ನಾಡು ನುಡಿಗಾಗಿ ಕಂಕಣತೊಟ್ಟ ಯುವ ಮನಸುಗಳ ಬಳಗವೇ ಕಂಕಣ.ಇದರ ರೂವಾರಿ ಚಿತ್ರ ಸಾಹಿತಿ ಕವಿರಾಜ್.
ಜಯನಗರದ ಖಾದಿಮ್ಸ್ ನಲ್ಲಿ ಪಾದರಕ್ಷೆಗಳನ್ನು ಕೊಳ್ಳಲು ಹೋದಾಗ ಅಲ್ಲಿಯ ಸಿಬ್ಬಂದಿಗಳ ಅನ್ಯ ಭಾಷೆಯ ವ್ಯವಹಾರ ಮತ್ತು ಕನ್ನಡದ ಬಗೆಗಿನ ನಿರ್ಲಕ್ಷ್ಯ ಅವರನ್ನು ಕೇವಲ ರೊಚ್ಚಿಗೇಳಿಸಲಿಲ್ಲ, ಚಿಂತನೆಗೂ ಹಚ್ಚಿತು. ತನ್ನ ನೆಲದಲ್ಲಿಯೇ ಕನ್ನಡ ನಿಧಾನವಾಗಿ ಕಡಿಮೆಯಾಗುತ್ತಿರುವುದಕ್ಕೆ ಕಾರಣಗಳು ಹಲವಾರಾದರು ಮುಖ್ಯ ಕಾರಣ ಕನ್ನಡಿಗರ ಹಿಂಜರಿಕೆ ಹಾಗೂ ಆತ್ಮವಿಶ್ವಾಸದ ಕೊರತೆ ಎಂಬುದನ್ನು ಮನಗಂಡ ಅವರು ಸಮಾನ ಮನಸ್ಕರಿಗೆ ಕರೆ ನೀಡಿ ಚರ್ಚಿಸಿ ರೂಪುಗೊಂಡಿದ್ದೆ "ಕಂಕಣ".
ಬೆಂಗಳೂರಿನಂತಹ ನಗರ ಗಳಲ್ಲಿ ಹಾಗೂ ಮಾಲ್ ಗಳಲ್ಲಿ ಕನ್ನಡದ ಬಳಕೆಯೇ ಇಲ್ಲವಾಗುತ್ತಿದೆ. ಕನ್ನಡಿಗರೇ ಕನ್ನಡವನ್ನು ಬಳಸಲು ಹಿಂಜರಿಯುತ್ತಿದ್ದಾರೆ. ಇದಕ್ಕೆ ನಮ್ಮ ಆತ್ಮವಿಶ್ವಾಸದ ಕೊರತೆಯೇ ಕಾರಣವೆನಿಸುತ್ತದೆ. ನಮ್ಮ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದು, ಆತ್ಮವಿಶ್ವಾಸದಿಂದ ಕನ್ನಡವನ್ನು ಮಾತನಾಡುವ ಹಾಗೆ ಮಾಡುವುದು, ನಮ್ಮ ನೆಲದಲ್ಲಿ ಕನ್ನಡದ ಸ್ಥಾನ ಮಾನಗಳನ್ನು ಬಲಗೊಳಿಸುವುದು ತನ್ಮೂಲಕ ಕನ್ನಡೇತರರಿಗೂ ಕನ್ನಡವನ್ನು ಕಲಿಯುವ ಮಾತನಾಡುವ ಅವಶ್ಯಕತೆಯನ್ನು ಅರ್ಥಮಾಡಿಸುವುದು ಕಂಕಣದ ಗುರಿ.
ಕಂಕಣ ಇದು ಯುವ ಮನುಸುಗಳ ಸಂಗಮ. ಹುಮ್ಮಸ್ಸು, ಏನಾದರೂ ಮಾಡಬೇಕು ಎನ್ನುವ ಕಾಳಜಿ, ಮುಖ್ಯವಾಗಿ ಕನ್ನಡದ ಬಗೆಗಿನ ಅಭಿಮಾನ ಎಲ್ಲರನ್ನೂ ಒಂದುಗೂಡಿಸಿದೆ. ಕಂಕಣದ ಬಳಗ ನಡೆಸಿದ ಸಮೀಕ್ಷೆಯ ಪ್ರಕಾರ ನಮ್ಮಲ್ಲಿ ಮೂರು ವರ್ಗಗಳಿವೆ. ಮೊದಲನೆಯದು ಅಪ್ಪಟ ಕನ್ನಡಿಗರದ್ದು. ಇವರಿಗೆ ಕನ್ನಡವನ್ನು ಮಾತನಾಡಲು ಯಾವುದೇ ಹಿಂಜರಿಕೆಯಿಲ್ಲ. ಎರಡನೇ ವರ್ಗ ಸಾಮಾನ್ಯವಾಗಿ ಕನ್ನಡಿಗರೇ ಆದರೂ ಮಾಲ್ ಗಳಲ್ಲಿ, ವಾಣಿಜ್ಯ ವ್ಯವಹಾರಗಳಲ್ಲಿ ಇಂಗ್ಲೀಶ್ ಬಳಸುವವರು, ಮೂರನೆಯ ವರ್ಗ ಲಂಡನ್ನಿನಲ್ಲಿ ಹುಟ್ಟಿ ಬೆಳೆದಂತೆ ಆಡುವವರು.
