ಮರದ ಮೇಲೆ ಹಸಿರೆಲೆ ನೋಡಿದಾಗ ಏನೋ ಒಂಥರಾ ಹೊಸತನ, ಮನಸ್ಸಲ್ಲಿ ಮಲ್ಲಿಗೆ ಹೂವಿನ ಪರಿಮಳ ಮತ್ತು ಏನೋ ಹೇಳಲಾಗದ ಸಡಗರ ಮತ್ತು ಸಂಕೋಚದ ಅನುಭವ.ತನ್ನ ಮದುವೆಯ ದಿನಗಳ ನೆನಪು ತರುವ ಪರಿಮಳ. ಆದರೆ ಇತ್ತೀಚಿಗೆ ಬರುಬರುತ್ತಾ ಆ ಭಾವನೆಗಳು ಎಲ್ಲೋ ಕಾಣೆಯಾಗುತ್ತಿರೋ ಹಾಗಿದೆ. ಹೊಸತನದ ಬದಲು ಭಾರವಾಗುತ್ತಿರುವ ಭಾವನೆಗಳು.. ಹೀಗೆ ಯೋಚಿಸುತ್ತಿರುವಾಗಲೇ ಕಣ್ಣಂಚಿನಲ್ಲಿ ಹನಿ …. "ಕುಕ್ಕರ್ ಎಷ್ಟ್ ಸಲ ವಿಸಿಲ್ ಆಯಿತು.. ಅಡುಗೆ ಮನೆಲ್ಲಿ ಯಾರು ಇಲ್ವಾ? ಏನ್ ರೋಗ ಬಂದಿದೆ ಮಾನಸಂಗೆ?" ಅಂತ ಅತ್ತೆ ದೊಡ್ಡ ದನಿ ಮಾಡ್ತಾ ಅಡುಗೆ ಮನೆಗೆ ಬಂದು ಸ್ಟವ್ ಆಫ್ ಮಾಡಿ ಸೊಸೆ ಎಲ್ಲಿ ಅಂತ ನೋಡ್ತಿದ್ರು. ಕಿಟಕಿಯಲ್ಲಿ ಮಾವಿನೆಲೆ ನೋಡುತ್ತಾ ಮುಳುಗಿ ಹೋದ ಸೊಸೆಯನ್ನು ನೋಡಿ ಸಿಡುಕಿ "ಹಿಂಗೇ ನೋಡ್ಕೊಂಡು ಕೂತ್ರೆ ಅಡುಗೆ ಆದಂಗೆ" ಅಂದು ಇನ್ನು ಗೊಣಗುತ್ತ ಹೋದರು.
ಮದುವೆಯಾಗಿ ೩ ವರ್ಷ ಕಳೆದಿದೆ. ದೊಡ್ಡದೊಂದು ಕಂಪನಿ ಯಲ್ಲಿ ಮ್ಯಾನೇಜರ್ ಆಗಿ ಕೆಲ್ಸಮಾಡುವ ಹುಡುಗನನ್ನ ನೋಡಿ ತುಂಬ ಒಳ್ಳೆ ಸಂಬಂಧ ಅಂತ ದೊಡ್ಡವರು ನೋಡಿ ಮಾಡುವೆ ಮಾಡಿದರು. ನನಗೆ ಏನೂ ಹೇಳಬೇಕೆಂದು ತಿಳಿಯುತ್ತಿರಲಿಲ್ಲ.ತುಂಬ ಗೊಂದಲದಲ್ಲಿದ್ದ ಮನಸ್ಸು. ಅಪ್ಪ ಅಮ್ಮನ ಸಂತೋಷಕ್ಕೋ, ಅವರ ಜವಾಬ್ದಾರಿಯ ಪರಿವೆಗೊ, ಮತ್ತೇನೋ ಮಾತಿಗೆ ಕಟ್ಟಿಬಿದ್ದೋ ಮದುವೆಗೆ ಒಪ್ಪಿದ್ದಾಯಿತು. ಹುಡುಗನ ಬಗ್ಗೆ ಬೇಸರವೇನು ಇರಲಿಲ್ಲ. ಆದರೆ ಅಂತ ಹೇಳಿಕೊಳ್ಳುವಂತಹ ಆತ್ಹ್ಮಿಯತೆಯನ್ನು ತೋರಿಸದ ಹುಡುಗ ಅನ್ನಿಸುತ್ತಿತ್ತು ಅವನನ್ನು ನೋಡಿದಾಗ. ತನ್ನ ಕನಸಿನ ಹುಡುಗ ಹೇಗಿರಬೇಕು ಎಂದು ಯೋಚಿಸುತ್ತಿದ್ದಾಗ ತಕ್ಷಣ ಮನಸ್ಸಿಗೆ ಬಂದ ಕೆಮಿಸ್ಟ್ರಿ ಲೆಕ್ಚರರ್ ಮದನ್.
