ನಮ್ಮ ಲ್ಯಾಬಿಗೆ ನಾನು ಆಗಷ್ಟೇ ಸೇರಿದ್ದ ದಿನಗಳವು. ಆ ದಿನಗಳಲ್ಲಿ ಒಂದು ದಿನ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ನಮ್ಮ ಲ್ಯಾಬಿಗೆ ಬಂದಿದ್ದ. ಅವನು ಯಾರಿರಬಹುದು ಎಂದು ನನ್ನ ಮನಸ್ಸಿನಲ್ಲಿ ಪ್ರಶ್ನೆಗಳು ಮೂಡುತ್ತಿರುವಾಗಲೇ “ಈತ ನಮ್ಮ ಲ್ಯಾಬಿನ ಟೆಕ್ನಿಕಲ್ ಸ್ಟಾಫ್” ಎಂದು ನಮ್ಮ ಗೈಡ್ ನನಗೆ ಅವನನ್ನು ಪರಿಚಯಿಸಿದ್ದರು. “ಹಾಯ್” ಎಂದು ನಾನು ನಗು ಮುಖದಿಂದ ಆ ವ್ಯಕ್ತಿಯ ಕೈಕುಲುಕಿದ್ದೆ. ಆತನು ಸಹ ಮುಗುಳ್ನಗುತ್ತಾ ನನ್ನ ಕೈ ಕುಲುಕಿದ್ದ. ಅವತ್ತು ಲ್ಯಾಬಿನಲ್ಲಿ ಸ್ವಲ್ಪ ಜಾಸ್ತಿ ಕೆಲಸ ಇದ್ದ ಕಾರಣ ನನ್ನ ಜೊತೆ ಆತ ನನ್ನ ಕೆಲಸದಲ್ಲಿ ಸಹಾಯ ಮಾಡಲು ನಿಂತಿದ್ದ. ಕೆಲಸದ ಮಧ್ಯೆ ಮಾತನಾಡುತ್ತಾ “ನೀವು ನಮ್ಮ ಟೆಕ್ನಿಕಲ್ ಸ್ಟಾಫ್ ಅಂದ್ರು ಮೇಡಂ. ಆದ್ರೆ ನಿಮ್ಮನ್ನು ನಮ್ಮ ಲ್ಯಾಬಿನಲ್ಲಿ ನಾನು ಯಾವತ್ತೂ ನೋಡೇ ಇಲ್ಲವಲ್ಲ” ಎಂಬ ನನ್ನ ಪ್ರಶ್ನೆಗೆ “ನಾನು ಕೆಲಸಕ್ಕೆ ತುಂಬಾ ದಿನದಿಂದ ಬಂದಿರಲಿಲ್ಲ” ಎಂದಿದ್ದ. “ಯಾಕೆ ಉಷಾರಿರಲಿಲ್ಲವಾ?” ಎಂದಿದ್ದಕ್ಕೆ “ಇಲ್ಲಾ.. ಐ ವಾಸ್ ಎ ಡ್ರಗ್ ಅಡಿಕ್ಟ್” ಎಂದು ನಗುತ್ತಾ ಹೇಳಿದ್ದ. ನನಗೆ ಆತನ ಮಾತು ಕೇಳಿ ಒಂತರಾ ಶಾಕ್ ಆದರೂ ಅವನ ಪ್ರಾಮಾಣಿಕತನ ತುಂಬಿದ ಮಾತಿಗೆ ಯಾಕೋ ಮೂಕನಾಗಿದ್ದೆ. ಆ ದಿನ ಜೊತೆಯಲ್ಲಿಯೇ ಕೆಲಸ ಮಾಡುತ್ತಾ ಮಧ್ಯೆ ಮಧ್ಯೆ ಮಾತನಾಡುತ್ತಾ ನಾನು ಮತ್ತು ಆತ ಸಮಯ ಕಳೆದಿದ್ದವು. ಆ ದಿನದ ನಂತರ ನಮ್ಮ ಗೈಡ್ ಆತನನ್ನು ನನ್ನ ವಶಕ್ಕೆ ಒಪ್ಪಿಸಿದ್ದರಿಂದ ಆತ ಲ್ಯಾಬಿಗೆ ಬಂದರೆ ನನ್ನ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುವುದು ಅವನ ನಿತ್ಯದ ದಿನಚರಿಗಳಲ್ಲೊಂದಾಗಿತ್ತು. ನಮ್ಮಿಬ್ಬರ ನಡುವೆ ನಿತ್ಯ ಕೆಲಸದ ಜೊತೆ ಮಾತು ಹರಟೆ ಇದ್ದೇ ಇರುತ್ತಿತ್ತು. ಸುಮಾರು ನಾಲ್ಕು ವರ್ಷಗಳಿಂದಲೂ ನಾವು ಮಾತನಾಡಿದ ಮಾತುಗಳ ತುಣುಕುಗಳು ಸಾರಾಂಶಗಳು ಇಗೋ ನಿಮಗಾಗಿ..
