ಒಳಗೊಂದು ಆರದ ಹಣತೆ ಹಚ್ಚಿಡುವವಳು: ಅನುರಾಧ ಪಿ. ಸಾಮಗ

ಮೊನ್ನೆ ಅಮ್ಮಂದಿರ ದಿನದಂದು ನನ್ನ ಕಂದಮ್ಮ ನನಗೊಂದು ಕಾರ್ಡ್ ಮಾಡಿ ತಂದುಕೊಟ್ಟಾಗ ಕಣ್ಣಲ್ಲಿ ನೀರಾಡಿತ್ತು. ಅವಳಿಗೆ ತೋರಿಸಬಾರದೆಂದು ಕಣ್ತಪ್ಪಿಸಿದರೂ ಬಾಗಿ ಕಣ್ಣೊಳಗಿಣುಕಿ ಖಾತ್ರಿ ಪಡಿಸಿಕೊಂಡವಳೇ, ಇನ್ನೊಂದು ಮುತ್ತಿಕ್ಕಿ "ಐ ಮೀನ್ ಇಟ್ ಅಮ್ಮಾ.." ಅಂದಳು. "ಅಮ್ಮಾ, ನೀನು ಜಗತ್ತಿನ ಎಲ್ಲ ಅಮ್ಮಂದಿರಿಗಿಂತ ಶ್ರೇಷ್ಠ, ನಾನು ನಿನ್ನನ್ನು ತುಂಬಾ ಅಂದರೆ ತುಂಬಾ, ಜಗತ್ತಿನ ಎಲ್ಲದಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ.. " ಇದೇ ಆ ಹಾಳೆಯ ಮೇಲಿದ್ದುದರ ಸಾರಾಂಶ. ಎಲ್ಲ ಮಕ್ಕಳೂ ಬರೆಯುವಂಥದ್ದೇ. ಆದರೆ ಆ ಇನ್ನೊಂದು ಸಾಲು ಓದಿ, ಒಮ್ಮೆ ಚಕ್ಕನೆ ಚುಚ್ಚಿದಂತನಿಸಿತು ಮತ್ತೆ ಮರುಗಳಿಗೆಯೇ ಉಕ್ಕಿ ಬಂದ ಪ್ರೀತಿ ಕಣ್ಣೀರಾಗಿ ಹೊರಹೊಮ್ಮುವಂಥದ್ದೇನೋ ಆಪ್ತಭಾವ! "ಅಮ್ಮ, ನೀನು ಸಿಕ್ಕುವ ಮುಂಚೆ ಹೀಗಿದ್ದೆ ನಾನು" ಅಂತ ಬರೆದು ಪಕ್ಕದಲ್ಲಿ ಒಂದು ಅಳುಮುಖದ ಚಿತ್ರ, ಅದರ ಕೆಳಗೆ "ನೀನು ಸಿಕ್ಕಿದ ಮೇಲೆ ಹೀಗಾದೆ ನಾನು" ಅಂತ ಒಂದು ನಗುಮುಖದ ಚಿತ್ರ ಇತ್ತು ಅಲ್ಲಿ. ಎಲ್ಲೋ ನೋಡಿದ್ದ ಸಾಲುಗಳು ಅವು, ಅವಳ ಸ್ವಂತದ್ದಲ್ಲವೆಂಬುವುದು ನನಗೂ ಗೊತ್ತು. ನೋಡಿದ ಅಷ್ಟೂ ಸಾಲುಗಳಲ್ಲಿ ಇದನ್ನ ಬರೆಯಬೇಕು ಅಂತ ಅವಳಿಗನ್ನಿಸಿದ್ದರಲ್ಲಿ ಅವಳು ನನ್ನನ್ನ ಅತೀವ ಪ್ರೀತಿಸುವುದರ ಬಗ್ಗೆ ಸಾಕ್ಷಿ ಇದೆಯೇ ಹೊರತು ಇನ್ನೇನಲ್ಲ ಅನ್ನುವ ಮಾತು ಪ್ರೀತಿ ಉಕ್ಕಿಸಿದರೆ, ನಾನು ಸಿಕ್ಕುವ ಮುಂಚೆಯೂ ಅವಳದೊಂದು ನನ್ನ ಕಂದಮ್ಮನದಲ್ಲದ ಅಸ್ತಿತ್ವವಿತ್ತು ಅನ್ನುವ ಮಾತು ಅಲ್ಲಿ ನನ್ನನ್ನ ಚುಚ್ಚಿದ್ದು. ಆದರೆ ಈಗೊಂದೆರಡು ವರ್ಷದ ಹಿಂದೆ ಅವಳಿಗೆ ತಾನು ನನ್ನ ಹೊಟ್ಟೆಯಿಂದಾಚೆ ಬಂದ ಮಗುವಲ್ಲ ಅನ್ನುವ ಮಾತು ನಾನು ತಿಳಿಸಿದಾಗ ಅವಳು ಪ್ರತಿಕ್ರಿಯಿಸಿದ ರೀತಿ ನೆನಪಾಯಿತು.

