" ಒಳ್ಳೆಯತನವೇ ಸಂಸ್ಕೃತಿಯ ಸಾರ " ಶ್ರೀನವರತ್ನ ರಾಮರಾವ್.
ಒಳ್ಳೆಯ ವಿಚಾರಗಳು ಎಂದರೆ ಯಾವ ಜೀವಿಗಳಿಗೂ ತೊಂದರೆ ಮಾಡದೆ ಆದಷ್ಟು ಅನುಕೂಲ, ಸಹಾಯ ಮಾಡುವ ವಿಚಾರಗಳು, ಚಿಂತನೆಗಳು, ನಡೆಗಳು. ಏನನ್ನು ಚಿಂತಿಸುತ್ತೇವೋ ಅದನ್ನು ಮಾಡಲು ಮುಂದಾಗುತ್ತೇವೆ. ಒಳ್ಳೆಯ ಚಿಂತನೆಗಳು, ವಿಚಾರಗಳು ಒಳಿತನ್ನುಂಟು ಮಾಡಿಸುತ್ತವೆ. ಕೀರ್ತಿ ತರುತ್ತವೆ. ಕೆಟ್ಟ ವಿಚಾರಗಳು, ಚಿಂತನೆಗಳು ಕೆಡುಕನ್ನುಂಟು ಮಾಡಿಸುತ್ತವೆ. ಅಪಕೀರ್ತಿಯನ್ನು ಹರಡುತ್ತವೆ. ಆದ್ದರಿಂದ ಏನನ್ನು ನುಡಿಯಬೇಕು ಹೇಗೆ ನಡೆಯಬೇಕು ಯಾವ ಕೀರ್ತಿ ಸಂಪಾದಿಸಬೇಕು ಎಂಬುದು ಆಯಾಯ ವ್ಯಕ್ತಿಗಳಿಗೆ ಸಂಬಂಧಿಸಿರುತ್ತದೆ. ಅವರವರ ವ್ಯಕ್ತಿತ್ವವನ್ನು ಅವರವರ ನಡೆ ನುಡಿಗಳೇ ನಿರ್ಣಯಿಸುತ್ತವೆ. ಸರಿ ತಪ್ಪುಗಳ ನಿರ್ಣಯಿಸಲು, ಒಳಿತು ಕೆಡುಕ ವಿವೇಚಿಸಲು ಪ್ರತಿಯೊಬ್ಬರಿಗೂ ಅವರದೇ ಆದ ಮೆದುಳು ಇರುತ್ತದೆ. ಅವರವರ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಅವರವರ ಕೈಯಲ್ಲಿರುತ್ತದೆ. ಸದಾ ಒಳಿತನ್ನು ಚಿಂತಿಸುತ್ತ, ಒಳಿತನ್ನು ಮಾಡುವಲ್ಲಿ ಲೀನನಾಗಿ ಸರ್ವೇ ಜನಃ ಸುಖಿನೋ ಭವಂತು ಎಂದು ಚಿಂತಿಸುವ ವ್ಯಕ್ತಿ ಶ್ರೇಷ್ಠನಾಗುತ್ತಾನೆ! ಅವನ ಬದುಕು ಆದರ್ಶವಾಗುತ್ತದೆ. ಸಮಾಜದಲ್ಲಿ ವಿಶೇಷ ಗೌರವಕ್ಕೆ ಪಾತ್ರನಾಗುತ್ತಾನೆ.
