ಹಾಸ್ಟೇಲಿನ ಬಳಿ ಬಂದಿದ್ದ ಪುಟ್ಟ ಹುಡುಗಿಯ ಹತ್ತಿರ ನಿನಗೆ ಲಗೋರಿ ಆಟ ಆಡೋಕೆ ಬರುತ್ತಾ ಎಂದು ಕೇಳಿದಾಗ ಅವಳಿಂದ ಬಂದ ಉತ್ತರ ನಂಗೆ ಕಾರ್ ರೇಸ್ ಬರುತ್ತೆ, ಹಂಗ್ರಿ ಬರ್ಡ್ ಬರುತ್ತೆ, ಛೋಟಾ ಭೀಮ್ ಬರುತ್ತೆ ಎಂದು ಒಂದೇ ಸಮನೆ ಕಂಪ್ಯೂಟರಿನ, ಮೊಬೈಲ್ ನ ಆಟಗಳನ್ನು ಹೇಳಹೊರಟಿದ್ದಳು.. ಮಣ್ಣಿನಲ್ಲಿ ನಾನು ಆಟ ಆಡೋಲ್ಲ. ನನ್ನ ಡ್ರೆಸ್ ಗಲೀಜ್ ಆಗುತ್ತೆ ಎಂದು ಅಮ್ಮ ಬೈತಾಳೆ ಎಂದಳು..ಇದನ್ನೆಲ್ಲಾ ಕೇಳುತ್ತಿದ್ದಂತೆ ಮನಸ್ಸು ಹೇಳದೇ ಕೇಳದೆ ನೆನಪಿನ ಕದವನ್ನು ತಟ್ಟಿಯೇ ಬಿಟ್ಟಿತು..ಬಾಲ್ಯದ ನೆನಪುಗಳು ಒಂದೊಂದರಂತೆ ಕಟ್ಟಿದರೂ ಬಿಚ್ಚತೊಡಗಿತು..ಒಂದಷ್ಟು ವರುಷದ ಹಿಂದಿನ ನೆನಪುಗಳನ್ನು ಹರವಿ ಕುಳಿತುಬಿಟ್ಟೆ ಒಬ್ಬಳೇ ಆಗಸವನ್ನು ನೋಡುತ್ತ..ಬಾಲ್ಯವೆಂದರೆ ಹಾಗೆ ಸುಂದರ ಲೋಕದಲ್ಲಿ ಒಂದಷ್ಟು ವರುಷಗಳ ಪಯಣವು ಬದುಕಿನಾದ್ಯಂತ ನೆನಪಿನ ಬುತ್ತಿಯ ತುತ್ತಾಗಿರುತ್ತೆ…
ರತ್ತೋ, ರತ್ತೋ ರಾಯನ ಮಗಳೇ ಬಿತ್ತೋ ಬಿತ್ತೋ ಭೀಮನ ಮಗಳೆ ಎಂದೇ ನಮ್ಮ ಬೆಳಗಿನ ಜಾವದ ಆಟಗಳು ಶುರುವಾದಾಗ ಮಣ್ಣಿನ, ಕಲ್ಲಿನ ಗೊಡವೆಯಿಲ್ಲದೆ ಕುಣಿಯುತ್ತಿದ್ದೆವು.. ಹತ್ತಿರದ ದೇವಸ್ಥಾನದ ಕೆರೆಯಲ್ಲಿ ಕಾಗದದ ದೋಣಿ ಮಾಡಿ ಬಿಡುತ್ತಿದ್ದ ದೊಡ್ಡ ಸ್ನೇಹಿತರ ದಂಡು. ಚಿಕ್ಕ ಚಾಕಲೇಟನ್ನು ಕಾಗೆ ಎಂಜಲಂತೆ ಹಂಚಿ ತಿನ್ನುತ್ತಿದ್ದಾಗ ಮಧ್ಯದಲ್ಲಿ ಕೋಳಿ ಜಗಳಗಳು..ಅಪ್ಪ ಅಮ್ಮನ ಕಣ್ಣು ತಪ್ಪಿಸಿ ಓಡಿದ ದೇವರ ಗುಡ್ಡೆಯ ಬೆಟ್ಟದಲ್ಲಿ ನಾವೇ ಹುಲಿ ಸಿಂಹಗಳೆಂಬಷ್ಟು ದರ್ಬಾರು. ನೆಲ್ಲಿಕಾಯಿಗಳ, ಮುಳ್ಳೆಹಣ್ಣುಗಳ ಗಿಡ ಕಾಣದಷ್ಟು ಕಿತ್ತು ತೆಗೆದಾಗ ಮಾತ್ರ ನಮಗೆ ಸಮಾಧಾನ. ನಿಮ್ಮ ಗುರಿ ಏನು ಎಂದು