ಹೃದಯಶಿವ ಅಂಕಣ

ಕಗ್ಗಲಿಪುರದಲ್ಲೊಂದು ಕನ್ನಡ ಸೇನೆ: ಹೃದಯಶಿವ ಅಂಕಣ

ಕಗ್ಗಲಿಪುರದಲ್ಲಿ 'ಕರುನಾಡ ಗಜಕೇಸರಿ ಸೇನೆ'ಯ ಉದ್ಘಾಟನೆ ಇವತ್ತಷ್ಟೇ (ಜುಲೈ 27) ನಡೆಯಿತು. ನನಗೆ ಅಲ್ಲಲ್ಲಿ ಆಗಾಗ ಕಂಡಂಥ ಕೆಲವು ಮುಖಗಳು ಅಲ್ಲಿ ಎದುರಾದವು. ನನಗೆ ಇದ್ದಕ್ಕಿದ್ದಂತೆಯೇ ಒಂದಿಷ್ಟು ನೆನಪುಗಳು ಆವರಿಸಿದವು. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗ ಅವ್ವನ ಅವ್ವ ಹಾಗೂ ಅವ್ವನ ಅಣ್ಣನೊಂದಿಗೆ ಮೊದಲಬಾರಿ ಬೆಂಗಳೂರಿಗೆ ಬರುವಾಗ ಕಗ್ಗಲಿಪುರದ ಮಾರ್ಗವಾಗಿಯೇ ಹಾದುಬಂದಿದ್ದೆ; ಗವಿಪುರದಲ್ಲಿ ನಡೆದ ಸಂಬಂಧಿಕರೆನ್ನಿಸಿಕೊಳ್ಳುವ ಯಾರದೋ ಮದುವೆಗೆ; ಈಗ ಅದೆಲ್ಲ ಅದೇಕೋ ನೆನಪಾಯಿತು. ಅಲ್ಲೇ ಇದ್ದ ಇಬ್ಬರು ಹಳ್ಳಿ ಯುವಕರಲ್ಲಿ ಒಬ್ಬ, "ಪಂಪ್ ಸನ್ಗ್ ಬಂದ್ರಾ ಸಾ?" ಎಂದ. ಅವನಿಗೆ ಉತ್ತರಿಸಿ ಕಣ್ಣರಳಿಸುವಾಗ ಮನಸು ಮೆತ್ತಗಾಗಿತ್ತು. ಈ ಥರ ಕನ್ನಡವನ್ನಾಡುವ ನನ್ನೂರ ಜನರು ನೆನಪಾಗಿ ತುಸು ಭಾವುಕನಾದೆ. ನನ್ನ ಹಳ್ಳಿ ನೆನಪಾಗಿ ರೆಪ್ಪೆ ತೇವಗೊಂಡವು. ಅಲ್ಲಿಂದ ನಿಧಾನವಾಗಿ ಸಭಾಂಗಣದ ಒಳಹೊಕ್ಕೆ. 