ಒಂದಷ್ಟು ಹೊತ್ತು "ಇದು ಮೋಸ, ನೀನು ನಮ್ಮಮ್ಮ ಅಲ್ವಾ ಹಾಗಾದ್ರೆ?" ಅನ್ನುತ್ತಾ ಅತ್ತವಳನ್ನ ತೊಡೆ ಮೇಲೆ ಕೂರಿಸಿಕೊಂಡು "ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು ಮಗಾ, ನಾನಲ್ವಾ ನಿನ್ನಮ್ಮ?" ಅಂದಾಗ, ಕಣ್ಣಲಿಣುಕಿ ಅದೇನು ಕಂಡಳೋ ಆ ಹತ್ತರ ಹುಡುಗಿ, ಒಂದು ಹತ್ತು ಮುತ್ತಿಟ್ಟು "ನೀನೇ ನನ್ನಮ್ಮ. ಈಗಷ್ಟೇ ಅಲ್ಲ, ಇನ್ನೆಷ್ಟು ಸಲ ಹುಟ್ಟಿದರೂ ನೀನೇ ನನ್ನಮ್ಮ ಆಯ್ತಾ ..?" ಅನ್ನುತ್ತಾ ಮತ್ತೆ  ನನ್ನ ತಲೆ ನೇವರಿಸಿದಾಗ ಆ ಹೊತ್ತು ಅವಳೇ ನನ್ನಮ್ಮ ನಾನೇ ಅವಳ ಕಂದ ಅನ್ನುವಂತಿತ್ತು. ಅಲ್ಲಿಂದೀಚೆಗೆ ನಮ್ಮ ನಡುವಿನ ಅನುಬಂಧ ಉದ್ದೇಶಗಳಿಗೂ ಕಾರಣಗಳಿಗೂ ಮೀರಿದ್ದು ಅನ್ನುವ ಬಗ್ಗೆ ಸಂಶಯವುಳಿಯಲಿಲ್ಲ ನನಗೆ. ( ಅವಳ ಶಾಲೆಯಲ್ಲಿ ಅಂಧ ಮಕ್ಕಳ ನೃತ್ಯ ಕಾರ್ಯಕ್ರಮವೊಂದು ನಡೆಯುತ್ತಿದ್ದಾಗ  "ಈ ಪುಟ್ಟ ಮಕ್ಕಳಿಗ್ಯಾಕಮ್ಮಾ,ಇಂಥ ಶಿಕ್ಷೆ ಕೊಟ್ಟಿದ್ದು ದೇವರು?" ಅಂದವಳಿಗೆ ಉತ್ತರವಾಗಿ ನಾವು ಹಲವು ಸಲ ಬೇರೆ ಬೇರೆ ಜೀವರೂಪದಲ್ಲಿ ಹುಟ್ಟಿಬರುವುದಾಗಿಯೂ, ಒಂದು ಜನ್ಮದಲ್ಲಿ ಸಿಗಬಹುದಾದ ಶಿಕ್ಷೆಯ ಪ್ರಮಾಣಕ್ಕೆ ಮೀರಿದ ತಪ್ಪು ಕೆಲಸ ಮಾಡಿದ್ದವರು ಮುಂದಿನ ಬಾರಿ ಹುಟ್ಟುವಾಗ ಹೀಗೆ ಶಾಪಗಳ ಜೊತೆ ಹುಟ್ಟುವುದಾಗಿಯೂ ನಾನು ಹೇಳಿದ್ದು ಅವಳಲ್ಲಿ ಪುನರ್ಜನ್ಮದ ಬಗ್ಗೆ ಒಂದು ಕಲ್ಪನೆ ಹುಟ್ಟಿಸಿತ್ತು) 
ಮದುವೆಯಾಗಿ ಹತ್ತುವರ್ಷಗಳ ಯಾತನಾಮಯ ನಿರೀಕ್ಷೆಯ ನಂತರ ನನ್ನ ಬದುಕು ತುಂಬಿದವಳು ನನ್ನ ದೇವತೆ ಶ್ರಾವ್ಯಾ. ಅಕಾಸ್ಮಾತ್ ದಾರಿಯಲ್ಲಿ ಭೇಟಿಯಾದ ಒಬ್ಬಳು ಸಾಮಾಜಿಕ ಕಾರ್ಯಕರ್ತೆ ಲೋಕಾಭಿರಾಮ ಮಾತಾಡುತ್ತಾ, "ಮಕ್ಕಳೆಷ್ಟು?" ಅಂದದ್ದು, ನಾನು "ಇನ್ನೂ ಇಲ್ಲ" ಅಂದದ್ದು, ಅವಳು ವಯಸ್ಸು ಕೇಳಿದ್ದು, ನನ್ನ ಕಣ್ಣಲ್ಲಿ ನೀರಾಡಿದ್ದು, ಅವಳು ಅರ್ಥೈಸಿಕೊಂಡು ದತ್ತು ತೆಗೆದುಕೊಳ್ಳುವ ಬಗ್ಗೆ ಪ್ರಸ್ತಾಪಿಸಿದ್ದು, ನಾನು ಹಿಂದು ಮುಂದು ನೋಡದೆ "ಹೂಂ" ಅಂದದ್ದು, ಮುಂದೊಂದು ದಿನ ಅವಳು "ನೋಡು ಒಂದು ಹೆಣ್ಣು ಮಗು ಇದೆ, ಏನಂತೀಯಾ?" ಅಂದದ್ದು, ನಾನು ದೇವರೇ ಎದುರು ನಿಂತು "ಇಗೋ.." ಅಂತ ಕೊಡುತ್ತಿರುವಂತೆ ಸಂಭ್ರಮಿಸಿ "ಬೇಕು ನನಗೆ.." ಅಂತ ಕುಣಿದಾಡಿದ್ದು ಇವೆಲ್ಲಾ ಎಣಿಸದೆ ನಡೆದುಹೋದ ನನ್ನ ಬಾಳಿನ ಅತಿ ಚಂದದ ನಡೆಗಳು.

ಎರಡು ತಿಂಗಳ ವಯಸ್ಸಲ್ಲಿ ನನ್ನ ಮನೆ ತುಂಬಿದ ಕಂದ ಬದುಕಿನ ಅತಿ ಸುಂದರ ಗಳಿಗೆಗಳನ್ನ ನನಗೆ ವರವಾಗಿ ತಂದವಳು. ನನಗೆ "ನಾನು ಹೆತ್ತಿಲ್ಲ, ಹೆಣ್ಣೆನಿಸಿಕೊಳ್ಳಲು ಯೋಗ್ಯಳಲ್ಲ" ಅನ್ನುವ ಕೀಳರಿಮೆಯನ್ನು ನೂರಕ್ಕೆ ತೊಂಬತ್ತೊಂಬತ್ತರಷ್ಟು ಮರೆಸಿದವಳು. ಆದರೂ ಆ ನೂರಕ್ಕೆ ಒಂದರಷ್ಟು ಇದೆಯಲ್ಲಾ, ಅದೆಲ್ಲೋ ಅವಳ ಚೈತನ್ಯದ ಕಣ್ಣಿಂದ ಅಡಗಿಯೇ ಕೂತು ಆಗಾಗ ತನ್ನಿರುವನ್ನ ಸಾಧಿಸಿತೋರಿಸುತ್ತಿರುತ್ತದೆ. ಆದರೆ ನನ್ನ ಕಂದ ನನಗೆ ಬದುಕಿನ ಅತಿದೊಡ್ದ ಪಾಠ ಕಲಿಸಿಕೊಟ್ಟಿದ್ದಾಳೆ. ಅದೇನೆಂದರೆ ನಾವು ಹೆರದ ಹೆಣ್ಣುಮಕ್ಕಳು ಶಪಿತರಲ್ಲ, ಮುಚ್ಚಿದ ದಾರಿಯೆದುರು ನಿಂತವರಲ್ಲ, ಕುರುಡರಲ್ಲ, ಕುಂಟರಲ್ಲ, ಬದಲಿಗೆ ಒಂದು ವಿಭಿನ್ನ ದಾರಿಯನ್ನು ನಡೆಯಬೇಕಾದವರು ಅಷ್ಟೇ. 

