ಓಜೋನ್-ವಿನಾಶ ಅನಿಲಗಳ ನಿಯಂತ್ರಣ: ಜೈಕುಮಾರ್

ದೈತ್ಯ ಕಂಪನಿಗಳ ಪರ ನಿಂತಿರುವ ಅಮೇರಿಕಾ

ಅಮೇರಿಕಾ ದೇಶದ ಬಹುರಾಷ್ಟ್ರೀಯ ಕಂಪನಿಗಳು ಉತ್ಪಾದಿಸುವ ಅನಿಲಗಳನ್ನು ಮಾತ್ರವೇ ಶೀತಲೀಕರಣ (ರೆಫ್ರಿಜರೇಶನ್) ಉಪಕರಣಗಳಲ್ಲಿ ಉಪಯೋಗಿಸುವಂತೆ ಅಮೇರಿಕಾವು ಭಾರತದ ಮೇಲೆ ಒತ್ತಡ ಹಾಕುತ್ತಿದೆ. ಶೀತಲೀಕರಣಗಳಲ್ಲಿ ಬಳಸುವ ಅನಿಲಗಳು ಇತರೆ ಹಸಿರು ಮನೆ ಅನಿಲಗಳಂತೆ ಭೂಮಿಯ ತಾಪಮಾನಕ್ಕೆ ಕಾರಣವಾಗುತ್ತವೆ ಎಂಬ ಕಾರಣವೊಡ್ಡಿ ಅಮೇರಿಕಾ ತನ್ನ ಕಂಪನಿಗಳಿಗೆ ಭಾರತದಲ್ಲಿ ಮಾರುಕಟ್ಟೆ ಹುಡುಕುತ್ತಿದೆ. 

ಶೀತಲೀಕರಣ ಅನಿಲಗಳನ್ನು ಎರಡು ಅಂತರಾಷ್ಟ್ರೀಯ ಒಪ್ಪಂದಗಳ ವ್ಯಾಪ್ತಿಗೆ ತರಲಾಗಿದೆ: ಮಾಂಟ್ರಿಯಲ್ ಒಡಂಬಡಿಕೆ ಮತ್ತು ಹವಾಮಾನದ ಬದಲಾವಣೆ ಕುರಿತ ವಿಶ್ವಸಂಸ್ಥೆ ಚೌಕಟ್ಟುಗಳ ಒಪ್ಪಂದ. ಮಾಂಟ್ರಿಯಲ್ ಒಡಂಬಡಿಕೆಯು ಭೂಮಿಯ ಮೇಲಿರುವ ಓಜೋನ್ ಪದರವನ್ನು ತೂತು ಮಾಡುವ ಅನಿಲಗಳನ್ನು ಕಡಿತಗೊಳಿಸುವ ಕುರಿತದ್ದು. ಹವಾಮಾನದ ಬದಲಾವಣೆ ಕುರಿತ ವಿಶ್ವಸಂಸ್ಥೆ ಚೌಕಟ್ಟುಗಳ ಒಪ್ಪಂದವು ಭೂಮಿಯ ತಾಪಮಾನದ ಹೆಚ್ಚಳಕ್ಕೆ ಕಾರಣವಾಗಿರುವ ಹಸಿರು ಮನೆ ಅನಿಲಗಳನ್ನು ಕಡಿತಗೊಳಿಸುವ ಕುರಿತದ್ದು. 

ಕೈಗಾರಿಕೆಗಳು, ಸಾರಿಗೆ ಮತ್ತು ಶೀತಲೀಕರಣ ಕೇಂದ್ರಗಳಿಂದ ಸಾಮಾನ್ಯವಾಗಿ ಬಿಡುಗಡೆಯಾಗುವ ಅನಿಲಗಳು (ಇವುಗಳಿಗೆ ಹಸಿರು ಮನೆ ಅನಿಲಗಳು ಎನ್ನುತ್ತಾರೆ) ವಾತಾವರಣಕ್ಕೆ ಬಿಡುಗಡೆಯಾಗಿ, ವಾತಾವರಣದ ಓಜೋನ್ ಪದರಕ್ಕೆ ಹಾನಿಯುಂಟು ಮಾಡುತ್ತವೆ. ಇದರಿಂದ ಓಜೋನ್ ಪದರವು ಮತ್ತಷ್ಟು ಶಿಥಿಲಗೊಂಡು ಸೂರ್ಯನ ಅತಿ ನೇರಳೆ ಕಿರಣಗಳು ಭೂಮಿಯ ವಾತಾವರಣದೊಳಗೆ ಹೆಚ್ಚಾಗಿ ಹವಾಮಾನ ಬದಲಾವಣೆ ಮತ್ತು ಭೂಮಿಯ ತಾಪಮಾನದ ತೀವ್ರವಾಗಿ ಹೆಚ್ಚಳಕ್ಕೆ ಕಾರಣವಾಗಿವೆ. 

