ಚಿಕ್ಕವನಿದ್ದಾಗ ಎಂದು ಹೇಳಬಹುದು. ಹಲವು ಘಟನೆಗಳು ಕಾಲಾನುಕ್ರಮದಲ್ಲಿ ಮರೆತು ಹೋಗುತ್ತವೆ. ಕೆಲವು ಘಟನೆಗಳು ಮರೆತು ಬಿಡಬೇಕೆಂದರು ಮರೆಯಲಾಗುವುದಿಲ್ಲ. ನಮ್ಮದು ಆವಾಗ ಜೋಡು ಕುಟುಂಬ. ೧೮ ಅಂಕಣದ ಸೋಗೆ ಮನೆಯಲ್ಲಿ ಎಲ್ಲಾ ಒಟ್ಟು ಸೇರಿ ಹತ್ತಾರು ತಿನ್ನುವ ಬಾಯಿಗಳು. ಪ್ರತಿವರ್ಷ ಇಡೀ ಮನೆಯ ಸೋಗೆಯನ್ನು ಬದಲಾಯಿಸಿ ಹೊಸದನ್ನು ಹೊದಿಸಬೇಕು. ಅದೊಂದು ವಾರದ ಕಾರ್ಯಕ್ರಮ. ಹತ್ತಾರು ಆಳು-ಕಾಳುಗಳು ಅವರಿಗೆ ಊಟ-ತಿಂಡಿ, ಬೆಲ್ಲದ ಕಾಫಿ ಇತ್ಯಾದಿಗಳು. ಅದಿರಲಿ ಈಗ ಹೇಳ ಹೊರಟಿರುವ ಕತೆಗೆ ಹಿಂದಿನ ವಾಕ್ಯಗಳು ಪೂರಕವಷ್ಟೆ. ವರ್ಷದಲ್ಲೊಂದು ಬಾರಿ ಅಂದರೆ ನವಂಬರ್‌ನಲ್ಲಿ ಕಂಬಳಿಹುಳುಗಳ ಕಾಟ. ಕೆಲವೊಮ್ಮೆ ಅಗಣಿತ ಸಂಖ್ಯೆಯಲ್ಲಿ ಕಂಬಳಿಹುಳುಗಳ ಮರಿಗಳು ಎಲ್ಲೆಂದರಲ್ಲಿ ಓಡಾಡುತ್ತಿದ್ದವು. ಕೆಂಪಗಿನ ಮಣ್ಣಿನ ಮುಳ್ಳುಗೋಡೆಗಳ ತುಂಬಾ ಕಂಬಳಿಹುಳುಗಳು. ಮಣ್ಣಿನ ಗೋಡೆಯ ಮೂಲ ಬಣ್ಣ ಕಾಣದಂತೆ ಕಪ್ಪು-ಕಪ್ಪು. ಮೈಗೆ ತಾಗಿದರೆ ಉರಿ ಜೊತೆಗೆ ವಿಪರೀತ ಕಡಿತ. ಸೋಗೆ ಮನೆಯಲ್ಲಿ ಸ್ವಾಭಾವಿಕವಾಗಿ ಕಂಬಳಿಹುಳುಗಳ ಕಾಟ ಹೆಚ್ಚು. ಕೆಲವೊಂದು ಬಾರಿ ಸೀಮೆ ಎಣ್ಣೆ ಸಿಂಪಡಿಸಿ ಅವುಗಳನ್ನು ಹದಕ್ಕೆ ತರುವ ಪ್ರಯತ್ನವೂ ನಡೆಯುತ್ತಿತ್ತು. ಸೋಗೆ ಮನೆಗೆ ಸೀಮೆಎಣ್ಣೆ ಸಿಂಪಡಿಸಿ ಏನಾದರೂ ಬೆಂಕಿ ತಗುಲಿದರೆ ಯಾವ ದೇವನೂ ಬಂದು ಕಾಪಾಡಲಾರ. ಹಾಗಾಗಿ ಕಂಬಳಿಹುಳುಗಳ ಜೊತೆ ಏಗುವುದು