸಿದ. ಈಗ ಮನದಲ್ಲೇ ನಕ್ಕ ಶಾಮಣ್ಣ “ ಅಯ್ಯೋ ಪೆದ್ದ ನೀವು ರಜೆ ಹಾಕದಂಗೆ ಕೆಲಸ ಮಾಡೋದು ಸತ್ಯಕ್ಕೆ ದೂರವಾದ ಮಾತು ಬಿಡಪ್ಪ ಮಡಿ, ಮೈಲಿಗೆ, ಮುಟ್ಟು, ಬ್ಯಾನಿ ಅದೂ ಇದೂ ಅಂತಾ ಕೆಲಸಕ್ಕೆ ಕದೀತಾನೇ ಇರ್ತೀರಾ. ನಾನು ಕೆಲಸಕ್ಕೆ ಸೇರಿಸ್ಕೊಳ್ಳೋವಾಗಲೇ ಹೇಳಿದ್ದೆ ಇಲ್ಲಿ ಯಾರಿಗೆ ಆದ್ಯತೆ ಕೊಡಲಾಗುತ್ತೇ ಅಂತಾ, ನೀನೋ ಗೋಗರದೆ ಅಂತ ಕೆಲಸ ಕೊಟ್ಟರೇ……” ರಾಗ ಆಡಲಾರಂಭಿಸಿದ “ಅದರಲ್ಲಿ ಅವಳ ತಪ್ಪೇನೈತಿ ಧಣ್ಯಾರೇ ಆಕೆ ಬೇಕು ಬೇಕಂತಾ ಮಾಡ್ಕಂತಾಳ ಆ ಭಗವಂತನ ಸೃಸ್ಟಿ ಅದಕ್ಕೆ ನಾವೇನು ಮಾಡಕ್ಕಾಗ್ತದ…? ಅದಕ್ಕೆ ಅಂತ ನೀವು ಈ ಪಾಟಿ ಹಣಾನ ಹಿಡಿದುಬಿಟ್ಟರೆ ಹೆಂಗೇ….? ಮರುಪ್ರಶ್ನೆ ಹಾಕಿದ ತಿಪ್ಪೇಶನ ಅತಿರೇಕ ಶಾಮಣ್ಣನ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. “ಅಲ್ಲಾ ಕಣಯ್ಯ ಈಟೆಲ್ಲಾ ಮಾತಾಡ್ತಿಯಲ್ಲಾ ಮುಟ್ಟಾಗೌಳೆ ಅಂತಾ ಊರಿಂದ ಹೊರಿಕ್ಕಾಕಿ ಮನೆಗೂ ಸೇರಿಸದೇ ಕೆಲಸಕ್ಕು ಕಳಿಸದೆ ಆಕೆ ನೆರಳು ಕೂಡ ಸುಳಿದಂಗೆ ಓಡಾಡ್ತೀರಲ್ಲಾ ನೀವು ಮಾಡೋದು ಭಗವಂತ ಹೇಳಿದ್ನಾ….? ನಾನೇನು ಬೇಕು ಬೇಕಂತಾ ಕೂಲಿ ಹಿಡೀತೀನೇನಪ್ಪಾ ನಿನ್ನೆಂಡ್ರು ಹೊರಿಕ್ಕಾದಾಗ್ಲೂ ರಜೆ ಕೊಟ್ಟು ಕೂಲಿ ಕೊಡ್ರಿ ಅಂತಾ ಸರ್ಕಾರದಿಂದ ಆದೇಶ ಮಾಡಿಸು. ಆಯ್ತದಾ….? ನೋಡಪ್ಪಾ ನಾನೇನು ಈ ಕಬ್ಬಿನ ಗದ್ದೆ ಮಾಲೀಕನಾ…? ಅವನ ಆದೇಶ ಪಾಲಿಸೋದು ಆಟೇ ನನ್ನ ಕರ್ತವ್ಯ ನಿನ್ನ ಮಾತ ಕೇಳಿದ್ರೆ ನನ್ನ ಕೆಲಸಕ್ಕೆ ಕತ್ತರಿ ಆಟೆಯಾ. ಅವನಿಗೆ ಆಳುಗಳನ್ನ ಪೂರೈಸೋಕೆ ನನ್ನಂತ ನೂರಾರು ಜನ ಗುತ್ತಿಗೆದಾರರು ಸಿಗ್ತಾರೆ ಏನೋ ನಿಯತ್ತಿನ ಮನುಷ್ಯ ಅಂಥಾ ಇನ್ನೂ ಇಟ್ಕಂಡೌನೆ. ನಿನ್ನ ನೋಡಿದ್ರೆ ನನ್ ಕರುಳು ಚುರುಕ್ ಅಂತದೇ ಬೇಕಿದ್ರೆ ಬಿಟ್ಟಿ ಉಪದೇಶ ಕೊಡ್ತೀವ್ನಿ ಕೇಳೋ ಹಂಗಿದ್ರೆ ಕೇಳು ಇಲ್ಲಾಂದ್ರೆ ನಿನ್ ಕರ್ಮ ತಗೋ ನಿನ್‍ಕೂಲಿ ತಗೊಂಡು ಹೊತ್ತು ಮುಳುಗಾಕು ಮುಂಚೆನೆ ಮನೆ ಸೇರ್ಕೋ ಹೋಗು ಹೋಗು… ನೋಡು ನಿನ್ ಮುಂದೆ ಈಗ ಹಣ ಹಿಸ್ಕೊಂಡು ಹೋದನಲ್ಲಾ ಅದೇ ಆ ಸೋಮನು ಅವನ ಹೆಂಡ್ರು ಮೊದಲು ನಿಮ್ಮಂಗೆ ತಿಂಗಳು ತಿಂಗಳು ರಜೆ ಹಾಕಿ ದಂಡ ಕಟ್ತಿದ್ರು ನನ್ ಮಾತ ಕೇಳಿ ಉದ್ದಾರ ಆದರು ಒಂದು ದಿನಾನೂ ರಜೆ ಹಾಕದೆ ಕೂಲಿ ಎಣಿಸ್ಕೊಂತಾವ್ರೆ’. ಸೋಮನ ಬಗ್ಗೆ ಕೇಳುತ್ತಿದ್ದಂತೆಯೇ ತಿಪ್ಪೇಶನ ಕಣ್ಣಾಲಿಗಳಲ್ಲಿ ಆನಂದದ ಹೊನಲು ಹೊಮ್ಮಿ “ಅದೇನು ಅಂತಾ ಹೇಳ್ರಿ ಧಣ್ಯಾರೇ ಅದೇಟೇ ಕಷ್ಟ ಆದರೂ ಪರವಾಗಿಲ್ಲ ಕೂಲಿ ಹೆಚ್ಚು ಕೊಟ್ಟರೆ ಸಾಕು ನೀವು ಹೇಳದಂಗೆ ಮಾಡ್ತೀನಿ” ಬೇಡುವನು.

