ಇತ್ತೀಚಿಗೆ ನಮ್ಮ ದೇವಸ್ಥಾನಕ್ಕೆ ದರ್ಶನಾರ್ಥವಾಗಿ ಬೆಂಗಳೂರಿನಿಂದ ಬಂದಿದ್ದ ದಂಪತಿಗಳಿಗಾಗಿ ನಮ್ಮ ಸಮಿತಿಯ ಹಿರಿಯರೊಬ್ಬರು ರಾತ್ರಿ ಅಡುಗೆ ಸಿದ್ಧ ಮಾಡುತ್ತಿದ್ದರು. ಆ ದಂಪತಿಗಳ ಪುತ್ರಿ ಅನ್ನ ಮಾಡುವುದನ್ನು ಗಾಬರಿಯಿಂದ ಬಿಟ್ಟ ಕಣ್ಣಿನಿಂದ ನೋಡುತ್ತಿದ್ದಳು. ಅದನ್ನು ಗಮನಿಸಿದ ಹಿರಿಯರು ‘ಯಾಕಮ್ಮ ಹಾಗೆ ನೋಡ್ತಾ ಇದ್ದಿಯಾ ಅಡುಗೆ ಮಾಡೋದು ನೋಡಿಲ್ವೆ? ಅಥವಾ ಹಸಿವೆಯಾಗಿದೆಯಾ?’ ಎಂದು ಕೇಳಿದರು. ‘ಅಂಕಲ್ ಅಡಿಗೆ ಈ ರೀತಿ ಮಾಡ್ತಿರಾ? ಅನ್ನ ಅದ್ಹೇಗೆ ಮಾಡ್ತೀರಿ? ವಿಜಲ್ ಕೇಳ್ತಾ ಇಲ್ಲ ಹಿಂಗೂ ಮಾಡಬಹುದಾ?’ ಎಂದು ಪ್ರಶ್ನೆ ಹಾಕಿದಳು ಹೀಗೂ ಉಂಟೆ ಎನ್ನುವ ದಾಟಿಯಲ್ಲ. ಆ ಹಿರಿಯರಿಗೆ ಅವಳಾಡಿದ ಮಾತು ಅರ್ಥವಾಗಲಿಲ್ಲ. ಅಷ್ಟರಲ್ಲಿ ಬಂದ ಅವಳ ತಾಯಿ ‘ಇಲ್ಲ ಇವರೆ, ಗ್ಯಾಸು ಕುಕ್ಕರಗಳಿಂದ ಮಾಡುವ ಅಡಿಗೆ ನೋಡಿದ ಮಗಳಿಗೆ ಈ ಒಲೆಯ ಮೇಲೆ ಬೊಗೋಣಿಯಲ್ಲಿ ಅನ್ನ ಮಾಡೋದು ಮಿರಾಕಲ್ ಅನಿಸುತ್ತಿದೆ’ ಎಂದು ವಿವರಣೆ ನೀಡಿದರು.
ಖರೆವ ಅದ ಅವಳ ಯೋಚನೆಯ ದಾಟಿ. ಹಲವು ಯುಗಯುಗಾಂತರಗಳಿಂದ ಮಾನವನ ಹಸಿವನ್ನು ತಣಿಸುತ್ತ ಬಂದಿದ್ದ ಒಲೆಗಳಿಗೂ ಜಾಗತಿಕರಣದ ಕಾವು ಬಡಿಯುತ್ತಿದೆ. ಹೀಗಾಗಿ ಮಹಾನಗರ ಪಟ್ಟಣಗಳಲ್ಲಿ ಅವು ತನ್ನ ಅಸ್ತಿತ್ವವನ್ನು ಸಂಪೂರ್ಣ ಕಳೆದುಕೊಂಡಿವೆ. ಅಲ್ಲಲ್ಲಿ ಹೋಟೆಲ್‍ಗಳಲ್ಲಿ ಬಳಕೆಯಲ್ಲಿದ್ದರೂ ಬಹಿರಂಗವಾಗಿ ಕಾಣಬೇಕೆಲ್ಲಿ. ಇತ್ತಿತ್ತಲಾಗಿ ಹಳ್ಳಿಗಳಲ್ಲೂ ಆ ಕಾವು ಕಾಣುತ್ತಿದೆ. ಹಾಗಾಗಿ ಚಿಕ್ಕೋರಿರೋ ಕಾಲಕ್ಕೆ ಸಂತೆ ಜಾತ್ರೆಗಳಲ್ಲಿ ವಿಶೇಷವಾಗಿ ಕಾಣುತ್ತಿದ್ದ ಕುಂಬಾರನ, ಕಮ್ಮಾರನ ಒಲೆಗಳು ಬತ್ತುತ್ತಿವೆ. ರಾಜಾಮಹಾರಾಜರಾದಿಯಾಗಿ ಎಲ್ಲರನ್ನೂ ಒಂದು ಕಾಲಕ್ಕೆ ಸಂತೃಷ್ಟಗೊಳಿಸುತ್ತಿದ್ದ ಒಲೆಗಳನ್ನು ಉಪಯೋಗಿಸುವವರು ಇಂದು ಏನು ಇಲ್ಲದ ಬಡವರು ಎಂದು ಭಾವಿಸುವಂತಾಗಿದೆ.