ಅನಿವಾರ್ಯವಾಗಿತ್ತು. ಬಡತನದ ಜೊತೆಗೆ ವಿಪರೀತ ಕಂಬಳಿಹುಳುಗಳ ಆ ದಾಳಿ ಆಗಿನ ಜನರನ್ನು ಕಂಗೆಡಿಸಿತ್ತು ಜೊತೆಗೆ ಕಂಬಳಿಹುಳುಗಳ ಮೇಲೆ ಅವರಿಗೆ ಅಪಾರ ಕೋಪವಿತ್ತು. ಇದೆಲ್ಲವೂ ಸ್ವಲ್ಪ-ಸ್ವಲ್ಪ ನೆನಪಿರುವ ಸಂಗತಿಗಳು. ಒಮ್ಮೆ ಸುಮಾರು ಎರೆಡುವರೆ ಅಥವಾ ಮೂರಿಂಚು ಉದ್ದದ ಕಂಬಳಿಹುಳು ಮನೆಯ ಬದಿಯ ಕಟ್ಟೆಯ ಮೇಲೆ ಸರ-ಸರ ಸಾಗುತ್ತಿತ್ತು. ಹೆಬ್ಬೆಟ್ಟು ದಪ್ಪವಿರುವ ಆ ಕಂಬಳಿಹುಳು ನೋಡಲು ಸುಂದರವಾಗಿತ್ತು. ಅಚ್ಚ ಕಪ್ಪುಬಣ್ಣದ ಕೂದಲನ್ನು ಮೈತುಂಬಾ ಹೊಂದಿದ ಅದು ಮಿನಿ ಕರಡಿಯಂತೆ ತೋರುತ್ತಿತ್ತು. ಆದರೆ ಅದರ ಗ್ರಹಚಾರ ನೆಟ್ಟಗಿರಲಿಲ್ಲ. ಅದನ್ನು ನೋಡಿದ ಒಬ್ಬ ಆಳು ಅಲ್ಲೇ ಇದ್ದ ಸೀಮೆಎಣ್ಣೆಯನ್ನು ಅದರ ಮೇಲೆ ಸುರುವಿದ. ಘಾಟು ವಾಸನೆಗೆ ವಿಲಿ-ವಿಲಿ ಒದ್ದಾಡುತ್ತಿದ್ದ ಅದಕ್ಕೆ ಬೆಂಕಿಕಡ್ಡಿ ಕೊರೆದು ಹಚ್ಚಿದ. ಕ್ಷಣ ಮಾತ್ರದಲ್ಲಿ ಕಂಬಳಿಹುಳು ಕರಕಲಾಗಿ ಹೋಯ್ತು. ಆ ಆಳು ಯುದ್ಧ ಗೆದ್ದವನಂತೆ ಮುಖ ಮಾಡಿಕೊಂಡು ಹೋದ.
ನಾನು ಕೆಲಸ ಮಾಡುವ ಜಾಗದ ಪಕ್ಕದ ಮನೆಯಲ್ಲಿ ಒಬ್ಬ ಚಿನ್ನ-ಬೆಳ್ಳಿ ವ್ಯಾಪಾರಿಯಿದ್ದಾರೆ. ಸಜ್ಜನ, ವಿನಯವಂತ. ಅವರಿಗೆ ಈಗ ಮೂರು ವರ್ಷದ ಕೆಳಗೆ ಮೆದುಳಿನಲ್ಲಿ ರಕ್ತಸ್ರಾವವಾಗಿ ಬೆಂಗಳೂರಿನ ದೊಡ್ಡಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ದೈಹಿಕವಾಗಿ ಏನೂ ಸಮಸ್ಯೆಯಿಲ್ಲ. ತನ್ನ ಬಾಳಿನಲ್ಲಿ ಹೀಗಾಯಿತಲ್ಲ ಎಂಬುದನ್ನು ಕಂಡವರಿಗೆಲ್ಲಾ ಹೇಳುತ್ತಾ ಕೊರಗುವುದು ಅವರಿಗೊಂದು ಚಟವಾಗಿದೆ. ಇವರ ಈ ಚಟದಿಂದ ಮನೆಯವರಿಗೆ, ಅಕ್ಕ-ಪಕ್ಕದವರಿಗೆ ಸ್ವಲ್ಪ ಕಿರಿ-ಕಿರಿಯಾಗುತ್ತದೆ. ದಿನನಿತ್ಯ ಕಾಡುವ ಇವರನ್ನು ಹೇಗಾದರೂ ಮಾಡಿ ಸರಿಮಾಡಬೇಕೆಂಬ ಉದ್ಧೇಶದಿಂದ ಅವರಿಗೆ ಬೆಳಗ್ಗೆ ಬೇಗ ಎದ್ದು ನನ್ನ ಜೊತೆ ಬರಲು ಹೇಳಿದೆ. ಆ ಮನುಷ್ಯ ಸೂರ್ಯವಂಶಿ ಅಂದರೆ ೯ ಗಂಟೆಯ ಮೇಲೆ ಹಾಸಿಗೆಯಿಂದ ಏಳುವ ಪರಿಪಾಠ ಲಾಗಾಯ್ತಿನಿಂದಲೂ ಇದೆ. ಹರಸಾಹಸ ಮಾಡಿ ಬೇಗ ಏಳಲು ಒಪ್ಪಿಸಿದ್ದಾಯಿತು. ಪ್ರತಿದಿನ ೨-೩ ಕಿ.ಮಿ. ವಾಕಿಂಗ್ ಮಾಡುವುದು. ವಾಪಾಸು ಬರವಷ್ಟರಲ್ಲಿ ಬೆಳಕು ಹರಿಯುತ್ತದೆ. ಹೀಗೆ ವಾಪಾಸು ಬರುವಾಗ ತಾರು ರಸ್ತೆ ಇಳಿದು ನುಣಿ ಮಣ್ಣಿನಲ್ಲಿ ಒಂದು ದೊಡ್ಡ ಕಂಬಳಿಹುಳು ಎಕ್ಸ್‌ಪ್ರೆಸ್ ರೈಲಿನ ವೇಗದಲ್ಲಿ ಹೋಗುತ್ತಿತ್ತು. ಅದು ಹರಿದು ಹೋದ ಜಾಗದಲ್ಲಿ ಗೆರೆ ಮೂಡುತಿತ್ತು. ಸ್ನೇಹಿತರಿಗೆ ಕಂಬಳಿಹುಳು ನೋಡಿ ಎಷ್ಟು ಚೆನ್ನಾಗಿದೆ. ನೀವೆಂತಾ ಜನ ಮಾರಾಯ್ರೆ, ಕಂಬ್ಳಿಹುಳ ಚೆನ್ನಾಗಿದೆ ಅಂತಿರಲ್ಲಾ ಎಂದರು. ಕಂಬಳಿಹುಳ ಮೈಗೆ ಹತ್ತಿದರೆ ಮೈ ತುರಿಕೆಯಾಗುತ್ತದೆ ಎಂಬ ವಿಚಾರವಷ್ಟೇ ಅವರಿಗೆ ಗೊತ್ತು. ಕಂಬಳಿಹುಳ ಚಿಟ್ಟೆಯಾಗುತ್ತದೆ, ಚಿಟ್ಟೆಗಳು ಪರಾಗಸ್ಪರ್ಶ ಮಾಡುತ್ತವೆ. ನಾವು ಉಣ್ಣುವ ಅಕ್ಕಿ, ತಿನ್ನುವ ಪದಾರ್ಥಗಳ ತಯಾರಿಕೆಯಲ್ಲಿ ಚಿಟ್ಟೆಗಳ ಸೇವೆ ಇದೆ ಎಂಬ ಯಾವ ವಿಚಾರವೂ ಗೊತ್ತಿರಲಿಲ್ಲ. ತಿಳಿ ಹೇಳಿದ ಮೇಲೆ ಆಶ್ಚರ್ಯಪಟ್ಟರು.
