ಒತ್ತಡ ರ(ಸ!)ಹಿತ ಶಿಕ್ಷಣ: ಗುರುಪ್ರಸಾದ್ ಕುರ್ತಕೋಟಿ


"ರೀ ನಿಮ್ಮ ಮಗಳು ಹೋಂ ವರ್ಕ್ ಮಾಡಿಲ್ಲ" ಮಗಳ ಅಮ್ಮ ಕೂಗುತ್ತಿದ್ದಳು! ಆ ದನಿ ನನಗೆ ಅಂತರಿಕ್ಷ ವಾಣಿ ಥರ ಕೇಳುತ್ತಿತ್ತು. ಯಾಕಂದ್ರೆ, ನಮ್ಮ ಕಂಪನಿಯವರು ಇವನು ಸಮಧಾನದಿಂದಿರಲೇ ಕೂಡದು ಅಂತ ನಿರ್ಧರಿಸಿ, ದಯಪಾಲಿಸಿದ್ದ ಬ್ಲ್ಯಾಕ್ ಬೆರ್ರಿ (ವರ್ರಿ ಅಂತಿದ್ರೆ ಇನ್ನೂ ಚೆನ್ನಾಗಿರುತ್ತಿತ್ತೇನೋ) ಎಂಬ ಮೊಬೈಲ್ ನಲ್ಲಿ ಇಮೇಲ್ ಗಳ ಮಧ್ಯೆ ನಾನು ಹುದುಗಿ ಹೋಗಿದ್ದೆ.  ಮೊದಲೆಲ್ಲಾ ನಮ್ಮ ಹಿರಿಯರು ಬೆಳಿಗ್ಗೆ ಎದ್ದ ಕೂಡಲೇ ಅಂಗೈ ನೋಡಿಕೊಂಡು "ಕರಾಗ್ರೆ ವಸತೇ ಲಕ್ಷ್ಮಿ…" ಹೇಳುತ್ತಿದ್ದರೆ ಕಲಿಯುಗದಲ್ಲಿ ನಾವು ಅಂಗೈಯಲ್ಲಿ ಬ್ಲ್ಯಾಕ್ ಬೆರ್ರಿ, ಫೋನಾದಿಗಳನ್ನು  ಸ್ಥಾಪಿಸಿಕೊಂಡು, ಅದರಲ್ಲೇ ಬೆರೆತು, ಬೆವೆತು…! ಪ್ರಪಂಚದ ಆಗು ಹೋಗುಗಳನ್ನು ಸಂಪೂರ್ಣವಾಗಿ ಮರೆತು ಭವ್ಯ ಸಮಾಧಿ ಸ್ಥಿತಿ ತಲುಪಿರುತ್ತೇವೆ. ಅದು ನಮ್ಮ ಕರ್ಮ, ಅಥವಾ ನಾವೇ ಸೃಷ್ಟಿಸಿಕೊಂಡಿರುವ ನರಕ! 

    ಅವಳು ಆ ಪರಿ ಕೂಗಿದರೂ ಉತ್ತರಿಸದಿದ್ದಾಗ ಹೆಂಡತಿಗೆ ಕೋಪ ಬರದೇ ಇರುತ್ತದೆಯೇ? ಕೋಪಿಸಿಕೊಳ್ಳದಿದ್ರೆ ಹೆಂಡತಿಯ ಪಾತ್ರಕ್ಕೆ ಅವಮಾನವಲ್ಲವೇ!? "ರೀ ssssss" ಅಂತ ಇನ್ನೂ ಜೋರಾಗಿ ಕೂಗಿ ನನ್ನನ್ನು ಎಚ್ಚರಿಸಿ,  ಬಾಹ್ಯ ಪ್ರಪಂಚಕ್ಕೆ ಕರೆತಂದಳು. ಅವಳು “ರೀ…” ಅಂದಿದ್ದು ಮರ್ಯಾದೆಯಿಂದ ಕರೆದಂತೆ ಕಂಡರೂ, ನನಗದು “ಲೇ ಕಿವುಡಾ, ಕಿವ್ಯಾಗೇನ್ ಎಮ್ಮಿ ಗಿಮ್ಮಿ ಮಲಕೊಂಡದೇನ್!” ಅಂದಂತೆ ಭಾಸವಾಗಿ ಸಮಾಧಿಯಿಂದ ಎದ್ದು ಹೊರಬಂದೆ. ಅದರೂ ಮೇನಕೆಯಿಂದ ತಪಸ್ಸು ಭಂಗಪಡಿಸಿಕೊಂಡ (?) ವಿಶ್ವಾಮಿತ್ರ ನಂತೆ ವ್ಯಗ್ರನಾಗಿದ್ದೆ! 

"ಏನಾತು?" ಅಂದೇ.       
"ನಿಮಗಂತೂ ಆ ಸುಡುಗಾಡು ಬ್ಲ್ಯಾಕ್ ಬೆರ್ರಿ ಇದ್ರ ಬ್ಯಾರೆ ಏನೂ ಬ್ಯಾಡ." ಪಾಪ ಬ್ಲ್ಯಾಕ್ ಬೆರ್ರಿ ಅವಳಿಗೆ ಒಂಥರಾ ಕಪ್ಪು ಸುಂದರಿ ಹಾಗೆ ಕಾಣುತ್ತದೇನೋ. ಅದನ್ನು ತನ್ನ ಸವತಿಯಂತೆಯೇ ಭಾವಿಸಿ ದ್ವೇಷಿಸುತ್ತಾಳೆ. ನಾನೂ ಕೂಡ ಅದು ಅವಳ ಸವತಿಯೇನೋ ಎನ್ನುವಷ್ಟೇ ಪ್ರೀತಿಯಿಂದ ಅದನ್ನು ಆರಾಧಿಸುತ್ತೇನೆ!

"ಹಂಗ ಅನ್ಕೋ… ಈಗ ಏನಾತು ಹೇಳು?"
"ಎರಡು ದಿನ ಆತು ನಿಮ್ಮ ಮಗಳು ಹೋಂ ವರ್ಕ್ ಮಾಡಿಲ್ಲ. ನಾಳೆ ಸೋಮವಾರ. ನೀವೇನ್ ಮಾಡ್ತೀರೋ ನನಗ ಗೊತ್ತಿಲ್ಲಾ"  ಅವಳು ಏನಾದರೂ ಮಾಡದಿದ್ದಾಗ ಮಾತ್ರ ನನ್ನ ಮಗಳು!  
"ಅಕಿಗೆ ಈಗ ದಣೆ ಆರು ವರ್ಷ, ಈಗೆಂತ  ಹೋಂ ವರ್ಕು? ಸ್ವಲ್ಪ ದಿವ್ಸನರೆ ಆರಾಮ್ ಇರಲೀ ಬಿಡಲೇ."
"ನೀವು ಹಿಂಗ ಹೇಳೇ ಅಕಿ ಹಾಳಾಗಿದ್ದು." ಇರಬಹುದೇನೋ? ನಾನೂ ಇಂಥದ್ದನ್ನೆಲ್ಲಾ ಮಗಳ ಎದುರಿಗೆ ಹೇಳಬಾರದು. ಆದರೆ ಇಂತ ವಿಷಯಗಳನ್ನ ಮಗಳ ಎದುರಿಗೆ ಎತ್ತುವವರೆ ಹೆಂಡಂದಿರು. ಅದೂ ಅವರ ತಪ್ಪಲ್ಲವೇ?  

