ನವಿಲುತೀರ್ಥದ ಈ ಮೂಲೆಯ ಹಳ್ಳಿಗೂ ಆ ಧಾರವಾಡ ಶಹರಕ್ಕೂ ಎಲ್ಲಿಂದೆಲ್ಲಿಯ ನಂಟು..?
ಅಪೂಟ ಮಳೆ ಹೋದಾಗಿನಿಂದ ಒಂದಳತಿ ನೆತ್ತಿ ಮ್ಯಾಗಳ ಸೂರ್ಯ ಇನ್ನೇನು ಬ್ಲಾಸ್ಟ ಆಗ್ತಾನೇನೋ ಅನ್ನೋ ಹಂಗ ಉರಿತಿದ್ದ. ರಸ್ತಾದ ಮ್ಯಾಲ ಬಿಸಿಲಗುದುರೆ ಅವಸರ ಮಾಡಿ ಓಡುತ್ತಿದ್ದರಿಂದ ಎಳೆಬಿಸಿಲು ರಣಹೊಡೆಧಂಗ ಹೊಡಿತಿತ್ತು. ಬಸ್ಸಿನ ಓಟವೂ, ನಿದ್ದಿಗೆಟ್ಟ ಹಸಿವು ಒಂದನಮೂನಿ ಕಸಾರಕಿ ಬಂದವರಂಗ ಹೊಟ್ಟಿಯಳಗ ಸುಳ್ಳಿ ಸುತ್ತುತ್ತಿದ್ದರಿಂದ – ಇದ್ದಬಿದ್ದದ್ದೆಲ್ಲ ಬಾಯಿಗೆ ಬಂದಂತಾಗಿ ವ್ಯಾ..ಕ ಎಂದು ಕಿಟಕಿಯೊಳಗ ಕಾರಿಕೊಂಡಳು. ಆಗ ಫ್ರೆಶ್ ಆಗಿ ಬಸ್ ಹತ್ತಿದವರ ಗರಿಗರಿ ಇಸ್ತ್ರಿ ಹೊಡೆದ ಅಂಗಿಗಳ ಮ್ಯಾಲ ಗೊಂಜ್ಯಾಳ ಉಪ್ಪಿಟ್ಟಿನ ಅಗಳಗಳು ಗುರುತು ಮಾಡಿದ್ದರಿಂದ ಆ ಮಂದಿ ಧಾರವಾಡತನಕ ಈಕೆಯನ್ನ ಬೈಯುತ್ತ, ಸಿಟ್ಟಮಾಡಿ ದುರಗುಟ್ಟುತ್ತ, ಒಟಗುಡುತ್ತಿರಲು ಮಲ್ಲವ್ವ ತಾಯಿಯ ಎದೆಯೊಳಗ ಉಳಕೊಂಡಿದ್ದ ಇನ್ನಷ್ಟು ಹಳಸಲು ನುಚ್ಚಂಬಲಿ ಕುತ್ತಗೆಗೆ ಬಂದು ಹೋದಂತಾಗತಿತ್ತು. ಕಣ್ಣಬಿಟ್ಟರ ಲೋಕವೆಲ್ಲ ತನ್ನ ಸುತ್ತ ಗಿರಗಿರ ಗಿರಕಿ ಹೊಡೀತದ ಅನ್ನೋದು ಖಾತ್ರಿ ಆದ್ದರಿಂದ ಕಣ್ಣಮುಚ್ಚಿ ಊರದೇವರನ್ನ ನೂರ ಸಲ ಜಪ ಮಾಡಲಿಕ್ಕತ್ತಿದಳು. ಓಂದೊಂದು ಗಳಿಗೆಗಳು ವರಷಗಳಾಗಿ, ಮಿನಿಟಗಳು ಯುಗಗಳಾಗಿ ಇಡೀ ಬಸ್ಸು ಕೂಳೂ ನೀರೂ ಇಲ್ಲದ ಆರಣ್ಯದಾಗ ಹೊಕ್ಕಂಗ ಹೊಂಟಿತ್ತು.
