ಟಾಮ್ ಹಾಂಕ್ಸ್ ಕ್ಯಾಲಿಫೋರ್ನಿಯಾದ ಪ್ರತಿಭಾವಂತ. ಈತ ಜನಿಸಿದ್ದು 1956ರಲ್ಲಿ. ಆವರೆಗೆ ಹಾಲಿವುಡ್ ಕಂಡರಿಯದ ವಿಶಿಷ್ಟ ನಟ ಎನಿಸಿಕೊಂಡ. ಅದನ್ನು ಬಿಡಿಸಿ ಹೇಳಬೇಕಿಲ್ಲ. ಆತನ ಬದುಕು ನಿಜಕ್ಕೂ ರೋಮಾಂಚಕ. ಟಾಮ್ ಹಾಂಕ್ಸ್ ಅಡುಗೆಭಟ್ಟನೊಬ್ಬನ ಮಗ; ಜೊತೆಗೆ ರೆಸ್ಟೋರೆಂಟ್ ಮ್ಯಾನೇಜರಾಗಿಯೂ ಕೆಲಸ ಮಾಡುತ್ತಿದ್ದಾತ. ಬರಹಗಾರನಾಗಬಯಸಿದ್ದ ಟಾಮ್ ತಂದೆ ಅಡುಗೆಭಟ್ಟನಾಗಿ ಬದುಕು ಸವೆಸಿದರೂ ಸಾಯುವ ಮುನ್ನ ತನ್ನ ಅಪ್ರಕಟಿತ ಆತ್ಮಚರಿತ್ರೆ ಬರೆದಿದ್ದ. ಟಾಮ್ ನ ತಾಯಿ ಆಸ್ಪತ್ರೆಯೊಂದಲ್ಲಿ ಕೆಲಸಕ್ಕಿದ್ದವಳು.
ಹೀಗಿರಲು ಟಾಮ್ ಹಾಂಕ್ಸ್ ಗೆ ಅಚ್ಚರಿ ಕಾದಿತ್ತು. ಬೆಸೆದ ಹಸ್ತಗಳಂತಿದ್ದ ತನ್ನ ಕುಟುಂಬದಲ್ಲಿನ ಬಿರುಕು ಆತನನ್ನು ಆಘಾತಗೊಳಿಸಿತು. ಟಾಮ್ ಗೆ ನಾಲ್ಕು ವರ್ಷವಿದ್ದಾಗ ಆತನ ತಾಯಿ ಗಂಡನಿಗೆ ವಿವಾಹ ವಿಚ್ಚೇದನ ಕೊಟ್ಟು ಹೊರಟುಹೋದಳು. ಆ ಘಟನೆ ಟಾಮ್ ನ ಮನಸಿನ ಮೇಲೆ ಭೀಕರ ಪರಿಣಾಮ ಬೀರುತ್ತದೆ. ತಾನೇ ಹೇಳಿಕೊಳ್ಳುವಂತೆ ಅದೊಂದು 'ಯಾತನಾಮಯ' ಅಥವಾ 'ಒಂಟಿತನ' ತಂದೊಡ್ಡಿದ ಘಟನೆ. ಆ ದುಃಖದಿಂದ ಹೊರಬರಲು ಟಾಮ್ ಚರ್ಚಿನ ಮೊರೆ ಹೋಗಬೇಕಾಯಿತು. ತಾಸುಗಟ್ಟಲೆ ಚರ್ಚಿನಲ್ಲಿ ಒಬ್ಬನೇ ಕೂತು ಬರಬೇಕಾಯಿತು. ಸ್ವ-ಶುಶ್ರೂಷೆ ತರಹದ ಹಾದಿಗಳ ಮೂಲಕ ಮನಸನ್ನು ಸಮಾಧಾನ ಪಡಿಸಿಕೊಳ್ಳಬೇಕಾಯಿತು.
