ಅಮರ್ ದೀಪ್ ಅಂಕಣ

ಒಲವೇ ಬಾಡಿಗೆ ಮನೆಯ ಲೆಕ್ಕಾಚಾರ:ಅಮರದೀಪ್ ಅಂಕಣ

ಹೊರಗೆ ಜೋರು ಮಳೆ.  ಮನೆ ತುಂಬಾ ತಟಕ್ ತಟಕ್ ಎಂದು ಸೋರಿದ ಮಳೆ ಹನಿಗಳು ಹೊರಡಿಸುವ ಪ್ಯಾಥೋ ಸಾಂಗಿನ ತುಣುಕು ಸಂಗೀತ.  ಮನೆ ಮಾಳಿಗೆಯ  ಹೊಗೆ ಗೂಡಿನ ಬಾಯಿಗೆ ತಗಡು ಮುಚ್ಚುವುದನ್ನು ಮರೆತಿದ್ದಳು ಮುದುಕಿ.  ಫಕ್ಕನೇ ನೋಡಿ ಮೊಮ್ಮಗನಿಗೆ ಹೇಳಿದಳು.  ಹುಡುಗ ಹತ್ತಲೋ ಬೇಡವೋ ಎಂಬಂತೆ ನೋಡಿದ; ಹಣ್ಣಣ್ಣು  ಮುದುಕಿ ತನ್ನ ಅಳಿದುಳಿದ ಹಲ್ಲುಗಳನ್ನು ಜೋಪಾನ ಮಾಡಿಟ್ಟು ಕೊಂಡು ದಿನ ದೂಡುವಂತೆ ಗೋಚರಿಸುತ್ತಿದ್ದ ಏಣಿಯ ಪರಿಸ್ಥಿತಿ.   ಹಂಗೂ ಹಿಂಗೂ ಸವ್ಕಾಶಿ ಹತ್ತಿ ಮಾಳಿಗೆ ನೋಡಿದರೆ ಏನಿತ್ತು?  ಮಾಳಿಗೆ ಕೆಸರು ಗದ್ದೆಯಂತಾಗಿತ್ತು. ಹೆಜ್ಜೆ ಇಟ್ಟರೆ ಮಣ್ಣಿನ ಮಾಳಿಗೆ ಎಲ್ಲಿ ಯಾವಾಗ ಕುಸಿಯುತ್ತೋ ಏನ್ ಕಥೆಯೋ. ಪುಣ್ಯಕ್ಕೆ ಇದ್ದ  ಕುಂಬಿಗುಂಟ ನಡೆದು ಹೊಗೆ ಗೂಡಿನ ಬಾಯಿಗೆ ತಗಡು ಮುಚ್ಚಿ ಬಂದದ್ದಾಯಿತು. 
  
ಹಳೆಯ ಟ್ರಂಕುಗಳು, ಅದರೊಳಗಿನ ಇದ್ದ ಬಟ್ಟೆಗಳು ವರ್ಷಗಳಿಂದ ಸುರಿದ, ಸೋರಿದ ಮಳೆ ಹನಿಗಳಿಗೆ ತೊಯ್ದು ಮುಗ್ಗು ವಾಸನೆ ಬರುತ್ತಿದ್ದರೂ ಟ್ರಂಕಿನ ಒಳಗೆ  ನಾಲ್ಕು ಮೂಲೆಗೊಂದರಂತೆ ಡಾಂಬರ್ ಗುಳಿಗೆ ( ನೆಫ್ತಲಿನ್ ಬಾಲ್ಸ್ ) ಇಟ್ಟು ವಾಸನೆಯನ್ನು ಕತ್ತು ಹಿಡಿದು ಆಚೆಗೆ ಎಸೆಯುತ್ತಿದ್ದಳು ಮುದುಕಿ; ಅದೂ  ತಾತ್ಕಾಲಿಕವೇ.  ಮುದುಕಿಯ ಮಗ ಎಂದೋ ಧರ್ಮಸ್ಥಳಕ್ಕೆ ಹೋದಾಗ ಚೆಂದ ಕಂಡು, ತಂದಿದ್ದ   ಲಾಟೀನೊಂದನ್ನು  ಹಚ್ಚಿ ಮನೆ ತುಂಬಾ ಯಾವ ಸಾಮಾನು ತೊಯ್ದಿವೆ ಎಂದು ತನ್ನ ಎಪ್ಪತ್ತಾದರೂ ಮಾಸದ ದೃಷ್ಟಿಯ ಚೂಪುಗಣ್ಣಿನಿಂದ ನೋಡಿತು ಮುದುಕಿ.   ಏನಿದ್ದವು ಸಾಮಾನು? ಮಗ ಹುಟ್ಟಿದ ಆರು ತಿಂಗಳಿಗೆ ಹಾಸಿ ಹೊದ್ದು ಮಲಗುವಷ್ಟು ಬಡತನವಿದ್ದ  ಮನೆಯಲ್ಲೇ ಪಾತ್ರೆ ಸ್ಟವ್, ಸೀರೆ, ಮುರುಕು ಕುರ್ಚಿ ಒಂದನ್ನೂ ಬಿಡದೇ ಹೊತ್ಯೊದಿದ್ದರು ಕಳ್ಳರು.
 
