ಹೊಸ ಮನೆ ಕಟ್ಟಿಕೊಂಡು ವಾಸವಾಗಿ ಸುಮಾರು ೨ ತಿಂಗಳು ಕಳೆದವು. ಕೃಷಿಯಿಂದ ವಿಮುಖವಾಗುತ್ತಿರುವ ಹೊತ್ತಿನಲ್ಲಿ ಮರಳಿ ಮಣ್ಣಿಗೆ ಹೋಗಿದ್ದು ಹೊಸ-ಹೊಸ ಅನುಭವಗಳನ್ನು ನೀಡುತ್ತಿದೆ. ಈಗ ಕಟ್ಟಿಕೊಂಡಿರುವ ಹೊಸ ಮನೆಯ ಹಿಂಭಾಗದಲ್ಲಿ ಸುಮಾರು ೨೦ ಗುಂಟೆಯಷ್ಟು ಜಾಗದಲ್ಲಿ ದಟ್ಟವಾದ ಅರಣ್ಯ ರೂಪುಗೊಂಡಿದೆ. ಅಗಣಿತ ಸಂಖ್ಯೆಯಲ್ಲಿ ಸಸ್ಯಗಳ ಸಂಖ್ಯೆ ವೃಧ್ದಿಸಿದೆ. ನೂರಾರು ಕಾಡಿನ ಮೇಲ್ಮನೆ ಸದಸ್ಯರು ದಿನಾ ಬೆಳಗ್ಗೆ ಸಂಗೀತ ನೀಡುತ್ತವೆ. ಹನುಂತರಾಯರ ಸಂತತಿಯೂ ಬಂದು ತಮ್ಮ ಹಕ್ಕನ್ನು ಚಲಾಯಿಸಲು ಬಯಸುತ್ತಿವೆ. ಅಳಿದು ಹೋದವೆಂದುಕೊಂಡ ಕ್ಯಾಸಣಿಲು ತನ್ನ ಉದ್ದವಾದ ಸುಂದರ ಬಾಲದ ದರ್ಶನವನ್ನು ನೀಡುತ್ತಿದೆ. ಒಣಗಿದ ದರಲೆಗಳ ಕೆಳಗೆ ಲಕ್ಷಾಂತರ ಸಂಖ್ಯೆಯಲ್ಲಿ ಹುಳು-ಹಪ್ಪಟೆಗಳಿವೆ. ಸಂಜೆಯ ಹೊತ್ತಿನಲ್ಲಿ ಹಾರುಬೆಕ್ಕುಗಳು ತಮ್ಮ ಬಾಲ ಬಿಚ್ಚಿ ಹಾರತೊಡಗಿದ್ದಾವೆ. ಎದುರಿನ ಹುಳಿಮಾವಿನ ಮರದ ಹಣ್ಣನ್ನು ತಿನ್ನುತ್ತಿವೆ. ಒಟ್ಟಾರೆಯಾಗಿ ಬೆಳಗಿನ ಮತ್ತು ಸಂಜೆಯ ವಾತಾವರಣ ಚೇತೋಹಾರಿಯಾಗಿದೆ.