ಅವಳು ತಂದುಕೊಟ್ಟ ಕಾರ್ಡ್ ನ್ನು ಕೈಯ್ಯಲ್ಲಿಟ್ಟುಕೊಂಡೇ ಆ ಸುಖದ ಅನುಭೂತಿಯಲ್ಲೇ ಪೇಪರ್ ಮೇಲೆ ಕಣ್ಣಾಡಿಸತೊಡಗಿದೆ. "ಮನುಷ್ಯನ ನೋವು ಸಹಿಸುವ ಶಕ್ತಿ ಇಷ್ಟು, ಆದರೆ ಹೆರುವಾಗ ತಾಯಿ ಅನುಭವಿಸುವ ನೋವು ಅದಕ್ಕಿಂತ ಇಷ್ಟು ಪಟ್ಟು ಹೆಚ್ಚು. ಹಾಗಾಗಿ ಅಮ್ಮ ತಾನು ಸಾಯುವಷ್ಟು ನೋವುಂಡು ನಮಗೆ ಜನ್ಮ ನೀಡುವ ದೇವತೆ" ಅನ್ನುವ ಸಾಲು ಮತ್ತು "ದೇವರು ಎಲ್ಲೆಡೆಯೂ ಇರಲಾರೆನೆಂದೇ ಅಮ್ಮನನ್ನು ಸೃಷ್ಟಿಸಿದ" ಅನ್ನುವ ಸಾಲುಗಳು ಮನಸಲ್ಲಿ ನಿಂತು ಕಂತಲಾರಂಭಿಸಿಬಿಟ್ಟವು. ಮುಂಚೆಯೂ ಅದೆಷ್ಟೋ ಸಲ ಓದಿದ್ದರೂ, "ಅಯ್ಯೋ.. ದೇವತೆಯೆನಿಸಿಕೊಳ್ಳಲಾಗಲಿಲ್ಲ ನನ್ನಿಂದ.." ಅನ್ನಿಸಿತು ಮತ್ತೊಮ್ಮೆ.  ಮರುಕ್ಷಣವೇ "ಅಲ್ಲ, ಅದು ಹಾಗಲ್ಲ, ಶ್ರಾವ್ಯಾಳನ್ನು ನೋಡು ಒಮ್ಮೆ, ನೀನು ಯಾವ ಅಮ್ಮನಿಗೆ ಕಮ್ಮಿ?" ಅನ್ನುವ ಮಾತು ಹೊರಟಿತು ಒಳಗಿಂದ. "ಆದರೂ ಒಂಬತ್ತು ತಿಂಗಳು ಹೆತ್ತು, ಹೊತ್ತು ತಾಯಾಗುವುದೂ, ಸುಮ್ಮನೆ ಒಂದು ಕಂದನ ಬಾಯಿಯಿಂದ ಅಮ್ಮಾ ಅನಿಸಿಕೊಳ್ಳುವುದು ಎರಡೂ ಒಂದೇ ಏನು?" ಅನ್ನುವ  ತಪ್ಪಿತಸ್ಥ ಭಾವನೆಯ ಇನ್ನೊಂದು ದನಿಯೂ ಹಿಂದೆಯೇ ಬಂತು. ನನಗೆ ನಾನೇ ಒಂದು ಪ್ರಶ್ನೆ ಹಾಕಿಕೊಂಡೆ, "ಅಮ್ಮ ಅಂದರೆ ಯಾರು?"

ನನಗೆ ನನ್ನ ಅಮ್ಮ ಅಂದರೆ ಯಾವತ್ತಿದ್ದರೂ ಅದು ನಮ್ಮದು ಮತ್ತೆ ನಮ್ಮದೇ ಅನ್ನುವ ಬರೀ ಒಂದು ನಂಬಿಕೆ, ವಿಶ್ವಾಸ. ಅವಳ ಯೋಚನೆಯ ಜೊತೆಗೆ  "ಅಯ್ಯೋ ಪಾಪ, ಅವಳಿಗೆ ಹೇಗೆ ಸಹಾಯ ಮಾಡಬಹುದು.." ಅನ್ನುವ ಭಾವನೆ, ಜೊತೆಗೆ "ಎಷ್ಟು ಕೆಲಸ ಮಾಡ್ತೀಯಾಮ್ಮಾ?" ಅಂತ ಕೈಯ್ಯೆಳೆದು ಕೂರಿಸಿ ಸದಾ ಒದ್ದೆಕೈ ಒರೆಸಿ ಒರೆಸಿ ಹಸಿಯಾಗಿರುತ್ತಿದ್ದ ಅವಳ ಸೆರಗನ್ನ ಅವಳ ತೊಡೆಯ ಮೇಲೆ ಹಾಸಿ ಅಲ್ಲಿ ತಲೆಯಿಟ್ಟು ಜಗತ್ತನ್ನ ಮರೆಯುವ ಆ ಬೆಚ್ಚನೆಯ ನೆನಕೆಯಷ್ಟೇ ಮನಸ್ಸಲ್ಲಿ ಮೂಡುವುದು. ಅವಳೆಂದರೆ ಅವಳಿರುವವರೆಗೆ ಲೋಕ ಪಾಲಿಸುವ ಶಕ್ತಿ ನಮ್ಮನ್ನು ಕೈಬಿಡದಂತೆ ಅದನ್ನು ಪ್ರಾರ್ಥಿಸಿ ಒತ್ತಾಯಿಸಿ ವಿವಶಗೊಳಿಸುತ್ತಾಳೆ ಅನ್ನುವ ಧೈರ್ಯ. ನನ್ನ ಅಮ್ಮ ನನಗೆ ಮಾದರಿಯೆಂದೋ, ಗುರುವೆಂದೋ, ಸಂಕಟದ ಹೊತ್ತಲ್ಲಿ ನನಗೆ ಧೈರ್ಯ ತುಂಬುವವಳೆಂದೋ, ಆಧಾರವಾಗಿ ನಿಲ್ಲುವವಳೆಂದೋ ಏನೂ ಅನಿಸುವುದೇ ಇಲ್ಲ. ಆದರೆ ಬದುಕಿನಲ್ಲಿ ಇದುವರೆಗೆ ಅನುಭವಿಸಿರದ ಒಂದು ಮಧುರ ಅನುಭೂತಿ ಅವಳು.