ಮಾಂಟ್ರಿಯಲ್ ಒಪ್ಪಂದದ ಅನುಸಾರ ಶ್ರೀಮಂತ ರಾಷ್ಟ್ರಗಳು ಓಜೋನ್-ವಿನಾಶಕಾರಿ ಶೀತಲೀಕರಣದ ಬದಲಿಗೆ ಬಲು ದುಬಾರಿಯಾದ ಹೈಡ್ರೋಫ್ಲೋರೋ ಇಂಗಾಲಗಳನ್ನು ಬಳಸತೊಡಗಿವೆ. ಹೈಡ್ರೋಫ್ಲೋರೋ ಇಂಗಾಲಗಳು ಓಜೋನ್ ಪದರ ನಾಶಮಾಡದಿದ್ದರೂ ಜಾಗತಿಕ ತಾಪಮಾನ ಹೆಚ್ಚಿಸುವ ಸಾಮರ್ಥ್ಯ ಹೊಂದಿವೆ. 

ಆದರೆ ಭಾರತದಂತ ಅಭಿವೃದ್ಧಿಹೊಂದುತ್ತಿರುವ ದೇಶಗಳು ಬಲು ದುಬಾರಿ ಬೆಲೆಯ ಹೈಡ್ರೋಫ್ಲೋರೋ ಇಂಗಾಲಗಳನ್ನು ಬಳಸುವ ಬದಲಿಗೆ ಹೈಡ್ರೋಕ್ಲೋರೋಫ್ಲೋರೋ ಇಂಗಾಲಗಳನ್ನು ಬಳಸುವ ವಿನಾಯಿತಿ ಹೊಂದಿದ್ದವು. ಹೈಡ್ರೋಕ್ಲೋರೋಫ್ಲೋರೋ ಇಂಗಾಲಗಳು ಓಜೋನ್ ಪದರಕ್ಕೆ ಹಾನಿಯುಂಟು ಮಾಡದಿದ್ದರೂ ವಾತಾವರಣಕ್ಕೆ ಬಲು ಅಪಾಯಕಾರಿ. ಆದರೆ ಹೈಡ್ರೋಕ್ಲೋರೋಫ್ಲೋರೋ ಇಂಗಾಲಗಳ ಪೇಟೆಂಟ್‌ನ್ನು ಶ್ರೀಮಂತ ರಾಷ್ಟ್ರಗಳೇ ಹೊಂದಿದ್ದರಿಂದ ಇದರಿಂದಲೂ ಲಾಭ ಗಳಿಸುತ್ತಿದ್ದವು. 

ಮಾಂಟ್ರಿಯಲ್ ಒಪ್ಪಂದದ ಪ್ರಕಾರ ೨೦೧೩ ಮತ್ತು ೨೦೩೦ ರ ನಡುವೆ ಭಾರತದಂತ ದೇಶಗಳು ಹೈಡ್ರೋಫ್ಲೋರೋ ಇಂಗಾಲಗಳನ್ನು ನಿಧಾನವಾಗಿ ಬದಲಿಸುತ್ತಾ ಪೂರ್ಣವಾಗಿ ಹೈಡ್ರೋಫ್ಲೋರೋ ಇಂಗಾಲಗಳನ್ನು ಬಳಸಬೇಕು. 

ಆದರೆ, ಅಮೇರಿಕಾ ಮೂಲದ ಕಂಪನಿಗಳಾದ ಡ್ಯುಪಾಂಟ್ ಮತ್ತು ಹನಿವೆಲ್ ಹಾಗೂ ಜಪಾನ್ ಮೂಲದ ಡೈಚಿ ಸಾಂಕ್ಯೋ ಕಂಪನಿಗಳು ಜಂಟಿ ಪೇಟೆಂಟ್  ಹೊಂದಿರುವ ಪರ್ಯಾಯ ಅನಿಲವನ್ನು ಭಾರತ ಬಳಸಬೇಕೆಂದು ಅಮೇರಿಕಾ ಒತ್ತಾಯಿಸುತ್ತಿದೆ. ಅದೂ, ಹೈಡ್ರೋಫ್ಲೋರೋ ಇಂಗಾಲಗಳನ್ನು ಕೂಡ ಬಳಸದೇ!