ಅಂವ ಓದಿ ದೊಡ್ಡ ಶ್ಯಾಣ್ಯಾ ಆಗ್ಯಾಣ ಅನ್ನೋದು ಬಿಟ್ಟರ ಎಲ್ಲ್ಯದೀನಿ ಏನು ಧಂದೆ ಮಾಡ್ತೀನಿ ಅಂತ ಮಾತ ತಪ್ಪಿಯೂ ಅಂದಿರಲಿಲ್ಲ. ಇಕ್ಕಟ್ಟಿಗೆ ಸಿಕ್ಕು ಇದಿಮಾಯಿ ಕೈಗೊಂಬೆಯಾಗಿ ಮಾರವಾಡ್ಯರ ಹುಡುಗಿನ ಮದುವೀ ಮಾಡ್ಕೊಂಡಾನ ಅನ್ನೋ ಪುಕಾರ ಕೇಳಿ ಎದಿ ಒಡಕೊಂಡಿದ್ದಳು. “ಎದಿಉದ್ದ ಬೆಳದ ಹುಡಗ್ಗ ಲಗ್ನ ಮಾಡಲಾರದ ನಾ ತಪ್ಪ ಮಾಡೇನಿ, ತಾಯಿ, ನನ್ನ ಕೂಸಿನ್ನ ನನಗ ಕೊಡವ್ವ ನಿನಗ ದಿಂಡಕಿ ಉರಳ್ತೇನಿ” ಅಂತ ಜೋಗುಳಬಾವಿ ಸತ್ಯವ್ವನ ಮುಂದ ಗಲ್ಲಗಲ್ಲ ಬಡಕೊಂಡದ್ದು ಅಷ್ಟ ನೆನಪ ಬಿಟ್ಟರ ಮುಂದಿನದೆಲ್ಲ ವಾಂತಿಯೊಳಗ ಹೈರಾಣಾಗಿದ್ದಳು. ಬಾಜೂಕ ಕುಂತಿದ್ದ ಮಾವಾ ಉದ್ದಾನುದ್ದದ ಗೋಪುರ ತೋರಿಸಿ ಅದ ನೋಡು ಧಾರವಾಡ ಅಂದ. ಮುರಘಾಮಠದ ಮುಂದ ನಿಂತದ್ದ ತಡ “ಲಗೂ ಇಳಿಯೂಣ ನಡಿ ಮಾವಾ” ಅಂದಳು. ‘ಇನ್ನ ಮುಂದ ಹೋಗಬೇಕೈತಿ, ಇಲ್ಲಿಗಿ ಇಳದು ಎಲ್ಲಿ ಹುಡಕಾಕಿ ಅದೀ ಹುಚ್ಚಿ’ ಅಂತ ಹುಬ್ಬಹಾರಿಸಿ ತನ್ನ ತಿಳವಳಿಕೆ ತೋರಿಸಿಕೊಂಡ. ಬಾಯಿಗೆ ಸೀರೆ ಸೆರಗ ತುರುಕಿಕೊಂಡು ಗಪಚುಪ್ ತಪಸ್ಸಿಗೆ ಕುಂತಂಗ ಕಣ್ಣಮುಚ್ಚಿದಳು. ಅಷ್ಟರಾಗ ಮಾರ್ಕೇಟ್ ದಾಟಿ ಹಳೆಹೆಡ್‍ಪೋಸ್ಟು ತಿರುವಿನಿಂದ ಹಂಗ ಒಳಮಾರಿ ಮಾಡಿ ಹಳೆಬಸ್‍ಸ್ಟ್ಯಾಂಡ್ ಮುಂದ ನಿಂತಾಗ ಲೊಕವೆಲ್ಲ ಹಳದಿಯಾಗಿ ಕಾಣಲಿಕ್ಕ ಹತ್ತಿತ್ತು. ಬಸ್ಸಿನಿಂದ ಇಳದಾಕಿನ ಪಾಯಿಖಾನೆ ಮೂಲಿಗೆ ಓಡಿ ಹೊಟ್ಟ್ಯಾಗಿನ ಕರಳ ಕಿತ್ತುಹೊರಬರುವಷ್ಟು ಜೋರಿನಿಂದ ವ್ಯಾ…ವ್ಯಾಕ ಅಂದಳು. ಮುಂಜಾನಿ ಕುಡದಿದ್ದ ಕರೀ ಚಾ.. ಹೊಟ್ಟಿತೊಳಿಸಿದ್ದರಿಂದ ಏನಂದ್ರ ಏನೂ ಬ್ಯಾಡದಾಗಿ ಅಬ್ಬಳಿಕೆ ಜೋರ ಬರಲು ಚೀಲದೊಳಗಿನ ಬಾಟಲಿ ತಗದು ಗಟಗಟ ನೀರು ಕುಡದು ನಿಟ್ಟುಸಿರಿಟ್ಟಳು.