ತುಂಬ ಸೀರಿಯಸ್ ಮನುಷ್ಯ ಇರಬಹುದು ಅಂದು ಕೊಂಡು ಅವರ ಮೊದಲನೆಯ ಕ್ಲಾಸ್ ನಲ್ಲಿ ಕುಳಿತಿದ್ದೆ. ತಲೆಗೆ ಸ್ನಾನ ಮಾಡಿದ್ದರಿಂದ ಉದ್ದ ಕೂದಲನ್ನು ಸಡಿಲವಾಗಿ ಜಡೆ ಹೆಣೆದುಕೊಂಡಿದ್ದರಿಂದ ಗಾಳಿಗೆ ಹಾರಾಡುತ್ತಿತ್ತು. ಅದನ್ನು ಮುಂದಕ್ಕೆ ಹಾಕಿಕೊಂಡು ಪಾಠದ ಕಡೆ ಗಮನ ಕೊಡುತ್ತಾ ನಿಧಾನವಾಗಿ ಸರಿಪಡಿಸಿಕೊಳ್ಳುತ್ತಿದ್ದೆ. ಎರಡನೇ ಬೆಂಚ್ ನ ಮೂಲೆಯಲ್ಲಿ ಕುಳಿತಿದ್ದ ನನ್ನನ್ನೇ ನೋಡುತ್ತಿದ್ದ ಅವರು "ರೀ ನಾಗವೇಣಿ ಅವ್ರೆ, ನಿಮ್ಮ ಜಡೆ ಹಿಂದೆ ಹಾಕ್ಕೊಂಡ್ರೆ ನಾನು ಪಾಠ ಮಾಡಬಹುದು" ಅಂತ ಹೇಳಿ ಕಣ್ಣಂಚಿನ್ನಲ್ಲಿ ಮಿಂಚೋದನ್ನು ತೋರುತ್ತ ಮುಗುಳ್ನಗೆ ಬೀರಿದರು. ನನ್ನ ಜಡೆ ಅವರಿಗೆ ತೊಂದರೆ ಆಗುತ್ತಿತ್ತಾ? ಎಂದು ಯೋಚನೆ ಮಾಡುವುದರಲ್ಲಿ ಅವರ ಕ್ಲಾಸ್ ಮುಗಿಯಿತು. ಎಲ್ಲರು ಹೊರಗೆ ಹೋಗುತ್ತಿದ್ದಂತೆ ಅವರು ನನ್ನ ಬಳಿ ಬಂದು "ಬಹಳ ಸುಂದರ ನೀಳ ಜಡೆ ನನ್ನ ಗಮನ ಸೆಳೆಯಿತು, ಹಾಗಾಗಿ ಹಿಂದೆ ಹಾಕಲು ಹೇಳ್ದೆ, ಬೇಜಾರಿಲ್ಲ ಅಲ್ವಾ?" ಅಂದ್ರು. ಸುತ್ತಲೂ ಗೆಳತಿಯರು ನನ್ನನ್ನೇ ನೋಡುತ್ತಿದ್ದರು. ಏನೂ ಹೇಳಲು ತಿಳಿಯದೆ ಸುಮ್ಮನೆ ಮುಗುಳ್ನಕ್ಕು ಹೊರಬಂದೆ. ಒಂಥರಾ ವಿಚಿತ್ರ ಅನುಭವ.
ಮಾರನೆಯ ದಿನ ಕಾಲೇಜು ಗೆ ಬರುತ್ತಿದ್ದಂತೆ ಮೊದಲನೇ ಪಿರಿಯಡ್ ಕೆಮಿಸ್ಟ್ರಿ, ಮದನ್ ಸರ್ ದು. ಮತ್ತದೇ ನನ್ನ ಜಾಗದಲ್ಲಿ ಕೂತಿದ್ದ ನನ್ನನ್ನು ಸೆಳೆದಿದ್ದು ಅವರ ತಿಳಿಹಸಿರು ಬಣ್ಣದ ಶರ್ಟ್ ಅದಕ್ಕೆ ತಕ್ಕ ಟೈ ಮತ್ತು ಆ ಮನಮೋಹಕ ಮುಗುಳ್ನಗೆ. ನಮ್ಮೆಲ್ಲರಿಗಿಂತ ಸ್ವಲ್ಪ ಹಿರಿಯವರೆನಿಸುತ್ತದೆ ಆದರೆ ಅವರ ತುಂಟತನ, ಕಣ್ಣಲ್ಲೇ ಮಾತನಾಡಿಸುವ ಕಲೆ ನನಗೆ ಗೊತ್ತಿಲ್ಲದೆ ನನ್ನ ಆಕರ್ಷಿಸುತ್ತಿದ್ದವು. ತುಂಬ ಚೆನ್ನಾಗಿ ಎಲ್ಲರನ್ನೂ ನಗಿಸುವ ಕಲೆ ಅವರಿಗೆ ಗೊತ್ತು. ತಮ್ಮ ಸಣ್ಣ ಸಣ್ಣ ಜೋಕ್ಸ್ ಗಳಿಂದ ಎಲ್ಲರನ್ನು ತಮ್ಮೆಡೆ ಸೆಳೆಯುತ್ತಿದ್ದರು. ಮನಸ್ಸಲ್ಲೇ ಯೋಚಿಸುತ್ತಿದ್ದೆ "ಇವರ ಚೆಂದ ನೋಡಿ ಇವರಿಗೆ ಮದನ್ ಎಂದು ಹೆಸರಿಟ್ಟಿರಬಹುದಾ ಇಲ್ಲ ಮದನ್ ಅಂತ ಹೆಸರಿಟ್ಟಿದ್ದಕ್ಕೆ ಮದನನ ಆಕರ್ಷಣೆ ಇದೆಯಾ?" ಆದರೆ ಅವರ ಕ್ಲಾಸ್ ನಲ್ಲಿ ಜಡೆ ಮಾತ್ರ ಹಿಂದೆ ಹಾಕಲು ಮರೆಯುತ್ತಿರಲಿಲ್ಲ.
