ನಾವು ಚಿಕ್ಕವರಿದ್ದಾಗ, ರಾತ್ರಿ ಮಲಗುವಾಗ 'ಕಥೆ ಹೇಳಿ' ಎಂದು ಪೀಡಿಸುತ್ತಿದ್ದ ನಮ್ಮಿಂದ ಮುಕ್ತಿ ಪಡೆಯಲು ನನ್ನ ತಂದೆಯಾದಿಯಾಗಿ ನಮ್ಮ ಹಿರಿಯರು ಹೇಳುತ್ತಿದ್ದ ಕೆಲವು ಕಥೆಗಳು. ಈ ಕಥೆಗಳ ವಿಶೇಷವೆಂದರೆ ಒಮ್ಮೆ ನಾವು ಈ ಕಥೇನ ಕೇಳಿದ್ರೆ, ಆ ಕಥೆ ಹೇಳಿದವರ ಹತ್ರ ಮತ್ಯಾವತ್ತೂ ಕಥೆ ಕೇಳೋಕೆ ಹೋಗ್ತಿರ್ಲಿಲ್ಲ!
ಇನ್ನು ಮುಂದೆ ಒಂದಾದ ಮೇಲೊಂದರಂತೆ ನಾಲ್ಕು ಕಥೆಗಳು!
ಕಥೆಯ ಘಟನೆ ಒಂದು : "ಗುಬ್ಬಚ್ಚಿ ಮತ್ತು ಭತ್ತದ ಕಾಳು"
"ಒಂದೂರಲ್ಲಿ ಒಂದು ದೊಡ್ಡ ಕಣ (ಭತ್ತವನ್ನು ಅದರ ಗಿಡದಿಂದ ಬೇರ್ಪಡಿಸಲು ಹರಡುತ್ತಿದ್ದ ಜಾಗ, ಇಂಗ್ಳೀಷಲ್ಲಿ 'ಫೀಲ್ಡ್' ಅನ್ಬೋದು!) ಇತ್ತಂತೆ", "ಹೂಂ ಅನ್ಬೇಕು! ಸುಮ್ನೆ ಕಥೆ ಹೇಳಲ್ಲ"
"ಹೂಂ.."
"ನಮ್ಮನೇಲಿ ಇದ್ಯಲಾ, ಅದೇ ಥರದ ಕಣ, ಆದ್ರೆ ಇನ್ನೂ ದೊಡ್ಡದು"
"ಹೂಂ.."
"ಆ ಕಣದಲ್ಲಿ ಭತ್ತದ ರಾಶಿ ಹಾಕಿದ್ರಂತೆ. ಯಾವ್ ರಾಶಿ…?"
"ಭತ್ತದ ರಾಶಿ.."
"ಹೂಂ! ಭತ್ತದ ರಾಶಿ. ಆ ಭತ್ತದ ರಾಶೀನ ಅಲ್ಲೇ ಹಾರ್ತಾ ಇದ್ದ ಒಂದು ಗುಬ್ಬಚ್ಚಿ ನೋಡ್ತಂತೆ."
"ಹೂಂ..!"
"ಆ ಗುಬ್ಬಚ್ಚಿ ಸೀದಾ ಹೋಗಿ ಅದರ ಮನೇಲಿರೋ ಗುಬ್ಬಚ್ಚಿಗಳು, ಅಕ್ಕ-ಪಕ್ಕ ಇರೋ ಗುಬ್ಬಚ್ಚಿಗಳಿಗೆಲ್ಲಾ ಹೇಳ್ತಂತೆ"
"ಏನಂತ ಹೇಳ್ತು?!!"
"ಹಿಂಗೆ, ಒಂದು ಕಣದಲ್ಲಿ ಭತ್ತ ಇದೆ, ತಗೊಂಡು ಬರೋಣ ಬನ್ನಿ ಅಂತ"
"ಹೋ! ಸರಿ ಸರಿ. ಆಮೇಲೆ?"
