ಓದಿ ಓದಿ ಲವ್ವೂ ಆಗಿ: ಪ್ರಸಾದ್ ಕೆ.

prasad-naik

“ಪ್ರೀತಿಯು ಸದಾ ಕರುಣಾಮಯಿ. ಅದು ತಾಳ್ಮೆಯ ಪ್ರತಿರೂಪ. ಮತ್ಸರಕ್ಕೆ ಅಲ್ಲಿ ಜಾಗವಿಲ್ಲ. ಪ್ರೀತಿಯು ವೃಥಾ ಜಂಭ ಕೊಚ್ಚಿಕೊಳ್ಳುವುದನ್ನೋ, ದುರಹಂಕಾರವನ್ನೋ ತೋರಿಸುವುದಿಲ್ಲ. ಪ್ರೀತಿ ಒರಟೂ ಅಲ್ಲ, ಸ್ವಾಥರ್ಿಯೂ ಅಲ್ಲ. ಪ್ರೀತಿಯು ಸುಖಾಸುಮ್ಮನೆ ಎಲ್ಲವನ್ನೂ ತಪ್ಪುತಿಳಿದುಕೊಳ್ಳುವುದಿಲ್ಲ. ದ್ವೇಷವನ್ನೂ ಅದು ತನ್ನೊಳಗೆ ಬಿಟ್ಟುಕೊಳ್ಳಲಾರದು…''

ಹೀಗೆ ತಣ್ಣಗೆ ಶಾಂತಚಿತ್ತಳಾಗಿ ಹೇಳುತ್ತಾ ಹೋಗುತ್ತಿದ್ದಿದ್ದು `ಎ ವಾಕ್ ಟು ರಿಮೆಂಬರ್' ಚಿತ್ರದ ನಾಯಕಿ ಜೇಮಿ. ಹಾಗೆ ನೋಡಿದರೆ ಪ್ರೇಮಕಥೆಯ ಸುತ್ತ ಹೆಣೆದಿರುವ ನೂರಾರು ಚಲನಚಿತ್ರಗಳಲ್ಲಿ ಇದು ಅತ್ಯುತ್ತಮ ಚಿತ್ರವೇನೂ ಅಲ್ಲದಿದ್ದರೂ ಜೇಮಿ ಪಾತ್ರಕ್ಕೆ ಜೀವವನ್ನು ತುಂಬುವ ನಟಿ ಮ್ಯಾಂಡೀ ಮೂರ್ ಪ್ರೇಕ್ಷಕನ ಮನದಲ್ಲಿ ಪ್ರೀತಿಯಂತೆಯೇ ಇಳಿದುಹೋಗುತ್ತಾರೆ, ಉಳಿದುಹೋಗುತ್ತಾರೆ. ಹೀಗೆಯೇ ಪ್ರೇಮಕಥೆಯೊಂದನ್ನು ಓದುತ್ತಾ ಓದುತ್ತಾ ನನ್ನ ಕಣ್ಣುಗಳು ಮಂಜಾಗಿದ್ದು ಕೆಲವರ್ಷಗಳ ಹಿಂದೆ ಸಿಸಿಲಿಯಾ ಅಹೆನರ್್ ಅವರ `ಪಿ.ಎಸ್. ಐ ಲವ್ ಯೂ' ಕಾದಂಬರಿಯ ಪುಟಗಳನ್ನು ತಿರುಗಿಸುತ್ತಿದ್ದಾಗ. ಶತಶತಮಾನಗಳಿಂದಲೂ ತನ್ನ ಹೊಳಪನ್ನು, ನಿಗೂಢತೆಯನ್ನು, ದೈವಿಕತೆಯನ್ನು, ಆಕರ್ಷಣೆಯನ್ನು ಉಳಿಸಿಕೊಂಡಿರುವ ಪ್ರೀತಿಯ ಬಗ್ಗೆ ಯೋಚಿಸಿದರೆ ಪ್ರೀತಿಯನ್ನು ಮಾಯೆಯೆನ್ನಬೇಕೋ, ಸಾರ್ವಕಾಲಿಕ ಸತ್ಯವೆನ್ನಬೇಕೋ, ಭಾವನೆಗಳ ಮೆರವಣಿಗೆಯೆನ್ನಬೇಕೋ ಎಂಬುದು ತಿಳಿಯಲಾಗದೆ ಗೊಂದಲವಾಗುವುದಂತೂ ಸತ್ಯ. ಪ್ರೀತಿಯು ವ್ಯಾಖ್ಯೆಯ ಸೀಮೆಗಳಿಗೆ ಸಿಕ್ಕುವಂಥದ್ದಲ್ಲ. ಒಂದು ರೀತಿಯಲ್ಲಿ ಇದು ಒಳ್ಳೆಯದೇ. ಇಲ್ಲವಾದಲ್ಲಿ ಪ್ರೀತಿಯನ್ನೂ ಯಾವುದಾದರೊಂದು ಥಿಯರಿಯ ಕೊರಳಿಗೆ ಕಟ್ಟಿ ಮನುಷ್ಯ ಎದ್ದುಹೋಗುತ್ತಿದ್ದ.   