ದೊಡ್ಡವರ್‍ಯಾರಾದರೂ ಪ್ರಶ್ನೆ ಕೇಳಿದರೆ ನಮ್ಮಿಂದ ಬರುತ್ತಿದ್ದ ಉತ್ತರವೆಂದರೆ ನಾನು ಟ್ರಕ್ ಡ್ರೈವರ್ ಆಗುತ್ತೇನೆ ಎಂದು ಹೇಳಿದರೆ, ಇನ್ನೊಬ್ಬಳು ತಾನು ಹೋಟೇಲ್ ಮಾಲೀಕ ಆಗ್ತೇನೆ ತುಂಬಾ ರುಚಿ ರುಚಿಯಾದ್ದನ್ನು ತಿನ್ನಬಹುದು ಅಂತ ಹೇಳುತ್ತಿದ್ದಳು.. ಮಹೇಶನು ತಾನು ದೊಡ್ಡ ಬಸ್ಸು ತೊಗೊಳ್ತೀನಿ ಊರೂರು ಸುತ್ತಬಹುದು ಎನ್ನುತ್ತಿದ್ದ.. ಟೀಚರ್ ಆದರೆ ಮಕ್ಕಳಿಗೆ ಹೊಡೆಯಬಹುದು ಎಂದು ಹೇಳುತ್ತಿದ್ದವಳು ವೀಣಕ್ಕ..ಹುಚ್ಚು ಕನಸುಗಳ ನಡುವೆಯೂ ಒಂದಷ್ಟು ಖುಷಿಗಳಿಗೆ ಮಿತಿಯಿರಲಿಲ್ಲ..
ದೊಡ್ಡ ಏರಿಯ ಮೇಲೆ ನಿಂತು ಅಡಿಕೆ ಹಾಳೆಯ ಜಾರುಬಂಡಿಯಲ್ಲಿ ಬಿದ್ದ ದಿನಗಳಿಗೆ ಲೆಕ್ಕವಿಲ್ಲ.. ಎಷ್ಟೇ ಜೋರಾಗಿ ಬಿದ್ದು ನೋವಾದರೂ ನನಗೇನೂ ಆಗೇ ಇಲ್ಲವೆಂಬಂತೆ ದೊಡ್ಡದಾಗಿ ನಕ್ಕಾಗ ಸಹಜತೆಯ ಹಿಂದೆ ಮರೆಯಾಗುತ್ತಿದ್ದ ನೋವುಗಳು. ದೊಪ್ಪನೆ ಬಿದ್ದಾಗ ಎತ್ತಲು ಬರುವವರಿಗಿಂತ ನೀ ಬಿದ್ದು ಹೋದೆ ಎಂದು ನಗೆಯಾಡುತ್ತಲೇ ಅಣುಕಿಸುತ್ತಿದ್ದರು..ಎರಡು ರೂಪಾಯಿ ಸಿಕ್ಕರೂ ಸಾಕು ರಮೇಶನ ಅಂಗಡಿಗೆ ಹೋಗಿ ಐಸ್‌ಕ್ಯಾಂಡಿ ತೆಗೆದುಕೊಳ್ಳಲೇಬೇಕು.. ವಾರಕ್ಕೊಮ್ಮೆ ಬರುವ ಬಾಂಬೈ ಮಿಠಾಯಿ ಅಂಗಡಿಯವನಿಗೆ ನಾವ್ಯಾವತ್ತೂ ಮೋಸ ಮಾಡುತ್ತಿರಲಿಲ್ಲ ಎನ್ನುವುದು ಸುಳ್ಳಲ್ಲ. .ಕ್ಲಾಸಿನಲ್ಲಿ ಮಾತನಾಡಿದವರ ಹೆಸರು ಬರೆಯುತ್ತೇನೆ ಎಂದು ಹೋದ ವ್ಯಕ್ತಿ ಮೊದಲು ಬರೆಯುತ್ತಿದ್ದುದು ನನ್ನ ಹೆಸರನ್ನು..ಅಂದರೆ ಪ್ರತ್ಯೇಕವಾಗಿ ಹೇಳಬೇಕಿಲ್ಲ ನಾನು ಹೆಚ್ಚು ಮಾತನಾಡುತ್ತಿದ್ದವಳು ಎಂದು..ನೀನು ಮಾತನಾಡೋದಲ್ದೆ ಉಳಿದವರಿಗೂ ಮಾತನಾಡಿಸ್ತೀಯ ಎಂದು ಟೀಚರ್ ಹೊಡೆದಾಗ ಮನಸ್ಸಿನಲ್ಲಿಯೇ ಬೈದುಕೊಳ್ಳುತ್ತಿದ್ದೆವು..