ನಾನು ಅಲ್ಲಿ ಭಾಗವಹಿಸಿದ್ದು ಕನ್ನಡ ನಾಡು, ನುಡಿಗಾಗಿ ಪಣ ತೊಡುವ ಒಂದಿಷ್ಟು ಜನರನ್ನು ನೋಡಲು, ವೃಥಾ ಯಾವುದೋ ಮನರಂಜನೆಯನ್ನು ಪಡೆಯಲಿಕ್ಕಾಗಿ ಅಲ್ಲ. ಕನ್ನಡಕ್ಕಾಗಿ ಆಗಬೇಕಾದ ಕೆಲಸಗಳ ಬಗ್ಗೆಯೂ ನನಗೆ ಒಂದಿಷ್ಟು ಸ್ಪಷ್ಟತೆ ಇತ್ತು. ಕನ್ನಡಿಗರು ಕ್ರಿಯಾಶೀಲತೆಯಿಂದ ತಮ್ಮ ಇತಿಹಾಸ, ಜನಜೀವನ, ಸಾಹಿತ್ಯ, ಸಂಸ್ಕೃತಿ ಕುರಿತು ಬೀಗುವುದು, ಅಂತಃಶಕ್ತಿ ಗಟ್ಟಿಗೊಳಿಸಿಕೊಳ್ಳಲು ಒಂದಿಷ್ಟು ಬಗೆಯ ಅತ್ಯಮೂಲ್ಯ ಕೆಲಸಗಳು ಆಗಲೇಬೇಕು; ಗಟ್ಟಿದನಿಯಲ್ಲಿ ಹೋರಾಡುವುದರಿಂದ ಹಿಡಿದು ಕನ್ನಡಿಗರೆಲ್ಲರೂ ಒಗ್ಗಟ್ಟಿನಿಂದ ಮುನ್ನುಗ್ಗುವುದು, ಕನ್ನಡ ಪತ್ರಿಕೆ, ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡ ಸಿನಿಮಾ, ಕನ್ನಡ ನಾಟಕಗಳನ್ನು ನೋಡುವುದು, ಸ್ವಾಭಿಮಾನದಿಂದ ಕನ್ನಡ ಮಾತಾಡುವ ಹೆಮ್ಮೆ, ಎಫ್ ಎಂ ರೇಡಿಯೋಗಳಲ್ಲಿನ ಸ್ಪಷ್ಟ ಕನ್ನಡಕ್ಕಾಗಿ ಹೋರಾಟ, ಬೆಂಗಳೂರಿನಲ್ಲಿ ಬೀಡುಬಿಟ್ಟ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಸಿಗಬೇಕಾದ ಉದ್ಯೋಗ, ಹಿಂದಿ ಹೇರಿಕೆಯಂಥ ಕೇಂದ್ರ ಸರ್ಕಾರದ ಹುನ್ನಾರವನ್ನು ದಿಟ್ಟವಾಗಿ ಎದುರಿಸಿ ಕನ್ನಡವನ್ನು ಕಾಪಾಡಿಕೊಳ್ಳಬಲ್ಲ ಅಚಲತೆ, ಇವೆಲ್ಲವೂ ಕನ್ನಡ ಉಳಿಯಲು ಕಾರಣವಾಗುತ್ತವೆ. ಇಷ್ಟೇ ಅಲ್ಲ, ಕನ್ನಡದಲ್ಲಿ  ಬರೆಯುವ, ಚಿಂತಿಸುವ, ಧ್ಯಾನಿಸುವ, ಪರಭಾಷೆಗಳಿಂದ ಕನ್ನಡಕ್ಕೆ ಅನುವಾದಿಸುವ ಕೆಲಸವೂ ಆಗಬೇಕಿದೆ. ಸೃಜನಶೀಲತೆಯು ಅರ್ಥ ಕಳೆದುಕೊಳ್ಳುತ್ತಿರುವ ಈ ದಿನಮಾನದಲ್ಲಿ ಗರ್ವ, ಉದಾಸೀನ ಮನೋಭಾವದ ಸಾಹಿತಿಗಳಿಂದ ಉತ್ತಮ ಕೃತಿಗಳನ್ನು ನಿರೀಕ್ಷಿಸುವುದು ಕಷ್ಟ. ಇಂತಹ ಮೂಲಭೂತ ಸಂಗತಿಗಳತ್ತ ಮನಸು ಹೊರಳಿ, ಪರಾಮರ್ಶೆಗೆ ಒಳಗಾಗದ ಹೊರತು ಈ ಬಗೆಯ ಎಷ್ಟೇ ಕನ್ನಡಪರ ಸೇನೆಗಳನ್ನು, ವೇದಿಕೆಗಳನ್ನು ರೂಪಿಸಿದರೂ ಕನ್ನಡದ ಬೇರುಗಳನ್ನು ಅಪಾಯಕಾರಿ ಜಂತುಗಳಿಂದ ಪಾರುಮಾಡಿಕೊಳ್ಳಲು ಸಾಧ್ಯವಿಲ್ಲ. 