ಪ್ರೀತಿಯೆಂಬ ಪ್ರೀತಿಯು ನನ್ನನ್ನು ಜೀವನದುದ್ದಕ್ಕೂ ಕಾಡಿರುವುದು ಸುಳ್ಳಲ್ಲ. ಕೆ.ಎಸ್.ನ, ಜಯಂತ ಕಾಯ್ಕಿಣಿ, ಗುಲ್ಝಾರ್, ಲಾಂಗ್ ಲೀವ್, ನಿಕಿತಾ ಗಿಲ್ ನನ್ನಿಷ್ಟದ ಪ್ರೇಮಕವಿಗಳು. ಅಮೃತಾ ಪ್ರೀತಮ್ ರ ಭಾವತೀವ್ರತೆ, ಇಮ್ರೋಝ್ ರ ಅಚಲ ಪ್ರೀತಿಯು ನನ್ನಲ್ಲಿ ಹೊಸ ದೃಷ್ಟಿಕೋನಗಳನ್ನು ತಂದಿದೆ. ಖ್ಯಾತ ಕವಿ ಸಾಹಿರ್ ಲೂಧಿಯಾನ್ವಿ ತನ್ನ ಜೀವನದಲ್ಲಿ ಬಂದ ಬಹುತೇಕ ಎಲ್ಲಾ ಹೆಣ್ಣುಗಳನ್ನೂ ತೀವ್ರವಾಗಿ ಪ್ರೀತಿಸಿದ್ದರಂತೆ. ಅಷ್ಟಾಗಿಯೂ ಅಮೃತಾರೂ ಸೇರಿದಂತೆ ಯಾವ ಸಂಬಂಧವೂ ಅವರಿಗೆ ಪೂರ್ಣವಾಗಿ ದಕ್ಕಲಿಲ್ಲ. ಹಾಲಿವುಡ್ ದಂತಕಥೆ ಮರ್ಲಿನ್ ಮನ್ರೋರ ಪ್ರೀತಿಯೂ ಇಷ್ಟೇ ಇಂಟೆನ್ಸ್ ಆಗಿತ್ತು. ಮೆಕ್ಸಿಕನ್ ಚಿತ್ರಕಲಾವಿದೆ ಫ್ರೀಡಾ ಕಾಹ್ಲೋ ಇಂದಿಗೂ ನನಗೊಂದು ಕೌತುಕ. ಸರಣಿಹಂತಕ ಟೆಡ್ ಬಂಡಿಯ ಮೊದಲ ಪ್ರೀತಿಯು ನಂತರ ಅವನೊಂದಿಗೇ ಅಂತ್ಯವಾಗುವುದು ವಿಮೋಚನೆಯೇ ಇರದ ಸೇಡಿನ ರೂಪದಲ್ಲಿ. ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಗೆಳತಿಯೇ ಹಂತಕಿ ಐಲೀನ್ ವುನ್ರೋಸ್ ಳನ್ನು ಕಂಬಿ ಎಣಿಸುವಂತೆ ಮಾಡಿದ್ದಳು. ಛೋಟಾ ಶಕೀಲ್ ಎಂಬ ಭೂಗತಜಗತ್ತಿನ ಪಾತಕಿಯೂ ಕೂಡ ಕೆಲಕಾಲ ರುಬೀನಾ ಎಂಬ ಹೆಸರಿನ ಪ್ರೇಯಸಿಯ ಅಮಲಿನಲ್ಲಿದ್ದ. “ಛೋಟಾ ಶಕೀಲ್ ಕೀ ಮೋಟೀ ಗಲರ್್ ಫ್ರೆಂಡ್'' ಎಂಬ ಹೆಸರು ಬೇರೆ ಅವಳಿಗಿತ್ತು. ಪ್ರೀತಿ ಯಾರನ್ನು ತಾನೇ ಬಿಟ್ಟಿದೆ ಹೇಳಿ?   

book-cover

ಇಂಥದ್ದೇ ಪ್ರೀತಿಯ ಬಗ್ಗೆ ಒಂದು ಆಪ್ತವಾದ ಓದನ್ನು ಈ ಬಾರಿ ಓದುಗರಿಗಾಗಿ ಕಟ್ಟಿಕೊಟ್ಟವರು ನಮ್ಮ ನಡುವಿನ ಸಹೃದಯಿ ಬರಹಗಾರರೂ, ಸಂಪಾದಕರೂ ಆಗಿರುವ ಗಣೇಶ್ ಕೊಡೂರ್ ರವರು. ಈ ಬಾರಿಯ ವ್ಯಾಲೆಂಟೈನ್ ಋತುವಿನಲ್ಲಿ ಹೊರಬಂದ ಅವರ ಕೃತಿ `ನನಗೂ ಲವ್ವಾಗಿದೆ' ನಿರೀಕ್ಷೆಯಂತೆಯೇ ಓದುಗರ ಮನವನ್ನು ತಟ್ಟಿದೆ. ಕಳೆದ ಒಂದೆರಡು ವರ್ಷಗಳಿಂದ ಯಾವುದೇ ರೊಮಾನ್ಸ್ ಸಂಬಂಧಿ ಸಾಹಿತ್ಯವನ್ನು ಮುಟ್ಟಿರದಿದ್ದ ನನ್ನಲ್ಲೂ ಈ ಕೃತಿಯು ಆಸಕ್ತಿಯನ್ನು ಕೆರಳಿಸಿ ನನ್ನನ್ನು ಓದಲು ಅಣಿಯಾಗಿಸಿತ್ತು. ನಗರದ ಜಂಜಾಟಗಳಿಂದ ದೂರವಿರುವ ಆಫ್ರಿಕಾದ ಹಳ್ಳಿಯೊಂದರಲ್ಲಿ ಬೀಡುಬಿಟ್ಟಿರುವ ನನಗೆ ಮಳೆ, ಕಾಡು, ಕಾಫಿ, ಏಕಾಂತಗಳ ಜೊತೆಗೇ `ನನಗೂ ಲವ್ವಾಗಿದೆ'ಯಂತಹ ಕೃತಿಯೊಂದು ಸಿಕ್ಕಿಬಿಟ್ಟರೆ ಇನ್ನೇನು ತಾನೇ ಬೇಕು?

`ಪ್ರೀತಿ'ಯ ಬಗ್ಗೆಯೋ, ಅದರಲ್ಲೇನಿದೆ, ರಾಶಿಗಟ್ಟಲೆ ಬರೆದುಹಾಕಬಹುದು ಎಂದು ನಾವು ಭಾವಿಸಿದರೆ ಅದೊಂದು ತಪ್ಪು ಭಾವನೆಯಷ್ಟೇ. ಅಸಲಿಗೆ ಕ್ಲೀಷೆಯೆನ್ನಿಸುವಂತಹ ವಿಷಯಗಳನ್ನು ಪ್ರಸ್ತುತಪಡಿಸುವಲ್ಲಿ ಬೇಕಾಗಿರುವ ಹೆಚ್ಚುವರಿ ಶ್ರಮವು ಪ್ರಾಯಶಃ ಉಳಿದವುಗಳಿಗಿರಲಿಕ್ಕಿಲ್ಲ. ವಿಚಾರದಲ್ಲಿ ಗಟ್ಟಿತನವಿಲ್ಲದಿದ್ದರೆ, ನಿರೂಪಣಾ ಶೈಲಿಯಲ್ಲಿ ಹೊಸತನವಿರದೇ ಇದ್ದರೆ ಇಂಥಾ ವಿಷಯಗಳು ಸಾಮಾನ್ಯವಾಗಿ ಸುಲಭವಾಗಿ ಓದಿಸಿಕೊಂಡು ಹೋಗುವುದಿಲ್ಲ. ಓದುಗನ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ಉದಾಹರಣೆಗೆ ನಮ್ಮ ಮುಖ್ಯವಾಹಿನಿಯ ದಿನಪತ್ರಿಕೆಗಳನ್ನೇ ತೆಗೆದುಕೊಳ್ಳೋಣ. ಯುವಜನತೆಗಾಗಿ ಮೀಸಲಿಟ್ಟಿರುವ ಪುರವಣಿಗಳಲ್ಲಿ ಪ್ರಕಟವಾಗುವ ಪ್ರೀತಿ-ಪ್ರೇಮದ ಬರಹಗಳನ್ನೇ ಒಮ್ಮೆ ಗಮನಿಸಿ. ಅದೇ ಕೆಂಪು ಗುಲಾಬಿ, ಅದೇ ಟೆಡ್ಡಿಬೇರು, ಉಡುಗೊರೆ, ಕವಿತೆ, ಪ್ರೇಮನಿವೇದನೆ, ವಿರಹ, ದೇವದಾಸ, ಕೊನೆಗೊಂದಿಷ್ಟು ಒಣ ಉಪದೇಶ… ಹೀಗೆ ಅದೇ ರಾಗ, ಅದೇ ತಾಳ ಎನ್ನುವಂತಿರುತ್ತವೆ ಇವುಗಳು. ಓದಲು ಯೋಗ್ಯವಾದ, ಓದುಗನನ್ನು ಹಿಡಿದಿಟ್ಟುಕೊಳ್ಳಬಲ್ಲ ಕಂಟೆಂಟ್ ಗಳು ಅಲ್ಲಿ ಸಿಗುವುದು ಕಷ್ಟ. `ನನಗೂ ಲವ್ವಾಗಿದೆ'ಯಂಥಾ ಕೃತಿಗಳು ವಿಭಿನ್ನವಾಗಿ ನಿಲ್ಲುವುದೇ ಈ ಕಾರಣಗಳಿಂದಾಗಿ.

