ಪಂಜು-ವಿಶೇಷ

ಓ ನಾಗರಾಜ ಅಪ್ಪಣೆಯೇ…

 

ನಮ್ಮ ಆಫೀಸಿನ ಎದುರು ಬೈಕುಗಳು ಸಾಲಾಗಿ ನಿಲ್ಲುವ ಜಾಗದಲ್ಲಿ ಮೊನ್ನೆ ನಾಗರಹಾವೊಂದು ಬಂದು ಮಲಗಿತ್ತು. ಅದೇನು ಬೈಕಿನಂತೆ ಸರದಿ ಸಾಲಿನಲ್ಲಿ ಇರಲಿಲ್ಲ. ಯಾರದೋ ಬೈಕಿನ ಟ್ಯಾಂಕ್ ಕವರ್‌ನಲ್ಲಿ ಬೆಚ್ಚಗೆ ಪವಡಿಸಿತ್ತು. ಸದ್ಯ ಬೈಕಿನ ಸವಾರನಿಗೆ ಅದೇನು ಮಾಡಲಿಲ್ಲ. ಗಾಬರಿಯಿಂದ ಇಳಿದು ಯಾವುದೋ ಚರಂಡಿ ಹುಡುಕಿಕೊಂಡು ಹೋಯಿತು. ಆವತ್ತೆಲ್ಲ ಆ ಹಾವಿನ ಬಗ್ಗೆ ಗುಲ್ಲೋ ಗುಲ್ಲು. ಅಲ್ಲಿದ್ದವರೆಲ್ಲ ಹಾವು ಅಲ್ಲಿಗೆ ಏಕೆ ಬಂತು ಎಂಬುದರ ಬಗ್ಗೆ ಒಂದು ವಿಚಾರಸಂಕಿರಣಕ್ಕೆ ಆಗುವಷ್ಟು ಮಾತಾಡಿದರು ಎನ್ನಿ.

ಹಾವುಗಳು ಯಾರಿಗೆ ತಾನೆ ಗೊತ್ತಿಲ್ಲ! ನಮ್ಮ ದೇಶದ ಜನರಿಗೆ ತಮ್ಮ ಬದುಕಿನ ಒಂದು ಭಾಗವೇ ಆಗಿರುವ ಈ ಹಾವುಗಳಾದರೂ ಎಂಥ ಪ್ರಾಣಿಗಳು? ಒಂದು ಕಡೆ ಭಕ್ತಿ ಭಾವದ ಕತೆಗಳು, ಮತ್ತೊಂದೆಡೆ ದುಷ್ಟ ಕತೆಗಳಿಗೆ ಕಾರಣವಾಗಿರುವ ಸುಂದರ ಜಂತು ಇದು. ನನ್ನ ಬಾಲ್ಯದಲ್ಲಂತೂ ಹಾವುಗಳ ಬಗ್ಗೆ ಯೋಚಿಸದಿದ್ದ ದಿನಗಳೇ ಇರಲಿಲ್ಲ ಎನ್ನಬಹುದು. ನಮ್ಮ ತೋಟದ ದಾರಿಯಲ್ಲಿ ತುಂಬಾ ಹುತ್ತಗಳಿದ್ದವು. ಖಂಡಿತಾ ಅಲ್ಲಿ ಹಾವು ನಮಗಾಗಿ ಕಾಯುತ್ತಿದೆ ಎಂಬ ಭಾವದಲ್ಲೇ ನಾವು ಓಡಾಡುತ್ತಿದ್ದೆವು. ಇನ್ನು  ತೋಟದೊಳಗೆ, ಪಕ್ಕದ ಹಳ್ಳದ ಸಾಲಿನಲ್ಲಿ ಆಗೀಗ ದರ್ಶನ ನೀಡುತ್ತಿದ್ದ ಇವುಗಳ ಬಗ್ಗೆಯಂತೂ ನಮಗೆ ಭಯವೋ ಭಯ. ನಾವು ತೋಟಕ್ಕೆ ಹೋಗಲು ತಪ್ಪಿಸಿಕೊಳ್ಳಲು ನೀಡುತ್ತಿದ್ದ ಕಾರಣಗಳಲ್ಲಿ ಹಾವುಗಳ ಇರುವಿಕೆಯೂ ಒಂದಾಗಿತ್ತು.

ಒಂದು ಮಳೆಗಾಲದ ದಿನ. ನಾನು, ನಮ್ಮಣ್ಣ ತೋಟದಲ್ಲಿ ಹುಲ್ಲು ಕುಯ್ಯುತ್ತಿದ್ದೆವು. ಆ ದಿನಗಳಲ್ಲಿ ಬಿಸಿಲು ಕಾಯಿಸಲು ಹಾವುಗಳು ಈಚೆ ಬರುವುದು ನಮಗೆ ಗೊತ್ತಿತ್ತು. ಇದೇ ಭೀತಿಯಲ್ಲಿ ಹುಲ್ಲು ಕುಯಿದು ಮುಗಿಸಿ ಹೊರೆ ಕಟ್ಟಿದೆವು. ಎಂದಿನಂತೆ ಸೀಬೆ ಮರವನ್ನು ವಿಚಾರಿಸಿಕೊಂಡು ಬರಲು ಹೋದೆವು. ಸೀಬೆಮರವನ್ನು ಚೆನ್ನಾಗಿಯೇ ವಿಚಾರಿಸಿ ಬಂದೆವು. ಕಟ್ಟಿದ್ದ ಹೊರೆಯನ್ನು ಹೊತ್ತುಕೊಂಡು ಮನೆಗೆ ಬಂದೆವು.  ಹಸಿಹುಲ್ಲು ಮೊದಲೇ ಹೆಣಭಾರ. ಹೇಗೋ ಠಸ್ಸೋ ಪುಸ್ಸೋ ಎಂದು ಹೊತ್ತುಕೊಂಡು ಮನೆಯ ತನಕ ಬಂದೆವು. ಮನೆಯಾಚೆಯೇ ಹೊರೆ ಬಿಸಾಕಿದೆವು. ನಮ್ಮಣ್ಣ ಬಿಸಾಕಿದ ಹೊರೆಯಿಂದ ತಕ್ಷಣವೇ ಒಂದು ಗೋಧಿ ನಾಗರಹಾವು ಈಚೆ ಬಂದು ಬಿಟ್ಟಿತು! ನಾವು ಬಿದ್ದಂಬೀಳ ಓಡಿದೆವು!!

ಇದಾದ ಮೇಲೆ ನಮಗಂತೂ ತೋಟಕ್ಕೆ ಹೋಗುವುದು ಎಂದರೆ ಯಮಲೋಕಕ್ಕೆ ಹೋಗುವ ರಹದಾರಿ ಎಂದೆನಿಸತೊಡಗಿತು. ನಾವಂತೂ ಒಲ್ಲೆ ಎಂದು ಚಂಡಿ ಹಿಡಿಯುತ್ತಿದ್ದೆವು. ಅಂತೂ ಆ ಹಾವಿನಿಂದ ನಮಗೆ ಕೊಂಚ ಉಪಕಾರವೇ ಆಯಿತು ಎನ್ನಿ. ಕೆಲಕಾಲದ ಮಟ್ಟಿಗಂತೂ ನಮಗೆ ಹುಲ್ಲು ಕುಯ್ಯುವ, ಹೊರೆ ತರುವ ಕೆಲಸದಿಂದ ಮುಕ್ತಿ ಸಿಕ್ಕಿತು. ನಾಗರಾಜನಿಗೆ ಜೈ. ಇನ್ನೊಂದು ದಿನ ತೋಟದಿಂದ ನಾನು, ನಮ್ಮಣ್ಣ ಬರುತ್ತಿದ್ದೆವು. ದಾರಿಯಲ್ಲಿದ್ದ  ಹುತ್ತದಿಂದ ಹಾವೊಂದು ಸರ್ರೆಂದು ಬಂದು ನಮ್ಮನ್ನು ಸುತ್ತು ಹಾಕಿ ಮತ್ತೆ ಹುತ್ತದ ಒಳಗೆ ಹೋಯಿತು. ಈ ಘಟನೆ ಆದ ಮೇಲಂತೂ ಹಾವುಗಳು ನಮಗಾಗಿ ಎಲ್ಲಾ ಕಡೆ  ಕಾಯುತ್ತಿರುತ್ತವೆ ಎಂದು ಖಾತ್ರಿಯಾಗಿ ಹೋಯಿತು. ಇಡೀ ಲೋಕದಲ್ಲಿ ನಮ್ಮನ್ನು ಕೊಂದು ಮುಗಿಸಲು ಕಾದಿರುವ ಪ್ರಾಣಿಯೆಂದರೆ ಹಾವು ಎಂದು ನಾವು ತೀರ್ಮಾನಿಸಿಬಿಟ್ಟೆವು.

ನಮ್ಮಮ್ಮ ನಾಗರಹಾವು ದೇವರ ಪ್ರತಿರೂಪ, ಭಕ್ತಿಯಿಂದ ನಡೆದುಕೊಂಡರೆ ಏನೂ ಮಾಡೋಲ್ಲ ಎಂದು ಭರವಸೆ ನೀಡುತ್ತಿದ್ದಳು.ಇದು ಮನಸಿನ ಮೇಲೆ ಶ್ಯಾನೆ ಪರಿಣಾಮ ಬೀರಿತು.ನಾನಂತೂ ತೋಟಕ್ಕೆ ಹೋಗುವಾಗ ಸಿಕ್ಕುವ ಹುತ್ತಗಳ ಮುಂದೆ ಒಂದು ಕ್ಷಣ ನಿಲ್ಲುತ್ತಿದ್ದೆ. ದ್ವಿಪಾತ್ರ ಮಾಡುತ್ತಿದ್ದೆ. ಮೊದಲ ಪಾತ್ರ ’ಓ ನಾಗರಾಜ ಅಪ್ಪಣೆಯೇ, ಮುಂದೆ ಹೋಗಲೆ’ ಎಂದು ಕೇಳುತ್ತಿತ್ತು. ನನ್ನೊಳಗಿನ ಇನ್ನೊಂದು ಪಾತ್ರ ’ಓ ಧಾರಾಳವಾಗಿ ಹೋಗು. ಆದರೆ ನನ್ನನ್ನು ನಂಬು. ಇಲ್ಲವಾದರೆ ನಿನ್ನ ಕೊಂದುಬಿಡುವೆ ಎಚ್ಚರ’ ಎನ್ನುತ್ತಿತ್ತು. ಈಗ ಮೊದಲ ಪಾತ್ರ ’ಓ ನಾಗರಾಜ. ಕೊಲಬೇಡ, ಮುನಿಯಬೇಡ, ಕಾಪಾಡು ಎನ್ನ ಅನವರತ’ ಎಂದು ಭಕ್ತಿಯಿಂದ ಬೇಡಿಕೊಳ್ಳುತ್ತಿತ್ತು. ಆಗ ಇನ್ನೊಂದು ಪಾತ್ರ ’ಓ ಸರಿ, ಈವತ್ತು ಬಿಡುವೆ. ನಾಳೆ ನೋಡಿಕೊಳುವೆ’ ಎಂದು ಹೇಳುತ್ತಿತ್ತು. ಈ ದ್ವಿಪಾತ್ರಾಭಿನಯ ಪ್ರತಿ ಹುತ್ತದ ಬಳಿಯೂ ನಡೆಯುತ್ತಿತ್ತು. ಈ ಜಗನ್ನಾಟಕ ಹೆಚ್ಚೂಕಮ್ಮಿ ಮೀಸೆ ಚಿಗುರುವ ತನಕ ನಡೆಯಿತೆನ್ನಿ.