ಮೇಲೆ ಹೇಳಿದ ದಟ್ಟ ಅರಣ್ಯದ ಹಿಂಭಾಗದಲ್ಲಿ ಸ್ವಂತದ ೨ ಎಕರೆ ಖುಷ್ಕಿಯಿದೆ. ಆ ಖುಷ್ಕಿಯಲ್ಲಿ ಚಿಕ್ಕು ಹಾಕಿದರೆ ಒಳ್ಳೆ ಬೆಳೆ ಬರುವುದೆಂಬ ಸಲಹೆಯಂತೆ ಚಿಕ್ಕು ಗಿಡಗಳನ್ನು ನಾಟಿ ಮಾಡಲಾಗಿತ್ತು. ನಿರೀಕ್ಷಿತ ಮಟ್ಟದಲ್ಲಿ ಚಿಕ್ಕು ಫಸಲು ಬರಲಿಲ್ಲ ಅಲ್ಲದೆ ಹೋದ ವರ್ಷ ದುಷ್ಕರ್ಮಿಗಳ ದಾಳಿಗೆ ಅಷ್ಟೂ ಚಿಕ್ಕು ಗಿಡಗಳು ಸುಟ್ಟು ಕರಕಲಾಗಿ ಹೋಗಿವೆ. ಸತ್ತು ಹೋದ ಚಿಕ್ಕು ಗಿಡಗಳ ಹೊಂಡದಲ್ಲಿ ಬೇರೆ ಏನಾದರೂ ಗಿಡ ಹಚ್ಚುವ ಯೋಚನೆಯಿಂದಾಗಿ ೭ ಅಡಿ ಉದ್ದದ ಹಾರೆ-ಗುದ್ದಲಿಯೊಂದಿಗೆ ಹೋಗಿದ್ದೆ. ಒಂದು ಬದಿಯಿಂದ ಹಾರೆಯನ್ನು ಹಾಕಿ ೨ ಅಡಿ ಅಗಲ ಮತ್ತು ೨ ಅಡಿ ಉದ್ದದ ಗುಂಡಿಯನ್ನು ನಿರ್ಮಿಸುವ ಕಾಯಕ ನಡೆದಿತ್ತು. ಸುಮಾರು ಮುಕ್ಕಾಲು ಕೆಲಸ ಮುಗಿದಿತ್ತು. ಇನ್ನೇನು ಹಾರೆಯನ್ನು ಎತ್ತಿ ಹಾಕಬೇಕು ಎನ್ನುವಾಗ ಅರ್ಧ ಅಂಗೈಯಗಲದ ಚೇಳು ಮಣ್ಣಿನಲ್ಲಿ ಕಂಡಿತು. ಹಾರೆಯನ್ನು ಹಾಗೆ ನಿಲ್ಲಿಸಿದೆ. ಗಲಿಬಿಲಿಗೊಂಡ ಜೀವಿ ರಕ್ಷಣಾತ್ಮಕವಾದ ಮೂಡಿನಿಂದ ಬಾಲವನ್ನು ಎತ್ತಿ ದಾಳಿಗೆ ಸಿದ್ಧವಾಗಿತ್ತು. ಹಾರೆಯನ್ನು ಇಳಿಸಿದರೆ ಎರಡು ತುಂಡಾಗಿ ಇಹಲೋಕ ತ್ಯಜಿಸುತ್ತಿತ್ತು. ಬಹುಷ: ತಂಪಾದ ಮಣ್ಣಿನಡಿಯಲ್ಲಿರುವ ಎರೆಹುಳುಗಳನ್ನು ತಿನ್ನುವ ಹುನ್ನಾರದಲ್ಲಿ ಚೇಳು ಬಂದಿರಬೇಕು ಎಂದು ಎಣಿಸಿದೆ. ಬಿಸಿಲಿನ ತಾಪ ಜೋರಾಗುತ್ತಿತ್ತು. ಚೇಳು ನಿಧಾನವಾಗಿ ಗುಂಡಿಯ ಮೇಲ್ಬಾಗಕ್ಕೆ ಬಂದಿತು. ಬಿಸಿಲಿನ ಧಗೆ ತಾಳಲಾರದೆ ತಂಪನ್ನು ಅರಸಿ ಬೇರೆ ಕಡೆಗೆ ಹೊರಟಿತ್ತು. ಯಾವುದಕ್ಕೂ ಇರಲಿ ಎಂದು ಒಂದು ಗುದ್ದಲಿ ಹುಡಿ ಮಣ್ಣನ್ನು ನಿಧಾನವಾಗಿ ಚೇಳಿನ ಮೇಲೆ ಸುರಿದೆ. ಹಾಯೆನಿಸಿತೇನೋ ಅಲ್ಲೇ ಹುದುಗಿ ಕುಳಿತಿತು. ಗುಂಡಿಯ ಕೆಲಸವನ್ನು ಪೂರ್ಣಗೊಳಿಸುವ ಹೊತ್ತಿಗೆ ಮೈಯೆಲ್ಲಾ ಚಿಲಿ-ಚಿಲಿ ಬೆವರು. ಹಾಕಿಕೊಂಡ ಬಟ್ಟೆಗಳು ತೋಯ್ದು ಹೋದವು. ಒಂದು ಲೀಟರ್ ನೀರು ಕುಡಿದು ಮನೆಗೆ ವಾಪಾಸು ಬಂದೆ. ಈಗಾಗಲೇ ಮಳೆ ಬಂದು ಕಳೆ ಗಿಡಗಳು ಚಿಗುರುತ್ತಿವೆ. ಮಾರನೇ ದಿನ ಬೇಲಿ ಬದಿಯ ಕಳೆಗಳನ್ನು ಸವರುವ ಕೆಲಸಕ್ಕೆ ಹೋದಾಗ ಬೆಳಗಿನ ೧೦ ಗಂಟೆ. ಯುಪಟೋರಿಯಂ ಕಳೆಯ ಜೊತೆಗೆ ಇನ್ನು ಹಲವು ಹತ್ತು ಜಾತಿಯ ಕಳೆಗಳು ಬೆಳೆದಿದ್ದವು. ಒಂದು ಬದಿಯಿಂದ ಹಿಡಿದು ಕಳೆಗಳನ್ನು ಸವರುವ ಕೆಲಸಕ್ಕೆ ಮಡಿದಿಯ ಸಾತ್ ಇತ್ತು. ಹಿಂದಿನ ದಿನದ ಚೇಳಿನ ಘಟನೆ ನೆನಪಾಗಿ ಹೊಂಡದ ಸಮೀಪ ಹೋಗವಷ್ಟರಲ್ಲಿ, ಅಲ್ಲೊಂದು ಓತಿಕಾಟವಿತ್ತು. ನನ್ನನ್ನು ನೋಡಿ ಓಡದ ಓತಿಕಾಟವೇನು ಮಾಡುತ್ತಿದೆ ಎಂದು ನೋಡಿದರೆ, ನುಣಿಯಾದ ಹುಡಿ ಮಣ್ಣಿನಲ್ಲಿ ಚಿಕ್ಕದೊಂದು ಗುಂಡಿ ತೆಗೆದು ಮೊಟ್ಟೆಯಿಡುತ್ತಿತ್ತು. ಒಂದೈತ್ತು ಮೊಟ್ಟೆಗಳನ್ನು ಅದಾಗಲೆ ಹಾಕಿಯಾಗಿತ್ತು. ಇನ್ನೂ ಅದರ ಹೊಟ್ಟೆಯಿಂದ ಗುಲಗುಂಜಿಯ ಗಾತ್ರಕ್ಕಿಂತ ಸ್ವಲ್ಪ ದೊಡ್ಡದಾದ ಮೊಟ್ಟೆಗಳು ಹೊರಬರಲು ಬಾಕಿಯಿದ್ದವು. ಮೊಟ್ಟೆಗಳು ಬಿಳಿಯಾಗಿದ್ದವು. ಓತಿಕಾಟಕ್ಕೆ ತೊಂದರೆ ಮಾಡದಂತೆ ನಿಧಾನಕ್ಕೆ ವಾಪಾಸು ಬಂದೆ. ಮಡದಿಗೆ ವಿಷಯ ತಿಳಿಸಿದೆ. ಪ್ರಕೃತಿಯಲ್ಲಿ ಈ ತರಹದ ಸ್ವಾಭಾವಿಕವಾದ ಘಟನೆಗಳು ನಡೆಯುತ್ತಿರುತ್ತವೆ. ವಿಸ್ಮಯದಿಂದ ಒಂದು ಕ್ಷಣ ಓತಿಕಾಟವನ್ನು ನೋಡಿ ತನ್ನ ಕೆಲಸ ಶುರು ಮಾಡಿದಳು. ನನ್ನ ಹತ್ತಿರ ಒಂದು ಒಳ್ಳೇ ಕ್ಯಾಮರವಿದ್ದಿದ್ದರೆ ಓತಿಕಾಟ ಮೊಟ್ಟೆಯಿಡುವ ಫೋಟೊ ತೆಗೆಯಬಹುದಿತ್ತು ಅಂದುಕೊಂಡು ಕಳೆ ಸವರುವ ಕೆಲಸಕ್ಕೆ ಶುರು ಮಾಡಿದೆ.