ಪುನಃ ಮಗ ಬೆಳೆದು ಇದ್ದುದರಲ್ಲೇ ಅವತ್ತಿನದವತ್ತಿಗೆ ದುಡಿದು ತಂದು ತಿಂದು ಮಲಗುವಷ್ಟು ಬದಲಾದ ದಿನಗಳೇ ಅಲ್ಲವೇ ಮುದುಕಿಯನ್ನು ಜೀವಂತವಾಗಿಟ್ಟಿದ್ದು. ಇನ್ನೇನು? ಮಗನಿಗೆ  ಹೆಣ್ಣು ನೋಡಿ ಮದುವೆ ಮಾಡಿ ಮೊಮ್ಮಕ್ಕಳನ್ನೂ ಕಂಡದ್ದೂ ಆಯಿತು. ಆದರೂ ಅಜ್ಜಿಗೆ  ಈ ಮನೆ…. ತನ್ನದಲ್ಲ.  ಇದರಂತೆ ಅದೆಷ್ಟಾದವು ಮನೆಗಳು; ಬದಲಿ ಮಾಡಿ.  ಅದಲ್ಲ ಪ್ರಶ್ನೆ.  ಇನ್ನು ಅದೆಷ್ಟು ವರ್ಷ ಮನೆಗಳನ್ನು ಬದಲಿ ಮಾಡಬೇಕು? ಗೊತ್ತಿಲ್ಲ.   ಬದುಕು ಹಣ್ಣಾಗಬಹುದು.  ಬಾಡಿಗೆ ಮನೆ ಮತ್ತು ಬಾಡಿಗೆ ಮೊತ್ತ ನಳಿಸುತ್ತಲೇ ಇರುತ್ತವೆ.   ಇದು ಬಾಡಿಗೆ ಮನೆ ಬದುಕು.   ಅಂಥ ಮನೆಗೂ ಮುದುಕಿ ಇರುವಂಥ ಸ್ಥಿತಿಯ ಜನರಿಗೆ ಕಾದು ಹಿಡಿಯುವಷ್ಟು ಬಾಡಿಗೆಗೆ ಕ್ಯೂ  ಬಾಡಿಗೆ ಎಷ್ಟು ಅಂತೀರಾ? ಜಸ್ಟ್ ಐದು ಹತ್ತು …..   ಸಾವಿರವಲ್ಲ ಕೇವಲ ರೂಪಾಯಿಗಳು. 
 
ಈ ಕಥೆ ಕೇಳುವಾಗ ನನಗಿನ್ನೂ ಚಿಕ್ಕ ವಯಸ್ಸು. ಅಪರೂಪಕ್ಕೆ ಅಥವಾ ದಸರಾ ರಜೆಗೋ ಬೇಸಿಗೆ ರಜೆಗೋ  ಊರಿಗೆ  ಹೋದಾಗ ಅಜ್ಜಿ ಇಂಥವೇ ಪ್ರಸಂಗಗಳನ್ನು ಹೇಳುತ್ತಿದ್ದಳು.  ಹೊಲದಿಂದ ಕೂಲಿ ಕೆಲಸ ಮಾಡಿ  ಸಂಜೆ ಆರುವರೆಗೋ ಏಳಕ್ಕೋ ಬಂದರೆ ಆಕೆಗಿದ್ದ ಎಪ್ಪತ್ತರ ವಯಸ್ಸು ಆಕೆಯ ಉಸಿರಿನಲ್ಲೂ ಕಾಣುತ್ತಿದ್ದಿಲ್ಲ. ಅದೊಮ್ಮೆ ಧಾರಾಕಾರ ಸುರಿದ ಮಳೆಗೆ ಬಾಡಿಗೆಗಿದ್ದ ಮನೆಯ ಒಂದು ಭಾಗದ ಗೋಡೆ ಕುಸಿದರೆ ಆ ಭಾಗಕ್ಕೆ  ಕೇವಲ ಎರಡು ಮೂಲೆಗೆ ಚಾದರ ಕಟ್ಟಿ ನೇತಾಕಿ  ಸುಖ ನಿದ್ರೆ ಮಾಡಿದ್ದಿದೆ.  ಅದೇ ದಿನ ಹಗಲು ಮನೆಯ ಸಾಮಾನುಗಳು ಸಾಲಾಗಿ ರಸ್ತೆಯ ಮೇಲೆ ಎದೆ ಮಟ್ಟದ ಹರಿದ ಮಳೆ ನೀರಲ್ಲಿ ತೇಲುತ್ತಿದ್ದರೆ ಜನ ಹೊಳೆ ಯಲ್ಲಿ ಈಜಿದಷ್ಟೇ ಸುಖಪಟ್ಟು ಸಾಮಾನುಗಳನ್ನು ತಂದು ಶೇಖರಿಸಿಕೊಳ್ಳುತ್ತಿದ್ದರು.  ಅವತ್ತಿನದವತ್ತಿಗೆ ದುಡಿದು ಬರುವ ದಾರಿಯಲ್ಲೇ ಅಕ್ಕಿ, ಬೇಳೆ, ಎಣ್ಣೆ, ತರಕಾರಿ, ತಂದು ಅಡುಗೆ ಮಾಡಿಕೊಂಡು ಉಂಡು "ನಾಳೀದ್ ನಾಳೆ ನೋಡ್ಕ್ಯಂದ್ರಾತು ಮಕ್ಕಳ್ರಿ" ಅಂದರೆ ಮುಗಿಯಿತು.    ಇಷ್ಟಾದರೂ ಜನ ಅದೆಷ್ಟು ನೆಮ್ಮದಿ ಯಾಗಿರುತ್ತಿದ್ದರು ಅಲ್ಲವಾ? 
 