ಇದರಿಂದಾಗಿ ಹಾವಿನ ಬಗ್ಗೆ ಹೆದರಿಕೆಯ ಜೊತೆಗೆ ಕೋಪ ಕೂಡ ಮೊಳೆಯತೊಡಗಿತು.  ಒಂದು ದಿನ ನಾನು,  ಸುಕೇಶಿಯು ಒಂದು ಹಾಳು ಬಾವಿ ಹತ್ತಿರ ಹೋಗುತ್ತಿದ್ದೆವು. ಅವನೋ ಸುಮ್ಮನಿರದೆ ಆ ಪಾಳುಬಾವಿ ಇಣುಕಿನೋಡಿದ. ಪಾಚಿ ತುಂಬಿದ ಆ ಪಾಳುಬಾವಿ ನೋಡಿ ಅವನಿಗೇನು ಉಮೇದು ಬಂತೋ? ಬಾವಿಗೆ ಕಲ್ಲು ಬೀರತೊಡಗಿದ. ಪಾಚಿನೀರು ತಿಳಿಯಾಗತೊಡಗಿತು. ನಮ್ಮ ಉತ್ಸಾಹ ಹೆಚ್ಚಾಗಿ ಇನ್ನಷ್ಟು ಕಲ್ಲು ಬೀರತೊಡಗಿದೆವು. ಇದ್ದಕ್ಕಿದ್ದಂತೆ ನೀರ ಕೆಳಗಿನಿಂದ ಕಲ್ಲು ಪೊಟರೆಯಿಂದ ಹಾವುಗಳು ಬರಲಾರಂಭಿಸಿದವು. ನಮ್ಮ ಕೋತಿಚೇಷ್ಟೆ ಮುಂದುವರಿಯತೊಡಗಿತು. ಹಾವುಗಳ ಮೇಲಿದ್ದ ಸಿಟ್ಟೆಲ್ಲ ಆವತ್ತು ಹೊರಬರತೊಡಗಿತು. ಕಲ್ಲು ಬೀರಿದ್ದೆ ಬೀರಿದ್ದು. ಸುಕೇಶಿ ಬೀರಿದ ಕಲ್ಲೊಂದು ಹಾವಿನ ತಲೆಗೆ ಬಿದ್ದು ಅದು ನೀರಲ್ಲಿ ತಲೆ ತಿರುಗಿ ಒದ್ದಾಡಿತು. ಇದರಿಂದ ಪ್ರೇರಣೆ ಪಡೆದ ನಾನೂ ಒಂದು ಹಾವಿಗೆ ಏಟು ಬೀಳುವ ತನಕ ಪ್ರಯತ್ನ ಮುಂದುವರೆಸಿದ್ದೆ. ಕೊನೆಗೂ ಒಂದು ಹಾವಿನ ಬಾಲ ತುಂಡಾಗುವಂತೆ ಮಾಡಿದೆ. ಇಬ್ಬರೂ ಪರಸ್ಪರ ಅಭಿನಂದಿಸಿಕೊಂಡು ಮನೆ ಕಡೆ ಹೊರಟೆವು. ಆ ಹೊತ್ತಿಗೆ ಸಂಜೆಯಾಗುತ್ತಿತ್ತು. ಆ ಪಾಳುಬಾವಿಯಿಂದ ಊರ ಕಡೆಗೆ ಬರುವ ದಾರಿಯಲ್ಲಿ ಓಣಿಯೊಂದಿದೆ. ಸಂಜೆಯ ಕತ್ತಲಿಗೂ, ಆ ಓಣಿಯ ಮಬ್ಬಿಗೂ ನಾವು ಮಾಡಿದ ಘನಕಾರ್ಯಕ್ಕೂ ಒಂದಕ್ಕೊಂದು ತಾಳೆಯಾಗಿ ನಾವು ಅಲ್ಲಿ ಹೆಜ್ಜೆ ಇಡುವುದೇ ಕಷ್ಟವಾಗತೊಡಗಿತು. ಏನೆ ಧೈರ್ಯ ತಂದುಕೊಂಡರೂ, ಓಣಿಯಲ್ಲೆಲ್ಲೋ ಸರ್ರೆಂದು ಸದ್ದಾದಂತೆ ಹಾವುಗಳೆಲ್ಲ ಒಟ್ಟಾಗಿ ನಮ್ಮನ್ನು ಕಚ್ಚಲು ಬಂದಂತೆ ಭಾಸವಾಗುತ್ತಿತ್ತು. ಆ ಭಯವೇ ನಮ್ಮನ್ನು ಅಲ್ಲೇ ಧರ್ಮಸ್ಥಳದ ಮಂಜುನಾಥನ ಭಕ್ತರನ್ನಾಗಿಸಿತು! ಮಂಜುನಾಥನಿಗೆ ನಮ್ಮ ಮೊರೆ ತಲುಪಿತು. ಅವನು ಆ ಓಣಿ ದಾಟಿಸಿದ. ಅಂತೂ ಜೀವ ಬದುಕಿತು ಎಂಬಂತೆ ನಾವು ಬಿದ್ದಂಬೀಳ ಓಡಿಬಂದೆವು.