ಕಳೆ ಸವರುವ ಕೆಲಸಕ್ಕೂ ಹಲವು ಅಡ್ಡಿ ಆತಂಕಗಳು ಶುರುವಾದವು. ಕಾಲ ಕೆಳಗೆ ಕಟ್ಟಿರುವೆಗಳು, ತಲೆಯ ಮೇಲೆ ಚಿಗಳಿ, ಯಾವುದು ಕಚ್ಚಿದರೂ ಉರಿ, ಚಿಗಳಿ ಕಚ್ಚುವ ಜೊತೆಗೆ ಅದೇನೋ ರಾಸಾಯನಿಕವನ್ನು ಕಚ್ಚಿದ ಜಾಗಕ್ಕೆ ಸೇರಿಸುತ್ತದೆ. ಅದು ವಿಪರೀತ ವಾಸನೆಯಿಂದ ಕೂಡಿರುತ್ತದೆ. ಕಟ್ಟಿರುವೆಯ ಕಡಿತದಿಂದ ಊತ ಬರುತ್ತದೆ. ಚಿಗಳಿಗೆ ಹೋಲಿಸಿದರೆ ಕಟ್ಟಿರುವೆಯ ಕಡಿತದ ಉರಿಯೇ ಹೆಚ್ಚು. ಕೃಷಿಯಲ್ಲಿ ಈ ತರಹದ ಅಡಚಣೆಗಳಿಗೇನು ಕಮ್ಮಿಯಿಲ್ಲ. ಜೊತೆಗೆ ಅನಿರೀಕ್ಷಿತ ಬೋನಸ್ಸುಗಳು ಸಿಗುತ್ತವೆ. ನೆಲಮಟ್ಟದಲ್ಲಿ ಸವರುತ್ತಿದ್ದವನಿಗೆ ಕಂಡಿದ್ದು, ಸಾವಿರಾರು ನೇರಳೆ ಹಣ್ಣುಗಳು. ನೂರಾರು ಪಕ್ಷಿಗಳಿಗೆ ಊಟ ನೀಡಿದ ನಂತರವೂ ನೇರಳೆ ಮರದ ಬುಡದಲ್ಲಿ ಹಣ್ಣುಗಳು ದಂಡಿಯಾಗಿ ಬಿದ್ದಿದ್ದವು. ಆಯ್ದುಕೊಟ್ಟ ಮಡದಿಗೆ ಕಣ್ಣಿನಲ್ಲೇ ಒಂದು ಥ್ಯಾಂಕ್ಸ್ ಹೇಳುವ ಹೊತ್ತಿಗೆ ಓತಿಕಾಟ ನೆನಪಾಯಿತು. ಗುಂಡಿಗಿಂತ ೨೦ ಅಡಿ ದೂರದಲ್ಲಿ ನಿಂತು ಗಮನಿಸಿದೆ. ಓತಿಕಾಟ ಮೊಟ್ಟೆಯಿಟ್ಟಾಗಿತ್ತು. ಕುತೂಹಲದಿಂದ ನೋಡುತ್ತಿದ್ದವನಿಗೆ ಓತಿಕಾಟ ಮೊಟ್ಟೆಗಳ ಮೇಲೆ ನುಣಿ ಮಣ್ಣು ಮುಚ್ಚುತ್ತಿತ್ತು. ತನ್ನ ಕೆಲಸಕ್ಕೆ ಅಡ್ಡಿಬರುವ ನನ್ನನ್ನು ತುಸು ಅಸಮಧಾನದಿಂದ ನೋಡಿ ಕೆಲಸ ಮುಂದುವರೆಸಿತು. ಹಿಂಗಾಲುಗಳಿಂದ ಮಣ್ಣನ್ನು ಕೆರೆದು ಆ ಚಿಕ್ಕ ಗುಂಡಿಯಲ್ಲಿ ಹಾಕುವುದು ಮತ್ತೆ ತಿರುಗಿ ಗದ್ದದಿಂದ ಮೊಟ್ಟೆಗಳ ಮೇಲೆ ಹಾಕಿದ ಮಣ್ಣನ್ನು ಒತ್ತುವುದು. ವೈರಿಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು ಜೊತೆಗೆ ತನ್ನ ಮುಂದಿನ ಸಂತತಿಯನ್ನು ವೈರಿಗಳಿಂದ ಕಾಪಾಡಬೇಕು. ಓತಿಕಾಟದ ಬದುಕು ಸದಾ ಅತಂತ್ರ. ಮೇಲೆ ಹಾರುವ ಗಿಡುಗದ ಕಣ್ಣಿಗೆ ಬಿತ್ತೋ, ಓತಿಕಾಟದ ವಂಶ ಸರ್ವನಾಶ. ಆದರೂ ನಾಲ್ಕೂ ದಿಕ್ಕಿಗೂ ಕಣ್ಣಿಟ್ಟು, ಮಣ್ಣು ಮುಚ್ಚುವ ಕೆಲಸವನ್ನು ಅದೆಷ್ಟು ನೀಟಾಗಿ ಮಾಡುತ್ತಿತ್ತೆಂದರೆ, ಅಧ್ಬುತವಾದ ಶಿಲ್ಪಿಗೆ ಸಮನಾದ ತಾದ್ಯಾತ್ಮವಿತ್ತು. ಓತಿಕಾಟದ ಕೆಲಸವಿನ್ನೂ ಮುಗಿದಿರಲಿಲ್ಲ. ವಾಸ್ತವವಾಗಿ ಹೇಳಬೇಕೆಂದರೆ ಓತಿಕಾಟದ ದೆಸೆಯಿಂದ ನನ್ನ ಕೆಲಸವಿನ್ನೂ ಶುರುವಾಗಿಯೇ ಇರಲಿಲ್ಲ. ಚಿಗಳಿ, ಕಟ್ಟಿರುವೆ, ಓತಿಕಾಟ ಹಾಗೂ ನೇರಳೆ ಹಣ್ಣಿನ ನೆವದಿಂದಾಗಿ ಕಳೆ ಸವರುವ ಕೆಲಸ ನಿಧಾನವಾಗಿತ್ತೋ ಅಥವಾ ನಾನೇ ಖುದ್ದು ಮೈಗಳ್ಳನಾಗಿದ್ದೇನೋ ಎಂದು ಹೇಳುವುದು ಕಷ್ಟ. ನನ್ನ ಮಡದಿಯನ್ನು ಕೇಳಿದರೆ ಎರಡನೆಯದೇ ಸತ್ಯ ಎಂದು ಹೇಳಬಹುದು.
ಇಷ್ಟರಲ್ಲೇ ಸೂರ್ಯದೇವರ ಶಾಖ ವಿಪರೀತವಾಗಿತ್ತು. ಮನೆಯಿಂದ ತಂದ ನೀರನ್ನು ಖಾಲಿ ಮಾಡಿದ್ದೇ ಅವತ್ತಿನ ಸಾಧನೆ. ಅಂತೂ ಬಿಸಿಲ ಧಗೆ ಹೆಚ್ಚಾದ ಕಾರಣ ನಮ್ಮ ಕೆಲಸಕ್ಕೆ ವಿರಾಮ ಬಿತ್ತು. ಇಷ್ಟೆಲ್ಲಾ ಆದರೂ ಓತಿಕಾಟದ ಕೆಲಸ ಇನ್ನೂ ಮುಗಿದಿರಲಿಲ್ಲ. ಪುಟ್ಟ ಗುಂಡಿಯನ್ನು ಸಂಪೂರ್ಣ ಮುಚ್ಚಿ ಹಾಕುವ ಕೆಲಸ ಮುಗಿದಿತ್ತು. ಮಳೆ ಬಂದು ನೀರು ಗುಂಡಿಯ ಒಳಗೆ ಇಳಿಯಬಾರದು ಮತ್ತು ಮೊಟ್ಟೆಯೊಡೆದು ಹೊರಬರುವ ಮರಿಗಳಿಗೆ ಮಣ್ಣನ್ನು ಬೇಧಿಸಿಕೊಂಡು ಬರುವ ಹಾಗೆ ಗುಂಡಿಯ ಮೇಲ್ಮೈಯನ್ನು ಒಂದು ಹದದಲ್ಲಿ ನುಣುಪು ಮಾಡುವ ಫಿನಿಷಿಂಗ್ ಕೆಲಸಕ್ಕೆ ಓತಿಕಾಟ ಶುರುವಿಟ್ಟುಕೊಂಡಿತ್ತು. ಬಹುಷ: ಇನ್ನೂ ಅರ್ಧಗಂಟೆ ಅದರ ಕೆಲಸ ಮುಂದುವರೆಯಬಹುದು ಎಂದುಕೊಂಡು ಮನೆಗೆ ಹೋದೆವು.