ಸಾಮಾನ್ಯವಾಗಿ ಪ್ರತಿಯೊಬ್ಬರೂ ಒಳ್ಳೆಯ ಚಿಂತನೆಗಳನ್ನೇ ಮಾಡುತ್ತಾರೆ. ಬಹಳಷ್ಟು ಜನ ಅಪರಿಮಿತ ಶಕ್ತಿ ಇರುವ ಬಯಸಿದುದನೆಲ್ಲಾ ದಯಪಾಲಿಸುವನೆಂದು ನಂಬಿರುವ ಭಗವಂತನನ್ನು ಒಳ್ಳೆಯದು ಮಾಡು ಎಂದು ಧ್ಯಾನಿಸುತ್ತಾರೆ. ಒಳ್ಳೆಯದಾಗುತ್ತದೆ. ಒಬ್ಬ ಪಿಯು ವಿದ್ಯಾರ್ಥಿ ಎಂಬಿಬಿಎಸ್ ಸೀಟು ದಯಪಾಲಿಸೆಂದು ನಿತ್ಯ ಧ್ಯಾನ ಮಾಡುತ್ತಾನೆ. ಅವನಿಗೆ ಆ ಸೀಟು ದೊರೆಯುತ್ತದೆ. ಮತ್ತೊಬ್ಬ ದೇವರೇ ಆ ಉದ್ಯೋಗ ಸಿಗುವಂತೆ ಮಾಡು ಎಂದು ಪ್ರಾರ್ಥಿಸುತ್ತಾನೆ. ಆ ಉದ್ಯೋಗ ದೊರೆಯುತ್ತದೆ. ಆಶ್ಚರ್ಯವೇ? ಅಗತ್ಯವಿಲ್ಲ! ಅವರ ಪ್ರಾರ್ಥನೆ ಎಷ್ಟು ಪ್ರಬಲವಾಗಿರುತ್ತದೋ ಅಷ್ಟು ಶೀಘ್ರ ಅವರು ಬಯಸಿದ್ದು ಅವರದಾಗುತ್ತದೆ. ಏಕೆಂದರೆ ಅದನ್ನು ಗಳಿಸಲು ಅಷ್ಟು ಪ್ರಬಲವೂ, ನಿರಂತರವೂ ಆದ ಹೋರಾಟ ನಡೆಯಿಸಿರುತ್ತಾರೆ!
ಕೆಟ್ಟದ್ದು ಮಾಡಬೇಕೆಂದು ಅಂದುಕೊಂಡವರು ಭಗವಂತನನ್ನು ಕೆಡುಕು ಮಾಡಿಸುವಂತೆ ಸತತವಾಗಿ ಧ್ಯಾನಿಸುತ್ತಾರೆ. ಅವರು ಕೆಟ್ಟದ್ದು ಮಾಡೇ ಮಾಡುತ್ತಾರೆ! ಏಕೆಂದರೆ ಅದಕ್ಕೆ ತಕ್ಕ ಶ್ರಮ ಪಟ್ಟಿರುತ್ತಾರೆ. ಸತತ ಪ್ರಯತ್ನ ನಡೆಯಿಸಿ, ಸ್ಪಷ್ಟ ಯೋಜನೆ ಸಿದ್ದ ಮಾಡಿರುತ್ತಾರೆ. ಒಂದು ಮನೆಯನ್ನು ಲೂಟಿ ಮಾಡಬೇಕೆಂದು ಧ್ಯಾನಿಸಿದರೆ ಆ ಮನೆಯನ್ನು ಲೂಟಿ ಮಾಡಲು ಸಾಧ್ಯವಾಗುತ್ತದೆ. ಭಗವಂತನನ್ನು ಆ ಮನೆಯನ್ನು ಲೂಟಿ ಮಾಡಲು ಅನುಗ್ರಹಿಸೆಂದು ಸತತವಾಗಿ ನಿಷ್ಟೆಯಿಂದ ಹೇಗೆ ಧ್ಯಾನಿಸಿರುತ್ತಾರೋ ಹಾಗೇ ಸತತವಾಗಿ ಲೂಟಿ ಮಾಡುವ ಪ್ರಯತ್ನಗಳನ್ನು ಮಾಡಿರುತ್ತಾರೆ. ನಿರಂತರ ಪರಿಶ್ರಮ ಹಾಕಿ, ಅವಲೋಕನ ಮಾಡಿ,ಯೋಜನೆ, ತಂತ್ರಗಳನ್ನು ರೂಪಿಸಿದುದರಿಂದ ಲೂಟಿ ಮಾಡಲು ಸಾಧ್ಯವಾಗುತ್ತದೆ.