ಅಂದು ನನ್ನ ಹುಟ್ಟು ಹಬ್ಬಕ್ಕೆಂದು ಅಮ್ಮ ಗಿಫ್ಟ್ ಮಾಡಿದ್ದ ತಿಳಿ ಹಳದಿ ಸಲ್ವಾರ್ ಹಾಕಿಕೊಂಡು ಕಾಲೇಜ್ ಗೆ ಬಂದೆ. ಎಲ್ಲ ಗೆಳತಿಯರು ಸುತ್ತುವರೆದು ಮಾತಾಡಿಸ್ತಾ ಇದ್ರೂ. ನಮ್ಮ ಗುಂಪು ಗದ್ದಲ ಮಾಡುತ್ತಿದ್ದನ್ನು ಕಂಡು ತಮ್ಮ ಕಾರ್ ಅನ್ನು ನಮ್ಮಹತ್ತಿರವೇ ನಿಲ್ಲಿಸುತ್ತಾ, "ಏನಿವತ್ತು ನಾಗವೇಣಿ ಅವರ ಹುಟ್ಟಿದ ದಿನವೇ?" ಅಂತ ಹೇಳ್ತಾ ನನ್ನ ಹತ್ತಿರ ಬಂದು ಶೇಕ್ ಹ್ಯಾಂಡ್ ಮಾಡಿ ಪಕ್ಕದಲ್ಲಿ ನಿಂತರು. ಆಗಲೇ ತಿಳಿದಿದ್ದು ನನಗೆ ಅವರನ್ನು ಕಂಡರೆ ಹೇಳಲಾಗದೊಂದು ಭಾವನೆ ಮೂಡುತ್ತಿದ್ದೆ ಎಂದು. ಅವರ ಪೆರ್ಫ್ಯೂಮ್ ಪರಿಮಳಕ್ಕೆ ಮನಸ್ಸಲ್ಲಿ ಒಂದು ಪುಳಕ. ಇದನ್ನೆಲ್ಲಾ ಹತ್ತಿಕ್ಕಲಾಗದೆ ಈ ಮನುಷ್ಯ ಇಲ್ಲಿಂದ ಹೋದರೆ ಸಾಕಪ್ಪ ಅನ್ನೋ ಹಾಗಾಗಿತ್ತು ನನ್ನ ಪರಿಸ್ಥಿತಿ. ಅವರೋ ತಮ್ಮ ಜೋಕ್ ಗಳಿಂದ ಎಲ್ಲರ ಗಮನ ಸೆಳೆಯುತ್ತಾ ಆಕರ್ಷಣೆಯ ಬಿಂದುವಾಗಿದ್ರು. ಕೊನೆಗೆ ತಾವೇ ಎಲ್ಲರನ್ನು ತಮ್ಮ ಕಾರ್ ನಲ್ಲಿ ಕೂರಿಸಿಕೊಂಡು ಐಸ್ ಕ್ರೀಮ್ ಕೊಡಿಸಿಕೊಂಡು ಬಂದ್ರು. ಯಾಕೆ ಈ ಮನುಷ್ಯ ಹೀಗೆ ಅಂತ ಯೋಚನೆ ಮಾಡ್ತಿದ್ರೆ ಅದಕ್ಕೆ ಉತ್ತರನೇ ತಿಳಿಯುತ್ತಿರಲಿಲ್ಲ.
ಪರೀಕ್ಷೆಯ ಸಮಯ. ಎಲ್ಲ ವಿಷಯಗಳನ್ನು ಓದಿ ಮುಗಿಸಿದ್ದರೂ ತುಂಬ ಗೊಂದಲವಾಗುತ್ತಿತ್ತು. ಸ್ಪೆಷಲ್ ಕ್ಲಾಸ್ ಇದ್ದರಿಂದ ಕಾಲೇಜ್ ಗೆ ಬೇಗ ಬಂದಿದ್ದೆ. ಇನ್ನು ನನ್ನ ಗೆಳತಿಯರು ಬಂದಿರಲಿಲ್ಲವಾದ್ದರಿಂದ ಒಬ್ಬಳೇ ಕುಳಿತು ಅಭ್ಯಾಸ ಮಾಡುತ್ತಿದ್ದೆ. ಸ್ವಲ್ಪವೇ ದೂರದಲ್ಲಿ ಯಾರೋ ನನ್ನನ್ನು ದೃಷ್ಟಿಸಿ ನೋಡುತ್ತಿದ್ದರೆಂದು ಅನಿಸಿ ನೋಡಿದರೆ ಮದನ್ ತಮ್ಮ ಮುಗುಳ್ನಗೆ ಬೀರುತ್ತಾ ನನ್ನನ್ನೇ ನೋಡುತ್ತಿದ್ದರೆ. ತಕ್ಷಣ ಜಡೆ ಹಿಂದಕ್ಕೆ ಹಾಕಲು ಜಡೆಗೆ ಕೈ ಹಾಕಿದೆ. ಬೇಡ ಎನ್ನುವಂತೆ ತಲೆ ಆಡಿಸಿದರು. ಮನಸ್ಸಿನಲ್ಲೇನೋ ಕಸಿವಿಸಿ, ನನ್ನ ಗೆಳತಿಯರು ಬೇಗ ಬರಬಾರದೇ ಅಂದು ಕೊಳ್ಳುತ್ತಿದ್ದಂತೆ ಮದನ್ ಹತ್ತಿರ ಬಂದು ನನ್ನ ಕೈಗೆ ಒಂದಷ್ಟು ಪೇಪರ್ಸ್ ಕೊಟ್ಟು, ಅವಕ್ಕೆಲ್ಲ ಉತ್ತರ ಬರೆದು ಅಭ್ಯಾಸ ಮಾಡುವಂತೆ ಹೇಳಿ ಹೊರಟು ಹೋದರು. ಅವರು ಹೋದಮೇಲೆ ತುಂಬ ಖಾಲಿ ಖಾಲಿ ಅನ್ನಿಸಲು ಶುರುವಾಯಿತು. ಎಂಥ ಮನಸ್ಸು ನನ್ನದು? ಅವರಿದ್ದರೆ ಹೋಗಬಾರದೇ ಅನ್ನುತ್ತದೆ… ಹೋದರೆ ಯಾಕೆ ಹೋದರು ಅನ್ನುತ್ತದೆ.. ಏನಿದು ಮನಸ್ಸೇ ನಿನ್ನ ತುಂಟತನ!!