***
ಆಕಾಶವಾಣಿ ಕೇಂದ್ರದ ದಾರಿಗುಂಟ ತೇಲಿಕೊಂಡು ಹೊರಟಿದ್ದ ಮಲ್ಲವ್ವನಿಗೆ ಎದರಾಗಿ ಬರೋ ಎಲ್ಲಾ ಸಾಲಿಮಕ್ಕಳೂ ಸದಾಶಿವನಂಗ ಕಾಣತಿದ್ದವು. ಮಾವ ಅಲ್ಲಿ ಇಲ್ಲಿ ಅಡ್ರೆಸ್ ಕೇಳಿಕೋಂತ ಮುಂದಮುಂದ ನಡೆದಿದ್ದ.. ಹಿಂದಿನಿಂದ ನಾಯಿಬಾಲಧಂಗ ಜೋತ್ಯಾಡಿಕೊಂಡ ಹೊಂಟಿದ್ದವಳ ಕಣ್ಣೊಳಗ ಕೃಷ್ಣನ ಚಕ್ರ ಗಿರಗಿಟ್ಲಿ ಆಡಿದಂತಾಗಿ ಆರ್ಟಗ್ಯಾಲರಿ ಮುಂದ ಧೊಪ್ಪನೆ ಬಿದ್ದಳು. ಹಾ..ಹೋ ಅಂತ ಕಾರಸ್ಟ್ಯಾಂಡಿನವರು ಓಡೋಡಿ ಬಂದು ಗಾಳಿ ಹಾಕಿ, ಕಾಲತಿಕ್ಕಿ, ನೀರುಚಿಮಕಿಸಿ ಕಣ್ಣಬಿಡಿಸಿದರು. ಒಂದಚಣ ಬೃಹದಾಕಾರವಾಗಿ ಬೆಳೆದ ನಿಂತಿದ್ದ ಆಲದ ಮರದಾಗ ಇದ್ದಂತನಿಸಿ ಆ ಮರದೊಳಗ ಮಾವನ ಹುಡುಕಿದಳು. ಅಂವ ಕರೀ ಮುಶ್ಯಾನ ವೇಷದಾಗ ಟೊಂಗಿಯಿಂದ ಟೊಂಗಿಗೆ ಹಾರಲಿಕ್ಕ ಹತ್ತಿದ್ದ. ನಿತ್ರಾಣಸೋಸಿ ಬಂದು ಗೋಣ ಚೆಲ್ಲಿ ಅಲ್ಲೇ ಕಟ್ಟಿಮ್ಯಾಲ ಒರಗಿದಳು.