“ಅಯ್ಯೋ ಅದಕ್ಕೆ ಕಷ್ಟಪಡಂಗೇನು ಇಲ್ಲಾ ಕಣ್ಲಾ ನೀವು ಮನಸ್ಸು ಮಾಡಬೇಕು ಆಟೆಯಾ” ಎಂದ ಶಾಮಣ್ಣನ ಮಾತಿಗೆ ಆಶ್ಷಯ್ರ್ಯಗೊಂಡ ತಿಪ್ಪೇಶ “ಏನೂ ಬರೀ ಮನಸ್ಸು ಮಾಡಿದ್ರೇ ಸಾಕಾ…? ಕೇಳುವನು “ ಅಯ್ಯೋ ಮರಾಯ ನಾನೊಂದು ಹೇಳದ್ರೇ ನೀನೊಂದು ಅರ್ಥಮಾಡ್ಕಂತೀಯಲ್ಲೋ ವಸಿ ಹತ್ರ ಬಾ ಇಲ್ಲಿ” ಶಾಮಣ್ಣ ಸುತ್ತಲೂ ನೋಡವನು “ಏಕೆ ಧಣ್ಯಾರೇ” ಎಂದು ಹತ್ತಿರ ಬಾಗಿದ ತಿಪ್ಪೇಶನಿಗೆ “ಅದು ಜೋರಾಗಿ ಹೇಳೋದು ಅಲ್ಲಾ ಆಮೇಲೆ ನನ್ ಮೇಲೆ ಗೂಬೆ ಕೂರ್ಸೀಯಪ್ಪಾ ಉಪಾಯ ಹೇಳ್ತೀನಿ ಆಟೆಯಾ ಸರಿ ಅನಿಸಿದ್ರೆ ಮಾಡು ಇಲ್ಲಾ ಅಂದ್ರೆ ನಿನ್ ಕರ್ಮ” ಎಂದು ಕಿವಿಯಲ್ಲಿ ಪಿಸು ಪಿಸು ಹೇಳಲಾರಂಭಿಸುವನು ಬೆಚ್ಚಿದ ತಿಪ್ಪೇಶ ‘ಅಯ್ಯೋ ಭಗವಂತ ಇದಕ್ಕೆ ನನ್ನೆಂಡ್ರು ಒಪ್ತಾಳ…? ಶಿವ ಶಿವಾ’ ಬಾಯಿ ಮೇಲೆ ಕೈಯಿಟ್ಟುಕೊಳ್ಳುವನು “ ಏನೋ ನಿಂಗೆ ಒಳ್ಳೇದಾಗ್ಲಿ ಅಂತಾ ಹೇಳ್ತೀವ್ನಿ ಇದರ ಮೇಲೆ ನಿನ್ನಿಷ್ಟ ನಂಗಂತೂ ಮನಿ ಹತ್ರ ಬಾಳ ಕ್ಯಾಮೆ ಇದೆ ನಾನಿನ್ನ ಬರ್ತೀನಪ್ಪಾ’ ಎಂದ ಶಾಮಣ್ಣ ತನ್ನ ಲೆಕ್ಕದ ಪುಸ್ತಕವನ್ನು ತೂರಿಸಿದ ಬ್ಯಾಗನ್ನು ಬಗಲಿಗೇರಿಸಿಕೊಂಡು ತನ್ನ ಮನೆಯ ಹಾದಿ ಹಿಡಿಯುವನು.

ಶಾಮಣ್ಣನ ಮಾತಿನ ಬಗ್ಗೆಯೇ ಚಿಂತಿಸುತ್ತಾ ಮನೆ ದಾರಿ ಹಿಡಿದವನಿಗೆ ತಟ್ಟನೆ ಲಚ್ಚಿಯ ನೆನಪಾಯಿತು. “ಅಯ್ಯೋ ದೇವರೇ ಇವೊತ್ತು ಲಚ್ಚಿಯ ಕೂಟ ಇರೋಕೆ ಊರ್ನಾಗ ಮುಟ್ಟಾಗಿರೋರು ಯಾರೂ ಇಲ್ವಲ್ಲಪ್ಪಾ ಆಗಲೇ ಹೊತ್ತು ಮುಳುಗೋಗ್ತಾಯ್ತೆ ಒಬ್ಬಳೇ ಹೆದರಿಕೊಂಡರೇ ಏನು ಗತಿ…? ಸೋಮವಾರ ಪೂಜಾರಿಯ ಮೈಮೇಲೆ ಅವತರಿಸಿದ್ದ ಊರ ಮುಂದಲ ಗುಡಿಯ ಕುಕ್ಕಲವ್ವ “ಕೇಡುಗಾಲ ಕಾದೈತಿ ನಿಮಗೆಲ್ಲಾ ಅಸುರ ಶಕ್ತಿಯೊಂದು ಊರ ಒಳಗೆ ನುಗ್ಗಲು ಹವಣಿಸ್ತಾಯ್ತೆ ಬುಡಾಕಿಲ್ಲಾ ನಾನು ಅದನ್ನ ಬುಡಾಕಿಲ್ಲಾ ಗ್ರಾಮ ದೇವತೆ ಜಾತ್ರಿ ಮಾಡಿ ಪ್ರಾಣಿ ಬಲಿ ಕೊಡೋವರೆಗೂ ಕಂಟಕ ತಪ್ಪಿದ್ದಲ್ಲ ಹೊತ್ತು ಮುಳುಗಿದ ಮ್ಯಾಲ ನರಪಿಳ್ಳೇನೂ ಊರ ಆಚೆ ಸುಳಿಯಕೂಡದು ಮರೆತರೆ ಅನಾಹುತ ತಪ್ಪಿದ್ದಲ್ಲ” ಪೂಜಾರಿಯ ಸ್ಮøತಿಪಟಲದಿಂದ ಉದುರಿದ ಎಚ್ಚರಿಕೆಯ ಮಾತು ತಿಪ್ಪೇಶನ ಎದೆ ಝಲ್ಲೇನ್ನುವಂತೆ ಮಾಡಿಬಿಟ್ಟಿತ್ತು. ಮನೆಗೆ ಬಂದವನೇ ಕೂಲಿ ಹಣವನ್ನು ಬಂದು ಪೆಟ್ಟಿಗೆಯಲ್ಲಿ ಭದ್ರವಾಗಿರಿಸಿ ಲಚ್ಚಿಯಿದ್ದ ಊರ ಆಚೆಗಿನ ಮುಟ್ಟಾದವರಿಗೆಂದೇ ಕಟ್ಟಿಸಿದ್ದ ಪುಟ್ಟ ಮನೆಯತ್ತ ಹೊರಟೇ ಬಿಟ್ಟ ಮನಸ್ಸು ಮಾತ್ರ ಅಲ್ಲೋಲ್ಲ ಕಲ್ಲೋಲವಾಗಿಬಿಟ್ಟಿದೆ ಶಾಮಣ್ಣ ಹೇಳಿದ್ದನ್ನು ಲಚ್ಚಿಗೆ ಹೇಳುವುದು ಹೇಗೆ ಇದರಿಂಧ ಅವಳು ರೊಚ್ಚಿಗೆದ್ದು ಕಿರುಚಾಡಿದರೆ…? ಅಥವಾ ಇಂತಾ ಕೆಟ್ಟ ಕೆಲಸಕ್ಕೆ ಕೈ ಹಾಕ್ತಿರೋ ನನ್ನಂತ ಗಂಡನ ಮೇಲೆ ಅಸ್ಯಹ್ಯಪಟ್ಟುಬಿಟ್ಟರೇ ? ನಮ್ ಪರಿಸ್ಥಿತಿಗೆ ಆ ಜೀವ ಅದೆಷ್ಟು ನೊಂದುಕೊಳ್ತದೋ ಏನೋ ತನ್ನ ಮನಬಂದಂತೆ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಾ ಹತ್ತಿರ ಬಂದವನೇ ಲಚ್ಚಿಯಿಂದ ಮಾರು ದೂರದಲ್ಲಿ ಇದ್ದ ಕಲ್ಲುಚಪ್ಪಡಿಯ ಮೇಲೆ ತಲೆ ಮೇಲೆ ಕೈಯೊತ್ತು ಕುಳಿತುಬಿಟ್ಟ.

“ಯಾಕ್ರೀ ಎನಾಗದೆ ? ಇವೊತ್ತು ಈಟೊಂದು ಸಪ್ಪಗಿದ್ದೀರಾ ಮೈ ಸಂದಾಗದೆ ತಾನೇ ನೀವು ಎಂದೂ ಈಟೊಂದು ಬ್ಯಾಸರ ಮಾಡ್ಕೊಂಡೋರು ಅಲ್ವಲ್ಲಾ… ಅರೇ ನಾನೂ ಕೇಳ್ತಲೇ ಇದ್ದೀವ್ನಿ ನೀವಿಂಗೆ ಗರ ಬಡಿದೌರ ತರ ಕೂತರೆ ನಾ ಏನಂತಾ ಅರ್ಥ ಮಾಡ್ಕೋಬೇಕು ನೀನೇ ಹೇಳು ಏನು ಆಕಾಶನೇ ಕಳಚಿ ತಲಿ ಮ್ಯಾಲ ಬಿದ್ದದೇನು” ಗಂಡನ ಮೌನ ಕಂಡ ಲಚ್ಚಿಯ ಬೈಗುಳ ಜಾಸ್ತಿಯಾಗುತ್ತಿದ್ದಂತೆ ಮೌನ ಮುರಿದ ತಿಪ್ಪೇಶ “ಏನಿಲ್ಲಾ ಕಣಮ್ಮಿ ಇವೊತ್ತು ಆ ಶಾಮಣ್ಣ……” ಮತ್ತೆ ಸುಮ್ಮನಾಗುವನು. “ಏನು ಆ ಶಾಮಣ್ಣ ಏನಾರ ತಕರಾರು ಮಾಡೀನೇನು ತಡ ಆಗಿದ್ದಕ್ಕೆ ಬೈದನಾ ? ಕೂಲಿಯಾಗ ಹಿಡ್ಕಂಡು ಕೊಟ್ಟನೇನು…? ಕೇಳಿದಳು. ‘ಕೂಲಿನಾಗ ಹಿಡ್ಕಂಡ ಆದರೆ ಅದು ತಡವಾಗಿ ಹೋಗಿದ್ದಕ್ಕೆ ಅಲ್ಲಮ್ಮಿ ನೀನು ಕೆಲಸಕ್ಕೆ ರಜೆ ಹಾಕಿದ್ದಕ್ಕೆ’ ತಿಪ್ಪೇಶನ ಮಾತಿಗೆ ಗಾಬರಿಗೊಂಡ ಲಚ್ಚಿ ಏನೂ ಈ ತಿಂಗಳೂನೂ ಸಂಬಳಾನ ಹಿಡಿದ್ನಾ ಪಾಪಿ ನನ್ಮಗನ ಕೈಸೇದೋಗ, ಅವನಿಗೆ ಬರಬಾರದ್ದು ಬರ, ಅವನ ಕೈಯಿಗೆ ಕರೇ ನಾಗರಹಾವು ಕಡಿಯಾ, ನಾವು ಬೆವರು ಸುರಿಸಿ ಉರಿಯೋ ಬಿಸಿಲಿನಾಗ ಮೈ ಕೈಯೆಲ್ಲಾ ಹರ್ಕಂಡು ಕಬ್ಬನ್ನ ಕಟಾವು ಮಾಡ್ತೀವಿ. ಏನೋ ಮುಟ್ಟಾದಾಗ ವಿಧಿ ಇಲ್ಲದೆ ಒಂದೆರಡು ದಿನ ರಜೆ ಹಾಕಿದ್ದಕ್ಕೆ ದಂಡ ಬ್ಯಾರೆ ಕಟ್ಟಿಕೊಡಬೇಕಂತೆ ಹಿಡಿ ಶಾಪ ಹಾಕಿ ಬಾಯಿಗೆ ಬಂದಂತೆ ಬೈಯ್ಯಲಾರಂಭಿಸಿದ ಲಚ್ಚಿಯನ್ನು ಸುಮ್ಮನಿರಿಸಲು ತಿಪ್ಪೇಶ “ಅಲ್ಲಾ ಕಣಮ್ಮಿ ನೀನು ಅವನನ್ನ ಬಾಯಿಗೆ ಬಂದಂಗೆ ಅಂದರೆ ಏನು ಪ್ರಯೋಜನ ಪಾಪ ಅವನ ಮಾಲೀಕ ಹೇಳದಂಗ ಅವ ಮಾಡ್ತಾನೆ ಆಟೆಯಾ ಗುತ್ತಿಗೆ ಆಳುಗಳನ್ನ ಕರ್ಕೊಂಡು ಹೋಗಿ ಕೆಲಸ ಮಾಡ್ಸೋದು ಆಟೇ ಅವನ ಕ್ಯಾಮೆ. ನಾವು ಒಂದು ರೂಪಾಯಿನೂ ದಂಡ ಕಟ್ದಂಗೆ ಕೂಲಿ ತಗೋಬೇಕು ಅಂದರೇ ನಮಗಿರೋದು ಒಂದೇ ದಾರಿ ಹೌದಮ್ಮಿ ಆ ಶಾಮಣ್ಣ ಹೇಳದಂಗೆ ಮಾಡಬೇಕು” ಎಂದಾಗ “ಏನು ಹೇಳದಾ ಶಾಮಣ್ಣ” ಲಚ್ಚಿ ಆಶ್ಚಯ್ರ್ಯದಿಂದ ಕೇಳಿದಳು “ಏನಿಲ್ಲ ಕಣಮ್ಮಿ ಅದಕ್ಕೆ ನೀನು ದೊಡ್ಡ ಮನಸ್ಸು ಮಾಡಬೇಕು ತಿಪ್ಪೇಶ ಭಯದಿಂದಲೇ ಉಸುರಿಸಿದ.