"ಆಮೇಲೆ ಈ ಗುಬ್ಬಚ್ಚಿ ಎಲ್ಲಾ ಗುಬ್ಬಚ್ಚಿಗೂ ಹೇಳಿತ್ತಲ ಅದ್ರಲ್ಲಿ ಒಂದು ಗುಬ್ಬಚ್ಚಿ ಬಂತಂತೆ ಒಂದು ಭತ್ತದ ಕಾಳು ತಗೊಂಡ್ ಹೋಯ್ತಂತೆ"
"ಹೂಂ.."
"ಇನ್ನೊಂದ್ ಗುಬ್ಬಚ್ಚಿ ಬಂತಂತೆ, ಇನ್ನೊಂದ್ ಭತ್ತದ ಕಾಳು ತಗೊಂಡ್ ಹೋಯ್ತಂತೆ"
"ಹೂಂ.."
"ಮತ್ತೊಂದ್ ಗುಬ್ಬಚ್ಚಿ ಬಂತಂತೆ, ಮತ್ತೊಂದ್ ಭತ್ತದ ಕಾಳು ತಗೊಂಡ್ ಹೋಯ್ತಂತೆ"
"…"
"ಹೂಂ ಅನ್ಬೇಕು"
"ಹೂಂ…"
"ಇನ್ನೂ ಒಂದ್ ಗುಬ್ಬಚ್ಚಿ ಬಂತಂತೆ, ಇನ್ನೂ ಒಂದ್ ಭತ್ತದ ಕಾಳು ತಗೊಂಡ್ ಹೋಯ್ತಂತೆ"
"ಹೂಂ.."
"ಮತ್ತೂ ಒಂದ್ ಗುಬ್ಬಚ್ಚಿ ಬಂತಂತೆ, ಮತ್ತೂ ಒಂದ್ ಭತ್ತದ ಕಾಳು ತಗೊಂಡ್ ಹೋಯ್ತಂತೆ"
"ಹೂಂ! ಸರಿ ಮುಂದೆ ಹೇಳು?"
"ತಡ್ಯಾ! ಕಣದಲ್ಲಿರೋ ಭತ್ತ ಖಾಲಿ ಆಗ್ಬೇಕಲ್ವಾ? ಇನ್ನೊಂದ್ ಗುಬ್ಬಚ್ಚಿ ಬಂತಂತೆ, ಇನ್ನೊಂದ್ ಭತ್ತದ ಕಾಳು ತಗೊಂಡ್ ಹೋಯ್ತಂತೆ"
"ಥೋ!! ಬ್ಯಾಡ ನಿನ್ ಕಥೆ ಚೆನಾಗಿಲ್ಲ"
"ಭತ್ತ ಖಾಲಿ ಆದ್ಮೇಲೆ ಕಥೆ ಚೆನಾಗಿದೇ ಕಣೋ"
"ಸುಮಾರ್ ಹೊತ್ತು ಬೇಕು ಅದು ಖಾಲಿ ಆಗಕ್ಕೆ. ಬ್ಯಾಡ ಈ ಕಥೆ!"
"ನಂಗೆ ಬೇರೆ ಯಾವ್ ಕಥೇನೂ ಬರಲ್ಲ, ಸರಿ ಹಂಗಾದ್ರೆ, ಮಲ್ಗು ಸುಮ್ನೆ"
ಕಥೆಯ ಘಟನೆ ಎರಡು : "ಅಮಾವಾಸ್ಯೆಯ ಚಂದ್ರ"
"ಅಪ್ಪ, ಅಪ್ಪ, ಒಂದ್ ಕಥೆ ಹೇಳ್ರೀ!"
"ಸುಮ್ನೆ ಮಲ್ಗು ಮಾರಾಯ! ಎಂಥ ಕಥೆ ನಿಂದು?"
"ಯಾವ್ ಕಥೆ ಆದ್ರೂ ಪರ್ವಾಗಿಲ್ಲ, ಹೇಳಿ.."