ತಮ್ಮ ಎರಡೂ ಕೈಗಳನ್ನು ಜೋಡಿಸಿ ಮನಸನ್ನು ಕಣ್ಣಿಗೆ ತಂದುಕೊಂಡು ನಿಂತ ನೂರಾರು ಜನರ ನಡುವೆ ಆಗಷ್ಟೇ ಮೆರವಣಿಗೆ ಮುಗಿಸಿ ಸಭಾಂಗಣ ಪ್ರವೇಶಿಸಿದ ಡಾ. ಮಹರ್ಷಿ ಆನಂದ ಗುರೂಜಿ ಎಂಬ ವ್ಯಕ್ತಿ ಗಂಭೀರವಾಗಿ ವೇದಿಕೆಯತ್ತ ಹೆಜ್ಜೆ ಹಾಕಿದರು: ಜನ ಕೇಕೆ ಹಾಕಿ ಶಿಳ್ಳೆ ಹೊಡೆದರು; ಹೆಂಗಸರು ಭಾವಪರವಶತೆಗೊಳಗಾದಂತೆ ಕಂಡರು; ಅವರನ್ನು ನಿಯಂತ್ರಿಸಲು ಸಾಧ್ಯವಾಗದೆ ಪ್ರಾಯಾಸಪಡುತ್ತಿದ್ದ ಕರುನಾಡ ಗಜಕೇಸರಿ ಸೇನೆಯ ಸದಸ್ಯರು 'ಜಾಗ ಬಿಡಿ… ಜಾಗ ಬಿಡಿ..' ಎಂದು ಕೂಗಿಕೊಳ್ಳುತ್ತಾ ಡಾ. ಮಹರ್ಷಿ ಆನಂದ ಗುರೂಜಿ ಎಂಬ ವ್ಯಕ್ತಿಯನ್ನು ಹೇಗೋ ವೇದಿಕೆಗೇರಿಸಿದರು. ಸಭಾಂಗಣದ ಮೂಲೆಮೂಲೆಯಿಂದಲೂ ಹರ್ಷೋದ್ಗಾರ ಕೇಳಿಬಂತು. ಗುರೂಜಿ ಎಲ್ಲರೆಡೆಗೆ ಕೈ ಬೀಸಿ ವಿಶೇಷ ವೈಭವೋಪೇತ ಆಸನದಲ್ಲಿ ಆಸೀನರಾದರು; ಅದರ ನಂತರ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಯಾರೋ ಸ್ವಾಗತ ಭಾಷಣ ಮಾಡಿದರು. ಮೊದಮೊದಲಿಗೆ ಒಬ್ಬೊಬ್ಬರದೇ  ಹೆಸರು ಮತ್ತು ಅವರ ವೃತ್ತಿ, ಸಾಧನೆ ವಿವರಗಳಿಂದ ಆರಂಭವಾದ ಸ್ವಾಗತ ಭಾಷಣವು ಪಟ್ಟಿ ಭಯಂಕರ ಉದ್ದವಿದ್ದುದರಿಂದಲೋ ಏನೋ ಬರೀ ಹೆಸರನ್ನಷ್ಟೇ ಓದುವ ಮೂಲಕ ಟಕಾ ಟಕಾ ಅಂತ ಕೇವಲ ಅರ್ಧಗಂಟೆಯಲ್ಲಿ ಮುಗಿಯಿತು. ಕನ್ನಡಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಡಾ. ಮಹರ್ಷಿ ಆನಂದ ಗುರೂಜಿ ಉಪಸ್ಥಿತಿಯ ಬಗ್ಗೆ ನಾನು ಅವರಿವರಲ್ಲಿ ವಿಚಾರಿಸಿದಂತೆ, ಆ ಜಾಗಕ್ಕೆ ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ ಪಾಟೀಲರನ್ನು ಆಹ್ವಾನಿಸಲಾಗಿತ್ತಂತೆ; ಗಜಕೇಸರಿ ಎಂಬ ಹೆಸರಿನಲ್ಲಿ ಎಲ್ಲೋ ಹಿಂದೂತ್ವದ ವಾಸನೆ ಕಂಡುಬರುತ್ತಿದೆ ಎಂಬ ತಮ್ಮ ಅನುಮಾನದ ಕಾರಣದಿಂದ ಬರಗೂರರು ತಪ್ಪಿಸಿಕೊಂಡರೆ, ಚಂಪಾ ಬೇರೇನೋ ಕಾರಣ ಹೇಳಿ ನಿರಾಕರಿಸಿದ್ದರಂತೆ. ಯಾಕಿರಬಹುದು ಎಂದು ನಿಮಗೆ ಹೇಗೆ ಬೇಕೋ ಹಾಗೆ ನೀವೇ ಊಹಿಸಿಕೊಳ್ಳಬಹುದು. 

