ಒಗ್ಗರಣೆ: ಅನಿತಾ ನರೇಶ್ ಮಂಚಿ

ಮಿಕ್ಸಿಯೊಳಗೆ ಅಕ್ಕಿ ಮತ್ತು ಉದ್ದಿನಬೇಳೆಗಳು ಮರುದಿನದ ಇಡ್ಲಿಗಾಗಿ ಯಾವುದೇ ಡಯಟ್ ಮಾಡದೇ ಸಣ್ಣಗಾಗುತ್ತಿದ್ದವು. ನನ್ನ ಮಿಕ್ಸಿಯೋ .. ಹೊರಗೆ ಸೂಪರ್ ಸೈಲೆಂಟ್ ಎಂದು  ಕೆಂಪು ಪೈಂಟಿನಲ್ಲಿ ಬರೆಯಲ್ಪಟ್ಟದ್ದು. ಅದು ಎಂತಹ ಮೌನಿ ಎಂದರೆ ಪಕ್ಕದಲ್ಲಿ ಬಾಂಬ್ ಸ್ಪೋಟವಾದರೂ ಅದರ ಸದ್ದಿಗೆ ಕೇಳುತ್ತಿರಲಿಲ್ಲ. ಇದರಿಂದಾಗಿ ನೂರು ಮೀಟರ್ ದೂರದಲ್ಲಿದ್ದ ಪಕ್ಕದ ಮನೆಯವರಿಗೂ ಬೆಳಗ್ಗಿನ ತಿಂಡಿಗೆ ನಾನು ಚಟ್ನಿ ಮಾಡದಿದ್ದರೆ ತಿಳಿದುಬಿಡುತ್ತಿತ್ತು. ಇದರ ಸದ್ದಿಗೆ ಪ್ರಪಂಚದ ಉಳಿದೆಲ್ಲಾ ಸದ್ದುಗಳು ಮೌನವಾಗಿ ಹೊರಗಿನಿಂದ ಇವರು ಒಂದು ಗ್ಲಾಸ್ ಕಾಫೀ ಎನ್ನುವುದೋ , ಮಗ ಅಮ್ಮಾ ಈ ಶರ್ಟಿಗೆ ಇಸ್ತ್ರಿ ಎನ್ನುವುದೋ ಕೇಳಿಸದೇ ಇರುವುದು ಮತ್ತು ಈ ಭೂಕಂಪದ ಪಶ್ಚಾತ್  ಕಂಪನಗಳಾಗುವ ಅವರ ಗೊಣಗಾಟಗಳು ನನ್ನ ಕಿವಿ ಸೇರದೆ ನಾನು ನಿಶ್ಚಲ ನಿರ್ಮಲ ಆನಂದಸಾಗರಲ್ಲಿ ತೇಲಾಡುತ್ತಿರುತ್ತಿದ್ದೆ. 

ಇಂತಿರ್ಪ ಸಮಯದಲ್ಲೇ ಮಿಕ್ಸಿ ನಿಲ್ಲಿಸಿ ಈ ಲೋಕದ ಶಬ್ದ ವ್ಯಾಪಾರಕ್ಕೆ ನಾನು ತಲುಪಿದೊಡನೆಯೇ ನನ್ನ ಗಮನಕ್ಕೆ ಬಂದುದು ನನ್ನ ಮೊಬೈಲಿನೊಳಗೆ ಬಂದು ಬಿದ್ದಿದ್ದ ಗೆಳತಿಯೋರ್ವಳ ಹದಿನೆಂಟನೇ ಮಿಸ್ ಕಾಲ್ ಮತ್ತು ಮೂವತ್ತೈದು ಮೆಸೇಜುಗಳು. ಇಷ್ಟು ಸಲ ನನ್ನನ್ನು ಸಂಪರ್ಕಿಸುವ ತೊಂದರೆ ತೆಗೆದುಕೊಂಡಿದ್ದಾಳೆ ಎಂದರೆ ಏನೋ ಭಯಂಕರವಾದದ್ದೇ ಘಟಿಸಿರಬೇಕು ಎಂದುಕೊಂಡು ಅವಳ ನಂಬರಿಗೆ ಕಾಲ್ ಮಾಡಿದೆ. ನಮ್ಮ ಮನೆಯ ಬಾಗಿಲಿನ ಬಳಿಯೇ ಮೊಬೈಲೊಂದು ರಿಂಗಾಗುವುದರ ಜೊತೆ ಜೊತೆಗೆ ಗೆಳತಿಯು ಒಳ ನುಗ್ಗಿದ್ದಳು. 

ಅಲ್ಲಾ..  ಅಷ್ಟು ಹೊತ್ತಿನಿಂದ ನಿನ್ನ ಮೊಬೈಲ್ ಟ್ರೈ ಮಾಡ್ತಾ ಇದ್ದೀನಿ ಎಲ್ಲಿ ಹಾಳಾಗಿ ಹೋಗಿದ್ದೆ? ನಂಗ್ಯಾಕೋ ಗಾಬರಿಯಾಗಿ ಯಾವ್ದಕ್ಕೂ ಇರ್ಲಿ ಅಂತ ಬಿಳಿ ಡ್ರೆಸ್ ಹಾಕ್ಕೊಂಡು ಬಂದು ಬಿಟ್ಟೆ. ನನ್ನ ಕರ್ಮ.. ನೀನು ನೋಡಿದರೆ ಒಳ್ಳೇ ಕಲ್ಲುಗುಂಡಿನ ಹಾಗಿದ್ದೀಯಾ..! ಅನ್ಯಾಯವಾಗಿ ಈ ಬಟ್ಟೇನ ನಿರ್ಮ ಹಾಕಿ ತೊಳೆಯುವಂತೆ ಮಾಡಿದೆಯಲ್ಲೇ.. ಅಂತ ಬೇಸರಪಟ್ಟುಕೊಂಡಳು.