ಒಳ್ಳೆಯದು ಆಗಲಿ ಎಂದು ಧ್ಯಾನಿಸಿದರೆ ಒಳ್ಳೆಯದಾಗುತ್ತದೆ. ಸುಖ, ಸಂತಸ, ಶಾಂತಿ ಪ್ರತಿಫಲವಾಗುತ್ತದೆ. ಕೆಟ್ಟದ್ದು ಆಗಲಿ ಎಂದು ಧ್ಯಾನಿಸಿದರೆ ಕೆಟ್ಟದ್ದು ಆಗುತ್ತದೆ. ಕಷ್ಟ, ದುಃಖ, ಅಶಾಂತಿ, ನೋವು ಪ್ರತಿಫಲವಾಗುತ್ತದೆ! ಅದಕ್ಕಾಗಿ ಕೆಟ್ಟ ಚಿಂತನೆಗಳಿಗೆ ಅವಕಾಶವೇ ಕೊಡಬಾರದು! ಕೆಟ್ಟದ್ದನ್ನು ನೋಡುವಂತಾದರೆ, ಕೆಟ್ಟದ್ದನ್ನು ಕೇಳುವಂತಾದರೆ, ಕೆಟ್ಟದ್ದನ್ನು ಮಾತನಾಡುವಂತಾದರೆ ಕೆಟ್ಟದ್ದು ಮಾಡಲು ಪ್ರೇರೆಪಣೆಗಳಾಗಿಬಿಡುತ್ತವೆ. ಹಾಗೆ ಆಗಬಾರದು ಎಂಬುದರ ಸಂಕೇತ ಗಾಂಧೀಜಿಯವರ ಕಣ್ಣು, ಕಿವಿ, ಬಾಯಿಯನ್ನು ಮುಚ್ಚಿ ಕುಳಿತಿರುವ ಮಂಗಗಳು. ಎಷ್ಟೇ ಕಷ್ಟಗಳು ಬಂದರೂ ಕೆಟ್ಟ ಚಿಂತನೆ ಮಾಡಬಾರದು. ಅದರಿಂದ ಬೇರೆಯವರ ಬದುಕು ತಾತ್ಕಾಲಿಕವಾಗಿ ಹಾಳಾಗುತ್ತದೆ. ನೆಮ್ಮದಿ ಕೆಡುತ್ತದೆ. ಸಮಾಜದ ಸ್ವಾಸ್ಥ್ಯ ಸಹ ಕೆಡುತ್ತದೆ. ಕೆಟ್ಟ ಕೆಲಸ ಮಾಡುವವರು ತಮಗೆ ಸಂತಸವಾಗುತ್ತದೆಂದು ಆ ಕೆಟ್ಟ ಕಾರ್ಯ ಮಾಡಿರುತ್ತಾರೆ. ಅದರ ತಾತ್ಕಾಲಿಕ ಖುಷಿ ಶಾಶ್ವತ ದುಃಖವಾಗಿ ಮಾರ್ಪಡುತ್ತದೆ. ತನ್ನ ನಂಬಿದವರೆಲ್ಲಾ ಬೀದಿಗೆ ಬರಬೇಕಾಗುತ್ತದೆ. ಇಂದಲ್ಲ ನಾಳೆ ಅದಕ್ಕೆ ಪಶ್ಚಾತ್ತಾಪ ಪಡಬೇಕಾಗುತ್ತದೆ! ತಕ್ಕ ದಂಡ ತೆರಬೇಕಾಗುತ್ತದೆ. ರಾಕ್ಷಸರನೇಕರು ಕೆಟ್ಟದ್ದನ್ನು ಧ್ಯಾನಿಸಿದರು. ಕೆಟ್ಟದ್ದನ್ನು ಪಡೆದರು. ಕೆಟ್ಟದ್ದನ್ನು ಮೆರೆಯಿಸಿದರು. ದುರ್ಗತಿ ಹೊಂದಿದರು! ಬೇವನ್ನು ಬಿತ್ತಿ ಮಾವು ಪಡೆಯಲಾಗದು! ಆದ್ದರಿಂದ ಒಳಿತನ್ನೇ ಚಿಂತಿಸಿ ಒಳ್ಳೆಯ ಕೆಲಸ ಮಾಡಿ ಯಾರಿಗೂ ಉಪಟಳ ಕೊಡದೆ ಬದುಕುವುದು ಒಳ್ಳೆಯದಲ್ಲವೆ? ಮಾನವನಿಗೆ ದೊಡ್ಡ ಮೆದುಳನ್ನು ಪ್ರಕೃತಿ ದಯಪಾಲಿಸಿರುವುದು ತನ್ನ ವಿವೇಚನೆಯಿಂದ ಒಳ್ಳೆಯದನ್ನು ಆಯ್ಕೆ ಮಾಡಿ ಒಳ್ಳೆಯವರಾಗಿ ಜೀವಿಸಿ ನೆಮ್ಮದಿಯ ಪಡೆಯಲಿಕ್ಕೆ! " ಮಾನವನ ಜೀವನದಲ್ಲಿ ಅತ್ಯಂತ ಸುಖವೆಂದರೆ ಒಳ್ಳೆಯದನ್ನು ಮಾಡುವುದು " – ಡಿಸ್ನಿ.