ಈ ಮಾವಾ ಅಂದ್ರ ಶಾಂತಪ್ಪ, ಅಕೀ ಗಂಡನ ಅಣ್ಣ. ಬಲು ಮೂಬೆರಕಿ ಗಣಮಗ ಆದ್ದರಿಂದ ಹಂಗ ಸುಲಭಕ್ಕ ನಂಬಲಿಕ್ಕ ಆಗಲಾರದ ಖರೆನ ಮಂಗ್ಯಾ ಅಂವ. ಸುಳ್ಳಿಗೆ ಸುಳ್ಳ ಸೇರಿಸಿಕೋಂತ ಊರ ಮ್ಯಾಲ ತಿರಗಿ ಮೆರೆದ ಉಡಾಳ. ತನ್ನ ಗಂಡ ಗೊಟಕ್ಕ ಅಂದಾಗಿನಿಂದ ಇಲ್ಲದ ಹರಲೀ ಹೊರಿಸಿ ತನ್ನೂ ತನ್ನ ಮಗನ್ನೂ ಊರ ಬಿಡಸಲಿಕ್ಕ ಸದೋದಿತ ಉಪದ್ರವ ಕೊಟ್ಟಂವ. ಮಾತಿಗೆ ಮಾತು ಬೆಳೆದು ಲಡತಪಡತ ಜಗಳ ಶುರುವಾಯ್ತಂದ್ರ ಮನಿ ಮುಂದಲ ಹಳ್ಳ ಕುಸ್ತಿ ಅಖಾಡ ಆಗ್ತಿತ್ತು. “ತುಡಗ ಬಾವಾ, ನಿನ್ನ ಓಸು ಹುರದ ಹೋಗಲಿ, ನಿನ್ನ ಬಾಶಿಂಗ ಬೇಲ್ಯಾಗ ಬೀಳಲಿ, ಆಸ್ತಿ ಆಸೆಕ್ಕ ನನ್ನ ಮಗನ ಜೀಂವ ತಗೋಂತೀಯೇನೋ… ಬಾರಲಾ ನೀರುಳ್ಳ ಗಂಡಸ, ನಿನ್ನ ಕುಂಡ್ಯಾಗ ಎಷ್ಟ ರಗತ ಐತ್ಯೋ ನೋಡತೀನಿ ಬಾ” ಅಂದ್ರ… ಅಂವ “ಅಂವನ ಕೂಡ ಮಲಗಿ ಮಗನ ಹಡದಿ, ಇಂಥವನ ಜೋಡ ಊರೂರು ಲಾಜಿಂಗ್ ತಿರಗಿದ್ದದ್ದು ಯಾರು ಕಂಡಿಲ್ಲೇನ.. ಭೋಸುಡಿ” ಅಂತ ಹನ್ನೆರಡ ಗಂಡಸರ ಹೆಸರ ಹೇಳಿ ಹಂಗಸುತ್ತಿದ್ದ. ಆಗ ಮಲ್ಲವ್ವನ ಮೈಯಾಗಿನ ರೋಷಾವೇಶ ಮಿನಿಟಿನ್ಯಾಗ ಕಮ್ಮ ಆಗಿ, ಸದಾಶಿವನ್ನ ಎದಿಗಿ ಅವುಚಿಕೊಂಡು ಬಿಕ್ಕುತ್ತಿದ್ದಳು. ಹಂಗ ನೋಡಿದರ ಮಗ ಹುಟ್ಟಿದ್ದು ಗಂಡ ಸತ್ತ ಏಳು ತಿಂಗಳಿಗೆ ಆದ್ದರಿಂದ ಆ ಕೂಸು ತಮ್ಮ ವಂಶದÀ ಕುಡಿ ಅಲ್ಲವೇ ಅಲ್ಲ ಅನ್ನೋದು ಶಾಂತಪ್ಪನ ವಾದವಾಗಿತ್ತು. ಹಂಗ ನೋಡಿದರ ಆಕೆ ಕೇಳಿಕೊಂಡು ಬರತಿದ್ದ ಎಲ್ಲಾ ಗಂಡಸರಿಗೂ ಸದಾಶಿವ ಕಾಕಾ ಅನ್ನತಿದ್ದದ್ದು ಖರೆ ಆದ್ದರಿಂದ ಶಾಂತಪ್ಪನ ಮಾತಿನೊಳಗ ಸತ್ಯದ ಖದರ್ರೂ ಇತ್ತು.