ಆಹಾ ನನ್ನ ಅಹೋಭಾಗ್ಯವೇ .. ! ಹೀಗೆ ಹಾರೈಸುವ ಗೆಳತಿ ಸಿಕ್ಕಿದ್ದು ನನ್ನ ಪೂರ್ವಾರ್ಜಿತ ಕರ್ಮಫಲವೇ ಇರಬಹುದೇನೋ ಎಂದು ಚಿಂತಿಸುತ್ತಾ ಏನೂ ಇಲ್ಲಾ ಕಣೇ ಮಿಕ್ಸಿ ಹಾಕಿದ್ದೆ ಎಂದೆ. ಅವಳು ಕೂಡಲೇ ನನ್ನ ಇದುವರೆಗಿನ ಮೌನದ ಕಾರಣ ಅರ್ಥಮಾಡಿಕೊಂಡಳು.
ಅಯ್ಯೋ .. ಆ ಓಬೀರಾಯನ ಕಾಲದ ಮಿಕ್ಸಿಯನ್ನು ಇನ್ನೂ ಇಟ್ಟುಕೊಂಡಿದ್ದೀಯಲ್ಲಾ.. ಏನೆನ್ನಬೇಕು ನಿನ್ನ ಬುದ್ಧಿಗೆ ಎಂದು ಬಯ್ದಳು. 

ಅದೆಲ್ಲಾ ಬಿಡು.. ಈಗ್ಯಾಕೆ ನನಗೆ ಅಷ್ಟೊಂದು ಮೆಸೇಜು, ಕಾಲ್  ಎಲ್ಲಾ ಮಾಡಿದ್ದು ಅದನ್ನು ಹೇಳು ಮೊದಲು ಎಂದೆ.
ಹೂಂ.. ಅದನ್ನು ಹೇಳಲೆಂದೇ ಇಲ್ಲೀವರೆಗೆ ಬಂದಾಗಿದೆಯಲ್ಲ.. ಇನ್ನು ಹೇಳದೆ ಇರ್ತೀನಾ.. ಒಂದಿಷ್ಟು ಕಾಫಿನೋ,ಕಲಗಚ್ಚೋ ಏನಾದ್ರು ಕೊಡು ತಾಯಿ.. ಅವಸರದಿಂದ ಬಂದು ಗಂಟಲೆಲ್ಲಾ ಆರಿಹೋಗಿದೆ.. ಎನ್ನುತ್ತಾ ಕುರ್ಚಿಯ ಮೇಲೆ ಕುಳಿತು ಮೇಲೆ ಫ್ಯಾನ್ ತಿರುಗುತ್ತಿದ್ದರೂ ಸೆರಗಿನಿಂದ ಗಾಳಿ ಹಾಕಿಕೊಂಡಳು.
ಅತಿಥಿ ಸತ್ಕಾರದ ಪ್ರಾಥಮಿಕ ಸೇವೆಯನ್ನು ಮುಗಿಸಿ ನಾನು ಅವಳ ಬಳಿ ಕುಕ್ಕರಿಸಿದೆ. 
ಒಗ್ಗರಣೆ ನೋಡಿದ್ದೀಯಾ ಅಂದಳು. 
ಹುಂ.. ಅಂದೆ.. 
ಅಯ್ಯೋ.. ಪಾಪಿ ಕಣೇ ನೀನು ..ನನ್ನ ಬಿಟ್ಟು ಒಬ್ಳೇ ನೋಡಿದೆ ಅಲ್ವಾ.. ಅಂದ್ಲು.
ಆಗ ನನ್ನ ಪೆದ್ದುಮಂಡೆಯ ಒಳಗೂ ಬುದ್ಧಿ ಎಂಬುದಿನಿತು ಇಣುಕಿದ ಕಾರಣ ಇವಳು ಹೊಸ ಪಿಕ್ಚರ್ ಸುದ್ದಿ ಹೇಳ್ತಿದ್ದಾಳೆ ಅಂತ ಹೊಳೆಯಿತು. ಹ್ಹೇ.. ಅದಿನ್ನೂ ನೋಡಿಲ್ಲ ಕಣೇ.. ನಾನು ಹೇಳಿದ್ದು ಅಡುಗೆ ಮನೇಲಿ ದಿನಾ ಹಾಕ್ತೀವಲ್ಲ, ಸಾಸಿವೆ, ಇಂಗು, ಮೆಣಸು.. 
ಆ ಒಗ್ಗರಣೆ ನಂಗೂ ಗೊತ್ತಿದೆ ಕಣೇ.. ಅದನ್ನಿನ್ನು ನಳಮಹಾರಾಜನ ವಂಶಸ್ಥಳಂತೆ ಉದ್ದ ಎಳೀತಾ ಹೇಳಬೇಡ ಎಂದು  ನನ್ನ ಮಾತು ಮುಂದುವರಿಯದಂತೆ ಮೊದಲೇ ಕತ್ತರಿಸಿ ಹೇಳಿದಳು.