ಹಿಂದೆಲ್ಲಾ ದೇವರುಗಳ ಸಹಸ್ರ ನಾಮ ಸ್ಮರಣೆ, ಅನೇಕ ನಾಮ ಸ್ಮರಣೆ ಮಾಡುವಂತೆ ಹೇಳುತ್ತಿದ್ದರು. ಏಕೆಂದರೆ ದೇವರು ಎಂದರೆ ಒಳಿತು ಅದರ ಧ್ಯಾನ ಒಳಿತು ಮಾಡಲು ಪ್ರೇರಣೆಯಾಗಲಿ, ಮನದ ದೋಷ, ಕಲ್ಮಶ, ಮಾನಸಿಕ ಅಸ್ವಸ್ಥತೆ ದೂರಮಾಡಲಿ ಎಂದು ಇರಬಹುದು! ಅನಾಥ ರಕ್ಷಕ, ದೀನ ದಯಾ ಬಂಧು – ಈ ಸ್ಮರಣೆಗಳಲ್ಲಿನ ಉದ್ದೇಶಗಳು ಮಾನವನಲ್ಲಿ ನೆಲೆಸಲಿ ಎಂಬ ಆಶಯ ಅದರಲ್ಲಿದೆ! ದೇವರು ಮಾನವನನ್ನು ಕಾಪಾಡುತ್ತಾನೆ. ಅಂದರೆ ಒಳ್ಳೆಯ ಚಿಂತನೆಗಳೇ ದೇವರ ಧ್ಯಾನವಿದ್ದಂತೆ. ಆ ಚಿಂತನೆಗಳು ಮಾಡಿದವರನ್ನು ಕಾಪಾಡುತ್ತವೆ. ಅಂದರೆ ಆ ಚಿಂತನೆಗಳೇ ಅವರನ್ನು ಕಾಪಾಡುತ್ತವೆ. " ಧರ್ಮೋ ರಕ್ಷತಿ ರಕ್ಷತಃ " ಅಲ್ಲವೆ?
ನ ದೇವಾ ದಂಡ ಮಾದಾಯ ರಕ್ಷಂತಿ ಪಶುಪಾಲವತ್!ಯಂ ತುರಕ್ಷಿತುಮಿಚ್ಛಂತಿ ಸದ್ಬುದ್ಧ್ಯಾ ಯೋಜಯಂತಿ ತಂ!!
ದೇವರು ಮಾನವನನ್ನು ಕಾಪಾಡುತ್ತಾನೆ ಅಂದರೆ: ದನವನ್ನು ಕಾಯುವವನು ಅದನ್ನು ರಕ್ಷಿಸಲು ಹೆಗಲ ಮೇಲೆ ದಂಡವನ್ನು ಹೊತ್ತು ದನಗಳ ಹಿಂದೆಯೇ ಇದ್ದು ದನಗಳ ಕಾಪಾಡುವ ಹಾಗೆ ದೇವರು ಕಾಪಾಡುವುದಿಲ್ಲ! ಯಾರನ್ನು ಕಾಪಾಡಬೇಕೆನ್ನಿಸುತ್ತದೋ ಅವರ ಮನದಲ್ಲಿ ಒಳ್ಳೆಯ ಬುದ್ದಿ ಹೊಳೆಯುವಂತೆ ಮಾಡಿ ಅನುಗ್ರಹಿಸುತ್ತಾನೆ. ಆ ಒಳ್ಳೆಯ ಬುದ್ದಿಯಿಂದ ಅವರು ಸನ್ಮಾರ್ಗವನ್ನು ಬಿಡದೆ ಧಾರ್ಮಿಕರಾಗಿರುತ್ತಾ ಸುರಕ್ಷಿತರಾಗಿರುತ್ತಾರೆ! ಇದು ಅದರ ಅರ್ಥ.