ಧರೆಯ ಮೇಲೆ ವಾಸಿಸುವ ಎಲ್ಲಾ ತರಹದ ಪ್ರಾಣಿಗಳು ಒಂದಲ್ಲಾ ಒಂದು ರೀತಿಯಲ್ಲಿ ಉಪಕಾರಿಯಾಗಿವೆ. ಆದರೂ ಕೆಲವೊಂದು ಪ್ರಾಣಿಗಳು, ಕೀಟಗಳು ಕಂಟಕಕಾರಿಗಳಾಗಿ ಪರಿಣಮಿಸುತ್ತವೆ. ಉದಾಹರಣೆಯಾಗಿ ಹೇಳುವುದಾದಲ್ಲಿ, ಇಲಿ, ಹೆಗ್ಗಣ, ಜಿರಳೆ, ಸೊಳ್ಳೆ, ನೊಣ, ಮಿಡತೆ, ಉಣ್ಣಿ, ತಿಗಣೆ ಇತ್ಯಾದಿಗಳು. ನೀವು ಪೇಟೆಯಲ್ಲೇ ವಾಸಿಸಿ ಅಥವಾ ಹಳ್ಳಿ. ನಿಮ್ಮಲ್ಲಿ ಒಂದು ಸುಂದರ ಕೈತೋಟವಿದೆಯೆಂದಾದರೆ, ಓತಿಕಾಟ, ಹಾವುರಾಣಿ, ಪಕ್ಷಿಗಳಂತಹ ಪ್ರಕೃತಿಯ ಸ್ನೇಹಿತರು ಕಾಣಲು ಸಿಗುತ್ತಾರೆ. ಹಾಗೂ ಇವುಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಮಗೆ ಉಪಕಾರವನ್ನೇ ಮಾಡುತ್ತವೆ. ಓತಿಕಾಟ ಅಥವಾ ಓತಿಕ್ಯಾತವೆಂದು ಕರೆಯಲ್ಪಡುವ ಈ ಸರಿಸೃಪದ ಜಾತಿಗೆ ಸೇರಿದ ಲೋಕದಲ್ಲಿ ೨೪ ಪ್ರಭೇದಗಳನ್ನು ತಜ್ಞರು ಗುರುತಿಸಿದ್ದಾರೆ. ಇದರಲ್ಲಿ ಸಾಮಾನ್ಯವಾದ ಓತಿಕ್ಯಾತದ ಜೊತೆಗೆ ಬಾಯಿ, ಮೂತಿ, ಹಾಗೂ ಗದ್ದ ಕೆಂಪು ಬಣ್ಣ ಹೊಂದಿದ ಓತಿಕ್ಯಾತಗಳು ಇವೆ. ಬಾಯಿ ಕೆಂಪಗಿರುವುದರಿಂದಾಗಿ ಇಂಗ್ಲೀಷ್‌ನಲ್ಲಿ ಇವಕ್ಕೆ ಬ್ಲಡ್ ಸಕ್ಕರ್‌ಗಳೆಂದು ಕರೆಯುತ್ತಾರೆ. ಆದರೆ ಈ ಪದ ಕನ್ನಡಕ್ಕೆ ಸರಿಹೊಂದುವುದಿಲ್ಲ ಎಂದು ನನ್ನ ಭಾವನೆ. ಪಾಪದ ಓತಿಕ್ಯಾತಗಳನ್ನು ರಕ್ತಪಿಪಾಸುಗಳು ಎಂದು ಕರೆಯುವ ಔಚಿತ್ಯವೇನು?