ಮನೆಗೆ ಬಂದಿದ್ದರೂ ಹೆದರಿಕೆ, ಗಾಬರಿ ಹಾಗೆ ಇತ್ತು. ನಮ್ಮನ್ನು ‘ಏನೋ ಅದು’ ಅಂದಳು. ಎಲ್ಲಾ ಹೇಳಿಬಿಟ್ಟೆ. ನಮ್ಮಮ್ಮ ಕೈಕಾಲು ತೊಳೆಸಿ, ದೇವರ ಮುಂದೆ ದೀಪ ಹಚ್ಚಿಸಿ ಹತ್ತು ಪೈಸೆನಾ ಅರಿಸಿನ ಗಂಟು ಕಟ್ಟಿಸಿ ಅಡ್ಡ ಬೀಳಿಸಿದಳು. ‘ನಮ್ಮ ತಪ್ಪು ಮನ್ನಿಸಿದರೆ ಐದು ರೂ ಮನಿಆರ್ಡರ್ ಮಾಡ್ತೀನಿ ಅಂತ ಕೇಳಿಕೋ’ ಅಂದಳು. ಏನೇ ಆದರೂ ಮಂಜುನಾಥ ಒಳ್ಳೇ ಕಲೆಕ್ಷನ್ ದೇವರು ಬಿಡಿ. ನಾವು ಮುಂದಕೆ ಬಾವಿ ಕಡೆ ತಲೆ ಹಾಕೋದು ನಿಲ್ಲಿಸಿದೆವು. 

ಕಾಸು ಪಡೆದು, ಮಂಜುನಾಥ ಸುಮ್ಮನಿದ್ದರೂ ಅವನ ಭಕ್ತೆಯಾದ ನಮ್ಮನ್ನು ಮಾತ್ರ ಮಾತಿನ ಚಾಟಿ ಬೀಸುತ್ತಲೇ ಇದ್ದಳು. ಆ ಚಾಟಿಗೆ ಪೂರಕವಾದ ಕತೆಗಳಂತೂ ಭೂಮಿ ಮೇಲೆ ಎಲ್ಲಿ ಹೋದರೂ ಹೇರಳವಾಗಿ ಸಿಗುತ್ತವೆ ನೋಡಿ. ನನಗಂತೂ ಕೇಳಿ ಕೇಳಿ ಜೀವನದ ಬಗ್ಗೆಯೇ ಜಿಗುಪ್ಸೆ ಬರತೊಡಗಿತು. ಈ ಹಾವಿನ ದೆಸೆಯಿಂದ ನನ್ನ ಜೀವನ ಹೀಗಾಯ್ತಲ್ಲ. ಇನ್ನು ಬದುಕಿ ಪ್ರಯೋಜನವೇನು ಅಂತ ಕೇಳಿಕೊಂಡೆ. ಒಳಗಿಂದ ಜೀವಾತ್ಮನು ‘ಏನು ಪ್ರಯೋಜನವಿಲ್ಲ’ ಎಂದು ಹೇಳಿದಂತೆ ಭಾಸವಾಯಿತು. ಕೂಡಲೇ ಸಾಯಲು ನಿಶ್ಚಯ ಮಾಡಿದೆ. ಹೇಗೆ ಸಾಯುವುದು ಎಂಬ ಪ್ರಶ್ನೆಯೇ ವಿಪರೀತ ಕಾಡತೊಡಗಿತು. ಆಗ ನಮ್ಮೂರಿನಲ್ಲಿ ನೇಣು ಹಾಕಿಕೊಳ್ಳೋದೋ ಅತ್ಯಂತ ಜನಪ್ರಿಯವಾಗಿತ್ತು. ಆದರೆ ತೋಟದಲ್ಲಿ ನೇಣು ಹಾಕಿಕೊಳ್ಳೋದೋ, ಮನೆಯ ಅಟ್ಟವೋ ಎಂಬ ಪ್ರಶ್ನೆಗಳು ಬೇರೆ. ಮನೆಯಲ್ಲಾದರೆ ರಾತ್ರಿ ಹೊತ್ತಿನಲ್ಲಿ ಹಾಕಿಕೊಳ್ಳಬೇಕು. ಆ  ಹೊತ್ತಿನಲ್ಲಿ ಉಚ್ಚೆ ಹುಯ್ಯುವುದಕ್ಕೆ ಅಮ್ಮನನ್ನು ಕೂಗುತ್ತಿದ್ದ ನಾನು ನೇಣು ಹಾಕಿಕೊಳ್ಳೋದಾದರೂ ಹೇಗೆ? ತೋಟದಲ್ಲಿ ಹಗಲು ಹೊತ್ತಿನಲ್ಲಿ ಅಪ್ಪನೋ, ತಾತನೋ, ಕೆಲಸದವರೋ, ಕೊನೆಗೆ ದನಗಳೋ ಇದ್ದೇ ಇರುತ್ತವೆ. ಇದೊಂದು ಬಗೆಹರಿಸಲಾಗದ ಸಮಸ್ಯೆಯಾಗಿಬಿಟ್ಟಿತು. ಕೊನೆಗೂ ಒಂದು ನಿರ್ಧಾರಕ್ಕೆ ಬಂದೆ. ಅದೇನೆಂದರೆ ಈ ಊರು ಬಿಡುವುದು. ಊರು ಬಿಟ್ಟರೆ ಸಾಯಲು ಎಲ್ಲಾದರೂ ಜಾಗ ಸಿಗುತ್ತದೆ. ಬೇರೆ ಊರಿನಲ್ಲಿ ನೇಣು ಹಾಕಿಕೊಂಡರೆ ಯಾರೂ ಕೇಳುವುದಿಲ್ಲ ಎಂಬ ಧೈರ್ಯದಿಂದ ಮನೆ ಬಿಡಲು ಸಿದ್ದನಾದೆ. ಬದುಕಿನ ಬಗ್ಗೆ ಜಿಗುಪ್ಸೆಗೊಂಡ ಬುದ್ದ ಮನೆಬಿಟ್ಟ. ನಾನೂ ಅಷ್ಟೆ. ಮನೆ ಬಿಟ್ಟಾಗ ಖರ್ಚಿಗಿರಲಿ ಅಂತ ಗೋಲಕ ಒಡೆದೆ. ದೇವರಿರುವುದೇ ದೀನರಿಗಾಗಿ. ಕಾಸು ಕೈಲಿಟ್ಟುಕೊಂಡು ಸಾವನ್ನು ಹುಡುಕುತ್ತಾ ಹೊರಟೆ. 

ನಮ್ಮ ಬೀದಿ ದಾಟಿದೆ. ಗಂಗಮ್ಮನ ಅಂಗಡಿ ಕಂಡಿತು. ಕಮರುಗಟ್ಟ, ಆಲ್ಕೊವಾ ನೆನೆದು ಚಿತ್ತ ಕದಲಿತು. ಕೊಂಡುಕೊಂಡೆ. ಗಲ್ಲು ಶಿಕ್ಷೆಗೆ ಒಳಗಾದವರಿಗೆ ಜೈಲು ಅವರ ಆಸೆ ಪೂರೈಸುತ್ತದೆ. ನನ್ನಂತವರಿಗೆ? ನಮ್ಮೂರ ಟೆಂಟಿನಲಿ ’ಗುರುಶಿಷ್ಯರು’ ಸಿನಿಮಾ ಬೋರ್ಡ್ ಕಾಣಿಸಿತು. ವರ್ಷಕ್ಕೆ ನಾಲ್ಕೋ, ಐದೋ ಸಿನಿಮಾ ತೋರಿಸುವ ನಮ್ಮಮ್ಮನ ಮೇಲೆ ಕೋಪ ಬಂತು. ಅವಳ ವಿರುದ್ದ ಸೇಡು ತೀರಿಸಿಕೊಳ್ಳಲು ಇದು ಸುಸಮಯ. ಸಾಯುವ ಮುಂಚೆ ಸಿನಿಮಾ ನೋಡಿ ಸಾಯಬೇಕು. ಮಿಕ್ಕ ದುಡ್ಡು ಟೆಂಟಿಗೆ ಸಾಕಾಯಿತು. ಸಿನಿಮಾ ನೋಡತೊಡಗಿದೆ. ಬಿದ್ದು ಬಿದ್ದು ನಗತೊಡಗಿದೆ. ಬಂದ ಉದ್ದೇಶವನ್ನೇ ಮರೆಸಿತು ಆ ಸಿನಿಮಾ. ಸಿನಿಮಾ ಮುಗಿದ ಮೇಲೆ ಅಭ್ಯಾಸವೆಂಬಂತೆ ಕಾಲುಗಳು ಮನೆ ಕಡೆ ಹೊರಟವು. ಮನೆಗೆ ಹೋದೆ. ಗೋಲಕ ಒಡೆದಿದ್ದು ನೋಡಿದ್ದ ನಮ್ಮಮ್ಮ ಆಗಲೇ ರಾಂಗಾಗಿದ್ದಳು. ಈಗ ದೇವರು ದೀನನನ್ನು ಮರೆತ!

ಈ ವೇಳೆಗೆ ನಮ್ಮ ಹಾವಿನ ಭಯಕ್ಕೆ ನಮ್ಮಪ್ಪ ಸ್ಪಂದಿಸಿದ್ದ. ಯಾವುದೋ ಊರಿಂದ ಒಬ್ಬ ಕೆಲಸದ ಆಳು ಕರೆತಂದಿದ್ದ. ಆ ಆಳು ನಮ್ಮನೇಲಿ ಇರತೊಡಗಿದ. ನಾವು ಅವನ ಜೊತೆ ತೋಟಕ್ಕೆ ಓಡಾಡಲು ಶುರುಮಾಡಿದೆವು. ಆದರೂ ಭಯವಂತೂ ಇದ್ದೇ ಇತ್ತು. ನಮ್ಮ ಭಯ ರೋಚಕತೆ ಪಡೆಯುತ್ತಿದ್ದುದು ಆಳು ಹನುಮಂತಪ್ಪನ ಕತೆಗಳ ದೆಸೆಯಿಂದಾಗಿ. ಅವನೂ ಬಾಲ್ಯದಲ್ಲಿ ಹಾವುಗಳ ಜೊತೆಯೇ ಬೆಳೆದವನು. ಅದನ್ನೆಲ್ಲ ಅದ್ಬುತ ಕತೆಗಳನ್ನಾಗಿ ಮಾಡಿ ನಮಗೆ ಹೇಳುತ್ತಿದ್ದ, ಅರ್ಥಾತ್ ಹೆದರಿಕೆ ಉಳಿಸುತ್ತಿದ್ದ. (ವಿ.ಸೂ: ಕಠೋರ ವಾಸ್ತವವಾದಿಗಳಿಗೆ ಇಲ್ಲಿಂದ ಮುಂದಕ್ಕೆ ಪ್ರವೇಶವಿಲ್ಲ. ಏನಿದ್ದರೂ ಕಲ್ಪನಾವಿಲಾಸಿಗಳಿಗೆ ಮಾತ್ರ)