    …ನನಗೆ ಮಗಳ ಶಾಲೆಯ ಹೆಡ್-ಮಿಸ್ (ತಲೆ ಇಲ್ಲದವರು ಅಂತ ಕನ್ನಡದಲ್ಲಿ ಅರ್ಥವೇ?) ಮೇಲೆ ಕೋಪ ಬಂತು. ಶಾಲೆಗೇ ಸೇರಿಸಿಕೊಳ್ಳುವಾಗ ಅವರು “ನಮ್ಮ ಶಾಲೆಯಲ್ಲಿ ಹೋಂ ವರ್ಕ್ ಅನ್ನೋದೇ ಇಲ್ಲಾ! ನಾವು ಮಕ್ಕಳಿಗೆ ಯಾವುದೇ ತರಹದ ಒತ್ತಡ ಹೇರೋದಿಲ್ಲಾ. ಅವರು ಐದನೇ ತರಗತಿಗೆ ಬರುವ ತನಕವೂ ಆರಾಮವಾಗಿ ಆಡಿಕೊಂಡು ಇರುತ್ತಾರೆ, ಭಜನೆ, ಯೋಗ ಎಲ್ಲ ಹೇಳಿ ಕೊಡುತ್ತೇವೆ. ನಿಜ ಹೇಳಬೇಕೆಂದರೆ (ಅಂದರೆ ಇಷ್ಟೊತ್ತು ಹೇಳಿದ್ದು ಸುಳ್ಳೇ?) ಐದನೇ ತರಗತಿಯ ವರೆಗೆ ಅವರಿಗೆ ಪರೀಕ್ಷೆನೇ ಇರೋದಿಲ್ಲ…" ಅಂತೆಲ್ಲ ಆ ಹೆಡ್-ಮಿಸ್ಸಮ್ಮ ಹೇಳಿದ್ದು ಕೇಳಿ ನಾವು ಕುಣಿದು ಕುಪ್ಪಳಿಸಿ, ನಮ್ಮ ಮಗಳು ಇಂತಹ ಶಾಲೆಯಲ್ಲೇ ಕಲಿಯಬೇಕು ಅಂತ ನಿರ್ಧರಿಸಿ ಅವತ್ತೇ ಆ ಶಾಲೆಗೆ ಸೇರಿಸಿದ್ದೆವು. ಈಗ ನೋಡಿದರೆ ಒಂದನೇ ತರಗತಿಗೆ ಇಷ್ಟು ಹೋಂ ವರ್ಕ ಕೊಡೋದಾ? ನನ್ನ ಮಗಳ ಪರಿಸ್ಥಿತಿ ಎನಾಗಬೇಡಾ? ಈ ಸರ್ತಿ ಪೇರೆಂಟ್ಸ್ ಮೀಟಿಂಗ್ ನಲ್ಲಿ ಇದೆ ಇವರಿಗೆ ಅಂತ ನಿರ್ಧರಿಸಿದೆ. 

    …ಮೂರು ತಿಂಗಳಿಗೊಮ್ಮೆ ಪೋಷಕರು ತಂತಮ್ಮ ಮಕ್ಕಳ ಜೊತೆಗೆ ಶಾಲೆಗೇ ಹೋಗಿ, ಅಲ್ಲಿ ಮಕ್ಕಳಿಗೆ ಪಾಠ ಮಾಡುವ ಅಧ್ಯಾಪಕರನ್ನು ಅವರ ತರಗತಿಯಲ್ಲೇ ಭೇಟಿಯಾಗಿ, ತಂತಮ್ಮ ಮಕ್ಕಳು ಯಾವ ಭರದಲ್ಲಿ ಕಲಿಯುತ್ತಿದ್ದಾರೆ ಎಂದು ಕಣ್ಣಾರೆ ಕಂಡು ಅವರ ಅಧ್ಯಾಪಕರನ್ನು ಮಾತಾಡಿಸುವ ಒಂದು ಅವಕಾಶಕ್ಕೆ "ಪೇರೆಂಟ್ಸ್ ಮೀಟಿಂಗ್" ಅನ್ನುತ್ತಾರೆ! ಅಲ್ಲಿ ತಮ್ಮ ಮಕ್ಕಳ, ಅಲ್ಲಿಯವರೆಗೆ ಕಲಿತ ಪಾಠಗಳ ಫೈಲ್ ಇರುತ್ತೆ. ಅದನ್ನು ಪರಾಂಭರಿಸಿ ಅವರ ಕುಂದು ಕೊರತೆಗಳ, ಹಾಗೂ ಅವರ ತಪ್ಪುಗಳ ನೋಡಿ, ನಮ್ಮ ಮಕ್ಕಳು ತಪ್ಪು ಮಾಡಲು ಹೇಗೆ ಸಾಧ್ಯ ಅಂತ ಆಶ್ಚರ್ಯ ಪಟ್ಟು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಒಂದು ಸುವರ್ಣ ಅವಕಾಶ!…    