ಅಂವ ತಿರಸಿಷ್ಟ ಆದ್ದರಿಂದ ತನ್ನ ಈಗ ಹಿಂಗ ಇರೋ ಸ್ಥಿತಿಯೊಳಗ ಬಿಟ್ಟ ಹ್ವಾದರೂ ಹೋದಾನು ಅನ್ನಿಸಿ ಅರೆಗಣ್ಣಬಿಟ್ಟು ದೃಷ್ಟಿ ಹರಿಸಿದಳು. ಅಲ್ಲಿ ಯಾರೂ ಇರಲಿಲ್ಲ. ಧಡಾರನ ಎದ್ದು ಅತ್ತಿತ್ತ ನೋಡಿದಳು.. ಮಾವ ನಕ್ಕೋತ ಒಂದು ಎಳನೀರು ಹಿಡ್ಕೊಂಡ ಬರುತ್ತಿದ್ದ.
‘ನಿನಗ ಭಾಳ ತ್ರಾಸ ಆಗೈತಿ ಕಾಣ್ತದ, ಒಂದೀಟ ಇಲ್ಲೇ ಆರಾಮ ಮಾಡು. ನೀ ಹಿಂಗ ಮಗನ ಚಿಂತಿಯೊಳಗ ಊಟಾ-ನಿದ್ದಿ ಬಿಟ್ಟರ ಏನಾದೀತು..? ಮತ್ತ ಅಂವಾದ್ರೂ ಎಲ್ಲಿ ಹೊಕ್ಕಾನಂದಿ ನಿನ್ನ ಬಿಟ್ಟು, ಸಿಕ್ಕಸಿಗ್ತಾನ. ಹಿಡಿ ಎಳನೀರ ಕುಡಿ’ ಕಾಯೊಳಗ ಪೈಪ್ ತುರುಕಿ ಬಾಯಿಗಿಟ್ಟ. ಸಿದ್ದಪ್ಪ ಮಾವ ಇಂದ್ಯಾಕೋ ಅಗದೀ ಆಕಿ ದೇವರಾಗಿ ಕಂಡ… ಬದುಕು ಬಾಳೇವದಾಗ ತನ್ನನ್ನ ಕಸಕ್ಕಿಂತ ಕಡಿಮಾಡಿ ಉಚಾಯಿಸಿ ಮಾತಾಡತಿದ್ದ ಅದ ಮನಶ್ಯಾ ಇಲ್ಲಿ ಕರುಣಾಮೂರ್ತಿ ಆಗಿದ್ದ. ಚಣ ಸಾವರಿಸಿಕೊಂಡ ಮಲ್ಲವ್ವತಾಯಿ ತನ್ನ ಮಾಮೂಲಿ ವೀರಗಚ್ಚಿ ಬಿಗದು ಮಗನ ಸುಳವಹಿಡದು ಧಾರವಾಡದ ಮೂಲೆಮೂಲಿ ತಿರಗತೊಡಗಿದಳು.
