ಕಲೆ-ಸಂಸ್ಕೃತಿ

ಕಂಕಣ ನಾಡು ನುಡಿಗಾಗಿ: ಯದುನಂದನ್ ಗೌಡ ಎ.ಟಿ.

    

ಹೆಸರೇ ಸೂಚಿಸುವಂತೆ "ಕಂಕಣ" ಎನ್ನುವುದು ಕನ್ನಡಿಗರಿಂದ, ಕನ್ನಡಕ್ಕಾಗಿ ಜನ್ಮ ತಾಳಿರುವ ಒಂದು ಕನ್ನಡಪರ ಬಳಗ. ಖ್ಯಾತ ಚಲನಚಿತ್ರ ಸಾಹಿತಿ “ಕವಿರಾಜ್” ಈ ತಂಡದ ಸಾರಥಿಯಾಗಿದ್ದು ಸುಮಾರು 150 ಸ್ವಯಂ ಪ್ರೇರಿತ ಕನ್ನಡಿಗ ಸದ್ಯಸರು ಈ ಬಳಗದಲ್ಲಿದ್ದಾರೆ. 

ಇತ್ತೀಚೆಗೆ ಕರ್ನಾಟಕದಲ್ಲಿ, ಅದರಲ್ಲೂ ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ದಿನನಿತ್ಯ ಜೀವನದಲ್ಲಿ ಕನ್ನಡ ಬಳಕೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಸಾಗಿದೆ. ಶಾಪಿಂಗ್ ಮಾಲ್ ಗಳು, ಅಂಗಡಿಗಳು, ಹೋಟೆಲ್ ಗಳು, ಬ್ಯಾಂಕ್ ಗಳು, ಬಸ್ ನಿಲ್ದಾಣಗಳು ಮುಂತಾದ ಸ್ಥಳಗಳಲ್ಲಿ ಕನ್ಮಡಿಗರೇ ಕನ್ನಡವನ್ನು ಮಾತಾಡಲು ಹಿಂಜರಿಯುತ್ತಿರುವ ಪ್ರಸಂಗಗಳು ಸಾಮಾನ್ಯವಾಗಿವೆ. ಪರಿಣಾಮವಾಗಿ ಕನ್ನಡ ಬಿಟ್ಟು ಬೇರೆ ಭಾಷೆ ತಿಳಿಯದ ಬಹುತೇಕ ಮಂದಿಗೆ ಇಂತಹ ಸ್ಥಳಗಳಲ್ಲಿ ವ್ಯವಹರಿಸುವುದೇ ಒಂದು ಸವಾಲಾಗಿ ಪರಿಣಮಿಸಿದೆ. ನಾವೆಲ್ಲರೂ ಕನ್ನಡ ನೆಲದಲ್ಲಿದ್ದು, ನಮ್ಮ ಮಾತೃಭಾಷೆ ಕನ್ನಡವಾಗಿರುವಾಗ ನಮ್ಮ ತಾಯಿನುಡಿಯನ್ನು ಆಡಲು ನಾವೇಕೆ ಹಿಂಜರಿಯಬೇಕು? ಈ ಒಂದು ಕಾರಣವನ್ನೇ ತನ್ನ ಮೂಲ ಧ್ಯೇಯವಾಗಿರಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಗುಂಪೇ ಕಂಕಣ.