ಒಳ್ಳೆಯದರ ಧ್ಯಾನದಿಂದ ಒಳಿತಾಗುತ್ತದೆ. ಮಾನವನಿಗೆ ಬರುವ ರೋಗ, ಮುಪ್ಪು, ಸಾವು … ದುಃಖ ನೋವುಗಳ ಪರಿಹಾರಕ್ಕಾಗಿ ಬುದ್ದ ಧ್ಯಾನ ಮಾಡಿದ. ಮಾನವರ ದುಃಖ ದೂರಮಾಡಬೇಕೆಂದು ಧ್ಯಾನ ಮಾಡಿದ್ದು ಒಳ್ಳೆಯದೇ ಅಲ್ಲವೆ? ಜ್ಞಾನೋದಯವಾಯಿತು. ಅಂದರೆ ಮಾನವರ ಆ ದುಃಖಗಳ ದೂರ ಮಾಡುವ ಜ್ಞಾನ ಉದಯಿಸಿತು. ಯಾರ ಮುಪ್ಪು ಸಾವನ್ನು ದೂರಮಾಡಲು ಸಾಧ್ಯವಿಲ್ಲ. ಅವು ಪ್ರಕೃತಿ ನಿಯಮ. ಆದರೆ ಅವರನ್ನು ಪ್ರೀತಿಸುವುದರಿಂದ ಮುಪ್ಪನ್ನು ಮುಂದೂಡಬಹುದು, ಹೆಚ್ಚು ಕಾಲ ಬದುಕುವಂತೆ ಮಾಡಬಹುದು ಎಂಬ ಜ್ಣಾನ ಪಡೆದು ಜೀವನ ಪೂರ್ತಿ ಮಾನವರ ದುಃಖ ದೂರ ಮಾಡುವಲ್ಲಿ ಲೀನನಾಗಿದ್ದ! ದುಃಖಕ್ಕೆ ಕಾರಣವಾಗುವ ವಿಷಯ ತಿಳಿಸಿ ಅವುಗಳಿಂದ ದೂರವಿರುವಂತೆ ಬೋಧಿಸಿದ. ಇದರಿಂದ ವಿಶ್ವ ಮಾನ್ಯನಾದ! ಇದು ಒಳಿತಿನ ಪ್ರತಿಫಲ! ಹೀಗೆ ಒಳಿತಿನ ಧ್ಯಾನದಿಂದ ಒಳಿತು ಉದಯಿಸಿತು!
ಘನವಾದ ಒಳಿತು ಶತೃವಿನ ದೌಷ್ಟ್ಯಕ್ಕೆ ಅವಕಾಶ ಮಾಡಿ ಕೊಡದ ಘನ ಶಕ್ತಿ ಹೊಂದಿರುತ್ತದೆ. ಉದಾಹರಣೆಗೆ ರಾಮಾಯಣದಲ್ಲಿ ರಾಮನ ವಿರುದ್ದ ಯುದ್ದ ಮಾಡಲು ಕುಂಭಕರ್ಣನಿಗೆ ನಿದ್ರಾಭಂಗ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಕುಂಭಕರ್ಣ ರಾವಣರ ಮಧ್ಯ ಸಂಭಾಷಣೆ ಹೀಗಿದೆ.
