ಕಥಾಲೋಕ

ಕಂದನ ಕರೆ: ಲಾವಣ್ಯ ಸಿದ್ದೇಶ್ವರ್

ವಿಜಯ ನರ್ಸಿಂಗ್ ಹೋಮಿನ ಆಪರೇಷನ್ ಥಿಯೇಟರಿನ ಮುಂದೆ, ಪ್ರಭಾಕರ ಶತಪಥ ತಿರುಗುತ್ತಿದ್ದಾನೆ, ಸಾವಿತ್ರಮ್ಮ ಬೆಂಚಿನ ಮೇಲೆ ಏನಾಗುವುದೋ ಎಂಬ ಭಯದಲ್ಲಿ ತನ್ನ ಸೊಸೆ, ಮೊಮ್ಮಗುವಿನ ಸೌಖ್ಯಕ್ಕಾಗಿ ಕಣ್ಣೀರಿಡುತ್ತಾ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ, ಒಳಗಿನಿಂದ ಗೌರಿಯ ಅಳು ಎಂಥವರನ್ನು ಕರಗಿಸುವಂತಿದೆ.

*********

ಗೌರಿ, ಪ್ರಭಾಕರ್ ಮದುವೆಯಾಗಿ ಎಂಟು ವರ್ಷಗಳಾಗಿತ್ತು, ಆ ಮನೆಯಲ್ಲಿ ಇನ್ನೂ ಒಂದು ತೊಟ್ಟಿಲು ಕಂಡಿರಲಿಲ್ಲ, ಇದು ಸಾವಿತ್ರಮ್ಮನಿಗೂ ಬೇಸರದ ವಿಷಯವೇ ಆದರೂ ಸೊಸೆಗೆ ಚಿತ್ತವಧೆ ಮಾಡುವಂಥ ಸ್ವಭಾವದ ಹೆಣ್ಣಾಗಿರಲಿಲ್ಲ. ಆದರೂ ಹೋದಲ್ಲಿ, ಬಂದಲ್ಲಿ ಕಡೆ ನಿಮ್ಮ ಸೊಸೆಗಿನ್ನು ಮಗುವಾಗಿಲ್ಲವ ಎನ್ನುವ ಧೋರಣೆ ಮಾತ್ರ ಸಹಿಸಲಾಸಾಧ್ಯವಾಗುತ್ತಿತ್ತು, ಇನ್ನು ಗೌರಿಯ ಮೃದು ಮನಸ್ಸು ತಿಳಿದೇ ಇತ್ತು, ಸ್ವಲ್ಪ ಎತ್ತರದ ಧ್ವನಿಯಲ್ಲಿ ಮಾತಾಡಿದರೆ ಸಾಕು, ಕಣ್ಣ ಜಲಾವೃತವಾಗುತ್ತಿತ್ತು, ಹೇಳಿ ಕೇಳಿ ತಾವೇ ಇಷ್ಟ ಪಟ್ಟು ಮನೆ ತುಂಬಿಸಿಕೊಂಡ ಹುಡುಗಿ, ಇಂಥ ಹುಡುಗಿಗೆ ಏಕಪ್ಪ ಇಂಥ ಶಿಕ್ಷೆ ಬೇಗ ಆಕೆಯ ಮಡಿಲಿಗೊಂದು ಕೂಸು ನೀಡು ಎಂದು ದೇವರಲ್ಲಿ ಬೇಡುತ್ತಿದ್ದರು, ಇನ್ನು ಗೌರಿಗೆ ಜನರ ನಿಂದನೆಗಳನ್ನು ಕೇಳಿ ಕೇಳಿ ಜೀವನವೇ ನರಕವೆನಿಸುತ್ತಿತ್ತು ಎಲ್ಲರದೂ ಒಂದೇ ಪ್ರಶ್ನೆ "ಯಾರಲ್ಲಿ ದೋಷ,ಪರೀಕ್ಷೆ ಮಾಡಿಸಿದಿರೋ ಇಲ್ಲವೋ, ಇನ್ನು ಯಾಕೆ ಮಗುವಾಗಿಲ್ಲ, ಬೇರೆ ಏನಾದರೂ ಪರಿಹಾರ ಹುಡುಕಿದ್ದೀರ?" ಹೀಗೆ ನೂರೆಂಟು ಪ್ರಶ್ನೆಗಳಿಂದ ಉರಿಯುತ್ತಿತ್ತು ಸಮಾಜ. ಹರಕೆ ಹೊರದ ದೇವರಿಲ್ಲ, ಹೋಗಿ ನೋಡದ ಡಾಕ್ಟರಿಲ್ಲ ಎಲ್ಲಾ ಪರೀಕ್ಷೆಗಳಲ್ಲೂ ಇಬ್ಬರಿಗೂ ಯಾವುದೇ ತೊಂದರೆಗಳಿಲ್ಲ ಎಂದೇ ರುಜುವಾತಾಗಿತ್ತು, ಚಿಂತಿಸಿ ಚಿಂತಿಸಿ ಬಾಡಿದ ಹೂವಂತಾದಳು ಗೌರಿ, ಮಗುವಿನ ಚಿಂತೆ ಇಲ್ಲದೇ ನೆಮ್ಮದಿಯಾಗಿದ್ದವನು ಪ್ರಭಾಕರ್ ಒಬ್ಬನೇ, ಆದರೆ ಅವನಿಂದ ಗೌರಿ ಮತ್ತು ತಾಯಿ ಹೀಗೆ ಕೊರಗುತ್ತಿರುವುದು ನೋಡಲಾಗುತ್ತಿರಲಿಲ್ಲ, ಅದರಲ್ಲೂ ಅವನ ಪ್ರೀತಿಯ ಗೌರಿ ಹೀಗೆ ಬಾಡಿ ಹಣ್ಣಾಗುತ್ತಿದ್ದರೆ ದುಃಖವಾಗುತ್ತಿತ್ತು, "ದೇವರೆ, ನನ್ನ ಗೌರಿಯ ಇಚ್ಛೆ ನೆರವೇರಿಸಿ, ಅವಳನ್ನು ಮೊದಲಿನಂತೆ ಮಾಡು " ಎಂದಷ್ಟೇ ಅವನು ಬೇಡುತ್ತಿದ್ದ.

***********

ಎಲ್ಲರ ಆಸೆಗೆ ನೀರೆರೆಯುವಂತೆ ಎಂಟು ವರ್ಷಗಳ ಬಳಿಕ ಗೌರಿಯ ಗರ್ಭ ಚಿಗುರೊಡೆಯಿತು. ಎಲ್ಲರ ಸಂತೋಷಕ್ಕೆ ಪಾರವೇ ಇಲ್ಲ ಅತ್ತೆ, ಗಂಡ ಇಬ್ಬರು ಗೌರಿಯನ್ನು ಹೂವಂತೆ ನೋಡಿಕೊಳ್ಳುತ್ತಿದ್ದರು, ಗೌರಿಗೆ ಸ್ವರ್ಗ ಎರಡು ಗೇಣು. ಮಗುವಿಗಾಗಿ ಕನಸು ಕಾಣುವುದೇ ಅವಳ ನಿತ್ಯ ಕಾಯಕ, ಗೌರಿಯ ಬಾಯಲ್ಲೀಗ ಮಗುವಿನ ಮಾತು ಬಿಟ್ಟರೆ ಬೇರೇನು ಕೇಳುತ್ತಿರಲಿಲ್ಲ,  ಅತ್ತೆ ಗಂಡ ಇಬ್ಬರೊಡನೆಯೂ ಬರೀ ಯಾವ ಮಗು ಹುಟ್ಟಬಹುದು, ಹೆಣ್ಣಾದರೇ ಏನು ಹೆಸರಿಡಬೇಕು, ಗಂಡಾದರೆ ಏನಿಡಬೇಕು, ಮಗುವಿಗೆ ಏನು ಬೇಕು, ಯಾವ ತರದ ಬಟ್ಟೆ ಹಾಕಬೇಕು ಎನ್ನುವ ದೊಡ್ಡ ಪಟ್ಟಿಗಳೇ ತಯಾರಿಸಿಟ್ಟಿದ್ದಳು, ಅವಳ ಈ ಪರಿ ಅತಿ ಎನಿಸಿದರೂ ಅವಳು ನಗು