ಹನುಮಂತಯ್ಯ ಚಿಕ್ಕವನಿದ್ದಾಗ ನಮ್ಮಂತೆಯೇ ಹೊಲಗದ್ದೆ ಕಡೆ ಓಡಾಡಿಕೊಂಡಿದ್ದವನು. ಅವರ ಹೊಲದ ಬಳಿ ಒಂದು ಹುತ್ತವಿದೆ. ಅಲ್ಲಿಯೂ ಒಂದು ನಾಗರಹಾವಿದೆ. ಅದರ ಉದ್ದವೇ ಎರಡು ಮಾರುದ್ದ. ಹೀಗೆ ಹೇಳುವಾಗ ಅವನ ಕಣ್ಣಲ್ಲಿ ನಾಟಕೀಯ ಭಯ ಕಾಣಿಸಿಕೊಂಡು ಕತೆ ಮುಂಬರಿಯುತ್ತಿತ್ತು. ಇವನು ಹೊಲಕ್ಕೆ ಹೋದೊಡನೆ ಅದು ಬಂದು ಹೆಡೆ ಆಡಿಸುತ್ತಾ ನಿಲ್ಲುವುದು. ಓಡಿಸಿಕೊಂಡು ಬರುವುದು. ಹೀಗಾಗಿ ಹನುಮಂತಯ್ಯ ಕೂಡ ಹೆದರಿ ಹೊಲದ ಕಡೆ ಹೋಗುವುದನ್ನು ಬಿಟ್ಟ. ಅವನ ಮನೆಯವರಿಗೆ ಇದೇ ಚಿಂತೆ ಆಯಿತು. ಈ ಚಿಂತೆ ಅವನ ಮನೆಯವರನ್ನು ದಾಟಿ, ಆ ಊರಿಗೆಲ್ಲ ಗುಲ್ಲಾಯಿತು. ಊರವರೆಲ್ಲ ಸೇರಿ, ತಮ್ಮತಮ್ಮಲ್ಲೇ ಮಾತಾಡಿಕೊಂಡರು. ಆ ಹಾವಿಗೊಂದು ಗತಿ ಕಾಣಿಸಬೇಕೆಂದು ತೀರ್ಮಾನಿಸಿಕೊಂಡು, ಒಂದು ಕ್ರಿಯಾಯೋಜನೆಯನ್ನು ಸಿದ್ದಪಡಿಸಿದರು. ಅದಕ್ಕೆ ಒಂದು ದಿನ ಗೊತ್ತು ಪಡಿಸಿದರು. ಆ ಯೋಜನೆ ಅಂದುಕೊಂಡಂತೆ ನಡೆಯಿತು. ಹನುಮಂತನನ್ನು ಬಿಟ್ಟು ಊರವರೆಲ್ಲ ಸೇರಿ ಮಚ್ಚು, ಪಿಕಾಸಿ, ಕೋಲು ಹಿಡಿದು ಹೊಲದ ಬಳಿಗೆ ಹೋದರು. ಹೊಲದ ಬಳಿ ಹೋದವರೇ ‘ಹನುಮಂತ, ಹನುಮಂತ’ ಎಂದು ಕೂಗಿದರು. ಊರವರ ಕೂಗಿನಿಂದ ಹುತ್ತದಲ್ಲಿದ್ದ ಹಾವಿಗೆ ಹನುಮಂತ ಹೊಲಕ್ಕೆ ಬಂದಿದ್ದಾನೆ ಎಂದು ತಿಳಿಯಿತು. ಅದು ಭುಸ್‌ಗುಟ್ಟತೊಡಗಿತು. ಅವರೂ ಮತ್ತೂ ‘ಹನುಮಂತ, ಹನುಮಂತ’ ಎಂದು ಕೂಗಿದರು. ಹನುಮಂತ ಎಂಬ ಹೆಸರು ಕೇಳಿದೊಡನೆ ಹಾವು ಹುತ್ತದಿಂದ ಹೊರಬಂತು. ಆಗ ಊರವರೆಲ್ಲ ಸೇರಿ ಅದನ್ನು ಮುಗಿಸಿದರು. ಅಂದಿನಿಂದ ಹನುಮಂತನು ನೆಮ್ಮದಿಯಿಂದ ಆ ಊರಲ್ಲಿ ಬಾಳುವೆ ಮಾಡಿದನು ಎಂದು ನಾವು ತಿಳಿದರೆ ಅವನ ಕತೆಗೆ ಸ್ವಾರಸ್ಯವೇ ಇರುವುದಿಲ್ಲ.

ಸತ್ತು ಹೋದ ಆ ಹಾವಿಗೆ ಜೊತೆಗಾರನೊಂದು ಇತ್ತಂತೆ. ಗರುಡರೇಖೆ, ನಾಗಿನ್‌ನಂತಹ ಸಿನಿಮಾಗಳನ್ನು ಬಲ್ಲ ನಿಮಗೆ ಇಂತಹದೆಲ್ಲ ಅರ್ಥವಾಗಬಲ್ಲುದು ಬಿಡಿ. ಅದು ಹನುಮಂತನ ಮೇಲೆ ಕಣ್ಣಿಟ್ಟಿತು. ಹನುಮಂತ ಹೊಲಕ್ಕೆ ಹೋದೊಡನೆ ಜತೆಗಾರ ಹಾವು ಬಂದು ಹೆದರಿಸತೊಡಗಿತು. ಹನುಮಂತ ಮತ್ತೆ ಚಿಂತೆಗೆ ಒಳಗಾದ. ಆ ಚಿಂತೆ ಎಂದಿನಂತೆ ಊರಿಗೇ ಮುಟ್ಟಿತು. ಮತ್ತೆ ಊರವರು ಸೇರಿದರು. ಈ ಹಾವನ್ನು ಎದುರಿಸುವ ನಾನಾ ಉಪಾಯಗಳನ್ನು ಹುಡುಕಿದರು. ಹಾವು ಹೇಗಿದ್ದರೂ ಹರಿದಾಡುವುದು ನೆಲದ ಮೇಲಲ್ಲವೆ? ಹನುಮಂತ ಸೈಕಲ್ ಮೇಲೆ ಹೋದರೆ? ಆಗ ಹಾವೇನು, ಅದರಪ್ಪನೂ ಕಕ್ಕಾಬಿಕ್ಕಿಯಾಗಬೇಕು ಎಂದು ಸಭೆಯು ಠರಾವು ಪಾಸು ಮಾಡಿತು. ಅಂದಿನಿಂದ ಹನುಮಂತನು ಸೈಕಲ್‌ಬ್ಯಾಲೆನ್ಸ್ ವಿದ್ಯೆ ಕಲಿಯಲು ಶುರು ಮಾಡಿದನು. ಸೈಕಲ್ ನಿಲ್ಲಿಸಿದರೂ ಕಾಲು ಕೆಳಗಿಡದಂತೆ ಸೈಕಲ್‌ಬ್ಯಾಲೆನ್ಸ್ಸ್ ವಿದ್ಯೆ ಕಲಿತನು. ಈ ವಿದ್ಯೆ ಕಲಿತಾದ ಮೇಲೆ ಹೊಲಕ್ಕೆ ಹೋಗುವನು, ಬರುವನು. ಇದನ್ನೆಲ್ಲ ನೋಡಿದ ಆ ಹಾವು ಕಟಕಟ ಹಲ್ಲು ಕಡಿಯಿತು. ಇವನನ್ನು ಕೊಲ್ಲಲ್ಲು ಹೊಂಚುಹಾಕುತ್ತಿದ್ದ ಅದು ಕೆಲವು ದಿನ ಹಾವು ಕಾಣಿಸಿಕೊಳ್ಳಲೇ ಇಲ್ಲ! ಹನುಮಂತನಿಗೆ ಆಶ್ಚರ್ಯವಾಯಿತು. ಅವನು ಊರವರ ಬಳಿ ಈ ವಿಚಾರ ತಿಳಿಸಿದ. ಊರವರು ‘ಯಾವ ಹುತ್ತದಲ್ಲಿ ಯಾವ ಹಾವಿದೆಯೋ ಬಲ್ಲವರಾರು? ನೀನು ಸೈಕಲ್ ಮಾತ್ರ ಬಿಡಬೇಡ’ ಎಂದು ಬುದ್ದಿವಾದ ಹೇಳಿದ. ಹನುಮಂತ ಬುದ್ದಿಮಾತು ಪಾಲಿಸತೊಡಗಿದ.

ಇದಾದ ಎಷ್ಟೋ ದಿನಗಳಾದ ನಂತರ ಹನುಮಂತ ಹೊಲಕ್ಕೆ ಹೋಗುತ್ತಿದ್ದ. ಇದ್ದಕ್ಕಿದ್ದಂತೆ ದಾರಿಯಲ್ಲಿ ಆ ಹಾವು ಬಂದು ಹೆಡೆ ಆಡಿಸುತ್ತಾ ನಿಂತುಬಿಟ್ಟಿತು. ಹನುಮಂತ ಗಾಬರಿ ಬಿದ್ದು, ಬ್ರೇಕ್ ಹಾಕಿ ಸೈಕಲ್ ನಿಲ್ಲಿಸಿದ. ಸಾವರಿಸಿಕೊಂಡು ತನ್ನ ಸೈಕಲ್‌ಬ್ಯಾಲೆನ್ಸ್ ವಿದ್ಯೆ ಪ್ರದರ್ಶಿಸತೊಡಗಿದ. ಹಾವು ಕೂಡ ಹೆಡೆ ಆಡಿಸುತ್ತಲೇ ನಿಂತುಬಿಟ್ಟಿತು. ಈ ಜುಗಲ್‌ಬಂದಿ ಏಳು ಹಗಲು- ಏಳು ರಾತ್ರಿಯ ತನಕ ನಡೆಯಿತು. ಕೊನೆಗೆ ಕೋಪಗೊಂಡಿದ್ದ ಆ ಹಾವು, ತನ್ನ ತೆಕ್ಕೆ ಬಿಚಿಕೊಂಡು, ಇದೀಗ ತನ್ನ ಬಾಲದ ಮೇಲೆ ನಿಲ್ಲತೊಡಗಿತು. ಹಾಗೆ ನಿಲ್ಲುತ್ತಾ ಸೈಕಲ್ ಎತ್ತರಕ್ಕೆ ಬಂತು. ಹನುಮಂತನಿಗೆ ಗಾಬರಿ ಆಗತೊಡಗಿತು. ಆದರೂ ಈ ಹಾವನ್ನು ಹೇಗೆ ಎದುರಿಸುವುದು ಎಂದು ಪರ್ಯಾಯ ಆಲೋಚನೆಗಳನ್ನು ಮಾಡತೊಡಗಿದ. ಅವನಿಗೊಂದು ಯುರೇಕಾ ಐಡಿಯಾ ಬಂತು. ಹನುಮಂತ ಥಟ್ಟನೆ ಬಗ್ಗಿ ಎರಡು ಚೂಪಾದ ಕಲ್ಲುಗಳನ್ನು ತೆಗೆದುಕೊಂಡ! ತಮ್ಮ ಸಮದುದ್ದಕ್ಕೂ ಹೆಡೆ ಎತ್ತುತ್ತಿದ್ದ ಆ ಹಾವಿನ ಎರಡು ಕಣ್ಣುಗಳಿಗೂ ಚುಚ್ಚಿದ!! ಸೇಡು ತೀರಿಸಿಕೊಳ್ಳಲು ಬಂದ ಹಾವು ಕುರುಡಾಯಿತು. ಅದು ‘ಅಯ್ಯಯ್ಯಪ್ಪೋ’ ಎಂದು ಬಾಯಿ ಬಡಿದುಕೊಂಡು ಅಲ್ಲಿಂದ ಹೊರಟುಹೋಯಿತು. ಈ ಸಾಹಸದಿಂದ ಆ ಊರಿನಲ್ಲಿ ಹನುಮಂತ ತುಂಬ ಪ್ರಸಿದ್ದಿ ಪಡೆದ. ಆದರೆ ನಮ್ಮನೇಲಿ ಕೆಲಸ ಮಾಡಲು ಬಂದಿದ್ದ! ನಮಗೆ ಅವನ ಕತೆಗಳೇ ರಂಜಕವಾಗಿದ್ದರಿಂದ ಮಿಕ್ಕಿದ್ದು ಯೋಚಿಸಲು ಸಾಧ್ಯವೇ ಆಗುತ್ತಿರಲಿಲ್ಲ.