ಹಿಂದೆ ಅಡವಿಯಲ್ಲಿ ಅಥವಾ ದಾರಿಯಲ್ಲಿ ಹೋಗುತ್ತಿದ್ದವರಿಗೆ ಮನೆಯ ಒಲೆಗಳಿಂದ ಹೋಗುವ ಹೊಗೆ ದೂರದಿಂದಲೇ ಜನವಸತಿಯ ಇರುವಿಕೆಯನ್ನು ತೋರಿಸುತ್ತಿದ್ದವು. ಇಂದಿಗೂ ಕಾಡುಗಳ್ಳರನ್ನು ಹಿಡಿಯಲು, ನಕ್ಸಲರನ್ನು ಶೋಧಿಸಲು ಈ ಒಲೆಗಳೆ ಸಹಕಾರಿ. ಆದರೆ ಅದೆ ಒಲೆಗಳು ಇತಿಹಾಸ ಪುಟ ಸೇರುತ್ತಿವೆ. ಅಡಿಗೆ ಮನೆ ಅಂದರೆ ಒಂದು ವಿಶಾಲವಾದ ಕೋಣೆ ಇರುತಿತ್ತು. ಅಡಿಗೆಮನೆಯಲ್ಲಿ ಒಲೆಗಳು ವಿವಿಧ ವಿನ್ಯಾಸಗಳಲ್ಲಿ ಸಿಂಗರಿಸುತ್ತಿದ್ದರು. ಒಲೆಗಳಿಂದ ಹೊರಬರುವ ಹೊಗೆ ಹೊರಬಾರದಂತೆ ಕೌಶಲ್ಯಯುತ ತಂತ್ರಗಳನ್ನು ಬಳಸುತ್ತಿದ್ದರು. ಇಲ್ಲದವರು ಬೆಳಕಿಂಡಿಯ ಕೆಳಗಡೆಯ ಅಳವಡಿಸುತ್ತಿದ್ದರು. ವೈದಿಕರಲ್ಲಿ ಮಣ್ಣಿನ ಒಲೆಗಳನ್ನು ಬಳಸುವುದು ವಾಗತ್ಯ. ಹಾಗನ್ನುವುದಕ್ಕಿಂತ ಮಡಿ ಅತಿಯಾಗಿ ಮಾಡುವ ಈ ಮಂದಿ ಸ್ಥಿರವಾಗಿ ನಿಲ್ಲಿಸಿದರೆ ತೊಳೆಯೋಕೆ ಬಳೆಯೋಕೆ ತೊಂದರೆ ಎಂದು ಭಾವಿಸಿದಂತಿದೆ. ಕಾಲ ಬದಲಾದರೂ, ಕಟ್ಟಿಗೆಯು ಸಿಗುವುದೇ ದುರ್ಲಭವಾಗುತ್ತಿದ್ದರೂ ಒಲೆಯ ಮೇಲೆಯೆ ಮಾಡಬೇಕೆನ್ನುವ ಸಂಪ್ರದಾಯವಾದಿಗಳ ಬುದ್ಧಿ ಬಲಿತಿಲ್ಲ. ನಮ್ಮ ವೆಂಕಟೇಶ ದೇವಸ್ಥಾನದಲ್ಲಿ ನವರಾತ್ರಿ, ಜಯಂತಿ ಏನೆ ಇರಲಿ ಮೊದಲಿಗೆ ಕಿರಿಕಿರಿ ಸ್ಟಾರ್ಟ ಆಗೋದೆ ಇಂಥವರಿಂದ. ‘ಛೇ ಛೇ ಕಾಲ ಕೆಟ್ಟೋಯ್ತಪ ಹಿಂದಕ ರಾಮಣ್ಣ ರಾಘಣ್ಣ ಹ್ಯಾಂಗ ವ್ಯವಸ್ಥ ಮಾಡತಿದ್ರೂ? ಆರ ತಿಂಗಳ ಮುಂಚೆ ಕಟ್ಟಿಗೆ ತರಿಸಿ ಹಾಕತಿದ್ರು ಈಗನೇರೆನಪ…….?’ ಅಂತ ಟಿಮ್ ಇಡೋರು. ನಾವು ವಿವರಿಸಿ ಕಟ್ಟಿಗೆರ ಅಲ್ಲಿ ಇಲ್ಲಿ ಬಿದ್ದು ಎದ್ದು ಮೈಲಿಗೆರ ಆಗಿರತವ ಅದೇ ಸಿಲೆಂಡರನ ಒಳಗಿರುವ ಗ್ಯಾಸು ಪರಿಶುದ್ಧರಿ, ಯಾರನ್ನೂ ಕೂಡ ಮುಟ್ಟಿಸಿಕೊಂಡಿರಲ್ಲ. ನಿಮಗಿಂತಲೂ ಶುದ್ಧ ಅದೆ ಆಗಿರುತ್ತೆ. ಅದೇ ಮೈಲಿಗೆ ಆಗೋದು ಹೊರಗ ಬಂದು ನಮ್ಮನ್ನೆಲ್ಲ ಸುಟ್ಟು ಮ್ಯಾಕ’ ಅಂತ ಹೇಳಿದ್ರೆ ‘ಏನ ಅಪದ್ದ, ಅಪದ್ದ ನುಡಿತಾರಪ ಈಗಿನ ಹುಡುಗರು’ ಅಂತ ಜರಕಂತ ಹೋಗೋರು. ಗ್ಯಾಸ ಒಲೆಗಳು ಕಟ್ಟಿಗೆ ಒಲೆಗಳಿಗಿಂತ ಪರಿಶುದ್ಧವಾಗಿದ್ದರು ಸಾಂಪ್ರದಾಯಕರು ಅದನ್ನ ಇನ್ನೂ ಯಾಕೆ ಮಾನ್ಯ ಮಾಡ್ತಾ ಇಲ್ಲ ಅನ್ನೋದೆ ನನ್ನ ಮಿಲಿಯನ್ ಡಾಲರ್ ಪ್ರಶ್ನೆ.
ಒಂದು ವೇಳೆ ಮಠದ ಯತಿಗಳು ‘ಸಿಲಿಂಡರ್ ಬಳಸಿ ಮಾಡಿದ ಅಡುಗೆ ಮಡಿ ಅಡಿಗೆ ಬರುತ್ತ ಅಂತ ಫರ್ಮಾನು ಹೊರಡಿಸಿದ್ರೂ ಅದನ್ನ ಸಾರಸಗಟ ತಳ್ಳಿ ಹಾಕೋ ಕರ್ಮಠರು ಇದ್ದಾರೆ. ಹೆಚ್ಚುಕಮ್ಮಿ ರಡ್ಡಿಗಳು ಸಿ.ಎಮ್ ಬುಡಕ್ಕ ನೀರು ತರತಿದ್ದರಲ್ಲ ಹಾಂಗ ಸಂಪ್ರದಾಯವಾದಿಗಳು ತರೋದ್ರಲ್ಲಿ ಯಾವ ಅನುಮಾನನು ಇಲ್ಲ. ನಮ್ಮ ಊರಿನ ಮಡಿಯಮ್ಮ ಸರಸಜ್ಜಿಗೆ ಗ್ಯಾಸನ ಕಂಡ್ರ ಅಲರ್ಜಿ. ಅವರ ಸಂಬಂಧಿಕರ ದೊಡ್ಡದಾದ ಜಾಗ ನಮ್ಮೂರಲ್ಲಿ ಇದೆ. ನಾವು ಚಿಕ್ಕೋರಿರೋಕಾಲದಿಂದಲೂ ಬಹು ದೊಡ್ಡ ತಿಪ್ಪೆಯಾಗಿರೋ, ಹೆಣ್ಣುಮಕ್ಕಳ ಮಲವಿಸರ್ಜನ ತಾಣವಾಗಿರೋ ಅಲ್ಲಿ ಬೆಳೆದ ಜಾಲಿಗಿಡದ ಕಟ್ಟಿಗೆಗಳೇ ಅವಳ ಮಡಿ ಅಡಿಗೆಯ ಒಲೆಗೆ ಬೇಕು. ಗ್ಯಾಸಿನ ಮಹತ್ವದ ಬಗ್ಗೆ ಹೇಳಿದ್ರ ಮುಗಿತು. ‘ಕೈಲಾಗದವರು ಧರ್ಮಬಿಟ್ಟವರು ಬಳಸೋ ಸಾಧನ’ ಎಂದು ಹೀಯಾಳಿಸುತ್ತಿದ್ದಳು. ಆದರೆ ಈಗ ಸೊಸೆಯ ಆಗಮನದಿಂದ ಗ್ಯಾಸು ಬಂದಿರುವುದರಿಂದ ಅದರ ಬಗ್ಗೆ ಮಾತಾಡಕ ಬಾಯಿಲ್ಲದಾಗ್ಯಾದ.