ಅವಳು ಅಂದರೆ ತನಗಾಗುವ ಎಲ್ಲ ಅನಾನುಕೂಲತೆಗಳನ್ನು ಸಹಿಸಿಕೊಂಡು ನಮಗೆ ಪ್ರೀತಿಯುಣಿಸುವವಳು ಅಷ್ಟೇ. ಅವಳು ತಪ್ಪಾಗಿರುವುದು ಸಾಧ್ಯವೇ ಇಲ್ಲ ನನಗೆ. ಅಮ್ಮ ಅಡುಗೆಗೆ ಉಪ್ಪು ಜಾಸ್ತಿ ಹಾಕಿದರೆ "ಕಲ್ಲುಪ್ಪು ಖಾಲಿಯಾಯ್ತಾ, ಪುಡಿಯುಪ್ಪು ಹಾಕಿದ್ದಿಯಾಮ್ಮಾ ಇವತ್ತು? ಅಂದಾಜು ತಪ್ಪಿರಬೇಕು" ಅಂತಲೂ ಅಥವಾ ಹಾಕುವುದು ಮರೆತರೆ "ನಾನೇ ಆ ಹೊತ್ತಲ್ಲಿ ಜಡೆ ಕಟ್ಟು ಅಂತ ಪೀಡಿಸ್ತಾ ಇದ್ದೆ, ಪಾಪ ಮರೆತುಹೋಗಿರಬೇಕು" ಅಂತನೂ ಅಮ್ಮನನ್ನು ಸುಮ್ಮಸುಮ್ಮನೇ ವಹಿಸಿಕೊಂಡುಬಿಡುತ್ತದೆ ಮನಸ್ಸು. ನನ್ನಮ್ಮ ತುಂಬ ಓದಿಕೊಂಡವಳಲ್ಲ, ತುಂಬ ಧೈರ್ಯಸ್ಥೆಯಲ್ಲ, ತುಂಬ ಜಾಣೆಯಲ್ಲ, ತರತರದ ಅಡುಗೆ ಸಿಕ್ಕಸಿಕ್ಕವರಿಂದ ಕಲಿತು ಮಾಡುವ ಉತ್ಸುಕತೆ ಅವಳಲ್ಲಿಲ್ಲ, ತುಂಬ ಅಲಂಕರಿಸಿಕೊಂಡು ಎದ್ದು ಕಾಣುವಂತೆ ನಡೆದುಕೊಳ್ಳುವುದು, ಮಾತನಾಡುವುದು ಗೊತ್ತಿಲ್ಲ. ಒಟ್ಟಾರೆ ಜಗತ್ತಿನ ಕಣ್ಸೆಳೆಯುವ ವ್ಯಕ್ತಿತ್ವ ನನ್ನಮ್ಮನದಲ್ಲ. ಆದರೆ ನನಗೆ ನನ್ನಮ್ಮನನ್ನ ಬಿಟ್ಟರೆ ಇನ್ಯಾರೂ ಆ ಜಾಗಕ್ಕೆ ಸೂಕ್ತ ಅಂತ ಅನ್ನಿಸುವುದೇ ಇಲ್ಲ. ನನ್ನಮ್ಮ ಜಗತ್ತಿನಲ್ಲಿ ಎಲ್ಲರಿಗಿಂತ ಒಳ್ಳೆಯವಳು. ಅವಳು ಇನ್ನೆಲ್ಲರಿಗಿಂತಲೂ ನನಗಿಷ್ಟ, ನನ್ನಮ್ಮ ನನ್ನಮ್ಮ ಅಷ್ಟೇ.     

ಅಮ್ಮ ನಾಕು ಗೋಡೆಯೊಳಗೆ ಹಾಡುತ್ತಾ ಮನೆಗೆಲಸ ಮಾಡಿಕೊಂಡಿರುತ್ತಿದ್ದಳು. ಅವೇ ಆ ಹಾಡುಗಳನ್ನು ಅತ್ತ ಇತ್ತ ಓಡಾಡುತ್ತಾ ಕಲಿತು ನಾನೀಗ ನಾಕಾರು ಕಡೆ ಹಾಡಿ ಮೆಚ್ಚುಗೆ ಗಳಿಸುತ್ತೇನೆ, ಒಂದಷ್ಟು ಜನರಿಗೆ ಹೇಳಿಕೊಡುತ್ತೇನೆ. ಅಮ್ಮ ನಿದ್ದೆಯಲ್ಲೂ ನಸುನಗುವನ್ನ ಮುಖದಿಂದ ಮರೆಯಾಗಕೊಡಲೊಲ್ಲಳು. "ಅದು ಹೇಗೆ ಸದಾ ನಗ್ತಾನೇ ಇರ್ತೀಯಲ್ಲ ನೀನು" ಅಂತ ನಾನೀಗ ನನ್ನವರೆಲ್ಲರಿಂದ ಹೊಗಳಿಸಿಕೊಳ್ಳುತ್ತೇನೆ. ಅಮ್ಮ ಮನೆಯವರೆಲ್ಲರ ಮನಸಿನ ಜಾಡು ಹಿಡಿದು ತಾನು ನಡೆದುಕೊಳ್ಳಬೇಕಾದ ದಾರಿ ನಿಗದಿ ಪಡಿಸಿಕೊಳ್ಳುತ್ತಿದ್ದಳು. "ನಾನು ತಾನೇ, ನನ್ನನ್ನ ನಾನು ಸಂಭಾಳಿಸಿಕೊಳ್ಳಬಲ್ಲೆ, ಪಾಪ ಎದುರಿದ್ದವರಿಗೆ ನೋವಾಗಕೂಡದು" ಅನ್ನುವ ಅವಳ ಮೂಲಮಂತ್ರವನ್ನೇ ನನ್ನ ಮನಸ್ಸು ನುಡಿಯುತ್ತದೆ ಮತ್ತು ಸುತ್ತಮುತ್ತಲಿನವರಿಗೆ ಕಾಣುವಂತೆ ಪಾಲಿಸುತ್ತದೆ.

ಹಾಗಾಗಿ ನಾಕು ಜನರಿಂದ "ಸ್ನೇಹಮಯಿ ಕಣ್ರೀ ನೀವು, ಅದೆಷ್ಟು ಜನ ಪರಿಚಯರೀ ನಿಮಗೆ, ಸಂಬಂಧ ನಿಭಾಯಿಸಿಕೊಂಡು ಹೋಗೋದು ನಿಮ್ಮಿಂದ ಕಲಿಯಬೇಕು ಕಣ್ರೀ" ಅಂತ ಅನ್ನಿಸಿಕೊಳ್ಳುತ್ತೇನೆ. "ಅರೇ! ಮೆಣಸ್ಕಾಯಿ ತುಂಬಾ ರುಚಿಯಾಗಿದೆ, ಹೇಗೆ ಮಾಡಿದ್ರಿ?" ಅಂತ ನೆಂಟರೇನಾದರೂ ಬಂದವರು ಕೇಳಿದರೆ ಅಮ್ಮ ನಾಚುತ್ತಾ ಉತ್ತರಿಸಲು ತಡಾಬಡಾಯಿಸುತ್ತಾಳೆ, "ಅದರಲ್ಲೇನಿದೆ ನಿಮಗೆ ತಿಳಿದಿರದಂಥಾ ವಿಶೇಷ?" ಅನ್ನುತ್ತಾ ಸುಮ್ಮನೆ ಮೆಲುನಕ್ಕು ಒಳನಡೆಯುತ್ತಾಳೆ. ನನ್ನನ್ನೇನಾದರೂ ಹಾಗೆ ಹೊಗಳಿ, ವಿಧಾನ ಕೇಳಿದರೆ, ಒಂದು ಪೆನ್ನು ಪೇಪರ್ ತಂದು ಬರೆದೂ ಕೊಡುತ್ತೇನೆ, ಮರುದಿನ ವಾಟ್ಸ್ ಅಪ್, ಫೇಸ್ ಬುಕ್ ಗಳಲ್ಲೂ ಆ ವಿಧಾನ ಹಂಚಿಕೊಳ್ಳುತ್ತೇನೆ.

ಅಂದರೆ ಒಂದು ತಲೆಮಾರಿನ ಅಂತರದಲ್ಲಿ ಹೆಣ್ಣು ನಾಕು ಗೊಡೆಯೊಳಗಿಂದ ಹೊರಬಂದಿದ್ದಾಳೆ. ಅವಳಿಗೆ ತನ್ನತನವನ್ನು ಕಂಡುಕೊಳ್ಳಲು ಈಗ ಮಕ್ಕಳಷ್ಟೇ ಸಾಧನಗಳಲ್ಲ. ಅವಳ ಪ್ರಪಂಚದಲ್ಲಿ ಈಗ ಮಕ್ಕಳ ಜೊತೆಗೆ ಸ್ನೇಹವಿದೆ, ಒಂದಷ್ಟು ಪರಿಚಯಗಳಿವೆ, ಒಂದಷ್ಟು ಹವ್ಯಾಸಗಳಿವೆ, ಒಂದಷ್ಟು ತನ್ನ ಚೈತನ್ಯದ ಉದ್ದಗಲಕ್ಕೆ ತಕ್ಕ ತನ್ನದೇ ಆದ ಆಸೆಗಳಿವೆ. ಇದಕ್ಕೆಲ್ಲ ಮೂಲ ವಿದ್ಯೆ. ನಮ್ಮ ಜನಾಂಗದ ಹೆಚ್ಚಿನೆಲ್ಲ ಹೆಣ್ಣುಮಕ್ಕಳೂ ಕನಿಷ್ಠ ವಿದ್ಯಾಭ್ಯಾಸ ಪಡೆದುಕೊಂಡವರು. ಹಾಗಾಗಿ ಲೋಕಕ್ಕೆ ತೆರೆದುಕೊಂಡರು, ಲೋಕ ಅವರೆದುರು ತೆರೆದುಕೊಂಡಿತು. ಅವರ ದೃಷ್ಟಿ ತುಸು ದೂರಕ್ಕೆ ಚಲಿಸಿ ತನ್ನತನದ ಹರಡುವಿಕೆಗೆ ಒದಗಿದ ಕ್ಷೇತ್ರ ತುಸು ವಿಸ್ತಾರವಾಯಿತು. ಅಷ್ಟೇ ಅಲ್ಲದೆ, ಇಂದಿನ ಹೆಣ್ಣು ಗಳಿಕೆಯ ಹಾದಿಯನ್ನೂ ತುಳಿಯತೊಡಗಿದಾಗ ಇನ್ನಷ್ಟೂ ಬದುಕಿನ ವಿಶಾಲತೆ ಮತ್ತು ಅಲ್ಲಿ ತಾನೆಂದರೇನೆಂದು ತಿಳಿದುಕೊಳ್ಳುವ ಅವಕಾಶಗಳನ್ನು ಕಂಡುಕೊಂಡಳು. ತಾನೆಂದರೆ ಇಲ್ಲಿಯವರೆಗೆ ಸೂತ್ರಬದ್ಧವಾಗಿ ನಡೆದುಕೊಂಡುಬಂದ ಸೀಮಿತ ಶಕ್ತಿಯ ವ್ಯಕ್ತಿತ್ವವಲ್ಲ, ಅದಕ್ಕಿಂತ ಹೆಚ್ಚಿನದು ತಾನು ಸಾಧಿಸಬಲ್ಲೆ ಅನ್ನುವ ಅರಿವುಂಟಾಯಿತು.