ದಣಿವಾದಲ್ಲಿ ಕುಂತು, ಚಾ-ಪಾನಿ ಕುಡಿದು ಮುಂಜಾಲಿಂದ ಸಂಜೀತನಕ ಮಾವನೂ-ಸೊಸಿನೂ ತಮ್ಮ ಕರಳ ಕುಡಿಯನ್ನ ಹುಡುಕಿ ಧಾರವಾಡದ ಚಾಳುಗಳು. ಗಲ್ಲಿ, ಸಂದಿ, ಓಣಿ, ನಗರ ಅಂತ ಹುಡುಕಿ ಹುಡುಕಿ ದಣದು ಹೋಗಿದ್ದರು. ‘ಇಲ್ಲಿಯೆ ಇದ್ದ, ಯಾಕೋ ದೂರಾಗ್ತದ ಅಂತ ಬಿಟ್ಟ ಹೋದ’ ಅಂತ ಹೇಳತಿದ್ದರೇ ಹೊರತು ಸದಾಶಿವ ಎಲ್ಲಿ ಅದಾನು ಅನ್ನೋದು ಯಾರೂ ಸುಳವು ಬಿಟ್ಟುಕೊಡಲಿಲ್ಲ. ಬಿಸಿನೆಸ್, ಪಾಲಿಸಿ, ಕಂಟ್ರಾಕ್ಟು, ಮ್ಯನೇಜಮೆಂಟು, ಓದ್ತೀನಿ ಅಂತ ಒಂದೊಂದು ಜಾಗದಲ್ಲಿ ಒಂದೊಂದು ಕೆಲಸ ಮಾಡ್ತಿದ್ದೇನೆ ಅಂತ ಹೇಳಕೊಂಡಿದ್ದ, ಲಗ್ನ ಆದ ಸುದ್ದಿ ಯಾರೂ ಉಸುರಲಿಲ್ಲ. ಕಟ್ಟಕಡೀಗೆ ಹೊಸಯಲ್ಲಾಪೂರದ ದೇಸಾಯಾರ ಚಾಳ್‍ನಿಂದ ಮಾಯವಾಗಿ ಅದೆತ್ತಲಾಗೋ ಹೋಗಿಬಿಟ್ಟಿದ್ದ.
ಮಾವ ಎಷ್ಟ ಕರದರೂ ಸದಾಶಿವ ಇಲ್ಲದ ನಾ ಊರಿಗೆ ಬರೋದಿಲ್ಲ ಅಂತ ಗಂಟಮಾರಿ ಹಕ್ಕೊಂಡು ಆಜಾದ್ ಪಾರ್ಕ ಮುಂದ ಶೆಟವೀ ಹಾಂಗ ಕುಂತಳು. ‘ಅಂವಗ ಹೆಂಗಸಿನಿಂದ ಮಾಟ ಮಾಡಿಸಲಾಗೈತಿ ಅಂತ ಅಯ್ಯನಾರ ಸಿದ್ದಯ್ಯ ಅಂಜನಾ ಹಾಕಿ ನೋಡಿದ್ದು ಖರೆ, ಅಂವ ಇನ್ನ ಐದು ವರ್ಷ ಬಿಟ್ಟು ಬಂದ ಬರ್ತಾನ ಅನ್ನೋದು ಪಕ್ಕ ಇರಲಿಲ್ಲ. ಆಕೀ ಮೈಯಾಗ ದೆವ್ವ ಹೊಕ್ಕಂಗಾಗಿ ಹಾದಿ ಮ್ಯಾಲ ಹೋಗಿ ಬರೋವರನ್ನ ತಡೆದು ನಿಲ್ಲಿಸಿ ಗುರುತು ಚಹರೆ ಹೇಳಿಕೊಂಡು ತಡಕ್ಯಾಡುತ್ತಿದ್ದಳು. “ಇಡೀ ಊರಾನ ಮಂದಿ ಇಲ್ಲೆ ಹಾದ್ಯಾಡ್ತಾರ ಅಂದ ಮ್ಯಾಲ ನನ್ನ ಮಗಾನೂ ಇಲ್ಲೆ ಬರ್ತಾನು, ನಾ ಕರಕೊಂಡ ಊರಿಗಿ ಬರಾಕಿ” ಆಕೆ ಅನಾಥಳಂತೆ ಕಣ್ತುಂಬ ನೀರು ತುಂಬಕೊಂಡು ಕೈಮುಗಿದಳು. ಶಾಂತಪ್ಪನ ಕಣ್ಣೊಳಗ ನೀರು ಜಿನಗುತ್ತಿದ್ದಂತೆ ಮಲ್ಲವ್ವಗ ಮೈಮ್ಯಾಲಿನ ಪ್ರಜ್ಞೆ ತಪ್ಪಿದಂತಾಗಿ ರಸ್ತಾಕ್ಕ ಹೋಗಿ ನಿಂತಳು. ಗಾಡಿದಡಿ ಸೀರಿಯ ಸೆರಗು