ಈ ವಿಷಯದಲ್ಲಿ ಕಂಕಣದ ಯುವನಾಯಕ ಕವಿರಾಜ್ ರವರದ್ದು ಸ್ಪಷ್ಟ ನಿಲುವು ಹಾಗೂ ಗುರಿಯಿದೆ. ಮೊದಲಿನ ಎರಡು ವರ್ಗಗಳನ್ನು ಕನ್ನಡಿಗರಾಗಿಯೇ ಉಳಿಸಿಕೊಳ್ಳುವ ಆ ಮೂಲಕ ಕನ್ನಡದಲ್ಲಿ ಮಾತನಾಡುವವರ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಿ ಭಾಷಾಭಿಮಾನ ಮೂಡಿಸುವುದು, ಹಾಗೂ ಅವರಲ್ಲಿಯ ಹಿಂಜರಿಕಾ ಮನೋಭಾವನ್ನು ಅಳಿಸಿ ಆತ್ಮವಿಶ್ವಾಸವನ್ನು ತುಂಬುವುದು. ಮಕ್ಕಳಲ್ಲಿ ಚಿಕ್ಕಂದಿನಿಂದಲೇ ನಮ್ಮ ಭಾಷೆಯ ಬಗ್ಗೆ ಪ್ರೀತಿಯನ್ನು ಮೂಡಿಸುವುದು, ಕಂಕಣದ ಮೊದಲ ಆದ್ಯತೆ.
ಅ ಆ ಇ ಈ ಕನ್ನಡದ ಅಕ್ಷರ ಮಾಲೆ, ಅಮ್ಮಾ ಎಂಬುದು ಕನ್ನಡ ಕಂದನ ಕರೆಯೋಲೆ.. ಎಂಬಂತೆ ಮಾತೃ ಭಾಷೆಯ ಬಗೆಗಿನ ಅಭಿಮಾನ ತಾಯಿ ಬಗೆಗಿನ ಪ್ರೀತಿಯಂತೆ ಸಹಜವಾಗಿ ನಮ್ಮೆಲ್ಲರಲ್ಲಿ ಮೂಡಬೇಕು, ಆಪ್ಯಾಯತೆಯನ್ನು ಬೆಳಿಸಿಕೊಳ್ಳಬೇಕು. ನಮ್ಮಮ್ಮ ಮೊದಲು ನಂತರ ಉಳಿದಿದ್ದೆಲ್ಲಾ ಅನ್ನೋ ಹಾಗೆ ಕನ್ನಡ ನಮ್ಮ ಉಸಿರಾಗಬೇಕು. ಕನ್ನಡದ ನೆಲದಲ್ಲಿ ಕನ್ನಡಕ್ಕೆ ಗೌರವ ವಿರಬೇಕು, ಎಂಬ ಆಸೆಯೊಂದಿಗೆ, ಕನಸಿನೊಂದಿಗೆ ಕಂಕಣ ಬಳಗ ತನ್ನ ಪುಟ್ಟ ಹೆಜ್ಜೆಯನ್ನು ಮುಂದಿಡುತ್ತಿದೆ.ಅಭಿಯಾನಗಳನ್ನು ನಡೆಸುತ್ತಿದೆ.