     ಪೇರೆಂಟ್ಸ್ ಮೀಟಿಂಗ್ ಅನ್ನುವ ಆ ದಿನ ಬಂದೆ ಬಿಟ್ಟಿತು. ನಾನು, ನನ್ನ ಅರ್ಧಾಂಗಿ ಹಾಗೂ ಮಗಳು ಹೋಗಿ ಅವಳ ಕ್ಲಾಸಿನಲ್ಲಿ ಕೂತೆವು. ಅಲ್ಲಿ ಬೇರೆ ಮಕ್ಕಳ ತಂದೆ ತಾಯಂದಿರೂ ಸರದಿಯಲ್ಲಿ ಕೂತಿದ್ದರು. ತಂತಮ್ಮ ಮಕ್ಕಳ ಫೈಲುಗಳನ್ನು  ಆಸ್ಥೆಯಿಂದ ನೋಡುತ್ತಿದ್ದರು. ಹಾಗೆ ಸುಮ್ಮನೆ ಗಮನಿಸುತ್ತಿದ್ದೆ. ಒಬ್ಬ ತಾಯಿ ತನ್ನ ಮಗನ ತಪ್ಪುಗಳನ್ನೆಲ್ಲ ಹುಡುಕಿ ಬೈಯ್ಯುತ್ತಿದ್ದರು. ಒಂದನೇ ತರಗತಿಗೇ ಇಷ್ಟು ಗಂಭೀರವಾಗಿ ನೋಡುತ್ತಿರುವುದು ನೋಡಿ ನನಗೆ ನಗು ಬಂತು. ನಕ್ಕು ನನ್ನ ಹೆಂಡತಿಯ ಕೆಕ್ಕರಿಸುವ ಕಣ್ಣಿಗೆ ಗುರಿಯಾಗಬೇಕಾಯ್ತು. ಅಲ್ಲವೇ ಮತ್ತೆ? ನನ್ನ ಹೆಂಡತಿಗೆ ಕೋಪ ಬಂದಿದ್ದು ಸಹಜವಾಗಿತ್ತು. ಯಾಕಂದರೆ ಅವಳೂ ತನ್ನ ಮಗಳ ಫೈಲಿನಲ್ಲಿ ತಪ್ಪುಗಳನ್ನೇ ಹುಡುಕುತ್ತಿದ್ದಳು!  

    ಒಬ್ಬೊಬ್ಬರಾಗಿ ತರಗತಿಯಲ್ಲೆ ಆಸಿನರಾಗಿದ್ದ ಅಧ್ಯಾಪಕರ ಜೊತೆಗೆ ಹತ್ತು ನಿಮಿಷ ಮಾತಾಡಲು ಅವಕಾಶವಿತ್ತು. ಕನ್ನಡವನ್ನು ಬಲ್ಲ, ಕನ್ನಡದವರೇ ಆದ ಆ ಅಧ್ಯಾಪಕರ ಜೊತೆಗೆ ಎಲ್ಲರೂ ಇಂಗ್ಲಿಷಿನಲ್ಲೇ ಮಾತಾಡುತ್ತಿದ್ದರು. ಕನ್ನಡೇತರರು ಮಾತಾಡಿದರೆ ಮಾತಾಡಲಿ. ಅದಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಯಾಕೆಂದರೆ ಬೇರೆ ಭಾಷೆಯವರಿಗೆ ಕನ್ನಡ ಕಲಿಯಲು ಹಾಗೂ ಮಾತಾಡಲು ಅವಕಾಶವನ್ನೇ ಕೊಡದ ನಿರಭಿಮಾನಿಗಳ ನಾಡಿನಲ್ಲಿರುವವರಲ್ಲವೇ ಅವರು?! ಆದರೆ, ನಮ್ಮ ಪರಿಚಯದವರೇ ಆದ ಕನ್ನಡದವರೆ ಆದ ಒಬ್ಬರು  ಇಂಗ್ಲಿಷಿನಲ್ಲೆ ಮಾತಾಡೋದು ಕೇಳಿ ಬೇಜಾರಾಗಿದ್ದಂತೂ ಹೌದು.