ನಗುತ್ತಿದ್ದರೆ ಸಾಕು ಎಂದುಕೊಳ್ಳುತ್ತಿದ್ದರು, ಪ್ರತಿ ತಿಂಗಳು ತಪ್ಪದೇ ಪರೀಕ್ಷೆಗೆ ಹೋಗುತ್ತಿದ್ದಳು, ಅಪ್ಪಿ ತಪ್ಪಿ ಪ್ರಭಾಕರ ಮಗುವಿನ ವಿಷಯದಲ್ಲಿ ಕೊಂಚ ಆಲಸ್ಯ ತೋರಿಸಿದರು ಗೌರಿ ಸಹಿಸುತ್ತಿರಲಿಲ್ಲ ಅಳುತ್ತ ಕೂತುಬಿಡುತ್ತಿದ್ದಳು, ಏಳು ತಿಂಗಳು ತುಂಬುವವರೆಗೂ ಯಾವ ತೊಂದರೆ ಮಗು ತಾಯಿ ಇಬ್ಬರೂ ಸಂಪೂರ್ಣ ಆರೋಗ್ಯವಾಗೆ ಇದ್ದರು, ಹೇಳಬೇಕೆಂದರೆ ಗೌರಿಯ ಅತಿ ಆರೈಕೆಯಿಂದ ಮಗು ಕೊಂಚ ಹೆಚ್ಚಾಗೆ ಆರೋಗ್ಯವಾಗಿ ಬೆಳೆದಿತ್ತು, ಆಸ್ಪತ್ರೆಯೊಂದು ಬಿಟ್ಟರೆ ಗೌರಿ ಮತ್ತೆಲ್ಲಿಗೂ ಜಪ್ಪಯ್ಯ ಅಂದರೂ ಹೊರಡುತ್ತಿರಲಿಲ್ಲ ಎಲ್ಲಿ ಮಗುವಿಗೆ ತೊಂದರೆಯಾಗುವುದೋ ಎಂದು ಹೆಜ್ಜೆ ಹೆಜ್ಜೆಗೂ ಜಾಗೃತಳಾಗಿರುತ್ತಿದ್ದಳು, ಅಂದು ಸಹ ಏಳನೇ ತಿಂಗಳ ಪರೀಕ್ಷೆಗಾಗಿ ಗಂಡನ ಜೊತೆ ಹೊರಟಳು, ಬೈಕ್ ತೆಗೆಯಲು ಹೋದ ಗಂಡನನ್ನು ತಡೆದು "ಬೈಕ್ ಬೇಡ ಈ ಸ್ಥಿತಿಯಲ್ಲಿ ಬೈಕಿನ ಮೇಲೆ ಕೂರುವುದು ಒಳ್ಳೆಯದಲ್ಲ ಆಟೋದಲ್ಲಿ ಹೋಗೋಣ" ಎಂದಳು, ಅವಳಿಚ್ಛೆಯಂತೆಯೆ ಪ್ರಭಾಕರ ಆಟೋದಲ್ಲಿ ಹೊರಟ, ಇಬ್ಬರು ಆಸ್ಪತ್ರೆ ತಲುಪಿ ಎಲ್ಲ ಪರೀಕ್ಷೆಗಳು ಆದ ನಂತರ ಮತ್ತೊಮ್ಮೆ ಮಗು ಆರೋಗ್ಯವಾಗಿದೆ ಎಂದು ಸಮಾಧಾನ ಪಡುತ್ತ ಆಟೋ ಹತ್ತಿದರು, ದುರದೃಷ್ಟವಶಾತ್ ಬರುತ್ತಿದ್ದ ಆಟೋ ಅಪಘಾತಕ್ಕೀಡಾಯಿತು ಆಗಿದ್ದು ಸಣ್ಣ ಅಪಘಾತವೇ ಯಾರಿಗೂ ಏನು ಆಗಿರಲಿಲ್ಲ, ಆದರೆ ಗೌರಿಯ ಹೊಟ್ಟೆಗೆ ಆಟೋ ಮಗುಚಿದ ಸಂದರ್ಭದಲ್ಲಿ ಬಲವಾದ ಪೆಟ್ಟಾಯಿತು, ಗೌರಿ ಒಮ್ಮೆಲೆ ವಿಲವಿಲ ಒದ್ದಾಡತೊಡಗಿದಳು, ಕೂಡಲೇ ಆಸ್ಪತ್ರೆಗೆ ಕರೆದೊಯ್ದರು. 

