ನಿನ್ನ ಕಣ್ಣ ಕಡಲಲೀ……………
ನನ್ನ ಬಾಳಿದು ಬೆಳಗಲಿ,
ಸರಿದು ಹೋಗೋ ಭಾವದಿ
ಪ್ರೀತಿ ದೋಣಿ ತೇಲಲಿ…………………….
ಇಡೀ ಪದ್ಯದಿ ಇದೊಂದು ಚರಣ ಅಲ್ವೇ ನಿಮ್ಮೆಡೆಗೆ ತಿರುಗುವಂತೆ ಮಾಡಿದ್ದು ನಿಮ್ಮ ವಿಳಾಸ ಪ್ರಕಟವಾಗಿದ್ದ ಸಾಪ್ತಾಹಿಕದಿಂದಲೇ ಪಡೆದು ನಿಮ್ಮ ಈ ಕವಿತೆಗಾಗಿ ಹಂಬಲಿಸಿ ಅಭಿನಂದನೆ ತಿಳಿಸಿದ್ದು. ಕಾಣದ ನಿಮ್ಮ ಕಾಣುವ ಬರಹದ ತನಕ ತಂದು ನಿಲ್ಲಿಸಿದ್ದು ತಿಂಗಳಿಗೆರಡರಂತೆ ನಮ್ಮ-ನಿಮ್ಮ ಪತ್ರ ವಿನಿಮಯ ಭಾವ ಬಂಧುರದ ತನಕ ತಂದು ನಿಲ್ಲಿಸಿದೆ ಕೊನೆಗೆ ಈ ಪತ್ರ ತಾನತೆ ಎಲ್ಲಿ ಒರೆಗೆ ? ನಿಮ್ಮೆಲ್ಲಾ ವಿವರ ಗೊತ್ತಿದ್ದೂ ಹುಚ್ಚು ಹೆಚ್ಚ್ಚಿದವಳಂತೆ ಈ ಪತ್ರಗಳನ್ನು ಬರೀ ನಿಮ್ಮ ಬರಹಕ್ಕಾಗಿ ಬರೆಯುತ್ತಿದ್ದೇನೆಂದರೆ ಅರ್ಥವುಂಟೆ ?
ಉತ್ತರಿಸಿ.
ನಿಮ್ಮಾಕಾಂಕ್ಷಿ
ಅಮೃತ.
ಕಾಣದ ತೀರಕೆ
ಸಾಗುತ ಪಯಣ
ನೆಲೆಗುರಿ ಇರದಿ
ಮನಸಿದು ಮೌನ !-
ಹೀಗಾಗಿದೆ ಹುಡುಗಿ ಪರಿಸ್ಥಿತಿ ! ಏನೆಂದು ಬರೆಯಲಿ ಪತ್ರವ ? ಇದೇನು ವಿಚಿತ್ರ, ನೀನೊಂದು ದಿಕ್ಕು ನಾನೊಂದು ದಿಕ್ಕು ದರ್ಶನವಿರದ ದಾರಿಯಲಿ ಕಂಡೂ ಕಾಣದ ನೂರಾರು ಮೈಲುಗಲ್ಲುಗಳು, ಇದು ಪ್ರೀತಿಯೋ ಪ್ರೇಮವೋ ಸೆಳೆತವೋ, ಆಕರ್ಷಣೆಯೋ ಭ್ರಮೆಯೋ ಊಹ್ಹೂ, ತಿಳಿಯುತ್ತಿಲ್ಲ, ತೋಚಿದ್ದನ್ನು ಗೀಚಿ ಬಿಸಾಕೋ ಪದ್ಯಕ್ಕೆ ಅನುರಕ್ತಳಾದ ನೀನು ನನಗಾಗಿ ತುಡಿಯುವುದರಲ್ಲಿ ಅರ್ಥವಿದೆಯೇ ?
ಸಾಧ್ಯವಾದರೆ ಬರಿ,
ನಿನ್ನ ಕವಿ
ಫಯಾಜ್,
ಕನಸ ಕಣ್ಣಿಗೆ ನೂರಾರು ಚಿತ್ರ
ಹೃದಯದಾ ಮಾತಲ್ಲಿ
ಬರೀ ನೆಪಮಾತ್ರ……………….