ಸಿ.ವಿ.ಶಿವಶಂಕರ್ ಅವರ ಭಾಷಣದಲ್ಲಿ ಈ ಹೆಸರಿನ ಬಗ್ಗೆ ಯಾವುದೇ ಅನುಮಾನಗಳು ಕಂಡುಬಂದಂತಿಲ್ಲ. ಆ ಕುರಿತು ಅವರೇನೂ ಮಾತಾಡಲಿಲ್ಲ. ಬದಲಿಗೆ ಮಾತಿಗಿಂತ ಕೃತಿ ಲೇಸು ಎಂಬರ್ಥದಲ್ಲಿ ಒಂದಿಷ್ಟು ಹೇಳಿ, ಕಡೆಗೆ 'ಜೈ ಕರ್ನಾಟಕ' ಎಂದು ಮಾತು ಮುಗಿಸಿದರು. ಆದರೆ ಜಾಣಗೆರೆ ವೆಂಕಟರಾಮಯ್ಯನವರ ಜವಾಬ್ಧಾರಿಯುತ, ಸತ್ವಪೂರ್ಣ ಮಾತುಗಳನ್ನು ಆಲಿಸುವಾಗ ಕನ್ನಡದ ಬಗ್ಗೆ ಅವರಿಗಿದ್ದ ಆತಂಕ ಬಿಚ್ಚಿಕೊಳ್ಳತೊಡಗಿದ್ದವು. ಅವರ ಪ್ರಕಾರದಲ್ಲಿ, ಬೆಂಗಳೂರಿನಂಥ ಊರಿನಲ್ಲಿ ಕನ್ನಡಿಗರ ಪ್ರಮಾಣ ಶೇ.25ರಷ್ಟಿದ್ದು ಉಳಿದ ಅನ್ಯಭಾಷಿಕರು ಬೆಂಗಳೂರಿನ ಮೇಲೆ ಸಾರ್ವಭೌಮತ್ವ ಸಾಧಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಹಳ್ಳಿಯೊಂದನ್ನು ಮಹಾರಾಷ್ಟ್ರಕ್ಕೆ ಸೇರಿಸುವ ದಿಶೆಯಿಂದ ಅಲ್ಲಿಯ ಎಂ ಇ ಎಸ್ ಕಾರ್ಯಕರ್ತರು, ಶಿವಸೇನೆಯ ಪುಂಡರು ಕರ್ನಾಟಕ ಪೊಲೀಸರಿಗೆ ಹಿಗ್ಗ ಮಗ್ಗಾ ಹೊಡೆದಿದ್ದಾರೆ. ಈ ಕುರಿತು ಕರ್ನಾಟಕ ಸರ್ಕಾರ ಕಠಿಣ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ. ಕನ್ನಡ ನೆಲದ ಸುಖ, ಸಂಪತ್ತು ಅನುಭವಿಸುತ್ತಲೇ ಮಹಾರಾಷ್ಟ್ರಕ್ಕೆ ನಿಷ್ಠರಾಗಿರುವ ಮರಾಠಿ ಭಾಷಿಕರ ಅಟ್ಟಹಾಸವನ್ನು ಬೆಂಗಳೂರಿನಲ್ಲಿ ಮುಷ್ಕರ ಹೂಡುವುದರಿಂದ, ಅವರ ವಿರುದ್ಧ ಘೋಷಣೆ ಕೂಗುವುದರಿಂದ ಮಟ್ಟಹಾಕಲು ಸಾಧ್ಯವಿಲ್ಲ. ನಿಜಕ್ಕೂ ಕನ್ನಡ ನೆಲವನ್ನು ಇನ್ಯಾರೋ ದೋಚುವುದನ್ನು ತಪ್ಪಿಸಬೇಕೆಂದರೆ ಗಡಿಗೇ ಹೋಗಿ ಹೋರಾಡಬೇಕು. ಹಾಗೆಯೇ ಕೃಷ್ಣರಾಜ ಸಾಗರ, ಹೇಮಾವತಿಯಂಥ ಜಲಾಶಯಗಳು ಇನ್ನೂ ತುಂಬಬೇಕಿದೆ. ರಾಜ್ಯದಲ್ಲಿ ಇನ್ನೂ ನೆಟ್ಟಗೆ ಮಳೆಯಾಗದ ಕಾರಣ ತಮಿಳುನಾಡಿಗೆ ನೀರು ಬಿಡುವುದರಿಂದ ಕರ್ನಾಟಕದ ರೈತರು ಸಂಕಷ್ಟ ಅನುಭವಿಸಬೇಕಾಗುತ್ತದೆ."

ಕಾರಣಾಂತರಗಳಿಂದ ನಾಲ್ಕೈದು ತಿಂಗಳಿಂದ ಮುಂದೂಡಲ್ಪಟ್ಟ ಈ ಕಾರ್ಯಕ್ರಮ ಈ ಬಾರಿ ಡಾ. ಮಹರ್ಷಿ ಆನಂದ ಗುರೂಜಿ ಬೆಂಬಲದಿಂದ ನಡೆದಿದೆ. ಕನ್ನಡ ನೆಲ, ಜಲ, ಸಂಸ್ಕೃತಿಯನ್ನು ಉಳಿಸಲು ದಿಟ್ಟ ಹೆಜ್ಜೆ ಇಡುವಲ್ಲಿ ಕಾರ್ಯಮಗ್ನವಾಗಬೇಕಾದ ಇಂಥದೊಂದು ಸೇನೆ ಗುರೂಜಿಯಂತಹ ಧಾರ್ಮಿಕ ವ್ಯಕ್ತಿಯೊಬ್ಬರ ಮುಂದಾಳತ್ವದಲ್ಲಿ ಉದ್ಘಾಟನೆ ಹೊಂದುವ ಬದಲು ಇನ್ನಷ್ಟು ಕಾಲ ಮುಂದೂಡಿ ಕೊನೆಯ ಪಕ್ಷ ಕನ್ನಡ ಭಾಷೆಗೆ, ಕನ್ನಡ ಸಂಸ್ಕೃತಿಗೆ ಕಿಂಚಿತ್ತಾದರೂ ಸೇವೆ ಸಲ್ಲಿಸಿದ ವ್ಯಕ್ತಿಯೊಬ್ಬರ ನೇತೃತ್ವದಲ್ಲಿ ಈ ಕರುನಾಡ ಗಜಕೇಸರಿ ಸೇನೆಯ ಉದ್ಘಾಟನೆಯನ್ನು ಸರಳವಾಗಿ, ಎಲ್ಲ ಕನ್ನಡ ಬಂಧುಗಳಿಗೂ ಖುಷಿಯಾಗುವಂತೆ ನೆರವೇರಿಸಿಕೊಳ್ಳಬಹುದಿತ್ತು.