"ಸರಿ! ಒಂದ್ ಕಥೆ ಹೇಳ್ತೀನಿ, ಒಂದ್ ಪ್ರಶ್ನೆ ನೀನ್ ನಂಗೆ ಕೇಳಿದ್ರೂ ನಾ ಕಥೆ ನಿಲ್ಸ್ತೀನಿ"
"ಹೂಂ.. ಸರಿ"
"ಹೆದ್ರುಕೋಬಾರ್ದು"
"ಇಲ್ಲ ಹೆದ್ರುಕಳಲ್ಲ, ಹೇಳಿ.."
"ಅಮಾವಾಸ್ಯೆಯ ರಾತ್ರಿ","ಹೂಂ ಅನ್ಬೇಕು"
"ಹೋ ಮರ್ತೋಗಿತ್ತು! ಹೂಂ.."
"ಆಗ ಚಂದ್ರನ ಬೆಳಕಲ್ಲಿ ಒಬ್ಬ ನಡ್ಕೊಂಡು ಬರ್ತಾ ಇದ್ದ"
"ಹೂಂ.."
"ಅವ್ನು ಹೆಂಗಿದ್ನಂತೆ ಗೊತ್ತಾ?"
"ಗೊತ್ತಿಲ್ಲ"
"ದಪ್ಪಕ್ಕೆ, ಎತ್ರಕ್ಕೆ, ಕುಳ್ಳಗೆ, ಬೆಳ್ಳಗೆ, ತೆಳ್ಳಗೆ, ಕಪ್ಪಗೆ ಇದ್ದ"
"ಹೂಂ..!"
"ನಡೀತಾ, ನಡೀತಾ ಕೆಳಗಡೆ ಬಿದ್ದಿದ್ದ ಸಗಣೀನ ನೋಡದೆ ಮೆಟ್ಟಿ ಬಿಟ್ಟ! ಅವ್ನ ಕೈಗೆಲ್ಲಾ ಸಗಣಿ ಹಿಡ್ಕೊಳ್ತು"
"ಹೂಂ.. ಅಲ್ಲಾ? ಸಗಣಿ ಮೆಟ್ಟಿದ್ರೆ ಕಾಲು ಕೊಳೆ ಆಗ್ಬೇಕಲ್ವಾ? ಕೈ ಹೇಗೆ ಸಗಣಿ ಆಯ್ತು?!!"
"ಯಾಕ್ ಪ್ರಶ್ನೆ ಕೇಳ್ದೆ? ಅಲ್ಲಿಗೆ ಮುಗೀತು ಕಥೆ! ಆಯ್ತಲಾ?, ಮಲ್ಗು ಇನ್ನು!"
ಕಥೆಯ ಘಟನೆ ಮೂರು: "ಸಣ್ ಕಥೆ"
"ನಿಮ್ಗೆ ಕಥೆ ಹೇಳೋಕೆ ಬರುತ್ತಾ?"
"ಇಲ್ಲಾ ಪುಟ್ಟಾ. ಬರಲ್ಲ ನಂಗೆ"
"ಸಣ್ ಕಥೆ ಆದ್ರೂ ಪರ್ವಾಗಿಲ್ಲ. ಹೇಳೀ.."
"ಹೌದಾ? ಸರಿ ಹಂಗಾದ್ರೆ ಒಂದ್ ಸಣ್ ಕಥೆ ಹೇಳ್ತೀನಿ, ನೀನು 'ಹೂಂ' ಅನ್ಬೇಕು"
"ಹೂಂ.."
"ಒಂದೂರಲ್ಲಿ ಒಬ್ಬ ರಾಜ ಇದ್ನಂತೆ"
"ಹೂಂ.."
"ಒಂದಿನ ಒಂದು ಯುದ್ಧ ಮಾಡ್ಬೇಕಾದ್ರೆ ಅವ್ನು ಸತ್ತೇ ಹೋದ್ನಂತೆ"
"ಹೂಂ.."