ಏನೇನೋ ಭಾವನೆಗಳು! ವಯಸ್ಸಿನ ಪ್ರಭಾವವೋ, ನಿಜವಾದ ಪ್ರೀತಿಯೋ, ಮನಸ್ಸಿನ ಕಾತುರತೆಯೋ ತಿಳಿಯದೆ ಮಸುಕು ಮಸುಕು…
ತಮ್ಮ ಮೂರನೇ ವರ್ಷದ ಆನಿವರ್ಸರಿಗೆ ಸಂಭ್ರಮ ಪಡಬೇಕೋ ಅಥವಾ ತನ್ನ ತಾಳ್ಮೆ ಸಹನೆಯ ಬಗ್ಗೆ ಹೆಮ್ಮೆ ಪಡಬೇಕೋ ತಿಳಿಯುತ್ತಿಲ್ಲ. ವರುಣ್ ತನ್ನ ಪತಿ ಎನಿಸಿಕೊಂಡು ಮೂರು ವರ್ಷಗಳಾಗಿವೆ. ತನ್ನಲ್ಲಿ ಏನೂ ಭಾವನೆಗಳನ್ನು ಮೂಡಿಸದ ವ್ಯಕ್ತಿ. ಒಮ್ಮೊಮ್ಮೆ ಅನಿಸುತ್ತದೆ ಅವರಿಗೂ ಹೀಗೆ ನನ್ನ ಬಗ್ಗೆ ಭಾವನೆಯ ಅಂತ? ತುಂಬ ಯಾಂತ್ರಿಕವಾಗಿ ಜೀವನ ನಡೆಸುತ್ತಿದೀವಿ ಅನ್ನಿಸುತ್ತದೆ. ಎಲ್ಲರೆದುರು ಇರುವ ರೀತಿ ತಾವಿಬ್ಬರೇ ಇದ್ದಾಗ ಇರುವುದಿಲ್ಲ. ವರುಣ್ ಗೆ ನನ್ನ ಸನಿಹ ಏನೂ ಅನ್ನಿಸುವುದಿಲ್ಲವೇ? ಹೊಸ ಸೀರೆಯುಟ್ಟಾಗ ತುಂಬ ಮುದ್ದಾಗಿ ಕಾಣಿಸುತ್ತಿದ್ದೇನೆ ಅನ್ನಿಸಿದಾಗ ಒಂದು ಕ್ಷಣ ದೃಷ್ಟಿಯನ್ನಿಟ್ಟು ನೋಡುತ್ತಾರೆ ಅಷ್ಟೇ. ಇದೆಲ್ಲದರ ಮಧ್ಯೆ ಇನ್ನೂ ಮಕ್ಕಳಾಗಿಲ್ಲವಲ್ಲ ಅಂತ ದೊಡ್ಡವರ ಅಳಲು. ಇಂಥ ವಿಷಯಗಳನ್ನು ಹೇಗೆ ಹೇಳುವುದು ಇವರಿಗೆಲ್ಲ? ಬೆಲ್ ಶಬ್ದ ಕೇಳಿಸಿ ಎಚ್ಚರವಾಯ್ತು. ವರುಣ್ ಎಂದಿನಂತೆ ಆಫೀಸ್ ನಿಂದ ಬಂದು ಸ್ವಲ್ಪ ಹೊತ್ತು ವಿಶ್ರಾಂತಿ ಮಾಡಲು ಕುಳಿತಿದ್ದರು. ತನ್ನ ಸಿಂಗಾರವನ್ನು ನೋಡಿ ಆಶ್ಚರ್ಯಪಟ್ಟು "ಏನಿವತ್ತು ಸ್ಪೆಷಲ್?" ಎಂದಾಗ ಬೇಸರವಾಯಿತು. ಏನೂ ಮಾತಾಡದೆ ಕುಳಿತಿದ್ದ ನನ್ನನ್ನು ಕಂಡು ಅತ್ತೆಗೆ ಅಯ್ಯೋ ಅನ್ನಿಸಿತೇನೋ… "ವರುಣ್ ಇವತ್ತು ನಿಮ್ಮ ಆನಿವರ್ಸರಿ ಅಲ್ವೇನೋ, ಹೊರಗೆ ಊಟಕ್ಕೆ ಹೋಗತೀರ ಇಲ್ಲ ಮನೆಲ್ಲೇ ಊಟ ಮಾಡ್ತಿರೋ" ಅನ್ನೋ ಮಾತಿಗೆ ವರುಣ್ "ತುಂಬ ಸುಸ್ತಾಗಿದೆ ಅಮ್ಮ ಇವತ್ತು.. ಭಾನುವಾರ ಹೊರಗೆ ಹೋಗತೀವಿ. ಇವತ್ತು ಮನೆಲ್ಲೇ ಊಟ ಮಾಡೋಣ" ಅಂತ ಹೇಳಿ ಬೆಡ್ರೂಮ್ ಕಡೆಗೆ ಹೋದ್ರು. ಕೋಪ, ಬೇಸರ, ಅಸಹನೆ, ಏನೋ ಕಳೆದು ಕೊಂಡ ಭಾವನೆ. ಒಂದು ವಿಶ್ ಮಾಡಬೇಕು ಅನ್ನೋ ಜ್ಞಾನನೂ ಇಲ್ಲದ ಗಂಡ!