ನಮ್ಮದು ಅದೇ ಕೇರಿಯ ಮನೆ..ಸಾಕೆನ್ನುವಷ್ಟು ಬೇಕೆನ್ನುವಷ್ಟು ಸ್ನೇಹಿತರಿದ್ದರಿಂದಲೋ ಏನೋ, ಹೆಚ್ಚು ಹೆಚ್ಚು ಕನಸುಗಳು ಬಿಕರಿಯಾಗುತ್ತಿದ್ದವು..ಅಜ್ಜಿಯ ಕತೆಗಳಿಗೆ ಕಿವಿಯಾಗುತ್ತಿದ್ದಾಗ, ಅದ್ಯಾಕೆ ಹಿಂಗೆ, ಇದ್ಯಾಕೆ ಹಂಗೆ ಎಂಬ ಉತ್ತರವಿಲ್ಲದ ಪ್ರಶ್ನೆಗಳು. .ಬೆಳಿಗ್ಗೆಯಿಂದ ಸಂಜೆಯವರೆಗೆ ಆಟವಾಡಿದರೂ ಇನ್ನೂ ಮುಗಿಯದ ಆಟಗಳಿಗೆ ಹೆಸರೇ ಇಲ್ಲ. ಊಟ ತಿಂಡಿ ಸ್ನಾನವನ್ನು ಲೆಕ್ಕಿಸದೇ ಗದ್ದೆ ತೋಟದಲ್ಲಿ ನಮ್ಮದೇ ದೊಡ್ಡ ದಂಡು. . ಮಣ್ಣಿನಿಂದ ಮಾಡುತ್ತಿದ್ದ ಈಶ್ವರ ಲಿಂಗಕ್ಕೆ ಪೂಜೆಗಳಿಗೇನು ಕೊರತೆಯಿರುತ್ತಿರಲಿಲ್ಲ. . ಮಣ್ಣುಗಳಲ್ಲಿ ಅರಳುತ್ತಿದ್ದ ನಮ್ಮ ಪ್ರತಿಭೆಗಳಿಗೆ ನಾವೇ ಹೊಗಳುಭಟ್ಟರು..ಕಲ್ಲುಗಳನ್ನು ಕೆರೆಯಲ್ಲಿ ಹಾಕಿ ಮೈಯೆಲ್ಲ ಒದ್ದೆ ಮಾಡಿಕೊಂಡು ಮನೆಗೆ ಬಂದಾಗ ಅಮ್ಮನಿಂದ ಸಿಗುತ್ತಿದ್ದ ಬೈಗುಳ ಲೆಕ್ಕಕ್ಕೇ ಇಲ್ಲ. .ಪಾಪ ಸಣ್ಣ ಕೂಸು ಬಿಡೇ ಅದ್ರ ಅಂದು ಅಪ್ಪ ಯಾವಾಗಲೂ ನನ್ನ ಪರವಾಗಿ ಮಾತನಾಡುತ್ತಿದ್ದವನು..