ಒಬ್ಬರು ಹೇಳುತ್ತಿದ್ದರು ನಮ್ಮ ಮಗನಿಗೆ ಇದು ಹೇಳಿಕೊಡುತ್ತಿಲ್ಲವೇ? ನಮ್ಮ ಪಕ್ಕದ ಮನೆಯ ಹುಡುಗನಿಗೆ ಅವರ ಶಾಲೆಯಲ್ಲಿ  ಇದನ್ನೆಲ್ಲಾ ಅವನ ಹಿಂದಿನ ಕ್ಲಾಸಿನಲ್ಲೇ ಕಲಿಸಿದ್ದಾರೆ. ನೀವ್ಯಾಕೆ ಕಲಿಸುತ್ತಿಲ್ಲ? ಅಂತ ಕೇಳಿದರು. ಅಂದರೆ ಈಗ ಕೊಡುತ್ತಿರುವ ಒತ್ತಡ ಸಾಲದು ಅನ್ನುವುದು ಅದರರ್ಥವೆ? ಅಥವಾ ಬೇರೆಯವರ ಮಕ್ಕಳಿಗಿಂತ ತನ್ನ ಮಗ ಹಿಂದುಳಿಯಬಾರದು ಅನ್ನುವ ಮಹದಾಸೆಯೇ? ಅಕಟಕಟಾ!  

    …ನನಗೆ ನನ್ನ ಬಾಲ್ಯ ನೆನಪಾಯ್ತು. ಆಗೆಲ್ಲ ಪೋಷಕರ ಜೊತೆಗೆ ಮೀಟಿಂಗು ಇರುತ್ತಿರಲಿಲ್ಲ. ಅದರ ಅವಶ್ಯಕತೆಯೇ ಇರಲಿಲ್ಲ. ಶಾಲೆಗೆ ಬೆಳಿಗ್ಗೆ ಹೋಗಿ ಡಬ್ಬಿ ಖಾಲಿ ಮಾಡುತ್ತಿದ್ದೆವು. ಆಟ ಆಡುತ್ತಿದ್ದೆವು, ಆಡುತ್ತಲೇ ಕಲಿಯುತ್ತಿದ್ದೆವು ಅಥವಾ ಕಲಿಯುತ್ತಲೇ ಆಡುತ್ತಿದ್ದೆವು! ಮದ್ಯಾಹ್ನ ಮನೆಗೆ ಬರುತ್ತಿದ್ದೆವು. ಮತ್ತೆ ಆಡುತ್ತಿದ್ದೆವು. ಹಸಿದಾಗ ಉಣ್ಣುತ್ತಿದ್ದೆವು, ನಿದ್ದೆ ಬಂದಾಗ ಮಲಗುತ್ತಿದ್ದೆವು. ಯಾಕಂದ್ರೆ ಹೋಂ ವರ್ಕ್ ಅನ್ನೋದೇ ಇರಲಿಲ್ಲವಲ್ಲ!…   

    ನಾನು ಯೋಚನೆಯಲ್ಲಿ ಮುಳುಗಿದ್ದಾಗಲೇ ನನ್ನ ಹೆಂಡ್ರು "ನಮ್ಮ ಪಾಳಿ ಬಂತು ಏಳ್ರೀ" ಅಂತ ಎಬ್ಬಿಸಿದಳು. ನಾವು ನನ್ನ ಮಗಳ  'ಮ್ಯಾಮ್' ಮುಂದೆ ಕುಂತಿದ್ದೆವು. ನಾನು ನಮಸ್ಕಾರ ಅಂದಿದ್ದಕ್ಕೆ ಸ್ವಲ್ಪ ತಬ್ಬಿಬ್ಬಾದಂತೆ ಕಂಡು ಬಂದರು. ಅಲ್ವೇ ಮತ್ತೆ? ಎಲ್ಲರೂ ಅಂಗ್ರೆಜಿನಲ್ಲಿ ಮಾತಾಡೋ ಹೊತ್ತಿನಲ್ಲಿ ಇವನ್ಯಾವ ಗವಾರ ಅಂದುಕೊಂಡರೋ ಏನೋ! ಅವಳ ಪ್ರಗತಿ ಪತ್ರ ನೋಡುವುದಕ್ಕಿಂತ ಮೊದಲೇ ನಾನು "ಏನ್ ಮ್ಯಾಮ್ ಇಷ್ಟೊಂದು ಹೋಂ ವರ್ಕ್ ಕೊಡ್ತೀರಾ? ಏನಾಗಬೇಡ ಮಕ್ಕಳ ಪರಿಸ್ಥಿತಿ?" ಅಂದೇ. ಮ್ಯಾಮ್ ಪೂರಾ ಮಂಕಾದರು! 