ನಮ್ಮ ಕಥಾನಾಯಕನ ವಯಸ್ಸು ಈಗ ಸುಮಾರು 45 ವರ್ಷಗಳಿರಬಹುದು. ಓದಿರೋದು 12 ನೇ ತರಗತಿ. ಚಿಕ್ಕ ವಯಸ್ಸಿನಲ್ಲಿ ಅಪ್ಪನನ್ನು ಕಳೆದುಕೊಂಡ ಕಾರಣ ಅಪ್ಪನ ಕೆಲಸ ಆತನಿಗೆ ಬಂದಿದೆ. ಅವನು ನಮ್ಮ ಲ್ಯಾಬಿನಲ್ಲಿ ಕೆಲಸಕ್ಕೆ ಸೇರಿದಾಗ ಆತನ ವಯಸ್ಸು 18 ವರ್ಷ ಆಗಿತ್ತಂತೆ. ಕಾಲೇಜಿನಲ್ಲಿ ಓದಿಕೊಂಡಿದ್ದವನಿಗೆ ಮೊದಮೊದಲಿಗೆ ಹೊಸ ಕೆಲಸ, ಆಫೀಸು, ಜವಾಬ್ದಾರಿಗಳೆಲ್ಲಾ ಒಂತರಾ ಬೇಸರದ ಸಂಗತಿಗಳಂತೆ ಕಂಡಿದ್ದವಂತೆ. ಆ ಬೇಸರದ ದಿನಗಳಲ್ಲಿ ಆಫೀಸಿನ ಕೆಲಸ ಮುಗಿಸಿ ಎಂದಿನಂತೆ ಸಂಜೆ ಗೆಳೆಯರ ಜೊತೆ ಸೇರುತ್ತಿದ್ದನಂತೆ. ಒಮ್ಮೆ ಹಾಗೆಯೇ ಗೆಳೆಯರ ಜೊತೆ ಸೇರಿದಾಗ ಎಲ್ಲರೂ ಬ್ರೌನ್ ಸುಗರ್ ಸೇವಿಸಿದ್ದರಂತೆ. ಅವನ ಡ್ರಗ್ ಪಯಣ ಶುರುವಾಗಿದ್ದೇ ಹೀಗಂತೆ.. ಆ ದಿನದಿಂದ ಡ್ರಗ್ ಅವನ ಪಂಚಪ್ರಾಣವಾಗಿಬಿಟ್ಟಿತ್ತಂತೆ. ಅವನ ಡ್ರಗ್ ಮೇಲಿನ ಪ್ರೀತಿಗೆ ಒಂದೆರಡು ಗ್ರಾಂ ಡ್ರಗ್ ಕೊಳ್ಳಲು ಇಡೀ ತಿಂಗಳ ಸಂಬಳವನ್ನು ಸುರಿದು ಕೊಂಡು ಕೊಂಡ ಡ್ರಗ್ ಅನ್ನು ಒಂದೆರಡು ದಿನಗಳಲ್ಲಿ ಖಾಲಿ ಮಾಡಿಬಿಡುತ್ತಿದ್ದನಂತೆ. ಅವನು ಯಾವ ಬಗೆಯ ಅಡಿಕ್ಟ್ ಆಗಿದ್ದನಂತೆ ಎಂದರೆ ಒಮ್ಮೊಮ್ಮೆ ಲ್ಯಾಬಿನಲ್ಲಿಯೇ ಸಿರಿಂಜ್ ಚುಚ್ಚಿಕೊಂಡು ಕುಳಿತಿರುತ್ತಿದ್ದ ದೃಶ್ಯ ನೋಡಿ ಅಂದಿನ ಲ್ಯಾಬ್ ಎಚ್ಓಡಿ ಭಯಪಟ್ಟಿದ್ದರಂತೆ. ಅವನ ಬಳಿ ಡ್ರಗ್ ತೆಗೆದುಕೊಳ್ಳಲು ದುಡ್ಡಿಲ್ಲ ಅಂದ್ರೆ ಲ್ಯಾಬಿನಲ್ಲಿರೋ ಆಲ್ಕೋಹಾಲ್ ಬಾಟಲ್ ಗಳನ್ನೇ ಹಾಗೆ ಕುಡಿದುಬಿಡುತ್ತಿದ್ದನಂತೆ. ಅವನಿಗೆ ಕಾಣದಂತೆ ಆಲ್ಕೋಹಾಲ್ ಬಾಟಲ್ ಗಳನ್ನು ಲಾಕರ್ ನಲ್ಲಿ ಇಡುತ್ತಿದ್ದರಂತೆ. ಹೀಗೆ ಎಷ್ಟೋ ಸಾರಿ ಈ ತರಹ ತನ್ನ ಕಥೆಯನ್ನು ಆ ದಾದಾ ನನಗೆ ಹೇಳುವಾಗ ಅವನ ಮಾತುಗಳ ಕೇಳಿ ನಗು ಬಂದರೂ ಮನದ ಮೂಲೆಯಲ್ಲಿ ಅವನ ಕಥೆ ಕೇಳಿ ಅಯ್ಯೋ ಪಾಪ ಎನಿಸುತ್ತಿತ್ತು.
“ನಟ್ಟು, ಒಬ್ಬೊಬ್ಬರ ಚಾಯ್ಸ್ ಆಫ್ ಕೆಮಿಕಲ್ ಬೇರೆ ಇರುತ್ತೆ. ನನಗೆ ವೈಟ್ ಸುಗರ್ ಅಂದ್ರೆ ಇಷ್ಟ. ಕೆಲವರಿಗೆ ಆಲ್ಕೋಹಾಲ್ ಎಂದರೆ ಇಷ್ಟ. ಇನ್ನೂ ಕೆಲವರಿಗೆ ಗಾಂಜಾ, ಆಫೀಮು, ಏನೇನೋ ಇಷ್ಟ ಆಗುತ್ತೆ. ಅವರ ಇಷ್ಟದ ಕೆಮಿಕಲ್ ಪಡೆಯಲು ಒಬ್ಬ ಅಡಿಕ್ಟ್ ಏನ್ ಬೇಕಾದ್ರು ಮಾಡ್ತಾನೆ. ಉದಾಹರಣೆಗೆ ಡ್ರಗ್ ತೆಗೆದುಕೊಳ್ಳೋಕೆ ದುಡ್ಡಿಲ್ಲದಿದ್ದಾಗ ನಾನೇ ನನ್ನ ತಾಯಿಯ ಎಷ್ಟೋ ಒಡವೆಗಳನ್ನು ಕದ್ದು ಮಾರಿಬಿಟ್ಟಿದ್ದೇನೆ. ಒಡವೆಗಳು ಎಲ್ಲೋ ಕಾಣ್ತಾ ಇಲ್ಲ ಅಂತ ನನ್ನ ತಾಯಿ ಕೇಳಿದ್ರೆ ಆಗೆಲ್ಲಾ ಎಂತೆಂಥ ಸುಳ್ಳುಗಳನ್ನು ಹೇಳಿಬಿಟ್ಟಿದ್ದೇನೆ. ಒಬ್ಬ ಅಡಿಕ್ಟ್ ಸುಳ್ಳು ಹೇಳೋದರಲ್ಲಿ ಎತ್ತಿದ ಕೈ. ಯಾಕೋ ಏನೋ ಗೊತ್ತಿಲ್ಲ ಯಾವ ದೇವರ ಮೇಲೆ ಆಣೆ ಮಾಡಿಸಿದ್ರೂ ಹಿಂದೆ ಮುಂದೆ ನೋಡದೆ ಸುಳ್ಳು ಹೇಳಿಬಿಡ್ತಾ ಇದ್ದೆ. ಆದ್ರೆ “ನೀನು ದುಡ್ಡು ಕದ್ದಿಲ್ಲ ಅಂತ ನನ್ನ ಮೇಲೆ ಆಣೆ ಮಾಡಿ ಹೇಳು” ಅಂತ ನಮ್ಮಮ್ಮ ಹೇಳಿದರೆ ಮಾತ್ರ ಯಾಕೋ ಅವಳ ಮೇಲೆ ಆಣೆ ಮಾಡೋಕೆ ನನಗೆ ಆಗ್ತಾ ಇರಲಿಲ್ಲ. ಅವಳಿಗೆ ನಾನೇ ಕದ್ದಿದ್ದು ಅಂತ ನಿಜ ಹೇಳಿ ಬಿಡ್ತಾ ಇದ್ದೆ.