" ಕಿಂ ಕಾರ್ಯ ಪ್ರತಿ ಬೋಧನೇ ವದ ಸಖೇ, ರಾಮಾಂಗನಾ ಮೇ ಹೃತಾ, ಕಿಂ ಭುಕ್ತಾ, ಪತಿದೇವತಾ ನ ಭಜತೇ ರಾಮಾತ್ಪರಂ ಜಾನಕೀ ! ರಾಮಃ ಕಿಂ ಭವಿತಾಸಿ ನೋ, ಶೃಣು ರಹಃ ತಾಳೀದಳಶ್ಯಾಮಲಂ ಧರ್ಮೈ ಕನಿಷ್ಠಂ ಪರಂ ರಾಮಾಂಗಂ ಭಜತೋ ಮಮಾಪಿ ಕುಟೋ ಭಾವೋ ನ ಸಂಜಯಾತೇ !! "
"ನನ್ನನ್ನು ಎಬ್ಬಿಸಿದುದರ ಉದ್ದೇಶವೇನು? ನನ್ನಿಂದ ಆಗಬೇಕಾಗಿರುವ ಕಾರ್ಯವೇನು? ಸ್ನೇಹಿತನೂ ಆಗಿರುವ ರಾವಣನೇ ಹೇಳು" ಎಂದು ಕುಂಭಕರ್ಣನು ಕೇಳಲು, " ನಾನು ರಾಮನ ಹೆಂಡತಿಯಾದ ಸೀತೆಯನ್ನು ಅಪಹರಿಸಿಕೊಂಡು ಬಂದಿರುವೆನು " ಎಂದನು. " ಅವಳನ್ನು ಅನುಭವಿಸಿದೆಯಾ ?" ಎಂದು ಕೇಳಲು " ಗಂಡನನ್ನೇ ದೇವರೆಂದು ಭಾವಿಸುತ್ತಿರುವ ಆಕೆ ಜನಕ ರಾಜನ ಮಗಳಾದ ಸೀತೆಯು ರಾಮನನ್ನು ಹೊರತು ಮತ್ತಾರನ್ನು ಸೇವಿಸಲು ಒಪ್ಪದಿದ್ದಾಳೆ " ಎಂದು ಹೇಳಿದನು. " ನಿನ್ನ ಮಾಯಾ ಶಕ್ತಿಯಿಂದ ನೀನೆ ರಾಮನ ರೂಪವನ್ನು ತಳೆದು ಅವಳನ್ನು ಮೋಹಗೊಳಿಸಿ ಏಕೆ ಅನುಭವಿಸದೆ ಇರುವೆ ? ಎಂದು ಕೇಳಲು " ( ಧರ್ಮಾಚರಣೆಯೊಂದರಲ್ಲಿಯೇ ಸಂತತವಾಗಿ ನೆಲೆಸಿರುವ ) ತಾಳೆಗರಿಯಂತೆ ಶ್ಯಾಮಲವರ್ಣದಿಂ ಕೂಡಿರುವ ರಾಮನ ರೂಪವನ್ನು ಪಡೆದರೆ ದುಷ್ಟನಾದ ನನ್ನ ಹೃದಯದಲ್ಲೂ ಕೆಟ್ಟ ಭಾವನೆಯು ( ಪರ ಸ್ತ್ರೀಯನ್ನು ಭೋಗಿಸಬೇಕೆಂಬ ದುರಾಸೆಯು ) ಹುಟ್ಟುವುದೇ ಇಲ್ಲವಲ್ಲ ಏನು ಮಾಡಲಿ ? ಎನ್ನುತ್ತಾನೆ. ಇಲ್ಲಿ ರಾಮನ ಒಳ್ಳೆಯ ವ್ಯಕ್ತಿತ್ವ ಕೆಟ್ಟ ವ್ಯಕ್ತಿಗಳನ್ನೂ ಕೆಟ್ಟತನ ಮಾಡದಂತೆ ಪ್ರಭಾವ ಬೀರಿರುವುದನ್ನು ಕಾಣುತ್ತೇವೆ. ರಾವಣನ ಬಾಯಿಂದಲೇ ಆ ಮಾತುಗಳು ಬಂದಿರುವುದು ಒಳ್ಳೆಯತನದ ಮಹತ್ವ ಎತ್ತಿ ತೋರಿದಂತಾಗಲಿಲ್ಲವೆ? ರಾವಣನ ಬಾಯಿಂದ ಆ ಮಾತು ಬರುವಂತೆ ಮಾಡಿದುದು ವಾಲ್ಮೀಕಿ ಮಹಾಕವಿಯ ಒಳ್ಳೆಯತನವೂ, ವಿವೇಕವೂ ಹೌದು.
ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವಃ !
ತಸ್ಮಾತ್ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ !!
ಒಳ್ಳೆಯ ಮಾತಿನಿಂದ ಎಲ್ಲಾ ಜೀವಿಗಳೂ ಸಂತೋಷಪಡುತ್ತವೆ. ಆದ್ದರಿಂದ ಯಾವಾಗಲೂ ಪ್ರಿಯವಾದ ಮಾತನ್ನೇ ಆಡಬೇಕು. ಮಾತಿಗೇಕೆ ಬಡತನ? ಎಂದು ಮೇಲಿನ ಶುಭಾಷಿತ ಹೇಳುತ್ತದೆ. ಒಳ್ಳೆಯ ಮಾತಿನಿಂದ ಎಲ್ಲಾ ಜೀವಿಗಳು ಸಂತೋಷಪಡುತ್ತವೆ ಎಂಬ ಮಾತು ಬಹು ಮುಖ್ಯವಾದುದಾಗಿದೆ. ಮನಸ್ಸು ಮತ್ತೆ ಮತ್ತೆ ಒಳ್ಳೆಯ ಚಿಂತನೆಗಳನ್ನು ಮಾಡುವುದರಿಂದ ಮನಸ್ಸಿಗೆ ಸಂಸ್ಕಾರ ಉಂಟಾಗುತ್ತದೆ.
"ಸರ್ವ ಜಂತೂನಾಂ ಮಾನವ ಜನ್ಮಂ ದುರ್ಲಬಂ" ಭೂಮಿಯಲ್ಲಿನ ಅನೇಕ ಜೀವರಾಶಿಗಳಲ್ಲಿ ಮಾನವ ಜೀವಿಗೆ ಮಾತ್ರ ದೊಡ್ಡ ಮೆದುಳು ಮತ್ತು ಮಾತನಾಡಿ ಮನದಾಳವ ಅಭಿವ್ಯಕ್ತಿಸುವ ಸಾಮರ್ಥ್ಯವಿದೆ! ಬೇರೆಯವರ ಮುಖ ನೋಡಿ, ವರ್ತನೆ ಕಂಡು ಅವರ ಮನದಾಳವ ತಿಳಿಯುವ ಶಕ್ತಿಯಿದೆ! ಏನಾದರೂ ಮಾಡುವಾಗ ಯಾವುದು ಸರಿ ಯಾವುದು ತಪ್ಪು ಅಂತ ಸಾರಾಸಾರಾ ಚಿಂತಿಸಿ ಸರಿಯಾದುದನ್ನು ಮಾಡುವಂತೆ ಸಲಹೆ ಸೂಚನೆ ನೀಡುತ್ತದೆ. ಅಂದರೆ ಯಾವ ಜೀವರಾಶಿಗೂ ತೊಂದರೆ ಆಗದಂತಹದನ್ನ, ಅನುಕೂಲವೇ ಆಗುವಂತಹುದನ್ನ ಮಾಡುವ ಸಲಹೆ ಸೂಚನೆ ನೀಡುತ್ತದೆ. ಅದೇ ಒಳ್ಳೆಯದು! ಅದೇ ಒಳ್ಳೆಯ ಬುದ್ದಿ! ಅದೇ ಮಾನವತ್ವ!. ಅದೇ ವಿವೇಕ! ಅದೇ ದೈವ! ಅದರಿಂದ ಸುಖ, ಶಾಂತಿ, ನೆಮ್ಮದಿ! ಪ್ರಯುಕ್ತ ಆಗಬೇಕು ಎಲ್ಲರ ಜೀವನ ಒಳಿತಿನ ಜಪ ತಪ! ಆಗುವುದು ಮಾನವನ ಜೀವನ ಪಾವನ!
* ಕೆ ಟಿ ಸೋಮಶೇಖರ ಹೊಳಲ್ಕೆರೆ.