ಆಗಿನ ಜನರೂ ಹಂಗೆ ಇದ್ದರು.  ಬಾಡಿಗೆ ನೀಡಿದಾತ ಓನರ್ ಅಲ್ಲ.  ಬಾಡಿಗೆಗೆ ಇದ್ದವನು ಟೆನೆಂಟ್ ಅಲ್ಲ. ಅಲ್ಲೆಲ್ಲಾ ಅವ್ವಾ, ಯಜ್ಜ, ಸಣ್ಣವ್ವ , ಸಣಪ್ಪ,  ಚಿಗವ್ವ, ಅಕ್ಕ, ಮಾವ, ಬೀಗ ಹೀಗೆ ನಂಟಲ್ಲದ ನಂಟುಗಳೇ ಬೆಸೆದಿರುತ್ತಿದ್ದವು.  ತಿಂಗಳ ಕೊನೆಗೆ ಬಾಡಿಗೆ ನೀಡುವುದು ನಾಲ್ಕಲ್ಲ ಹದಿನೈದು ಇಪ್ಪತ್ತು ದಿನ, ಒಮ್ಮೊಮ್ಮೆ ತಿಂಗಳು ದಾಟಿದರೂ "ಈ ತಿಂಗಳು ಅವ್ರಿಗೆ ತ್ರಾಸಾಗೇತಿ, ಒಂದ್ನಾಲ್ಕ್ ದಿನ ಬಿಟ್ಟು ಕೊಡ್ಲಿ ಬಿಡು" ಅನ್ನುವಂಥ ಔದಾರ್ಯದವರಿದ್ದರು.  ನಿಜಕ್ಕೂ ನಾನು ಕಂಡಂತೆ ನಮ್ಮಪ್ಪ ಅಮ್ಮ, ಅಜ್ಜಿ ಇದ್ದು ಬದುಕಿದ ಬಾಡಿಗೆ ಮನೆಗಳ ಜೀವನದಲ್ಲಿ ಬಹಳಷ್ಟು ಮಂದಿ ಈ ತರಹ ಇದ್ದರು.  ಇಲ್ಲವಾದರೆ ನಮ್ಮಂಥವರು ಅರವೆತ್ತೆಪ್ಪತ್ತು ವರ್ಷಗಳ ಕಾಲ ಕೇವಲ ಬಾಡಿಗೆ ಮನೆಯಲ್ಲೇ ಜೀವನ ಮಾಡುವುದು ಸಾಧ್ಯದ ಮಾತಲ್ಲ. ಹಂಗಂತ ಟೋಪಿ ಗಿರಾಕಿ ಗಳು ಇದ್ದಿಲ್ಲ ಮತ್ತು ಇರುವುದಿಲ್ಲವೆಂಬುದು ನನ್ನ ಅಭಿಪ್ರಾಯವಲ್ಲ.  ಎಲ್ಲಾ ಕಾಲದಲ್ಲೂ ಎಡವಟ್ಟುಗಳು ಎಲ್ಲರಿಗೂ ಒಂದಲ್ಲ ಒಂದು ರೀತಿ ಎದುರಾಗಿರುತ್ತವೆ.  ಇಲ್ಲಿ ಪ್ರಾಮಾಣಿಕತೆಯಿಂದ ಬದುಕಿದ, ಬದುಕುವ ಕೆಲ, ಕೆಳ ಮಧ್ಯಮ ವರ್ಗದ ಕುಟುಂಬಗಳಿಗೆ ಆಗಿರಬಹುದಾದ, ಆಗಿರುವ, ಮತ್ತು ಆಗುತ್ತಿರುವ ಸಣ್ಣ ಘಟನೆಗಳನ್ನು ಮಾತ್ರವೇ ನಾನು ಹೇಳುತ್ತಿರುವುದು.   
 
