ಪ್ರಶಸ್ತಿ ಅಂಕಣ

ಓ ಮನಸೇ, ಸ್ವಲ್ಪ ರಿಲ್ಯಾಕ್ಸ್ ಪ್ಲೀಸ್:ಪ್ರಶಸ್ತಿ ಅಂಕಣ


ಇವತ್ತಿನ ಯಶಸ್ಸನ್ನು ನಾಳೆಯ ಗುರಿಗಳೆದುರು ನಿಲ್ಲಿಸಿ ಕಡೆಗಣಿಸೋ ಮುನ್ನ.. ಜೀವನದೋಟದಲಿ ಎಲ್ಲರಿಗಿಂತ ಮುಂದಿರೋ ಬಯಕೆಯಲಿ ದಾಟಿದ ಎಷ್ಟೋ ಮೈಲುಗಳ ಮರೆಯೋ ಮುನ್ನ.. ಜತೆಗಿದ್ದವರ ನೋವಲ್ಲಿ ದನಿಯಾಗಿ, ನಲಿವಲ್ಲಿ ಅನಾಥನಾಗೋ ಮುನ್ನ.. ಓ ಮನಸ್ಸೇ ರಿಲ್ಯಾಕ್ಸ್ ಪ್ಲೀಸ್.. ಯಶವೆಂಬುದು ಗುರಿಯಲ್ಲ, ಅನುದಿನದ ದಾರಿ.. ಓ ಮನಸ್ಸೇ ರಿಲ್ಯಾಕ್ಸ್ ಪ್ಲೀಸ್ 🙂
ಬಾಳು, ಗೋಳು, ನೋವು, ನಲಿವು .. ಉಫ್ ಏನಪ್ಪಾ ಇದು ವೇದಾಂತ ಅಂದ್ಕೊಂಡ್ರಾ ? ಹಾಗೇನಿಲ್ಲ. ಪ್ರತೀ ವಾರದಂತೆಯೇ.. ಆದರೆ ಸ್ವಲ್ಪ ಭಿನ್ನವಾಗಿ. ಸ್ವಗತದ ಮಾತುಗಳನ್ನು ಪದಗಳಿಗಿಳಿಸೋ ಪ್ರಯತ್ನದಲ್ಲಿ.. ಫೇಸ್ಬುಕ್ಕಲ್ಲಿ ಒಂಬೈನೂರು ಗೆಳೆಯರ ದಂಡು. ಆದರೂ ಮನದಾಳದ ಭಾವ ಹೇಳ್ಕೋಬೇಕು ಅಂದ್ರೆ ಯಾರೂ ಸಿಗರೆಂಬ ಒಂಟಿ ಆತ. ಫೇಸ್ಬುಕ್ಕು, ಬ್ಲಾಗುಗಳೆಂಬ ಲೋಕದಲ್ಲಿ ಮುಳುಗಿದ್ದು, ಈಗ ಸ್ವಂತಕ್ಕೇ ಟೈಮಿಲ್ಲದಷ್ಟು ಆಫೀಸಿನಲ್ಲಿ ಕಳೆದುಹೋದ ಈತ. ಸದಾ ವಟಗುಡುತ್ತಿದ್ದ ಆಕೆ ಈಗ ಮಾತಾಡಿಸಿದ್ರೆ ಹಾಂ, ಹೂಂ ಅನ್ನುವಷ್ಟು ಮಾತೇ ಮರೆತೋದ ಮೌನ ಗೌರಿ.. ಸಡನ್ನಾದ ಈ ಬೆಳವಣಿಗೆಗೆ ಕಾರಣ ? ಅದೇ, ಇರವುದೆಲ್ಲವ ಬಿಟ್ಟು ಇರುವುದರೆಡೆಗೆ ತುಡಿಯೋ ಸಹಜ ಭಾವ ಮಿತಿಮೀರಿದ್ದು..