ಹೀಗಂತ ನೀವೆ ಬರೆದಿದ್ರಲ್ಲ ಫಯಾಜ್, ಕನಸೇನು ಯಾರಾದ್ರೂ, ಹೇಗಾದ್ರೂ, ಕಾಣಬಹುದು ಆದರೆ ಹೃದಯ ತಾನು ಹ್ಞುಂ ಗುಟ್ಟ ಬೇಕಿರುವುದು ? ನಾ ನಿಮ್ಮನ್ನು ನೀವು-ನನ್ನನ್ನ ನೋಡಿಲ್ಲವಾದರೂ ಪತ್ರ ನಮ್ಮ ವ್ಯಕ್ತಿತ್ವಕ್ಕೆ ಸಾಕು ಅನ್ಸುತ್ತೆ ಟೆಕ್ನಾಲಜಿ ಅಂತ ಪೋನು, ಎಸ್.ಎಂ.ಎಸ್. ಫೋಟೊ ಇದರ ರಗಳೆ ನಂಗೂ ಬೇಡ ನೀವೂ ಆಶಿಸಲ್ಲಾಂತ ಬಲ್ಲೆ. ನಿಮ್ಮ ನೂರಾರು ಕೊರಗುಗಳಿಗೂ ನಾ ದನಿಯಾಗಬಲ್ಲೆ ನಿಮ್ಮ ಬರಹಕ್ಕೆ ಸ್ಪೂರ್ತಿ ಅಲ್ಲಿದಿದ್ದರೂ ಶೋತೃ ನಾನಾಗುವೆ ಅದಕ್ಕ್ಕೆ ನಿಮ್ಮ ಹೃಧ್ಯಾಮೀಪ್ಯ ನೀಡಲಾರಿರಾ ?
ಬರೀತಾ ಇರಿ
ನಿಮ್ಮವಳೇ
ಅಮ್ಮು
ಕಂಡ ಆಕಾಶಕ್ಕೆ
ಕೈ ಚಾಚಲಾದೀತೆ ?
ಕಾಣದ ಪ್ರೀತಿಗೆ
ಹಂಬಲಿಸಲಾದೀತೆ…………………..
ನಕ್ಕು ಬಿಟ್ಟೆ ನಿನ್ನ ಪತ್ರ ಓದಿ ! ಹೃದ್ಯಾಮಿಪ್ಯ ಅಂದ್ರೆ ಅದೇನು ಸೈಟಾ ಪಕ್ಕದಲ್ಲೇ ತೆಗೆಸಿಕೊಡೋಕೆ ನಂಗೂ ಮನಸಿದೆ, ಭಾವ, ಭಾವನೆ, ಕಲ್ಪನೆ, ನೂರಾರು ಆಸೆ ಇದೆ ಆದರೆ ಎಲ್ಲೋ ಇರುವ ನಿನ್ನ ಪತ್ರಕ್ಕೆ ಕಟ್ಟು ಬಿದ್ದು ಬರೋ ವಾಸ್ತಾವಾನಾ ಹೇಗೆ ಎದುರಿಸಲಾದೀತು ಹೇಳು ? ಇದು ಪೌರಾಣಿಕ ಕಾಲವಲ್ಲ, ಫಾರ್ವರ್ಡ್ ಯುಗ ಬರೀ ಕವಿತೆಗೆ ಬಲಿಯಾದೆ ಬರಹಕ್ಕೆ ಆಕರ್ಷಿತಳಾದೆ ಅಂದ್ರೆ ಕೆಲವರು ನಕ್ಕಾರು ! ಇನ್ನು ಪ್ರೀತಿ ಪ್ರೇಮ ಅಕ್ಷರದಲ್ಲಿ ಮೈಗೂಡಿ ಬರೋದಾದ್ರೆ ಪ್ರಪಂಚದಲ್ಲಿ ಇಷ್ಟೊಂದು ಪ್ರೇಮ ಕಥನಗಳ ಜೊತೆ ನಮ್ಮಂಥವೂ ಜಾಗ ಪಡೀತಿದ್ವು !