ನೋಡು ನಾಳೆ ಮಧ್ಯಾಹ್ನದ ಶೋಗೆ ಹೋಗೋಣ..  ಸರಿಯಾಗಿ ಹನ್ನೆರಡು ಕಾಲಿಗೆ ನಾನು ನಿಮ್ಮ ಮನೆ ಅಂಗಳದಲ್ಲಿ ರೆಡಿ ಆಗಿರ್ತೀನಿ. ಬೇಗ ಬೇಗ ನಿನ್ನ ಕೆಲ್ಸ ಮುಗ್ಸಿರು.. ಆಮೇಲೆ ಅದು ಮರ್ತೆ ಇದು ಮರ್ತೆ ಅನ್ಬೇಡ.. ನನ್ನ ಗಾಡಿಯಲ್ಲೇ ಬರ್ತೀನಿ ಅಂದಳು. 
ಬೇಡ ಕಣೇ.. ಮೊನ್ನೆಯಷ್ಟೇ ನನ್ನ ಹಳೇ ಇನ್ಷೂರೆನ್ಸ್ ಅವಧಿ ಮುಗಿದು ಹೋಯ್ತು. ಹೊಸದಾಗಿ ಇನ್ನೊಂದು ಮಾಡ್ಬೇಕಷ್ಟೇ.. ಈ ನಡುವಿನಲ್ಲಿ ಬಿಟ್ಟಿಯಾಗಿ ಪ್ರಾಣ ಕಳೆದುಕೊಳ್ಳಲು ನಂಗಿಷ್ಟ ಇಲ್ಲ.. ಬಸ್ಸಲ್ಲೇ ಹೋಗೋಣ ಬಿಡು.. ಎಂದೆ. 

ಸರಿ.. ಹಾಗಿದ್ರೆ ಹನ್ನೊಂದೂವರೆ ಬಸ್ಸಲ್ಲೇ ಹೋಗೋಣ ಆಮೇಲೆ ಲೇಟ್ ಆದ್ರೆ ಕಷ್ಟ.. ಅಂತ  ಹೇಳಿ ನಡೆದಳು. 
ಮರುದಿನದ ಸಂಭ್ರಮಕ್ಕೆ ರಾತ್ರಿ ಇಡೀ ನಿದ್ದೆ ಸುಳಿಯಲಿಲ್ಲ. ಬೇಗ ಹೊರಡಬೇಕು. ಅದರ ಮೊದಲು ಮನೆ ಕೆಲಸ ಪೂರೈಸಿ, ಕೆಲಸದವರ ತಿಂಡಿ ಚಹಾ ಊಟ ಎಲ್ಲದಕ್ಕೂ ವ್ಯವಸ್ಥೆ ಮಾಡಿ ಹೊರಡಬೇಡವೇ..? ಯೋಚಿಸುತ್ತಾ ಮಲಗಿದವಳಿಗೆ  ಬೆಳಗ್ಗಿನ ಜಾವ ಕಣ್ಣಿಗೆ ಸರೀ ನಿದ್ರೆ ಹತ್ತಿತೇನೋ .. ಏಳುವಾಗಲೇ ಸೂರ್ಯ ಮನೆಯೊಳಗೆ ಬಂದಾಗಿತ್ತು. 
ದಡಬಡ ಮಾಡಿ ಕೆಲಸ ಮುಗಿಸಿ ಮನೆಯವರನ್ನೆಲ್ಲಾ ಸಾಗ ಹಾಕಿ  ಗೆಲುವಿನ ನಗು ನಗುವಾಗ ಮೇಲಿನ ಮನೆ ರಾಘು ಮಾವ ಹಾಜರು ಹಾಕಿದರು. ನಮ್ಮನೆ ಪೇಪರ್ ಓದಿ ನನಗೇ ಸುದ್ದಿ ಹೇಳಿ, ಅದರ ಜೊತೆಗೆ ಅವರ ಮನೆ ಪೇಪರಿನಲ್ಲಿ ಈ ಪೇಪರಿಗಿಂತ ಹೇಗೆ ಸುದ್ದಿಗಳನ್ನು ಚೆನ್ನಾಗಿ ಹಾಕ್ತಾರೆ ಅಂತೆಲ್ಲ ವಿವರಿಸತೊಡಗಿದರು.

 ಅವರು ಬೇಗ ಹೋಗಲಿ ಎಂದು ಕಾಫಿ ಮತ್ತು ಹಲಸಿನ ಚಿಪ್ಸನ್ನು ತಂದಿಟ್ಟೆ.  ಆಗೊಮ್ಮೆ ಈಗೊಮ್ಮೆ ಗಡಿಯಾರ ನೋಡುತ್ತಾ ಮುಳ್ಳಿನ ಮೇಲೆ ನಿಂತವರಂತೆ ಚಡಪಡಿಸುತ್ತಿದ್ದ ನನ್ನನ್ನು ಆಗ ತಾನೇ ಗಮನಿಸಿದವರಂತೆ ಎಲ್ಲಾದ್ರೂ ಹೊರಟಿದ್ದೀಯಾ ಎಂದರು.  ಪಿಕ್ಚರಿಗೆ ಹೊರಟಿದ್ದು ಅಂತ ಅವರಿಗೆಲ್ಲಾದರೂ ಅಪ್ಪಿ ತಪ್ಪಿ ಬಾಯ್ಬಿಟ್ಟರೆ ಮೊದಲಿನ ಪಿಕ್ಚರ್ ಗಳು ಈಗಿನ ಪಿಕ್ಚರುಗಳಿಗಿಂತ ಹೇಗೆ ಭಿನ್ನ ಎಷ್ಟು ಚೆನ್ನ ಅಂತ ಇನ್ನರ್ಧ ಗಂಟೆ ಕ್ಲಾಸ್ ತೆಗೆದುಕೊಂಡಾರೆಂಬ ಭಯದಲ್ಲಿ ಹುಂ.. ಸ್ವಲ್ಪ ಹೊರಗಡೆ ಹೋಗಬೇಕಿದೆಎಂದೆ. 

