ಸುಮ್ ಸುಮನಾ ಅಂಕಣ

ಒಲವಿನ ಶಾಪ:ಸುಮನ್ ದೇಸಾಯಿ ಅಂಕಣ


ಮೂರುಸಂಜಿ ಆರು ಘಂಟೆ ಆಗಿತ್ತು. ಮಾಗಿಯ ಕಾಲ ಇದ್ದದ್ದರಿಂದ ಲಗೂನ ಕತ್ತಲಿ ಆವರಿಸಲಿಕತ್ತಿತ್ತು. ಎಂಟು ದಿನದಿಂದ ಒಂದ ಸಮನಾ ಕಾಯ್ದ ಜ್ವರದಿಂದ ಮೈಯ್ಯಾಗ ನಿಶಕ್ತಿ, ಆಯಾಸ ತುಂಬಿದ್ವು. ಮಕ್ಕಳು ಇನ್ನು ಟ್ಯೂಶನ್ ನಿಂದ ಬಂದಿರಲಿಲ್ಲ. ಅವರು ಕೆಲಸದ ಮ್ಯಾಲೆ ಊರಿಗೆ ಹೋಗಿದ್ರು. ಏಕಾಂಗಿಯಾಗಿರೊದು ನಂಗ ಹೊಸದೆನಲ್ಲಾ. ಆದ್ರ ಯಾಕೊ ಇವತ್ತ ಈ ಏಕಾಂಗಿತನ ಅಸಹನೀಯ ಆಗಿತ್ತು. ಸಣ್ಣಾಗಿ ತಲಿಶೂಲಿ ಶುರುವಾಗಿತ್ತು. ಬಿಸಿ ಚಹಾ ಬೇಕನಿಸಿತ್ತು. ಎದ್ದು ಕೂತ್ರ ಕಡಕೊಂಡ ಬಿಳತೇನೊ ಅನ್ನೊ ಅಷ್ಟು ಆಯಾಸ. ಯಾರರ ಹತ್ರ ಇರಬೇಕಿತ್ತು ಅನಿಸ್ಲಿಕತ್ತಿತ್ತು. ಯಾಕೊ ಅನಾಥ ಭಾವನೆ ಮನಸ್ಸಿನೊಳಗ ಸುಳಿದಾಡಲಿಕತ್ತಿತ್ತು. ದೂರದ ಊರೊಳಗಿರೊ ಅಮ್ಮನ ನೆನಪಾಗಿ ಕಣ್ಣು ತುಂಬಿ ಬಂದು ಅಳಬೆಕನಿಸ್ಲಿಕತ್ತು. ಯಾಕೊ ನನಗ ಯಾರು ಇಲ್ಲಾ ಅನ್ನೊ ಭಾವನೆ ಮನಸ್ಸಿನೊಳಗ ಮೂಡಲಿಕತ್ತಿತ್ತು. ಅಮ್ಮಾ ದೂರದ ಊರೊಳಗಿದ್ದಾಳ. ಮಕ್ಕಳು ಸಣ್ಣವು. ಹೇಳಿಕೊಳ್ಳೊ ಅಂಥಾ ಆತ್ಮೀಯ ಗೆಳತಿಯರು ನಂಗ್ಯಾರಿಲ್ಲಾ. ಇನ್ನು ಅವರು,, ಅವರನ್ನ ನೆನಿಸಿಕೊಂಡ್ರ ಯಾವ ಭಾವನೆಗಳನ್ನ ಬರಿಸಿಕೊಳ್ಳಲಿ ಅಂತನ ಗೊತ್ತಾಗುದಿಲ್ಲಾ ನಂಗ. ನನ್ನ ಮ್ಯಾಲೆ ಅವರಿಗೆ ಪ್ರೀತಿನಾ ಇಲ್ಲಾ ಅಂತ ಸಿಟ್ಟು ಮಾಡ್ಕೊಳ್ಳಿಕ್ಕಾಗುದಿಲ್ಲಾ, ಯಾಕಂದ್ರ ಅವರ ಮನಸಿನ ತುಂಬ ನನ್ನ ಬಗ್ಗೆ ತುಂಬು ಪ್ರೀತಿ ತುಂಬಿಕೊಂಡದ ಅಂತ ನಂಗೊತ್ತದ. ಆದ್ರ ಅದನ್ನ ಅವರು ಎಂದು ಅಂದು ಆಡಿ ತೋರಿಸೆ ಇಲ್ಲಾ. ನನಗ ಯಾವದಕ್ಕು ಕಡಮಿ ಆಗಧಂಗ ನೋಡ್ಕೊಂಡಾರ. ಮದಿವಿಆದ ಹೊಸದಾಗೆ ನಂಗ ಇವರ ಈ ಸ್ವಭಾವದ ಬಗ್ಗೆ ಭಾಳ ನಿರಾಸೆ ಮತ್ತ ಬ್ಯಾಸರಾ ಆಗತಿತ್ತು. ಒಂದ ಸಲಾ ಹಿಂಗ ಆಗಿತ್ತು, ನನ್ನ ಕಾಲೇಜು ದಿನಗಳೊಳಗ ನನ್ನ ಗೇಳತಿಯರು  ನನ್ನ ಗುಂಗುರು ಮುಂಗುರುಳ ಬಗ್ಗೆ ಹೇಳ್ತಿದ್ರು ಏನಂದ್ರ " ಅವು ಗುತ್ತಾಗಿ ಮುಖದ ತುಂಬ ಹಾರ್ಯಾಡೊದರಿಂದನ ನಾನು ಭಾಳ ಛಂದ ಕಾಣಿಸ್ತಿನಿ ಅಂತ. ಆದ್ರ ಆವತ್ತ ಅವರು ನನ್ನ ನೋಡಿ " ಅದೇನ ಮಾರಿ ತುಂಬ ಕುದಲಾ ಹರಕೊಂಡಿ, ಛಂದಾಗಿ ಎಣ್ಣಿ ಹಚ್ಚಿ ಅವನ್ನ ಘಟ್ಯಾಗಿ ಕಟಗೊ ಅಂತ ಅಂದಿದ್ರು. ಅವತ್ತ ಮೊದಲನೆ ಸಲಾ ನನ್ನ ಚೆಲುವಿಕೆ ಬಗ್ಗೆ ನಂಗ ತಾತ್ಸಾರ ಮೂಡಿತ್ತು. ನಾ ಯಾವುದೆ ಸೀರಿ ಉಟಗೊಳ್ಳಿ, ಅಲಂಕಾರಾ ಮಾಡಕೊಳ್ಳಿ ಅಥವಾ ಎನರೆ ಛೊಲೊ ರುಚಿ ಅಡಗಿ  ಮಾಡಲಿ ಯಾವುದಕ್ಕುತೄಪ್ತಿಯಾಗೊ ಅಂತಾ ಮೆಚ್ಚುಗೆಯ ಮಾತು ಆವರಿಂದ ಬರತಿದ್ದೆಯಿಲ್ಲಾ. ಒಂದೊಂದ ಸಲಾ ತಾಳ್ಮೀ ಕಳಕೊಂಡು ಅವರ ಜೋಡಿ " ನಿಮಗ ನನ್ನ ಮ್ಯಾಲೆ ಪ್ರೀತಿನ ಇಲ್ಲಾ " ಅಂತ ಜಗಳಾಡಿದ್ದು ಅದ. ಆದ್ರ ಆವರು ಆವಾಗನು ಸ್ವಲ್ಪನು ಸಿಟ್ಟಾಗದ ಒಂದ ಸಮಚಿತ್ತದಿಂದ "  ಪ್ರೀತಿ ಯಾಕಿಲ್ಲಾ ರಗಡ ಅದ. ಅದನ್ನ ಡಂಗರಾ ಹೊಡದು ಹೇಳ್ಬೇಕೆನು? ನಂಗ ಹಂಗೆಲ್ಲ ಮಾತಿಲೆ ಹೇಳಿ ತೋರಸಲಿಕೆ ಬರುದಿಲ್ಲ ಅಂತ ಅಂದಿದ್ರು.  ಬರ ಬರತ ಗೊತ್ತಾಗಲಿಕತ್ತು ಅದು ಆವರ ಸ್ವಭಾವ, ಅವರು ಇರೊದ ಹಂಗ ಅಂತ ಯಾಕಂದ್ರ ಖುಷಿಯಾಗಲಿ, ದುಖಃ ಆಗಲಿ, ಯಾವದ ಭಾವನೆಗಳನ್ನ ವ್ಯಕ್ತ ಪಡಿಸದೆ ಒಂದ ಸಮಾ ನಿರ್ಲಿಪ್ತ ಆಗಿರೊದು ಅವರ ಹುಟ್ಟುಗುಣ ಆಗಿತ್ತು. ಆದ್ರ ಕೆಲವೊಂದು ಹೊತ್ತಿನ್ಯಾಗ ಮನಸ್ಸಿನೊಳಗಿನ ಪ್ರೀತಿಗೆ ಅಕ್ಷರಗಳ ರೂಪಾ ಕೊಟ್ಟು ಅಭಿವ್ಯಕ್ತ ಪಡಿಸಬೇಕಾಗ್ತದ. ಆದ್ರ ಇವತ್ತ ಇಂಥಾ ಹೊತ್ತಿನ್ಯಾಗ ಅವರ ಪ್ರೀತಿಯ ಮಾತು, ಸಾಂತ್ವನ ಆರೈಕಿ ಬೇಕನಿಸ್ತಿತ್ತು. ಏನೊ ಕೆಲಸದ ಮ್ಯಾಲೆ ಮೂರು ದಿನದಿಂದ ಊರಿಗೆ ಹೋದ ಅವರ ನೆನಪಾಗಿ ನಿರಾಸೆಯ ನಿಟ್ಟುಸಿರೊಂದು ಹೊರಗ ಬಂತು. ಹಂಗ ಒಂದ ವಿಚಾರನ ಬಂತು ಎಲ್ಲಾದಕ್ಕು ಪಡಕೊಂಡು ಬಂದಿರಬೇಕು. ಯಾವ ಜನ್ಮದೊಳಗ ಯಾರ ಪ್ರೀತಿ ಕಸಗೊಂಡಿದ್ನೊ ಏನೊ ಈ ಜನ್ಮದೊಳಗ ಪ್ರೀತಿಯ ಸಲುವಾಗಿ ಹಪಾಹಪಿಸ್ಲಿಕತ್ತೇನಿ. ಯಾರ ಶಾಪ ತಟ್ಟೆದೊ ಏನೊ ಅಂತ ಅನಿಸ್ಲಿಕತ್ತಿತ್ತು. ಶಾಪ ಅನ್ಕೊಂಡ ಕೂಡಲೆ ಫಕ್ಕನ "ರಘು" ನೆನಪಾಗಿದ್ದಾ. ನೆನಪಿನ ಗೂಡಿನೊಳಗಿಂದ ಹವರಗ ಹಣಿಕಿ ಹಾಕಿ ನಾ ಹೇಳಿಧಂಗ ಆತಲ್ಲಾ ಅಂತ ನಕ್ಕಂಘ ಅನಿಸ್ಲಿಕತ್ತಿತ್ತು. " ಹೌದು ಇದು ರಘುನ ಶಾಪದ ಫಲಾನ ಅನಿಸ್ಲಿಕತ್ತಿತ್ತು. ಆಂವನ್ನ ಮೊದಲನೆ ಸಲಾ ನೋಡಿದಾಗಿನಿಂದಿನ ನೆನಪುಗಳ ಸುರಳಿ ಬಿಚ್ಚಿಕೊತ ಹೊಂಟ್ವು.

             ರಘು ನಮ್ಮ ಸ್ಕೂಲಿಗೆ ಅಡಮಿಶನ್ ಮಾಡಿಸಿದಾಗ ನಾ ಇನ್ನು ೫ನೇ ಕ್ಲಾಸನ್ಯಾಗ ಇದ್ದೆ. ಆಂವಾ ನನ್ನಕಿಂತಾ ೨ ವರ್ಷ ದೊಡ್ಡಾಂವ ಇದ್ದಾ,ಬೆಂಗಳೂರಿನ್ ಸಂಸ್ಕೄತ ಪಾಠಶಾಲಾ ಒಳಗ ಕಲಿತಿದ್ದಾ. ನೋಡ್ಲಿಕ್ಕೆ ಎತ್ತರ,ಬೆಳ್ಳಗ ಛಂದ ಇದ್ದಾ. ಅದ ಇನ್ನ ಹದಿಹರಯ ಶುರು ಆಗಿತ್ತು ಅಂವಗ, ಒಟ್ಟಿನಾಗ ಕ್ಲಾಸನ್ಯಾಗ ಎಲ್ಲಾರಕಿಂತ ಎರಡಮೂರ ವರ್ಷ ದೊಡ್ಡಾವ ಇದ್ದದ್ದರಿಂದ್ ಮತ್ತ ನೋಡ್ಲಿಕ್ಕೆ ಛಂದ ಇದ್ದದ್ದರಿಂದ ಈಡಿ ಕ್ಲಾಸ್ ನ್ಯಾಗ ಅವನ ಒಂಥರಾ ಕೇಂದ್ರ ಬಿಂದು ಆಗಿದ್ದಾ.ರಘು ನಮ್ಮ ಶಾಲಿಗೆ ಬಂದ  ಆ ಮೊದಲನೆ ದಿನಾ ನಂಗ ಇನ್ನು ನೆನಪದ. ಇನ್ನು ಸ್ಕೂಲ್ ಪ್ರಾರ್ಥನಾ ಆಗಿದ್ದಿಲ್ಲಾ ಕ್ಲಾಸ್ ನ್ಯಾಗ ಬ್ಯಾಗ ಇಡಲಿಕ್ಕೆ ಅಂತ ಹೋದಾಗ ರಘು ಅಲ್ಲೆ ಬೆಂಚ್ ಮ್ಯಾಲೆ ಕುತಿದ್ದಾ. ಇಗಿನ ಹಂಗ ಕ್ಲಾಸಿನಾಗ ಗಂಡುಹುಡುಗರನ್ನ ಮಾತಾಡಸ್ತಿದ್ದಿಲ್ಲಾ ನಾವು.ಮತಾಡಿಸಿದ್ರ ಎನೋ ತಪ್ಪ ಮಾಡೇವಿ ಅನ್ನೊಹಂಗ ನೋಡತಿದ್ರು ಎಲ್ಲಾರು.ವರ್ಷಕ್ಕ ಒಂದಸಲಾ ಸರಸ್ವತಿ ಪೂಜಾದಾಗ ಎಲ್ಲಾರುಕೂಡೆ ಡೇಕೋರೇಶನ್ ಮಾಡೊಮುಂದ ಮಾತ್ರ ಒಬ್ಬರಿಗೊಬ್ಬರು ಮಾತಾಡಸ್ತಿದ್ವಿ ಅಷ್ಟ.