ಸ್ನೇಹವಿರಲಿ
ಸ್ನೇಹಾಕಾಂಕ್ಷಿ
ಫಯಾಜ್
ಬರೆಯಾಲಾರೆ ನೋವು ನಲಿವು
ಕೂಡಿ ಕಳೆಯುವಕ್ಷರ
ತಿರುಗಿ ಹೊಗಲೆತ್ತ ಮತ್ತೆ
ಬರುವೆ ನಿನ್ನ ಹತ್ತಿರ …………………………
ನಮ್ಮ ಹೆಸರಿಡದ ಸಂಬಂಧ ನೋಡಿ ಯಾರು ನಕ್ಕರೇನು ಕವಿಗಳೇ ? ನೀವು ಅರ್ಥೈಸಿ ಕೊಂಡಿಲ್ಲವೆ ? ನೀವು ನಿಮ್ಮ ಸ್ನೇಹ ನಾನೆಂದೋ ಒಮ್ಮೆ ಕಂಡ ಕನಸು, ನನ್ನ ಕಲ್ಪನೆಯ ಮೂರ್ತರೂಪ ನೀವು, ನೀವು ವಾಸ್ತ್ತವದಲ್ಲಿ ಹೇಗಿರುವಿರೋ ನನಗೂ ತಿಳಿದಿರಲಿಲ್ಲ ಮೊದಲ ಪತ್ರ ಬರೆಯುವ ತನಕ ! ಹುಡುಗಿ ಒಬ್ಬಾಕೆ ತನ್ನ ಭಾವನೆಗೆ ಸ್ಪಂದಿಸುವವರೊಂದಿಗೆ ಸ್ನೇಹಕ್ಕೆ ಪರಿತಪಿಸಿದರೆ, ಅದು ಪ್ರೀತಿ, ಪ್ರೇಮ, ಆರಾಧನೆಯ ಬೂದಿಯಲ್ಲಿ ಮುಚ್ಚಿದ ಕಾಮದ ಕೆಂಡವಾಗಿರಲೇ ಬೇಕಾ ? ಅದೊಂದು ತರಹದ ದಿವಿನಾದ ಸಂಬಂಧವಾಗಬಾರದೇ ನಿಮ್ಮ ಕಲ್ಪನೆ, ಆಸೆ, ಭಾವ, ಭಾವನೆಗಳನ್ನು ವಾಸ್ತವಕ್ಕೆ ತರುವ ದಾರಿಯಲ್ಲಿ ಬಿರುಗಾಳಿಯಂತೆ ಬರಲಾರೆ ; ಶೀತಲಗಂಧವಾಗಿರಲೆ ?
ತಿಳಿಸಿ
ನಿಮ್ಮ ಪತ್ರದ ನಿರೀಕ್ಷೆಯಲ್ಲಿ
ಅಮ್ಮು
ಹೇಳಿಕೇಳಿ ನಾನೊಂದು ಕನಸು
ಪ್ರೀತಿಸದಿರು ಈ ಕನಸನ್ನು
ನನ್ನ ನಂಬಿ ಕಟ್ಟದಿರು ಆಶಾಸೌಧ,
ಕುಸಿದು ಬಿದ್ದರೆ ಬರೀ ವಿಷಾದ
ನಿಜವೇನೆ ಹುಡುಗಿ ನೀ ಬರೆದದ್ದೆಲ್ಲ ? ಹೇಗೆ ನಂಬಲಿ ? ನನ್ನ ಆಟವಾಡಿಸುವ ಇರಾದೆ ಇಲ್ಲ ತಾನೆ ? ಭಾವ ಜೀವಿಗಳಿಗೆ
’ಭಾವ’ ಗಳನ್ನು ನಂಬದೇ ಬೇರೆ ದಾರಿ ಇಲ್ಲ ಅಲ್ವೇನೆ ಪುಟ್ಟಿ ? ನೀ ಹೇಳಿದಂತೆ ’ನೀನು’ ಎಂಬುದು ಮನಸಿನ ಯಾವುದೊಂದು ಮೂಲೆಯಲ್ಲಿ ಇದ್ದರೆ, ಕಂಡು ಕಾಣದಂಥ ನೆನಪಾಗಿದ್ದರೆ ನನಗೂ ತೊಂದರೆ ಇಲ್ಲ, ಆದರೆ ಈಗೀಗ ನೀ ನನ್ನ ಆಶ್ರಯಿಸ್ತಿದ್ದಿ ರಾತ್ರಿ ಹಗಲು, ಮಳೆ, ಬಿಸಿಲಾದರೂ ಅವುಗಳದೇ ಆದ ಸಮಯವಿದೆ ಆದರೆ ನೀನು ಎಲ್ಲೆಂದರಲ್ಲಿ, ಹೇಗೆಂದರ್‍ಹಾಗೆ ಚಿತ್ತಕ್ಕೆ ಬಂದು ಬಿಡ್ತಿಯಲ್ಲ ನಿನ್ನ ಈ ಪರಿಗೆ ಏನೆನ್ನಲಿ ಮೈತ್ರಿ ? ನೀನು ನನ್ನ ಮನಸ್ಸೆಂಬ ಮನೆಯ ಅಂಗಳಕ್ಕೆ ನಿರಾಕರಿಸುತ್ತಿರುವಾಗಲೇ ಬಂದಿಳಿದಿದ್ದಿ ಏನು ಮಾಡಲಿ ? ಆರತಿ ಎತ್ತಿ ಒಳಗೆ ಸ್ವಾಗತಿಸಲೇ ಅಥವಾ ನನ್ನ ಬೆಚ್ಚಗಿನ ಗೂಡಿನೊಳಗಣ ಇದ್ದೇ ನಿನ್ನ ದೂರದಿಂದಲೇ ನೋಡಿ ನಕ್ಕು ಸುಮ್ಮನಾಗಲೇ ? ಬೇಗ ಹೇಳು ಸುಬಾಷಿಣಿ.