ಹೌದೇನಮ್ಮಾ. ಆಗ್ಲೇ ಹೇಳ್ಬಾರ್ದಾ.. ಅಂತ ಗೊಣಗುತ್ತಾ ನಾನು ಆಗಲೇ ತಂದಿರಿಸಿ ತಣ್ಣಗಾದ ಕಾಫಿಯನ್ನು ಒಂದೇಟಿಗೆ ಗಂಟಲಿಗೆ ಎರೆದುಕೊಳ್ಳುತ್ತಾ, ಕೈಯಲ್ಲಿದ್ದ ಪೇಪರಿನ ಸಿನಿಮಾ ಪೇಜನ್ನು ಹಿಡಿದು ಇದು ಯಾರೂ ಓದೋದಿಲ್ಲ ತಾನೇ.. ಅಂತ ಹೇಳಿ ಅದಕ್ಕೇ  ಹಲಸಿನ ಕಾಯಿ ಚಿಪ್ಸನ್ನು ಹಾಕಿ ಮುದ್ದೆ ಮಾಡಿ ಕಿಸೆಗೆ ಹಾಕಿಕೊಂಡು ಹೊರಟರು.
ಆಗಲೇ ನನಗೆ ಬಹುದೊಡ್ಡ ಸಮಸ್ಯೆಯೊಂದು ಎದುರಾದದ್ದು. ಅದು ಏನಪ್ಪಾ ಅಂದ್ರೆ ಸಿನೆಮಾ ನೋಡಲು ಹೋಗುವಾಗ ಸೀರೆ ಉಡೋದಾ, ಚೂಡಿದಾರವೋ ಅನ್ನೋದು..
ಕೂಡಲೇ ಪ್ರಿಯ ಗೆಳತಿಗೆ ಫೋನ್ ಮಾಡಿ ಕೇಳಿದೆ. ಕರ್ಮ ಕಣೇ ಇನ್ನು ಹೊರಟಾಗಿಲ್ವಾ.. ನಾನಾಗ್ಲೆ ನಿಮ್ಮ ಮನೆ ಗೇಟ್ ಹತ್ರ ಬರ್ತಾ ಇದ್ದೀನಿ, ಏನಾದ್ರು ಒಂದು ಹಾಕ್ಕೋ ತಾಯಿ ಹಾಗೇ ಬಂದು ನನ್ನ ಮಾನ ಕಳೀಬೇಡ .. ಮೊದ್ಲು ಹೊರಡು ಅಂತ ನನ್ನ ಸೌಂದರ್ಯ ಪ್ರಜ್ಞೆಯನ್ನು ಒಂದಿಷ್ಟೂ ಲೆಕ್ಕಿಸದೆ ಜಾಡಿಸಿದಳು.ಸರಬರ ಸದ್ದು ಮಾಡುತ್ತಾ ಒಳ ಬಂದ ಅವಳನ್ನು ನೋಡಿದರೆ ಮುಂದಲೆಬೊಟ್ಟು, ಮಂಗಳೂರು ಮಲ್ಲಿಗೆಯ ಜಡೆ ಅಲಂಕಾರ ಇವಿಷ್ಟು ಮಾಡಿಬಿಟ್ರೆ ಮದುಮಗಳೇ ಆಗುತ್ತಿದ್ದಳೇನೋ.. ಅಷ್ಟು ಚೆನ್ನಾಗಿ ಅಲಂಕರಿಸಿಕೊಂಡು ಬಂದಿದ್ದಳು.
ಅರ್ರೇ.. ನಂದಿನ್ನೂ ತಿಂಡಿ ಕೂಡಾ ಆಗಿಲ್ಲ.. ನಿಲ್ಲೇ ಅಂದೆ.

ಕರ್ಮ ಕರ್ಮ, ನಿನ್ನನ್ನು ಅದು ಏನೂಂತಾ ಹೆಣ್ಣಾಗಿ ಭಗವಂತ ಸೃಷ್ಟಿ ಮಾಡಿದ್ದಾನೋ..ಒಂದಿಷ್ಟು ಟೈಮ್ ಸೆನ್ಸ್ ಇಲ್ವಲ್ಲೇ ನಿಂಗೆ .. ನಾನಾಗ್ಲೇ ಊಟ ಕೂಡಾ ಮುಗಿಸಿ ಬಂದೆ.. ನೋಡೇ..ಒಂದಿನ ನೀನು ಊಟ ತಿಂಡಿ ಎಲ್ಲಾ ಮಾಡದಿದ್ರೆ ಸತ್ತುಗಿತ್ತು ಹೋಗೋದಿಲ್ಲ ಬಿಡು. ಅಲ್ಲೇ ಏನಾದ್ರು ನುಂಗಿದ್ರಾಯ್ತು ಹೊರಡು ಅಂತ ಅವಸರ ಮಾಡಿದಳು.
ಸುಮ್ನಿರೇ ಸ್ವಲ್ಪ… ಹುಟ್ಟಿದ ಮೇಲೆ ಸಿನಿಮಾ ನೋಡದಿರುವವರ ತರ ಮಾಡ್ಬೇಡ ನಿಲ್ಲು. ಒಂದಿಷ್ಟು ಇಡ್ಲಿ ಸಾಂಬಾರ್ ಚಟ್ನಿ ಡಬ್ಬಕ್ಕೆ ಹಾಕ್ಕೊಳ್ತೀನಿ. ಮೊನ್ನೆ ಮಾಡಿದ ಚಕ್ಕುಲಿ, ಚಿಪ್ಸ್ ಇನ್ನೊಂದು ಕವರ್ ಗೆ.. ನಿನ್ನೆ ರಾತ್ರೆ ಇವ್ರು ಬರುವಾಗ ತುಪ್ಪದಲ್ಲೇ ಮಾಡಿದ ಮೈಸೂರ್ ಪಾಕ್ ತಂದಿದ್ದಾರೆ.ಅದೊಂದು ನಾಲ್ಕು ತುಂಡು. ಇನ್ನು  ಅದನ್ನು ಬರೀ  ಕೈಯಲ್ಲಿ ಹಿಡಿದುಕೊಂಡು ತಿನ್ನಕ್ಕಾಗುತ್ತೇನೇ..  ಹಾಳೆ ತಟ್ಟೆ ನಾಲ್ಕು, ಮತ್ತೆರಡು ಲೀಟರ್ ನೀರಿನ ಬಾಟಲ್ ಇವಿಷ್ಟು ತೆಗೊಂಡ್ಬಿಡ್ತೀನಿ ಅಂತ ಅದನ್ನೆಲ್ಲಾ ತುಂಬಿಸಿಕೊಂಡು ಅವಳ ಜೊತೆ ಹೊರಟೆ.