ಅಷ್ಟರಲ್ಲಿ ಹೊಸತನ್ನ ಸಾಧಿಸಿ ತೋರಿಸುವ ನಿಟ್ಟಿನಲ್ಲಿ ಇಲ್ಲಿಯವರೆಗೆ ತಾನೇನಾಗಿದ್ದೆನೋ ಅದನ್ನು ಒಂದರೆ ಗಳಿಗೆ ಮರೆತು ಹೆಜ್ಜೆಯಿಕ್ಕಿದ್ದು ಅವಳು ಮನೆಯಿಂದಾಚೆಗೆ. ಆಚೆ ನಡೆದದ್ದೇ ಅವಳಲ್ಲಿನ ಕ್ಷಮತೆ ಮೊದಲಿದ್ದಷ್ಟೆ ಇದ್ದಾಗ್ಯೂ ಅವಳಿಂದ ನಿರೀಕ್ಷೆ ಮೊದಲಿಗಿಂತ ಹೆಚ್ಚಿನದಾಯಿತು. ಈಗ ಅವಳು ಒಳಹೊರಗೆರಡು ಕಡೆಯೂ ತೊಡಗಿಸಿಕೊಳ್ಳಬೇಕಾದ ಸಂದರ್ಭ. ಎಷ್ಟೇ ಹುಮ್ಮಸ್ಸಿದ್ದರೂ ಎರಡೆರಡು ಕಡೆ ತನ್ನತನವನ್ನು ಹಂಚುತ್ತಾ ಅವಳೊಳಗೆ ಒತ್ತಡ ಹೆಚ್ಚತೊಡಗಿತು. ಈ ಪ್ರಕ್ರಿಯೆ ಅವಳಲ್ಲಿನ ಹೆಣ್ತನದ ಆರ್ದ್ರತೆ ಕಮ್ಮಿಯಾಗುವುದನ್ನು ನಿರೀಕ್ಷಿಸುತ್ತಿತ್ತು. ಅಂದರೆ "ನನ್ನ ಗಂಡ ನನ್ನ ಮಗು ನಾನಿಲ್ಲದೇ ಹೇಗಿದ್ದಾರು?" ಅನ್ನುವ ಪ್ರಶ್ನೆಗೆ "ನಾನಿದ್ದು ಪೂರೈಸುವ ಅವಶ್ಯಕತೆಗಳಿಗೆಲ್ಲ ದಾರಿ ಮಾಡಿಟ್ಟುಬಿಟ್ಟರೆ?" ಅನ್ನುವ ಉತ್ತರ ಕಂಡುಕೊಂಡಳು. ಕಂದನ ನಿದ್ದೆಗಣ್ಣಿನ ಅಳುವಿಗೂ ಎದ್ದುಬಿದ್ದು ಓಡಿ ಬರುತ್ತಿದ್ದವಳು, "ಹೋಗಬೇಡ.." ಅಂದು ಕಾಲುಕಟ್ಟಿ ಅಳುತ್ತಿರುವ ಮಗುವಿನ ಗಮನ ಅತ್ತ ಹರಿಸಲು ಇದ್ದಬದ್ದ ಆಟಿಕೆಯೊದಗಿಸಿ, ಕೊನೆಗೆ ತನ್ನ ಪರ್ಯಾಯವಾಗಿ ಹೆಣ್ಣೊಬ್ಬಳನ್ನು ಅಲ್ಲಿ ನಿಯಮಿಸಿ ಶತಾಯಗತಾಯ ತಾನು ಹೇಗಾದರೂ ಹೊರನಡೆಯುವ ಯತ್ನ ಮಾಡತೊಡಗಿದಳು. ಅತ್ತೆಮಾವನವರ ವೃದ್ಧಾಪ್ಯದಲ್ಲಿ ಅವರ ಸೌಲಭ್ಯಕ್ಕೆ ಸರಿಯಾಗಿ ಹೊತ್ತುಹೊತ್ತಿಗೆ ಬಿಸಿಬಿಸಿಯಾಗಿ ಮಾಡಿಬಡಿಸುತ್ತಿದ್ದವಳು, ದಿನಕ್ಕಾಗುವಷ್ಟೂ ಅಡುಗೆಯೆಲ್ಲ ಬೆಳಿಗ್ಗೆಯೇ ಮಾಡಿಟ್ಟು ಟೇಬಲ್ ಮೇಲೆ ಮುಚ್ಚಿಟ್ಟು "ಹಸಿವಾದಾಗ ಬಡಿಸಿಕೊಳ್ಳಿ" ಎಂದು ಹೇಳಿಹೋಗತೊಡಗಿದಳು. ಅಡಗಿದ್ದ ತನ್ನ ಸಾಮರ್ಥ್ಯ ನಿರೂಪಿಸುವ ಗುರಿಯ ಮುಂದೆ ಅವಳಿಗೆ ತನ್ನಲ್ಲಿ ಆಗುತ್ತಿದ್ದ ಬದಲಾವಣೆ ಅತಿಸಹಜ ಅನ್ನಿಸಿತ್ತು. ಅವಳು ಬದಲಾಗುತ್ತಾ ಅವಳೊಳಗಿನ ಅಮ್ಮನೂ ಬದಲಾದಳು. ಹಾಗಾಗಿ ಇಂದಿನ ಅಮ್ಮ ಅಂದರೆ ಮಕ್ಕಳಿಗೆ ಒಂದು ಹೆಮ್ಮೆ, ಒಂದು ಧೈರ್ಯ, ಒಂದು ಆದರ್ಶ. ಇಂದಿನ ಅಮ್ಮನಿಗೆ ಗೊತ್ತಿಲ್ಲದ್ದಿಲ್ಲ. ಮಕ್ಕಳ ಎಲ್ಲ ಸವಾಲುಗಳಲ್ಲೂ ಅವಳು ಒಂದು ಪ್ರಾರ್ಥನೆಯ ಮೂಲಕವಷ್ಟೇ ಅಲ್ಲ, ಜೊತೆಗೆ ತಾನೂ ಅದರೊಳನಡೆದು ಮಿತಿಮೀರಿ ಸಹಾಯವಾಗುತ್ತಾಳೆ.

ಅವಳು ಮಕ್ಕಳ ಅಭಿವೃದ್ಧಿಯ ಜೊತೆಗೆ ತಾನೂ ಬೆಳೆದು ಕಂಪ್ಯಾಟಿಬಲ್ ಅನ್ನಿಸಿಕೊಳ್ಳುತ್ತಾಳೆ. ಆದರೆ ಅಮ್ಮ ಅಂದರೆ ನಮ್ಮದು, ನಮ್ಮದಷ್ಟೇ ಅನ್ನುವ, ನಮಗೆ ಬೇಕಾದಾಗಲೆಲ್ಲ ಅವಳಲ್ಲಿ ಒದಗುತ್ತಾಳೆ ಅನ್ನುವ ವಿಶ್ವಾಸ? ಗೊತ್ತಿಲ್ಲ. ಆದರೆ, ಇಂದಿನ ಮಕ್ಕಳಿಗೂ ಅಮ್ಮ ಅಂದರೆ ಜಗತ್ತಿನ ಎಲ್ಲಕ್ಕಿಂತ ಇಷ್ಟ. ಅವರೂ ಅಮ್ಮ ಅನ್ನುವ ಅಂತಃಕರಣದೆದುರು ಸುಳ್ಳಾಡಲಾರರು. ಅಮ್ಮನ ಕಣ್ಣಿನ ಒಂದು ಹನಿಗೂ ಕರಗುವವರು. ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ಅಮ್ಮನಿಗೆ ಅಮ್ಮನ ದಿನದಂದು ಉಡುಗೊರೆಗಳನ್ನ ಮಾಡಿಕೊಡುವವರು, ಅಮ್ಮನ ಸೋಲು, ಸಣ್ಣಪುಟ್ಟ ತಪ್ಪನ್ನೂ ತಮ್ಮದೇ ಅಪಮಾನವೆಂಬಂತೆ ಸಹಿಸಲಾರರಾದರೂ "ಇನ್ನೊಮ್ಮೆ ಹೀಗಾಡಬೇಡ ಅಮ್ಮಾ" ಅಂತ ಮುದ್ದಿಟ್ಟು ಹೇಳುವವರು. ಹೊರಗಿನದರ ಜೊತೆಗೆ ಮನೆಯ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಅಮ್ಮನಿಗೆ ಹೆಗಲು ಕೊಡುವವರು. ಇದನ್ನು ನೋಡುವಾಗ ಬಹುಶಃ ಇಂದಿನ ಮಕ್ಕಳು ಇನ್ನೆಷ್ಟೋ ವಿಷಯಗಳಲ್ಲಿ ಹಂಚಿಹೋದ ಅವರ ಅಮ್ಮನಲ್ಲಿ ನಾವು ಕಂಡುಕೊಂಡದ್ದನ್ನೆಲ್ಲ ಹುಡುಕುವುದಿಲ್ಲ ಅನ್ನಿಸುವುದಿಲ್ಲವೇ? 
ಅಮ್ಮ ಹಾಗಿದ್ದರೆ ಸರಿ, ಹೀಗಿದ್ದರೆ ಸರಿ ಅಂತ ಅವಳ ಗುಣಲಕ್ಷಣ ಪಟ್ಟಿ ಮಾಡುವುದರಕ್ಕೋ, ಅವಳ ಅರ್ಹತೆಗಳನ್ನ ನಿಗದಿಪಡಿಸುವುದರಕ್ಕೋ ಕೂತರೆ ಜನ್ಮವಿಡೀ ಸಾಕಾಗಲಿಕ್ಕಿಲ್ಲ.  

ಸೂಕ್ಷ್ಮವಾಗಿ ನೋಡಿದರೆ ಹಲವು ವಿಷಯಗಳಲ್ಲಿ ಹಂಚಿಹೋದ ಹೆಣ್ಣಿನಲ್ಲಿನ ಅಮ್ಮ, ನಾವು ಕಂಡುಕೊಂಡ ನಮ್ಮಮ್ಮನ ಛಾಯೆಯೆದುರು ತುಸು ಅಪರಿಚಿತ ಅನ್ನಿಸಿದರೂ ಸ್ಥೂಲ ಅರ್ಥದಲ್ಲಿ ಅಮ್ಮನ ಅಂತಃಕರಣ ಅನ್ನುವದ್ದು ಹೆಣ್ಣಿನೊಳಗೆ ಜನ್ಮದತ್ತವಾಗಿ ಬಂದಿರುವ ಬತ್ತದ ಒರತೆ, ಮತ್ತದು ಎಂಥಾ ಪರಿಸ್ಥಿತಿಯಲ್ಲೂ ತನ್ನ ಮಕ್ಕಳಿಗೊದಗಿಯೇ ಒದಗುತ್ತದೆ. ಅದು ಹೊತ್ತು, ಹೆತ್ತು, ಪೊರೆದು, ಕ್ಷಣ ಕ್ಷಣ ಕಣ್ಣೆದುರಿದ್ದು ಒದಗಿಯೂ ಪ್ರಕಟವಾಗಬಹುದು. ಹೆರದ ಹೆಣ್ಣಿನ ಒಡಲಲ್ಲೂ ಜಿನುನುಗಿ ನನಗೊದಗಿದ ಹಾಗೆ ಅವಕಾಶ ಸಿಕ್ಕರೆ ಹೆತ್ತೊಡಲಿನಷ್ಟರ ಮಟ್ಟಿಗೆಯೇ ಒದಗಿ ಒಂದು ಜೀವನ ನಿರೂಪಿಸಬಲ್ಲುದು. ಅಥವಾ ಮನೆಯೊಳಗೂ ಹೊರಗೂ ತನ್ನನ್ನು ವಿಶಿಷ್ಠವಾಗಿ ನಿರೂಪಿಸಿಕೊಳ್ಳುವವಳಲ್ಲಿ ಅವಳು ಮಕ್ಕಳಿಗೊದಗುವ ಮಿತಿಗಳೊಳಗೇ ಮಕ್ಕಳು ಅವಳನ್ನು ಅವಲಂಬಿಸಿ, ಅದರಾಚೆಗೆ ತಮ್ಮನ್ನು ತಾವು ಸಂಭಾಳಿಸಿಕೊಳ್ಳುವ ಕ್ಷಮತೆ ಹುಟ್ಟುಹಾಕಬಲ್ಲದು. 