ಏನು ನಾನಾ…? ಅದೇನು ಮಾಡಬೇಕು ಸರಿಯಾಗಿ ಹೇಳಿರಿ….? ಗಂಡನತ್ತ ನೆಟ್ಟ ದೃಷ್ಠಿಯನ್ನು ಕದಲದೇ ಕೇಳಿದಳು. ಸ್ವಲ್ಪ ಧೈರ್ಯ ತಂದುಕೊಂಡ ಶೇಷಣ್ಣ ‘ನಿನ್ನ ಗರ್ಭಕೋಶದ ತೆಗಿಸಿಬಿಡಬೇಕಂತೆ’ ಗಂಡನ ಮಾತು ಕಿವಿಗೆ ತಾಗುತ್ತಲೇ ಲಚ್ಚಿಯ ಕಿವಿಗೆ ಕಾದ ಸೀಸೆಯನ್ನು ಹೊಯ್ದಂತಾಗಿತ್ತು ‘ಎನಂದ್ರೀ ಇನ್ನೊಂದು ಸಾರಿ ಹೇಳಿರಿ’ ಮತ್ತೆ ಕೇಳಿದಳು. ‘ಅದೂ ನಿನ್ನ ಗರ್ಭಕೋಶ ತೆಗೆಸಿಬುಡು ಅಂತಾ ಆ ಶಾಮಣ್ಣ ಹೇಳದ ಕಣಮ್ಮಿ ಆಮೇಲೆ ಈ ಮುಟ್ಟು ಮೈಲಿಗೆ ರಜೆ ಯಾವುದೂ ಇರಾಕಿಲ್ಲಾ ಪ್ರತೀ ತಿಂಗಳೂ ದುಡಿದ ಅಷ್ಟೂ ಕೂಲಿನ ತಗೋಬೌದು ಅಂದಾ ಎರಡನೇ ಬಾರಿ ತಿಪ್ಪೇಶ ಜೋರಾಗಿಯೇ ಹೇಳಿದ.

“ಅಲ್ಲಾಯ್ಯಾ ನೀನೇನು ಮನುಷ್ಯನಾ…? ಇಲ್ಲಾ ರಾಕ್ಷಸನಾ….? ನಮ್ಮನ್ನ ನೀವು ಏನು ಅಂದ್ಕಂಡಿದ್ದೀರಾ…? ಒಂದೆರಡು ದಿನದ ಕೂಲಿಗೋಸ್ಕರ ನಮ್ಮ ದೇಹದ ಒಂದು ಅಂಗಾನೇ ಕತ್ತರಿಸಿ ಹಾಕಕಾಗುತ್ತಾ ಆವಾ ಹೇಳಿದ್ನಂತೆ ಈ ದೊಡ್ಡ ಮನುಷ್ಯ ಕೇಳ್ಕೊಂಡು ಬಂದನಂತೆ ಅವಯ್ಯನ ಮುಖಕ್ಕೆ ಮಂಗಳಾರತಿ ಮಾಡಿ ಬರೋದು ಬುಟ್ಟು ನನ್ನ ಕೇಳುಕಂಡ ಬಂದಿದ್ದೀರಲ್ಲಾ ನಿಮ್ ಬುದ್ದಿಗೆ ಅದೇನು ಹೇಳಬೇಕು” ದು:ಖ ತಾಳಲಾರದೇ ಉಮ್ಮಳಿಸಿ ಬರುತ್ತಿದ್ದೆ ಕಣ್ಣೀರಿನಿಂದ ತೊಯ್ದ ಕಣ್ಣಾಲಿಗಳನ್ನು ತನ್ನ ಸೆರಗಂಚಿನಿಂದ ಒತ್ತಿ ಹೇಳಿದಳು ನಂಗೂ ಆ ಶಾಮಣ್ಣನ ಮುಖಕ್ಕೆ ಉಗೀಬೇಕನ್ನಸ್ತು ಕಣಮ್ಮಿ ಆದರೆ ಏನು ಮಾಡೋದು ಕಬ್ಬಿನ ಹಂಗಾಮು ಪೂರಾ ಮನೆ ಮಂದಿಯೆಲ್ಲಾ ಅವರ ಹಂಗಿನಲ್ಲಿ ಹೊಟ್ಟೆ ಹೊರೀತೀವಿ ಅವರನ್ನ ಬುಟ್ಟರೇ ನಮಗೆ ಕೆಲಸ ಕೊಡೋ ಪುಣ್ಯಾತ್ಮ ಆದರೂ ಯಾರದರೆ ಈ ಊರ್ನಾಗ. ಅದೂ ಅಲ್ಲದೆ ಇಲ್ಲಿ ಕೆಲಸ ಮಾಡೋ ಸಾವಿರಾರು ಹೆಂಗಸರು ಇದೇ ಕೆಲಸ ಮಾಡೌರಂತೆ ಅವರ್ಯಾರೂ ಹೆಂಗಸರೇ ಅಲ್ಲಾ ಅಂತೀಯೇನು ? ಏನೋ ಅನಾಹುತ ಆದೋಳ ತರ ಮಾತಾಡ್ತಿಯಲ್ಲಮ್ಮಿ” ಎಂದ ಗಂಡನ ಮಾತಿಗೆ “ ಅಯ್ಯೋ ದೇವರೇ ನಾವು ಹೆಣ್ಣಾಗಿ ಹುಟ್ಟಿದ್ದಕ್ಕೆ ಈ ಶಿಕ್ಷೇನೆ ಅಥವಾ ಕಿತ್ತು ತಿನ್ನೋ ಬಡತನದಾದ ಜನ್ಮ ತಾಳಿದ್ದೇ ತಪ್ಪಾ” ಅಳಲಾರಂಭಿಸುವಳು.