            ಯಾರು ಹೊಸದಾಗಿ ಹುಡುಗರು ಬಂದಾರ ಅನ್ನೊ ಕುತುಹಲದಿಂದ ನೋಡಿ ನಾ ಬ್ಯಾಗ ಇಟ್ಟು ಹೊರಗ ಬಂದೆ.ಆದ್ರ ಆಂವಾ ಮಾತ್ರ ನನ್ನ ದಿಟ್ಟಿಸಿ ನೋಡ್ಲಿಕತ್ತಿದ್ದಾ ಅಂತ ಗೆಳತಿ ರತ್ನಾ ಹೇಳಿದ್ಲು.ಆಕಿ ಮಾತ ಕೇಳಿ ನಂಗೇನು ಅನಿಸ್ಲೇಇಲ್ಲಾ. ಮುಂದಿನ ದಿನಗಳೊಳಗ ಆಂವಾ ನನ್ನ ಬಗ್ಗೆ ವಿಷೇಶವಾಗಿ ನಡಕೊಳ್ಳೊದು ನನ್ನ ಗಮನಕ್ಕ ಬರಲಿಕತ್ತು.ಆಂವಾ ಮಾಡಿದ ಮೊದಲನೆ ಕೆಲಸ ಅಂದ್ರ ನನ್ನ ತಮ್ಮನ್ನ ಪರಿಚಯ ಮಡ್ಕೊಂಡ ನಮ್ಮ ಮನಿಗೆ ಬಂದು ನಮ್ಮ ಅಮ್ಮನ ಪರಿಚಯ ಮಾಡ್ಕೊಂಡು ಅಮ್ಮನ ಕಡೆ ಭಾಳ ಒಳ್ಳೆಯ ಹುಡುಗಾ ಅಂತ ಅನಿಸ್ಕೊಂಡಿದ್ದು. ಶಾಲಿ ೫.೩೦ ಕ್ಕ ಬಿಟ್ರುನು ರಾತ್ರಿ ೭.೩೦ ತನಕಾ ನಮ್ಮ ಕಾಲೋನಿಯೊಳಗನ ಸುಳಿದಾಡತಿದ್ದಾ. ಆಂವನ ಮನಿಯೆನ ಹತ್ರ ಇದ್ದಿಲ್ಲಾ, ಗೋಕುಲರೋಡ,ಗಾಂಧಿ ನಗರದಾಗ ಇತ್ತು.ಸಂಜೀಮುಂದ ನಾವ ಆಟಾ ಆಡೊ ಅಲ್ಲೆ ಇರತಿದ್ದಾ,ಒಮ್ಮೊಮ್ಮೆ ನಮ್ಮ ಮನಿಗೆ ಬಂದು ಚಹಾ ನಾಷ್ಟಾನು ಮಾಡತಿದ್ದಾ. ಅಷ್ಟಾದ್ರು ನಾ ಆಂವನ ಜೋಡಿ ಮಾತಾಡತಿದ್ದಿಲ್ಲಾ.ಹೆಂಗೆಂಗ ವರ್ಷಗೊಳು ಸಾಗಿದ್ವು,ನಾವು ಹೈಸ್ಕೂಲಿಗೆ ಕಾಲಿಟ್ಟಿವಿ.ತಿಳುವಳಿಕಿ ಬಂಧಂಗ ನಂಗ ರಘು ನಡ್ಕೊಳ್ಳೊರೀತಿ ಭಾಳ ಇರಿಸುಮುರಿಸು ಅನಿಸ್ತಿತ್ತು. ಯಾಕಂದ್ರ ಸ್ಕೂಲನ್ಯಾಗ ಎಲ್ಲಾರು ನನ್ನ, ಆಂವನ ಹೆಸಿರಿಲೇ ಕಾಡಸಲಿಕ್ಕೆಶುರು ಮಾಡಿದ್ರು.ಒಂದೊಂದ ಸಲಾ ಮಧ್ಯಾಹ್ನ ಆಂವಾ ಊಟದ ಡಬ್ಬಿ ತಂದಿಲ್ಲಂದ್ರ ನಮ್ಮನಿಗೆ ಊಟಕ್ಕಬರತಿದ್ದಾ. ಆದ್ರ ನಾ ಆಂವಾ ಊಟಾ ಮಾಡಿ ಹೋಗೊತನಕಾ ನಾ ಎನ್ ಅಡಗಿ ಮನಿಗೆ ಹೋಗತಿದ್ದಿಲ್ಲಾ. ಅಲ್ಲೆ ಹೊರಗ ಕಟ್ಟಿಮ್ಯಾಲೆ ಕುಡತಿದ್ದೆ. ಆಂವಾ ಹೋದ ಮ್ಯಾಲೆ ಓಳಗ ಹೋಗಿ ಊಟಾ ಮಾಡಿ ಶಾಲಿಗೆ ಹೋಗತಿದ್ದೆ. ನಾ ಆವಾಗ ೯ನೇ ಕ್ಲಾಸನ್ಯಾಗ ಇದ್ದೆ. ಅವತ್ತ ನನ್ನ ಹುಟ್ಟಿದದಿನಾ ಆಂವಗ ಅಧೆಂಗ ಗೊತ್ತಾಗಿತ್ತೊ ಗೊತ್ತಿಲ್ಲಾ,ನನಗ ಹಳದಿ ಗುಲಾಬಿ ಹೂವು ಅಂದ್ರ ಭಾಳ ಸೇರತಾವ ಅಂತ,ಎರಡು ಜೋಡಿ ಹಳದಿ ಗುಲಾಬಿ ತಂದು ಕೊಟ್ಟಿದ್ದಾ. ನಾನು ಸ್ಕೂಲಿಗೆ ಹೋಗಬೇಕಂತ ನಮ್ಮ ಮನಿ ಗೇಟ್ ತಗಿಬೇಕನ್ನೊದ್ರಾಗ ಹೂವು ಹಿಡಕೊಂಡ ನನ್ನ ಮುಂದ ನಿಂತಿದ್ದಾ. ನಂಗ ಈ ಅನಿರೀಕ್ಷಿತ ಪ್ರಸಂಗನ ಹೇಂಗ ತಗೋಬೇಕಂತ ಗೊತ್ತಾಗಲೇ ಇಲ್ಲ, ನಂಗೊತ್ತಿಲ್ಲದನ ನಾ ಹೂವು ತಗೊಂಡ ಬಿಟ್ಟಿದ್ದೆ. ಅವತ್ತ ಈಡಿ ದಿನಾ ನನ್ನ ಮ್ಯಾಲೆ ನಾನ ಬ್ಯಾಸರಾ ಮಾಡಕೊಂಡಿದ್ದೆ. ರಘು ನನ್ನ ಪ್ರೀತಿಸತಾನ ಅಂತ ಈಗಾಗಲೆ ನಂಗ  ಗೊತ್ತಾಗಲಿಕತ್ತಿತ್ತು. ಆದ್ರ ನಂಗ ಅವನ ಬಗ್ಗೆ ಎನು ಅನಿಸ್ತೆಯಿದ್ದಿಲ್ಲಾ. ಅವನ ಕಡಯಿಂದ ಹೂವು ತಗೊಂಡಿದ್ದಕ್ಕ ಅಂವಾ ನನ್ನ ತಪ್ಪ ತಿಳಕೊಂಡ್ರ ನಾ ಎನ್ ಮಾಡ್ಲಿ ಅಂತ ಚಿಂತಿ ಹತ್ತಿತ್ತು.ಕಣ್ಣುತುಂಬ ಪ್ರೀತಿ ತುಂಬಿಕೊಂಡು ಅಂವಾ ನನ್ನ ಆರಾಧನಾಭಾವದಿಂದ ನೋಡುವ ನೋಟಾ ನಂಗ ಎದುರಿಸಲಿಕ್ಕಾಗತಿದ್ದಿಲ್ಲಾ. ಆದಷ್ಟು ಅವನ ಕಣ್ಣ ತಪ್ಪಿಸಿನ ಅಡ್ಡಾಡತಿದ್ದೆ."

           "ಒಂದಿನಾ ಸಂಜಿಮುಂದ ಆರುವರಿ ಏಳು ಗಂಟೆ ಸುಮಾರಿಗೆ, ಮದಲ ಚಳಿಗಾಲಾ ಚಿಂಗ ಚಿಂಗ ಥಂಡಿ ಸೂಸಗಾಳಿ ತೀಡಿ ಬರಲಿಕತ್ತಿತ್ತು. ಕಂಪೌಂಡನಾಗಿನ ಸಂಪಿಗಿ ಹೂವಿನ ವಾಸನಿ ಜೋತಿ ನಿತ್ಯ ಮಲ್ಲಿಗಿ ಬಳ್ಳಿಯೋಳಗಿನ್ ಮಲ್ಲಿಗಿ ಹೂವಿನ್ ವಾಸನಿನು ಸೇರಿ ಒಂಥರಾ ಮನಸ್ಸಿನಾಗ ಎನೇನೊ ಭಾವನೆಗಳನ್ನ ಎಬ್ಬಿಸ್ಲಿಕತ್ತಿತ್ತು. ಹುಣ್ಣಿಮಿಯ ಬೆಳದಿಂಗಳ ಸೊಗಸು ಎಲ್ಲಾ ಕಡೆ ಹಾಸಿತ್ತು. ನಾ ಅದ ಗುಂಗಿನಾಗ ಇದ್ದಾಗ ಹೊರಗಿನಿಂದ ತೀಡಿತಂಗಾಳಿ ಜೋಡಿ ಕೊಳಲಿನ ನಾದ ಕೇಳಿಸ್ತು. ನಮ್ಮನಿ ಕಡೆ ಅಂತು ಯಾವ ಸಂಗೀತ ಕ್ಲಾಸ್ ಇಲ್ಲಾ ಮತ್ತ ಈ ಧ್ವನಿ ಎಲ್ಲಿಂದ ಬರಲಿಕತ್ತದ ಅಂತ ನೋಡೊಣ ಅಂತ ಹೋರಗ ಬಂದೆ. ವಿಶಾಲವಾದ ಕಂಪೌಂಡಿನ್ ಮ್ಯಾಲೆ ಒಂದ ತುದಿಯೋಳಗ ಯಾರೋ ಕುತಂಗ ಅನಿಸಿ ದಿಟ್ಟಿಸಿ ನೋಡಿದ್ರ, ಅಲ್ಲೆ ರಘು ಕುತಿದ್ದಾ. ಕೋಳಲಿನಿಂದ ತನ್ನ ಪ್ರೀತಿಯನ್ನ ಹೇಳ್ಕೊತಿರೊ ಅವನ್ನ ನೋಡಿ ನಂಗ ಏನ ಮಾಡಬೇಕಂತ ಗೊತ್ತಾಗಲಿಲ್ಲ. ಪುಣ್ಯಾಕ್ಕ ಅವತ್ತ ನಮ್ಮ ಮನಿ ಮಾಲಕರ ಮನ್ಯಾಗ ಎಲ್ಲಾರು ಮದವಿಗೆ ಅಂತ ಬ್ಯಾರೆ ಊರಿಗೆ ಹೋಗಿದ್ರು,ನಮ್ಮ ಮನಿನು ಕಂಪೌಂಡಿನ ಇನ್ನೊಂದ ತುದಿಗೆ ಇತ್ತು,ಹಿಂಗಾಗಿ ಉಳ್ಕೊಂಡೆ ಯಾರಿಗು ಗೊತ್ತಾಗಲಿಲ್ಲ. ನಾ ಅವನ ಹತ್ರ ಹೋಗಿ ಇಗ ಹೊತ್ತಾಗೇದ ಮನಿಗೆ ಹೋಗು ಅಂತ ಹೇಳಿದೆ. ಅದಕ್ಕ ಆಂವಾ ನಾಳೆಯಿಂದ ಸೂಟಿ ಶುರು ಆಗತದ,ಇನ್ನ ನಿನ್ನ ೧ ತಿಂಗಳ ನೋಡಲಿಕ್ಕಾಗಂಗಿಲ್ಲಾ. ಅಂತ ಕಣ್ಣಾಗ ನೀರು ತಂದುಕೊಂಡ ಹೇಳಿದ್ದಾ. ರಘು ನ ಈ ಪ್ರೀತಿಗೆ ನಂಗ ಏನ ಹೇಳ್ಬೇಕಂತ ಗೊತ್ತಾಗಲಿಲ್ಲಾ. ನಾ ಎಷ್ಟ ಉದಾಸಿನ್ ತೋರಿಸಿದ್ರು,ನಿರ್ಲಿಪ್ತತೆಯಿಂದ ಇದ್ರು ಆಂವನ ಪ್ರೀತಿ ಮಾತ್ರ ಕಡಿಮಿ ಆಗಲಿಲ್ಲಾ. ಆಂವಾ ತನ್ನ ಗೆಳ್ಯಾರ ಮುಂದಎಲ್ಲಾ" ನನ್ನನ್ನಾ ಮದವಿಮಾಡಕೊತೆನಿ ಅಂತ ಹೇಳಿಬಿಟ್ಟಿದ್ದಾ. ಅದಕ್ಕ ಎಲ್ಲಾರು ನನ್ನ ಒಂಥರಾ ನೋಡತಿದ್ರು.ನಂಗ ನೆಲ್ಲಿಕಾಯಿ,ಮಾವಿನಕಾಯಿ.ಪ್ಯಾರಲಹಣ್ಣು ಅಂದ್ರ ಭಾಳ ಸೇರತಿದ್ವು ಎಲ್ಲಿದ್ರು ಹರಕೊಂಡು ತಂದು ಕೋಡತಿದ್ದಾ. ನಂಗ ಆರಾಮ ಇಲ್ಲಂದ್ರ ದೇವರಗುಡಿಗೆ ಹೋಗಿ ನನ್ನ ಸಲುವಾಗಿ ಪೂಜಾ ಮಾಡಿಸ್ಕೊಂಡ ಬರತಿದ್ದಾ. ನಂಗ ಏನರ ಒಳ್ಳೆದಾದ್ರ ನನ್ನಕಿಂತಾ ಹೆಚ್ಚು ಆಂವಗ ಖುಷಿಯಾಗತಿತ್ತು.ನಂಗ ಬ್ಯಾಸರದ್ರ, ನನ್ನಗಿಂತ ಆಂವನ  ಜಾಸ್ತಿ ಸಂಕಟಾಪಡತಿದ್ದಾ. ಅಪ್ಪಿ ತಪ್ಪಿನಾ ಎನರೆ ಸ್ಕೂಲಿಗೆ ಬರೊದು ತಡಾ ಆದ್ರ ಆಂವ ಕ್ಲಾಸಿನೊಳಗ ಹೋಗಲಾರದ ಹೊರಗ ಚಡಪಡಿಸಿಕೊತ ಕಾಯತಿದ್ದಾ.ರಾಘವೇಂದ್ರ ಸ್ವಾಮಿಗಳ ಆರಾಧನೆಯೋಳಗ ಮೂರದಿನಾ ಆಂವಾ ಮಠದಾಗ ಸೇವಾ ಮಾಡಲಿಕ್ಕೆ ಇರತಿದ್ದಾ. ನಾನು ನಮ್ಮ ಅಮ್ಮನ ಜೋಡಿ ಮಠಕ್ಕ ಊಟಕ್ಕ ಹೋಗತಿದ್ದೆ. ಆವಾಗೆಲ್ಲಾ ರಘು ನಾನಿದ್ದಲ್ಲೆ ಸುಳಿದಾಡತಿದ್ದಾ.