ವೇದಿಕೆಯ ಮೇಲಿದ್ದ ನಾನು ಈ ಸಮಾರಂಭದ ಸ್ವಾದವನ್ನು ಸವಿಯಲಾಗಲಿಲ್ಲ, ಕನ್ನಡದ ಬಗ್ಗೆ ನಿಜಕ್ಕೂ ಕಾಳಜಿಯಿದ್ದ ಕೆಲವು ಮುಖಗಳನ್ನಾದರೂ ಅಲ್ಲಿ ಕಾಣಲಿಲ್ಲವೆಂಬುದು ಸಣ್ಣ ಸಂಗತಿ; ಅಲ್ಲಿ ನೆರೆದಿದ್ದ ನೂರಾರು ಜನರ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದು, ಗುರೂಜಿಯವರ ದರ್ಶನ, ಆಶೀರ್ವಾದಕ್ಕಾಗಿಯೇ ಆಗಮಿಸಿದ್ದಂತೆ ಕಂಡರು. ಕೆಲವು ಬಾಣಂತಿಯರು ಎಳೆಮಕ್ಕಳನ್ನು ವೇದಿಕೆಯ ಮೇಲೆ ಆಸೀನರಾಗಿದ್ದ ಗುರೂಜಿಯವರ ಪಾದಗಳ ಮೇಲಿಟ್ಟು ಆಶೀರ್ವಾದ ಬೇಡುತ್ತಿದ್ದರೆ, ಒಂದಿಷ್ಟು ಮುದುಕಿಯರು ಗುರೂಜಿಯವರ ಚರಣಕ್ಕೆರಗಿ ನಮಸ್ಕರಿಸುತ್ತಿದ್ದರು. ಗುರೂಜಿಯವರ ಪಕ್ಕದಲ್ಲಿಯೇ ಕುಳಿತಿದ್ದ ನಾನು ಇದನ್ನೆಲ್ಲಾ ಗಮನಿಸುತ್ತಿದ್ದರೆ ಪಾಪ ಕೋ.ವೆಂ.ರಾಮಕೃಷ್ಣೇಗೌಡರು ತಮ್ಮ ಪಾಡಿಗೆ ತಾವು ಭಾಷಣ ಮಾಡುತ್ತಿದ್ದರು. ಹಾಗೆಯೇ ಈ ಎಲ್ಲ ಗೋಜಲುಗಳ ನಡುವೆಯೇ ನಾನು, ರಮೇಶ್ ಹಿರೇಜಂಬೂರ್, ಬೇಲೂರು ರಘುನಂದನ್, ನಿಶಾ ಗೋಪಿನಾಥ್, ನಾಗೇಶ್ ಟಿ.ಕೆ.  ಸನ್ಮಾನಕ್ಕೊಳಗಾದೆವು. ನನ್ನ ಕೈಗೆ ಮೈಕು ಬರುವುದರೊಳಗೆ ನನಗೆ ಗೊತ್ತಾಗಿದ್ದು 'ಇಲ್ಲಿ ಕನ್ನಡದ ಬಗ್ಗೆ ಹೆಚ್ಚು ಮಾತಾಡುವ ಸಾಹಸಕ್ಕೆ ಕೈಹಾಕಬಾರದು' ಎಂಬ ಸಂಗತಿ. ಆದರೂ ಕನ್ನಡದ ಉಳಿವಿಗೆ, ಕನ್ನಡಿಗರ ಶ್ರೇಯೋಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳ ಹೊರತಾಗಿ ಸಾಮಾನ್ಯ ಕನ್ನಡಿಗರ ಮಟ್ಟದಲ್ಲಿ ಆಗಬೇಕಾದ ಒಂದಿಷ್ಟು ಕೆಲಸಗಳ ಬಗ್ಗೆ, ಕನ್ನಡ ಸಂಸ್ಕೃತಿಯನ್ನು ನಾವಲ್ಲದೆ ಪರಭಾಷಿಕರು ಉಳಿಸುವುದಿಲ್ಲ ಎಂಬುದರ ಬಗ್ಗೆ ಕೆಲನಿಮಿಷಗಳ ಕಾಲ ನನ್ನ ಕನಕಪುರ ಕನ್ನಡದಲ್ಲಿ ಮಾತಾಡಿ ನನ್ನದೇ ರಚನೆಯ ಒಂದು ಕನ್ನಡಗೀತೆಯನ್ನು ಹಾಡಿ ಮುಗಿಸುವ ಮೂಲಕ ಮೈಕಿಗೆ ನಮಸ್ಕಾರ ಹೇಳಿ ನನ್ನ ಜಾಗದಲ್ಲಿ ಬಿಗಿಯಾಗಿ ಕೂತೆ. ಬಲಭಾಗದಲ್ಲಿದ್ದ ಗುರೂಜಿ, "ನಿಮ್ಮ ಬೆಳವಣಿಗೆ ಖುಷಿ ಕೊಡುತ್ತೆ" ಎಂದರೆ ಎಡಭಾಗದಲ್ಲಿ ಕುಳಿತಿದ್ದ ರಮೇಶ್ ಹಿರೇಜಂಬೂರ್ "ಚೆನ್ನಾಗಿತ್ತು" ಅಂತ ಹೇಳಿ ಕೈಕುಲುಕಿದರು. ರಮೇಶ್ ಹಿರೇಜಂಬೂರರ ಪಕ್ಕದಲ್ಲಿ ಕುಳಿತಿದ್ದ ಬೇಲೂರು ರಘುನಂದನ್ ನನ್ನೆಡೆಗೆ ತಿಗುಗಿ ಸ್ಮೈಲ್ ಕೊಟ್ಟು ಮತ್ತೆ ಜನರತ್ತ ಮುಖ ಮಾಡಿ ಸೀರಿಯಸ್ಸಾದರು. ನಾನು ಏನೂ ಅರ್ಥವಾಗದವನಂತೆ ಜೀವಂತ ಪುತ್ಥಳಿಯಾಗಿದ್ದೆ. ಆಮೇಲೆ ಗುರೂಜಿಯವರ ತಲೆಯ ಮೇಲೆ ಬೆಳ್ಳಿ ಕಿರೀಟ ಇಟ್ಟು ಜನ ಕೇಕೆ ಹಾಕಿ ಕೈ ಮುಗಿದು ಕುಪ್ಪಳಿಸಿದರು. ಗುರೂಜಿ ಕೈಗೆ ಮೈಕು ರವಾನೆಯಾಗಿ "ನಿಮ್ಮ ಸಮಸ್ಯೆಗಳಿಗೆ ನಾನು ಪರಿಹಾರ ನೀಡುತ್ತೇನೆ" ಎಂಬ ಜನರ ಕುರಿತ ಅವರ ಮಾತುಗಳು ಹೊರಬೀಳುತ್ತಿದ್ದಂತೆಯೇ ನಾನು ಅಲ್ಲಿಂದ ಕಾಲ್ಕಿತ್ತೆ. 