ಕಂಕಣ ಇದು ಎಲ್ಲದರಕಿಂತ ಭಿನ್ನ. ಇಲ್ಲಿ ಅಬ್ಬರವಿಲ್ಲ ಗದ್ದಲವಿಲ್ಲ, "ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ" ಎನ್ನುವಂತೆ ಇದು ಮೌನ ಕ್ರಾಂತಿ. ಅಭಿಯಾನವೂ ವಿಶಿಷ್ಟ, ಸಮವಸ್ತ್ರ ಧರಿಸಿದ ಕಂಕಣದ ಶಿಸ್ತಿನ ಸಿಪಾಯಿಗಳು ಕನ್ನಡ ಪರ ಫಲಕಗಳನ್ನು ಹಿಡಿದು ಮೌನವಾಗಿ ಸಾಲಾಗಿ ನಿಲ್ಲುತ್ತಾರೆ, ಕೆಲವರ ಕುಹಕ, ಹಲವರ ಕುತೂಹಲ, ಇನ್ನೂ ಕೆಲವರ ಪ್ರೋತ್ಸಾಹಕ್ಕೆ ಅವರ ಮುಗುಳ್ನಗೆಯೇ ಉತ್ತರ….. ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು, ಸಲಹೆಗಳಿಗೆ ಕಿವಿಯಾಗಲು ಸಂಚಾಲಕರು ಹಾಗೂ ಸ್ವತ: ಕವಿರಾಜ್ ಸದಾ ಸಿದ್ದ ಹಾಗೂ ಲಭ್ಯ ಕೂಡಾ.
ಅಭಿಯಾನದ ಅನುಭವಗಳು ವಿಭಿನ್ನ. ಕಾರಿನಿಂದ ಇಳಿಯುತ್ತಲೇ ಫಲಕಗಳನ್ನು ಗಮನಿಸಿ ಮುಖ ಸಿಂಡರಿಸುವವರು, ಆಟೋಗಳನ್ನು ನಿಲ್ಲಿಸಿ ಓದಿ ನಗೆಯರಳಿಸಿ ಮುನ್ನಡೆಯುವವರೂ, ಇಂತಹ ಒಂದು ಕೆಲಸದ ಅಗತ್ಯವಿತ್ತು ನಾವೂ ಜೊತೆಗಿದ್ದೇವೆ ಎಂದು ಬೆನ್ನುತಟ್ಟುವವರು, ನಮ್ಮಲ್ಲೂ ಈ ಆಸೆಯಿತ್ತು ನಾವು ನಿಮ್ಮೊಂದಿಗಿರುತ್ತೇವೆ ಎಂದು ಸದಸ್ಯರಾಗಿ ಕೈ ಜೋಡಿಸುವವರು, ಕುತೂಹಲದಿಂದ ವಿಚಾರಿಸಿ ನಮಗೂ ಕನ್ನಡ ಕಲಿಸುವಿರಾ ಎಂದು ವಿಚಾರಿಸುವವರು, ಇನ್ಮೇಲೆ ನಾವೂ ಕನ್ನಡವನ್ನೇ ಮಾತಾಡೋಣ ಎನ್ನುವ ಕಂದಮ್ಮಗಳು…. ಬೆಚ್ಚನೆಯ ಅನುಭೂತಿಗಳನ್ನು ತುಂಬಿ ನಮ್ಮ ಉತ್ಸಾಹವನ್ನು ಹೆಚ್ಚಿಸುತ್ತಿದ್ದಾರೆ.
ಈಗಾಗಲೆ ಕಂಕಣ ಜೆ. ಪಿ ನಗರದ ಸೆಂಟ್ರಲ್ ಮಾಲ್ ಎದುರು ಹಾಗೂ ಜಯನಗರದಲ್ಲಿ ತನ್ನ ಎರಡು ಅಭಿಯಾನಗಳನ್ನು ಸಮರ್ಥವಾಗಿ ನಿರ್ವಹಿಸಿದೆ. ಮೌನವಾಗಿಯೇ ಕನ್ನಡಿಗರಲ್ಲಿ ಕನ್ನಡ ಮಾತನಾಡುವ ಆತ್ಮವಿಶ್ವಾಸ ತುಂಬುತ್ತಿದೆ, ಕನ್ನಡದ ಕಂಪನ್ನು ಪಸರಿಸುವ, ದಿನನಿತ್ಯದ ವ್ಯವಹಾರಗಳಲ್ಲಿ ಕನ್ನಡ ಬಳಸುವ ಹಾಗೂ ಆದ್ಯತೆಯನ್ನು ಉತ್ತೇಜಿಸುವ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. " ಹಚ್ಚೇವು ಕನ್ನಡದ ದೀಪ" ಎಂದು ಕವಿರಾಜ್ ಕನ್ನಡದ ಹಣತೆಗಳನ್ನು ಹಚ್ಚುತ್ತಿದ್ದಾರೆ. ನಾವು ಹಚ್ಚೋಣ…… ಬೆಳಗೋಣ…. ಬೆಳಗಲು ಪ್ರೇರಣೆಯಾಗೋಣ……
*****
ಶೋಭಾ ಅವರೇ ನಿಮ್ಮ ಬರಹ ಸೊಗಸಾಗಿದೆ, ನಾನು ಕಂಕಣದ ಸದಸ್ಯ ಅಂತ ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