ಎಷ್ಟೋ ಸಲ ನಾನು ಅಜ್ಜಿ ಮತ್ತು ಅಪ್ಪನನ್ನು ಈ ಸ್ವಂತ ಮನೆ ಇಲ್ಲದ ಬಗ್ಗೆ ಕೇಳಿದ್ದಿದೆ.  ಆಗೆಲ್ಲ ಅಜ್ಜಿ, ಅಪ್ಪ ಉಟ್ಟು ಬಟ್ಟಿ ಮೇಲೆ ಊರು, ಮನೆ ನೆಂಟಸ್ತಿಕೆ, ಬರಬಹುದಾಗಿದ್ದ ಆಸ್ತಿ ಪಾಲು ಎಲ್ಲಾ  ಬಿಟ್ಟು ಬಂದ ಅಜ್ಜನ ಅಮಾಯಕತೆಯನ್ನು ಹೇಳಿ ಸಮಾಧಾನಿಸುತ್ತಿದ್ದರು.  ನಾನು  ದುಡಿದು ಖರ್ಚುಗಳ ಮುಖ ನೋಡುವ ವರೆಗೂ  ಅಜ್ಜಿ, ಅಪ್ಪ ಅವ್ವನ  ದುರ್ಬರ ದಿನಗಳನ್ನು ಕಳೆದದ್ದನ್ನು ಪೂರ್ತಿಯಾಗಿ ದಕ್ಕಿಸಿಕೊಂಡಿರಲಿಲ್ಲ.  ಆದರೆ, ಕಷ್ಟ? ಸ್ವಲ್ಪ ಮಟ್ಟಿಗೆ ಮೈಗಂಟಿತ್ತು.   ಅಪ್ಪ ತೀರಿದ ಮರುವಾರವೇ ಮನೆ ಖಾಲಿ ಮಾಡಬೇಕಿತ್ತು. ಅಪ್ಪನಿಗಿದ್ದ ಸಾಲ, ಬಾಡಿಗೆ, ಬಾಕಿ ಅಂಗಡಿ ಬಾಕಿ ಏನಾದರೂ ಇದ್ದರೆ ಕೊಟ್ಟರಾಯಿತೆಂದು ಮೊದಲು ಮನೆ ಮಾಲಿಕರ ಸಂಭಂದಿಕರ ಬಾಗಿಲಿಗೆ ಹೋಗಿ ನಿಂತೆ.  ಅವರು ಜಾತಿಯಿಂದ ಮುಸ್ಲಿಂ.  ಅದುವರೆಗೂ ನನ್ನ ಮುಖ ನೋಡಿರದ ಅವರಿಗೆ ಪರಿಚಯ ಹೇಳಿಕೊಂಡು ಬಾಕಿ ಇದ್ದ ನಮ್ಮ ಮನೆ ಬಾಡಿಗೆ ದುಡ್ಡು ಎಷ್ಟೆಂದು ಕೇಳಿದೆ.  "ನಿಮಗೆಷ್ಟು ಅನುಕೂಲವಿದೆಯೋ ಅಷ್ಟು ಕೊಟ್ಟರಾಯ್ತು"ಅಂದ.  ಏಕೆಂದರೆ ವರ್ಷಗಳ ಕಾಲ ಮನೆ ಬಾಡಿಗೆಯನ್ನೇ ಕಟ್ಟಿದ್ದಿಲ್ಲ, ಅಪ್ಪ.  ಬಾಡಿಗೆಯಾದರೂ ಎಷ್ಟು? ಕೇವಲ ಎಪ್ಪತ್ತೋ ಎಂಬತ್ತೋ ರುಪಾಯಿ; ತಿಂಗಳಿಗೆ.   ಅಷ್ಟನ್ನು ಸಹ  ಒಟ್ಟಿಗೆ ಅವರ ಕೈಗಿಟ್ಟು ಇಷ್ಟು ವರ್ಷ ಬಾಡಿಗೆ ಕಟ್ಟದಿದ್ದರೂ ಸುಧಾರಿಸಿಕೊಂಡಿ ದ್ದಕ್ಕೆ ಕೈ ಮುಗಿಯುತ್ತಿದ್ದರೆ ಆ ಮನುಷ್ಯ ಒಂದು ಮಾತು ಹೇಳಿದ;  "ಮಕ್ಕಳು ನಿನ್ನಂಗಿರಬೇಕು ನೋಡು ಬೇಟಾ". 
 