ಬೆಳಗ್ಗಿನಿಂದ ತುಂಬ ಶಬ್ದ ಆಗುತ್ತಿದೆ ಪಕ್ಕದ ಫ್ಲಾಟ್ ನಲ್ಲಿ. ಯಾರೋ ಹೊಸಬರು ಬಂದಿರಬೇಕು ಅನ್ನಿಸುತ್ತೆ. ಹಾಲಿನವನು ಬಂದಾಗ ಹಾಗೆ ನೋಡಿದೆ, ತುಂಬ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಆ ಮನೆಯ ಹೆಂಗಸು ಒಂದೊಂದನ್ನೇ ನಿಧಾನವಾಗಿ ಒಳಗೆ ಸಾಗಿಸುತ್ತಿದ್ದಳು. ಸಹಾಯ ಮಾಡೋಣ ಅಂತ ಅನ್ನಿಸುತ್ತಿತ್ತು, ಆದರೆ ಮನೆಯಲ್ಲಿ ತನಗೆ ಕೆಲಸ ಬಾಕಿ ಇರುವುದರಿಂದ ಆಮೇಲೆ ಬರೋಣ ಅಂತ ಬರೀಲನ್ನು ಹಾಕಿಕೊಂಡು ಒಳಗೆ ಹೋದೆ. ತನ್ನೆಲ್ಲ ಕೆಲಸ ಮುಗಿಸಿ ವಿಶ್ರಾಂತಿ ಪಡೆದು ಪಕ್ಕದ ಮನೆಯ ಕಡೆ ಇಣುಕಿದೆ. ಕೆಲವು ವಸ್ತುಗಳು ಮಾತ್ರ ಇದ್ದವು. ಆ ಮನೆಯ ಗಂಡಸು ಅವುಗಳ ಜಾಗಕ್ಕೆ ಆ ವಸ್ತುಗಳನ್ನು ಇಡುವುದರಲ್ಲಿ ಮುಳುಗಿದ್ದರು. ಅವರ ಹೆಂಡತಿ(ಇರಬಹುದೇನೋ) ಕಾಣಲಿಲ್ಲ. ಹಾಗಾಗಿ ಮನೆಗೆ ಬಂದುಬಿಟ್ಟೆ.
ತುಂಬ ಜೋರಾದ ಕಿರುಚಾಟ, ಜೊತೆಯಲ್ಲಿ ಒಂದು ಹೆಣ್ಣು ತನ್ನ ದೊಡ್ಡ ಗಂಟಲಿನಲ್ಲಿ ಗಂಡನನ್ನು ಬೈಯುವುದು ಕೇಳಿಸುತ್ತಿತ್ಹು. "ನಿನ್ನ ಮುಸುಡಿ ನೋಡಿ ಮಾಡುವೆ ಆಗಿರಲಿಲ್ಲ ನಾನು. ನಿನ್ನ ಕೆಲಸ ನೋಡಿ, ಏನೋ ಬಹಳ ಚೆನ್ನಾಗಿ ಮಗಳನ್ನ ನೋಡಿಕೋತಾನೆ ಅಂತ ನನ್ನ ಮಾಡುವೆ ಮಾಡಿದ್ರು ನಿಂಗೆ. ಒಂದು ವರ್ಷ ಆದ್ರೂ ಇನ್ನೂ ಒಂದು ಒಡವೆ ಮಾಡಿಸಿಲ್ಲ, ಬರಿ ಬಾಯಲ್ಲೇ ಚಿನ್ನ ಬಂಗಾರ ಅಂತ ಮಾತಾಡತೀಯ ಅಷ್ಟೇ, ಏನ್ ಜನ್ಮನೋ ಏನೋ. ಹೆಂಡತೀನ ಚೆನ್ನಾಗಿ ನೋಡ್ಕೊಳೋ ಯೋಗ್ಯತೆ ಇಲ್ಲದ್ಮೇಲೆ ಮದ್ವೆ ಯಾಕ್ ಆಗ್ಬೇಕು? ಏನೋ ಕಥೆ ಕವನ ಅಂತ ಗಂಟೆಗಟ್ಲೆ ಕೂತ್ಕೋತೀಯ. ಏನ್ ಬಂದಿದ್ಯೋ ನಿಂಗೆ"
ಭಾನುವಾರ ಆಗಿದ್ದರಿಂದ ನಿಧಾನವಾಗಿ ತಿಂಡಿ ಮುಗಿಸಿ, ಕೂತು ಮಾತನಾಡುತ್ತಿದ್ದೆವು. ತವರಿಗೆ ಬಂದಿದ್ದ ವೀಣಾ ತನ್ನ ತಾಯಿಯ ಅಡಿಗೆಯ ಬಗ್ಗೆ ಹೊಗಳುತ್ತಿದ್ದಳು. ನಾನು ಮಾಡಿದ ತಿಂಡಿ ಅವಳಿಗೆ ಇಷ್ಟ ಅಗಲಿಲ್ಲವೇನೋ..ಬಸುರಿ ಹೆಂಗಸು ಅಂತ ಬೇಜಾಯಿತು, ಆದರೂ ಅತ್ತಿಗೆಯ ಮೇಲೆ ಪ್ರೀತಿ ಕಡಿಮೆ ಅಂತ ಅಲ್ಲ. ತುಂಬಾ ಮಾತಾಡುವ ಸ್ವಭಾವ ಅವಳಿಗೆ. ತನ್ನ ಗಂಡನನ್ನು ಬೈಯುತ್ತಾ, ಒಂದಷ್ಟು ದೂರುಗಳನ್ನು ಹೇಳಿ ಮನಸ್ಸನ್ನು ಹಗುರ ಮಾಡಿಕೊಂಡಿದ್ದು ಆಯಿತು. ತನ್ನ ಗಂಡ ತನ್ನ ಬಯಕೆಗಳನ್ನು ಪೂರೈಸುತ್ತಾನೆ ಅನ್ನೋ ಹೆಮ್ಮೆಯ ವಿಷಯವನ್ನು ಹೇಳಿತ್ತಾ ಕೆನ್ನೆ ಕೆಂಪು ಮಾಡಿಕೊಂಡಳು ಕೂಡ.
ತೆರೆದ ಬಾಗಿಲನ್ನು ಯಾರೋ ಬಡಿದ ಶಬ್ದ. ಪಕ್ಕದ ಮನೆಯಾಕೆ "ಸ್ವಲ್ಪ ಜೀರಿಗೆ ಇದ್ರೆ ಕೊಡಿ ಪ್ಲೀಸ್, ನಾವು ಹೊಸದಾಗಿ ಬಂದಿದೀವಿ ಪಕ್ಕದ್ ಮನೆಗೆ, ನಮ್ಮೆವ್ರಿಗೆ ಜ್ವರ ಬಂದು ಮಲಗಿದ್ದಾರೆ. ಮೆಣಸಿಸ ಸಾರು ಮಾಡಬೇಕು. ಅಂಗಡಿಗೆ ಹೋಗೋದಿಕ್ಕೆ ಆಗ್ಲಿಲ್ಲ". ಅತ್ತೆ ಅವರನ್ನು ಕರೆದು ಕೂರಿಸಿ "ಮಾನಸ ಜೀರಿಗೆ ಕೊಡು" ಅಂತ ಹೇಳಿ "ಏನಮ್ಮ ನಿನ್ ಹೆಸರು. ಎಲ್ಲಿಂದ ಬಂದಿದೀರ?" ಅಂತ ವಿಚಾರಿಸ್ತಿದ್ರು. ಒಳಗಿಂದ ಜೀರಿಗೆ ತಂದು ಕೊಟ್ಟೆ. ಮುಗುಳ್ನಗುತ್ತ ತೆಗೆದುಕೊಂಡು "ನನ್ನ ಹೆಸರು ಸವಿತಾ ಅಂತ ಆಂಟಿ, ನಮ್ಮೆಜಮಾನ್ರಿಗೆ ಟ್ರಾನ್ಸ್ಫರ್ ಆಯಿತು ಅದಿಕ್ಕೆ ಹೊಸಪೇಟೆಯಿಂದ ಬಂದಿದ್ದೀವಿ ಅಂತ ಹೇಳಿದಳು. ಹೊಸಪೇಟೆ ಅಂತ ಕೇಳಿದೊಡನೆ ಒಂಥರಾ ಖುಷಿ. "ಹೊಸಪೇಟೆಯಲ್ಲಿ ಎಲ್ಲಿ" ಅಂತ ಕೇಳಿದೆ. "ಅಲ್ಲಿ ರಾಮಣ್ಣನ ಗಲ್ಲಿ ಯಲ್ಲಿ ಇದ್ದ್ವಿ. ನಮ್ಮೆಜಮಾನ್ರು ಗವರ್ನಮೆಂಟ್ ಕಾಲೇಜು ಲೆಕ್ಚರರ್". ತುಂಬಾ ಸಂತೋಷವಾಗಿತ್ತು ಅವರನ್ನು ಕಂಡು. ಹಾಗೆ ಸ್ವಲ್ಪ ಹೊತ್ತು ಮಾತಾಡಿ ಸವಿತಾ ಹೊರಟು ಹೋದರು.
ಬೆಳಿಗ್ಗೆ ಬಾಗಿಲಿಗೆ ನೀರು ಹಾಕುತ್ತಾ ರಂಗೋಲಿ ಹಾಕುತ್ತಿದ್ದೆ. "ಬಾಗಿಲು ಹಾಕ್ಕೋ ಸವಿತಾ, ತಿಂಡಿ ತಿನ್ನು" ಅಂತ ಹೊರಗೆ ಹೋಗುತ್ತಿದ್ದ ವ್ಯಕ್ತಿಯನ್ನು ತಿರುಗಿ ನೋಡಿದೆ. ಹಾಗೆ ನೋಡುತ್ತಾ ಇದ್ದಂತೆ, ಆ ವ್ಯಕ್ತಿಯು ನನ್ನನ್ನು ನೋಡುತ್ತಿರುವುದು ಗೊತ್ತಾಯಿತು. ಬೆರೆತ ಕಣ್ಣುಗಳಲ್ಲಿ ಹೇಳಲಾಗದ ನೋವು, ಆತ್ಮೀಯತೆ, ಕಳವಳ, ನಿನಗೋಸ್ಕರ ಕಾದಿದ್ದೆ ಅನ್ನೋ ಭಾವ ಇತ್ತು. ಮದನ್ ನ ಗುಳಿಬಿದ್ದ ಕಣ್ಣುಗಳು ನನ್ನನ್ನು ಕಳೆದುಕೊಂಡಂತೆ ಕಂಡವು. ಅದೇ ನಗು. ನನ್ನನ್ನು ಗೆದ್ದಿದ್ದ ವ್ಯಕ್ತಿ. ಏನೂ ಮಾತಾಡದೆ ತುಂಬಾ ಹೊತ್ಹು ಒಬ್ಬರನ್ನೊಬ್ಬರು ನೋಡುತ್ತಿದ್ದೆವು. ಬಹುಷಃ ಮಾತುಗಳು ಭಾವನೆಗಳಿಗೆ ಸಿಗುತ್ತಿರಲಿಲ್ಲವೇನೋ. ಸೆಕ್ಯೂರಿಟಿಯವನು ಮದನ್ ಗೆ ತಮ್ಮ ಕಾರ್ ಬೇರೆ ಜಾಗದಲ್ಲಿ ನಿಲ್ಲಿಸಬೇಕು ಅಂತ ಹೇಳುತ್ತಾ ಹೋದ. ನಾನು ಬೇರೆ ದಾರಿಯಿಲ್ಲದೆ ಮನೆಯೊಳಗೆ ಬಂದೆ.