ಹವಾಮಾನದ ಬದಲಾವಣೆ ಕುರಿತ ವಿಶ್ವಸಂಸ್ಥೆ ಚೌಕಟ್ಟುಗಳ ಒಪ್ಪಂದದ ಪ್ರಕಾರ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಪರಿಸರ-ಸ್ನೇಹಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಶ್ರೀಮಂತ ರಾಷ್ಟ್ರಗಳು ಸಹಕರಿಸಬೇಕು. ಏಕೆಂದರೆ, ಪರಿಸರ-ಸ್ನೇಹಿ ತಂತ್ರಜ್ಞಾನಗಳ ಪೇಟೆಂಟ್ ವೆಚ್ಚ ಬಲು ದುಬಾರಿಯಾಗಿದ್ದು ಅವು ಶ್ರೀಮಂತ ರಾಷ್ಟ್ರಗಳ ಹಿಡಿತದಲ್ಲಿವೆ. 

ಭಾರತದ ಮಾರುಕಟ್ಟೆಯು ಶೀತಲೀಕರಣ ಉಪಕರಣಗಳನ್ನು ಬಳಸುವಲ್ಲಿ ತ್ವರಿತವಾಗಿ ಬೆಳೆಯುತ್ತಿದೆ. ಇದರ ಲಾಭ ಪಡೆಯಲು ಅಮೇರಿಕಾದ ಕಂಪನಿಗಳು ಹವಣಿಸುತ್ತಿವೆ.

ಅಲ್ಲದೆ, ಇಂಗಾಲದ ಡೈ ಆಕ್ಸೈಡ್ ವಾತಾವರಣಕ್ಕೆ ಉಂಟುಮಾಡುತ್ತಿರುವ ಹಾನಿಗೆ ಹೋಲಿಸಿದರೆ ಶೀತಲೀಕರಣದ ಅನಿಲಗಳ ಆಯಸ್ಸು ವಾತಾವರಣದಲ್ಲಿ ಬಲು ಕಡಿಮೆ. ಆದರೆ ಇಂತಹ ಅನಿಲಗಳ ಬಳಕೆಯು ದೊಡ್ಡ ಪ್ರಮಾಣದಲ್ಲಾಗುತ್ತಿರುವುದರಿಂದ ವಾತಾವರಣದ ಮೇಲೆ ಇವುಗಳ ದುಷ್ಪರಿಣಾಮ ಬಲು ಹೆಚ್ಚು. 

ಈ ರೀತಿ ಅವಧಿಗೂ ಮುನ್ನವೇ ಹೈಡ್ರೋಫ್ಲೋರೋ ಇಂಗಾಲಗಳ ಬಳಕೆಯನ್ನು ರದ್ದುಪಡಿಸುವ ಮೂಲಕ ಅಮೇರಿಕಾ ಮತ್ತು ಇತರೆ ಕೈಗಾರಿಕಾ ದೇಶಗಳು ತಮ್ಮ ಹೊರೆಯನ್ನು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮೇಲೆ ವರ್ಗಾಯಿಸಲು ಹವಣಿಸುತ್ತಿವೆ. 

ಸದ್ಯ ಅಮೇರಿಕಾ ಪ್ರವಾಸದಲ್ಲಿರುವ ನಮ್ಮ ಪ್ರಧಾನಿ ಮನ ಮೋಹನ್ ಸಿಂಗ್ ರವರು ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸುವರೋ ನೋಡಬೇಕು. 

 -ಜೈಕುಮಾರ್

 ಭಾರತ ಜ್ಞಾನ ವಿಜ್ಞಾನ ಸಮಿತಿ

**************

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
10 years ago

ಪ್ರತಿ ಹೆಜ್ಜೆಯಲ್ಲೂ ಅಮೇರಿಕಾದ ಕುಟಿಲ ನೀತಿ ಪ್ರಪಂಚದ ಎಲ್ಲಾ ದೇಶಗಳನ್ನೂ ಹಾಳು ಮಾಡುತ್ತಿದೆ. ಲೇಖನ ಚೆನ್ನಾಗಿ ಬಂದಿದೆ. ಧನ್ಯವಾದಗಳು

1
0
Would love your thoughts, please comment.x
()
x