“ಅಯ್ಯೋ ಪೆದ್ದಿ ಆ ದೇವರನ್ನು ಕೇಳಿ ಏನು ಪ್ರಯೋಜನ ಈ ಕಬ್ಬಿನ ಗದ್ಯಾಗ ಕೆಲಸ ಮಾಡೋ ಸಾವಿರಾರು ಜನ ಹೆಣ್ಣುಮಕ್ಕಳು ಅದನ್ನೇ ಅವನತ್ರ ಕೇಳೀ ಕೇಳೀ ಸೋತು ಸುಣ್ಣವಾಗಿ ಬುಟ್ಟೌರೆ ನರಿ ಕೂಗು ಗಿರಿ ಮುಟ್ಟುತ್ತಾ ಅಂದಂಗೆ ನಮ್ಮ ಕೂಗು ಆ ಭಗವಂತನಿಗೆ ಮುಟ್ಟೋ ಹಾಗಿದ್ರೆ ನಮಗೆ ಈ ಪರಿಸ್ಥಿತಿನೇ ಬರ್ತಾ ಇರಲಿಲ್ಲ. ಸಿರಿವಂತರಿಗೆ ಹೊಟ್ಟೆ ಹೊರೋ ಚಿಂತಿ ಆದರೆ ನಮ್ಮಂತ ಬಡಪಾಯಿಗಳಿಗೆ ಹೊಟ್ಟೆಲಿರೋದನ್ನ ತೆಗೆಸೋ ಅನಿವಾರ್ಯ ನೋಡಮ್ಮಿ ಹೆಂಗದೆ ಹಾಸಿಗೆ ಹಿಡಿದಿರೋ, ಅಪ್ಪಯ್ಯಾ, ಅವ್ವನ ಹೊಟ್ಟಾಗಿರೋ ಗೆಡ್ಡೆ ತೆಗೆಸ್ಲಿಲ್ಲಾಂದರೆ ನಮ್ ಹಿರೀ ತಲೆನ ಮರತ್ಕೋಬೇಕಾಗುತ್ತೆ ಹೆತ್ತ ತಾಯಿನ ಕಳ್ಕಂಡು ಈ ಜೀವ ನೆಮ್ಮದಿಯಾಗಿ ಇರೋಕಾಗುತ್ತಾ…? ನೀನು ದೊಡ್ಡ ಮನಸ್ಸು ಮಾಡು ಲಚ್ಚಿ ಏನೂ ಆಗಾಕಿಲ್ಲಾ ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೇನು ಅವರೇ ಮಡ್ತಾರಂತೆ ಆಪರೇಶನ್‍ಗೆ ಅಂತಾ ಮುಂಗಡವಾಗಿ ಸಾಲಾನೂ ಕೊಡ್ತಾರಂತೆ ಏನಿಲ್ಲಾ ಒಂದು ವಾರ ವಿಶ್ರಾಂತಿ ತಗೊಂಡರೇ ಸಾಕು ಆಮೇಲೆ ಒಂದು ದಿನಾನೂ ಕೂಲಿ ಕಳ್ಕೋಳ್ಳೋ ಪರಿಸ್ಥಿತೀನೇ ಬರಾಕಿಲ್ಲಾ ಸ್ವಲ್ಪ ದಿನದಲ್ಲಿ ಅವರ ಸಾಲ ತೀರ್ಸಿದ್ರೆ ಆಮೇಲೆ ಅವ್ವಂಗೂ ಆಪರೇಶನ್ ಮಾಡಿ ಎಲ್ಲರೂ ನೆಮ್ಮದಿಯಾಗಿ ಇರಬಹುದು ಇದೆಲ್ಲಾ ನಿನ್ನ ಕೈಯ್ನಾಗದೆ ಇಲ್ಲಾ ಅನ್ನಬ್ಯಾಡ, ಲಚ್ಚಿ,” ಕೈ ಮುಗಿದು ಧೀನನಂತೆ, ಅಂಗಲಾಚುವನು.

ಅವ್ವನಿಗೆ ಊಟ ತಂದಿದ್ದ ಮಗಳು ಅಪ್ಪ ಅಮ್ಮನ ಮಾತುಗಳಿಗೆ ಹೆದರಿ ಮರದ ಮರೆಯಲ್ಲಿ ಅಳುತ್ತಾ ನಿಂತುಬಿಟ್ಟಿದ್ದಾಳೆ. ಅವ್ವನಿಗೆ ಆಪರೇಷನ್ನಾ…..? ಅಯ್ಯೋ ದೇವರೇ ನಮ್ಮವ್ವಂಗೆ ಏನಾದರೂ ಆಗಿಬಿಟ್ಟರೇ ಈ ಅಪ್ಪಂಗೆ ಏನು ತಲೆಕೆಟ್ಟಿದೆಯಾ……. ಇಲ್ಲಾ ಏನಾದರೂ ಮಾಡಿ ಇದನ್ನ ತಡೀಲೇ ಬೇಕು ಏನು ಮಾಡುವುದು…….ಯೋಚಿಸುವಳು. ಥಟ್ಟನೆ ಏನೋ ಹೊಳೆದವಳಂತೆ ಊಟವನ್ನು ಅವ್ವನ ಮುಂದಿದ್ದ ಎಲೆಯಲ್ಲಿ ಸುರಿದವಳೇ ಅಲ್ಲಿಂದ ಕಾಲು ಕೀಳುವಳು.