*********

ಆಪರೇಷನ್ ಥಿಯೇಟರ್ ಒಳಗೆ ಗೌರಿಯನ್ನು ಕರೆದುಕೊಂಡು ಹೋಗಿ ಆಗಲೇ ಎರಡು ತಾಸಿನ ಮೇಲಾಯಿತು ಇನ್ನು ಯಾರು ಹೊರಗೆ ಬರಲಿಲ್ಲ. ಸ್ವಲ್ಪ ಹೊತ್ತು ಕೇಳುತ್ತಿದ್ದ ಗೌರಿಯ ಅಳು ಕೂಡ ನಿಂತು ಹೋಗಿತ್ತು, ಏನಾಯಿತು ಏನು ತಿಳಿಯದೆ ಪ್ರಭಾಕರ್, ಸಾವಿತ್ರಮ್ಮ ಚಡಪಡಿಸುತ್ತಿದ್ದರು. ಒಮ್ಮೆಗೇ ಆಪರೇಷನ್ ಥಿಯೇಟರಿನ ಬಾಗಿಲು ತೆಗೆಯಿತು, ನರ್ಸಿಗೆ ಏನೇನೋ ಸಲಹೆ ನೀಡುತ್ತ ಡಾಕ್ಟರ್ ಹೊರ ಬಂದರು, ಪ್ರಭಾಕರನನ್ನು ನೋಡಿ "ನಿಮ್ಮೊಡನೆ ಕೊಂಚ ಮಾತನಾಡುವುದಿದೆ, ಬನ್ನಿ" ಎಂದು ಇಬ್ಬರನ್ನು ತಮ್ಮ ಕ್ಯಾಬಿನ್ನಿನ ಒಳಗೆ ಕರೆದೊಯ್ದರು. "ನೋಡಿ ನಿಮ್ಮ ಹೆಂಡತಿಯ ಗರ್ಭಕೋಶಕ್ಕೆ ತುಂಬ ಬಲವಾದ ಪೆಟ್ಟಾಗಿ ಮಗುವಿನ ತಲೆಗೆ ಪೆಟ್ಟು ಬಿದ್ದರಿಂದ ಮಗು ಏನೇ ಮಾಡಿದರು ಉಳಿಸಲಾಗಲಿಲ್ಲ" ಎಂದರು. ಪ್ರಭಾಕರ್ ಸಾವಿತ್ರಮ್ಮ ಒಬ್ಬರ ಮುಖ ಒಬ್ಬರು ನೋಡಿ ನಿಟ್ಟುಸಿರಿಟ್ಟರು." ಗೌರಿಯ ಪ್ರಾಣಕ್ಕೆ ಏನು ಅಪಾಯವಿಲ್ಲ ಅಲ್ಲವೇ" ಎಂದು ಕೇಳಿದ ಪ್ರಭಾಕರ್, ಡಾಕ್ಟರ್ ಕೆಲವು ಕ್ಷಣ ಸುಮ್ಮನಿದ್ದು ನಂತರ ಹೇಳಿದರು "ಅವರ ಪ್ರಾಣಕ್ಕೇನು ಅಪಾಯವಿಲ್ಲ, ಆದರೆ….. ಆಕೆಯ ಗರ್ಭಕೋಶಕ್ಕೆ ತುಂಬಾ ಬಲವಾದ ಪೆಟ್ಟಾದ್ದರಿಂದ ಮತ್ತೆ ಕೂಡುವುದು ಕಷ್ಟವಾಯಿತು, ಹೀಗಾಗಿ ಗರ್ಭಕೋಶ ತೆಗೆಯಬೇಕಾಗಿ ಬಂತು ತೆಗೆಯದಿದ್ದರೆ ಆಕೆಯನ್ನು ಉಳಿಸುವುದು ಸಾಧ್ಯವಿರಲಿಲ್ಲ" ಪ್ರಭಾಕರನ ತಲೆಯೊಳಗೆ ದೊಡ್ಡ ಪ್ರಳಯವಾದಂತಾಯಿತು, ಒಮ್ಮೆಲೇ ಈ ವಿಷಯ ಕೇಳಿ ಹುಚ್ಚಿಯಾಗಿರುವ ಗೌರಿಯ ಮುಖ ಎದುರಿಗೆ ಬಂದು ಬೆಚ್ಚಿ ಹೋದ. ಇನ್ನು ಸಾವಿತ್ರಮ್ಮ ದೊಡ್ಡ ಆಘಾತಕ್ಕೆ ಒಳಗಾದಂತೆ ಕುಳಿತಿದ್ದರು, ಅವರ ಮನಸ್ಸು ಸಾವಿರ ಯೋಚನೆ ಮಾಡುತ್ತಿತ್ತು. "ನನ್ನ ಮಗನಿಗೆ ಇನ್ನು ಸಂತಾನವಿಲ್ಲ, ನನ್ನ ಸೊಸೆಗೆ ಇನ್ನು ಮಕ್ಕಳಾಗುವುದಿಲ್ಲ, ಈ ವಂಶದ ವೃಕ್ಷ ಇಲ್ಲಿಗೆ ಮುರಿದುಬೀಳುತ್ತದೆ. ಅಯ್ಯೋ ದೇವರೆ ಯಾಕೆ ಹೀಗೆ ಮಾಡಿದೆ, ನಾವೇನು ತಪ್ಪು ಮಾಡಿದ್ದೇವೆಂದು ಈ ಶಿಕ್ಷೆ, ಮಗುವಿನ ಮೇಲೆ  ಜೀವವಿಟ್ಟಿದ್ದ ನನ್ನ ಸೊಸೆ ಹೇಗೆ ಈ ನೋವು ಸಹಿಸುತ್ತಾಳೆ." ಎಂದು ಒಂದೆ ಸಮನೆ ಅಳಲು ಶುರು ಮಾಡಿದರು. ಪ್ರಭಾಕರ ಭಾರವಾದ ಮನಸ್ಸಿನಿಂದ ಅಳುತ್ತಿದ್ದ ತಾಯಿಯನ್ನು ಹೊರಗೆ ತಂದು ಕೂರಿಸಿದ. ಕೆಲವು ತಾಸಿನ ಮೇಲೆ ಗೌರಿಯನ್ನು ವಾರ್ಡಿಗೆ ವರ್ಗಾಯಿಸಿದರು. ನರ್ಸ್ ಬಂದು ಆಕೆಗೆ ಪ್ರಜ್ಞೆ ಬಂದಿದೆ ಎಂದು ಹೇಳಿ ಹೋದಳು. ಆದರೆ ಪ್ರಭಾಕರನಿಗೂ, ಸಾವಿತ್ರಮ್ಮನಿಗೂ ಒಳಗೆ ಹೋಗಲು ಹಿಂಜರಿಕೆ ಹೇಗೆ ಗೌರಿಗೆ ಈ ವಿಷಯ ಹೇಳಬೇಕೆಂಬುದೇ ತಿಳಿಯಲಿಲ್ಲ. ಇಬ್ಬರೂ ಹಿಂಜರಿಯುತ್ತಲೆ ಗೌರಿಯ ಬಳಿ ಬಂದರು, ಸದ್ಯಕ್ಕೆ ಗೌರಿಗೆ ಈ ವಿಷಯ ಹೇಳಬಾರದೆಂದು ಇಬ್ಬರು ನಿರ್ಧರಿಸಿದ್ದರು, ಆದರೆ ವಿಳಂಬವಾಗಿತ್ತು, ಗೌರಿಗೆ ಪ್ರಜ್ಞೆ ಬಂದ ಸಮಯದಲ್ಲಿ ಪಕ್ಕದಲ್ಲಿದ್ದ ನರ್ಸ್ ಇಬ್ಬರು ಮಾತಾಡುತ್ತಿದ್ದದ್ದು ಕಿವಿಗೆ ಬಿದ್ದು ಹೋಗಿತ್ತು. ಅವಳು ಅಳಲಿಲ್ಲ ಸುಮ್ಮನೆ ಕುಳಿತಿದ್ದಳು. ಯಾರಿಗೂ ಏನು ಮಾತನಾಡಲು ತೋಚಲಿಲ್ಲ. ಎರಡು ದಿನದ ಆಸ್ಪತ್ರೆ ವಾಸದ ನಂತರ ಗೌರಿಯನ್ನು ಮನೆಗೆ ಕರೆತಂದರು. ಮೇಲ್ನೋಟಕ್ಕೆ ಗೌರಿ ಸುಮ್ಮನಿರುವಂತೆ ಕಂಡರು ಅವಳ ಮನಸ್ಸಿನ ಆಂದೋಲನ ಯಾರಿಗೂ ಸುಲಭವಾಗಿ ಊಹಿಸಲು ಸಾಧ್ಯವಿರಲಿಲ್ಲ.