"ಇದೇನ್ ಸರ್ ನೀವ್ ಹಿಂಗ್ ಹೇಳ್ತೀರಿ! ಬೇರೆ ಪೋಷಕರು ಹೋಂ ವರ್ಕ್ ತುಂಬಾ ಕಡಿಮೆ ಕೊಡ್ತೀರಿ ಅಂತಾರೆ!" ಬಹುಷಃ ಜಾಸ್ತಿ ಹೋಂ ವರ್ಕ್ ಕೊಟ್ರೆ ಬೇರೆ ಪೋಷಕರಿಗೆ ಅನುಕೂಲ ಇರಬೇಕು. ಯಾಕೆಂದರೆ ಮಕ್ಕಳು ತಮ್ಮ ಸಹಜ ತುಂಟಾಟಗಳ ಬಿಟ್ಟು, ಬರೀ ಶಾಲೆಯ ಕೆಲಸ ಮಾಡುತ್ತಾ ಇದ್ದುಬಿಡುತ್ತಾರಲ್ಲವೇ! ಅದೂ ಅಲ್ಲದೆ, ಮಕ್ಕಳಿಗೆ ಹೇಳಿ ಕೊಡಿ ಅಂತ ಗಂಡನನ್ನು ದಬಾಯಿಸಿ ಕೆಲಸ ಹಚ್ಚಬಹುದಲ್ಲವೇ? ಅಲ್ಲಿಗೆ ಒಂದು ಹೊಡೆತ ಎರಡು ಗುರಿ  ಅಂದಂಗಾಯ್ತು!
ನಾನು ಹೇಳಿದೆ "ನೋಡಿ ಮ್ಯಾಮ್, ನನ್ನ ಮಗಳು ಈಗಿಂದನೆ ಒತ್ತಡಕ್ಕೆ ಸಿಲುಕಬಾರದು ಅಂತ ನನ್ನ ಇಚ್ಛೆ. ಅವಳು ಇಷ್ಟು ಚಿಕ್ಕ ವಯಸ್ಸಿಗೆನೇ ಹೋಮ್ ವರ್ಕ್ ಮಾಡಬೇಕಲ್ಲಾ ಅನ್ನುವ ಖಿನ್ನತೆಗೆ ಒಳಗಾಗುವುದು ನನಗೆ ಖಂಡಿತಾ ಇಷ್ಟವಿಲ್ಲ. ಅವಳು ಪ್ರಥಮ ಶ್ರೇಣಿಯಲ್ಲಿ ಪಾಸಾಗದಿದ್ದರೂ ನನಗೆ ಚಿಂತೆಯಿಲ್ಲ, ಆದರೆ ಮೊದಲ ದರ್ಜೆಯ ಮನುಷ್ಯಳಾಗಬೇಕು!" 
ನನ್ನ ಭಾಷಣ ಕೇಳಿ, ಇವನು ಬಿಟ್ಟರೆ ಇನ್ನೂ ಏನೇನೋ ಕೊರೆಯಬಹುದೆಂದು ಗ್ರಹಿಸಿ, ಮ್ಯಾಮ್ ಹೇಳಿದರು… 