ನಗರದ ಶಾಲೆಯೊಂದಕ್ಕೆ ಭೇಟಿ ಕೊಟ್ಟಾಗ ಮಕ್ಕಳಿಗೆ ಸಹಜವಾಗಿ ಅಡಿಗೆ ಹೇಗೆ ತಯಾರಿಸುತ್ತಾರೆ ಎಂದು ಪ್ರಶ್ನೆ ಕೇಳಿದ್ದಕ್ಕೆ ಗ್ಯಾಸಿನಿಂದ, ಸ್ಟವ್‍ನಿಂದ, ಕರೆಂಟ್ ನಿಂದ ಒವೆನ್ ನಿಂದ ಎಂದವೆ ಹೊರತು ಕಟ್ಟಿಗೆ ಬಳಸಿ ಒಲೆಯಿಂದ ಅಂತ ಒಂದು ಪ್ರಾಣಿ ಅನ್ನಲಿಲ್ಲ. ನಗರಗಳಲ್ಲಿ ಒಲೆಗೆ ಬಂದ ದೊಡ್ಡ ದುರ್ಗತಿಯಂದೆ ಹೇಳಬೇಕು. ಬಾಲ್ಯದಲ್ಲಿ ನಾವು ಇದ್ದುದ್ದೆಲ್ಲ ಹೊಗೆಯಾಡುವ ಮನೆಗಳಲ್ಲೆ. ಬೆಳಿಗ್ಗೆ ಎದ್ದು ಒಲೆ ಹಚ್ಚಿದ್ರ ಸಾಕು ಹೊಗೆ ಎದ್ದು ನಮ್ಮ ಸುಂದರ ಕನಸನ್ನು ಹಾರಿಸಿ ಬಿಡುತ್ತಿತ್ತು. ಕಣ್ಣು ತಿಕ್ಕೋತ ಒಲೆಮುಂದ ಬಂದು ಕುಡೋರು. ಒಂದೊಂದ ಕಟ್ಟಿಗೆ ಇಡುತ್ತ ಬೆಂಕಿ ಕಾಸುತ್ತ ಕುಡೋರು. ನಗಡಿ ಕೆಮ್ಮು ಬಂದರೆ ಒಲೆಯೆ ಮದ್ದಾಗಿ ಬಿಡುತ್ತಿತ್ತು. ಶಾಲೆಯಲ್ಲಿ ಹೇಳಿದ ದ್ರವ್ಯದ ನಾಲ್ಕನೇ ಸ್ಥಿತಿಯನ್ನು ವಿಶ್ಲೇಷಿಸುತ್ತಾ ನಡೆಯೋರು. ಎಲ್ಲರ ಸ್ನಾನ ಮುಗಿದ ನಂತರದಲ್ಲಿ ಅಲ್ಲಿಯ ಕೆಂಡವನ್ನ ಅಡಿಗೆ ಮನೆಯ ಒಲೆಗೆ ಸ್ಥಳಾಂತರಿಸುವ ಕಾರ್ಯವನ್ನು ಅಮ್ಮ ಮಾಡುತ್ತಿದ್ದಳು.
ಕೆಂಡತರುವಾಗ ಎಡಕ್ಕ ಬಲಕ್ಕ ಕುಡಂಗಿಲ್ಲ. ಅದು ಅಪಶಕುನದ ಸಂಕೇತ ಹಾಗಾಗಿ ‘ಎಲ್ಲರೂ ಒಂದ ಕಡೆ ಬರ್ರೀ’ ಅಂತ ಆವಾಜು ಬರೋದು ಸಾಮಾನ್ಯವಾಗಿರುತ್ತಿತ್ತು. ಮನೆಯ ಕೊಳುವೆಯಿಂದ ಹೊಗೆಬಂದರೆ ಅಥವಾ ಮನೆಯ ಒಳಗಿಂದ ಹೊಗೆ ಬಂದರೆ ಅದು ಮನೆಯ ಲಕ್ಷಣವಾಗಿತ್ತು ಇಲ್ಲದಿದ್ದರೆ ‘ಯಾಕ್ರೀ ನಿಮ್ಮನ್ಯಾಗನಿಂದ ಹೊಗಿನ ಬರಲಿಲ್ಲ ಇವತ್ತ ಎಲ್ಲಿಂದಾದರೂ ಔತಣ ಬಂದದನೂ’ ಅಂತ ಅಕ್ಕಪಕ್ಕದವರು ಕೇಳೋರು. ನಮ್ಮ ಮನೆಯಲ್ಲಿ ಹೊಗಿ ಗಿಂಡಿ ಇರದ ಕಾರಣ ಸಿಕ್ಕಾಪಟ್ಟೆ ಹೊಗೆ ಹಿಡಿಯುತ್ತಿತ್ತು. ಕಣ್ಣುಗಳು ಉರಿದು ಬಿಡುತ್ತಿದ್ದವು. ಯಾಕಾದರೂ ಅಪ್ಪ ಇಂತಹ ಮನೆ ಬಿಡುತ್ತಿಲ್ಲವೋ ಅನಿಸುತ್ತಿತ್ತು ಒಮ್ಮೊಮ್ಮೆ ಅಭಿಪ್ರಾಯವನ್ನು ಹೊರಹಾಕಿದ್ದುಂಟು. ನೀವು ಮುಂದ ದುಡಿಹೊತ್ತಿನಾಗ ಆಶಿಸಿದಂತ ಮನೆಯಲ್ಲಿ ಇರುವಿರಂತೆ ನನ್ನ ಯೋಕ್ತಿ ಇರೋದಷ್ಟೇ ಅಂತ ಹೇಳಿ ವಾಸ್ತವದ ಅರಿವನ್ನು ಮಾಡಿಕೊಡುತ್ತಿದ್ದರು. ಹೊಗೆ-ಗಿಗೆ ಏನೆ ಇರಲಿ ಅದರ ಮೇಲೆ ಮಾಡುತ್ತಿದ್ದ ಅಡುಗೆ ಸ್ವಾದಿಷ್ಠನ ಬೇರೆ. ಒಲೆ ಮಾಡಿದ ಅಡುಗೆ ಅಥವಾ ರೊಟ್ಟಿಯ ರುಚಿ ಗ್ಯಾಸು ಅಥವಾ ಸ್ಟೌವ್ ಮೇಲೆ ಮಾಡಿದರೆ ಸಿಗುತ್ತೇನು ಹೇಳ್ರಿ.
ಒಲೆಯ ಮೇಲೆ ಅಡುಗೆ ಮಾಡದಂದ್ರೆ ಅದು ಹೆಣ್ಣುಮಕ್ಕಳಿಗೆ ಒಂದು ತರಹನ ವ್ಯಾಯಮನ ಆಗಿತ್ತು. ಸೌದೆ ತರಬೇಕಿತ್ತು. ಸ್ಥಿತವಂತರಿದ್ರೆ ಮನೆಯಲ್ಲಿ ತಂದ ಸೌದೆಗಳನ್ನು ಉರಿಯುವ ಯೋಗ್ಯತೆಯುಳ್ಳ ಕಟ್ಟಿಗೆ ಆಯ್ಕೆ ಮಾಡಿ ಒಲೆ ಹತ್ತುಸೊದು ಸಾಮಾನ್ಯನೆ? ಕುಳ್ಳಿಗೆ ಸ್ವಲ್ಪ ಸೀಮೆ ಎಣ್ಣೆ ಅಥವಾ ಇನ್ನಾವುದೋ ಎಣ್ಣೆ ಹಾಕಿ ಒಲೆ ಹತ್ತಿಸುವುದಿದೆಯಲ್ಲ ಅದು ಒಂದು ಕಲೆನ ಸರಿ. ಒಲೆ ಹಚ್ಚಲು ಬಾರದವರು ತಾಸು ಗಟ್ಟಲೆ ಒದ್ದಾಡೋರು. ಮೊನ್ನೆ ನಮ್ಮ ಜಮೀಲ ಮೇಷ್ಟ್ರು ಮಕ್ಕಳ ಲಗ್ನ್ನಕ್ಕೆ, ಅಡಿಗೆ ಮಾಡಲು ರಾಯಚೂರಿನಿಂದ ಕರೆಸಿದ್ರು. ಆ ಅಡಿಗೆಯವನ ವಿಕೆನೆಸ್ಸು ಒಲೆ ಮೇಲೆ ಅಡಿಗೆ ಮಾಡಲು ಬಾರದಿರುವುದು. ಆದರೆ ಅವ ಅದನ್ನ ತೋರಿಸಿಕೊಳ್ಳಾಕ ರೆಡಿ ಇಲ್ಲ. ಅವನ ಪ್ರಯತ್ನ ನೋಡತಾ ಇದ್ದೆ. ಸೀಮೆ ಎಣ್ಣೆ ಎಲ್ಲಾ ಖಾಲಿ ಆಯ್ತು. ಆದ್ರ ಇನ್ನೂ ಉರಿ ಹತ್ತತಾ ಇಲ್ಲ. ಸಮಯ ಆಗಕತ್ತಿತ್ತು ಎಣ್ಣೆ ಖಾಲಿ ಆಗಿತ್ತು ಅತ್ತಿತ್ತ ನೋಡಿದವನೆ ಒಂದು ಜಗ್ಗನ್ಯಾಗ ಅಡಿಗೆ ಎಣ್ಣಿ ಕ್ಯಾನಿನ ಡಬ್ಬವನ್ನ ಬಗ್ಗಿಸಿಕೋಂತ ಜಗ್ಗಿನ್ಯಾಗ ಹಾಕಿಕೊಂಡು ಉಗ್ಗಿದ್ದೆ ಉಗ್ಗಿದ್ದು. ನೀವು ನಂಬುತ್ತಿರೋ ಇಲ್ಲೊ ಬರಾಬ್ಬರಿ ಎಂಟು ಜಗ್ಗ ಎಣ್ಣೆ ಉಗ್ಗಿದ್ದ. ಲಗ್ನಾ ಎಲ್ಲಾ ಮುಗಿದ ಮೇಲೆ ಮೇಷ್ಟ್ರು ಯಾರಿಗೋ ಹೇಳ್ತಿದ್ರು. ‘ಏನಿಲ್ಲ ಎಲ್ಲಾ ಲೆಕ್ಕ ಸರಿ ಸಿಗಾಕತ್ಯಾದ ಆದರ ಎಣ್ಣಿ ಲೆಕ್ಕ ಸಿಗಾ ಇಲ್ಲ’ ಅಂತ. ವಿಷಯ ಗೊತ್ತಾದ್ರೆ ನಿದ್ದಿ ಮಾಡಲ್ಲ ಅಂತ ಹೇಳಿ ಸುಮ್ಮನಾದೆನನ್ರಿ. ವಿಷಯಾಂತರಕ್ಕೆ ಕ್ಷಮೆ ಇರಲಿ.
ಒಲೆ ಹಚ್ಚೋದು ಕಲೆ ಅನ್ನೋಕೆ ಇಷ್ಟೇಲ್ಲ ಹೇಳಬೇಕಾಯಿತು. ಮಾಡುವ ಪದಾರ್ಥಗಳಿಗೆ ತಕ್ಕಂತೆ ಒಲೆಯಲ್ಲಿ ಕಟ್ಟಿಗೆ ಇಡೋದಾಯ್ತು ಕೆಂಡ ಹೊರಗ ತೆಗೆಯೋದಾಗಲಿ ಅದು ಕೌಶಲ. ಗ್ಯಾಸ ಒಲೆಯಲ್ಲಿ ಉರಿ ಹೆಚ್ಚು ಕಮ್ಮಿ ಮಾಡಿಕೊಳ್ಳಾಕ ತಿರುವುಗಳಿವೆ ಅದು ಕಷ್ಟ ಅಲ್ಲ ಆದರ ಇದು……? ಸ್ವಲ್ಪ ಯಾಮಾರಿದ್ರೆ ಹ್ರೆತ್ತಿರುತ್ತೆ ಇಲ್ಲದಿದ್ರೇ ಹೊಗೆ ಸೋರಿರುತ್ತೆ. ಅದರ ಜೊತೆಯಲ್ಲಿ ಇರೋದು ಪುಟ್ಟದಾದ ಇದ್ದಲಿ ಒಲೆ. ಅದರಲ್ಲಿ ಇದ್ದಲಿಗಳನ್ನು ಹಾಕಿ ಬೇಗ ಕುದಿಯದ ಬೇಳೆ ಕಾಳು ಕಡಿಗಳನ್ನು ಬೇಯಿಸೋಕೆ ಇಡೋದು ಎಂತಹ ತಂತ್ರಜ್ಞಾನ ಅಂತಿರಾ? ಇಷ್ಟೇಲ್ಲ ಅಡಿಗೆ ಆದ ಮೇಲೆ ಅಡಿಗೆ ಮಾಡಿದ ಸ್ಥಳವನ್ನು ಹೆಂಡಿ ಹಾಕಿ ಸ್ವಚ್ಛ ಮಾಡೋದು ಒಂದು ಕಾಯಕ. ಮಸಿ ಕುಳಿತ ಪಾತ್ರೆಗಳ ಮುಸುರಿ ತಿಕ್ಕೋದು ತೊಳೆದು ಬಳಿಯುವುದು ಇಷ್ಟೇಲ್ಲ ಮಾಡೋಷ್ಟರಲ್ಲಿ ಅವಳಿಗೆ ಒಳ್ಳೆ ವ್ಯಾಯಾಮ ಆಗಿರೋದು. ಈಗೆಲ್ಲಿ ಪಾತ್ರೆ ಕಪ್ಪಾಗಿ ಮಾಡದೆ ಉರಿಸುವ ಒಲೆ. ತೊಳೆಯೋಕೆ ಒಬ್ರು. ಬಗ್ಗದಿಲ್ಲ ದಣಕೊಳ್ಳೊದಿಲ್ಲ. ಕೆಲಸ ಹೌರಾದದಕ ದೇಹನು ಹೌಹಾರಕತದ. ಹಾಗಾಗೆ ರೋಗ ಹೆಚ್ಚಿಸಿಕೊಂಡು ವಾಕಿಂಗ್ ಅಂತ ಸೈಲ್ ಬಡಿಯಾಕ ಹೋಗೋದು. ಅದು ಇಂಟರೆಸ್ಟ್ ಇದ್ರೂ ಇಲ್ಲದಿದ್ದರೂ….. ಬ್ಯಾಸರ ಬಂದಾಗ ಬಲಿಪಶುಗಳೂ ಹಾಗೆ ಸಜೇಶನ್ ಕೊಟ್ಟ ಡಾಕ್ಟರುಗಳು.