  ಒಮ್ಮೊಮ್ಮೆ ನಾವೆಷ್ಟೇ ಸರಿ ಇದ್ದರೂ ದೈವ ಮುನಿಯುತ್ತದೆ ನೋಡಿ. ಹಾಗೇ ಆಯ್ತು ನಮ್ಮ ಕಥೆ.  ನಾವು ಹೋಗಬೇಕೆಂದಿದ್ದ ಬಸ್ಸು ಕಾಣ ಕಾಣುತ್ತಿದ್ದಂತೇ ಹೋಗಿಯೇ ಬಿಟ್ಟಿತು. ಹಳ್ಳಿಯಾದ್ದರಿಂದ ಮತ್ತಿನ ಬಸ್ಸು ಬರಲು ಇನ್ನರ್ಧ ಗಂಟೆ ಇತ್ತು. ಅದರಲ್ಲಿ ಕಾಲು ಗಂಟೆ ನನ್ನಿಂದಾಗಿ ಬಸ್ಸು ತಪ್ಪಿ ಹೋದುದಕ್ಕೆ ಗೆಳತಿಯ ಬೈಗುಳದ ಪುಷ್ಪಾರ್ಚನೆಯಾಯ್ತು. ಮತ್ತಿನ ಕಾಲು ಗಂಟೆ ಕೈಕಾಲು ಸುಟ್ಟ ಬೆಕ್ಕಿನಂತೆ ಖಾಲಿ ರಸ್ತೆಯಲ್ಲೇ ಅತ್ತಿತ್ತ ಹೋಗುತ್ತಾ ಬಸ್ಸನ್ನು ಕಾದಳು. ನಾನು ಆರಾಮದಲ್ಲಿ ತಂಗುದಾಣದ ನೆರಳಲ್ಲಿ ಕುಳಿತು ಬೆಳಗ್ಗಿನೆಲ್ಲಾ ದಾವಂತಗಳಿಂದ ಆದ ಉದ್ವೇಗವನ್ನು ಶಮನಗೊಳಿಸಿದೆ. ಅಷ್ಟರಲ್ಲಿ ದೂಳೆಬ್ಬಿಸುತ್ತಾ ಬಸ್ಸು ಬಂದು ನಮ್ಮ ಕಾಲಬುಡದಲ್ಲಿ ಬ್ರೇಕ್ ಹಾಕಿತು. ಹತ್ತಿ ಕುಳಿತೆವು.

ನಾನು ಕಿಟಕಿಯ ಹೊರಗೆ ಕಣ್ಣು ಹಾಯಿಸಿ ಪಕ್ಕದಲ್ಲಿ ವೇಗವಾಗಿ ಸಾಗುವ  ಹೊಸ ಮೋಡೆಲ್ ಕಾರು, ಬೈಕುಗಳನ್ನು ನೋಡುತ್ತಾ ಅದರ ಹೆಸರು ನೆನಪಿಟ್ಟುಕೊಳ್ಳುವ ಕೆಲಸದಲ್ಲಿದ್ದರೆ, ನನ್ನ ಗೆಳತಿ ನಿಧಾನಕ್ಕೆ ಹೋಗುವ ಬಸ್ಸನ್ನು ಶಪಿಸುತ್ತಾ ಕುಳಿತಿದ್ದಳು. ಇದ್ದಕ್ಕಿದ್ದಂತೆ ಡ್ರೈವರ್ ಹಾಕಿದ ಬ್ರೇಕಿಗೆ ನಾವಿಬ್ಬರೂ ಮುಂದಕ್ಕೆ ತಲೆ ಬಡಿದುಕೊಂಡು ಹಿಂದಕ್ಕೆ ಚಿಮ್ಮಿ ಕುಳಿತೆವು. 
 ಕಿಟಕಿಯ ಪಕ್ಕ ಕುಳಿತಿದ್ದೆನಾದ್ದರಿಂದ ತಲೆ ಹೊರ ಹಾಕಿ ನೋಡಿದೆ. ಹನುಮಂತನ ಬಾಲದಂತಿದ್ದ  ವಾಹನಗಳ ಸಾಲು ಕಾಣಿಸಿತು. ಗೆಳತಿಗೂ ಅದನ್ನು ಹೇಳಿದೆ. ವಾಚಿನಲ್ಲಿ ಗಂಟೆ ನೋಡಿದರೆ ಸಿನಿಮಾ ಶುರು ಆಗಲು ಇನ್ನು ಹತ್ತು ನಿಮಿಷ ಉಳಿದಿತ್ತು. ಇದ್ದಕ್ಕಿದ್ದಂತೆ ಎದ್ದ ಗೆಳತಿ ನನ್ನ ಕೈ ಹಿಡಿದುಕೊಂಡು ಬಸ್ಸಿನಿಂದ ಕೆಳಗಿಳಿದು ಸ್ವಲ್ಪ ಬೇಗ ಬೇಗ ಹೆಜ್ಜೆ ಹಾಕಿ ನಡಿ.ಇಲ್ಲಾಂದ್ರೆ ಇಂಟರ್ ವಲ್ ಹೊತ್ತಿಗೆ ತಲುಪುತ್ತೀವಿ ಅಷ್ಟೇ ಎಂದು ರಭಸದಿಂದ ಹೆಜ್ಜೆ ಹಾಕಿದಳು. ನನಗೂ ಅವಳ ಹತ್ತಿರ ಬಯ್ಯಿಸಿಕೊಂಡು ಸಾಕಾಗಿದ್ದ ಕಾರಣ ಮೌನವಾಗಿ ಅವಳ ಜೊತೆ ಸಾಗಿದೆ. ಏದುಸಿರುಬಿಡುತ್ತಾ ಬೆವರಿಳಿಸುತ್ತಾ ಥಿಯೇಟರ್ ತಲುಪಿ ಎರಡು ಬಾಲ್ಕನಿ ಟಿಕೆಟ್ ಕೊಡಿ ಎಂದಾಗ ನಿಜಕ್ಕೂ ನಮ್ಮ ಮುಖ ನೋಡಿದ್ದರೆ ಮೇಲಿನ ಲೋಕಕ್ಕೆ ಹೋಗಲು ಟಿಕೆಟ್ ತೆಗೆದುಕೊಳ್ಳುವವರಂತೆ ಕಾಣುತ್ತಿದ್ದೆವು. 