ಅದೇ ರಥಬೀದಿಯ ಸಾಲುಗಳಲ್ಲೇ ಹಂಚಿಹೋಗುತ್ತಿದ್ದ ನಮ್ಮೆಲ್ಲ ಪುಟ್ಟ ಮಾತುಗಳಿಗೆ ಲೆಕ್ಕವೇ ಇಲ್ಲ.. ಯಾರೋ ಹೇಳಿಕೊಟ್ಟ ಯಾವುದೋ ಅರ್ಥವೇ ಗೊತ್ತಿಲ್ಲದ ನಾನ್ ವೆಜ್ ಜೋಕನ್ನು ದೇವಸ್ಥಾನದ ದೊಡ್ಡ ಕಾರ್ಯಕ್ರಮದಲ್ಲಿ ಹೇಳಿ ಅಮ್ಮನಿಂದ ಪೆಟ್ಟು ತಿಂದಿದ್ದೆ.. ಇನ್ಯಾವತ್ತಾದ್ರೂ ಜೋಕು ಗೀಕು ಅಂತ ಹೇಳಿದ್ರೆ ಕಾಲು ಮುರಿತೀನಿ ಅಂತ ವಾರ್ನ್ ಮಾಡಿದ್ದಳು.. ಬಾಲ್ಯವೆಂದರೇ ಹಾಗೆ, ಮುಗ್ಧತೆಯ ನಡುವೆ ಸಹಜತೆಗೆಗಳಿಗೆ ಎಲ್ಲೆಯಿಲ್ಲ. ಎಲ್ಲರ ನಡುವೆ ಏನೇ ಮಾತನಾಡಲೂ ಮುಚ್ಚುಮರೆಯೆಂಬುದಿಲ್ಲ..ಅನ್ನಿಸಿದ್ದನ್ನು ಹಾಗೆಯೇ ಹೇಳಿ ಬಿಡುವ ಜಾಯಿಮಾನ..ಇನ್ನೂ ಉಳಿಯದ, ಮುಗಿಯದ ಕತೆಗಳು..
ಬಾಲ್ಯದ ಸ್ನೇಹಿತರೊಂದಿಗೆ ಕಳೆದ ದಿನಗಳಿನ್ನೂ ನಗುವಿನ ಅಲೆಯಲ್ಲಿ ತೇಲಿ ಬರುತ್ತದೆ..ಮತ್ತೆ ಮತ್ತೆ ನೆನಪುಗಳಾಗಿ , ಬರಹವಾಗಿ, ಹಾಡಾಗಿ ರೂಪುಗೊಳ್ಳುತ್ತಿರುತ್ತೆ. .ಕಲ್ಲು ಮಣ್ಣುಗಳ ಪರಿವಿಲ್ಲದೇ, ಸಂಜೆ ರಾತ್ರಿಗಳ ಲೆಕ್ಕವಿಲ್ಲದೇ , ಕೇವಲ ಒಂದು ಪರಿಧಿಯೊಳಗೆ ಸೀಮಿತವಾಗಿರದೇ ರೂಪುಗೊಂಡ ಬಾಲ್ಯವು ಎಂದಿಗೂ ಮರೆಯಲಾರದ ಘಟ್ಟ.. ಮಣ್ಣಿನಲ್ಲಿ ಆಟವಾಡಿದರೆ ಮೈಯೆಲ್ಲ ಗಲೀಜ್ ಆಗುತ್ತೆ, ಮೊಬೈಲ್ ನ ಗೇಮ್ಸ್ ಗಳನ್ನಷ್ಟೇ ಆಡ್ತೀನಿ ಎಂದು ಒಬ್ಬರೇ ಕೂತು ಆಟವಾಡುವ ಇಂದಿನ ನಗರಗಳಲ್ಲಿರುವ ಬಾಲ್ಯಕ್ಕೂ, ಮಣ್ಣುಗಳಲ್ಲಿ ಆಟವಾಡಿದರೆ ಮಾತ್ರ ಅದೊಂದು ಆಟ ಎಂದು ತಿಳಿದೇ ಆಡುವ ಹಳ್ಳಿಯ ಆ ಬಾಲ್ಯಕ್ಕೂ ಅದೆಷ್ಟು ವ್ಯತ್ಯಾಸ ಅಲ್ವಾ?
(ಪದ್ಮಾ ಭಟ್ ಬರೆಯುವ ’ಕಾಮನಬಿಲ್ಲು’ ಅಂಕಣ ಹದಿನೈದು ದಿನಗಳಿಗೊಮ್ಮೆ ಪಂಜುವಿನಲ್ಲಿ ಕಾಣಿಸಿಕೊಳ್ಳಲಿದೆ.)
ಚೆನ್ನಾಗಿದೆ… ಬರಹ… ..keep writing…
ಚನ್ನಾಗಿದೆ ನಿಮ್ಮ ಬಾಲ್ಯದ ನೆನಪಿನ ಬರಹ
ಲೇಖನ ಚೆನ್ನಾಗಿದ್ದು ಪದ್ಮಾ.. ನಿನ್ನೆಯ ನೆನಪುಗಳ ಬಗ್ಗೆ ಚೆನ್ನಾಗಿ ಬರದ್ದೆ. ನಿನ್ನೆಯ ನೆನಪುಗಳ ಜೊತೆ ಜೊತೆಗೆ ನಂಗೆ ಇವತ್ತಿನ ವಾಸ್ತವ ರಾಚಿದಂಗೆ ಆಗ್ತಾ ಇದೆ. ಈಗಿನವ್ಕೆ ಲಗೋರಿ, ಚಿನ್ನಿದಾಂಡು, ಗೋಲಿ , ಬುಗುರಿಗಳೆಲ್ಲ ಮೈ ಕೊಳೆ ಮಾಡ್ಕೊಳ್ಳೋ, ಬೀದಿ ಹುಡುಗ್ರು ಮಾತ್ರ ಆಡೋ ಆಟ !! ಆಟದಲ್ಲೂ ಸ್ಟೇಟಸ್ಸು.. ಕ್ರಿಕೆಟ್, ವಾಲಿಬಾಲ್, ಫುಟ್ಬಾಲ್ ಆಡಿದ್ರೆ ಮಾತ್ರ ಗೌರವ ಅನ್ನೋ ದೊಡ್ಡವರು ಬೇರೆ.. ಮುಂಚೆ ವಿಡೀಯೋ ಗೇಮ್ಗಳಿತ್ತು. ಆಮೇಲೆ ಟೀವಿ ವೀಡಿಯೋ ಗೇಮ್ ಬಂತು. ಕಂಪ್ಯೂಟರ್ ಗೇಮ್, ಮೊಬೈಲ್ ಗೇಮ್.. ಒಟ್ನಲ್ಲಿ ಎಲ್ಲಾ ಮಕ್ಕಳನ್ನ ಮನೆಯೊಳಗೆ ಕೂಡಿ ಹಾಕೋದೇ ಹೊರತು ಹೊರಗೆ ಕೈಕಾಲಾಡಿಸೋದಲ್ಲ.. ಈಗ್ಲೂ ನೋಡಿ, ಅಣ್ಣಂದೋ ಅಕ್ಕಂದೋ ಮೊಬೈಲ್ ಕಸ್ಕಂಡು ಕ್ಯಾಂಡಿ ಕ್ರಷ್ಷೋ , ಅದೆಂತದೋ ಸಾಗ ಆಡೋ ಕ್ರೇಜು ಹೊರಾಂಗಣ ಆಟ ಆಡೋದ್ರಲ್ಲಿಲ್ಲ. ಕಾಲಾಯ ತಸ್ಮೈ ನಮಃ
Balyada nenapugale madhura….. bhala chand barediri…..
ಯಾವಾಗ ತಮ್ಮ ಲೇಖನವನ್ನು ಓದಿದೆನೋ ಆಗಿನಿಂದಲೂ ನನ್ನ ಹಿಂದಿನ ನೆನಪುಗಳು ನುಗ್ಗಿ ಬಂದು ಇಷ್ಟೆಲ್ಲಾ ಆಟಗಳನ್ನು ಯಾರೂ ಕಲಿಸದಿ್ದ್ರೂ ಆಡಿದ್ದು ನಾನಾ ಎಂಬುದು ನನ್ನನ್ನು ವಿಸ್ಮಯಗೊಳಿಸಿದೆ. ತಮ್ಮ ಲೇಖನವನ್ನು ಇಂದಿನ ದಿನಮಾನಕ್ಕೆ ಹೋಲಿಸಿದಲ್ಲಿ ಬಾಲ್ಯ ಎಂಬುದು ಈಗ ವಯಸ್ಸಾಗಿ ಉಳಿದಿಲ್ಲ. ಸ್ಥಿತಿಯಾಗಿ ಮಾಪಾ:ಡಾಗಿದೆ.
ಸುರೇಂದ್ರ ಜಿ.ಎಸ್.