ನಾನು ಮನೆಗೆ ಗ್ಯಾಸ ತಂದಾಗ ಎಲ್ಲರೂ ಖುಷಿಪಟ್ಟರೂ ಅತ್ತವಳು ನಮ್ಮವ್ವ. ಹೇಗೆ ಬಳಸಬೇಕೆಂಬ ಭಯದಿಂದಲ್ಲ. ಬಹುದಿನಗಳಿಂದ ಬಳಸುತ್ತ ಬಂದಿದ್ದ ಕಟ್ಟಿಗೆ ಒಲೆ ದೂರಾಗುತ್ತಲ್ಲ ಎಂಬ ಚಿಂತೆಗೆ ಒಂದು ವರ್ಷದತನಕ ನಿತ್ಯ ಜಗಳ. ನನಗ ಕಟ್ಟಿಗೆನ ತಂದು ಕೊಡಿ ಅಂತ. ಇದು ಕೆಲಸದ ಧಾವತಿ ಕಡಿಮೆ ಮಾಡುತ್ತಿದ್ದರಿಂದ ಅವ್ವಗ ಒಂದು ರೀತಿ ಏನೋ ಕಳಕಂಡಂಂಗ ಅಗಿತ್ತು. ಹೆಂಡಿ ತಂದು ನೀರಾಕಿ ಸಾರಸಿ ಸ್ವಚ್ಛಗೊಳಿಸುತ್ತಿದ್ದ ಅವ್ವಗ ದಂಗ ಹಿಡಿದ ಆಗಿತ್ತು. ಈಗಲು ಅದರ ನಂಟಸ್ತಿಕೆ ಬಿಟ್ಟಿಲ್ಲ. ಕೊಬ್ಬರಿಯ ಚಿಪ್ಪುಗಳನ್ನು ಸಂಗ್ರಹಿಸಿ ಇಟ್ಟಿರೋಳು. ತಿಂಗಳಿಗೆ ಒಮ್ಮೆರ ಒಲೆ ಹಚ್ಚಿ ನೀರು ಕಾಸಿಕೊಂಡು ಗತಕಾಲದ ನೆನಪನ್ನು ಸ್ಮರಿಸಿಕೊಳ್ಳೋಳು. ಈಗಲೂ ಬೈತಿರಾತಾಳೆ ‘ಒಲೆ ಇಲ್ಲದ ಮನೆಗೆ ತಂದು ಒಗದು ಕೈಕಟ್ಟಿಹಾಕಿದೆ’ ಎಂದು. ಆದರೂ ಬಿಟ್ಟಿಲ್ಲ. ಶುಚಿತ್ವದಲ್ಲಿ ಅದು ಒಲೆ ಉಪಯೋಗಿಸುವುದರಲ್ಲಿ ಒಂದು ಕೈ ಮುಂದ ಅನ್ನ ಬೇಕು. ಮುಸುರಿ ಗೋಮಯ ಅಂತ ನೀರು ಹಾಕಿದ್ದ ಹಾಕಿದ್ದ ಒರೆಸಿದ್ದು ಒರೆಸಿದ್ದ. ಇವತ್ತಿಗೂ ಮಹತ್ವದ ಹಬ್ಬ ಗ್ಯಾಸ ಮೇಲೆ ನಡದ್ರೂ ನಡಿತಾದ ಆದ್ರ ವೈದಿಕ ಪಕ್ಷ ಕಾರ್ಯಗಳೆಲ್ಲ ಹ್ಞೂ ಹೂಂ ಗ್ಯಾಸ ಮೇಲೆ ಸುತಾರಾಂ ಸಾಧ್ಯವಿಲ್ಲ. ಹಾಗೆ ಮಾಡುವುದು ಗತಿಸಿದ ಹಿರಿಯರಿಗೆ ಮಾಡುವ ಅಪಚಾರ. ಹಾಗಾಗಿ ಮನ್ಯಾಗ ಆಗಲ್ಲ ಅಂತ ಹೇಳಿನ ಈಗ ಅಂತಹ ಕಾರ್ಯಗಳಿಗೆ ಮಠಗಳನ್ನ ಹಿಡಿದು ಬಿಟ್ಟಿದ್ದಾರೆ.