"ಏನ್ ಹೂಂ?! ರಾಜ ಸತ್ತೋದ್ನಲ, ಆಯ್ತು ಕಥೆ"
"ಥೋ! ನಿಮ್ಗೆ ಕಥೆ ಹೇಳಕ್ ಬರಲ್ಲ"
"ಅದ್ನೆ ನಾ ಆಗ್ಲೇ ಹೇಳಿದ್ದು! ಸರಿ ಮಲ್ಗು ಸುಮ್ನೆ"
ಕಥೆಯ ಘಟನೆ ನಾಲ್ಕು: "ಕಳ್ಳನ ಓಟ"
"ಒಂದೂರಲ್ಲಿ ಒಬ್ಬ ಕಳ್ಳ ಇದ್ನಂತೆ", "ಹೂಂ ಅನ್ಬೇಕು"
"ಹೂಂ.."
"ಅವ್ನು ಯಾವಾಗ್ಲೂ ಏನಾದ್ರು ಕದೀತಾ ಇದ್ನಂತೆ"
"ಹೂಂ.."
"ಅವತ್ತೊಂದು ದಿನ ಕದಿಯೋಕೆ ಹೋದಾಗ ಯಾರೋ ಅವ್ನನ್ನ ನೋಡಿ 'ಕಳ್ಳಾ! ಕಳ್ಳಾ! ಅಂತ ಕೂಗೋಕೆ ಶುರು ಮಾಡಿದ್ರಂತೆ"
"ಆಮೇಲೆ..!"
"ಏನ್ ಮಾಡೋದು ಅಂತ ಯೋಚ್ನೆ ಮಾಡ್ತಿರ್ಬೇಕಾದ್ರೆ ಅಲ್ಲೇ ಇದ್ದ ಯಾರ್ದೋ ಕುದುರೆ ಹತ್ತಿ, ಕುದುರೆ ಓಡಿಸ್ಕೊಂಡು ಹೊರ್ಟ್ನಂತೆ"
"ಹೂಂ.."
"ಕುದುರೆ ಮೊದಲು ನಿಧಾನಕ್ಕೆ ಟು..ಗು..ಡು..ಕ್ ಟು..ಗು..ಡು..ಕ್ ಟು..ಗು..ಡು..ಕ್ ಟು..ಗು..ಡು..ಕ್ ಟು..ಗು..ಡು..ಕ್ ಅಂತ ಹೋಯ್ತಂತೆ"
"ಹೂಂ.."
"ಸ್ವಲ್ಪ ದೂರ ಹೋದ್ಮೇಲೆ ಜೋರಾಗಿ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್…"
"ಸರಿ ಮುಂದೆ ಹೇಳಿ"
"ತಡಿಯೋ! ಕುದುರೆ ಹೋಗ್ತಾ ಇದೆ ಇನ್ನೂ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್ ಟುಗುಡುಕ್…."
"ಹೋಗ್ರೀ! ಯಾವಾಗ್ ನೋಡಿದ್ರೂ ಹಿಂಗಿದ್ದೆ ಕಥೆ ಹೇಳ್ತೀರಿ, ಚನಾಗೇ ಇರಲ್ಲ! ಬ್ಯಾಡ ನೀವ್ ಕಥೆ ಹೇಳದು, ಮಲ್ಗ್ತೀನಿ ನಾನು!"
ಎಲ್ಲಾರೂ ಕಥೆ ಹೇಳ್ಬೇಕಾದ್ರೆ "ಹೂಂ ಅನ್ಬೇಕು ನೀನು" ಅಂತ ಹೇಳ್ತಿದ್ರು ಆಗೆಲ್ಲಾ. ಯಾಕೆ ಅಂದ್ರೆ "ಅದು ರೂಲ್ಸು" ಅಂತ ಸುಮ್ನೆ ಕಾಗೆ ಹಾರಿಸ್ತಿದ್ರು! ಆದ್ರೆ ಕಥೆ ಕೇಳ್ತಾ ಕೇಳ್ತಾ 'ಹೂಂ' ಅನ್ನೋದು ನಿಂತಿದೆ ಅಂದ್ರೆ ನಮ್ಗೆ ನಿದ್ದೆ ಬಂದಿದೆ ಅಂತ ಗೊತ್ತಾಗಿ ಕಥೆ ಹೇಳೋದ್ ನಿಲ್ಲಿಸ್ಬೋದು ಅನ್ನೋ ಕಾರಣಕ್ಕೆ ಈ 'ಹೂಂ' ಅನ್ನೋ ರೂಲ್ಸ್ ಇಟ್ಕೊಂಡಿದ್ರು ಅಂತ ಸುಮಾರು ವರ್ಷ ಆದ್ಮೇಲೆ ಗೊತ್ತಾಯ್ತು ನಮ್ಗೆಲ್ಲ.