ನಾನು ಅಪ್ಪ ತೀರಿದ ನಂತರ ಹದಿನೈದು ವರ್ಷಗಳಲ್ಲಿ ಎರಡು ವರ್ಗಾವಣೆ ಸಮೇತ ಒಟ್ಟು ಏಳು ಬಾಡಿಗೆ  ಮನೆ ಬದಲಿ ಮಾಡಿದ್ದೇನೆ.  ನನಗೂ ಐದು ಜನ ಮನೆ ಮಾಲೀಕರು ತುಂಬಾ ಒಳ್ಳೆಯವರೇ ಸಿಕ್ಕಿದ್ದಾರೆ. ಒಂದಿಬ್ಬರು ಮಾತ್ರ ಅಡ್ನಾಡಿ ಬುದ್ಧಿ ತೋರಿಸಿದರು ಅಷ್ಟೇ. ಅದು ಬಿಜಾಪುರದಲ್ಲೊಬ್ಬರು ಮೇಷ್ಟ್ರು.  ಆ ಮನುಷ್ಯ ಹೈಸ್ಕೂಲ್ ನಲ್ಲಿ ಸೈನ್ಸ್ ಟೀಚರ್.  ಬುದ್ಧಿ ಮಾತ್ರ ಮಳೆ ಬಂದು ರಾಡಿಯಲ್ಲಿ  ತಿಪ್ಪೆಯಾದ್ರೂ ಸರಿ, ಒಣ ನೆಲದಲ್ಲಿ ಏನಾದ್ರೂ ಬಿದ್ದಿದ್ರು ಸರಿ, ಕೋಳಿ ಕೆದರುತ್ತಲ್ಲಾ? ಅದರ ಕಾಲಿನಂಥ ಗುಣ. ಪಾಪ, ಕೋಳಿ ಯಾದ್ರೂ ತನ್ನ ಹೊಟ್ಟೆಗೆ ತಿನ್ನೋಕೆ ಕೆದರುತ್ತೆ,  ಈ ಮನುಷ್ಯ ಹಂಗಲ್ಲ  ಜೊತೆಗೆ ಕೆಲಸ ಮಾಡುವ ಇನ್ನೊಬ್ಬ ಮೇಷ್ಟ್ರು ತನ್ನೊಟ್ಟಿಗೆ ಅಕ್ಕಪಕ್ಕವೇ ಒಂದೇ ಬಾರಿಗೆ ಸೈಟು ತಗೊಂಡು, ಮನೆ ಕಟ್ಟಿಸಿ, ವಾಸ ಮಾಡುವಂತಾ ದರೂ ಆ ಪಕ್ಕದ ಮೇಷ್ಟ್ರು, ಅವರ ಕುಟುಂಬದೊಂದಿಗೆ, ಇನ್ಯಾರೊಂದಿಗೂ ವಿಶಾಲ ಗುಣದಿಂದ ಇರೋದು ಬಾಡಿಗೆಗಿದ್ದ ನಾವು  ಕಂಡಿದ್ದಿಲ್ಲ. ಬದಲಿಗೆ ತನ್ನ ಮನೆ ಕಟ್ಟುವ ಕೆಲ ಖರ್ಚುಗಳನ್ನು ಪಕ್ಕ ಮೇಷ್ಟ್ರು ಮನೆಯ  ಲೆಕ್ಕಕ್ಕೆ ಸೇರಿಸಿ ಕಿತ್ಗಂಡಿದ್ದ.  ಸಾಮಾಜಿಕ ಸೌಹಾರ್ದತೆ ಇಲ್ಲದೇ  ಸಣ್ಣದಕ್ಕೆ ಮುಖ ಗಂಟಿಕ್ಕಿಕೊಳ್ಳುವುದು, ಬೇಬಿ ಸಿಟ್ಟಿಂಗ್ ನಲ್ಲಿ ಆಡುವ ಮಕ್ಕಳಂತೆ "ನಿನ್ ಚಾಳಿ ಟೂ" ಅನ್ನುವಂಥ ಗುಣ.  ಅಂಥವನಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ನೀಡಲಾಗಿತ್ತೋ ಅಥವಾ ಆ ಮೇಷ್ಟ್ರು ಕೊಂಡುಕೊಂಡಿದ್ದನೋ, ಬಿಡಿ. 
 