ಟಾಮ್ ಹಾಂಕ್ಸ್ ಸುಧಾರಿಸಿಕೊಳ್ಳುವುದರಲ್ಲಿ ಇನ್ನೊಂದು ಘಟನೆ ಜರುಗಿತು. ಅಪ್ಪ ಕೆಲಸದ ಮೇಲೆ ಕುಟುಂಬ ಸಮೇತ ಊರೂರು ತಿರುಗಲಾರಂಭಿಸಿದ. ಪ್ರತಿ ಆರು ತಿಂಗಳಿಗೊಂದು ಊರು. ಕಡೆಗೆ ಟಾಮ್ ಹೈಸ್ಕೂಲು ಶಿಕ್ಷಣ ಮುಗಿಸುವಷ್ಟರಲ್ಲಿ ಕ್ಯಾಲಿಫೋರ್ನಿಯಾದ ಓಕ್ ಲ್ಯಾಂಡಿನಲ್ಲಿ ಕುಟುಂಬ ಬೀಡು ಬಿಡುತ್ತದೆ. ಅಲ್ಲಿ ಓದಿನ ಜೊತೆಗೆ ಟಾಮ್ ಕಡಲೆಬೀಜ ಮಾರುವುದು, ಸೋಡಾ ಮಾರುವುದು, ಹೋಟೆಲಿನಲ್ಲಿ ಬೆಲ್ ಮ್ಯಾನ್ ಆಗಿ ಕೆಲಸ ಮಾಡುವುದು – ಹೀಗೆ ಪಾರ್ಟೈಮಿನಲ್ಲಿ ಕೆಲಸ ಮಾಡತೊಡಗಿದ. ತನ್ನ ಶಾಲಾದಿನಗಳ ಬಗ್ಗೆ ಆತ ಹೇಳಿಕೊಳ್ಳುವುದು ಹೀಗೆ, "ನಾನು ಶಾಲೆಯನ್ನು ಇಷ್ಟಪಡುತ್ತಿದ್ದೆ. ಅದೆಷ್ಟೋ ಮಕ್ಕಳು ಶಾಲೆಗೆ ಗುಡ್ ಬೈ ಹೇಳುತ್ತಿದ್ದ ಆ ದಿನಗಳಲ್ಲಿ ಶಾಲೆ ನನ್ನ ಪಾಲಿಗೆ ಅದ್ಭುತ ಜಾಗವಾಗಿತ್ತು. ಅಲ್ಲಿ ಏನೋ ನಡೆಯುತ್ತಿದೆ, ಆ ಮೂಲಕ ನಾನೇನನ್ನೋ ಪಡೆದುಕೊಳ್ಳುತ್ತಿದ್ದೇನೆ ಎನಿಸುತ್ತಿತ್ತು. ನನ್ನ ಹೈಸ್ಕೂಲು ದಿನಗಳಲ್ಲಂತೂ ತಮಾಷೆ ಮಾಡುವ ಮೂಲಕ, ಜೋಕ್ಸ್ ಹೇಳುವ ಮೂಲಕ, ನಾಟಕಗಳಲ್ಲಿ ಪಾತ್ರ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸುತ್ತಿದ್ದೆ".
ನೇಪಥ್ಯದಲ್ಲೂ ಕೆಲಸ ಮಾಡುತ್ತಿದ್ದ ಟಾಮ್ ಒಬ್ಬ ಒಳ್ಳೆಯ ಸ್ಟೇಜ್ ಮ್ಯಾನೇಜರಾಗಿದ್ದ. ಆ ಮೂಲಕ ಎಲ್ಲೆಲ್ಲಿ ಏನೇನು ಸಾಧ್ಯವೋ ಎಲ್ಲವನ್ನೂ ಕಲಿಯುವ ತುಡಿತ ಹೊಂದಿದ್ದ. ಕಲೆಯ ಬಲೆಗೆ ನಿಧನಿಧಾನವಾಗಿ ಸಿಲುಕತೊಡಗಿದ್ದ ಟಾಮ್ ತನ್ನ ಓದನ್ನು ಅರ್ಧಕ್ಕೆ ಬಿಟ್ಟು 1977ರಲ್ಲಿ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯ ಥಿಯೇಟರ್ ಮೇಜರ್ ಆಗಿ ನೇಮಕವಾಗುತ್ತಾನೆ. ಮೂರ್ನಾಲ್ಕು ವರ್ಷಗಳ ಅಲ್ಲಿ ಪಳಗಿದ ಟಾಮ್, "ಅದೇ ನನ್ನ ಶಾಲೆ. ನಾನೇನಾದರು ಕಲಿತಿದ್ದರೆ ಅಲ್ಲೇ ಕಲಿತಿದ್ದು. ಜೊತೆಗೆ ಕೆಲಸ ಮಾಡುವ ರೀತಿ ರಿವಾಜುಗಳನ್ನೂ…' ಎಂದು ಹೇಳಿಕೊಳ್ಳುತ್ತಾನೆ. ಆ ದಿನಗಳಲ್ಲಿ ಆತ ನಟಿಸಿ ಸೈ ಎನಿಸಿಕೊಂಡ, ಪ್ರಶಸ್ತಿ ಪುರಸ್ಕಾರ ಪಡೆದುಕೊಂಡ ಅನೇಕ ನಾಟಕಗಳ ಪೈಕಿ 'ಟೇಮಿಂಗ್ ಆಫ್ ದಿ ಶ್ರ್ಯೂ', 'ದಿ ಟು ಜೆಂಟಲ್ ಮೆನ್ ಆಫ್ ವೆರೋನ' ಪ್ರಮುಖವಾದಂಥವು. ಆನಂತರವೇ ಟಾಮ್ ಗೆ ನಟಿ ಸಮಂತ ಲೆವೀಸ್ ಪರಿಯವಾಗುವುದು, ನ್ಯೂಯಾರ್ಕಿಗೆ ಹೋಗಿ ಒಟ್ಟಿಗೆ ಜೀವಿಸುವುದು, ಮೂರು ವರ್ಷಗಳ ನಂತರ ಇಬ್ಬರೂ ಮದುವೆಯಾಗಿ ಮೂರು ಮಕ್ಕಳಿಗೆ ಜನ್ಮವಿತ್ತು ಆಮೇಲೆ ವಿಚ್ಚೇದನ ಪಡೆಯುವುದು.