ಇತ್ತೀಚಿನ ವರ್ಷಗಳ ಹಿಂದೆ ರೈಲ್ವೆ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಕೇವಲ ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿದ್ದೂ, ಹೋರಾಟದ ನಂತರ ಕನ್ನಡದಲ್ಲಿಯೂ ಪ್ರಶ್ನೆ ಪತ್ರಿಕೆಗಳು ಬಂದವು. ಆ ಮೂಲಕ ಹಳ್ಳಿಗಾಡಿನ, ಕನ್ನಡ ಮಾಧ್ಯಮದಲ್ಲಿ ಓದಿದ ಕನ್ನಡಿಗ ವಿದ್ಯಾರ್ಥಿಗಳು ಕನ್ನಡದಲ್ಲಿ ಮುದ್ರಿತವಾದ ಪ್ರಶ್ನೆಪತ್ರಿಕೆಗೆ ಸುಲಭದಲ್ಲಿ ಉತ್ತರ ಬರೆದು, ಪಾಸಾಗಿ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ದಾರಿಯಾಗಿದ್ದು ನಿಮಗೆ ತಿಳಿದಿದೆಯಲ್ಲವೇ? ಹಾಗೆಯೇ ಮೊನ್ನೆಮೊನ್ನೆಯಷ್ಟೇ ನಡೆದ ಯುಪಿಎಸ್ ಸಿ ಪರೀಕ್ಷೆಯ ಪ್ರಥಮ ಪತ್ರಿಕೆ ಇಂಗ್ಲೀಷ್ ಹಾಗೂ ಹಿಂದಿಯಲ್ಲಿದ್ದು ದ್ವಿತೀಯ ಪತ್ರಿಕೆ ಕೇವಲ ಇಂಗ್ಲೀಷ್ ಭಾಷೆಯಲ್ಲಿತ್ತು ಎಂಬ ಕಾರಣಕ್ಕೆ ಹಿಂದಿಯಲ್ಲಿ ಪ್ರಶ್ನೆಪತ್ರಿಕೆ ಬಯಸಿದ್ದ ದೆಹಲಿ, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಉತ್ತರಭಾರತದ ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯ ಹಕ್ಕಿಗಾಗಿ ಹೋರಾಟ ನಡೆಸಿದ್ದರು; ಅವರನ್ನು ಬಂಧಿಸಿದ ಪೊಲೀಸರು ಕ್ರಮೇಣ ಬಿಡುಗಡೆ ಮಾಡಿದ್ದರ ಬಗ್ಗೆಯೂ ನೀವು ಓದಿರುತ್ತೀರಿ, ಕೇಳಿರುತ್ತೀರಿ ಅಲ್ಲವೇ?  ತಮ್ಮ ಮಾತೃಭಾಷೆಯಾದ ಹಿಂದಿ ಎಲ್ಲೋ ಒಂದು ಕಡೆ ಇಂಗ್ಲೀಷಿನಂತಹ ಭಾಷೆಯ ದಾಳಿಗೆ ಸಿಕ್ಕಿ ನಲುಗುವ ಮೂಲಕ ತಮ್ಮ ಓದುವ, ಬರೆಯುವ, ಉದ್ಯೋಗ ಪಡೆಯುವ ಹಕ್ಕನ್ನು ಕಿತ್ತುಕೊಳ್ಳುತ್ತಿದೆ ಎಂದು ಮನಗಂಡ ಉತ್ತರ ಭಾರತೀಯರು ಈ ಪರಿ ಹೋರಾಡುವಾಗ ಪದೇ ಪದೇ ಹೊಡೆತಕ್ಕೆ ಸಿಲುಕಿ ಚೇತರಿಸಿಕೊಳ್ಳಲು ಹೆಣಗಾಡುತ್ತಿರುವ, ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ, ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಅಪಾರ ಸಂಪತ್ಭರಿತವಾಗಿರುವ ಕನ್ನಡ ಭಾಷೆಯ ಅಸ್ತಿತ್ವದ ಬಗ್ಗೆ ಯೋಚಿಸಿದರೆ ಕಣ್ಣು ತುಂಬಿಬರುವುದಿಲ್ಲವೇ? 