ಪ್ರೀತಿಯ ವಿವಿಧ ಮುಖಗಳನ್ನು, ಆಯಾಮಗಳನ್ನು ಹಂತಹಂತವಾಗಿ ವಿಶ್ಲೇಷಿಸುತ್ತಾ ಲೇಖಕರು ಅವುಗಳನ್ನು ಕಟ್ಟಿಕೊಡುವ ಪರಿಯು ಅನನ್ಯ. ಪ್ರೀತಿಯ ಬಗ್ಗೆ ಹೇಳುತ್ತಲೇ ಪ್ರೀತಿಯೊಂದಿಗೆ ಬೆಸೆದಿರುವ ಬದುಕು, ಜೀವನಪ್ರೀತಿಗಳನ್ನೂ ಮನಮುಟ್ಟುವಂತೆ ಬರೆಯುತ್ತಾರೆ ಲೇಖಕರು. ನಮ್ಮ ಕಲ್ಪನೆಯ ಪ್ರೀತಿ, ಪ್ರೀತಿಯ ಬಗ್ಗೆ ನಮಗಿರುವ ನಿರೀಕ್ಷೆಗಳು, ಪ್ರೀತಿಯನ್ನು ನಾವು ಒಪ್ಪಿಕೊಳ್ಳುವ ಬಗೆಗಳು, ಪ್ರೀತಿಯನ್ನು ನಡೆಸಿಕೊಳ್ಳುವ ರೀತಿ, ಸಂಭಾಳಿಸುವ ನಾಜೂಕುತನ, ಇವೆಲ್ಲದರ ಜೊತೆಗೇ ಭಾವದ ಬುಗ್ಗೆಯಂತೆ ಧುಮ್ಮಿಕ್ಕಿ ಬರುವ ತಲ್ಲಣಗಳು… ಹೀಗೆ ಪ್ರೀತಿಯನ್ನು ವ್ಯಕ್ತಿತ್ವದೊಂದಿಗೇ ಮಿಳಿತಗೊಳಿಸಿ ಲೇಖಕರು ಅರ್ಥಪೂರ್ಣ ಪ್ರೀತಿಯ ಒಂದು ವಿನೂತನ ಮಾದರಿಯನ್ನು ಪ್ರಸ್ತುತಪಡಿಸುತ್ತಾರೆ. ಇಲ್ಲಿ `ಮಾದರಿ' ಎಂಬ ಪದವನ್ನು ಉಪಯೋಗಿಸಿದ ಕೂಡಲೇ ಇದನ್ನು `ಸಿದ್ಧಸೂತ್ರ' ಎಂದೇನೂ ತಿಳಿಯಬೇಕಾಗಿಲ್ಲ. ಸಿದ್ಧಸೂತ್ರಗಳನ್ನು ಕೊಟ್ಟಿದ್ದೇ ಆದರೆ ಈಗಾಗಲೇ ಬಂದಿರುವ ನೂರಾರು `ಹೌ ಟು' ಶೈಲಿಯ ಪುಸ್ತಕಗಳಲ್ಲೇ ಇದೂ ಸೇರಿ ಗುಂಪಿನಲ್ಲಿ ಗೋವಿಂದ ಎನಿಸಿಕೊಳ್ಳುತ್ತಿತ್ತು. ಆದರೆ ಅದೃಷ್ಟವಶಾತ್ ಕೃತಿಯು ಆ ಅಪಾಯದಿಂದ ಪಾರಾಗಿದೆ. 