ಟಾಮ್ ನ್ಯೂಯಾರ್ಕಿನಲ್ಲಿದ್ದ ದಿನಗಳಲ್ಲಿ ಶೇಕ್ಸ್ ಪಿಯರ್ ಪ್ರೊಡಕ್ಷನ್ನಿನ ಅನೇಕ ನಾಟಕಗಳಲ್ಲಿ ನಟಿಸಿದ್ದ. ಆ ದಿನಗಳಲ್ಲೇ 'ಹೀ ನೋಸ್ ಯೂ ಆಲ್ ಅಲೋನ್' ಎಂಬ ಲೋ ಬಜೆಟ್ಟಿನ ಹಾರರ್ ಸಿನಿಮಾದ ಚೊಚ್ಚಲ ಬಾರಿಗೆ ಕ್ಯಾಮೆರಾ ಎದುರು ನಿಂತು ಪುಟ್ಟದೊಂದು ಪಾತ್ರ ಮಾಡಿದ್ದು. ಹಾಗೆ ನೋಡಿದರೆ ಆ ಚಿತ್ರದಲ್ಲಿ ಟಾಮ್ ನಿರ್ವಹಿಸಿದ್ದ ಪಾತ್ರ ಕೊಲೆಗೀಡಾಗಬೇಕಿತ್ತಂತೆ, ಎಡಿಟಿಂಗ್ ನಂತರ ಟಾಮ್ ನ ಅದ್ಭುತ ಪರ್ಫಾರ್ಮೆನ್ಸ್ ನೋಡಿದ ನಿರ್ದೇಶಕ ಟಾಮ್ ಮಾಡಿದ್ದ ಪಾತ್ರ ಮರ್ಡರ್ ಆಗುವ ದೃಶ್ಯವನ್ನು ಕಟ್ ಮಾಡಿದನಂತೆ! ನಂತರದ ದಿನಗಳಲ್ಲಿ ಲಾಸ್ ಏಂಜಲೀಸ್ ಗೆ ತೆರಳಿ 'ದಿ ಲವ್ ಬೋಟ್', 'ಬಾಸಮ್ ಬುಡ್ದೀಸ್', 'ಟ್ಯಾಕ್ಸಿ, 'ಹ್ಯಾಪಿ ಡೇಸ್', 'ಫ್ಯಾಮಿಲಿ ಟೈಸ್' ತರಹದ ಸೀರಿಯಲ್ ಗಳಲ್ಲಿ ನಟಿಸಿ ಜನಪ್ರಿಯನಾದ. ಈ ನಡುವೆ ಟಾಮ್ 'ಮೇಜಸ್ ಅಂಡ್ ಮೋನ್ ಸ್ಟರ್ಸ್' ಎಂಬ ಕಿರುತೆರೆಚಿತ್ರದಲ್ಲಿ ಮೇಜರ್ ರೋಲ್ ಮಾಡಿದ್ದರೂ ಹೆಸರು ತಂದು ಕೊಟ್ಟಿದ್ದು ಮಾತ್ರ 'ಸ್ಪ್ಲಾಶ್'. ಹಿರಿತೆರೆಯ ಈ ಚಿತ್ರ ಬಾಕ್ಸಾಫೀಸಿನಲ್ಲೂ ಭರ್ಜರಿ ಗೆಲುವು ಸಾಧಿಸಿತ್ತು. ಅದರ ಎಫೆಕ್ಟ್ ಎಂಬಂತೆ 'ಬ್ಯಾಚುಲರ್ ಪಾರ್ಟಿ', 'ದಿ ಮ್ಯಾನ್ ವಿತ್ ಒನ್ ರೆಡ್ ಶೂ', 'ವಾಲಂಟೀರ್ಸ್' ಬಗೆಯ ಸಿನಿಮಾಗಳು ಟಾಮ್ ನನ್ನು ಹುಡುಕಿಕೊಂಡು ಬಂದವು. 'ವಾಲಂಟೀರ್ಸ್' ಚಿತ್ರ ಗಣನೀಯಮಟ್ಟದಲ್ಲಿ ಟಾಮ್ ಗೆ ಸಕ್ಸಸ್ ತಂದುಕೊಡದಿದ್ದರೂ ರೀಟಾ ವಿಲ್ಸನ್ ಎಂಬ ಸಹನಟಿಯನ್ನು ಖಂಡಿತಾ ಕೊಟ್ಟಿತ್ತು. ಟಾಮ್ ರೀಟಾಳನ್ನು ಅಚ್ಚಿಕೊಂಡ. ಸಂಬಂಧವಿಟ್ಟುಕೊಂಡ. ಇನ್ನೇನು ಇವರಿಬ್ಬರು ಮದುವೆಯೇ ಆಗಿಬಿಟ್ಟರು ಅನ್ನುವಷ್ಟರಲ್ಲಿ "ರೀಟಾ ಮತ್ತು ನಾನು ಜಸ್ಟ್ ಒಬ್ಬರಿಗೊಬ್ಬರು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡೆವು. ಬೇಕಿದ್ದರೆ ಮದುವೆಯನ್ನೂ ಆಗಬಹುದಿತ್ತು. ಆ ಮದುವೆಯಿಂದ ಸಲಬ್ರೇಟ್ ಮಾಡುವಂಥಾದ್ದೇನೂ ಇರಲಿಲ್ಲ. ಆದರೆ ರಿಯಾಲಿಟಿ ಎಂದರೆ ಅದು ನಿಜಕ್ಕೂ ಕಷ್ಟದ ಮದುವೆ. ವಿಶೇಷವಾಗಿ ನನಗಿಬ್ಬರು ಮಕ್ಕಳಿದ್ದರು. ಪ್ರೀತಿಯ ಮಕ್ಕಳು" ಎಂದು ಹೇಳುವ ಮೂಲಕ ಟಾಮ್ ಆ ಮದುವೆ ವಿಷಯಕ್ಕೆ ತೆರೆ ಎಳೆಯುತ್ತಾನೆ. ಆಮೇಲೆ 1988ರಲ್ಲಿ ಇದೇ ರೀಟಾಳನ್ನು ಅಧಿಕೃತವಾಗಿ ಮದುವೆಯಾಗಿದ್ದು ಬೇರೆ ವಿಚಾರ.
1988ರಲ್ಲಿ ಬಿಡುಗಡೆಯಾದ 'ಬಿಗ್' ನಿಜಕ್ಕೂ ಟಾಮ್ ಗೆ ದೊಡ್ಡದೊಂದು ಬ್ರೇಕ್ ಕೊಟ್ಟಂಥ ಸಿನಿಮಾ. ಈ ಸಿನಿಮಾ ಬಾಕ್ಸಾಫೀಸಿನಲ್ಲಿ ಸೂಪರ್ ಹಿಟ್ ಆಗುವುದರ ಜೊತೆಗೆ ಟಾಮ್ ಒಬ್ಬ ಗಿಫ್ಟೆಡ್ ಆಕ್ಟರ್ ಎನ್ನುವ ಹಾಗೆ ಮಾಡುತ್ತದೆ.'ಬಿಗ್' ಮೂಲಕ ಟಾಮ್ ಮೊದಲ ಬಾರಿಗೆ ಆಸ್ಕರ್ ಅವಾರ್ಡಿಗೆ ನಾಮಿನೇಟಾಗುತ್ತಾನೆ. ಆ ಸಕ್ಸಸ್ಸಿನೊಂದಿಗೆ 'ದಿ ಬರ್ಬ್ಸ್', 'ಟರ್ನರ್ ಅಂಡ್ ಹೂಚ್', 'ರೇಡಿಯೋ ಫ್ಲೈಯರ್', 'ದಿ ಲೀಗ್ ಆಫ್ ದೇರ್ ಓನ್', 'ಸ್ಲೀಪ್ ಲೆಸ್ ಇನ್ ಸೀಟೆಲ್' ತರಹದ ಸಿನಿಮಾಗಳಲ್ಲಿ ನಟಿಸುತ್ತಾನೆ. 1993ರಲ್ಲಿ ತೆರೆಗೆ ಬಂದ 'ಫಿಲಾಡೆಲ್ಫಿಯಾ' ಟಾಮ್ ಹಾಂಕ್ಸ್ ಗೆ ಮೊದಲಸಲ ಆಸ್ಕರ್ ಅವಾರ್ಡ್ ತಂದುಕೊಟ್ಟ ಸಿನಿಮಾ. ಆ ಚಿತ್ರ ಹಾಗೂ ಪ್ರಶಸ್ತಿ ಟಾಮ್ ನ ವೃತ್ತಿಬದುಕಿಗೆ ಹೊಸ ತಿರುವು ನೀಡಿದ್ದರಲ್ಲಿ ಅಚ್ಚರಿ ಪಡಬೇಕಿಲ್ಲ. ಆವರೆಗಿನ ಟಾಮ್ ಬಗೆಗಿದ್ದ ಭರವಸೆ, ನಿರೀಕ್ಷೆ ವಿಶ್ವದೆಲ್ಲೆಡೆ ದ್ವಿಗುಣವಾಗತೊಡಗಿದವು. ಟಾಮ್ ರಾತ್ರೋರಾತ್ರಿ ಲೆಜೆಂಡ್ ಆಗತೊಡಗಿದ. ಒಂದು ಪ್ರತಿಷ್ಟಿತ ಪ್ರಶಸ್ತಿ ಒಬ್ಬ ವ್ಯಕ್ತಿಯ ಇಮೇಜನ್ನು ಹೇಗೆ ಬದಲಿಸಬಲ್ಲದು ಎಂಬುದನ್ನು ಅ ಪ್ರಶಸ್ತಿ ಟಾಮ್ ಮೂಲಕ ಮತ್ತೊಮ್ಮೆ ಜಗತ್ತಿಗೆ ಸಾರಿ ಹೇಳಿತ್ತು. ಅಂದಹಾಗೆ, ಪ್ರಶಸ್ತಿ ವಿಜೇತ ಟಾಮ್ ನ ಸಂತಸದ ಮಾತುಗಳಿವು: "ನಾನಿವತ್ತು ಈ ಮಟ್ಟಕ್ಕೆ ಬೆಳೆದಿರುವುದಕ್ಕೆ ಕಾರಣಕರ್ತರಾಗಿರುವ ಈವರೆಗೆ ನನ್ನೊಂದಿಗೆ ಸ್ಕ್ರೀನ್ ಹಂಚಿಕೊಂಡು ನನ್ನನ್ನು ಒಬ್ಬ ನಟನನ್ನಾಗಿಸಿದ ಎಲ್ಲರನ್ನೂ ಸ್ಮರಿಸುತ್ತೇನೆ. ಹಾಗೇನೆ ಪ್ರತಿ ದಿನ, ಪ್ರತಿಕ್ಷಣ ನನಗೆ ಪ್ರೀತಿಯುಣಿಸಿ, ನನ್ನ ಗೆಲುವನ್ನು ಆಶಿಸುತ್ತಿರುವ ಮಡದಿ ರೀಟಾಳನ್ನೂ ನೆನೆಯುತ್ತೇನೆ". 'ಫಾರೆಸ್ಟ್ ಗಮ್' ಎನ್ನುವ ರೊಮ್ಯಾಂಟಿಕ್ ಕಾಮಿಡಿ ಚಿತ್ರದ ಅಭಿನಯಕ್ಕಾಗಿ ಸತತವಾಗಿ ಮಾರನೇ ವರ್ಷವೂ ಟಾಮ್ ಆಸ್ಕರ್ ಅವಾರ್ಡ್ ಗೆದ್ದುಕೊಂಡು ದಾಖಲೆ ಬರೆದದ್ದು ಈಗ ಇತಿಹಾಸ ಎನ್ನುವುದು ಬೇರೆ ಮಾತು.
ಬಾಲ್ಯದಿಂದಲೂ ಖಗೋಳಶಾಸ್ತ್ರದ ಬಗ್ಗೆ ಆಸಕ್ತನಾಗಿದ್ದ ಟಾಮ್ ಮುಂದೊಂದು ದಿನ 'ಅಪೋಲೋ-13' ಎಂಬ ಚಿತ್ರದಲ್ಲಿ ಗಗನಯಾತ್ರಿ ಜಿಮ್ ಲೋವೆಲ್ ನ ಪಾತ್ರ ಮಾಡಿದ್ದು ಅಚ್ಚರಿಗಳಲ್ಲೊಂದು. 'ಅಪೋಲೋ-13' ಜೀರೋ ಗ್ರಾವಿಟಿಯಲ್ಲಿ ತಯಾರಿಸಿದ ಮೊದಲಚಿತ್ರ. ಈ ಚಿತ್ರಕ್ಕಾಗಿ 'ನಾಸಾ' ಸಂಸ್ಥೆ ಕೆಸಿ-135 ಎಂಬ ಏರ್ ಕ್ರಾಫ್ಟ್ ನೀಡಿದ್ದನ್ನೂ ಇಲ್ಲಿ ನೆನೆಯಬಹುದು. ಅಲ್ಲಿಂದಾಚೆಗೆ ಟಾಮ್ ಜೋಳಿಗೆಗೆ 'ಟಾಯ್ ಸ್ಟೋರಿ', 'ದಿ ಗ್ರೀನ್ ಮೈಲ್', 'ಸೇಯಿಂಗ್ ಪ್ರೈವೇಟ್ ರ್ಯಾನ್', 'ಯೂ ಹ್ಯಾವ್ ಗಾಟ್ ಮೇಲ್' ತರಹದ ಸಿನಿಮಾಗಳು ಸೇರುತ್ತದೆ. 'ಕಾಸ್ಟ್ ಅವೇ' ಟಾಮ್ ವೃತ್ತಿ ಬದುಕಿನಲ್ಲಿ ಮತ್ತೊಂದು ಕ್ಲಾಸ್ ಸಿನಿಮಾ. ಸ್ವತಃ ಟಾಮ್ ಹಾಂಕ್ಸ್ ಮೊಟ್ಟಮೊದಲಬಾರಿಗೆ ನಿರ್ಮಿಸಿದ ಈ ಚಿತ್ರ ಜಗತ್ತೇ ಬೆರಗಾಗುವಂತೆ ಮಾಡಿತ್ತು. ಕೆಲವೇ ಡೈಲಾಗ್ಸ್ ಇರುವ, ವಿಚಿತ್ರ ಪ್ರಯೋಗಾತ್ಮಕ ಚಿತ್ರ ಇದಾಗಿದ್ದು ಹೀಗೂ ಸಿನಿಮಾ ಮಾಡಬಹುದಾ? ಅಂತ ಎಲ್ಲರೂ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದು ಸುಳ್ಳಲ್ಲ. ಫೆಡರಲ್ ಎಕ್ಸ್ ಪ್ರೆಸ್ ಕೊರಿಯರ್ ಸಂಸ್ಥೆಯ ಉದ್ಯೋಗಿ ಪಾತ್ರದಲ್ಲಿ ಟಾಮ್ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದ. ಇಂತಹ ಅಪರೂಪದ ಚಿತ್ರದ ಬಗ್ಗೆ ಟಾಮ್ ಹೇಳುವುದಿಷ್ಟು : 'ಕಾಸ್ಟ್ ಅವೇ' ಚಿತ್ರದ ಮೇಲೆ ಕೆಲಸ ಮಾಡಲು ಶುರು ಮಾಡುತ್ತಿದ್ದಂತೆಯೇ ನನಗೆ ಫ಼ನ್ನಿ ಅನ್ನಿಸಲು ಶುರುವಾಗಿತ್ತು. ಮನುಷ್ಯನೊಬ್ಬ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ದ್ವೀಪವೊಂದರಲ್ಲಿ ಏಕಾಂಗಿಯಾಗಿ ಕಾಲ ಕಳೆಯುವ ಕಾನ್ಸೆಪ್ಟ್ ಎಂಥ ತಮಾಷೆಯದು ಅನ್ನಿಸದೆ ಇರಲಿಲ್ಲ. ನಾಲ್ಕು ಮಕ್ಕಳು, ಒಬ್ಬ ಹೆಂಡತಿಯುಳ್ಳ ನನಗೆ ಆ ಚಿತ್ರವು ಒಂದು ಪರೀಕ್ಷೆಯೇ ಆಗಿತ್ತು".
ಈ ನಡುವೆ ಸ್ಟೀವನ್ ಸ್ಪಿಲ್ ಬರ್ಗ್ ಜೊತೆ ಪಾಲುದಾರಿಕೆಯಲ್ಲಿ ಎಚ್.ಬಿ.ಓ. ಚಾನೆಲ್ಲಿಗಾಗಿ 'ಬ್ಯಾಂಡ್ ಆಫ್ ಬ್ರದರ್ಸ್' ಮಿನಿಸೀರೀಸ್ ನಿರ್ಮಾಣಕ್ಕೆ ಕೈ ಹಾಕಿ ಅಲ್ಲಿಯೂ ಜಯ ದಾಖಲಿಸಿದ ಟಾಮ್ ಹಾಂಕ್ಸ್ 'ರೋಡ್ ಟು ಪರ್ಡೀಶನ್', 'ಕ್ಯಾಚ್ ಮಿ ಇಫ್ ಯೂ ಕೆನ್', 'ದಿ ಲೇಡಿ ಕಿಲ್ಲರ್ಸ್', 'ದಿ ಟರ್ಮಿನಲ್', 'ದಿ ಪೋಲಾರ್ ಎಕ್ಸ್ ಪ್ರೆಸ್' ಬಗೆಯ ಸಿನಿಮಾಗಳ ಮುಖೇನ ತನ್ನೊಳಗಿನ ಎಂತಹ ಪಾತ್ರಕ್ಕೂ ಒಗ್ಗುವ, ಒಪ್ಪುವ ಕಲಾವಿದನನ್ನು ಜಗತ್ತಿನೆದುರು ತೆರೆದಿಟ್ಟ. ಹೀಗೆ ತನ್ನೊಳಗಿನ ಪ್ರತಿಭೆಯಿಂದ ಆಗಾಗ ಪವಾಡಗಳನ್ನು ಮಾಡುವ ಟಾಮ್ 2006ರಲ್ಲಿ ಹೊಸದೊಂದು ಪವಾಡ ಮಾಡಿದ್ದನ್ನು ಜ್ಞಾಪಿಸಿಕೊಳ್ಳದಿದ್ದರೆ ಹೇಗೆ? ಆ ಪವಾಡವೇ ವಿವಾದಾತ್ಮಕ ಸಿನಿಮಾ 'ದಿ ಡ ವಿಂಚಿ ಕೋಡ್'. ಡಾನ್ ಬ್ರೌನ್ ನ ಕೃತಿಯನ್ನು ಆಧರಿಸಿದ್ದ ಈ ಚಿತ್ರ ಎಲ್ಲೆಡೆ ವಿವಾದ ಉಂಟುಮಾಡಿತ್ತು. ಕಟುವಿಮರ್ಶೆಗೂ ಗುರಿಯಾಗಿತ್ತು. ಅದೇ ರೀತಿ ಗಲ್ಲಾಪೆಟ್ಟಿಗೆಯನ್ನೂ ತುಂಬಿಸಿದ್ದು ಮತ್ತೂ ವಿಶೇಷ. 2007ರಲ್ಲಿ ಟಾಮ್ ಮಾಡಿದ ಮತ್ತೊಂದು ವಿವಾದಾತ್ಮಕ ಸಿನಿಮಾ ಎಂದರೆ 'ಚಾರ್ಲಿ ವಿಲ್ಸನ್ಸ್ ವಾರ್'. ಬರಹಗಾರ ಜಾರ್ಜ್ ಕ್ರೈಲನ ಕೃತಿ ಆಧಾರಿತ ಈ ಚಿತ್ರದಲ್ಲಿ ಟಾಮ್ ಹಾಂಕ್ಸ್ ಮಾಡಿದ್ದು ಯು.ಎಸ್. ಕಾಂಗ್ರೆಸ್ಸಿಗ ಚಾರ್ಲಿ ವಿಲ್ಸನ್ ನ ಪಾತ್ರ. ರಾಜಕೀಯ ವಸ್ತುವುಳ್ಳ ಈ ಚಿತ್ರದಲ್ಲಿ ಟಾಮ್ ಮತ್ತೊಮ್ಮೆ ಅದ್ಭುತ ಪರ್ಫಾರ್ಮೆನ್ಸ್ ನೀಡಿದ್ದನ್ನು ಯಾರೂ ಮರೆಯುವಂತಿಲ್ಲ.