ನಿದ್ದೆ ಬಾರದೇ ಅತ್ತಿಂದಿತ್ತ ಇತ್ತಿಂದತ್ತ ಇಡೀ ರಾತ್ರಿ ಹೊರಳಾಡಿದ ಲಚ್ಚಿ ಎದ್ದು ಕೂರುವಳು ಮುಟ್ಟಿನ ದಿನಗಳಲ್ಲಿ ಇದು ಸರ್ವೆಸಾಮಾನ್ಯವಾಗಿತ್ತು ಆದರೆ ಇಂದು ಮಾತ್ರ ಗಂಡನ ಮಾತು ತಲೆಯಲ್ಲಿ ಗುಂಗೆ ಹುಳದಂತೆ ಕೊರೆಯಲಾರಂಭಿಸಿತ್ತು. ಪ್ರತೀ ತಿಂಗಳ ಮೂರು ದಿನದ ಈ ವನವಾಸ, ಕೆಲಸಕ್ಕೆ ಹೋಗದೇ ಕಟ್ಟುತ್ತಿದ್ದ ದಂಡ, ಮುಟ್ಟಾದಾಗ ಊರಾಚೆಗಿನ ಮರದಡಿ ಮಲಗಿದ್ದ ಸ್ನೇಹಿತೆ ನಿಂಗವ್ವ ಬೆಳಗಾಗುವುದರೊಳಗೆ ಕರಡಿಯ ಹಾವಳಿಗೆ ಬಲಿಯಾಗಿದ್ದು, ತಮ್ಮ ಮನೆಯ ಪರಿಸ್ಥಿತಿ ವಯಸ್ಸಿಗೆ ಬರುತ್ತಿರುವ ಮಗಳ ಭವಿಷ್ಯ, ಮೂಲೆ ಸೇರಿರುವ ಅತ್ತೆಯ ಆಪರೇಷನ್ ಎಲ್ಲದನ್ನೂ ಯೋಚಿಸುವಳು. ‘ಹೌದು ಅದೇ ಸರಿ’ ತೀರ್ಮಾನಿಸುವಳು ತಾನಿದ್ದ ಒಂದೆರಡು ಮಾರು ದೂರದಲ್ಲಿ ಕಾಯುತ್ತಾ ಮಲಗಿದ್ದ ತಿಪ್ಪೇಶನನ್ನು ಕರೆಯುವಳು. “ನೀವು ಹೇಳಿದ್ದೇ ಸರಿ ರೀ ನಮ್ಮ ಎಲ್ಲಾ ಸಮಸ್ಯೆಗಳನ್ನು ದೂರ ಮಾಡ್ಕೋಬೇಕಂದ್ರೆ ಇದು ನಮಗೆ ಅನಿವಾರ್ಯ ಹೋಗಿರಿ ಈಗಲೇ ಆಸ್ಪತ್ರೆಗೆ ಹೋಗೋ ವ್ಯವಸ್ಥೆ ಮಾಡಿ” ಎಂದೊಡನೆ ಎದ್ದ ತಿಪ್ಪೇಶ ತಾನಿನ್ನೂ ತಡ ಮಾಡಿದರೆ ಬದಲಾದ ಇವಳ ಮನಸ್ಸಿಗೆ ಯಾರಾದರೂ ಏನನ್ನಾದರೂ ಹೇಳಿ ಕೆಲಸ ಕೆಡುವಂತಾದರೆ ? ಎಂದು ಭಾವಿಸಿ ಸರಸರ ಮನೆಯತ್ತ ಹೆಜ್ಜೆ ಹಾಕಿ ಒಂದತ್ತು ಹದಿನೈದು ನಿಮಿಷಗಳಲ್ಲಿ ಒಂದಷ್ಟು ಬಟ್ಟೆಗಳನ್ನು ತುಂಬಿದ ಗಂಟಿನೊಂದಿಗೆ ಪ್ರತ್ಯಕ್ಷವಾದ. ಇಬ್ಬರೂ ಚಂದಿರನ ಬೀಳ್ಕೊಡುವ ಮಬ್ಬುಗತ್ತಲಲ್ಲಿ ಊರ ಆಚೆಗಿನ ಬಸ್ ನಿಲ್ದಾಣದತ್ತ ಹೆಜ್ಜೆ ಹಾಕಲಾರಂಭಿಸಿದ್ದರು.