ನಿಮ್ಮವ
-ಯೋಚಿತ
*****
Namma balyadali entha kathegalna bejan kelivi!!
Adhela nenpaythu nimma lekana odhi estavaythu
ಒಮ್ಮೆ ಮಾತ್ರ ಕೇಳುದ್ರೂ ಪದೇ ಪದೇ ಹೇಳ್ತಿದ್ರು. ಚೆನ್ನಾಗ್ ಬ್
ಚೆನ್ನಾಗ್ ಬರ್ದಿದೀರ.
ಕತೆ ಹೇಳು ಎಂದು ಕಾಡಿಸುತ್ತಿದ್ದ ಮಗುವನ್ನು ಗೋಳಾಡಿಸಲು ಅಮ್ಮ ಹೇಳುತ್ತಿದ್ದ ಕತೆ
'ಒಂದು ಊರಲ್ಲಿ ಒಂದು ಅಜ್ಜಿ ಇತ್ತಂತೆ , ಒಮ್ಮೆ ಬಾವಿಕಟ್ಟೆ ಮೇಲೆ ಕುಳಿತು ಅಂಗಿಗೆ ಗುಂಡಿ ಹಾಕ್ತಾ ಇತ್ತಂತೆ "
'ಊಂ'
"ಆಗ ಕೈ ಜಾರಿ ಸೂಜಿ ಬಾವಿಗೆ ಬಿದ್ದು ಹೋಯ್ತಂತೆ"
"ಊಂ"
"ಈಗ ಸೂಜಿ ಹೇಗೆ ಬಾವಿ ಇಂದ ಮೇಲೆ ಬರುತ್ತೆ?"
"ಊಂ"
"ಊಂ ಅಂದರೆ ಬರುತ್ತಾ?"
"ಇಲ್ಲ"
"ಇಲ್ಲ ಅಂದರೆ ಬರುತ್ತ"
"ನಂಗೊತ್ತಿಲ್ಲ"
"ನಂಗೊತ್ತಿಲ್ಲ ಅಂದರೆ ಬರುತ್ತ"
"ಏ ಹೋಗಮ್ಮ"
"ಏ ಹೋಗಮ್ಮ ಅಂದರೆ ಬರುತ್ತಾ"
"ಏ ಮುಂದಕ್ಕೆ ಹೇಳಮ್ಮ"
"ಏ ಮುಂದಕ್ಕೆ ಹೇಳಮ್ಮ ಅಂದರೆ ಬರುತ್ತ"
"ಏ ಹೋಗಮ್ಮ ನೀನು ಬೇಡ ನಿನ್ನ ಕತೆಯೂ ಬೇಡ"
"ಏ ಹೋಗಮ್ಮ ನೀನು ಬೇಡ ನಿನ್ನ ಕತೆಯೂ ಬೇಡ ಅಂದರೆ ಸೂಜಿ ಮೇಲೆ ಬರುತ್ತಾ"
.
?
.
ಮಗು ಎದ್ದು ದೂರ ಓಡುತ್ತಿತ್ತು, ಅಮ್ಮ ತನ್ನ ಕೆಲಸ ಮುಂದುವರೆಸುತ್ತಿದ್ದಳು
[…] https://www.panjumagazine.com/?p=7200 […]
[…] https://www.panjumagazine.com/?p=7200 […]
balyada nenapugalu nimma lekhana odhi nenapadavu…..