ಎಲ್ಲರಿಗೂ ಆಗುವಂತೆ ತಮಗೂ ಪ್ರೀತಿಯಾಗಬೇಕೆಂದು ಬಯಸುವವರು, ಪ್ರೀತಿಯನ್ನು ಆಧುನಿಕತೆಯ ಟ್ರೆಂಡ್ ಎನ್ನುವ ಕಲ್ಪನೆಯಲ್ಲಿರುವವರು, ಪ್ರೀತಿಯನ್ನು ಪುಸ್ತಕದ ಬದನೆಕಾಯಿಯಷ್ಟೇ ಎನ್ನುವವರು, ಪ್ರೀತಿಪ್ರೇಮಕ್ಕೆ ಬೀಳುವುದಕ್ಕೆಲ್ಲಾ ಟೈಮಿಲ್ಲಪ್ಪಾ ಎನ್ನುವವರು, ಪ್ರೀತಿಯ ಬಗ್ಗೆ ಅವಿರತ ಕನಸು ಕಟ್ಟುತ್ತಾ ದಿನತಳ್ಳುವವರು, ಪ್ರೀತಿಯು ಹಟಾತ್ತನೆ ಎದುರಿಗೆ ಬಂದುನಿಂತಾಗ ಏನು ಮಾಡಬೇಕೆಂದು ತಿಳಿಯದೆ ಪೇಚಾಡುವವರು… ಹೀಗೆ ಲೇಖಕರು ನಮ್ಮ ನಡುವಿನ ಉದಾಹರಣೆಗಳನ್ನೇ ಅದೆಷ್ಟು ಚೆನ್ನಾಗಿ ಪ್ರಸ್ತುತಪಡಿಸುತ್ತಾರೆಂದರೆ ಓದುಗನು ಒಂದು ಮಟ್ಟಿನ ಆತ್ಮಾವಲೋಕನವನ್ನು ಮಾಡಿಕೊಂಡರೂ ಅಚ್ಚರಿಯಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಇವುಗಳು ನೈಜತೆಗೆ ತೀರಾ ಹತ್ತಿರ ಕೂಡ. ಪ್ರೀತಿಯಲ್ಲಿ ಬಿದ್ದ ಸ್ನೇಹಿತನೊಬ್ಬ ನಮ್ಮಲ್ಲಿ ಸಲಹೆಯನ್ನು ಕೇಳುವುದು, ಈಗಷ್ಟೇ ಬ್ರೇಕಪ್ ಮಾಡಿಕೊಂಡ ಗೆಳತಿಯೊಬ್ಬಳು ಮಾನಸಿಕವಾಗಿ ಕುಸಿದೇ ಹೋಗುವುದು… ಹೀಗೆ ತರಹೇವಾರಿ ಸಂದರ್ಭಗಳಲ್ಲಿ ನಾವೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಪ್ರೀತಿಗೆ ಮುಖಾಮುಖಿಯಾಗುತ್ತೇವೆ. ನಾನೇ ಖುದ್ದಾಗಿ ಹಲವು ಬಗೆಯ ಪ್ರೇಮಿಗಳನ್ನು ನನ್ನದೇ ಪುಟ್ಟ ಖಾಸಗಿ ವಲಯದಲ್ಲಿ ಕಂಡಿದ್ದೇನೆ. ಅವರ ದುಃಖಗಳಿಗೆ ಕಿವಿಯಾಗಿದ್ದೇನೆ. ಅವರ ಸಂತಸಗಳಲ್ಲಿ ನಗುವಾಗಿದ್ದೇನೆ. ಇವರಲ್ಲಿ ಪ್ರೀತಿಯನ್ನು ನಿಲರ್ಿಪ್ತತೆಯಿಂದ ಅಪ್ಪಿಕೊಂಡವರೂ ಇದ್ದಾರೆ. ರಚ್ಚೆ ಹಿಡಿದು ಪ್ರೀತಿಸಿದವರೂ ಇದ್ದಾರೆ. `ಪ್ರೀತಿಯೆಂದರೆ ಕವಿಗಳ, ಲೇಖಕರ, ಸಿನೆಮಾ ಲೋಕದ ಒಂದು ಕಾಲ್ಪನಿಕ ಉತ್ಪನ್ನವಷ್ಟೇ' ಎಂದು ನಗೆಯಾಡಿದವರೂ ಕೂಡ ಆಕಸ್ಮಿಕವಾಗಿ ಪ್ರೀತಿಯಲ್ಲಿ ಬಿದ್ದು ವಿರಹವೇದನೆಯಲ್ಲಿ ಗೋಳೋ ಎಂದು ಅತ್ತಿದ್ದನ್ನೂ ನಾನು ಕಣ್ಣಾರೆ ಕಂಡಿದ್ದೇನೆ. ಲೇಖಕರ ಮಾತಲ್ಲೇ ಹೇಳುವುದಾದರೆ `ನಾವು ಮನುಷ್ಯರು ಮತ್ತು ನಮಗೂ ಒಂದಿಷ್ಟು ಭಾವನೆಗಳಿವೆ ಎಂದಾದರೆ ನಮ್ಮೊಳಗೆ ಒಂದು ಪ್ರೀತಿಯೊಂದು ಚಿಗುರಿಕೊಂಡೇ ಕೊಳ್ಳುತ್ತದೆ'. ಅದೆಷ್ಟು ಸತ್ಯವಾದ ಮಾತು!