“ಓಹೋ ಏನ್ ತಿಪ್ಪೇಶ ಸತಿ ಪತಿಗಳಿಬ್ಬರೂ ಹೊತ್ತುಟ್ಟಾಕು ಮುಂಚೇನೆ ಊರ ಬುಡ್ತಾ ಇರಂಗದೆ ಎತ್ತ ಪಯಣ. ಅದೂ ಅಲ್ಲದೇ ಗಂಟು ಮೂಟೆ ಬೇರೆ ಕೈಯ್ನಾಗ ಏನು ಸಮಾಚಾರ” ಗೋಮಾಳದ ಕಡೆ ಎರಡಕ್ಕೇ ಅಂತ ತಂಬಿಗೆ ನೀರಿನ ಸಮೇತ ಹೊರಟಿದ್ದ ಜಾಲಣ್ಣ ಆಶ್ವರ್ಯ ಪ್ರದರ್ಶಿಸುವವನಂತೆ ಕೇಳಿದ “ಏನಿಲ್ಲಾ ಜಾಲಣ್ಣ ದೂರದ ಊರ್ನಾಗಿರೋ ನಮ್ಮವ್ವನ ಹತ್ತಿರ ಸಂಬಂಧಿಗೆ ಮೈ ಉಷಾರಿಲ್ವಂತೆ ಅದಕ್ಕೆ ಒಂದು ವಾರ ಇದ್ದು ಯೋಗಕ್ಷೇಮ ವಿಚಾರಿಸ್ಕೊಂಡು ಬರುವಾ ಅಂತಾ” ಮುಖಕ್ಕೆ ಮುಖ ಕೊಡದೇ ಎತ್ತಲೋ ತಿರುಗಿ ಹೇಳಿದ ತಿಪ್ಪೇಶನ ಪರಿಸ್ಥಿತಿ ಕಂಡ ಜಾಲಣ್ಣ ‘ಯಾಕ ಸುಳ್ಳು ಹೇಳ್ತೀಯಾ ಬುಡು ತಿಪ್ಪೇಶ ನೀನು ಶಾಮಣ್ಣನ ತಾವ ಮಾತಾಡಿದ್ದ ನಾನು ಕೇಳಿಸ್ಕೊಂಡೇ ನಾನೇ ಇವಾಗ ನಿಮ್ಮನಿ ಕಡೆ ಬರೋಣಾ ಅಂದ್ಕಂಡಿದ್ದೆ ಅದೂ ಅಲ್ಲದೇ ನಿನ್ ಮಗಳು ಕೆಂಪವ್ವ ರಾತ್ರಿ ನಮ್ಮನಿಗಂಟ ಓಡೋಡಿ ಬಂದಿದ್ಲು ನಮ್ಮವ್ವಂಗೆ ಅದೇನೋ ಗರ್ಭಕೋಶ ತೆಗೆಸ್ತಾನಂತೆ ನಮ್ಮಪ್ಪ ನೀವಾರ ಬುದ್ದಿ ಹೇಳಣ್ಣಾ ಅಂತಾ ಗೋಳಾಡ್ಲಿಕ್ಕತ್ತಿದ್ಲು ನಾ ಏನು ಹೇಳಕಾತದೆ ತಿಪ್ಪೇಶ ನಮ್ಮನೆಯಾಗೇ ತಪ್ಪ ಮಡಕ್ಕಂಡು ಇನ್ನ ಬೇರೆಯವರಿಗೆ ನೀತಿ ಹೇಳಾಕೋದರೆ ಕೇಳೋರ್ಯಾರು ಅದಕ್ಕೆ ನನ್ನೆಂಡ್ರು ‘ಹೆಂಗ ಹೇಳಕಾತದವ್ವಾ ಈ ಹಳ್ಳಾಗಿರೋ ಪ್ರತೀ ಮನ್ಯಾಗೂ ಗರ್ಭಕೋಶ ಇಲ್ಲದೇ ಇರೋ ಹೆಣ್ಣುಮಕ್ಕಳು ಒಬ್ಬರಾದರೂ ಇದ್ದೇ ಇದ್ದಾರೆ ನೀನಿನ್ನೂ ಚಿಕ್ಕೋಳು ಮಗಾ ನಿಂಗೆ ಅದೆಲ್ಲಾ ತಿಳಿಯಾಕಿಲ್ಲಾ ನೀನು ನಮ್ಮಂಗೆ ಆಗೋ ಹೊತ್ತಿಗೆ ಯಾರಾದ್ರೂ ದೇವರ ತರಾ ಬಂದು ಇದಕ್ಕೆಲ್ಲಾ ಒಂದು ಮುಕ್ತಾಯ ಹಾಡ್ತಾರೆ ನೀ ಏನೂ ತಲಿ ಕೆಡಿಸ್ಕೋಬೇಡ ನಿಮ್ಮವ್ವಂಗೆ ಏನೂ ಆಗಾಕಿಲ್ಲಾ ಉಂಡು ಮಲಕ್ಕೋ ಹೋಗು ಅಂತಾ ಹೇಳಿ ಕಳಿಸಿದ್ಲು” ಜಾಲಣ್ಣ ಬೇಸರದಿಂದಲೇ ಹೇಳಿದ. ಅದಕ್ಕೆ ತಿಪ್ಪೇಶ “ಒಳ್ಳೆ ಕೆಲಸ ಮಾಡಿದ್ರಿ ಜಾಲಣ್ಣ ನಾವು ಬರಾಗಂಟ ಯಾರಿಗೂ ಈ ವಿಷಯ ತಿಳಿಯಾಕಾಗದು. ಆ ಮೇಲೆ ಕೆಲಸ ಕಳ್ಕೊಬೇಕಾಗುತ್ತೆ ಮನ್ಯಾಗ ದೂರದ ಸಂಬಂಧಿಕರ ಮನೆಗೆ ಹೋಗ್ತಾ ಇದ್ದೀವಿ ಅಂತಾ ಸುಳ್ಳು ಹೇಳಿದ್ದೀನಿ ನಾವಿನ್ನ ಹೊರಡ್ತೀವಿ ಹೊತ್ತುಟ್ಟೋ ಹೊತ್ತಿಗೆ ಊರನ್ನ ಬುಡಬೇಕು ಇಲ್ಲಾಂದ್ರೆ ಕೇಳೋರ ಪ್ರಶ್ನೆಗೆ ಉತ್ತರ ಕೊಡಾಕಾಗಕಿಲ್ಲಾ” ಕೈ ಮುಗಿದು ಅಲ್ಲಿಂದ ಹೊರಡುವರು.