ಏ ಸಿ ಥಿಯೇಟರ್ ನ ಕತ್ತಲ ಕೋಣೆಯೊಳಗೆ ನಮ್ಮನ್ನು ಟಾರ್ಚ್ ಹಾಕಿ ನಮ್ಮ ಕುರ್ಚಿ ತೋರಿಸಿ ಒಳ ಬಿಟ್ಟರು. ಇಡೀ ಬಾಲ್ಕನಿಯಲ್ಲಿ ಇದ್ದ ಮೂವತ್ತು ಸೀಟಿನಲ್ಲಿ ಇಪ್ಪತ್ತೆಂಟು ಖಾಲಿ.ಅದೂ ನಾವು ಬಂದ ಮೇಲೇ ಉಳಿದೆರಡು ಭರ್ತಿಯಾಗಿದ್ದು. ಅಬ್ಬಾ ಎನ್ನುವ ಪದ ಅನಾಯಾಸವಾಗಿ ಬಾಯಿಯಿಂದ ಹೊರಬಂತು.  ಅಕ್ಕಪಕ್ಕದವರು ನಾನು ತಂದ ತಿಂಡಿಗೆ ಪಾಲುದಾರರಾಗೋದು ತಪ್ಪಿತು ಅನ್ನುವ ಸಂತಸದ ಉದ್ಗಾರವದು.  ನಾವು ಕುರ್ಚಿಗೆ ಅಂಟಿಕೊಳ್ಳುತ್ತಿರುವಾಗಲೇ ಒಗ್ಗರಣೆ ಹಾಕಿದ ಉಪ್ಪಿಟ್ಟು ತೋರಿಸುತ್ತಾ ಇದ್ದರು ಸಿನಿಮಾದಲ್ಲಿ. ಅದನ್ನು ನೋಡಿದವಳೇ ನನ್ನ ಗೆಳತಿ ಇದೇನು ಅಂತ  ಈ ರೀತಿಯ ಉಪ್ಪಿಟ್ಟು  ತೋರಿಸ್ತಾರೆ.. ಸ್ವಲ್ಪ ಕೊತ್ತಂಬರಿ ಸೊಪ್ಪು, ಗ್ರೀನ್ ಫೀಸ್ ಕ್ಯಾರೆಟ್ ಟೊಮೇಟೋ ಎಲ್ಲಾ ಹಾಕಿ ಕಲರ್ಫುಲ್ಲಾಗಿ ತೋರಿಸೋದಲ್ವೇ.. ಅಂದು ಕೊಂಕೆತ್ತಿದಳು. 
ನನಗ್ಯಾಕೋ ಅಲ್ಲಿಯವರೆಗೆ ನೆನಪಿನಲ್ಲೇ ಇಲ್ಲದ ಹಸಿವು ಈಗ ಬಗ್ಗೆಂದು ಎದ್ದು ನಿಂತಿತು. ಗೆಳತಿಯ ಹತ್ರ ಕೇಳಿದೆ. ಈಗ ತಿಂಡಿ ಡಬ್ಬ ಓಪನ್ ಮಾಡ್ಲೇನೇ ಅಂತ. ಅದಕ್ಕವಳು.. ಇರೇ ಸ್ವಲ್ಪ .. ಇಂಟರ್ವಲ್ಲಿನವರೆಗಾದರೂ ತೆಪ್ಪಗೆ ಕೂತ್ಕೋ.. ಆಮೇಲೆ ಸಾಕು  ತಿಂಡಿ ತೀರ್ಥದ ಸೇವನೆ .. ನಾನು ಬೆಳಗ್ಗಿನ ತಿಂಡಿ ಜೊತೆಗೆ ಊಟನೂ ಮಾಡಿದ್ನಾ..ಈಗ ಹೊಟ್ಟೇಲಿ ಜಾಗಾನೇ ಇಲ್ಲ.. ಅಂತ ನನ್ನನ್ನು ಸುಮ್ಮನಿರಿಸಿದಳು.  