ದಿನನಿತ್ಯದ ವ್ಯವಹಾರಿಕ ಜೀವನದಲ್ಲಿ ಕನ್ನಡಿಗರು ಕರ್ನಾಟಕದಲ್ಲಿ ಹಿಂಜರಿಕೆಯಿಲ್ಲದೆ ಕನ್ನಡ ಮಾತಾಡುವಂತೆ ಪ್ರೇರೇಪಿಸುವುದೇ ಈ ಬಳಗದ ಉದ್ಧೇಶ. ಕನ್ನಡ ಮಾತಾಡಲು ಪ್ರೇರೇಪಿಸುವುದು ಎಂದರೆ ಘೋಷಣೆಗಳನ್ನು ಕೂಗುವುದಾಗಲಿ, ಮೆರವಣಿಗೆ ಮಾಡುವುದಾಗಲೀ ಅಥವಾ ಪ್ರತಿಭಟನೆಗಳನ್ನು ನಡೆಸುವುದಾಗಲಿ ಅಲ್ಲ. ಬದಲಾಗಿ ಕಂಕಣದ ದಾರಿಯೇ ಬೇರೆ. ಮೊದಲು ತಂಡದ ಎಲ್ಲಾ ಸದಸ್ಯರು ಸಭೆಯನ್ನು ಸೇರಿ ನಗರದಲ್ಲಿರುವ ವಿವಿಧ ಜನಸಂದಣಿ ಪ್ರದೇಶಗಳನ್ನು ಗುರುತಿಸಿ ತಿಂಗಳಿಗೆ ಒಂದೊಂದು ಸ್ಥಳವನ್ನು ಆಯ್ಕೆ ಮಾಡಿ "ಕನ್ನಡ ಮಾತಾಡಿ" ಎನ್ನುವ ಅಭಿಯಾನಗಳ ಮೂಲಕ ಕನ್ನಡಿಗರು ಕನ್ನಡ ಮಾತಾಡುವಂತೆ ಪ್ರೇರೇಪಿಸುತ್ತಾರೆ. ಅಭಿಯಾನಗಳಲ್ಲಿ ಕಂಕಣದ ಎಲ್ಲಾ ಸದಸ್ಯರು ಒಂದೇ ರೀತಿಯ ಸಮವಸ್ತ್ರ ಧರಿಸಿ, ಪ್ರತಿಯೊಬ್ಬರೂ ಒಂದೊಂದು ಕನ್ನಡ ಫಲಕಗಳನ್ನು ಹಿಡಿದು 2 ರಿಂದ 3 ಗಂಟೆಗಳ ಕಾಲ ಮೊದಲೇ ಆಯ್ಕೆ ಮಾಡಿರುವ ಸ್ಥಳಗಳಲ್ಲಿ ಮೌನವಾಗಿ ನಿಲ್ಲುತ್ತಾರೆ. ಈ ರೀತಿಯ ಅಭಿಯಾನಗಳು ಪ್ರತೀ ತಿಂಗಳೂ ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಡೆಯುತ್ತವೆ. ಕಳೆದ ನವೆಂಬರ್ ತಿಂಗಳಿನಿಂದ ಜೆ.ಪಿ ನಗರದ ಸೆಂಟ್ರಲ್ ಮಾಲ್ ನಿಂದ ಆರಂಭವಾಗಿ ಇತ್ತೀಚೆಗೆ ಎಮ್.ಜಿ ರಸ್ತೆಯ ಸೆಂಟ್ರಲ್ ಮಾಲ್ ಬಳಿ ನಡೆದ ಅಭಿಯಾನ ಸೇರಿದಂತೆ ಒಟ್ಟು 7 ಅಭಿಯಾನಗಳನ್ನು ಕಂಕಣ ಬಳಗ ಯಶಸ್ವಿಯಾಗಿ ನಡೆಸಿದೆ. 

ಕಂಕಣದ ಈ ಕನ್ನಡಪರ ಅಭಿಯಾನಗಳಿಗೆ ಸಾರ್ವಜನಿಕರಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ. ಇದರ ಜೊತೆಗೆ ಇತ್ತೀಚೆಗೆ ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ಅಧ್ಯಕ್ಷರಾಗಿದ್ದ ಶ್ರೀ “ಸಿದ್ಧಲಿಂಗಯ್ಯನವರು” ತಮ್ಮ ಅಧ್ಯಕ್ಷ ಭಾಷಣದಲ್ಲಿ ಕಂಕಣ ಬಳಗದ ಹೆಸರನ್ನು ಪ್ರಸ್ತಾಪಿಸಿ, ಈ ರೀತಿಯ ಕನ್ನಡ ಮಾತಾಡಿ ಎನ್ನುವ ಅಭಿಯಾನಗಳು ರಾಜ್ಯವ್ಯಾಪಿ ಆಗಬೇಕು ಎನ್ನುವ ಸಂದೇಶವನ್ನು ಸಾರಿದ್ದಾರೆ. 

ಅಂದಹಾಗೆ ಈ ಕಂಕಣ ಕನ್ನಡ ಬಳಗವು ಯಾವುದೇ ಬೇರೆ ಭಾಷೆಯವರನ್ನು ಗುರಿಯಾಗಿರಿಸಿಕೊಳ್ಳದೆ ಕೇವಲ ಕರ್ನಾಟಕದಲ್ಲಿ ಕನ್ನಡ ಮಾತನಾಡದ ಕನ್ನಡಿಗರನ್ನೇ ಗುರಿಯಾಗಿರಿಸಿಕೊಂಡು ತನ್ನ ಅಭಿಯಾನಗಳನ್ನು ಮುಂದುವರೆಸಿದೆ. ಕಂಕಣದ ತಂಡದ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಫೇಸ್ ಬುಕ್ ಪುಟವನ್ನು ಸಂಪರ್ಕಿಸಬಹುದು. 

****

 

ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಕಂಕಣ ನಾಡು ನುಡಿಗಾಗಿ: ಯದುನಂದನ್ ಗೌಡ ಎ.ಟಿ.

  1. Naanu saha kankanada sadasye endu heLikolloke hemme. 

    Yadhu, olle lEkhana 🙂 mattashtu nimminda barali. 

Leave a Reply

Your email address will not be published. Required fields are marked *