ಎಲ್ಕೇಜಿ ಹುಡುಗನಿಗೆ ಎ ಗ್ರೇಡ್ ಸಿಕ್ಕಿರುತ್ತೆ. ಯಾರಿಗೂ ಬರದ  ಎ ಗ್ರೇಡ್ ಈತನಿಗೆ ಬಂತೆದಲ್ಲ. ಆದರೆ ಆ ಕ್ಷಣಕ್ಕೆ ಅದೇ ಸಂತೋಷ. ಅದು ಬಿಟ್ಟು ತಪ್ಪಾದ ಒಂದು ಪ್ರಶ್ನೆಯ ನೆನೆದು, ಮುಂದಿನ ವರ್ಷದ ಎಕ್ಸಾಮಲ್ಲಿ ಎಲ್ಲಾ ಸರಿ ಬರೆಯೋ ಪಣ ಬೇಕೇ ? ಇರಾದೆಗಳು ತಪ್ಪಲ್ಲ. ಆದರೆ ಆ ಕ್ಷಣದ ಸಂತೋಷದ ನಿರಾಕರಣೆ ? ನಾಳಿಯ ಗುರಿಯ ನೆನಪಲ್ಲಿ ಇಂದಿನ ಜಯದ ನಿರಾಕರಣೆ ಎಷ್ಟು ಸರಿ.. ಸರಿ,  ಸೋಲೇ ಕಾಣದಷ್ಟು ಯಶದ ಕನಸಲ್ಲಿ, ಅದ್ವಿತೀಯನಾಗಬೇಕೆಂಬೋ ಹಂಬಲದಲ್ಲಿ ಹುಡುಗ ಬೆಳೆಯುತ್ತಾನೆ. ಮುಟ್ಟಿದ್ದೆಲ್ಲಾ ಚಿನ್ನವಾಗಬೇಕೆಂಬ, ಹೋದಲ್ಲೆಲ್ಲಾ ಗೆಲ್ಲಬೇಕೆಂಬ ಬಯಕೆ.. ಶಾಲೆಯ ವಾರ್ಷಿಕೋತ್ಸವಕ್ಕೊಂದು ಓಟದ ಸ್ಪರ್ಧೆ. ಜೋರಾಗೇ ಓಡಿದ ,ಗೆದ್ದ ಕೂಡ. ಬೆವರಲ್ಲಿ ಮುದ್ದೆಯಾದ ಬೆನ್ನಿಗೆ ಗೆಳೆಯರೆಲ್ಲಾ ತಟ್ಟುತ್ತಿದ್ದರೆ, ಚಪ್ಪಾಳೆಗಳು ಕಿವಿಗಪ್ಪಳಿಸುತ್ತಿದ್ದರೆ ಆ ಕ್ಷಣವನ್ನನುಭವಿಸಲಾಗದ ನಿರ್ಗತಿಕ ಆತ ! ಛೇ, ಓಟದ ಟೈಮಿಂಗ್ ಸಾಕಾಗಿಲ್ಲ.. ಈ ವೇಗದಲ್ಲಿ ಓಡಿದ್ರೆ ನಾನು ಇಂಟರ್ ನ್ಯಾಷನಲ್ ಲೆವೆಲ್ಲಲ್ಲಿ ಓಡಕ್ಕಾಗತ್ತಾ ? (!!). ಕನಸುಗಳಿರಬಾರದೆಂದಲ್ಲ.. ಆತರೆ ನಾಳಿನ ಕನಸುಗಳು ಕ್ಷಣಗಳ ಕೊಲೆಗಾರನಾಗಬಾರದಷ್ಟೆ…
ಕೇಜಿಯಿಂದ ಶುರುವಾದ ಈ ಕ್ರೇಜು ಕೊನೆಯಿಲ್ಲದಂತೆ ಮುಂದುವರೆದಿರುತ್ತೆ. ಬಂದ ತೊಂಭತ್ತೆಂಟು ಮಾರ್ಕಿಗಿಂತ ಬರದ ಎರಡು ಮಾರ್ಕುಗಳು ಕಾಡುತ್ತವೆ. ಸ್ಕೂಲಿಗೆ ಮೊದಲಿಗನಾದ ಖುಷಿಗಿಂತಲೂ ಒಂದು ಪಕ್ಕದ ಸ್ಕೂಲ್ ಟಾಪರ್ಗೆ ಒಂದು ಮಾರ್ಕು ಹೆಚ್ಚು ಬಂದಿದ್ದು ಕಾಡುತ್ತೆ!! ಇಡೀ ದಿನ ಖುಷಿಯಾಗಿ ಕಳೆದರೂ ರಾತ್ರಿ ಮಲಗೋ ಹೊತ್ತಿಗೆ ಆಡದೇ ಉಳಿದ ಮಾತುಗಳು, ತಿನ್ನಲು ಸಿಗದ ತಿಂಡಿಗಳು.. ಇನ್ನೇನೋ, ಮತ್ತೇನೋ ಕಾಡುತ್ತೆ. ಹಾಗಾಗಿ ಪ್ರತಿದಿನವೂ ಹೊಸ ಮುಖಗಳ ಪರಿಚಯವಾದರೂ ಸಂಜೆಗೆ ಸದಾ ಏಕಾಂಗಿ, ನಿರ್ಗತಿಕ. ಸ್ಕೂಲು ಕಾಲೇಜುಗಳಿಗೆ ಮುಗಿಯದ ಈ ವಿಚಿತ್ರ ಭಾವದ ಕಾಂಪ್ಲೆಕ್ಸು ಹಾಗೇ ಮುಂದುವರಿಯತ್ತೆ. ಆಫೀಸಲ್ಲಿ ತನಗೆ ಸಿಕ್ಕ ಹೈಕಿಗಿಂತ ಬೇರೊಂದು ಕಂಪೆನಿಯಲ್ಲಿ ತನ್ನ ಗೆಳೆಯನಿಗೆ ಸಿಕ್ಕ ಹೈಕು ಕಾಡುತ್ತೆ.. ಉಫ್!! ಇದಕ್ಕೆ ಕೊನೆಯುಂಟೇ ?.. ಇಲ್ಲಿ ಎಲ್ಲಾ ದುಃಖಕ್ಕೂ ಮನಸ್ಸೇ ಮೂಲ. ಲಗಾಮಿಲ್ಲದ ಕುದುರೆಯಂತೆ ಓಡುತ್ತಿರುವ ಮನಸ್ಸೇ.. ಕೊಂಚ ರಿಲ್ಯಾಕ್ಸ್ ಪ್ಲೀಸ್..
ಒಂದಾದ ಮೇಲೊಂದು ಗುರಿಗಳಿದ್ದೇ ಇರುತ್ತವೆ. ಅವಕ್ಕೆ ಕೊನೆಯೆಂಬುದಿಲ್ಲ. ಪ್ರಾಯಶ: ವೈರಾಗ್ಯ, ಸನ್ಯಾಸತ್ವ, ಸಾವುಗಳಲ್ಲೇ ಆಸೆ/ಗುರಿಗಳಿಗೆ ಕೊನೆಯೇನೋ. ಹಾಗಾಗಿ ಮುಗಿಯದ ಈ ಓಟದಲ್ಲಿ ಸಿಕ್ಕ ಖುಷಿಯ ಕ್ಷಣಗಳನ್ನು ಬಾಚಿಕೊಂಡವನೇ ಸದಾ ಸುಖಿ. ಕ್ಲಾಸಿಗೆ ಫಸ್ಟು ಬರವುದನ್ನ ಮುಂದಿನ ಸಾರಿ ಮತ್ತೆ ಟ್ರೈ ಮಾಡ್ಬೋದು. ಆದ್ರೆ ಈ ಸಲ ಸೆಕೆಂಡ್ ಬಂದ ಸಂತೋಷ ಯಾಕೆ ಮಿಸ್ ಮಾಡ್ಕೊಳ್ಳೋಣ ?