ಇದ್ದಕ್ಕಿದ್ದಂತೆ ಒಂದಿನ ಬಂದು "ಈ ತಿಂಗ್ಳ  ಕೊನೆಗೆ ಮನೆ ಖಾಲಿ ಮಾಡ್ಬೇಕ್" ಅಂದ.  ಅದೇನಾಗಿತ್ತೆಂದರೆ ಈತನ ಒಂದೆರಡು ಸಣ್ಣತನದ   ಉದಾಹರಣೆಗಳನ್ನು ಅಕ್ಕಪಕ್ಕದವರಿಗೂ ತಿಳಿವ ಹಾಗೆ ಎದುರೆದುರೇ ಮಾತಾಡಿದ್ದೆ.   "ಅವರೆಲ್ಲರೆದುರಿಗೆ ತನ್ನ ಸಣ್ಣತನ ಗೊತ್ತಾಯ್ತಲ್ಲ" ಎನ್ನುವುದು ಸೇರಿದಂತೆ, ಪಕ್ಕದ ಮನೆಯ ಮೇಷ್ಟ್ರು, ಅವರ  ಹೆಂಡತಿ, ಮಕ್ಕಳು  ನನ್ನ ಮಕ್ಕಳನ್ನು ಬಹಳ ಇಷ್ಟಪಡುತ್ತಿದ್ದರು.  ನನ್ನ ಕುಟುಂಬದೊಂದಿಗೆ   ಅಕ್ಕೋರೇ, ಅಮ್ಮೋರ, ಅಣ್ಣೋರ, ಎನ್ನುವಂತೆ ಅವರ ಸಲುಗೆ ಏರ್ಪಟ್ಟಿತ್ತು.  ಅದನ್ನು ಸಹಿಸದ ಈ ರಾಜ್ಯ ಪ್ರಶಸ್ತಿ ವಿಜೇತ "ಶಿಕ್ಷ" ಕ  ಈ ರೀತಿ ಹೇಳಿದ್ದ.  ಮತ್ತೊಂದು ಮನೆ ಆ ಸಮಯಕ್ಕೆ ಬಾಡಿಗೆಗೆ ಸಿಗದೇ ಅವ್ವ, ಹೆಂಡತಿ, ಮಕ್ಕಳನ್ನು ನಾನು ಊರಿಗೆ ಕಳುಹಿಸಿ ಮನೆ ಸಿಗುವವರೆಗೆ ನನ್ನ ಮೇಲಾಧಿಕಾರಿಯ ಖಾಲಿಯಿದ್ದ ರೂಮೊಂದರಲ್ಲಿ ಸಾಮಾನು ಜೋಡಿಸಿಟ್ಟು, ಮನೆ ಸಿಕ್ಕ  ನಂತರ ಎಲ್ಲರನ್ನೂ ಕರೆತಂದಿದ್ದೆ. ಇನ್ನೊಬ್ಬ ಮೇಷ್ಟ್ರು ನಾಲ್ಕು ಮನೆ ಕಟ್ಟಿ ಬಾಡಿಗೆ ನೀಡಿ ವರ್ಷಗಳಿಂದಲೂ ಆಲ್ಲೇ ಇದ್ದ ಎದುರು ಮನೆಯ ಮಗಳ ವಯಸ್ಸಿನ ಹುಡುಗಿ ಬೆಳಿಗ್ಗೆ ಎದ್ದು ಬಗ್ಗಿ ಅಂಗಳದ ಕಸ ಗುಡಿಸುವಾಗ "ನಿನ್ ಸೊಂಟ ಇಷ್ಟು ದಪ್ಪಿದ್ರ ಬಗ್ಗಿ ಏನ್ ಕೆಲ್ಸ ಮಾಡ್ತಿ?" ಅಂತೇಳಿ ಬೆಳ್ ಬೆಳಿಗ್ಗೆ ಮಕ್ಕೆ ಮಂಗಳಾರತಿ ಎತ್ತಿಸಿಕೊಂಡಿದ್ದ.      
 