ಆದರೂ ಬಾಲ್ಯಕ್ಕೆ ಬೆರಗು, ರೋಚಕತೆ, ಭಯ ತಂದಿಟ್ಟ ಹಾವುಗಳನ್ನು ಮರೆಯುವುದಾದರೂ ಹೇಗೆ? ಮೊನ್ನೆ ಊರಿಗೆ ಹೋಗಿದ್ದಾಗ ತೋಟದಲ್ಲಿ ಸುತ್ತಾಡುತ್ತಿದ್ದಾಗ ಹಳೆಯ ಕತೆಗಳು ನೆನಪಾಗುತ್ತಿದ್ದವು. ಪಕ್ಕದ ತೋಟದವನು ‘ಹಿಂದೆ ಹಳ್ಳದ ಕಡೆ ಹೋಗುವಾಗ ನೆಲ ನೋಡಿಕೊಂಡೇ ಹೋಗು. ಅಲ್ಲಿ ಒಂದು ಕರಿನಾಗರಹಾವಿದೆ. ಅದಿಕ್ಕೆ ಭಾಳಾ ವಯಸ್ಸಾಗಿದೆ. ಗಡ್ಡ ಮೀಸೆಗಳು ಬಂದಿವೆ. ಅದಕ್ಕೆ ಮಹಾಕೋಪ’ ಎಂದ. ಹಾವಿಗೆ ಗಡ್ಡ ಮೀಸೆ ಬಂದಿದೆ ಎಂದರೆ ನೂರಾರು ವರ್ಷದಿಂದ ತಪಸ್ಸು ಮಾಡುತ್ತಿರುವ ಋಷಿಯಂತೆ ಇರಬಹುದೇ, ಆ ಕರಿನಾಗರ? ಹಾವಿನ ಬಗ್ಗೆ ಇರುವ ಭಯವೇ ಈ ಕತೆಗಳ ಮೂಲ ಎನಿಸುತ್ತದೆ. ನಾನು ಬಲ್ಲಂತೆ ಕಳೆದ ಇಪ್ಪತ್ತು ವರ್ಷಗಳಿಂದ ನಮ್ಮೂರಲ್ಲಿ ಒಬ್ಬನೂ ಹಾವು ಕಚ್ಚಿ ಸತ್ತಿಲ್ಲ. ಆದರೆ ಕತೆಗಳು ಹಬ್ಬುವುದು ಮಾತ್ರ ನಿಂತಿಲ್ಲ.  ಇಷ್ಟೊಂದು ಕತೆಗಳಿಗೆ ಕಾರಣವಾಗಿರುವ ಹಾವೇ ನಿನಗೆ ರಕ್ಷಣೆ ಸಿಗಲಿ. ನಿನ್ನ ಸಂತತಿ ಅನಂತವಾಗಿರಲಿ…

-ಹರಿ ಪ್ರಸಾದ್

೨೭-೬-೧೨  

ಮಧುಬಾಂಡಶಾಲೆ

 

 

ಕನ್ನಡದ ಬರಹಗಳನ್ನು ಹಂಚಿ ಹರಡಿ

8 thoughts on “ಓ ನಾಗರಾಜ ಅಪ್ಪಣೆಯೇ…

  1. Harish
    ಲೇಖನ ದೀರ್ಘವಾದರೂ ಸರಾಗವಾಗಿ ಓಡಿಸಿಕೊಂಡು ಹೋಯಿತು.
    ಅದಕ್ಕೆ ಕಾರಣ ನೀವು ಬರೆದ ಶೈಲಿ. ತಿಳಿ ಹಾಸ್ಯದೊಂದಿಗೆ ಚೆನ್ನಾಗಿ ಹಾವಿನ ಕತೆಗಳನ್ನು ಹೇಳಿದ್ದೀರ.
    ಈ ಕೆಳಗಿನ ಸಾಲುಗಳು ನಿಒಮ್ಮ ಕತೆಯ ಹೈಲೈಟ್. ಇವನ್ನು ಓದುವಾಗ ಜೋರಾಗಿ ನಕ್ಕುಬಿಟ್ಟೆ:)

    "ಆ ಭಯವೇ ನಮ್ಮನ್ನು ಅಲ್ಲೇ ಧರ್ಮಸ್ಥಳದ ಮಂಜುನಾಥನ ಭಕ್ತರನ್ನಾಗಿಸಿತು!"
    "ಕಮರುಗಟ್ಟ, ಆಲ್ಕೊವಾ ನೆನೆದು ಚಿತ್ತ ಕದಲಿತು"
    "ಈಗ ದೇವರು ದೀನನನ್ನು ಮರೆತ!"

    ಬರೀತಾ ಇರಿ, ಒಳ್ಳೆಯದಾಗಲಿ!!
     

  2. ಹ್ಹ ಹ್ಹ ಹ್ಹ ಹ್ಹಾ..:D ಬಿದ್ದು ಬಿದ್ದೂ ನಕ್ಕಿದ್ದೇನೆ! ಸಂಪೂರ್ಣ ಬರಹದ ನಿರೂಪಣೆಯಲ್ಲೇ ಹಾಸ್ಯವನ್ನು ಮಿಳಿತಗೊಳಿಸಿ ಅರಳಿಸಿದ್ದೀರಿ. ಉತ್ತರಾರ್ಧವಂತೂ ತುಂಬಾ ಚೆನ್ನಾಗಿ ಬಂದಿದೆ.
    – ಪ್ರಸಾದ್.ಡಿ.ವಿ.

Leave a Reply

Your email address will not be published. Required fields are marked *