ಸಿನೆಮಾ, ಪಾಕರ್ು, ಸುತ್ತಾಟ, ಗಂಟೆಗಟ್ಟಲೆ ಹರಟೆ, ಉಡುಗೊರೆ ಇತ್ಯಾದಿ ಗ್ಲಾಮರ್ ಮುಖವಾಡವನ್ನು ಧರಿಸಿರುವ ಆಧುನಿಕ ಪ್ರೀತಿಯ ಬಗ್ಗೆ ಮಾತನಾಡುತ್ತಾ ಅದರ ಪೊಳ್ಳುತನವನ್ನು ಬೆತ್ತಲಾಗಿಸುತ್ತಲೇ ಹೋಗುತ್ತಾರೆ ಲೇಖಕರು. ಜೊತೆಗೇ ರೂಪ, ಅಂತಸ್ತು, ವಯಸ್ಸು ಇತ್ಯಾದಿ ಹುಸಿ ಮಾನದಂಡಗಳ ಮತ್ತು ಆಡಂಬರಗಳ ಬಗ್ಗೆಯೂ ಕೂಡ. ಇನ್ನು “ಪ್ರೀತಿಯು ದಕ್ಕಲೇಬೇಕೆಂಬ ಹಟವೇಕೆ? ಪ್ರೀತಿಯು ಹುಟ್ಟಿದ ಆ ಅಮೃತಘಳಿಗೆಯೇ `ನನಗೂ ಲವ್ವಾಗಿದೆ' ಎನ್ನಲು, ಪ್ರೀತಿಯು ಹುಟ್ಟಿಸುವ ಹಷರ್ೋಲ್ಲಾಸದಲ್ಲಿ ಮಿಂದೇಳಲು, ಹಾಗೇ ಸುಮ್ಮನೆ ಪುಳಕಗೊಳ್ಳಲು ಸಾಕಲ್ಲವೇ'', ಎನ್ನುತ್ತಾರೆ ಲೇಖಕರು. ಈ ಭಾಗವನ್ನು ಓದುತ್ತಾ ತಕ್ಷಣ ನನಗೆ ನೆನಪಾಗಿದ್ದು ಇಮ್ರೋಝ್. ಸ್ವತಃ ಅಮೃತಾ ಪ್ರೀತಮ್ ರನ್ನು ಅಷ್ಟು ಪ್ರೀತಿಸುತ್ತಿದ್ದರೂ, ಸಾಹಿರ್ ಲೂಧಿಯಾನ್ವಿಯವರ ಬಗ್ಗೆ ಅಮೃತಾರಿಗಿದ್ದ ಅದಮ್ಯ ಮೋಹದ ಅರಿವಿದ್ದರೂ ಅವರೆಂದೂ ಅಮೃತಾರನ್ನು ತನ್ನ ಭಾವನೆಗಳನ್ನು ಒಪ್ಪಿಕೊಳ್ಳಬೇಕೆಂದು ಒತ್ತಡ ಹಾಕಲಿಲ್ಲ. ಅಮೃತಾರ ದೇಹಾಂತದ ಬಳಿಕವೂ ಇಮ್ರೋಝ್ ಹೇಳಿದ್ದು ಒಂದೇ ಮಾತು: “ಅಮೃತಾನೇ ಸಿಫರ್್ ಜಿಸ್ಮ್ ಛೋಡಾ ಹೈ, ಮೇರಾ ಸಾಥ್ ನಹೀಂ'' (ಅಮೃತಾ ಬಿಟ್ಟುಹೋಗಿದ್ದು ತನ್ನ ದೇಹವನ್ನಷ್ಟೇ, ನನ್ನ ಜೊತೆಯನ್ನಲ್ಲ) 

`ಮಾಗ್ನೋಲಿಯಾ' ಚಿತ್ರದಲ್ಲಿ ಡಾನಿ ಸ್ಮಿತ್ ಎನ್ನುವ ಪಾತ್ರವೊಂದು ಬರುತ್ತದೆ. ಮನುಷ್ಯನ ಭಾವನಾಲೋಕದ ಎಲ್ಲಾ ಏರಿಳಿತಗಳನ್ನು ಅದ್ಭುತವಾಗಿ ತೆರೆಗೆ ತಂದ ಮಾಗ್ನೋಲಿಯಾ ಚಿತ್ರವು ನಿಜಕ್ಕೂ ಒಂದು ದೃಶ್ಯಕಾವ್ಯ. ಈ ಡಾನಿ ಸ್ಮಿತ್ ಪಾತ್ರವು ತಾನು ಜೀವಿಸುವುದಕ್ಕೂ ನಾಲಾಯಕ್ಕು ಎಂಬ ಮನಸ್ಥಿತಿಯನ್ನು ತಲುಪಿದಾಗ ಹತಾಶೆಯಲ್ಲಿ ನುಡಿಯುವ ಸಂಭಾಷಣೆಯೊಂದು ಹೀಗಿದೆ: “ನನ್ನೊಳಗೆ ಅದೆಷ್ಟು ಪ್ರೀತಿ ತುಂಬಿಕೊಂಡಿದೆ ಗೊತ್ತೇ? ಆದರೆ ಅದನ್ನು ಎಲ್ಲಿಡಲಿ, ಯಾರಿಗಾಗಿ ಧಾರೆಯೆರೆಯಲಿ ಎಂಬುದೇ ಗೊತ್ತಾಗುತ್ತಿಲ್ಲ''. ಡಾನಿಯ ಆ ಹತಾಶೆಯ ಸ್ಥಿತಿಯನ್ನು ಶಬ್ದಗಳಲ್ಲಿ ಹಿಡಿದಿಡುವುದು ಕಷ್ಟ. ಭಾವನೆಗಳ ಹರಿವಿಗೆ ಒಂದು ದಾರಿಯೇ ಇರದೆ, ಅವುಗಳ ಹೆಣಭಾರವನ್ನೂ ಹೊರಲಾಗದೆ ಆ ಭಾರದ ಕೆಳಗೇ ಅಪ್ಪಚ್ಚಿಯಾಗುವ ಭಯ. ಡಾನಿ ಸ್ಮಿತ್ ನ ಅವಸ್ಥೆ ಒಂದೆಡೆಯಾದರೆ ನಿವೇದಿಸಿಕೊಂಡ ಅಥವಾ ನಿವೇದಿಸಿಕೊಂಡಿರದ ಪ್ರೀತಿಗಾಗಿ ಕಾಯುವುದು ಬೇರೆಯದ್ದೇ ಆದ ಮಹಾಯಾತನೆಯ ಸ್ಥಿತಿ. ಏಕೆಂದರೆ ಇಂಥಾ ಸನ್ನಿವೇಶಗಳಲ್ಲಿ ಪ್ರೀತಿಯು ಯಾವತ್ತೋ ಬರಬಹುದು. ಅಥವಾ ಬರದೆಯೂ ಇರಬಹುದು. ಹೀಗೆ ಕಾಯುವುದಕ್ಕೂ ಧೈರ್ಯ ಬೇಕು. ಪ್ರೀತಿಯು ನಮಗೆ ಅರ್ಥವಾಗುತ್ತಾ ಹೋದಂತೆ ಮತ್ತಷ್ಟು ನಿಗೂಢವಾಗುತ್ತಾ ಹೋಗುವುದೂ ಕೂಡ ವಿಚಿತ್ರವೇ. ಹೀಗೆ ಮನಸ್ಸಿನ, ಪ್ರೀತಿಯ, ಭಾವನೆಗಳ ಇಂಥಾ ಸಂಕೀರ್ಣ ಆಯಾಮಗಳನ್ನು ಸರಳವಾಗಿ ತನ್ನದೇ ಶೈಲಿಯಲ್ಲಿ ಓದುಗರ ಮುಂದಿಡುವ ಲೇಖಕರು `ಬಂಧ' ಮತ್ತು `ಬಂಧನ'ದ ಮಜಲುಗಳನ್ನೂ ಮನಮುಟ್ಟುವಂತೆ ಅಕ್ಷರರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. 

ಸಂಪತ್ತಾಗಲೀ, ರೂಪವಾಗಲೀ, ಯಶಸ್ಸಾಗಲೀ… ತಮ್ಮನ್ನು ತಾವು ಇತರರೊಂದಿಗೆ ಹೋಲಿಸಿಕೊಳ್ಳುವುದೇ ತಪ್ಪು. ಹಾಗಿರುವಾಗ ಪ್ರೀತಿಯನ್ನೂ ಏಕೆ ಆ ವಿಷಕೂಪದಲ್ಲಿ ತಳ್ಳುತ್ತೀರಿ? ಎಂಬ ಗಂಭೀರ ಪ್ರಶ್ನೆಯೊಂದನ್ನು ಪರಿಣಾಮಕಾರಿಯಾಗಿಯೇ ಈ ಕೃತಿಯ ಬರಹಗಳು ಕೇಳುತ್ತಿವೆ. ಇನ್ನು ವಿಚಾರಮಂಡನೆಯು ಹೇರಿಕೆಯ ಅಥವಾ ಉಪದೇಶದ ಶೈಲಿಯಲ್ಲಿರದೆ ಆಪ್ತ ಹರಟೆಯಂತಿರುವುದು ಲೇಖಕರ ನಿರೂಪಣಾ ಶೈಲಿಯ ಹೆಚ್ಚುಗಾರಿಕೆ. ಪ್ರೀತಿಯನ್ನು ಪಡೆಯಲು ಬೇಕಾಗಿರುವ ಜನಜನಿತ `ಸೋ ಕಾಲ್ಡ್' ಮಾನದಂಡಗಳನ್ನು ಒಂದೊಂದಾಗಿಯೇ ಕಿತ್ತೆಸೆಯುವ ಲೇಖಕರು “ಲಾಂಬಾರ್ಗೆನಿ ಕಾರಿನಲ್ಲೇ ಓಡಾಡುವವನ ಪಕ್ಕದಲ್ಲಿ ಅವನನ್ನು ನೆಚ್ಚಿಕೊಂಡ ಪ್ರೀತಿ ಹೇಗೆ ಕುಳಿತಿರುತ್ತದೋ, ಎತ್ತಿನಗಾಡಿ ಓಡಿಸುವವನ ಎದೆಯ ಮೇಲೂ ಪ್ರೀತಿಯೊಂದು ಒರಗಿ ಕೂರುತ್ತದೆ ಮತ್ತು ಈ ಪ್ರೀತಿಯು ಜೀವನ್ಮುಖಿಯಾಗಿ ನಮ್ಮೊಂದಿಗೆ ಹೆಜ್ಜೆಹಾಕುತ್ತದೆ'' ಎನ್ನುತ್ತಾ ಮತ್ತಷ್ಟು ಇಷ್ಟವಾಗುತ್ತಾರೆ. ಈ ಮೂಲಕವಾಗಿ ಪ್ರೀತಿಯ ಹೆಸರಿನಲ್ಲಿ ಜೀವನಪ್ರೀತಿಯ ಬೀಜವನ್ನೂ ಬಿತ್ತುತ್ತಾರೆ.    