ಇಂತಹ ನಮ್ಮ ಕನ್ನಡಿಗ ವಿದ್ಯಾರ್ಥಿಗಳಲ್ಲಿ, ಅವರ ಉತ್ತಮ ಭವಿಷ್ಯದ ಬಗ್ಗೆ ಕನಸು ಕಾಣುತ್ತಿರುವ ಅವರ ಆಸೆಗಣ್ಣಿನ ಹೆತ್ತವರಲ್ಲಿ ಭಾಷೆಯ ಉಳಿವಿನ ಬಗ್ಗೆ ಚಿಂತಿಸಬಲ್ಲ, ಅಂತಹ ಚಿಂತನೆಯ ಅಡಿಪಾಯದ ಮೇಲೆ ಕರುನಾಡ ಗಜಕೇಸರಿ ಸೇನೆಯಂತಹ ಸಂಘ ಸಂಸ್ಥೆಗಳು ಸಾಗಬೇಕಾದ ಅನಿವಾರ್ಯತೆ ಇದೆ. ಅದನ್ನರಿತು ಈ ಸೇನೆ ತಮ್ಮತಮ್ಮೊಳಗಿನ ಭಿನ್ನಾಭಿಪ್ರಾಯಗಳಿಗೆ ಎಡೆಮಾಡಿಕೊಡದೆ, ಕನ್ನಡ ಕೆಲಸದಲ್ಲಿ ಅನಗತ್ಯವಾಗಿ ಧಾರ್ಮಿಕ ವ್ಯಕ್ತಿಗಳನ್ನು ತಂದುಕೊಳ್ಳದೆ ಕಾರ್ಯಪ್ರವೃತ್ತವಾದರೆ ಕನ್ನಡ ಭಾಷೆಗೆ ಒಂದು ಬಲಿಷ್ಠ ರೆಕ್ಕೆ ಬಂದಂತಾಗುತ್ತದೆ. ಇಲ್ಲದೇ ಹೋದ ಪಕ್ಷದಲ್ಲಿ ಪಶ್ಚಾತ್ತಾಪದ, ಅಸಹನೆಯ ಕಾರ್ಮುಗಿಲೊಂದು ಹೊಸಬೆಳಕಿನ ಕನಸು ಕಾಣುತ್ತಿರುವ ಈ ಸೇನೆಯ ಅಧ್ಯಕ್ಷ ಶ್ರೀನಾಥ್ ಗೌಡ ಹಾಗೂ ಇತರ ಸದಸ್ಯರನ್ನು ಕವಿಯಬಹುದು. ಹಾಗಾದಿರಲಿ ಎಂಬುದು ನನ್ನ ಆಶಯ. ಸಿರಿಗನ್ನಡಂ ಗೆಲ್ಗೆ.