ಮೂರು ವರ್ಷದ ಹಿಂದೆ ತನ್ನ ಮದುವೆಗೆ ಮದನ್ ನ ಕರೆಯುವಾಗ ನನಗೆ ಏನೋ ನೋವಿನ ಅನುಭವ. ಆ ಪತ್ರಿಕೆಯಲ್ಲಿ ನಿನ್ನ ಹೆಸರೇ ಇರಬಾರದಿತ್ತೆ ಅನ್ನೋ ಭಾವ. ಒಬ್ಬರನ್ನೊಬ್ಬರು ಕಣ್ಣಲ್ಲೇ ಮಾತಾಡಿಸುವ ನಾವು ಮುಂದುವರೆಯುವ ಲಕ್ಷಣಗಳು ಇರಲಿಲ್ಲವಾದ್ದರಿಂದ ಆ ಯೋಚನೆಯನ್ನು ಅಲ್ಲಿಗೆ ಬಿಡಬೇಕಾಯಿತು. ಮದನ್ ಸಹ ಪತ್ರಿಕೆಯನ್ನು ಓದಿ ಕಣ್ಣಲ್ಲೇ ನೋವನ್ನು ವ್ಯಕ್ತ ಪಡಿಸಿ, ಎಂದಿನಂತೆ ನಗುನಗುತ್ತಾ ಮಾತಾಡಿಸಿದರು. ಅಂದು ಮಾತಾಡಿದ್ದ ನಾವು ಮತ್ತೆ ಭೇಟಿಯಾಗಿ ಮಾತಾಡುವ ಪ್ರಮೇಯ ಬರಲೇ ಇಲ್ಲ. ನನ್ನ ಮದುವೆಗೂ ಬರಲಿಲ್ಲ ಅವರು. ನನ್ನ ಮನಸ್ಸು ತನಗೆ ಇಷ್ಟ ಆಗುವ ರೀತಿ ಯೋಚನೆ ಮಾಡುತ್ತಿತ್ತು. ಪಕ್ಕದಲ್ಲಿ ಗಂಡನೆನಿಸಿಕೊಂಡ ವ್ಯಕ್ತಿ ಇರುವಾಗ ಇಂತಹ ಯೋಚನೆಗಳು ಬೇಡವೆಂದು ಮನಸ್ಸನ್ನು ಸುಮ್ಮನಾಗಿಸಿದ್ದೇ. ಇಂದು ಮದನ್ ನ ನೋಡಿದಾಗ ಏನೇನೋ ಯೋಚನೆಗಳು. ನಿನ್ನ ಜೀವನಕ್ಕೆ ನಾನು ಒಳ್ಳೆಯ ಸಂಗಾತಿ ಆಗುತ್ತಿರಲಿಲ್ಲವಾ ಅಂತ ಕೇಳಬೇಕು ಅನ್ನೋ ತವಕ. ಈಗೇಕೆ ಆ ಮಾತು ಅನ್ನೋ ಯೋಚನೆಯೂ ಒಟ್ಟಿಗೆ ಬರುತ್ತದೆ. ಹೌದಲ್ಲವಾ! ಅವನು ಹೌದು ನಿನ್ನ ಸನಿಹ, ನಿನ್ನ ಮಾತಿಗಾಗಿ ನಾನು ಕಾಯುತ್ತಿದೆ ಅಂತ ಹೇಳಿದರೆ ನಾನು ಏನು ಮಾಡಬಲ್ಲೆ? ಈಗೆಲ್ಲ ಮುಗಿದ ವಿಷಯ. ನನ್ನ ಮನೆ ನನ್ನ ಸಂಸಾರದಲ್ಲಿ ಮುಳುಗಿರುವ ನಾನು ಸಮಾಜದಲ್ಲಿ ಒಳ್ಳೆಯ ಹೆಂಡತಿ, ಒಳ್ಳೆಯ ಗೃಹಿಣಿಯೆಂದು ಕರೆಸಿಕೊಳ್ಳುತ್ತಿದ್ದೇನೆ. ಇಂತಹ ಯೋಚನೆಗಳು ಮತ್ತು ಮದನ್ ನ ಮೇಲಿರುವ ತನ್ನ ಭಾವನೆಗಳು ಇವನ್ನೆಲ್ಲ ಮಣ್ಣುಪಾಲು ಮಾಡುತ್ತವೆ ಅಷ್ಟೇ.
ಬಹುಷಃ ಒಂದು ವಾರವಾಗಿರಬಹುದು. ಸವಿತಾ ತನ್ನ ಗಂಡನನ್ನು ಹೀನಾಮಾನವಾಗಿ ಬಯ್ಯುತ್ತಾ, ಬಾಗಿಲಿನಲ್ಲಿ ನಿಂತು "ಇನ್ನು ಆಗಲ್ಲಪ್ಪ ನಿನ್ನ ಜೊತೆ ಇರೋದಿಕ್ಕೆ. ನಿನಗೆ ನನ್ನಮೇಲೆ ಏನಾದ್ರೂ ಪ್ರೀತಿ ಅಂತ ಇದ್ರೆ, ಸ್ವಲ್ಪನಾದ್ರೂ ನನ್ನ ಆಸೆಗಳಿಗೆ ಬೆಲೆ ಕೊಡಿ. ನನಗೂ ಚೆನ್ನಾಗಿ ಬಾಳಿ ಬದುಕಬೇಕು ಅಂತ ಆಸೆ ಇದೆ. ನಿಮಗೆ ಆ ಯೋಚನೆಗಳೇ ಇಲ್ಲ. ನಿಮ್ಮ್ ಹತ್ರ ಬಡ್ಕೊಳ್ಳೋಕೆ ಆಗಲ್ಲ ನಂಗೆ". ಅನ್ನುತ್ತಾ ಹೊರಟುಹೋದಳು. ನನ್ನ ಅತ್ತೆ ಸಮಾಜಸೇವೆಯಲ್ಲಿ ಹೆಸರು ಮಾಡಿದವರು. ಅವರ ಮನೆಗೆ ಹೋಗಿ ವಿಧಾರಿಸುತ್ತಿದ್ದರು. ಪಾಪ ಮದನ್ ತಮಗೆ ಅರ್ಥವಾದಷ್ಟನ್ನು ಹೇಳುತ್ತಿದ್ದರು. ಬಹಳ ಹೊತ್ತು ಮಾತಾಡಿ ಮದನ್ ಗೆ ಸಮಾಧಾನ ಹೇಳಿ ಅತ್ತೆ ವಾಪಾಸ್ ಬಂದಾಗ ಅವರು ನನ್ನನ್ನೇ ನೋಡಿತ್ತಿರುವಂತೆ ಭಾಸವಾಯಿತು. ಅವರು ಬಹಳಹೊತ್ತು ಸುಮ್ಮನೆ ಇದ್ದದ್ದು ನನಗೆ ಕಷ್ಟ ಆಗುತ್ತಿತ್ತು. ಆಮೇಲೆ ವರುಣ್ ಹತ್ತಿರ ಅವರ ತುಂಬಾ ಹೊತ್ತಿನ ಮಾತು, ಸರಿತಪ್ಪುಗಳ ವಿಶ್ಲೇಷಣೆ ನನ್ನ ಮನಸ್ಸಿಗೆ ಬಹಳ ಹಿಡಿಸಿತು.