ನಿನ್ನ ಅಕ್ಷರಾಕಾಂಕ್ಷಿ
ಫಯಾಜ್
ನಗಬೇಕಂದ್ರೆ ನಗಲಾರೆ
ಅಳಬೇಕಂದ್ರೆ ಅಳಲಾರ
ನಗು ಅಳು ಎದೆಯಾಳದಿ
ಹೂತು ಹೋಗಿದೆ,…………………..
ನಿಮ್ಮ ಪತ್ರ ಓದಿ ನಾನಷ್ಟೊಂದು ಅಸಹನಿಯ ವಾಗಿರುವೆನ ಮಿತ್ರ ! ಅಷ್ಟೋಂದು ತೊಂದರೆಯಾಗುವಂತಿದ್ದರೆ ಏಕೆ ಬೇಕು ಹೇಳು ಈ ಗೆಳೆತನ, ಅಭಿಮಾನ ಆರಾಧನೆ ? ನನ್ನ ಆಗಮನದ ನಂತರ ನಿನ್ನ ಬರಹದಲ್ಲಿ ವಸಂತ ಬರಲಿ ಎಂದಾಶಿಸಿದ್ದೆ ಆದರೆ ನಾನೆ ನಿನ್ನ ಸುಬೀಕ್ಷ ಮನಕ್ಕೆ ಬರವಾಗಿ ಬಿಟ್ಟೆನೆಂದರೆ ಕರೆಯದೇ ಮನೆಯಂಗಳಕ್ಕೆ ಬಂದವಳನ್ನು, ದಿಕ್ಕರಿಸಿದೆ ನಿಲ್ಲಿಸಿದ್ದೀರಿ ಧನ್ಯವಾದ ಇನ್ನು ಆಮಂತ್ರಿಸದೆ ಒಳಬರುವ ಭಂಡ ಧೈರ್ಯ, ಸೌಜನ್ಯ ಹೀತನತೆಯಾಗಲಿ ನನ್ನಲಿಲ್ಲ, ನಿಮ್ಮ ಕನಸುಗಳು ಸಾಕಾರಗೊಳ್ಳಲಿ, ನೀವೇನೆಂದರೂ ನಿಮ್ಮ ಸ್ನೇಹಾಕಾಂಕ್ಷಿಯಾಗಿ ಸದಾ ನಿಮ್ಮ ಅಕ್ಷರಳನ್ನು ರಚನೆಗಳನ್ನು ಕಲ್ಪನೆಗಳನ್ನು ಸ್ವಾಗತಿಸುತ್ತೇನೆ. ನಿಮ್ಮ ಕನಸಿನದೆಯ ಪರದೆಯನ್ನು ಸರಿಸುವವರೆಗೂ ಕಾಯುವೆ.