ವೈದಿಕರಲ್ಲಿ ಊದುಬತ್ತಿ ಬಳಸುವುದು ನಿಷಿದ್ಧ. ಹಾಗಾಗಿ ‘ಧೂಪ ದೀಪ ನೀಲಾಂಜನಂ ಸಮರ್ಪಿಯಾಮಿಹಿ’ ಅನ್ನೋದು ಒಲೆಯ ಕೆಂಡಕ್ಕೆ ಸಂಬಂದಿಸಿದುದಾಗಿದೆ. ಊದಿನ ಕಡ್ಡಿ ನಿಷಿದ್ಧ ವಾದ್ದರಿಂದ ಒಲೆಯಲ್ಲಿಯ ಕೆಂಡದಿಂದ ಅದರಲ್ಲಿ ದಶಾಂಗ ಹಾಕಿ ಧೂಪ ಎತ್ತುವುದು ಸಂಪ್ರದಾಯ. ಅದಲ್ಲದೆ ಪಕ್ಕಾ ಸಂಪ್ರದಾಯಿಗಳಿಗೆ ಗಂಧ ಅಕ್ಷತೆ ಜೊತೆಗೆ ಅಂಗಾರ ಹಚ್ಚಿಕೊಳ್ಳಲು ಧೂಪಕ್ಕೆ ಬಳಸಿದ ಇದ್ದಿಲು ಬೇಕೆ ಬೇಕು. ಊಟಕ್ಕ ಒಂದು ಐಟಂ ಕಮ್ಮಿ ಆದರೂ ಚಿಂತಿಲ್ಲ ಅಂಗಾರ ಬೇಕೆ ಬೇಕು. ಅದಕ್ಕಿಂತ ಮುಂಚೆ ವೈಶ್ಯದೇವ ಮಾಡಲು ಅಂದರೆ ಅಡುಗೆ ಮಾಡಲು ಸಹಕರಿಸಿದ ಅಗ್ನಿಗೆ ಅನ್ನದ ಮೂಲಕ ಋಣ ತೀರಿಸಲು ಮಾಡಲು ಇದ್ದಿಲ ಒಲೆಯಲ್ಲಿಯ ನಿಗಿ ನಿಗಿ ಕೆಂಡ ಬೇಕೆ ಬೇಕು. ಇವೆಲ್ಲ ಕಾರಣಕ್ಕಾಗಿಯಾದರೂ ಒಲೆ ಮೇಲೆ ಅಡುಗೆ ಮಾಡಲೇ ಬೇಕು. ನಮ್ಮ ಸಂಬಂಧಿಗಳು ರಾಯಚೂರಿನಲ್ಲಿ ಒಳ್ಳೆಯ ಸೊಗಸಾದ ಮನೆ ಕಟ್ಟಿಸಿದ್ದರು ಬಾಡಿಗೆನೂ ಗೃಹಸ್ಥರೊಬ್ಬರಿಗೆ ಕೊಟ್ಟಿದ್ದರು. ಆದರೆ ಒಬ್ಬ ದೊಡ್ಡ ಅಚಾರ್ಯರು ದುಂಬಾಲು ಬಿದ್ದೊಡನೆ ಇವರಿಗೆ ಅವರ ಮೇಲೆ ಅಪಾರ ಅಭಿಮಾನ ಇದ್ದುದ್ದಕ್ಕಾಗಿ ಅವರನ್ನು ಬಿಡಿಸಿ ಆಚಾರ್ಯರಿಗೆ ಕೊಟ್ಟರು. ಅವರಿಕೊಟ್ಟದಕೂ ಇವರಿಗೆ ಬೇರೆ ಕಡೆ ವರ್ಗವಾದದಕ್ಕೂ ಸರಿ ಹೋಯ್ತು. ಬಾಡಿಗೆ ಅಕೌಂಟ್‍ಗೆ ಹಾಕಲು ಹೇಳಿ ಹೋದವರು ಒಂದು ವರ್ಷದ ನಂತರ ಮನೆಗೆ ನೋಡಲು ಬಂದರೆ ಅವರ ಮನೆಯ ಗುರುತು ಸಿಗದ ಹಾಗಾಗಿತ್ತು. ಕಟ್ಟಿಸಿ ಶತಮಾನಗಳಾಗಿರಬೇಕೇನೋ ಅನ್ನುವ ಹಾಂಗಿತ್ತು ಮೆನೆಯಲ್ಲ ಹೊಗೆ ಸೋರಿ. ಗಾಭರಿಯಿಂದ ಬಂದು ಇವರು ವಿಚಾರಿಸಿದ್ರೆ ‘ಇಲ್ಲ ನಾನು ಋಷಿ ಪಂಚಮಿ ಹಿಡಿದಿನಲ್ಲ ಹೆಣ್ಮಕ್ಕಳ ಕೈಯಲ್ಲಿ ಅಡುಗೆ ತಿನ್ನೊಲ್ಲ ಹಾಗಾಗಿ ಅವರಿಗೆ ಅಡುಗೆ ಮನೆ ಬಿಟ್ಟಿನಿ ನಾನು ಈ ಹಾಲ್‍ನಲ್ಲಿಯೇ ಅಡುಗೆ ಮಾಡಿಕೊಂತಿನಿ’ ಅಂದ್ರು ಅಲ್ರೀ ‘ನೀವ ಏನರ ಹಿಡ್ರಿ ನನ್ನ ಹೊಸ ಮನಿ ಗತಿ ಏನ್ರೀ’ ಎಂದಾಗ ಅದಕ್ಯಾಕ ಚಿಂತಸ್ತರಿ ನಾನು ಮಾಡೋ ವೃತದ ಅರ್ಧಭಾಗದ ಪುಣ್ಯ ನಿಮಗ ಸಿಗತಾದ್ರೀ’ ಅಂದಾಗ ಇವರಿಗೆ ಮಾತೆ ಬಾರಲಿಲ್ಲ.