ನಟನೆಯ ಜೊತೆಜೊತೆಗೆ ನಿರ್ಮಾಣದಲ್ಲಿಯೂ ಮತ್ತಷ್ಟು ಗಂಭೀರವಾಗಿ ತೊಡಗಿಕೊಂಡ ಟಾಮ್ ತನ್ನ ಮಗ ಕಾಲಿನ್ ಹಾಂಕ್ಸ್ ಗಾಗಿ 'ದಿ ಗ್ರೇಟ್ ಬಕ್ ಹೊವಾರ್ಡ್' ಎಂಬ ಚಿತ್ರವನ್ನು ಮಡದಿ ರೀಟಾ ಒಡಗೂಡಿ ನಿರ್ಮಿಸುವುದರ ಜೊತೆಗೆ ಅತಿಥಿ ನಟನಾಗಿ ಒಂದು ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದ. ಈತನಿಗಿದ್ದ ನಿರ್ಮಾಣದ ಆಸಕ್ತಿ ಹಾಗೇ ಮುಂದುವರಿಸಿದು 'ಜಾನ್ ಆಡಮ್ಸ್' ಎಂಬ ಮಿನಿಸೀರೀಸ್ ಅನ್ನು ಎಚ್.ಬಿ.ಓ. ಚಾನೆಲ್ಲಿಗೆ ನಿರ್ಮಿಸಿದ. ಪ್ರಖ್ಯಾತ ಲೇಖಕ ಡೇವಿಡ್ ಮೆಕ್ಯುಲೋ ಬರೆದಿರುವ ಯುನೈಟೆಡ್ ಸ್ಟೇಟ್ಸ್ ನ ದ್ವಿತೀಯ ಅಧ್ಯಕ್ಷ ಜಾನ್ ಆಡಮ್ಸ್ ಜೀವನಾಧಾರಿತ ಕೃತಿಯಿದು. ಈ ಬಾರಿಯೂ ಟಾಮ್ ಹಾಂಕ್ಸ್ ಪ್ರಶಂಸೆಗೆ ಒಳಗಾಗುವುದಳಲ್ಲದೆ ಅನೇಕ ಪ್ರಶಸ್ತಿಗಳನ್ನೂ ಗಳಿಸಿದ. ಟಾಮ್ ಮತ್ತೊಮ್ಮೆ ಡಾನ್ ಬ್ರೌನ್ ಕಾದಂಬರಿಯಾಧಾರಿತ ಸಿನಿಮಾದಲ್ಲಿ ನಟಿಸಿದ್ದು 'ಏಂಜಲ್ಸ್ ಅಂಡ್ ಡೆಮೋನ್ಸ್' ಚಿತ್ರದ ಮೂಲಕ. ನಂತರದ ದಿನಗಳಲ್ಲಿ 'ಎಕ್ಸ್ ಟ್ರೀಮ್ಲಿ ಲೌಡ್ ಅಂಡ್ ಇನ್ ಕ್ರೆಡಿಬ್ಲಿ ಕ್ರೌಡ್', 'ಕ್ಲೌಡ್ ಅಟ್ಲಾಸ್', 'ಕ್ಯಾಪ್ಟನ್ ಪಿಲಿಪ್ಸ್', 'ಸೇವಿಂಗ್ ಮಿ. ಬ್ಲ್ಯಾಂಕ್ಸ್' ಚಿತ್ರಗಳಲ್ಲಿ ಕಾಣಿಸಿಕೊಂಡ ಟಾಮ್ ಪ್ರತಿ ಚಿತ್ರದಲ್ಲಿಯೂ ತನ್ನದೇ ಆದ ಛಾಪನ್ನು ಮೂಡಿಸುತ್ತಾ ಬಂದವನು. ಈ ಪಾತ್ರಕ್ಕೆ ಈತನೇ ಕರೆಕ್ಟ್ ಅನ್ನಿಸುವಂತೆ ನಟಿಸಿ, ಭೇಷ್ ಎನಿಸಿಕೊಂಡವನು. ಇಂತಹ ಅಪರೂಪದ ಕಲಾವಿದ ಟಾಮ್ ನ ಮುಂದಿನ ಚಿತ್ರ 'ಎ ಹಾಲೋಗ್ರಾಮ್ ಫಾರ್ ದಿ ಕಿಂಗ್' 2015ರಲ್ಲಿ ಬಿಡುಗಡೆಯಾಗಲಿದೆ.