********

ಗೌರಿ ಮನೆಗೆ ಬಂದು ಮೂರು ದಿವಸಗಳಾಗಿತ್ತು, ವರಾಂಡದಲ್ಲಿ ಚೇರು ಹಾಸಿ ಕುಳಿತಿದ್ದಳು, ಅವಳೊಳಗೆ ಏನೋ ತಳಮಳ, ಯಾರ ಮೇಲೂ ತಿಳಿಯದಷ್ಟು ಅಸಾಧ್ಯ ಕೋಪ, ತನ್ನ ಜೀವನದ ಬಗ್ಗೆ ಜಿಗುಪ್ಸೆ, ಇನ್ನು ಶಾಶ್ವತವಾಗಿ ನಾನು ಬಂಜೆ ಈ ಲೋಕದ ಪಾಲಿಗೆ ಹಾಸ್ಯದ ವಸ್ತು ! ತಲೆಯಲ್ಲಿ ಈ ಯೋಚನೆ ಬಂದಂತೆ ದುಃಖ ಉಕ್ಕಿ ಬಂತು, ಇಷ್ಟರಲ್ಲಿ ಅತ್ತೆ ಬಂದು ಹೀಯಾಳಿಸಿದರು, "ಛೆ ನಿನ್ನಿಂದ ಇನ್ನು ನನ್ನ ವಂಶ ಬೆಳಗುವುದಿಲ್ಲ, ನಿನ್ನಿಂದ ನನ್ನ ಮಗನಿಗೂ ಕಳಂಕ, ನನ್ನ ಕರ್ಮ ನಿನ್ನನ್ನು ಮೆಚ್ಚಿ ಮನೆ ತುಂಬಿಸಿಕೊಂಡೆ, ಇಲ್ಲ ನನ್ನ ವಂಶ ಬೆಳೆಯಬೇಕು ಅದು ಹೀಗೆ ಇರಲು ಬಿಡುವುದಿಲ್ಲ, ನಾನು ನನ್ನ ಮಗನಿಗೆ ಇನ್ನೊಂದು ಮದುವೆ ಮಾಡ್ತೇನೆ, ಹೌದು ನೀನಿನ್ನು ಇಲ್ಲಿರಬೇಡ, ಹೊರಟುಹೋಗೆ ಮನೆಯಿಂದ" ಎಂದರು ಗೌರಿ ದುಃಖದಿಂದ ಅಳುತ್ತಿದ್ದಳು ಇಷ್ಟರಲ್ಲಿ ಪ್ರಭಾಕರ್ ಬಂದ, ಅವನೊಂದಿಗೆ ಇನ್ನೊಬ್ಬಳು ಹೆಣ್ಣಿದ್ದಾಳೆ! ಅರೆ ಇಬ್ಬರ ಕತ್ತಿನಲ್ಲಿ ಹಾರವಿದೆ ಅಂದರೆ ಇವರಿಗೆ ಇನ್ನೊಂದು ಮದುವೆಯಾಗಿದೆ, ನೀರು ತುಂಬಿದ ಕಣ್ಣಿನಿಂದ ಗಂಡನೆಡೆ ನೋಡಿದಳು "ಕ್ಷಮಿಸು ಗೌರಿ, ನಿನಗೆ ಇನ್ನು ಮಕ್ಕಳಾಗುವುದಿಲ್ಲ, ಅದಕ್ಕಾಗಿ ನಾನು ಮತ್ತೊಂದು ಮದುವೆಯಾಗಬೇಕಾಗಿ ಬಂತು. ಮಕ್ಕಳಿರದಿದ್ದರೆ ಹೇಗೆ ಜನ ಆಡಿಕೊಂಡು ನಗುತ್ತಾರೆ, ನನ್ನ ವಂಶ ಇಲ್ಲಿಗೆ ಕೊನೆಕೊಳ್ಳುವುದು ನನಗಿಷ್ಟವಿಲ್ಲ ಅದಕ್ಕೆ ಇನ್ನೊಂದು