ಬಾಡಿಗೆ ಮನೆಗಳ ಒಂದು ಅನುಕೂಲವೆಂದರೆ, ಇದ್ದ ಅದೇ ಸ್ವಂತ ಮನೆಯಲ್ಲೇ ಇರುವುದರ ಬದಲು ನಾಲ್ಕು ಊರು ನಾಲ್ಕು ಜನ, ಒಂದಷ್ಟು ಪಾಠಗಳನ್ನು ಕಲಿಯಬಹುದು ಅನ್ನುವುದು ನಿಜವಾದರೂ ಬಾಡಿಗೆ ಮನೆಯ ಜೀವನ  ನಿಜಕ್ಕೂ  ಬೇಜಾರು. ಜಾಸ್ತಿ ಸಾಮಾನುಗಳನ್ನು ಖರೀದಿಸುವಂತಿಲ್ಲ, ಮನೆಯಿಂದ ಮನೆಗೆ, ಊರಿಂದ ಊರಿಗೆ ಲಾರಿಗೆ ಏರಿಸಿ ಇಳಿಸುವುದರಲ್ಲೇ ಮುಕ್ಕಾಗಿಬಿಡುತ್ತವೆ.  ಅದೆಲ್ಲಕ್ಕಿಂತ ಹೆಚ್ಚಾಗಿ ತಮ್ಮಿಷ್ಟ ದಂತೆ ಬಾಡಿಗೆ ಎತ್ತರಿಸುವ ಮಾಲಕರು ತಮ್ಮ ಮುಲಾಜಿನಲ್ಲೇ ಮುಕ್ಕಾಲು ಪಾಲು ನಾವು ಜೀವಿಸಬೇಕೆನ್ನು ವವರಿದ್ದಾರೆ.   ಬಾಡಿಗೆ ಮನೆಯಲ್ಲಿರುವವರು ಬೇವರ್ಸಿಗಳು, ನಮ್ಮನೆ ಬಿಟ್ರೆ ಗತಿಯಿಲ್ಲ ಇವಕ್ಕೆ. ಒಂದ್ ವೇಳೆ ಮನೆ ಖಾಲಿ ಮಾಡಿದ್ರು ಕೊಟ್ಟಿರೋ ಅಡ್ವಾನ್ಸ್ ನಲ್ಲಿ ಜಿಗಿಟು ಮಾಡಿ ದುಡ್ಡು ಮುರಿಯುವ, ಅಥವಾ ಮನೆ ಖಾಲಿ  ಮಾಡಿಸ್ಲೇಬೇಕು ಅನ್ನುವ ದುರ್ಬುದ್ಧಿಯಲ್ಲಿ  ಇಲ್ಲಸಲ್ಲದ ಆರೋಪಗಳನ್ನು ಹೊರಿಸುವ ಮಂದಿಯೂ   ನಮ್ಮ ನಡುವೆ ಇದ್ದಾರೆ. ಇದೇ ಬೇಸರಕ್ಕೇ  ಸಾಲ ಮಾಡಿಯಾದರೂ ಒಂದು ಚಿಕ್ಕ ಮನೆ ಕಟ್ಟಿಕೊಂಡು ಇರುವುದು ವಾಸಿ ಅನ್ನಿಸುವುದು.   ಬಾಡಿಗೆ ಮನೆಗಳ ಭಾನಗಡಿಗಳು, ಜಗಳಗಳು, ತಮಾಷೆಗಳು, ಸಣ್ಣತನಗಳ ಬಗ್ಗೆ ಬರೆಯುತ್ತಾ ಹೋದರೆ ನಾಗತಿಹಳ್ಳಿ ಚಂದ್ರಶೇಖರ ಅವರ "ವಠಾರ"ದ ಸಾವಿರ ಕಂತುಗಳಂತೆ ಮುಂದುವರೆಯುತ್ತೆ. 
 
"ನನ್ನ ಮನೆ ಹಂಗಿನ ಅರಮನೆಯಲ್ಲ.. ಹೊಂಗೆ ಮರದಡಿಯ ಹುಲ್ಲು ಗುಡಿಸಲೇ ನನ್ನ ಗೆಳತಿ ……. "
ಹಾಡು ಕೇಳುತ್ತಿದ್ದೆ.   ಅರಮನೆಯಂತಿರದ, ನೆರೆಮನೆಯೂ ಆಗದ ಮತ್ತು ಸ್ವಂತ ನೆಲೆಯೂ ಅಲ್ಲದ ಈ ಬಾಡಿಗೆ ಮನೆ ಬವಣೆ, ಹಂಗು ತೆವಳುತ್ತಾ ಕಾಲಿಗೆ ತೊಡರಿತು;  ಘಾಟು ಹತ್ತಿದವನಂತೆ ಕಾರಿಕೊಂಡೆ, ಅಷ್ಟೇ.

ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ಒಲವೇ ಬಾಡಿಗೆ ಮನೆಯ ಲೆಕ್ಕಾಚಾರ:ಅಮರದೀಪ್ ಅಂಕಣ

  1. ಅಮರ್, ಬರಹ ಚೆನ್ನಾಗಿದೆ! ನೀವು ಹೇಳಿದಂತೆ ಎಲ್ಲಾ ಮನೆಯ ಮಾಲೀಕರೂ ಅಡ್ನ್ಯಾಡಿಗಳಿರುವುದಿಲ್ಲ, ಹಾಗೆಯೇ ಎಲ್ಲಾ ಬಾಡಿಗೆದಾರರೂ ಒಳ್ಳೆಯವರಿರುವುದಿಲ್ಲ 🙂