ಅಡಿಗೆ ಮಾಡಲು ಒಲೆಗಳು ಹಿಂಗ ಇರಬೇಕು, ವಿನ್ಯಾಸ ಹಾಗೆ ಇರಬೇಕು ಎಂದಿಲ್ಲ. ಯಾವದೋ ಜಾತ್ರೆಗೋ ದೇವಸ್ಥಾನಕ್ಕೋ ಹೋದ್ವಿ ಅಂತ ಇಟ್ಕೊಳ್ಳಿ. ಒಲೆ ಇರಲಿಕ್ರೂ ಸಿಗು ಮೂರು ಕಲ್ಲೆ ಸಾಕು. ಎಷ್ಟು ಸರಳ ಹಾಗೂ ವೆಚ್ಚವಿಲ್ಲದ ಸಾಧನ. ಕಾಡು ಹುಲುಸಾಗಿ ಬೆಳೆಯುತ್ತಿದ್ದರಿಂದ ಕಟ್ಟಿಗೆಗೆ ಬರವಿರುತ್ತಿರಲಿಲ್ಲ. ಈಗಲೂ ಕೆಲ ಯಾತ್ರ ಸ್ಥಳಗಳಲ್ಲಿ ಇದೆ ಮೆಥಡ್ ನ ಪಾಲೋ ಅಪ್ ಮಾಡತಾ ಇದ್ದಾರೆ ಆದರೆ ಬದಲಾವಣೆ ಕಟ್ಟಿಗೆಯನ್ನ ಜೊತೆಗೆ ಒಯೋದು. ಹಿಂಗ ಒಲೆಗಳ ಕಥಿ ಬಾಳ ದೊಡ್ಡದದ. ಒಲೆಯ ಆ ಬೂದಿ ಎಷ್ಟು ಉಪಯೋಗ ಇತ್ತು. ಈಗಿನ ವಿಮ್ ಎಕ್ಸೋ ಕಿಂತ ಸ್ಟ್ಯಾಡಂರ್ಡ ಮುಸುರಿ ತಿಕ್ಕೋ ಸಾಧನ ಅದಾಗಿತ್ತು. ಅದಲ್ಲದ ಹೋರಗ ದಡ್ಡಿಗೆ ಹೋದ ಮ್ಯಾಗ ಕೈತೊಳಕ್ಕಳ್ಳಕ ಒಳ್ಳೆ ಕ್ಲೀನರು ಆಗುತ್ತೆ ಅನ್ನೋದು ಗೊತ್ತಿರಲಿಲ್ಲ. ಒಮ್ಮೆ ಧಾರವಾಡದ ಮುರುಘ ಮಠಕ್ಕೆ ಹೋದಾಗ ಬಾತರೂಮ್ ಪಕ್ಕ ರಾಶಿ ಹಾಕ್ಯಾರ ಬೂದಿ ಯಾಕ ಅಂತ ಗಾಬರಿ ಆಗಿತ್ತು. ಆದರ ಅಲ್ಲಿ ಮಕ್ಕಳು ಬಳಸುತ್ತಿದ್ದನ್ನು ನೋಡಿ ಅರ್ಥ ಆಯ್ತು. ಒಲೆಯ ಇದ್ದಿಲು ಹಲ್ಲಿನ ಪುಡಿಗೆ ಒಳ್ಳೆ ಪೌಡರ್ ಅಲ್ಲದೆ ಆ ಇದ್ದಲು ಹಲವಾರು ಜನರಿಗೆ ಉದ್ಯೋದಾತರಾಗಿದ್ವು. ಕುಲುಮೆಯವರಿಗೆ, ಬಟ್ಟೆಗಳನ್ನು ಗರಿಗರಿಯಾಗಿ ಮಾಡುವ ಇಸ್ತ್ರಿ ಮಾಡುವವರಿಗೆ. ಸೌದೆ ಒಡೆಯುವವರಿಗೆ, ಮಾರುವವರಿಗೆ ಒಂದೆ ಎರಡೆ ಒಲೆಯಿಂದ ಉಪಕೃತರಾದವರು. ಕಟ್ಟಿಗೆಯನ್ನು ಸುಟ್ಟು ಅಡುಗೆ ಮಾಡಿ ಉಳಿದ ಇದ್ದಿಲು ಮನೆ ಬಳಕೆಗೆ ಹೆಚ್ಚಾದಾಗ ಅದು ಆರ್ಥಿಕ ಲಾಭಕ್ಕೆ ಸಹಾಯ ವಾಗುತ್ತಿತ್ತು. ಆದರೆ ಗ್ಯಾಸ ಒಲೆ ಯಾವ ಪ್ರಯೋಜನಕ್ಕದ ಹೇಳಿ. ಆದರೆ ಒಲೆಗಳು ಹೋಗಿ ಸಾಂಪ್ರದಾಯಿಕ ಇಸ್ತ್ರೀ ಮಾಡುವವರು, ಕುಲುಮೆಗಾರರ ಉದ್ಯೋಗಗಳಿಗೆ ಸಂಚಕಾರ ತಂದಿವೆ, ನಗರಗಳಲ್ಲಿ ಎಲ್ಲಿ ಸಿಗುತ್ತಿವೆ ಹೇಳಿ ಇವುಗಳು. ಅಲ್ಲದ ಮನೆಯವರ ಕೈಗೆ ಸಿಗಲಾರದಂತಹ ವಸ್ತುಗಳನ್ನು ಮಂಗಮಾಯಾ ಮಾಡಕ ಎಷ್ಟು ಅನುಕೂಲ ಇದ್ದವು. ಬರೆದ ಗುಪ್ತ ಪ್ರೇಮ ಪತ್ರಗಳಿರಲಿ, ಗಂಡನನ್ನು ಹಾದಿತಪ್ಪಿಸುವ ಇಸ್ಪೇಟ್ ಎಲೆಗಳನ್ನು ಮಾಯಮಾಡುವುದಕ್ಕಾಗಲಿ ಎಷ್ಟು ಅನುಕೂಲಕ್ಕಿತ್ತು. ಸಿಟ್ಟು ಬಂದಾಗ ‘ಹೆಚ್ಚು ಮಾತಾಡಿದ್ರ ಒಲ್ಯಾಗ ಹಾಕಿ ಸುಟ್ಟು ಬಿಡ್ತೀನಿ’ ಎನ್ನುವಂತಹ ಮಾತುಗಳು ಕೇಳಾಕ ಇಲ್ಲದಂಗ ಆಗ್ಯಾವ.
ಒಲೆಗಳನ್ನು ಉಪಯೋಗಿಸುವಾಗ ತೋರುವ ಭಯ ಭಕ್ತಿಯನ್ನು ಅದೆ ಗ್ಯಾಸ ಸ್ಟವ್ ಒಲೆಗಳಲ್ಲಿ ಮಾಡುವಾಗ ಅಂತಹ ಬಾಂಧವ್ಯವನ್ನು ಕಾಣಲಾಗುವುದಿಲ್ಲ. ಒಂದು ಕಡೆ ಕಟ್ಟಿಗೆ ಒಲೆಯ ಮೇಲೆ ಮಾಡುವಾಗಿರುವ ಉತ್ಸಾಹ ಪ್ರೀತಿ ಗ್ಯಾಸ ಒಲೆಗಳಲ್ಲಿ ಖಂಡಿತ ಸಿಗಲಾರವು. ಫಕ್ತಾಗಿ ನಿರ್ಮಿಸಿದ ಅಡುಗೆ ಮಾಡುವ ಸ್ಥಳಕ್ಕೆ ಅನ್ನಪೂರ್ಣೇಶ್ವರಿ ಪ್ರಸನ್ನ ಅಂತ ಬರಸ್ತಾ ಇದ್ರು ಈಗ ಮೊಬ್ಯೆಲಾಗಿ ಚಲಿಸುವಂತಹ ಗ್ಯಾಸೆಗೆ ಏನನ್ನಬೇಕು? ಕಟ್ಟಿಗೆÉೂಲೆಗಳು ಇವೆಲ್ಲದರ ಜೊತೆಗ ಎಂತಹ ಪರಿಸರ ಸ್ನೇಹಿ. ಎಷ್ಟೇ ಕಾರ್ಬನ್ ಡೈ ಆಕ್ಸೈಡ್ ಬಿಟ್ಟರೂ ಹಾನಿಗೊಳಗಾದವರು ಅದರಿಂದ ತೊಂದರೆ ಅನುಭವಿಸಿದವರು ನಾನು ಮಾತ್ರ ನೋಡಿಲ್ಲ. ಆದರೆ ಗ್ಯಾಸ ಹಾಗಲ್ಲ ಸ್ವಲ್ಪ ಮೈಮರೆತರೆ ಜೀವ ತೆಗೆದುಕೊಳ್ಳುವುದರಲ್ಲಿ ಎತ್ತಿದ ಕೈ. ಒಬ್ಬರದ ಅಲ್ಲ ಅಕ್ಕಪಕ್ಕದವರದು ಸೇರಿಸಿ ಬಾಕಿ ಚುಕ್ತಾ ಮಾಡಿಕೊಳ್ಳುತ್ತೆ ಅಂತಹ ಡೆಂಜರು . ಯಾಂತ್ರಿಕರಣ ಒಲೆಯನ್ನಂತೂ ಮನೆಯಲ್ಲಿ ಈಗ ಮೂಲಿಗೆ ತಳ್ಳಿದ್ದರೂ ಹಳ್ಳಿಗಳಲ್ಲಿ ಜೀವಂತವಾಗಿದೆ ದೊಡ್ಡ ದೊಡ್ಡ ಅಡುಗೆ ಗಳಲ್ಲಿ ಬಳಕೆಯಲ್ಲಿದೆ.
ಹಿಂದಕ ಮಣ್ಣಿನ ಚಂದನೆಯ ಮಾಳಿಗೆ ಇದ್ದವು. ಮೇಲೆ ಹತ್ತಿ ಬೆಳದಿಂಗಳ ಊಟ ಓಣಿ ಮಂದಿ ಕೂಡಿ ಮಾಡ ಸಂಭ್ರಮನ ಬ್ಯಾರೆ. ಬೆಳಿಗಿ ಕರ್ಮ ಮುಗಿಸಿದ ಮ್ಯಾಗೆ ಮಾಳಿಗೆ ಓದುವ ಸಲುವಾಗಿ ಹತ್ತಿದ್ರೆ ಮನೆಯ ಹೊಗಿಗಿಂಡಿಯಿಂದ ಮೇಲೆರಿ ಬರುತ್ತಿದ್ದ ಹೊಗೆ ಸುಂದರವಾದ ಆಕೃತಿಗಳನ್ನ ಸೃಷ್ಠಿಸಿ ಮನದಲ್ಲಿ ನೂರೆಂಟು ಭಾವನೆಗಳನ್ನು ಅರಳಿಸುತ್ತಿದ್ದವು. ಒಂದ ಮನ್ಯಾಗನ ಎರಡು ಕೋಣೆಯಿಂದ ಹೊಗಿ ಬರಾಕತಿತು ಅಂದ್ರ ಆ ಮನ್ಯಾಗ ಏನೋ ಗಡಬಡ ಆಗ್ಯಾದ ಅಂತ ಹಿರಿಯರು ಭಾವಸಿ ‘ಇದು ಚಂದಲ್ಲ ನೋಡಪ ಒಂದ ಮನ್ಯಾಗ ಹಿಂಗ ಅಂತ’ ನ್ಯಾಯ ಬಗೆ ಹರಸಾಕ ಜನ ಹೋಗತಿದ್ರು. ಒಡೆದ ಒಲೆಗಳನ್ನ ಒಂದು ಗೂಡಸಾಕ ಯತ್ನಸಿತಿದ್ರೂ ಇಲ್ಲ ಆಗಲ್ಲಪ ಅಂದ್ರ ವೈಮನಸ್ಸು ಬರದಂಗನ ಪಾಲು ಮಾಡತಿದ್ರೂ. ಅವಿಭಕ್ತ ಕುಟುಂಬಗಳು ಇದ್ರಂತೂ ಮುಂಜಾನೆ ಯಿಂದ ರಾತ್ರಿತನಕ ಒಲಿಗೆ ಪುರುಸೋತ್ತ ಇರತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ ಅಂತಲ್ಲ ಮನಸ್ಸುಗಳು ಬದಲಾಗಿವೆ. ಕಾಂಕ್ರಿಟ್ ಕಟ್ಟಡಗಳು ಹುಟ್ಟಿ ಶುಭ್ರ ಗಾಳಿ ಬೆಳಕಿಗಾಗಿ ಇದ್ದ ಬೆಳಕಿಂಡಿಗಳನ್ನು ಕಸಿದಿವೆ. ಮೊದಲ ಹೇಳಿದ ಹಾಗೆ ಕಟ್ಟಿಗೆ ಉಪಯೋಗಿಸುವವರು ಬಡವರು ಅಂತ ಟ್ರೀಟ್ ಆಗತಿದಾರೆ.. ಕೆಲ ವರ್ಷಗಳ ಹಿಂದ ನೀವು ಮನೆ ಹುಡಕಾಕ ಹೋದ್ರಿ ಅಂತ ಇಟ್ಟುಕೊಳ್ರೀ ಗ್ಯಾಸ ಇದ್ರ ಎಂಟ್ರಿ ಅಂತಿದ್ರು. ಆದ್ರ ಈಗ ಆ ಪ್ರಶ್ನೆನ ಇಲ್ಲ. ಹೊಗೆಗಿಂಡಿ ನಿರ್ಮಿಸಿದ್ದರೆ ತಾನೆ ಆ ಪ್ರಶ್ನೆ ಬರೋದು. ಇತ್ತಿಚೀಗೆ ಅದು ಖಯಾಲಿ ಹೋಗ್ಯಾದ, ಯಾಕ ಗ್ಯಾಸು ಸರ್ವಾಂತರಯಾಮಿಯಾಗಿರುವುದರಿಂದ?
****
"ಒಲೆಗಳನ್ನು ಉಪಯೋಗಿಸುವಾಗ ತೋರುವ ಭಯ ಭಕ್ತಿಯನ್ನು ಅದೆ ಗ್ಯಾಸ ಸ್ಟವ್ ಒಲೆಗಳಲ್ಲಿ ಮಾಡುವಾಗ ಅಂತಹ ಬಾಂಧವ್ಯವನ್ನು ಕಾಣಲಾಗುವುದಿಲ್ಲ. ಒಂದು ಕಡೆ ಕಟ್ಟಿಗೆ ಒಲೆಯ ಮೇಲೆ ಮಾಡುವಾಗಿರುವ ಉತ್ಸಾಹ ಪ್ರೀತಿ ಗ್ಯಾಸ ಒಲೆಗಳಲ್ಲಿ ಖಂಡಿತ ಸಿಗಲಾರವು."
ಅಗ್ನಿಯ ಮೇಲಿನ ಆ ಮಧುರ ಭಾವ ಗ್ಯಾಸ್ ಒಲೆಗಳನ್ನು ನೋಡಿದರೆ ಬರುವುದು ಅಸಾಧ್ಯ….
ಚೆನ್ನಾಗಿದೆ …….
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ
Good Article for traditionalist