ಹೊತ್ತಕೊಳ್ಳೋದರ ಅರಿವೂ ಇಲ್ಲದಂಗ ‘ಸದು, ಸದಾ,, ಸದಣ್ಣ,,, ಸದಾಶಿವ ಎಲ್ಲಿದಿಯಪಾ ನನ ಕಂದಾ… ನಿಮ್ಮವ್ವನ ಎದಿ ಬಿರಿದು ಮೊಲೆತೊಟ್ಟು ಹಾರಿ ಬೀಳ್ತದ, ಬಾರೋ ನನ್ನಪ್ಪ ಹಾಲು ಕುಡಿಬಾ’ ಅಂತ ಈಶಾ ನಮಾಜಿನ ಅವಾಜ್ ಕೂಡ ದ್ವನಿ ತಗದು ಚೀರುತ್ತಿದ್ದಳು. ಸೈತಾನಗಳು ನಾಯಿ ರೂಪದಲ್ಲಿ ಈಕಿ ಸುತ್ತ ಜಮಾಯಿಸಿದ್ದರಿಂದ ಶಾಂತಪ್ಪ ನರೋಸ ಆಗಿದ್ದರೂ ಆಕೆನ್ನ ಎಳಕೊಂಡು ಬಂದು ಪುಟ್‍ಪಾಥ ಮ್ಯಾಲ ಕುಂಡ್ರಿಸಿದ. ಅಳತಿದ್ದವಳು ಗಕ್ಕನ ತಡದು ನಕ್ಕಳು. ಏನೇನೋ ತೊದಲಿ ಬಾಯಿಗೆ-ಮನಸಿಗೆ ಏಕಶೃತಿ ಸೇರಿಧಂಗ ಮಾತಾಡುತ್ತ ಕೂದಲು ಕಿತ್ತುಕೊಳ್ಳುತ್ತಿದ್ದಳು. ಕತ್ತಲು ಕವಿಯುತ್ತಿರಲು ಆಟೋ ಹತ್ತಿಸಿಕೊಂಡು ಹುಚ್ಚರ ದವಾಖಾನಿ ಮುಂದ ಹೋಗತಿರಬೇಕಾರ ಆಕಡೀಂದ ಸದಾಶಿವ ತಪ್ಪಿಸಿಕೊಂಡು ಒಡಿ ಬರುತ್ತಿದ್ದ.
ಮಲ್ಲವ್ವ ಕೂಗಿದಳು – ‘ತಮ್ಮ ನೀ ಅರಾಮದಿಯೇನೋ.. ಹುಷಾರಿರಬೇಕಪಾ ಆಗದವರು ಮಾಟ-ಮಂತ್ರ ಮಾಡಿಸಿ ಕೊಂದಹಾಕ್ತಾರು. ನನ್ನ ಮಗಾನೂ ನಿನ್ನಂಗ ಇದ್ದ. ಎಲ್ಲ್ಯಾರ ಸಿಕ್ಕರ ಹೇಳು.. ನಿಮ್ಮವ್ವ ಹುಡಕಾಕತ್ತಿದ್ದಳು ಅಂತ’ ಬಟ್ಟಚೀಪತಿದ್ದ ಸದಾಶಿವ ಆಕಿ ಹಂತ್ಯಾಕ ಬಂದ ಅವ್ವ ಅರವು ಕಳಕೊಂಡದ್ದ ಕಂಡು ಗಾಬರಿ ಅನಿಸಿತು. ‘ಮತ್ತ ನೀ ಹೇಳತಿದ್ದ ಈ ಸಂಬಂಧಗಳ ಲೆಖ್ಖದಾಟ ಇನ್ನೂ ನನಗ ತಿಳಿವಲ್ಲದಾಗೇತಿ. ಥೇಟ್ ಜೀಂವಕ್ಕ ಜೀವ ಕೊಡುವಂಗ ನಂಬಸ್ತಾರು-ಹಿಂದಿನಿಂದ ಚೂರಿ ಹಾಕತಾರು. ಅದಕ ನಾ ಏನ ಕೆಲಸ ಮಾಡಾಕ ಹೋದರೂ ವರ್ಕೌಟ್ ಆಗವಲ್ಲದಾಗೈತಿ. ಆಯಿ ನಾ ಊರಿಗಿ ಬಂದರ ಮನ್ಯಾಗ ಸೇರಸÀಕೋಂತಿ ಹ್ಞೌದಿಲ್ಲೋ’ ಮಗ ಹೌದೋ ಅಲ್ಲೋ..ಂತ ಹುಳುಹುಳು ಮುಖ ನೋಡಿ ಗೋಣ ಅಲ್ಲಾಡಿಸಿ ‘ನೀ ಸುಳ್ಳಪ್ಪ ಸುಳ್ಳಸುಳ್ಳ ನಕಲಿ ಮಾಡತೀ’ ಆಕೀ ನಕ್ಕದ್ದ ಕಂಡು ಅಂವನೂ ನಕ್ಕ.