ಇಷ್ಟೆಲ್ಲಾ ಬರೆದ ನಂತರವೂ ಟಾಮ್ ಹಾಂಕ್ಸ್ ಪೂರ್ತಿ ದಕ್ಕಿದಂತಾಗುವುದಿಲ್ಲ. ಬೆಣ್ಣೆಯ ಮುದ್ದೆಯಂತಿರುವ, ಅಪ್ಪಟ ಕಲಾವಿದನಂತಿರುವ ಈ ಕ್ರಿಯಾಶೀಲಜೀವಿಯ ಅಪರೂಪದ ಸೆಳೆತದ ರಹಸ್ಯವೇನು? ಇಡೀ ಲೋಕದ ಸಿನಿಪ್ರಿಯರು 'ಟಾಮ್ ಥರದ, ಟಾಮ್ ಮಾತ್ರ ಮಾಡಬಹುದಾದ ಪಾತ್ರಗಳನ್ನು ಮಾಡಬಲ್ಲ ಮತ್ತೊಬ್ಬ ನಟನನ್ನು ಈತನ ಜಾಗದಲ್ಲಿ ಕಲ್ಪಿಸಿಕೊಳ್ಳುವುದು ಕಷ್ಟ' ಎಂದು ಉಚ್ಚರಿಸುವುದು ಯಾಕಿರಬಹುದು? ಈತನಿಗೆ ತಾನು ಮಾಡುವ ಕೆಲಸದ ಮೇಲಿರುವ ಶ್ರದ್ಧೆ, ಪ್ರಾಮಾಣಿಕತೆ, ಸಿದ್ಧತೆ, ಪಕ್ವತೆಯೇ ಇದಕ್ಕೆಲ್ಲ ಕಾರಣವಿರಬಹುದು. ಈತನ ಬದುಕಿನ ಹಿಂದೆ ಸ್ಫೂರ್ತಿಯಾಗಿ ನಿಂತ ಮಡದಿ ರೀಟಾ, ಮಕ್ಕಳ ಪ್ರೀತಿ, ಆದಮ್ಯ ಜೀವನಪ್ರೇಮ- ಕಣ್ಣು, ನಿಲುವು, ಸಹಜ ರೂಪ, ಅಂಗ ಸೌಷ್ಠವ- ಈತನಿಗೆ ಒಲಿದಿದೆ. ಹಾಲಿವುಡ್ ನಲ್ಲಿ ನಟರಿಗೇನೂ ಬರವಿಲ್ಲ. ಆದರೆ ಎಲ್ಲರೂ ಟಾಮ್ ಹಾಂಕ್ಸ್ ಆಗಲು ಸಾಧ್ಯವಿಲ್ಲ.
-ಹೃದಯಶಿವ
****
Super shivanna!
Cast away ಚಿತ್ರವನ್ನು ನೋಡಿದ್ದ ನನಗೆ ಈ ನಟನ ಬಗ್ಗೆ ಗೊತ್ತಿರಲಿಲ್ಲ. ಅದ್ಭುತ
ಟಾಮ್ ಹ್ಯಾನ್ಕ್ಸ್ ಬಗ್ಗೆ ಒಳ್ಳೆ ಬರಹ..
'ಕಾಸ್ಟ್ ಅವೇ' ಸಿನೆಮ ಬಗ್ಗೆ ನಾ ಒ೦ದು ಬರಹ ಬರೆದಿರುವೆ..
http://bit.ly/1vTIH3U
ಶುಭವಾಗಲಿ
\|/
ವೆ೦ಕಟೀಶ ಮಡಿವಾಳ ಬೆ೦ಗಳುರು