ಎಲ್ಲರಂತೆ ನನ್ನ ಬೆಳಗ್ಗಿನ ಕಾಫಿಗೆ ಜತೆಗೂಡುವುದು ಅಂದಿನ ಪತ್ರಿಕೆ. ಎದ್ದ ತಕ್ಷಣ ಅದರ ಮೇಲೆ ಕಣ್ಣಾಡಿಸಿಯೇ ಬ್ರಶ್ ಮಾಡಲು ಹೋಗುವುದು. ಅದರಲ್ಲಿಯ ಸುದ್ದಿಗಳಿಗೆ ಮನ ಬಹಳ ಬೇಗ ಅಂಟಿಕೊಂಡು ಅದರ ಬಗ್ಗೆಯೇ ಯೊಚಿಸಿ, ಚಿಂತನೆಗೆ ಶುರು ಆಗುತ್ತದೆ. ಅಚ್ಚಾಗಿರುವ ವಿವರಗಳ ಮೇಲೆ ಅಂದಿನ ಮನಸ್ಥಿತಿ ರೂಪಗೊಳ್ಳುವುದು. ಅದೇ ರೀತಿ ಒಳ್ಳೆ ಹಾಡು ಕೇಳಿದರೆ, ಏನಾದರು ಖುಶಿಯಾಗಿರುವುದನ್ನು ನೋಡಿದರೆ/ ಓದಿದರೆ ಮನಸ್ಸು ಪ್ರಫ಼ುಲ್ಲವಾಗುವುದು. ಆದುದರಿಂದ ನನ್ನ ಬೆಳಗ್ಗಿನ ” ಆಹಾರ” ನನಗೆ ಬಹಳ ಮುಖ್ಯ. ಅದೊಂದೇ ಅಲ್ಲ, ದಿನವಿಡೀ ನಾನು ವ್ಯವಹರಿಸುವ ಜನ, ಅವರ ಮಾತು, ಅವರ ವರ್ತನೆ ನನ್ನ ಮೇಲೆ ಬಹಳ ಪರಿಣಾಮ ಬೀರುತ್ತದೆ. ನನ್ನ ಸಹೋದ್ಯೋಗಿಯೊಬ್ಬಳು ಯಾವಾಗಲೂ ತನ್ನ ಗಂಡನ ಬಗ್ಗೆ ದೂರು ಹೇಳುತ್ತಾ, ಅವರ ದೂಷಣೆ ಮಾಡುತ್ತಾ ಇರುತ್ತಿದ್ದಳು. ಅದನ್ನು ಕೇಳಿ ನನಗೂ ಸಿಟ್ಟು ಉಕ್ಕಿ, ನಾನು ನನ್ನವರ ಮೇಲೆ ಸಿಡಿಮಿಡಿಗುಟ್ಟುತ್ತಿದ್ದೆ. ನನ್ನ ಪರಿಚಯದವರೊಬ್ಬರು ನುಡಿದರು, ನೀವು ಆಪ್ತಸಲಹೆಗಾರರಾಗುವುದಕ್ಕೆ ಅರ್ಹರಲ್ಲ. ಎಲ್ಲರ ಮಾತು ಶಾಂತಿಯಿಂದ, ನಿಧಾನವಾಗಿ ಆಲಿಸಿ, ಭಾವೋದ್ವೇಗಕ್ಕೆ ಒಳಗಾಗದೆ ವರ್ತಿಸುವುದು ಮುಖ್ಯ. ಇಲ್ಲವಾದರೆ ಸ್ಪಂದಿಸುವುದಕ್ಕೆ ಬದಲಾಗಿ ಅವರ ಉದ್ವೇಗ ಹೆಚ್ಚು ಮಾಡುತ್ತೀರಿ ಅಷ್ಟೆ ಎಂದು!
ಕೆಲವರು ಯಾವುದೇ ಭಾವುಕತೆಯಿಲ್ಲದೆ ಟೀವಿಯಲ್ಲಿ ಬರೋ ದೃಶ್ಯಗಳು, ಸಿನೇಮಾದಲ್ಲಿ ತೋರಿಸುವ ಸೀನ್ಗಳು, ಕತೆ, ಕಾದಂಬರಿ, ಪತ್ರಿಕೆಗಳಲ್ಲಿ ಬರುವ ವಿವರಣೆಗಳನ್ನು ಆರಾಮವಾಗಿ ನೋಡುತ್ತಾ, ಓದುತ್ತಾ ಇರುತ್ತಾರೆ. ಅವರನ್ನು ನೋಡಿ ನನಗನಿಸುವುದು- ನಾ ಯಾಕೆ ಹೀಗಿಲ್ಲಾ? ಏನು ಓದಿದರೂ, ನೋಡಿದರೂ, ಮನಸ್ಸಿಗೆ ತುಂಬ ತುಂಬಾ ಹಚ್ಚಿಕೊಂಡು ಬಿಡುತ್ತೀನಿ ನಾನು. ಆ ಪಾತ್ರಗಳ ಒಳ ಹೊಕ್ಕು, ಅವರ ನೋವು, ಅಳು, ಎದೆಯಾಳದ ನಿಟ್ಟುಸಿರು ನನ್ನದಾಗಿಸಿಕೊಂಡು ಬಿಡುತ್ತೀನಿ. ಅವರಿಗೆ ಯಾರಾದರೂ ಹಿಂಸೆ ಕೊಟ್ಟರೆ, ಮೋಸ ಮಾಡಿದರೆ, ಕಣ್ಣಲ್ಲಿ ನೀರು ತರಿಸಿದರೆ ನನ್ನ ಮನಸ್ಸು ಇಲ್ಲಿ ಆ ದುಖದಲ್ಲಿ ಕುದ್ದು, ನೊಂದು, ಬೆಂದು ಬಸವಳಿದು ಹೋಗುತ್ತೆ.
ಸಿನೆಮಾದಲ್ಲಿ ನಾಯಕ ಖಳನಾಯಕನಿಗೆ ಚಚ್ಚುತ್ತಿದ್ದರೆ, ಟಾಮ್ ಅಂಡ್ ಜೆರ್ರಿನಲ್ಲಿ ಟಾಮ್ ಏಟು ತಿಂತಾ ಇದ್ರೆ ನನಗೆ ಎದೆಯಲ್ಲಿ ಹಿಂಸೆ. ಈಗಲೂ ರಕ್ತ ಸುರಿಸುವ, ಹಿಂಸೆ, ದೌರ್ಜನ್ಯ ನೋಡಿದಾಗ ಕಣ್ಣು ತಂತಾನೇ ಮುಚ್ಚುತ್ತೆ. ಚಿಕ್ಕವಳಿದ್ದಾಗ ” ಗಾಡ್ ಫ಼ಾದರ್” ಪುಸ್ತಕ ಓದಿ ೨-೩ ದಿನ ಮಾನಸಿಕವಾಗಿ ಕುಗ್ಗಿದ್ದು, ಏನೋ ತಳಮಳ, ಹಿಂಸೆ ಅನುಭವಿಸಿದ್ದು ಇನ್ನೂ ನೆನಪಿದೆ. ” ಪ್ರಾಮಿಸ್” ಕತೆ ಓದಿ ಸುರಿಸಿದ ಕಣ್ಣೀರು, ಒದ್ದೆಯಾದ ಕರವಸ್ತ್ರಗಳ ನೆನಪೂ ಹಸಿರು!
ಖುಶಿಯಲ್ಲಿ ಏನು ಆಗುತ್ತೆ ಅನ್ನುತ್ತೀರಾ? ಚಲನಚಿತ್ರ, ಪತ್ರಿಕೆಗಳಲ್ಲಿ ಬರುವ ನಿಜ ಜೀವನದ ಅಥವಾ ಕಾಲ್ಪನಿಕ ಪಾತ್ರಗಳು ಸಂತಸದಿಂದಿದ್ದರೆ ನನ್ನ ಮನವೂ ಹೂವಾಗುವುದು. ಅವರ ನಲಿವಿನ ಜತೆ ನನ್ನ ಮನ ಹಗುರವಾಗಿ ಹಕ್ಕಿಯಾಗುವುದು. ಅಲ್ಲಿ ನಲ್ಲ, ನಲ್ಲೆಯರ ಸಲ್ಲಾಪಗಳು ನನ್ನ ಕೆನ್ನೆ, ಹೃದಯವನ್ನೂ ಸಹ ರಂಗೇರಿಸುವುದು. ಅವರ ಮನೆಯ ಸುಮಧುರ ತರಂಗಗಳು ನನ್ನ ಎದೆಯಲ್ಲೂ ಮಿಡಿಯುವವು. ಈ ತರ ಆದರೆ ಬಲು ಕಷ್ಟ. ನನ್ನ ಈ ಮನೋಭಾವದಲ್ಲಿ, ಬರೀ ಸಂತೋಷ, ಉಲ್ಲಾಸಭರಿತ ಸುದ್ದಿಗಳನ್ನು ನೋಡುವುದು, ಕೇಳುವುದು ಮಾಡುತ್ತಿದ್ದರೆ ಮನ ಪಕ್ವವಾಗುವುದು ಹೇಗೆ? ಯಾವುದನ್ನೂ ಬಂದಂತೆ ಸ್ವೀಕರಿಸದೆ, ಬರೀ ಒಳ್ಳೆಯದು, ಖುಶಿಯಾದ್ದು ಮಾತ್ರ ಓದುವೆ, ನೋಡುವೆ ಅನ್ನುವ ಮನಸ್ಥಿತಿ ಬೆಳೆಸಿಕೊಂಡರೆ ನನ್ನನ್ನು ನಾನೇ ಸೀಮಿತಗೊಳಿಸಿದಂತೆ. ಜಗತ್ತನ್ನು ವಿಶಾಲ ದೃಷ್ಟಿಯಿಂದ ನೋಡದೆ ಗುಲಾಬಿ ಬಣ್ಣದ ಗಾಜಿನ ಮೂಲಕ ನೋಡುವುದು ತಪ್ಪಲ್ಲವೇ?
ಎಮೊರಿ ಯೂನಿವರ್ಸಿಸಿಟಿ ನಡೆಸಿದ ಸಂಶೋಧನೆಯ ಪ್ರಕಾರ ಓದುವುದು ನಮ್ಮ ಮೆದುಳನ್ನು ಪ್ರಚೋದಿಸಿ ಅಲ್ಲಿರುವ ಎಲ್ಲಾ ನರಗಳನ್ನೂ ಪ್ರಚೋದಿಸಿ ಚುರುಕುಗೊಳಿಸುತ್ತದೆಯಂತೆ. ಆದರಿಂದಲೇ ಅದರಲ್ಲಿ ಒಬ್ಬನನ್ನು ಮತ್ತೊಬ್ಬ ಅಟ್ಟಿಸಿಕೊಂಡು ಕೊಲ್ಲಲೆತ್ನಿಸಿದರೆ ನಮ್ಮ ಮೈಯಲ್ಲೂ ಸಂಚಾರ, ಒತ್ತಡ ಉಂಟಾಗುವುದು. ಚಿಕ್ಕವಳಿದ್ದಾಗ ಹೊಡೆದಾಟ ಬಡಿದಾಟದ ದೃಷ್ಯಗಳು ಬಂದಾಗ, ಅಮ್ಮ “ಕಣ್ಣು ಮುಚ್ಚಿಕೊ” ಅಂತ ಹೇಳುತ್ತಿದ್ದುದು ನೆನಪಾಗುತ್ತದೆ, ಈಗ ಕಣ್ಣು ಮುಚ್ಚಿದರೂ ಸಹ ಮನಸ್ಸಿನಲ್ಲಿ ಆ ದೃಶ್ಯ ಕಾಣುತ್ತದೆ, ಆದರೆ ಆ ಭಯ, ಆತಂಕ ದೂರವಾಗಿಲ್ಲ, ಕಡಿಮೆಯಾಗಿದೆ, ಅಷ್ಟೆ. ಅದನ್ನು ಸಂಪೂರ್ಣವಾಗಿ ಹೋಗಲಾಡಿಸುವ ಪ್ರಯತ್ನ ನಡೆದೇ ಇದೆ, ಇರುತ್ತದೆ.