ಒಂದು ವಿಷಯ ಮನಸ್ಸಿಗೆ ಬಹಳವಾಗಿ ನಾಟಿತ್ತು. ಮದನ್ ನ ವೈವಾಹಿಕ ಜೀವನ ಅಷ್ಟಾಗಿ ಚೆನ್ನಾಗಿರಲಿಲ್ಲ ಮತ್ತು ಅದಕ್ಕಾಗಿ ಅವರು ಬಹಳ ತ್ಯಾಗ ಮಾಡಿದ್ದಾರೆ. ಮತ್ತು ಅವರ ನೋವನ್ನು ತಿಳಿದುಕೊಳ್ಳಲು ಸವಿತಾ ಪ್ರಯತ್ನ ಪಟ್ಟಿಲ್ಲ ಹಾಗು ಅವಳಿಗೆ ಅದರ ಪರಿವೆಯೂ ಇಲ್ಲ. ಅದೇ ರೀತಿ ತನ್ನ ಜೀವನದಲ್ಲಿ ನನ್ನ ಭಾವನೆಗಳು, ನೋವುಗಳು ವರುಣ್ ಗೆ ಅರ್ಥವಾಗುತ್ತಿಲ್ಲ. ಅದಕ್ಕೆ ಅವರಿಗೆ ಅಸಮಾಧಾನವೂ ಇಲ್ಲ ಅಥವಾ ಅವರಿಗೆ ಅದು ಬೇಕಾಗೂ ಇಲ್ಲ. ಒಂದು ಸಣ್ಣ ವಿಷಯವಾಗಿರುವುದು ನಮಗೆ ಇನ್ನೂ ಮಕ್ಕಳಿಲ್ಲ ಅನ್ನುವುದು ಅವರಿಗೆ, ಆದರೆ ಸಮಾಜಕ್ಕೆ ಉತ್ತರ ಕೊಡುವ ದೊಡ್ಡ ಜವಾಬ್ದಾರಿ ಹೊತ್ತಿರುವ ನನ್ನ ಬಗ್ಗೆ ಅವರಿಗೆ ಕಾಳಜಿಯೇ ಇಲ್ಲ. ನಮ್ಮ ನಡುವಿನ ಅತೃಪ್ತಿ, ಅಹಿತ ಹಾಗು ಅಸಹಜ ಬಂಧದ ಬಗ್ಗೆ ಅವರಿಗೆ ಏನೂ ತೊಂದರೆ ಇಲ್ಲ. ಅವರ ಆ ಮಟ್ಟಿಗಿನ ಜಡತ್ವ ನನ್ನಲ್ಲಿ ಬೇಸರ ಮೂಡಿಸಿ ಒಂದು ರೀತಿಯ ಅನುಮಾನಕ್ಕೆ ದಾರಿ ಮಾಡಿದೆ. ನಾನಲ್ಲದೆ ಬೇರೆ ಯಾರಾದರೂ ಅವರ ಜೀವನದಲ್ಲಿ ನನ್ನ ಜಾಗದಲ್ಲಿ ಇರಬಹುದೇ ಅಂತ. ಇಷ್ಟೆಲ್ಲಾ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕ್ಕೊಂಡು ನಾನು ಹೇಗೆ ಸಹಜ ಜೀವನ ನಡೆಸಬಹುದು? ನನ್ನನ್ನೇ ಮನಸ್ಸಿನಲ್ಲಿಟ್ಟುಕೊಂಡಿರಬಹುದಾದ ಮದನ್ ಗೆ ನಾನು ಯಾಕೆ ಸಂಗಾತಿಯಾಗಲಿಲ್ಲ? ನಮ್ಮೆಲ್ಲ ಯೋಚನೆಗಳು ಮನಸ್ಸಿನಲ್ಲಿ ಬಂದು ಹೋಗುತ್ತಾ ಮನಸ್ಸು ರಾಡಿ!! ಹೆಣ್ಣಿನ ಆಸೆಗಳು, ಭಾವನೆಗಳ ಬೇಡಿಕೆಗಳು ಇವಕ್ಕೆಲ್ಲ ಉತ್ತರಸಿಗುವುದು ಯಾವಾಗ?? ಭಾವನಾ ಜಗತ್ತಿನ ಹಕ್ಕಿಗಳು ತಮ್ಮಿಚ್ಛೆಯಂತೆ ಹಾರಾಡುತ್ತಿವೆ.
This is a Nice Story of a Women her desires,Expressions and Crush on Madan. One thing I saw and want to Express is Express your Love before it dies..
Good Khavana ( Novel) Good going madam All the Best
Thank you very much for your encouragement sir
Loved the story 🙂 All the best Girija
Thank you very much Shruthi.
congrats girija <3 chenda barediddera .. ondu hennina tumula , badalaaguva badukina ghattagalu….superb
Sunithakka. you are my inspiration. Thank you very much for your encouragement.
Way to go Giri ???? Keep it up
Such a nice story madam..I liked it and expecting some more stories in future..