ಅಮ್ಮ ಅಂದರೆ ಎದೆಯೊಳಗೊಂದು ಹಣತೆ ಹಚ್ಚಿಟ್ಟು ಮನಕೆ ಮಬ್ಬು ಕವಿಯದಂತೆ ನೋಡಿಕೊಳ್ಳುವವಳು.
"ಕಪ್ಪು ಕಡಲಿನಲ್ಲಿ ದೋಣಿ ದಿಕ್ಕು ತಪ್ಪಲು ದೂರದಲ್ಲಿ ತೀರವಿದೆ ಎಂದು ತೋರಲು..
ಕೃತಕ ದೀಪ ಕತ್ತಲಲ್ಲಿ ಕಳೆದುಹೋಗದಂತೆ, ಸೂರ್ಯ ಚಂದ್ರ ತಾರೆಯಾಗಿ ಹೊಳೆದು ಬಾಳುವಂತೆ..
ಅಂತರಂಗದಲ್ಲಿ ನೂರು ಕಗ್ಗತ್ತಲ ಕೋಣೆ, ನಾದಬೆಳಕು ತುಂಬಲು ಮಿಡಿದ ಹಾಗೆ ವೀಣೆ
ಅಮ್ಮಾ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ…
ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ"
ಎಮ್. ಆರ್. ಕಮಲಾರವರ ಗೀತೆ ಮನಸಿನಲ್ಲಿ ಮಾರ್ನುಡಿಯುತ್ತಿದೆ.

"ಅಮ್ಮಾ, ನಾನ್ಯಾವಾಗಮ್ಮ ಅಮ್ಮ ಆಗೋದು?" ಅನ್ನುತ್ತಿದ್ದಳು ಶ್ರಾವ್ಯಾ.. "ಹೇ.. ಏನು, ಏನೂ ?!" ಅಂತ ನಕ್ಕು ಕೇಳಿದೆ. "ಹೌದಮ್ಮಾ, ನನಗೂ ನಾನು ನಿನ್ನನ್ನ ಇಷ್ಟ ಮಾಡುವಷ್ಟೇ ಇಷ್ಟ ಮಾಡಿಸಿಕೊಳ್ಳಲಿಕ್ಕೆ ಇಷ್ಟ. ಮತ್ತೆ ಅದು ಅಮ್ಮ ಆದಾಗ ಮಾತ್ರ ಸಿಗುತ್ತಲ್ಲ್ವಾ, ಅದಕ್ಕೆ ನನಗೂ ನಾನು ನಿನ್ನನ್ನ ಪ್ರೀತಿಸುವಷ್ಟೇ ಪ್ರೀತಿಸುವ ಒಂದು ಮಗು ಬೇಕು" ಅನ್ನುತ್ತಿದ್ದಳು.  "ದೊಡ್ಡವಳಾದಾಗ ಏನಾಗ್ತೀಯಾಮ್ಮಾ?" ಅಂತ ಕೇಳಿದವರೊಬ್ಬರಿಗೆ ತಟ್ಟನೆ "ಅಮ್ಮ ಆಗ್ತೀನಿ" ಅಂತ ಉತ್ತರಿಸಿದ ನನ್ನ ಬಾಲ್ಯದೊಳಗೆ ಮನಸು ಮುಳುಗಿಹೋಗಿತ್ತು. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
Soory Hardalli
Soory Hardalli
9 years ago

This happens to every mother. Very touching. Thank you for the story.

anuradha
anuradha
9 years ago
Reply to  Soory Hardalli

Thanks a lot

Gururaj
9 years ago

Amma Andre adaralli ondu shekthi Ede ……..madam thumba Chenagide manasige hathide

anuradha
anuradha
9 years ago
Reply to  Gururaj

Thank you sir

ಸ್ವರ್ಣಾ
ಸ್ವರ್ಣಾ
9 years ago

ಅಮ್ಮನ ಮೂಲ ಬದಲಾಗದು . ಚೆನ್ನಾಗಿ ಬರೆದಿದ್ದೀರಿ ಅನು

anuradha
anuradha
9 years ago

thanks swarna

Manjunath.P
Manjunath.P
9 years ago

ಹೃದಯ ಸ್ಪರ್ಶಿ…

Rajendra B. Shetty
9 years ago

ಕಣ್ಣು ತೇವವಾಯಿತು. ಒಂದೆಡೆ ಅಳಿದ ಅಮ್ಮನ ನೆನಪಾದರೆ, ಇನ್ನೊಂದೆಡೆ ನನ್ನ ಮಕ್ಕಳು (ಈಗ ದೊಡ್ಡವರಾಗಿದ್ದರೂ ಸಹ) ತನ್ನ ಅಮ್ಮನೊಡನೆ ಆಡುವ ಚಿತ್ರ ಕಣ್ಣೆದುರಿಗೆ ಬಂತು. ಅಮ್ಮನ ಬಗ್ಗೆ (ತನ್ನ ಅಮ್ಮನ ಬಗ್ಗೆ, ತಾನು ಅಮ್ಮನಾಗಿ), ನಾನು ಓದಿದ ಉತ್ತಮ ಲೇಖನಗಳಲ್ಲಿ ಇದೂ ಒಂದು.

8
0
Would love your thoughts, please comment.x
()
x