ಮದುವೆಯಾಗಿದ್ದೇನೆ, ನಿನಗಿಷ್ಟವಿದ್ದರೆ ಇಲ್ಲಿರಬಹುದು, ಇಲ್ಲದಿದ್ದರೆ ಹೋಗಬಹುದು" ಇಷ್ಟು ಹೇಳಿದ ಪ್ರಭಾಕರ್ ತನ್ನ ಹೊಸ ಹೆಂಡತಿಯೊಂದಿಗೆ ಒಳಗೆ ಹೋದ, ಆ ಹೊಸ ಹೆಣ್ಣು ಇವಳನ್ನು ನೋಡಿ ನಕ್ಕಂತಾಯಿತು, ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದ ಅನುಭವ, ತಾನು ಯಾರಿಗೂ ಬೇಡವಾದವಳು ಇನ್ನೇಕೆ ಬದುಕಬೇಕು  ಈ ಹೆಣ್ಣಿನ ದಾಸಿಯಾಗಿರುವುದಕ್ಕಾ, ಅಥವಾ ಈ ಸಮಾಜದ ಕಣ್ಣಿನಲ್ಲಿ ಬಂಜೆ ಎನಿಸಿಕೊಳ್ಳುವುದಕ್ಕಾ? ಇಲ್ಲ ನಾನು ಬದುಕುವುದಿಲ್ಲ ಎನ್ನುತ್ತ ಮಹಡಿಯ ಮೇಲೆ ಓಡಿ ಹೋದ ಗೌರಿ ಮಹಡಿಯಿಂದ ಕೆಳಗೆ ಬೀಳುವುದರಲ್ಲಿದ್ದಳು,

ಅಷ್ಟರಲ್ಲಿ ಯಾರೋ ಕೆನ್ನೆಗೆ  ಹೊಡೆದಂತಾಯಿತು ಬೆಚ್ಚಿ ಕಣ್ತೆರೆದಳು, ಅರೆ ನಾನಿಷ್ಟೊತ್ತು ಕಂಡದ್ದು ಕನಸು! ಮಡಿಲಲ್ಲಿ ಪುಟ್ಟ ಮಗುವೊಂದು ಆಡುತ್ತಿದೆ, ಇದೇ ನನ್ನ ಕೆನ್ನೆಗೆ ಹೊಡೆದದ್ದು ಯಾವುದೂ ಈ ಮಗು? ಎದುರಿನಲ್ಲಿ ಪ್ರಭಾಕರ್ ನಗುತ್ತಾ ನಿಂತಿದ್ದ, "ಹೇಗಿದ್ದಾನೆ ಗೌರಿ ನಿನ್ನ ಮಗ?" ಗೌರಿ ಆಶ್ಚರ್ಯದಿಂದ ಪ್ರಭಾಕರನತ್ತ ನೋಡಿದಳು "ನನ್ನ ಮಗನಾ?" " ಅಲ್ಲ ನಮ್ಮ ಮಗ ಮುದ್ದಾಗಿದ್ದಾನಾ? ಈಗಷ್ಟೆ ವಿದ್ಯಾಪೀಠದಿಂದ ಕರೆತಂದೆ" ಎಂದ ಪ್ರಭಾಕರ್. " ಏನು ಹೇಳ್ತಿದೀರ ನೀವು ಸ್ವಲ್ಪ ಬಿಡಿಸಿ ಹೇಳಿ" "ಇನ್ನು ಅರ್ಥವಾಗಲಿಲ್ವ ನಾನು ಈ ಮಗುವನ್ನು ದತ್ತಿಗೆ ತೆಗೆದುಕೊಂಡೆ, ನೀನು ಆಸ್ಪತ್ರೆಗೆ ಸೇರಿದ ದಿನವೇ ಈ ಮಗುವಿನ ತಾಯಿ ಅದೇ ಆಸ್ಪತ್ರೆಯಲ್ಲಿ ಹಸುನೀಗಿದಳು, ಅವಳು ಹಿಂದು ಮುಂದು ಯಾರು ಇಲ್ಲದ ವಿಧವೆಯಂತೆ, ಈ ಮಗು ಅನಾಥವೆಂದು ಸಾಬೀತಾದ ಮೇಲೆ ಇದನ್ನು ವಿದ್ಯಾಪೀಠಕ್ಕೆ ಬಿಟ್ಟಿದ್ದರು, ನಾನು ದತ್ತು ತೆಗೆದುಕೊಂಡೆ, ನಿನಗೆ ಖುಷಿಯಾಗುತ್ತಿಲ್ವಾ? " "ಸಂತೋಷವೇ ಆದರೆ ಅತ್ತೆ???" ಎಂದು ಸಾವಿತ್ರಮ್ಮನ ಕಡೆ ತಿರುಗಿದಳು. ಸಾವಿತ್ರಮ್ಮ ನಗುತ್ತಾ ಕೇಳಿದರು "ನಿನ್ನ ಮಗನಿಗೆ ಏನು ಹೆಸರಿಡೋಣಮ್ಮ ಗೌರಿ?" ಗೌರಿಯ ಕಣ್ಣುಗಳು ಆನಂದದಿಂದ ತುಂಬಿದವು ಅಷ್ಟರಲ್ಲಿ ಪ್ರಭಾಕರನೆಂದ " ಗೌರಿ ಒಳಗೆ ಹೋಗಿ ನೀನು ಸಿದ್ದ ಪಡಿಸಿದ್ದ ಹೆಸರಿನ ಪಟ್ಟಿ ತರಲೇ?" ಎಂದು ಕುಚೋದ್ಯ ಮಾಡಿದ, "ಬೇಡ ನನ್ನ ಮಗನಿಗೆ ಆಗಲೇ ಹೆಸರಿಟ್ಟಾಯ್ತು.." ಈ ಬಾರಿ ಆಶ್ಚರ್ಯ ಪಡುವ ಸರದಿ ಅಮ್ಮ ಮಗನದು, "ಹೌದು ಇವನ ಹೆಸರು 'ವೈನತೇಯ' ಆ ವಿನುತಳ ದಾಸ್ಯ ನಿವಾರಿಸಿ ಅವಳ ಕಷ್ಟ ನೀಗಲು ಹುಟ್ಟಿದ ಗರುಡ ವೈನತೇಯ, ನನ್ನ ತಾಯ್ತನದ ದುಃಖ ನಿವಾರಿಸಿ ಈ ಸಮಾಜದ ಟೀಕೆಗಳಿಂದ ನನ್ನ ಮುಕ್ತಿಗೊಳಿಸಲು ಬಂದ ಈ ಕಂದಮ್ಮನ ಹೆಸರು ವೈನತೇಯ" ಎಂದಳು, ಮಡಿಲಲ್ಲಿದ್ದ ವೈನತೇಯ ತನಗೇನೋ ಅರ್ಥವಾದಂತೆ ಕಿಲಕಿಲನೆ ನಗುತ್ತಿದ್ದ.

-ಲಾವಣ್ಯ ಸಿದ್ದೇಶ್ವರ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಕಂದನ ಕರೆ: ಲಾವಣ್ಯ ಸಿದ್ದೇಶ್ವರ್

Leave a Reply

Your email address will not be published. Required fields are marked *