ಎಂದಾದರೂ ನನ್ನ ನೆನಪಾಗಲಿ
ನಿಮ್ಮ ಉಸಿರಲ್ಲಿ ಹಸಿರಾಗುವಾಸೆ,
ಅಮೃತ
ಕನವರಿಕೆಗಳು ಎಚ್ಚರಾದವು
ಹಿಮ ಬಂಡೆಗಳು ಬೆಚ್ಚಗಾದವು
ಎದೆಗೂಡ ಕಿಟಕಿಗಳ ತೆರೆದುಬಿಡು
ಮನಸು ಕೂಡ ಮೂಕವಾಯ್ತು
ಈ ಕಡೆ ಒಂದಷ್ಟು ಮನಸು ಕೊಡು………………………
ಹೀಗೇಕೆ ನನ್ನ ಕಾಡುತ್ತಿ, ಇಷ್ಟೊಂದು ಪ್ರೀತಿ ಏಕೆ ಅಮ್ಮು, ನನ್ನಂತೇ ಎಷ್ಟೊಂದು ಕವಿಗಳಿದ್ದಾರೆ ನನ್ನನ್ನೇಕೆ ಈ ಪರಿ ಇಚ್ಛಿಸುತ್ತಿ ಹುಡುಗಿ, ಈ ವಾಸ್ತವ ಜೀವನದಲ್ಲಿ ನಿನ್ನ ನನ್ನ ಸಂಬಂಧ ಪ್ರೀತಿ, ಪ್ರೇಮ ಎಂತಲೋ, ವಿವಾಹಿತವಾದ ನನಗೆ ಅನೈತಿಕ ಎಂತಲೋ ಜನ ಕರೆಯಬಹುದು ಆದರೆ, ಈ ಪತ್ರದ ನಂತರ ನೀ ನಿರಂತರವಾಗಿ ನನ್ನ ಮನದೊಂದಿಗೆ ಬೆಸೆದು ಕೊಂಡಿರುತ್ತಿ. ನನ್ನೊಂದಿಗೆ ನಾನಿಲ್ಲದಾಗ ಮಾತ್ರ ನೀ ದೂರವಾಗುತ್ತಿ ಅಮ್ಮು, ಜಗತ್ತು ಹೀಗೆ ಅರ್ಥೈಸಿದರೂ ಸರಿಯೆ ನಾ ನಿನ್ನ ’ಪ್ರೀತಿಸ್ತೀನಿ’ ಸಾಯುವಷ್ಟು ಪ್ರೀತಿಸ್ತೀನಿ, ನನ್ನ ಪ್ರೀತಿಯ ಸೆಳೆವ ತಾಳುವ ಶ್ರದ್ಧೆ ನಿನಗುಂಟೆ ?
ಬೇಗ ಹೇಳು, ನಿನ್ನ
ಫಯಾಜ್.
ಆಚೆ ನೀನು ಈಚೆ ನಾನು
ನಡುವೆ ಹೊಳೆಯು ಹರಿದಿದೆ
ಅಚ್ಚು ಮೆಚ್ಚಿನಾತನೊಲುಮೆ
ನನ್ನ ನಾಚೆ ಕರೆದಿದೆ………………………
ಧನ್ಯಳಾದೆ ಕವಿಗಳೆ, ಖಂಡಿತ ಪೂಜೆ ಎಂಬಂತೆ ಪ್ರೀತಿಸುವೆ, ನನ್ನ ಆಕಾಂಕ್ಷೆಗಳಿಗೂ ನಿಮ್ಮ ಭಾವನೆಳಿಗಿರುವಷ್ಟು ತಾಪವಿದೆ, ನೋಡದೆ, ಮೈ ಸೋಕದೆಯೂ ಒಂದು ಶುದ್ಧ ಪ್ರೇಮವನ್ನು ಈ ಫಾರ್ವರ್ಡ್ ಯುಗದಲ್ಲೂ ಮಾಡಬಹುದು ಅನ್ನೋದನ್ನ ಜಗಕ್ಕಲ್ಲದಿದ್ದರೂ ನಮಗೆ ನಾವು ತಿಳಿಸೋಣ, ನಿಮಗಿರುವ ಆ ಥರದ ಅಂಥದ್ದೇ ತೀವ್ರತೆ ಸಂವೇದನೆಗಳು ಆ ವೇದನೆಗಿರುವ ಮತ್ತು ತಾಕತನ್ನು ಬಲಪಡಿಸೋಣ. ಭಾವನೆ ಸಾಯುವ ತನಕ ಪ್ರೀತಿಸುವ ನನಗೇನೂ ಬೇಡ ಅಮ್ಮ ಕಲ್ಪನೆಯ ರಾಜ್ಯ ಬಿಟ್ಟು ವಾಸ್ತವ ನಿಮ್ಮಾಕೆಗೆ, ಕಲ್ಪನೆ ಅಮೃತ, ಅದಕ್ಕೆ ಅದು ಕೇವಲ ನನ್ನದೇ !
ನಿಮ್ಮ
ಅಮೃತ.
ವಿಳಾಸ;-
ಸಂತೆಬೆನ್ನೂರು ಫೈಜ್ನಟ್ರಾಜ್
ಸಂತೆಬೆನ್ನೂರು (ಅಂಚೆ)ಚನ್ನಗಿರಿ (ತಾ)
ದಾವಣಗೆರೆ (ಜಿ) ೫೭೭೫೫೨
ದೂ;- ೯೯೦೨೯೩೫೯೯೯
ಈಮೇಲ್;-faiznatraj@gmail.com
Channagide sir………………..