ಸಾಥ್ ಕೊಟ್ಟ ಆರೋಗ್ಯ, ದೇಹ, ಮನಸ್ಸುಗಳಿಗೊಂದು ಥ್ಯಾಂಕ್ಸ್ ಹೇಳೋಣ ಅನ್ನೋ ಭಾವ ಇಷ್ಟವಾಗುತ್ತೆ. ಡ್ಯಾನ್ಸ್ ಶೋನಲ್ಲಿ ಗೆಲ್ಲದಿದ್ದರೇನಂತೆ, ಸ್ಪರ್ಧಿಸಲಾಗದ ಎಷ್ಟೋ ಜನರ ಮಧ್ಯೆ ಸಿಕ್ಕ ಅವಕಾಶದಲ್ಲಿ ಸ್ಪರ್ಧಿಸಿದ, ಅದಕ್ಕಾಗಿ ನಡೆಸಿದ ತಾಲೀಮಿನಲ್ಲಿ, ಸ್ಟೇಜಿನ ಮೇಲೆ ಹಾಕಿದ ಪ್ರತೀ ಹೆಜ್ಜೆಯಲ್ಲೂ ಸಿಕ್ಕ ಸಂತೋಷ ಕಮ್ಮಿಯೇನಲ್ಲ ಅನ್ನೋ ಭಾವ ಇದ್ಯಲ್ಲಾ ಅದಕ್ಕೊಂದು ಸಲಾಂ. ಯಾವಾಗ್ಲೂ, ಎಲ್ಲದನ್ನೂ ಮಾಡೋಕೆ ಹೊರಡೋ ಮನಸ್ಸೇ, ಕೊಂಚ ರಿಲ್ಯಾಕ್ಸ್ ಪ್ಲೀಸ್ ಅಂದರೆ ಯಶಸ್ಸನ್ನು ಕಾಣದ ಕಡಲಲ್ಲಿ ಹಂಬಲಿಸೋ ಬದಲು ಪ್ರತಿ ಮಗ್ಗುಲಲ್ಲೂ ಕಾಣಬಹುದೇನೋ. ಯಾರೂ ಸದಾ ಸುಖಿಗಳಿಲ್ಲದೇ ಇರಬಹುದು. ನೋವ ಮಡುವಲ್ಲೇ ಮುಳುಗಿರಬಹುದು. ಆದರೆ ಖುಷಿಯ ಅಲೆಗಳು ಏಳುತ್ತಲೇ ಇರುತ್ತವೆ. ಅನುಭವಿಸುವ ಮನಸ್ಸಿರಬೇಕಷ್ಟೇ..
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸುದೀಪ್, ವಿನಾಯಕ್ ಜೋಷಿಗೆ ಹೇಳ್ತಿದ್ದ ಮಾತೊಂದು ನೆನಪಾಗುತ್ತೆ. ಎಲ್ಲಾ ನನ್ನ ನಾಯಿ ನೋಡ್ದಂಗೆ ನೋಡ್ತಾರೆ ಅಂತೀಯಲ್ಲ.. ಈ ನಾಯಿ ನೋಡ್ದಂಗೆ ನೋಡ್ತಾರೆ ಅನ್ನೋದು ನಿನ್ನ ಮನಸ್ಸು ಅಂತ.. ತಂದೆಯವ್ರು ಒಂದು ಮಾತು ಹೇಳ್ತಿದ್ರು ಯಾವಾಗ್ಲೂ. ಜಗತ್ತು ಅನ್ನೋದು ನಾವು ಹಾಕ್ಕೊಂಡ ಕನ್ನಡಕದ ತರ ಕಾಣುತ್ತೆ ಕಣೋ. ಕೆಂಪು ಕನ್ನಡಕದವಂಗೆ ಎಲ್ಲಾ ಕೆಂಪಗೇ ಕಾಣುತ್ತೆ. ಅದೇ ಹಸಿರು ಕನ್ನಡ್ಕ ಹಾಕ್ಕೋ. ಎಲ್ಲಾ ಚೆನ್ನಾಗಿ ಕಾಣುತ್ತೆ ಅಂತ. ಎಷ್ಟು ಸತ್ಯ ಅಲ್ವಾ ? ಎಂದೂ ತೃಪ್ತಿಯಾಗದ ಮನಸ್ಸಿಗೆ ಇನ್ನೊಂದು ಮತ್ತೊಂದು ಬಯಸುತ್ತಾ ಓಡುತ್ತಿರುವುದೇ ಕೆಲಸ. ಆದರೆ ಆ ಓಟದ ಸ್ಟಾಪುಗಳಲ್ಲೂ ಒಂದು ಬ್ರೇಕ್ ಹಾಕದಿದ್ದರೆ, ನಡೆದ ದಾರಿ, ಸಿಗುತ್ತಿರೋ ಜಯಾಪಜಯಗಳನ್ನ ಸವಿಯದಿದ್ದರೆ ಆ ಓಟದ ಖುಷಿ ಸಿಗೋದು ಹೇಗೆ ? Success is in the travel not the end  ಅನ್ನೋ ಮಾತು ಇಲ್ಲಿ ನೆನಪಾಗುತ್ತೆ. ಯಶ ಕೊನೆಯಲ್ಲೆಂಬೋದೊಂದು ಕೆಂಪು ಕನ್ನಡಕವಾದ್ರೆ ಪ್ರತಿಕ್ಷಣವೂ ಖುಷಿಯೇ ಅನ್ನೋದು ಹಸಿರು ಕನ್ನಡಕ.. ಯಾರೂ ನನ್ನ ಗೌರವಿಸೋಲ್ಲ ಅನ್ನೋ ನಕಾರಾತ್ಮಕ ಭಾವಗಳೂ ಕೆಂಪು ಕನ್ನಡಕಗಳೇ.. ನಾವು ತೊಟ್ಟ ಕನ್ನಡಕಗಳ ಮೇಲೇಯೆ ಸುತ್ತಲಿನ ಜಗತ್ತಲ್ಲವೇ ?
ಜೀವನದ ಓಟ ನಿರಂತರ. ಇನ್ನೊಂದು, ಮತ್ತೊಂದುಗಳ ಬಯಕೆಯೂ ಹಾಗೆಯೇ. ಆದರೆ ಆ ಮಗದೊಂದುಗಳ ಕನಸಲ್ಲಿ ಇರುವುದರ ಕಡೆಗಣಿಸದೇ ಇರೋಣ. ಅಲ್ಲವೇ. ? ಸಿಗದ್ಯಾವುದೋ ಪ್ರಶಂಸೆಯ ಕನಸಲ್ಲಿ ಸಿಕ್ಕ ಇಂದಿನ ಪ್ರಶಸ್ತಿಯ ಸವಿಯ ಕಳೆದುಕೊಳ್ಳದಿರೋಣ ಅಲ್ಲವೇ ?
(ಮಿಡಿದ ಭಾವಗಳಲ್ಲಿ ಪದಗಳಿಗೆ ದಕ್ಕಿದ್ದೆಷ್ಟೋ ಕಾಣೆ. ಅವುಗಳಲ್ಲಿ ನಿಮಗೆ ಮುಟ್ಟಿದ್ದೆಷ್ಟೋ ಕಾಣೆ.. ರೂಪಾಯಿ ಭಾವಗಳಲ್ಲಿ ನಾಕಾಣೆಯಷ್ಟಾದ್ರೂ ಇಲ್ಲಿಂದಲ್ಲಿಗೆ ಸಾಗಣೆಯಾದ್ರೆ ಅದೇ ಈ ಕ್ಷಣದ ಖುಷಿಯೆಂಬ ಭಾವದಲ್ಲಿ ವಿರಮಿಸುತ್ತಿದ್ದೇನೆ)

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಓ ಮನಸೇ, ಸ್ವಲ್ಪ ರಿಲ್ಯಾಕ್ಸ್ ಪ್ಲೀಸ್:ಪ್ರಶಸ್ತಿ ಅಂಕಣ

Leave a Reply

Your email address will not be published. Required fields are marked *