ಸ್ವಲ್ಪ ಹೊತ್ತಿನಲ್ಲೇ ಸಿನಿಮಾದಲ್ಲಿ ಬೋಂಡ, ಜಿಲೇಬಿ, ಇನ್ನು ನಾಲ್ಕಾರು ಬಗೆಯ ತಿಂಡಿಗಳ ದರ್ಶನ, ಮಾತ್ರವಲ್ಲ ಅದರದ್ದೇ ರುಚಿಯ ಬಗ್ಗೆ ಮಾತುಕತೆ, ಮತ್ತೆ ಹೀರೋಯಿನ್ ಬಂದ ಕೂಡಲೇ ಈ  ತಿಂಡಿಗಳ ಪಟ್ಟಿಗೆ ಕುಟ್ಟಿ ದೋಸೆ ಸೇರಿಕೊಂಡಿತು. ಆ ಹೆಸರೇ ನನ್ನ ಹಸಿವಿನಿಂದ ಬಳಲುತ್ತಿದ್ದ ನನ್ನ ಹೊಟ್ಟೆ ಹಿಂಡಿತು. ಯುದ್ಧವೀರನ ಹೆಂಡತಿ ಮಾಡುತ್ತಿದ್ದ ಕೇಕಿನ ವರ್ಣನೆಯಂತೂ ನನ್ನನ್ನು ಸೀಟಿನಿಂದ ಮೇಲೇಳಿಸಿಬಿಟ್ಟಿತು. 

 ಇನ್ನು ತಡೆಯಲು ಸಾಧ್ಯವೇ ಇಲ್ಲ ಅನ್ನುವ ಪರಿಸ್ಥಿತಿ. ಅಯ್ಯೋ .. ನಾನು ತಂದ ನಮ್ಮನೇಲೇ ಮಾಡಿದ ತಿಂಡಿ ತಿನ್ನೋಕೆ ಇವ್ಳ ಪರ್ಮಿಷನ್ ಯಾಕೆ ಅಂತಂದುಕೊಂಡು ಡಬ್ಬ ತೆರೆದೆ. ಆಹಾ ಘಮ್ಮನ್ನುವ ಪರಿಮಳ.. ಗೆಳತಿಯಂತೂ ಸಿನಿಮಾದೊಳಗೆ ಎಷ್ಟು ಮುಳುಗಿದ್ದಳು ಅಂದ್ರೆ ನನ್ನ ಪಕ್ಕೆಗೆ ತಿವಿದು ನೋಡೇ ಹೊಸ ಟಕ್ನಾಲಜಿ ಇದು.. ಅಲ್ಲಿ ನೋಡುವ ತಿಂಡಿಗಳ ಪರಿಮಳ ಡೈರೆಕ್ಟಾಗಿ ನಮ್ಮ ಮೂಗಿಗೆ ಬರುವಂತೆ ಮಾಡ್ತಿದ್ದಾರೆ.. ಏನೆಲ್ಲಾ ಮಾಡ್ತಾರಪ್ಪ ಈಗಿನ ಜನಗಳು  ಅಂದಳು. 
ಅಷ್ಟರಲ್ಲಿ ಹಿಂದಿನಿಂದ ಬಾಗಿಲು ಕಿರ್ರೆಂದಿತು. ಯಾರೋ ನನ್ನಂತ ನಿದಾನಸ್ಥರು ಈಗ ಒಳಗಡೆ ಬರ್ತಿದ್ದಾರೆ ಅಂತಂದುಕೊಂಡರೆ ವಾಚ್ ಮೆನ್ ಒಳಗೆ ಬಂದವನೆ ಹೊರಗಡೆಯಿಂದ ತಂದ ಫುಡ್ ಇಲ್ಲಿ ತಿನ್ನೋ ಹಾಗಿಲ್ಲ. ಬೇಕಿದ್ರೆ ಇಲ್ಲಿರೋ ಫುಡ್ ಸ್ಟಾಲ್‌ನಲ್ಲೇ ತೆಗೋಬೇಕು .. ನೋಡಿ ಅಲ್ಲಿ ಬೋರ್ಡ್ ಹಾಕಿದೆ ಅಂದ. 

ತಥ್.. ಇದೊಳ್ಳೆ ಗ್ರಾಚಾರ ಆಯ್ತಲ್ಲಾ ಅಂದ್ಕೊಂಡೆ. ಆದ್ರೆ ಹೊಟ್ಟೆಯ ಪರಿಸ್ಥಿತಿ ದಯನೀಯವಾಗಿತ್ತು. ಕೊಂಚವಾದರೂ ಒಳಗೇನಾದರು ತಳ್ಳದಿದ್ದರೆ ನಿತ್ರಾಣಿಯಾಗುತ್ತಿದ್ದೆ. ಅವನ ಹಿಂದೆಯೇ ಎದ್ದು ಹೋದೆ. ಫುಡ್ ಸ್ಟಾಲ್‌ನಲ್ಲಿ ಸಾಧಾರಣ ಒಂದು ಕೆ.ಜಿ ಕಡ್ಲೆ ಹಿಡಿಯಬಹುದಾದ ಪ್ಲಾಸ್ಟಿಕ್ ಕವರಿನಲ್ಲಿ ಬರೀ ಗಾಳಿ ಜೊತೆ ಹದಿನೈದು ಕಡ್ಲೆ, ಮತ್ತೊಂದು  ಹೊರಗಿನಿಂದ ದೊಡ್ಡದಾಗಿ ಕಾಣುವ ಕವರಿನಲ್ಲಿ ಹನ್ನೆರಡು ಪಾಪ್ ಕಾರ್ನ್ ತೆಗೆದುಕೊಂಡು ನೂರರ ನೋಟು ಕೊಟ್ಟು ಒಳಬಂದೆ. 