ಒಂದಿನ ದುರ್ಗಾ ಪೂಜೆ ಸಮಯದಲ್ಲಿ ನನ್ನ ಫ್ರೆಂಡ್ ಒಬ್ಬನ ಮನೆಗೆ ಹೋಗಿದ್ದೆ. ನಾನು ಅವನ ಏರಿಯಾಗೆ ಹೋದಾಗಲೆಲ್ಲಾ ಒಂದು ಹುಡುಗಿ ನನ್ನನ್ನೇ ನೋಡ್ತಾ ಇರ್ತಾ ಇದ್ದಳು. ಅವತ್ತೂ ಅವಳು ಹಾಗೆಯೇ ನನ್ನನ್ನೇ ನೋಡ್ತಾ ಇದ್ದಳು. ನಾನು ಹತ್ತಿರ ಹೋದವನೇ “ಕೀ ಬೀಯೆ ಕೊರ್ಬೀ (ಏನ್ ಮದುವೆ ಆಗ್ತೀಯ)” ಎಂದಿದ್ದೆ. ಅವಳು ನಾಚಿ ತಲೆ ತಗ್ಗಿಸಿದ್ದಳು. ಮಾರನೆಯ ದಿನ ಹತ್ತಿರದ ದೇವಸ್ಥಾನ ಒಂದರಲ್ಲಿ ಅವಳನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಹೋಗಿದ್ದೆ. ನನ್ನ ಹುಚ್ಚಾಟಗಳ ನೋಡಿದ್ದ ನಮ್ಮ ತಾಯಿ ಯಾರದೋ ಮನೆ ಹುಡುಗಿಯನ್ನು ಕಿಡ್ನಾಪ್ ಮಾಡಿಕೊಂಡು ಬಂದಿದ್ದಾನೆ ಎಂದು ನನ್ನ ಹೆಂಡತಿಯನ್ನು ವಾಪಾಸ್ಸು ಅವಳ ಮನೆಗೆ ಕರೆದುಕೊಂಡು ಹೋಗಿದ್ದರು. ಆಮೇಲೆ ನಮ್ಮ ಮದುವೆ ಆಗಿದೆ ಎಂದು ತಿಳಿದ ಮೇಲೆ ನನ್ನ ಹೆಂಡತಿಯನ್ನು ನಮ್ಮ ತಾಯಿ ಮನೆಗೆ ಸೇರಿಸಿಕೊಂಡಿದ್ದರು. ನನ್ನನ್ನು ಲಿಟರಲಿ ಮನೆಯಿಂದ ಹೊರಗೆ ಹಾಕಿದ್ದರು. ನನಗಾಗ ಮದುವೆ ಆಗಿದ್ರೂ ಡ್ರಗ್ ತಗೋಳೋದು ನಿಂತಿರಲಿಲ್ಲ. ಹೇಗೋ ಲೈಫ್ ನಡೀತ ದಿನಗಳು ಕಳೆದಂತೆ ಎರಡು ಹೆಣ್ಣು ಮಕ್ಕಳಾದವು. ಆಫೀಸಿಗೆ ಹೋಗುತ್ತಿದ್ದಾಗ ನನ್ನ ತಾಯಿ ಸಂಬಳದ ದಿನ ಬಂದು ನನ್ನ ಸಂಬಳವನ್ನು ತೆಗೆದುಕೊಂಡು ನನ್ನ ಖರ್ಚಿಗೆ ಒಂದಷ್ಟು ಹಣ ನೀಡ್ತಾ ಇದ್ರು. ನನ್ನ ಸಂಬಳ ನಮ್ಮ ಮನೆಯವರು ತೆಗೆದುಕೊಂಡರೆ ನಾನ್ಯಾಕೆ ಕೆಲಸ ಮಾಡಬೇಕು ಅನಿಸ್ತು. ಕೆಲಸಕ್ಕೆ ಹೋಗೋದನ್ನು ನಿಲ್ಲಿಸಿಬಿಟ್ಟಿದ್ದೆ.