ಸೊಗಸಾಗಿ ಬರೆಯಬಲ್ಲ ನಮ್ಮ ನಡುವಿನ ಬೆರಳೆಣಿಕೆಯ ಸಂಪಾದಕರಲ್ಲಿ ಕೆ. ಗಣೇಶ್ ಕೊಡೂರು ಕೂಡ ಒಬ್ಬರು. ಕಾದಂಬರಿ, ಕಥಾಸಂಕಲನವನ್ನೊಳಗೊಂಡಂತೆ ಈಗಾಗಲೇ ಎಂಟು ಕೃತಿಗಳನ್ನು ಬರೆದಿರುವುದಲ್ಲದೆ ಎರಡು ಕೃತಿಗಳನ್ನು ಸಂಪಾದಕರಾಗಿಯೂ ಇವರು ಹೊರತಂದಿದ್ದಾರೆ. “ನನಗೂ ಲವ್ವಾಗಿದೆ'' ಕೃತಿಯು ಈ ಬಾರಿಯ ಹೊಸ ಸೇರ್ಪಡೆ. ಆರುಡೋ ಸಂಸ್ಥೆಯ ಮೂಲಕವಾಗಿ ಸಮಾಜಸೇವೆಯ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿರುವ ಇವರು ಬರಹಗಾರರಾಗಿಯೂ, ಸಂಪಾದಕರಾಗಿಯೂ ದೊಡ್ಡ ಮಟ್ಟಿನ ಓದುಗವರ್ಗವನ್ನು ಸೃಷ್ಟಿಸಿಕೊಂಡವರು. ಈ ಪುಸ್ತಕವನ್ನು `ಪ್ರೀತಿಯ ಬೈಬಲ್' ಎಂದೇನೂ ನಾನು ಕರೆಯಲಾರೆ. ಆದರೆ `ದೇವರು' ವಿಷಯದ ಬಗ್ಗೆ ಎ. ಎನ್. ಮೂತರ್ಿರಾಯರು ಹೇಗೆ ಸುಲಲಿತ ಶೈಲಿಯಲ್ಲಿ ಬರೆದಿದ್ದಾರೋ ಅಷ್ಟೇ ಗರಿಗರಿಯಾಗಿ `ಪ್ರೀತಿ'ಯ ಬಗ್ಗೆ ಗಣೇಶ್ ಕೊಡೂರರು ಬರೆಯಬಲ್ಲರು ಎನ್ನುವುದನ್ನಂತೂ ಒಪ್ಪಿಕೊಳ್ಳಲೇಬೇಕಾಗುತ್ತದೆ.    

`ನನಗೂ ಲವ್ವಾಗಿದೆ' ಕೃತಿಯನ್ನು ಓದಿದ ನಂತರ ಬದುಕಿನ ಬಗ್ಗೆ, ಪ್ರೀತಿಯ ಬಗ್ಗೆ ಹೊಸ ಒಳನೋಟಗಳು ಸಿಗುವುದಂತೂ ಸತ್ಯ. ಪುಸ್ತಕವನ್ನು ಓದಿ ಮುಗಿಸಿದ ನಂತರ ಏನಿಲ್ಲವೆಂದರೂ ಓದುಗನಿಗೆ ಬದುಕಿನೊಂದಿಗೇ ಪ್ರೀತಿಯಾಗುವುದರಲ್ಲಿ ಸಂಶಯವಿಲ್ಲ. 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x