ಆಗ ಇಂಟರ್ ವಲ್ಲಿನ ದೀಪಗಳು ಉರಿಯತೊಡಗಿತ್ತು. ನನ್ನ ಕಡೆ ನೋಡುತ್ತಾ ಗೆಳತಿ ಕೈಚಾಚಿ ಪ್ಯಾಕೆಟ್ ತೆಗೆದುಕೊಂಡಳು. ಹದಿನೈದು ಕಡ್ಲೆಯಲ್ಲಿ ಮೂರು ನನಗುಳಿಯಿತು. ಪಾಪ ಕಾರ್ನಂತೂ ಅವಳ ಕೈಜಾರಿ ನನ್ನ ಮಡಿಲಿಗೆ ಬಿದ್ದ ಒಂದೇ ಕಾಳು ನನಗೆ ಸಿಕ್ಕಿದ್ದು.   ಬಾಟಲಿಯಲ್ಲಿದ್ದ ನೀರನ್ನೇ ದಾರಾಳವಾಗಿ ಹೊಟ್ಟೆಗೆರೆದುಕೊಂಡೆ.
ನನ್ನ ಹಸಿವಿನ ಸಂಕಟ ಇದೆಯಲ್ಲಾ ಅದು ಸಿನಿಮಾದ ನಾಯಕ ನಾಯಕಿಯರ ವಿರಹವೇದನೆಗಿಂತ ಹೆಚ್ಚಿನದಾಗಿದ್ದ ಕಾರಣ ಸಿನಿಮಾದಲ್ಲಿ ನನಗೆ ನೋಡುವುದೇನೂ ಉಳಿದಿರಲಿಲ್ಲ. 
ಪಿಕ್ಚರಿನಲ್ಲಿ ಶುಭಂ ಅಂತ ಬಂದ ಕೂಡಲೇ ಎದ್ದ ಗೆಳತಿ ಎಷ್ಟು ಚೆನ್ನಾಗಿತ್ತಲ್ಲಾ ಎಂದಳು. 
ಅವಳಿಗೆ ಮಾತಿನಲ್ಲಿ ಉತ್ತರಿಸುವ ಚೈತನ್ಯ ನನ್ನಲ್ಲಿ ಇದ್ದರೆ ತಾನೇ ಮಾತನಾಡುವುದು.. ಸುಮ್ಮನೆ ಗೋಣಾಡಿಸಿದೆ. 
ಮತ್ತೆ ನಾವು ಮನೆಗೆ ಮರಳಬೇಕಾದರೆ ಆದ ಪಚೀತಿಯನ್ನು ಹೇಳ ಹೊರಟರೆ ಅದೇ ಒಂದು ಸಿನೆಮಾ ಆದೀತು. ಅದನ್ನ ಇನ್ನೊಂದು ಸಲಕ್ಕೆ ಇಟ್ಟುಕೊಳ್ಳೋಣಾ..ಏನಂತೀರಿ? 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
Vasuki
9 years ago

ತುಂಬಾ ತಮಾಷೆಯಾಗಿ ಬರೆದಿದ್ದೀರ…ನಕ್ಕೂ ನಕ್ಕೂ ಸಾಕಾಯ್ತು!

 

 

Akhilesh Chipli
Akhilesh Chipli
9 years ago

ಭುವನೇಶ್ವರಿ ಹೆಗಡೆಯವರ ಹಾಸ್ಯ ಲೇಖನವನ್ನು
ನೆನಪಿಗೆ ತರಿಸಿತು. ತುಂಬಾ ಚೆನ್ನಾಗಿ ಬರೆದಿದ್ದೀರಿ
ಮಂಚಿ ಮೇಡಂ.

amardeep.p.s.
amardeep.p.s.
9 years ago

 ಒಳ್ಳೆ ಫಜೀತಿ ಆಗಿದೆ… ಒಗ್ಗರಣೆ ಸಿನೆಮಾ ನೋಡೋ ಹೊತ್ಗೆ ನಿಮ್ಮ ಕೈ ಮತ್ತು ಬಾಯಿ ಹಾತೊರಿಯುತ್ತಿದ್ದರೂ ನಿಮ್ಮ ಗೆಳತಿ ಕಟ್ಟಾಜ್ಞೆಗೆ ಸಿನೆಮಾನ್ನು ಸರಿಯಾಗಿ ನೋಡಿರಲಿಕ್ಕಿಲ್ಲ ಮತ್ತು ಉದರ ಕೂಗಿಗೂ ಬೆಲೆ ಕೊಟ್ಟಂತಾಗಿಲ್ಲ….

Kumaraswamy T
Kumaraswamy T
9 years ago

ಹಾಸ್ಯ ಬರವಣಿಗೆಯನ್ನು ಬಹಳ ಸಹಜವಾಗಿ ಬರೆದಂತೆ ಬರೆದಿದ್ದೀರಿ. ತುಂಬ ಚೆನ್ನಾಗಿದೆ.

ಟೀಕೆ.
(ತೆಕ್ಕುಂಜ ಕುಮಾರಸ್ವಾಮಿ)

pramod
pramod
9 years ago

Tumba chennagithu…  🙂

Swarna
Swarna
9 years ago

Super Anitha avare 🙂

6
0
Would love your thoughts, please comment.x
()
x