ಒಟ್ಟು ಹತ್ತು ವರ್ಷ ಆಫೀಸಿಗೆ ಹೋಗದೆ ಹಾಗೆಯೇ ಕಾಲ ಕಳೆದೆ. ನಾನು ಕೆಲಸಕ್ಕೆ ಹೋಗದ ಕಾರಣ ಮನೆಯಲ್ಲಿ ಊಟಕ್ಕೂ ತೊಂದರೆಯಾಗುವ ಸ್ಥಿತಿ ಬಂದುಬಿಟ್ಟಿತು. ಮಕ್ಕಳನ್ನು ಸ್ಕೂಲಿಗೆ ಸೇರಿಸಬೇಕಾಗಿತ್ತು. ನನ್ನ ತಾಯಿ ಮತ್ತು ಹೆಂಡತಿ ಹೇಗೋ ಸಂಸಾರ ನಡೆಸುತ್ತಾ ಇದ್ದರು. ನನಗೆ ಸಂಸಾರದ ಪರಿಜ್ಞಾನವೇ ಇಲ್ಲದ ಹಾಗೆ ಡ್ರಗ್ ತೆಗೆದುಕೊಂಡು ಅಲ್ಲಿ ಇಲ್ಲಿ ಕಾಲ ತಳ್ಳುತ್ತಿದ್ದೆ. ಒಂದಿನ ಮನೆಗೆ ಹೋದಾಗ ನನ್ನ ಮಕ್ಕಳಿಬ್ಬರ ಮುಖ ನೋಡಿ ಯಾಕೋ ಕರುಳು ಚುರಕ್ ಎಂದಿತು. ಅವತ್ತೇ ಹೋಗಿ ನನಗೆ ಗೊತ್ತಿದ್ದ ಹತ್ತಿರದ ರಿಯಾಬಿಲೇಷನ್ ಸೆಂಟರ್ ಗೆ ಸೇರಿದೆ. ಅಲ್ಲಿ ಒಂದು ವಾರ ಇದ್ದೆ ಅಷ್ಟೆ. ಅಲ್ಲಿ ಏನೇನೋ ಔಷಧಿ ಕೊಟ್ಟು ನನಗೆ ಕೌಂಸಿಲಿಂಗ್ ಮಾಡಿದ್ರು ಆಮೇಲೆ ಮತ್ತೆ ಡ್ರಗ್ ತಗೋಬಾರದು ಅನಿಸ್ತು.
ಡ್ರಗ್ ನ ಬಿಟ್ಟು ಬಿಡೋದು ಅಷ್ಟು ಸುಲಭದ ಕೆಲಸ ಅಲ್ಲ. ಯಾವುದೇ ನಶೆಯಿರುವ ವ್ಯಕ್ತಿಯಾಗಲಿ ಇವತ್ತೊಂದು ದಿನ ಮಜಾ ಮಾಡಿ ನಾಳೆಯಿಂದ ಬಿಟ್ಟುಬಿಡೋಣ ಅಂದುಕೊಳ್ತಾನೆ. ಆದರೆ ಆ ನಾಳೆ ಅನ್ನೋದು ಅವನ ಪಾಲಿಗೆ ಯಾವತ್ತಿಗೂ ಬರಲ್ಲ. ಅದಕ್ಕೆ ನಾನು ಫೋಲೋ ಮಾಡಿದ ರೂಲ್ಸ್ ಅಂದ್ರೆ ಇವತ್ತು ನಾನು ಡ್ರಗ್ಸ್ ತೆಗೆದುಕೊಳ್ಳಲ್ಲ ಅಂತ. ದೇವರ ದಯೆಯಿಂದ ನಾನು ಕಳೆದ ಎಂಟು ವರ್ಷಗಳಿಂದ ಮತ್ತೆ ಡ್ರಗ್ ಮುಟ್ಟಿಲ್ಲ. ದಿನ ಬೆಳಿಗ್ಗೆ ಎದ್ದಾಗ ಇವತ್ತು ನಾನು ಡ್ರಗ್ ಮುಟ್ಟಲ್ಲ ಎಂದುಕೊಂಡೇ ದಿನವನ್ನು ಪ್ರಾರಂಭಿಸುತ್ತೇನೆ. ಮನಸ್ಸನ್ನು ಸ್ಥಿಮಿತದಲ್ಲಿಡಲು ಪ್ರತೀ ವೀಕೆಂಡ್ ನಲ್ಲಿ ನಮ್ಮ ರಿಯಾಬಿಲೇಷನ್ ಸೆಂಟರ್ ಗೆ ಹೋಗ್ತೀನಿ. ಅಲ್ಲಿ ಅಡಿಕ್ಟ್ ಆಗಿರೋ ಬೇಕಾದಷ್ಟು ಜನ ಬರ್ತಾರೆ. ಡ್ರಗ್ ತೆಗೆದುಕೊಳ್ಳೋದನ್ನು ಪೂರ್ತಿಯಾಗಿ ನಿಲ್ಲಿಸಿರೋ ನನ್ನಂತಹ ಕೆಲವು ಗೆಳೆಯರು ಅಲ್ಲಿರೋ ಡ್ರಗ್ ಅಡಿಕ್ಟ್ ಗಳೊಂದಿಗೆ ನಮ್ಮ ಸ್ಟೋರಿಯನ್ನು ಹೇಳಿಕೊಳ್ತೇವೆ. ಒಬ್ಬ ಡಾಕ್ಟರ್ ಡ್ರಗ್ ಅಡಿಕ್ಟ್ ಗಳಿಗೆ ನೀಡೋ ಸಲಹೆಗಿಂತ ನಮ್ಮ ಕಿವಿ ಮಾತು ಹೆಚ್ಚು ಸಲ ಚೆನ್ನಾಗಿ ಕೆಲಸ ಮಾಡುತ್ತವೆ. ಯಾಕೆಂದರೆ ಒಬ್ಬ ಡ್ರಗ್ ಅಡಿಕ್ಟ್ ಅನ್ನು ಮತ್ತೊಬ್ಬ ಡ್ರಗ್ ಅಡಿಕ್ಟ್ ಮಾತ್ರ ಅರ್ಥ ಮಾಡಿಕೊಳ್ಳಬಲ್ಲ.
ಎಷ್ಟೋ ಸಲ ಡ್ರಗ್ ಅಡಿಕ್ಟ್ ಗಳು ಇನ್ನೊಬ್ಬರನ್ನು ಅನುಸರಿಸುತ್ತಲೇ ಡ್ರಗ್ ತಗೋಳ್ಳೋಕೆ ಶುರು ಮಾಡ್ತಾರೆ. ಹಾಗೆಯೇ ಡ್ರಗ್ ನ ಬಿಡಬೇಕಾದರೂ ಇನ್ನೊಬ್ಬರನ್ನು ಅನುಸರಿಸುತ್ತಲೇ ಡ್ರಗ್ ಬಿಡ್ತಾರೆ. ಉದಾಹರಣೆಗೆ ನನ್ನನ್ನು ತುಂಬಾ ದಿನಗಳಿಂದ ಪರಿಚಯವಿರುವ ಡ್ರಗ್ ಅಡಿಕ್ಟ್ ಆಗಿರೋ ಹುಡುಗನೊಬ್ಬನಿದ್ದಾನೆ. ಈಗ ಆತ ನಮ್ಮ ರಿಯಾಬಿಲೇಷನ್ ಸೆಂಟರ್ ಗೆ ಸೇರಿಕೊಂಡಿದ್ದಾನೆ. ಮೊನ್ನೆ ಮಾತಿಗೆ ಸಿಕ್ಕಿದವನೇ “ದಾದಾ ನೀವೇ ಡ್ರಗ್ ತೆಗೆದುಕೊಳ್ಳೋದನ್ನು ಬಿಟ್ಟಿದ್ದೀರ ಅಂದ್ರೆ ನನ್ನ ಕೈಯಲ್ಲಿ ಯಾಕಾಗಲ್ಲ. ನಾನು ಬಿಟ್ಟುಬಿಡ್ತೇನೆ” ಎಂದು ಹೇಳಿದ್ದ. ಅವನ ಮಾತು ಕೇಳಿ ತುಂಬಾ ಖುಷಿಯಾಗಿತ್ತು. ಆದರೆ ಡ್ರಗ್ ಬಿಟ್ಟು ಬಿಡೋದು ಅಷ್ಟು ಸುಲಭವಲ್ಲ. ಮನೆಯವರು, ಸಮಾಜ ಡ್ರಗ್ ಅಡಿಕ್ಟ್ ಒಬ್ಬನನ್ನು ಯಾವತ್ತಿಗೂ ಒಳ್ಳೆಯ ದೃಷ್ಟಿಯಲ್ಲಿ ನೋಡೋದಿಲ್ಲ. ಯಾರಾದರೂ ಯಾವತ್ತಾದರೂ ಏನಾದರೂ ಒಂದು ಚುಚ್ಚು ಮಾತನಾಡಿದರೆ ಅದಕ್ಕೆ ಬೇಸರಗೊಂಡು ಡ್ರಗ್ ತೆಗೆದುಕೊಳ್ಳುವಾಗಲೇ ಎಷ್ಟೊಂದು ಬಿಂದಾಸ್ ಆಗಿದ್ದೆ ಎಂದುಕೊಳ್ಳುತ್ತಾ ಡ್ರಗ್ ತೆಗೆದುಕೊಳ್ಳೋದನ್ನು ಬಿಟ್ಟಿರೋರು ಸಹ ಮತ್ತೆ ಡ್ರಗ್ ತೆಗೆದುಕೊಳ್ಳೋಕೆ ಶುರು ಮಾಡಿ ಆಗ ಅವರಿಗೆ ರಿಲಾಪ್ಸ್ ಆಗೋ ಚಾನ್ಸ್ ಗಳು ಹೆಚ್ಚಾಗಿರುತ್ತವೆ. ನೀನು ನಂಬುತ್ತೀಯೋ ಬಿಡುತ್ತೀಯೋ ಎಂತೆಂಥ ಟ್ಯಾಲೆಂಟೆಡ್ ಹುಡುಗ್ರು, ಡಾಕ್ಟರ್, ಎಂಜಿನಿಯರ್, ಎಂಬಿಎ ಗ್ರಾಜುಯೇಟ್ಸ್ ಎಲ್ಲಾ ಒಳ್ಳೊಳ್ಳೆ ರಿಚ್ ಫ್ಯಾಮಿಲಿಗಳಿಂದ ಬಂದಿರೋರು ಡ್ರಗ್ ಅಡಿಕ್ಟ್ ಆಗಿರ್ತಾರೆ ನಟ್ಟು. ಒಂದಿನ ನನ್ನ ಜೊತೆ ಬಾ ನಮ್ಮ ರಿಯಾಬಿಲೇಷನ್ ಸೆಂಟರ್ ಗೆ ನಿನಗೇ ಗೊತ್ತಾಗುತ್ತೆ.” ಎನ್ನುತ್ತಾ ಆ ದಾದ ಹೇಳಿದ ಕಥೆಗಳು ಬಹಳವಿದೆ. ಡ್ರಗ್ ಅಡಿಕ್ಷನ್ ನಿಂದ ಈಗ ಪೂರ್ತಿ ದೂರವಾದ ಮೇಲೆ ಬೆಳೆಯುತ್ತಿರುವ ತನ್ನ ಎರಡು ಹೆಣ್ಣು ಮಕ್ಕಳಿಗೆ ವಿದ್ಯೆ ಕೊಡಿಸಬೇಕು ಎಂದು ಪಣ ತೊಟ್ಟಿರುವ ಆತನನ್ನು ಕಂಡಾಗ ನನಗೆ ಒಂತಾ ಹೆಮ್ಮೆ ಅನಿಸುತ್ತದೆ. ಆಗಾಗ ಕಂಪ್ಯೂಟರ್ ಕಲಿಯಬೇಕೆನ್ನುವ ಆಸೆಯನ್ನು ಆ ದಾದಾ ವ್ಯಕ್ತಪಡಿಸಿದಾಗಲೆಲ್ಲಾ ನನಗೆ ಗೊತ್ತಿರುವುದನ್ನು ನಾನು ಖುಷಿಯಿಂದ ಹೇಳಿಕೊಟ್ಟಿದ್ದೇನೆ. ಕಳೆದ ತಿಂಗಳು ಆತ ತನ್ನ ಮಕ್ಕಳಿಗೆ ಉಪಯೋಗವಾಗಲಿ ಎಂದು ಕಂಪ್ಯೂಟರ್ ತೆಗೆದುಕೊಂಡಿದ್ದಾನೆ. ತನಗೆ ಅಂತ ಟಚ್ ಸ್ಕ್ರೀನ್ ಮೊಬೈಲ್ ಇರಲಿ ಎಂದು ಒಂದು ದೊಡ್ಡ ಮೊಬೈಲ್ ತೆಗೆದುಕೊಂಡಿದ್ದಾನೆ. ಮೊನ್ನೆ ಮೊನ್ನೆ ಆ ಮೊಬೈಲ್ ನಲ್ಲಿ ಇಂಟರ್ ನೆಟ್ ಹೇಗೆ ಉಪಯೋಗಿಸೋದು ಎಂದು ಹೇಳಿಸಿಕೊಳ್ಳುತ್ತಿದ್ದ. ನಾನು ಅವನ ಬದಲಾದ ಜೀವನದ ಕಥೆಯನ್ನು ಮೆಲುಕು ಹಾಕಿದಾಗಲೆಲ್ಲಾ ಹೌದಲ್ಲಾ ಇಂತವರ ಬದುಕು ಸಹ ಕೆಲವರಿಗೆ ಎಷ್ಟೋ ಪಾಠಗಳನ್ನು ಕಲಿಸಿಕೊಡುತ್ತದೆ ಎನಿಸಿತು. ಒಮ್ಮೆ ಡ್ರಗ್ ಅಡಿಕ್ಟ್ ಆಗಿದ್ದ ಈ ದಾದಾ ಕೆಲವು ದಿನಗಳ ಹಿಂದೆ ಅವನ ಹೆಂಡತಿ ಮಕ್ಕಳನ್ನು ನಮ್ಮ ಲ್ಯಾಬಿಗೆ ಕರೆತಂದು ನಮ್ಮ ಲ್ಯಾಬ್ ಮತ್ತು ನಮ್ಮ ಆಫೀಸನ್ನೆಲ್ಲಾ ತೋರಿಸುತ್ತಿದ್ದ. ಆ ಪುಟ್ಟ ಮಕ್ಕಳು ಅಪ್ಪ ಕೆಲಸ ಮಾಡುವ ಜಾಗವನ್ನು ನೋಡಿ ಖುಷಿಪಟ್ಟು ತನ್ನಪ್ಪನ ಮೊಬೈಲ್ ನಿಂದ ಅವರ ಅಪ್ಪ ಅಮ್ಮನ ಜೊತೆ ಲ್ಯಾಬಿನ ಒಳಗೆ ಹೊರಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಆ ದೃಶ್ಯ ನೋಡಿ ಯಾಕೋ ಖುಷಿಯಾಯಿತು..
ಕೊನೆಯ ಪಂಚ್:
ನಮ್ಮ ಈ ದಾದಾಗೆ ಒಬ್ಬ ಡಾಕ್ಟರ್ ಗೆಳೆಯನೊಬ್ಬನಿದ್ದಾನಂತೆ. ಆ ಡಾಕ್ಟರ್ ಗೆಳೆಯನ ಸಹೋದ್ಯೋಗಿ ತನ್ನ ರೋಗಿಗಳಿಗೆ ಔಷಧಿಗಳ ಬರೆದುಕೊಡುವಾಗ ಒಂದು ಬಗೆಯ ಮಾತ್ರೆಯನ್ನು ಹೆಚ್ಚಿಗೆ ಬರೆದು ಆ ಮಾತ್ರೆಗಳನ್ನು ಮೆಡಿಕಲ್ ಶಾಪ್ ನಿಂದ ತೆಗೆದುಕೊಂಡ ಮೇಲೆ ತನಗೆ ತಂದು ತೋರಿಸುವಂತೆ ರೋಗಿಗೆ ಹೇಳುತ್ತಾನಂತೆ. ಆ ರೋಗಿ ಮಾತ್ರೆಗಳ ತಂದು ತೋರಿಸಿದ ಮೇಲೆ ತಾನು ಹೆಚ್ಚಿಗೆ ಬರೆದಿರುವ ಮಾತ್ರೆಗಳನ್ನು ತನ್ನ ಪಾಕೇಟಿಗೆ ಹಾಕಿಕೊಳ್ಳುತ್ತಾನಂತೆ. ಆ ಮಾತ್ರೆಗಳು ನಿದ್ರೆ ತರಿಸುವ ಮಾತ್ರೆಗಳಂತೆ ಅವುಗಳನ್ನು ಆ ಡಾಕ್ಟರ್ ಡ್ರಗ್ ಗಳ ತರಹ ಉಪಯೋಗಿಸುತ್ತಾನಂತೆ!!!!
ನಾವು ಪ್ರಪಂಚದ ಮೇಲೆ ಸುಮ್ಮನೆ ಕಣ್ಣು ಹಾಯಿಸಿದರೆ ಒಮ್ಮೊಮ್ಮೆ ಎಲ್ಲರೂ ಒಂತರಾ ನಶೆಗೆ ಒಳಗಾಗಿರುವ ಹಾಗೆ ಭಾಸವಾಗುತ್ತದೆ. ಬನ್ನಿ ಗೆಳೆಯರೇ, ನಶೆಗಳಿಂದ ಮುಕ್ತರಾಗೋಣ..
– ಡಾ. ಎಸ್ ಎಂ ನಟರಾಜು
(ಸೆಪ್ಟೆಂಬರ್ 5, 2012)