ಯಾರೋ ಹೇಳಿದರು…
ಅಂವÀ ದೊಡ್ಡದೊಡ್ಡ ಬಂಗಲೆಗಳ ಮುಂದ ದಿನದ ಇಪ್ಪತ್ತನಾಕ ತಾಸೂ ನಿಂತ ಇರತಿದ್ದ. ಯಾರಗೂ ಬ್ರ ಅನ್ನಲಾರದ ಯಾರ ಮಾತಾಡಿಸಿದರೂ ಮಾತಾಡಲಾರದ, ಉದ್ದಾನುದ್ದದ ಟವರ್‍ಗಳನ್ನು, ಐಶಾರಮಿ ಬಂಗಲೆಗಳನ್ನು, ಝಗಮಗಿಸೋ ಅಂಗಡಿ ಮುಂಗಟ್ಟುಗಳನ್ನು ಬಿಟ್ಟಕಣ್ಣ ಬಿಟ್ಟಂಗ ನೋಡತಾ ನಿಲ್ಲತಿದ್ದ. ಯಾರೋ ಪುಣ್ಯಾತ್ಮರು ಇಲ್ಲಿಗಿ ತಂದು ಹಾಕಿದರು…
ಶಾಂತಪ್ಪನ ಕೈಕಾಲೊಳಗ ಶಕ್ತಿ ಇಲ್ಲದಂತಾಗಿ ಅಲ್ಲೇ ಕುಸಿದು ಕುಂತ. ಅವರಿಬ್ಬರು ನಕ್ಕರು, ಅತ್ತರು, ಆಕೀ ಏನನ್ನೋ ಹುಡುಕುತ್ತಿದ್ದಳು. ಇಂವ ಏನನ್ನೋ ನೋಡುತ್ತಿದ್ದ. ಆಕೆ ಹತಾಶಳಾಗಿ ಕಿರುಚುತ್ತಿದ್ದಳು, ಇಂವ ಸುಮ್ಮನೆ ನಗುತ್ತ ಆಕಾಶದಾಗ ಅಲ್ಲೊಂದಿಲ್ಲೊಂದ ಮಿಣಕತಿದ್ದ ತಾರಾ-ಚುಕ್ಕಿಗಳನ್ನ ಎಣಿಸಿ ಲೆಕ್ಕಕ್ಕ ಬರಕೊಳ್ಳುತಲಿದ್ದ..
ನವಿಲುತೀರ್ಥದ ಆ ಮೂಲೆಯ ಹಳ್ಳಿಗೂ ಈ ಧಾರವಾಡ ಶಹರಕ್ಕೂ ಎಲ್ಲಿಂದೆಲ್ಲಿಯ ನಂಟು..? ಇಂತೀ ಈ ರೀತಿ ಮಲ್ಲವ್ವತಾಯಿಯ ಜೀವನದ ಒಂದು ಸಣ್ಣ ಪ್ರಯಾಣದ ಕಗ್ರಾಸ ಕತಿಯನ್ನ ಇಲ್ಲಿಗೆ ಮುಗಿಸುತ್ತೇವೆ.
———-