-ಹೃದಯಶಿವ

ಕನ್ನಡದ ಬರಹಗಳನ್ನು ಹಂಚಿ ಹರಡಿ

10 thoughts on “ಕಗ್ಗಲಿಪುರದಲ್ಲೊಂದು ಕನ್ನಡ ಸೇನೆ: ಹೃದಯಶಿವ ಅಂಕಣ

 1. ಶಿವ ಅವರೇ ನಿಮ್ಮ ಸೂಕ್ಷ್ಮತೆ ಮತ್ತು ಗ್ರಹಿಕೆ ಎರಡೂ ಸರಿಯಿದೆ. ನಾನು ಹೇಳ ಬೇಕೆಂದಿದ್ದು ಮನದಲ್ಲಿ ಬಂದದ್ದನ್ನು ಸರಿಯಾಗಿ ಹೇಳಿದ್ದೀರಿ. ಆಮೇಲೆ ನೆನ್ನೆ ಮಾಡಿದ ಭಾಷಣ ಆ ಸಮಾರಂಭಕ್ಕೆ  ಸರಿಯಿತ್ತು ಆದ್ರೆ ನೀವು ಉಲ್ಲೇಖಿಸಿದ ಸಾಹಿತ್ಯ ಪಾಠಗಳು ಅಲ್ಲಿ ದಕ್ಕಲಿಲ್ಲ. ಅದನ್ನು ಹೊರತು ಪಡಿಸಿದರೆ ಇನ್ನೆಲ್ಲಾ ಓಕೆ. ಆದ್ರೆ ನೆನ್ನೆ ಕಾರ್ಯಕ್ರಮ ಈ ಪಾಟಿ ಅಂತ ಗೊತ್ತಾಗಲಿಲ್ಲ. ಅನಭವ ಎಲ್ಲವನ್ನು ಕೊಡ್ತಾ ಹೋಗತ್ತೆ ಪಡ್ಕೋಬೇಕು ಬೇಕಾದನ್ನು ಇಟ್ಕೊಬೇಕು. ಸಂಘಟನೆಗಳು ಸಾಗುವ ದಾರಿಗಳು ಈ ಹೊತ್ತಿನಲ್ಲಿ ಇನ್ನೂ ಸ್ಪಷ್ಟವಾಗಬೇಕು ಅಂತಷ್ಟೇ ಹೇಳಬಲ್ಲೆ. ನಾವು ಯುವಕರು ದಿಕ್ಕು ತಪ್ಪಬಾರದಷ್ಟೇ.  ಒಳ್ಳೇ ಲೇಖನ ಕವಿ ಮಿತ್ರ…….

 2. ನಿನ್ನೆಯಷ್ಟೇ ನಡೆದ ಕಾರ್ಯಕ್ರಮದ ಕುರಿತು ಎಳೆಎಳೆಯಾಗಿ ಎಲ್ಲವನ್ನೂ ವಿವರಿಸಿದ್ದೀರಿ.ಹೌದು ಇಂತಹ ಕಾರ್ಯಕ್ರಮಗಳಿಗೆ ಧಾರ್ಮಿಕ ವ್ಯಕ್ತಿಯ ಉಪಸ್ಥಿತಿ ಬೇಕಿರಲಿಲ್ಲ. ಕೆಲವರು ಶೋಕಿಗೆ ಆದರೆ ಇನ್ನಳಿದ ಎಷ್ಟೋ ಜನ ಹೊಟ್ಟಿೆಪಾಡಿನ ಅನಿವಾರ್ಯತೆಗಾಗಿ ಅನ್ಯ ಭಾಷೆಗಳ ಮೊರೆ ಹೋಗುತ್ತಿದ್ದಾರೆ. ಉತ್ತರ ಭಾರತೀಯ ಜನರಂತೆ ನಾವು ಕೂಡ ಒಗ್ಗೂಡಿ ನಮ್ಮ ತಾಯಿ ಭಾಷೆಯನ್ನು ಉಳಿಸಿ ಬೆಳೆಸಬೇಕಾಗಿದೆ.

  ಕನ್ನಡ ಪ್ರೇಮಿಯ ಈ ಲೇಖನದ ಕಳಕಳಿ ಮನ ತಟ್ಟಿತು. ಚಂದದ ಲೇಖನ. ಸಿರಿಗನ್ನಡಂ ಗೆಲ್ಗೆ!

  ರುಕ್ಮಿಣಿ ಎನ್.

 3. ಕಾರ್ಯಕ್ರಮದ ವಿವರಣೆಯೊಂದಿಗೆ ಸೂಕ್ಷ್ಮತೆ ಎತ್ತಿ ಹಿಡಿದ ಲೇಖನ….. ಸಿರಿಗನ್ನಡಂ ಗೆಲ್ಗೆ!…..

 4. ಜಾಗತೀಕರಣದಿಂದಾಗಿ ಹಳ್ಳಿಗಳೆಲ್ಲಾ
  ಪೇಟೆಗಳಾಗುತ್ತಿವೆ ಭಾಷೆಯನ್ನು
  ನಿಧಾನವಾಗಿ ಕೊಲ್ಲುತ್ತಾ…
  ಸರ್ಕಾರ ಕನಿಷ್ಟ ೧೦ನೇ ತರಗತಿಯವರೆಗೆ
  ಕನ್ನಡವನ್ನು ಕಡ್ಡಾಯ ಮಾಡಬೇಕು.
  ಬರಹ ಚೆನ್ನಾಗಿದೆ. ಧನ್ಯವಾದಗಳು.

Leave a Reply

Your email address will not be published. Required fields are marked *