ಬಹುತೇಕ ಕಂಬಳಿಹುಳುಗಳು ಪರಿಸರ ಸಮತೋಲನೆಯನ್ನು ಕಾಪಾಡುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ. ಆದರೂ ಕೆಲವು ಕಂಬಳಿಹುಳುಗಳ ಸಂತತಿ ಕಾಡಿನಲ್ಲಿರುವ ಮರಗಳಿಗೆ ಹಾನಿಕಾರಕವಾಗಬಲ್ಲವು. ಕೆಲವು ಕಂಬಳಿಹುಳುಗಳು ಹುಟ್ಟಿದಾಗ ಇರುವ ಗಾತ್ರಕ್ಕಿಂತ ೧೦೦೦ ಪಟ್ಟು ದೊಡ್ಡದಾಗಿ ಬೆಳೆಯುತ್ತವೆ. ಇವುಗಳಿಗೆ ಸದಾ ಹಸಿವು. ತಿನ್ನುತ್ತಲೇ ಇರುತ್ತವೆ. ಹಸಿರೆಲೆಗಳನ್ನು ತಿನ್ನುತ್ತವೆಯಾದರೂ, ಕೆಲವು ಪ್ರಭೇದಗಳು ಮರದ ತೊಗಟೆಯನ್ನು ಭಕ್ಷಿಸುತ್ತವೆ. ಇವುಗಳ ದವಡೆ ಬಲಿಷ್ಟವಾಗಿದ್ದು, ದೇಹ ಮಾತ್ರ ಅತ್ಯಂತ ಮೃದು. ಮೈಮೇಲೆ ಉದ್ದುದ್ದ ಕೂದಲು ಇರುವ ಕಂಬಳಿಹುಳುಗಳು ಸಾಮಾನ್ಯವಾಗಿ ಕಂಡು ಬರುವ ಪ್ರಬೇಧಗಳು. ವೈವಿಧ್ಯದಲ್ಲಿ ಚಿಟ್ಟೆಗಳಷ್ಟೇ ಬಣ್ಣಗಳನ್ನು ಹೊಂದಿರುವ ಕಂಬಳಿಹುಳುಗಳು ಇವೆ. ಕೆಲವಂತೂ ನಯನಮನೋಹರ. ಮುಟ್ಟಿದರೆ ಮಾತ್ರ ಹರೋ-ಹರ. ಕೆಲವು ಕಂಬಳಿಹುಳುಗಳ ರೋಮಗಳು ಬರೀ ತುರಿಕೆಯಷ್ಟೆ ಉಂಟು ಮಾಡಿದರೆ, ಕೆಲವು ವಿಷಕಾರಿ ಕಂಬಳಿಹುಳುಗಳ ರೋಮಗಳು ಮೈಮೇಲೆ ದದ್ದು ತರುತ್ತವೆ. ವಿಪರೀತ ಉರಿ ನೀಡುವ ಪ್ರಬೇಧಗಳು ಇವೆ. ಕೆಲವು ಬಾರಿ ಮುಟ್ಟಿಸಿಕೊಂಡು ವ್ಯಕ್ತಿಗೆ ವಾಂತಿಯೂ ಆಗಬಹುದು. ನಿದ್ರಾಹೀನತೆ, ರಕ್ತದೊತ್ತಡ ಹೆಚ್ಚಿದ ದಾಖಲೆಗಳೂ ಇವೆ.
ಕಂಬಳಿಹುಳುಗಳ ಬಗ್ಗೆ ಕೆಲವು ಆಸಕ್ತಿಕರ ಮಾಹಿತಿಗಳನ್ನು ಈ ಸಮಯದಲ್ಲಿ ಸೂಕ್ತ. ಸಾಮಾನ್ಯವಾಗಿ ಮೊಟ್ಟೆಯಿಂದ ಹೊರಬರುವ ಮರಿಗಳು ತಮ್ಮ ಮೊಟ್ಟೆಯ ಕವಚವನ್ನೇ ಮೊದಲ ಆಹಾರವಾಗಿ ಸೇವಿಸುತ್ತವೆ. ಮೊಟ್ಟೆಯ ಕವಚವು ಅತ್ಯಂತ ಹೆಚ್ಚಿನ ಪ್ರೋಟಿನ್ ಹೊಂದಿರುತ್ತದೆ. ಆಮೇಲೆ ತಾನು ಇರುವ ಮರದ ಎಲೆಗಳನ್ನೇ ತಿಂದು ಹಲವು ವಾರಗಳಲ್ಲಿ ಅತ್ಯಂತ ವೇಗವಾಗಿ ತನ್ನ ಗಾತ್ರವನ್ನು ಹೆಚ್ಚಿಸಿಕೊಂಡು ಪ್ರಬುದ್ಧವಾಗುತ್ತದೆ. ಇದಕ್ಕೆ ಕೀಟಲೋಕದ ಬಕಾಸುರ ಎಂದು ನಿಸ್ಸಂಶಯವಾಗಿ ಕರೆಯಬಹುದು. ಮನುಷ್ಯನ ದೇಹದಲ್ಲಿ ೬೦೦ ಚಿಲ್ಲರೆ ಮಾಂಸಖಂಡಗಳಿರುತ್ತವೆ. ಆದರೆ ನೋಡಿ, ಈ ಪುಟ್ಟ ಜೀವಿಯಲ್ಲಿ ಇರುವ ಮಾಂಸಖಂಡಗಳ ಸಂಖ್ಯೆ ಭರ್ತಿ ನಾಲ್ಕು ಸಾವಿರ. ಇದರ ತಲೆಯಲ್ಲೇ ೨೪೮ ಮಾಂಸಖಂಡಗಳಿವೆ. ಸಾಮಾನ್ಯವಾಗಿ ಯಾರೂ ಕಂಬಳಿಹುಳುಗಳಂತಹ ಕೀಟಗಳ ಸುದ್ದಿಗೆ ಹೋಗುವುದಿಲ್ಲವಾದ್ದರಿಂದ ಈ ಕೀಟವನ್ನು ಗಮನಿಸುವವರ ಸಂಖ್ಯೆ ಕಡಿಮೆ. ಇವಕ್ಕೆ ಹನ್ನೆರೆಡು ಕಣ್ಣುಗಳಿವೆ, ಆರು ಜೊತೆ ಕಾಲುಗಳಿವೆ. ಕಾಲುಗಳ ನಡುವೆ ಕಾಲಿನಂತೆಯೇ ಕಾಣುವ ಸುಳ್ಕಾಲುಗಳಿವೆ. ಈ ಸುಳ್ಕಾಲುಗಳು ಮರ ಹತ್ತುವಾಗ ಉಪಯೋಗವಾಗುತ್ತವೆ. ತಮ್ಮ ಬಾಯಿಯ ಹಿಂಭಾಗದಲ್ಲಿರುವ ಚಿಕ್ಕ ಚೀಲದಿಂದ ಇವು ರೇಷ್ಮೆಯನ್ನು ಉತ್ಪಾದಿಸುತ್ತವೆ. ಮಲೆನಾಡಿನ ಜನ ಸಾಮಾನ್ಯವಾಗಿ ಮರದಿಂದ ನೇತಾಡುತ್ತಿರುವ ಬಿಳಿ ಕಂಬಳಿಹುಳವನ್ನು ಗಮನಿಸುರುತ್ತಾರೆ. ಕೆಲವೊಂದು ಬಾರಿ ಇವು ಮುಖಕ್ಕೆ ತಗುಲಿ ತುರಿಕೆಯನ್ನುಂಟು ಮಾಡುತ್ತವೆ. ಸೂಕ್ಷ್ಮವಾಗಿ ಗಮನಿಸಿದರೆ ಕಂಬಳಿಹುಳುಗಳ ಚಲನೆಯನ್ನು ಸಮುದ್ರದ ಅಲೆಗಳಿಗೆ ಹೋಲಿಸಬಹುದು. ದೇಹದ ಹಿಂಭಾಗ ಕಾಲಿನಿಂದ ಒತ್ತಿ ಚಲಿಸುವ ಕಂಬಳಿಹುಳು ಅಲೆ-ಅಲೆಯಂತೆ ಮುಂದಕ್ಕೆ ಚಲಿಸುತ್ತದೆ. ಆಹಾರ ಸರಪಣಿಯಲ್ಲಿ ಅತಿ ಕೆಳಮಟ್ಟದಲ್ಲಿರುವ ಕಂಬಳಿಹುಳುವಿಗೆ ನಿಸರ್ಗದಲ್ಲಿ ಸಾಕಷ್ಟು