    1. ಗೆಳೆಯ ಗುರುಪ್ರಸಾದ್,  ನಾನು ಹೇಳಿದ್ದು ಎಲ್ಲೋ ಕೆಲವೇ ಕೆಲವು ಮಂದಿ ಮಾಲೀಕರು ಸಂಕುಚಿತ ಮನೋಭಾವದವರು ಇರಬಹುದು,  ಅದೇ ರೀತಿ ಬಾಡಿಗೆಗೆ ಇರುವ ಕೆಲವು ಜನರೂ ಸಹ ಜಗಳಗಂಟರು ಆಗಿರುತ್ತಾರೆ. ಆ ಕೆಲವರಲ್ಲೇ  ನನ್ನ ಅನುಭವಕ್ಕೆ ಬಂದ ಒಂದಿಬ್ಬರು ಮನೆಯ ಮಾಲೀಕರ ಸಂಕುಚಿತ ಮನೋಭಾವವಿರುವ ಬಗ್ಗೆ  ಕಂಡಿದ್ದನ್ನು ಮಾತ್ರ ಹೇಳಿದ್ದೇನೆ.ಉಳಿದಂತೆ ನನಗೆ ಸಿಕ್ಕಿರುವ ಮನೆಯ ಮಾಲೀಕರೂ ಚೆನ್ನಾಗಿದ್ದರು ಮತ್ತೆ ನಾನು ಅವರೊಂದಿಗೆ ಚೆನ್ನಾಗಿದ್ದೆನು. ಅಷ್ಟೇ.  ಎಲ್ಲರನ್ನೂ ತೆಗಳಲು ನನಗೆ ಅರ್ಹತೆಯೂ ಇಲ್ಲ.. ಅಲ್ಲವೇ ಗೆಳೆಯ…?

      1. ಅಮರ್ ಭಾಯ್, ಬಹುಶಃ ನನ್ನ ವಾಕ್ಯ ಅಪಾರ್ಥಕ್ಕೀಡುಮಾಡಿದೆಯೆನಿಸುತ್ತೆ. ನೀವು ಬರೆದದ್ದು ("ಒಂದಿಬ್ಬರು ಮಾತ್ರ ಅಡ್ನಾಡಿ ಬುದ್ಧಿ ತೋರಿಸಿದರು ಅಷ್ಟೇ") ಸರಿ ಇದೆ ಅನ್ನುವ ಅರ್ಥದಲ್ಲಿ ನಾನು ಹಾಗೆ ಹೇಳಿದ್ದು! ಆದರೆ ಅದು ವಿರುದ್ಧ ಅರ್ಥಕ್ಕೆ ಎಡೆ ಮಾಡಿಕೊಟ್ಟಿದೆ ಅಷ್ಟೆ.

  2.           ಅಧ್ಭುತ , ನನಗೂ ನನ್ನ ಹಳೆಯ ಮನೆಯ ಜಗಳಗಂಟಿ ಮನೆ ಮಾಲಕಿ ನೆನಪಾದಳು. ಬಾಡಿಗೆ ಕಟ್ಟುತ್ತಿದಿದ್ದು ಅಪ್ಪನಾದರೂ ದಿನವು ಸುಮಸುಮ್ನೆ ಬಯಸಿಕೊಳ್ಳುತಿದವನು ನಾನು . ಆದ್ರೆ ಮನೆಯ ಮಾಲಿಕ ಜಗಳಗಂಟರಲ್ಲ . ನಿಮ್ಮ ಇ ಸಾಲುಗಳು ನಾನನ್ನು ಬಹಳ ಕಾಡುತಿವೆ.. "ಬಾಡಿಗೆ ಮನೆಗಳ ಒಂದು ಅನುಕೂಲವೆಂದರೆ, ಇದ್ದ ಅದೇ ಸ್ವಂತ ಮನೆಯಲ್ಲೇ ಇರುವುದರ ಬದಲು ನಾಲ್ಕು ಊರು ನಾಲ್ಕು ಜನ, ಒಂದಷ್ಟು ಪಾಠಗಳನ್ನು ಕಲಿಯಬಹುದು"

  3. Enniddaru badige maneli owner este olliyavaragiddaru navu poorna nemmadi inda iralu sadyave illa.  Adarallu makklu mari iddrantu aste bidi.  Gode mele bari bardu, appi thappi horge susu madbardu.. albardu.. nagbardu… latagi barbardu.. Jorgi matadbardu.. mole hodibardu.. heege hattu halvu  karanagalu irathe.  Owner enu heltharo illavo.. navu mathra hedrukonde irbeku.. swantha maneli nam Istadange irakke agathaa..

Leave a Reply

Your email address will not be published. Required fields are marked *