ಇದೆಲ್ಲವನ್ನು ಮೀರಿ ಬೆಳೆಯುವುದು ಹೇಗೆ? ಇದನ್ನು ನಿಯಂತ್ರಿಸಲು ನಮಗೆ ಸ್ವ-ನಿಯಂತ್ರಣ ಬಹಳ ಮುಖ್ಯ. ಯಾವುದಕ್ಕೂ ಅದೇ ನಿಮಿಷದಲ್ಲಿ ಪ್ರತಿಕ್ರಿಯಿಸದೆ ಸುಮ್ಮನೆ ಅದನ್ನು ಮನಸ್ಸಿನಲ್ಲಿ ಮಂಥನ ಮಾಡಿದರೆ ಬಹಳಷ್ಟು ಗಾಬರಿಗಳು, ಯೋಚನೆಗಳು ತಹಬದಿಗೆ ಬರುತ್ತವೆ. ಚಿತ್ರ/ ಟೀವಿ ನೋಡುತ್ತಿದ್ದಾಗ ಬೇಸರದ, ಸಂತಾಪದ ಸನ್ನಿವೇಶ ಬಂದಾಗ ಆಫ಼್ ಮಾಡಬಹುದು, ಓದುತ್ತಿರುವಾಗ ನಿಲ್ಲಿಸಬಹುದು. ಆದರೆ ಜೀವನದಲ್ಲಿ ಹಾಗಾಗುವುದಿಲ್ಲವಲ್ಲ. ಬಂದದನ್ನು ಎದುರಿಸಿ ಓಡದೇ ನಿಭಾಯಿಸಬಲ್ಲ ಜಾಣತನ ಬರುವುದು ಸ್ವಲ್ಪ ನಿರ್ವಿಕಾರ ಭಾವ ಬೆಳೆಸಿಕೊಂಡಾಗಲೇ. “ಅಯ್ಯೊ, ಬರೀ ಸಿನೇಮಾ ಕಣೆ, ಇದಕ್ಕೆ ಇಷ್ಟು ಪ್ರತಿಕ್ರಿಯೆನಾ? ಇಷ್ಟೊಂದು ಕಣ್ಣೀರು, ದುಗುಡ ಯಾಕೆ” ಬುದ್ಧಿ ಹೇಳಿದ ಕೆಲವರ ಧ್ವನಿ ಇನ್ನು ಕಿವಿಯಲ್ಲಿದೆ. ಮೂರನೆಯವರ ದೃಷ್ಟಿಯಿಂದ ನೋಡು, ನಮ್ಮದಲ್ಲ ಅಂತ ತಿಳಿದು ಪರಾಮರ್ಶಿಸು ಎನ್ನುವುದು ಇದಕ್ಕೇ ಏನೋ!
” ಒಳ್ಳೆಯದು ನೋಡು, ಮಾತಾಡು, ಮಾಡು” ಎನ್ನುವುದು ಸರಿಯೇ ಆದರೆ ಕೆಟ್ಟದ್ದು, ನೋವುಗಳನ್ನು ಕೂಡ ಒಪ್ಪಿಕೊಳ್ಳಬೇಕು. ಅವು ಬದುಕಿನ ಅಭಿವಾಜ್ಯ ಅಂಗ ಅನ್ನುವುದು ಅರಿವಾದಾಗ ಸ್ವಲ್ಪ ಮಟ್ಟಿಗೆ ನೆಮ್ಮದಿ ಸಿಗುತ್ತೆ.
–ಸಹನಾ ಪ್ರಸಾದ್