ತಿಪ್ಪೇಶ ಅಂದುಕೊಂಡ ಕೆಲಸವೆಲ್ಲವೂ ಅವನು ಭಾವಿಸಿದ್ದಕ್ಕಿಂತ ಸಲೀಸಾಗಿ ಮುಗಿದುಹೋಗಿತ್ತು. ಅಂದು ಬಸ್ಸಿಳಿದು ಮನೆ ಕಡೆ ಬರುತ್ತಿದ್ದ ಲಚ್ಚಿಯನ್ನು ಕಂಡ ಯಾರು ಬೇಕಾದರೂ ಹೇಳಬಹುದಾಗಿತ್ತು. ಇದು ನೆಂಟರ ಮನೆಯ ಆತಿಥ್ಯವಲ್ಲ ಬದಲಿಗೆ ಯಾವುದೋ ಆಸ್ಪತ್ರೆಯಿಂದ ಬದುಕಿ ಬಂದ ಬಡ ಜೀವದ ಯಶೋಗಾಥೆ ಅಂತಾ ಕಣ್ಣು ಮುಚ್ಚಿದ ಲಚ್ಚಿ “ಭಗವಂತಾ ನನ್ನ ನೋವು ಇನ್ಯಾರಿಗೂ ಬ್ಯಾಡಪ್ಪಾ” ಬೇಡುವಳು. ಓ ಊರಿಂದ ಈಗ ಬಂದರಾ ಎಲ್ಲರೂ ಕ್ಷೇಮವೇ ತಿಪ್ಪೇಶಣ್ಣಾ ನಿಮ್ಮ ಸಂಬಂಧಿ ಹೇಗಿದ್ದಾರೇ…? ಎಂದು ಕೂಗುತ್ತಿದ್ದ ದಾರಿಹೋಕರ ಕಡೆ ಬೀರುತ್ತಿದ್ದ ಸುಳ್ಳು ನಗೆಯ ಮುಂದೆ ಸತ್ಯದ ಅಳು ಮೌನಕ್ಕೆ ಜಾರಿಬಿಟ್ಟಿತ್ತು. ಅಪ್ಪ ಅಮ್ಮನನ್ನು ಕಂಡು ಸಂತೋಷ ತಾಳಲಾರದೇ ಕೆಂಪವ್ವಾ ಕೈಯಲ್ಲಿ ಹಿಡಿದಿದ್ದ ಒಂದು ಪತ್ರಿಕೆಯೊಂದಿಗೆ ಓಡಿ ಬಂದಳು “ಅವ್ವಾ ಈ ಪೇಪರ್ನಾಗ ಏನು ಬರಿದಿದೆ. ಗೊತ್ತಾ…? ಕೇಳಿದ್ರೆ ನೀನು ತುಂಬಾ ಸಂತೋಷ ಪಡ್ತೀಯಾ” ಎಂದ ಮಗಳ ಮುದ್ದಾದ ಮುಗ್ದ ಮಾತಿಗೆ “ಏನು ಬರದೌರವ್ವಾ ಈ ಪೇಪರ್ನಾಗ” ಲಚ್ಚಿ ಕೇಳುವಳು “ಅವ್ವಾ ಇನ್ ಮುಂದೇ ಕೆಲಸಕ್ಕೋಸ್ಕರ ಯಾವ ಹೆಂಗಸರೂ ಗರ್ಭಕೋಶ ತೆಗೆಸ್ಕೋಬಾರದಂತೆ. ಆಮೇಲೆ ಕೆಲಸಕ್ಕೆ ಗೈರಾದರೆ ಯಾವುದೇ ಕಾರಣಕ್ಕೂ ದಂಡ ವಸೂಲಿ ಮಾಡಂಗಿಲ್ಲಾ, ಕೆಲಸ ಮಾಡೋ ಮಹಿಳೆಯರ ಸುರಕ್ಷತೆ ಮಾಲೀಕರದ್ದೇ ಅಂತಾ ಬರೆದಿದ್ದಾರೆ. ಆಮೇಲೆ ಈ ಮುಟ್ಟಿನ ದಿನಗಳಲ್ಲಿ ಸಂಬಳಾನ ಹಿಡಿಯಂಗಿಲ್ವಂತೆ” ನೋಡವ್ವಾ ನಿನ್ ಕೂಗು ಆ ದೇವರಿಗೆ ಕೇಳಿಸ್ತು ಯಾವುದೇ ಕಾರಣಕ್ಕೂ ನೀನು ಗರ್ಭಕೋಶ ತೆಗಿಸಬ್ಯಾಡವ್ವಾ” ಕೆಂಪವ್ವಳ ಸಂತೋಷಕ್ಕೆ ಪಾರವೇ ಇರಲಿಲ್ಲ, “ಅವ್ವಾ ನಾವು ವಸಿ ಬದಲಾಗಬೇಕು ಅಲ್ವೇನವ್ವಾ ಈ ಮಡಿ ಮೈಲಿಗೆ ಮೂಢನಂಬಿಕೆ ಮುಟ್ಟಾದಾಗ ಊರ ಆಚೆ ವನವಾಸ….” ಕೆಂಪವ್ವನ ಎದೆಯಲ್ಲಿ ಬಿತ್ತಿದ್ದ ಅಕ್ಷರ ಜ್ಞಾನ ಈ ಪರಿ ಬದಲಾವಣೆಗೆ ಕಾರಣವಾಗಿತ್ತು. ಮಗಳ ಮಾತಿಗೆ ಉಕ್ಕಿ ಬಂದ ಕಣ್ಣೀರನ್ನು ತಡೆದು ಲಚ್ಚಿ “ದಿಟಾ ಮಗ ನಿನ್ ತರ ತಿಳುವಳಿಕೆ ಜ್ಞಾನ, ವಿದ್ಯೆ ಎಲ್ಲಾ ಹೆಣ್ಣುಮಕ್ಕಳಿಗೂ ಬಂದರೆ ಒಂದು ಹೊಸ ಸಮಾಜವೇ ನಿರ್ಮಾಣ ಆಗುತ್ತೆ ಮನದಲ್ಲೇ ಊಹಿಸುವಳು. ಅದುವರೆವಿಗೂ ನೋವಿನಿಂದ ತಡವರಿಸಿ ಇಡುತ್ತಿದ್ದ ಲಚ್ಚಿಯ ಹೆಜ್ಜೆಗಳು ಮಗಳಿಗೆ ಅನುಮಾನ ಬಾರದಂತೆ ಸಲೀಸಾಗಿ ನಡೆಯಲಾರಂಭಿಸಿದ್ದವು.

ಕುಲದ ಮೌಢ್ಯಕ್ಕೆ ಕೂಲಿ ಕೊಡುವ ಮಾಲೀಕನ ಅಮಾನುಷ ವರ್ತನೆಗೆ ಆಳುಗಳನ್ನು ಪೂರೈಸುವ ಗುತ್ತಿಗೆದಾರರ ಷರತ್ತುಗಳಿಗೆ, ಬಡತನದಿ ಬೆಂದ ಬದುಕಿನ ಕುರುಹಾಗಿ ಅಮಾಯಕ ಹೆಣ್ಣಿನ ಅತ್ಯಮೂಲ್ಯ ಅಂಗ ಗರ್ಭಕೋಶ ಬಲಿಯಾಗಿತ್ತು.

ವೀಣಾ ನಾಗರಾಜು


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x