ನಾ ಊಟಕ್ಕ ಕೂತ ಸಾಲಿಗೆ ಬಂದು ನನಗ ಕೊಸಂಬರಿ ಭಾಳ ಸೆರತದಂತ ಭಾಳಷ್ಟ ಬಡಿಸತಿದ್ದಾ. ನನಗ ಎನ ಸೇರತದ ಎನಿಲ್ಲಾ ಅನ್ನೊದು ನನಗಿಂತ ಜಾಸ್ತಿ ಆಂವಗ ಗೊತ್ತಿತ್ತು.ರಾಯರ ಮ್ಯಾಲಿನ ನೈರ್ಮಲ್ಯ ಹೂವು ಮತ್ತ ಕಲ್ಲಸಕ್ಕರಿ ಪ್ರಸಾದ ನಾನಿದ್ದಲ್ಲೆ ತಂದು ಕೋಡತಿದ್ದಾ. ಎನು ಮಾತಾಡಲಾರದ,ತನ್ನ ಪ್ರೀತಿ ಅಂತಃಕರಣ ತೋರಿಸ್ತಿದ್ದ ಆಂವನ ಮ್ಯಾಲೆ ನಂಗ್ಯಾಕೊ ಪ್ರೀತಿ ಹುಟ್ಟಲೆ ಇಲ್ಲಾ. ಅವನ ನೋಟಾ.ಮಾತು,ನನ್ನ ಬಗ್ಗೆ ತೊರಸತಿದ್ದ ವಿಷೇಶ ಕಾಳಜಿ,ಇವೆಲ್ಲಾ ನನ್ನ ಸೇಳಿತಿದ್ದೇಯಿಲ್ಲಾ. ನಾವೆಲ್ಲಾ ವಿಧ್ಯಾಭ್ಯಾಸದ ಮೊದಲನೆ ಪ್ರಮುಖ ಘಟ್ಟ ಆದಂಥಾ ಹತ್ತನೆ ಕ್ಲಾಸಿಗೆ ಕಾಲಿಟ್ಟಿದ್ವಿ. ನನ್ನ ಲಕ್ಷ ಎಲ್ಲಾ ಓದೊದರ ಕಡಿಗೆ ಇತ್ತು. ಹಿಂಗಾಗಿ ನಾನು ರಘುನ ಯಾವ ವಿಚಾರಕ್ಕು ತಲಿ ಕೆಡಿಸ್ಕೊಳ್ಳಿಕ್ಕೆ ಹೋಗಲೆ ಇಲ್ಲಾ.  ಆಂವಾ ತನ್ನ ಕಾಲೇಜಿನ ವಿದ್ಯಾಭ್ಯಾಸ ಎಲ್ಲಾ ತಮ್ಮ ಕಾಕಾನ ಊರು ಗದಗನ್ಯಾಗ ಮುಗಿಸಿದಾ. ನಮ್ಮ ಕಾಲೇಜಿನ ಕಲಿಕೆಯ ಒಂದು ಘಟ್ಟ ಮುಗಿದ ಮ್ಯಾಲೆ ಒಂದ ದಿನಾ ಆಂವಾ ಬಂದು ನನ್ನ ಮುಂದ ತನ್ನ ಪ್ರೀತಿನ ಹೇಳಿಕೊಂಡಿದ್ದಾ. ಆದರ ನಂಗೇನಾಗಿತ್ತೊ ಆವಾಗ ನಾನು ಒಬ್ಬರು ನಮ್ಮನ್ನ ಪ್ರೀತಿ ಮಾಡತಾರಂತ ನಾವು ಮಾಡಲಿಕ್ಕಾಗತದೇನು? ನಮಗೂ ಅವರ ಬಗ್ಗೆ ಪ್ರೀತಿ ಹುಟ್ಟಬೇಕು.” ಅಂದು ಆಂವನ ಪ್ರೀತಿ ನಿರಾಕರಿಸಿದ್ದೆ. ಆವಾಗ ಆಂವಾ " ನಾ ನಿನ್ನ ಪ್ರೀತಿ ಮಾಡು ಅಂತ ಒತ್ತಾಯ ಮಾಡಲಿಕತ್ತಿಲ್ಲಾ.ಹೆಂಗೂ ಇಬ್ಬರದು ಕಲಿಯೋದ ಮುಗದದ. ನಿನಗು ಮನ್ಯಾಗ ವರಾ ನೋಡಲಿಕತ್ತಾರ. ನೀ ಹೂಂ ಅಂದರ ನಾ ನಮ್ಮ ಅಪ್ಪ ಅಮ್ಮನ ಕರಕೊಂಡ ನಿಮ್ಮ ಮನಿಗೆ ಬಂದು ನಮ್ಮಿಬ್ಬರ ಮದಿವಿಗೆ ಒಪ್ಪಿಗಿ ಕೇಳತೆನಿ" ಅಂದಾ. ಅದಕ್ಕ ನಾನು " ಯಾಕೊ ನಿನ್ನ ನನ್ನ ಗಂಡ ಅಂತ ಒಪ್ಕೊಳ್ಳಿಕ್ಕೆ ಮನಸಾಗವಲ್ಲತು. ಬ್ಯಾರೆ ಹುಡಗಿನ್ನ ಮದವಿ ಮಾಡಕೊಂಡ ಆರಾಮಾಗಿರು ಅಂದಿದ್ದೆ. ಆವಾಗ ರಘು ತುಂಬಿದ ಕಣ್ಣಿರಿನೊಳಗಿಂದ ನನ್ನ ನೋಡಕೊತ " ನನ್ನ ಖರೆ ಪ್ರೀತಿನ ಒಲ್ಲೆ ಅಂದು ದೂರ ಮಾಡಿದಿ, ನೋಡು ಒಂದಿನಾ ನೀನು ಯಾರನ್ನ ಪ್ರೀತಿಸ್ತಿಯೊ, ಅವರ ಪ್ರೀತಿ ಬೇಕು ಅಂತ ಬಯಸಿದಾಗ ಅದು ಸಿಗದಾಗ ನಿನಗ ಗೊತ್ತಾಗತದ ನನ್ನ ಮನಸ್ಸು ನಿನ್ನ ಪ್ರೀತಿ ಸಲುವಾಗಿ ಎಷ್ಟು ಒದ್ದಾಡೆದ, ತಳಮಳಿಸೇದ ಅಂತ" ಅಂತಂದು ಹೋಗಿದ್ದಾ.

             ಆದರ ನಂಗ ಆವತ್ತ ಆಂವನ್ನ ನಿರಾಕರಿಸಲಿಕ್ಕೆ ಯಾವ ಬಲವಾದ ಕಾರಣನು ಇದ್ದಿಲ್ಲಾ ಅಂತ ಇಗ ಅನಿಸ್ಲಿಕತ್ತಿತ್ತು.  ನನ್ನ ಮನಸ್ಸಿನ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿತ್ತು. ಹೌದು ನಾನು ನಮ್ಮವರ ಪ್ರೀತಿಯ ಮಾತಿಗಾಗಿ, ಅವರು ತಮ್ಮ ಪ್ರೀತಿನ ಮಾತಿನೊಳಗಿನ ಕಾಳಜಿಗಾಗಿ ಹಂಬಲಿಸಿ ಸೋತು ಹೋಗಿದ್ದೆ. ರಘುವಿನ ಮನಸ್ಸಿನ ನೋವಿನ ಆಳ ಅರ್ಥ ಆಗಿತ್ತು ನನಗ. " ರಘು ಕೊಟ್ಟು ಹೋದ ಒಲವಿನ ಶಾಪ " ಫಲಿಸಿತ್ತು. ಇಗೇನಾದ್ರು ರಘು ಭೆಟ್ಟಿಯಾದ್ರ " ನಿನ್ನೊಲವಿನ ಶಾಪ ದೊಳಗ ಬೆಂದು ಹೋಗೇನಿ" ನಿನಗ ನೋಯಿಸಿದ್ದಕ್ಕ ನನ್ನ ಕ್ಷಮಿಸು "ಅಂತ ಹೇಳಬೇಕನಿಸಿತ್ತು.


ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಒಲವಿನ ಶಾಪ:ಸುಮನ್ ದೇಸಾಯಿ ಅಂಕಣ

  1. ಹೃದಯ ತು೦ಬಿ ಬ೦ತು…..
    ನಾವ ಪಡದಕೊ೦ಡು ಬ೦ದ್ದದ್ದ ಅಷ್ಟ ನಮಗ ಸಿಗತದ…
    ಕಹಿ ವಿಷಯದಲ್ಲೂ ಮಧುರತೆ ಇರತದ. ಪ್ರೀತಿಪೂರ್ವಕ ಅನುಭವಿಸ ಬೇಕು ಅಷ್ಟ…

  2. ಸೊಗಸಾಗಿದೆ. ಹುಬ್ಬಳ್ಳಿ-ಧಾರವಾಡ ಕಡೆಯ ಬಾಷೆಯ ಸೊಗಡು ಆಸ್ವಾದಿಸುವುದೇ ಚಂದ. ಹದಿಹರೆಯದ ಹಸಿ ಹಸಿ ಪ್ರೀತಿಯ ಸಮ್ಮಿಶ್ರ ಭಾವಗಳನ್ನು ಪ್ರಾಮಾಣಿಕವಾಗಿ ಬಿಂಬಿಸಲಾಗಿದೆ. ಖುಷಿ ಕೊಟ್ಟಿತು. 

Leave a Reply

Your email address will not be published. Required fields are marked *