ಎಲ್ಲಾ ತರಹದ ಸರಸೃಪಗಳಂತೆ ಸಾಮಾನ್ಯವಾಗಿ ಓತಿಕ್ಯಾತವೂ ಮೊಟ್ಟೆಯಿಟ್ಟು, ಮಣ್ಣು ಮುಚ್ಚಿ ಹೋಗುತ್ತವೆ. ವಾತಾವರಣದ ಬಿಸಿಯನ್ನು ಅವಲಂಬಿಸಿ ಸುಮಾರು ೩೦-೪೫ ದಿನಗಳಲ್ಲಿ ಮೊಟ್ಟೆಗಳು ಮರಿಯಾಗುತ್ತವೆ. ಸಸ್ತನಿಗಳಂತೆ ಸರಿಸೃಪಗಳು ಮರಿಗಳನ್ನು ಸಾಕುವ ಜವಾಬ್ದಾರಿಯನ್ನು ಹೊರುವುದಿಲ್ಲ. ಮೊಟ್ಟೆಯೊಡೆದು ಹೊರಬಂದ ಮರಿಗಳು ನಿಸರ್ಗ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿ ಬದುಕಬೇಕಾಗುತ್ತದೆ. ಸಾಮಾನ್ಯವಾಗಿ ಅವುಗಳ ವಂಶವಾಹಿನಿಯಲ್ಲೇ ಬದುಕುವ ತಂತ್ರ ಇರುತ್ತದೆ. ಚಿಕ್ಕ ಓತಿಗಳು ಮೊಟ್ಟೆಯಿಂದ ಹೊರಬಂದ ನಂತರದಲ್ಲಿ ದರಗೆಲಗಳ ಮಧ್ಯದಲ್ಲಿ ಸಾಗಿ ಸಿಕ್ಕಿದ ಸಣ್ಣ ಕೀಟಗಳನ್ನು ತಿನ್ನುತ್ತವೆ. ಕೆಲವು ಮರಿಗಳು ಹಕ್ಕಿ-ಪಕ್ಷಿಗಳ ಪಾಲಾಗುತ್ತವೆಯಾದರೂ, ಅವುಗಳ ಸಂತತಿ ಹೇಗೋ ಬೆಳೆಯುತ್ತದೆ ನಿಸರ್ಗದ ನಿಯಮದಂತೆ.
*****
ಇಂತಹ ಅನುಭವಗಳು ಆಸ್ವಾದಿಸಲು ಸಿಗುವ ಕಾರಣ ಕೃಷಿ ಹಿತಕರ ಎನಿಸುತ್ತದೆ ಅಲ್ವಾ.. ಚಿಕ್ಕ ಚಿಕ್ಕ ವಿಷಯಗಳು ಹಲವು ದಿನಗಳ ಸಂತಸಕ್ಕೆ ಕಾರಣವಾಗಬಹುದು. ಕುಷಿ ಕೊಟ್ಟ ಬರಹ
ಬೆಲೆಯ ಅನಿಶ್ಚಿತತೆ, ಹವಾಮಾನ ವೈಪರೀತ್ಯ,
ಇತ್ಯಾದಿಗಳಿಂದಾಗಿ ಕೃಷಿಕನ ಜೀವನ ಮುಳ್ಳಿನ ಹಾಸಿಗೆಯಾದರೂ
ಇಂತಹ ಹಲವು ಘಟನೆಗಳು ಬದುಕುವುದಕ್ಕೆ ಪ್ರೇರಪಿಸುತ್ತವೆ.
ಪ್ರತಿಕ್ರಿಯೆಗಾಗಿ ಧನ್ಯವಾದಗಳು ಮಂಚಿ ಮೇಡಂ!!
ಪರಿಸರದೊಂದಿಗಿನ ಬೆಸುಗೆ… ಸೊಗಸಾಗಿದೆ
ನುಣಿ ಅಂದ್ರೆ soft ?