ಶತ್ರುಗಳಿದ್ದಾರೆ. ಮುಖ್ಯವಾಗಿ ಪಕ್ಷಿಗಳು. ಅತ್ಯಂತ ಹೆಚ್ಚು ಪ್ರೋಟಿನ್ ಹೊಂದಿರುವ ಕಂಬಳಿಹುಳುಗಳು ಕೆಲವು ಪಕ್ಷಿಗಳಿಗೆ ಇಷ್ಟವಾದ ಆಹಾರ. ನಿಸರ್ಗದಲ್ಲಿ ಬಲು ವಿಚಿತ್ರ ಸೂತ್ರಗಳಿವೆ. ಕಂಬಳಿಹುಳುಗಳ ಪಿಡುಗು ಮಿತಿಮೀರದಂತೆ ತಡೆಯಲು ಹಕ್ಕಿ-ಪಕ್ಷಿಗಳಿವೆ. ಹಾಗೆಯೇ ಕಂಬಳಿಹುಳುಗಳು ಬದುಕಲು ಹಲವಾರು ತಂತ್ರಗಳನ್ನು ಉಪಯೋಗಿಸುತ್ತವೆ. ಅತಿಯಾದ ರಂಗಿನಿಂದ ಕೂಡಿದ ಕಂಬಳಿಹುಳುಗಳು ಹೆಚ್ಚು ವಿಷಕಾರಿ. ಕೆಲವೊಂದು ಕಂಬಳಿಹುಳುಗಳು ಎಲೆಯ ಬಣ್ಣವನ್ನೇ ಹೊಂದಿರುತ್ತವೆ. ಬೇಟೆಗಾರ ಪಕ್ಷಿಯನ್ನು ಬೆದರಿಸಲು ಕೆಲವು ಪ್ರಬೇಧಗಳು ತೀಕ್ಷ್ಣವಾದ ಶಿಳ್ಳೆಯನ್ನು ಹಾಕುತ್ತವೆ. ಪ್ರಸಿದ್ಧ ಮೊನಾರ್ಕ್ ಕಂಬಳಿಹುಳುಗಳು ಮಿಲ್ಕ್‌ವೀಡ್ ಎಂದು ಕರೆಯಲಾಗುವ ಮರದಲ್ಲಿರುವ ಗ್ಲೈಕೋಸೈಡ್ ಎಂಬ ವಿಷವನ್ನೇ ತಿಂದು ಜೀರ್ಣಮಾಡಿಕೊಳ್ಳುತ್ತವೆ. ಆದ್ದರಿಂದ ಪಕ್ಷಿಗಳು ಇವುಗಳನ್ನು ತಿನ್ನಲಾಗುವುದಿಲ್ಲ. ಆದರೆ ಜಗತ್ತಿನ ದೈತ್ಯ ಕಂಪನಿ ಮಾನ್ಸೋಂಟೋ ಕಂಪನಿಯ ರೌಂಡ್‌ಅಪ್ ಎಂಬ ಪೀಡೆನಾಶಕ ಇವುಗಳಿಗೆ ಮಾರಕವಾಗಿ ಪರಿಣಮಿಸಿದೆ. ಪೂರ್ಣ ಪ್ರಮಾಣದಲ್ಲಿ ಬೆಳೆದ ಕಂಬಳಿಹುಳ ತನ್ನ ಸುತ್ತ ಬಲೆಯನ್ನು ಹೆಣೆದುಕೊಂಡು ನಿದ್ರೆಗೆ ಜಾರುತ್ತದೆ. ಹವಾಮಾನಕ್ಕೆ ಅನುಗುಣವಾಗಿ ಕ್ರಮೇಣ ಕಂಬಳಿಹುಳು ಚಿಟ್ಟೆ ಅಥವಾ ಪತಂಗವಾಗಿ ಮಾರ್ಪಾಡಾಗುತ್ತದೆ. ಹೂವಿಂದ ಹೂವಿಗೆ ಹಾರುತ್ತಾ ಮಕರಂದ ಹೀರುತ್ತಾ, ಪರಾಗಸ್ಪರ್ಶ ಕ್ರಿಯೆ ನಡೆಸಿ, ಗಂಡಿನ ಜೊತೆ ಸೇರಿ ಸಂತಾನಕ್ರಿಯೆಯಲ್ಲಿ ತೊಡಗಿ, ಮೊಟ್ಟೆಯಿಡುತ್ತದೆ ಎಂಬಲ್ಲಿಗೆ ಚಿಟ್ಟೆಯ ಜೀವನಚಕ್ರ ಮುಗಿಯುತ್ತದೆ.
ಈ ಘಟನೆ ಬರೆಯುವುದಕ್ಕೆ ಪ್ರೇರಣೆಯೂ ಒಂದು ಕಂಬಳಿಹುಳುವೇ. ಸಾಗರದ ಸರ್ಕಾರಿ ಬಸ್‌ಸ್ಟ್ಯಾಂಡ್ ಇರುವುದು ರಾಷ್ಟ್ರೀಯ ಹೆದ್ದಾರಿ ೨೦೬ ಪಕ್ಕದಲ್ಲಿ. ಇಂಡಿಯಾ ಅಭಿವೃದ್ಧಿಯಾಗುತ್ತಿದೆಯಾದ್ದರಿಂದ, ವಾಹನಗಳ ಓಡಾಟ ಹೆಚ್ಚು. ಇದಕ್ಕಾಗಿ ರಸ್ತೆ ಅಗಲ ಮಾಡಬೇಕು ಎಂದು ನೂರಾರು ವರ್ಷಗಳಿಂದ ಇದ್ದ ಮಾವು, ನಿರ್ಕಾಯ್, ಹಲಸು ಇತ್ಯಾದಿ ಮರಗಳನ್ನು ಬುಡಸಮೇತ ಸವರಿ ಮಾರಿಕೊಂಡಿದ್ದಾಗಿದೆ. ರಸ್ತೆ ಅಗಲೀಕರಣ ಕಾರ್ಯ ಇನ್ನೂ ಶುರುವಾಗಿಲ್ಲ. ಸರ್ಕಾರಕ್ಕೆ ಹಣ ಬೇಕು ಎಂದರೆ ಈ ರೀತಿಯ ಯೋಜನೆಗಳನ್ನು ಜಾರಿ ಮಾಡಿಕೊಳ್ಳುತ್ತವೆ. ಹಿಂದೆ ಈ ಮರಗಳಲ್ಲೂ ಕಂಬಳಿಹುಳುಗಳಿರುತ್ತಿದ್ದವು. ಈಗ ಅವುಗಳಿಗೆ ನೆಲೆಯಿಲ್ಲ. ನನ್ನ ಕೆಲಸದ ಜಾಗಕ್ಕೆ ಹೋಗುವಾಗ ಇದೇ ರಾಷ್ಟ್ರೀಯ ಹೆದ್ದಾರಿ ೨೦೬ನ್ನು ಹಾದು ಹೋಗಬೇಕಾಗುತ್ತದೆ. ಸೆಣಬಿನ ಚೀಲದಲ್ಲಿ ನೀರಿನ ಬಾಟಲಿಯನ್ನು ತುಂಬಿಕೊಂಡು ಸರ್ಕಾರಿ ಬಸ್‌ಸ್ಟ್ಯಾಂಡ್ ಹತ್ತಿರ ಬರುತ್ತಿದ್ದವನಿಗೆ ೨ ಇಂಚು ಗಾತ್ರದ ಹೆಬ್ಬೆಟ್ಟಿನಷ್ಟು ದೊಡ್ಡದಾಗ ಕಪ್ಪು-ಬೂದು ಮಿಶ್ರಿತ ಕಂಬಳಿಹುಳು ವೇಗದಿಂದ ರಸ್ತೆ ದಾಟುವ ಪ್ರಯತ್ನದಲ್ಲಿತ್ತು. ಹೆದ್ದಾರಿಯಲ್ಲಿ ವಿಪರೀತ ವಾಹನಗಳ ಓಡಾಟ. ಖಾಸಗಿ ಬಸ್ಸುಗಳು, ಶಾಲೆಗೆ ಹೋಗುವ ವಾಹನಗಳು, ಬಸ್ಸಿನಿಂದಿಳಿದು ಬರುವ ಅಸಂಖ್ಯ ಜನ. ಸ್ಕೂಲಿಗೆ ಸೈಕಲ್ ಮೇಲೆ ಹೋಗುವ ಮಕ್ಕಳು. ಅದೂ ಬೆಳಗಿನ ಹೊತ್ತು ಎಲ್ಲರಿಗೂ ಗಡಿಬಿಡಿ. ಈ ಕಂಬಳಿಹುಳಕ್ಕೂ ಗಡಿಬಿಡಿ (ಶಾಸ್ತ್ರೀಯವಾಗಿ ಕಂಬಳಿಹುಳುವನ್ನು ಜಿಯೋಮೆಟ್ರಿಡ್ಸ್ ಎಂದೂ ಕರೆಯುತ್ತಾರೆ, ಗ್ರೀಕ್ ಭಾಷೆಯಲ್ಲಿ ಜಿಯೋ ಎಂದರೆ ಭೂಮಿ-ಮೆಟ್ರಿಡ್ ಎಂದರೆ ಅಳತೆ. ಇಡೀ ಭೂಮಿಯನ್ನೇ ಅಳತೆ ಮಾಡಲು ಹೊರಟಂತೆ ತೋರುತ್ತದೆಯಾದ್ದರಿಂದ ಈ ಹೆಸರು). ಇದು ರಸ್ತೆ ದಾಟಿ ಸುರಕ್ಷಿತವಾಗಿ ಆಚೆ ಸೇರುವ ಸಂಭವ ಕೋಟಿಯಲ್ಲೊಂದು ಭಾಗವಷ್ಟೆ. ಗಡಿಬಿಡಿಯಿಂದ ಹೋಗುತ್ತಿದ್ದ ಕಂಬಳಿಹುಳುವಿನ ಎದುರು ಕೈಯಿಟ್ಟೆ. ಅದರ ವೇಗ ಎಷ್ಟಿತ್ತೆಂದರೆ, ನನ್ನ ಕೈಯನ್ನು ಅದು ಅಡ್ಡಿ ಎಂದು ಭಾವಿಸಲೇ ಇಲ್ಲ. ಸರಾಗವಾಗಿ ಹತ್ತಿತು. ಅದು ಯಾವ ದಿಕ್ಕಿಗೆ ಹೊರಟ್ಟಿತ್ತೋ ಅದೇ ದಿಕ್ಕಿಗೆ ಇರುವ ಕಡಿದ ಮರದ ಬೊಡ್ಡೆಯ ಬಳಿ ಬಿಟ್ಟೆ. ಕಾಲೇಜುಗಳಿಗೆ ಹೋಗುತ್ತಿದ್ದ ಕನ್ಯಾಮಣಿಗಳು ಗಾಬರಿ ಬಿದ್ದು, ಆಶ್ಚರ್ಯ ಮುಖಮಾಡಿ ನಂತರ ನನ್ನೊಂತರಾ ನೋಡಿ ಮುಸಿ-ಮುಸಿ ನಗುತ್ತಿದ್ದರು. ರಿಕ್ಷಾ ಸ್ಟ್ಯಾಂಡಿನವರು ದಿನಾ ನೋಡಿ ಪರಿಚಯವಿದ್ದವರು. ಆದರೂ ವಿಚಿತ್ರವಾಗಿ ನೋಡುತ್ತಿದ್ದರು.
ಮಧ್ಯಾಹ್ನ ಊಟಕ್ಕೆ ಮನೆಗೆ ಹೋದವನು ಮನೆಯವಳಿಗೆ ಮತ್ತು ಮಗನಿಗೆ ಘಟನೆಯನ್ನು ವಿವರಿಸಿದೆ. ನಮ್ಮ ಹೋಂ ಮಿನಿಸ್ಟ್ರಿಗೆ ಕಂಬಳಿಹುಳ ಎಂದು ಹೇಳಿದರೆ ಸಾಕು ಮೈ ತುರಿಕೆ ಶುರುವಾಗುತ್ತದೆ. ಕಂಬಳಿಗೂ ಕಂಬಳಿಹುಳುವಿಗೂ ಸಂಬಂಧವಿಲ್ಲದಿದ್ದರೂ, ಕಂಬಳಿಯಲ್ಲಿ ಕಂಬಳಿಹುಳುವನ್ನು ಕಾಣುವ ನನ್ನವಳು ಮನೆಯಲ್ಲಿ ಕಂಬಳಿಯನ್ನೇ ಇಟ್ಟಿಲ್ಲವಾದ್ದರಿಂದ ಚಳಿಗಾಲದಲ್ಲೂ ಕಂಬಳಿ ಹೊದೆಯುವ ಭಾಗ್ಯವಿಲ್ಲ.
[ಕಂಬಳಿಹುಳುಗಳಿಂದ ಜೀವದ್ರವ್ಯ ಔಷಧಗಳನ್ನು ತಯಾರಿಸುವ ಪ್ರಯತ್ನದ ಬಗ್ಗೆ ಬೆಳಕು ಚೆಲ್ಲುವ ಕುತೂಹಲಕರವಾದ ಲೇಖನವನ್ನು ಕನ್ನಡದ ಪ್ರಸಿದ್ಧ ವಿಜ್ಞಾನ-ಪರಿಸರ ಲೇಖಕರಾದ ನಾಗೇಶ್ ಹೆಗಡೆಯವರ ಅಂತರಿಕ್ಷದಲ್ಲಿ ಮಹಾಸಾಗರ ಎಂಬ ಪುಸ್ತಕದ ಪುಟ ೪೫ರಲ್ಲಿ ಕಂಬಳಿ ಹುಳುಗಳಿಂದ ಸಿದ್ಧೌಷದ ಲೇಖನದಲ್ಲಿ ಕಾಣಬಹುದು. ಓದಿ]
*****