“ಅವಳು ಹೋಮ್-ವರ್ಕ್ ಮಾಡಿಲ್ಲವೆಂದರೂ ಪರವಾಗಿಲ್ಲ, ತರಗತಿಯಲ್ಲಿ ನಾವೇ ಮಾಡಿಸುತ್ತೇವೆ.” 
ನನಗೆ ಸಮಾಧಾನವಾಗಿತ್ತು! ಹೆಂಡತಿಗೆ ನಾನು ಹೋಮ್ ವರ್ಕ್ ಗೆ ಹಾಗೆ ಅಕ್ಷೆಪಿಸಿದ್ದಕ್ಕೆ ನನ್ನ ಮೇಲೆ ಕೋಪ ಬಂದಿತ್ತು. ಮಗಳು ತರಗತಿಯಲ್ಲಿ ಅತ್ತಿತ್ತ ಅಡ್ಡಾಡಿಕೊಂಡಿದ್ದಳಾದ್ದರಿಂದ, ಅವಳು ಇದನ್ನೆಲ್ಲ ಕೇಳಿಸಿಕೊಂಡಿಲ್ಲವೆಂಬ ಸಮಾಧಾನವೂ ಅವಳಿಗಿತ್ತು. ಅಲ್ಲವೇ ಮತ್ತೆ? ಮ್ಯಾಮ್ ಹೀಗೆ ಹೇಳಿದ್ದಾರೆ ಎಂದ ಮೇಲೆ ಮಗಳು ಹೋಂ ವರ್ಕ್ ಮಾಡುವ ಸಾಧ್ಯತೆಗಳೇ ಇರಲಿಲ್ಲ!        

    ಆದರೂ ಈ ಮೀಟಿಂಗ್ ಮುಗಿಸಿಕೊಂಡು ಬರುವಾಗ ಖಿನ್ನಮನಸ್ಕನಾಗಿದ್ದೆ. ಇದಾ ನಾವು ಕೊಡುತ್ತಿರುವ ಶಿಕ್ಷಣ? ಬೇರೆಯವರ ಜೊತೆ ಹೋಲಿಕೆ ಮಾಡೋದನ್ನ ನಾವೇ ನಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಯಾಕೆ ಕಲಿಸುತ್ತೇವೆ? ಜಾಸ್ತಿ ಹೋಮ್ ವರ್ಕ್, ದೊಡ್ಡ ದೊಡ್ಡ ಪರೀಕ್ಷೆಗಳಿದ್ದರೆ ಅದು ಒಳ್ಳೆಯ ಶಾಲೆಯೇ? ಶಾಲೆಗಳಲ್ಲಿ ಜೀವನದ ನಿಜವಾದ ಪರೀಕ್ಷೆಗಳನ್ನು ಎದುರಿಸಲು ಎಷ್ಟು ಸಿದ್ಧ ಮಾಡುತ್ತಾರೆ? ಮಕ್ಕಳಿಗೆ ಗೆಲ್ಲುವುದಕ್ಕಿಂತ ಸೋಲನ್ನು ಅರಗಿಸಿಕೊಳ್ಳುವ ಬಗೆಯನ್ನು ಎಲ್ಲಿ ಕಲಿಸುತ್ತಾರೆ? ಇನ್ನೊಬ್ಬರು ಸೋತಾಗ ಖುಷಿ ಪಡದಿರುವುದನ್ನು ಹಾಗೂ ಮತ್ತೊಬ್ಬರು ಗೆದ್ದಾಗ ಅಸೂಯೆ ಪಡದಿರುವುದನ್ನು ಕಲಿಸುವ ಶಾಲೆ ಎಲ್ಲಿದೆ? ಗಿಣಿ ಪಾಠ ಮಾಡಿ ಎಲ್ಲೋ ಒಂದು ಕಡೆ ನೌಕರನಾಗುವ ಬದಲು ತನ್ನದೇ ಸ್ವಂತದ, ಮನಸ್ಸಿಗೆ ಖುಷಿ ಕೊಡುವ ಕೆಲಸ ಮಾಡಿಕೊಂಡು ಇರುವುದನ್ನೆಲ್ಲಿ ಕಲಿಸುತ್ತಾರೆ?  ಖಿನ್ನತೆಯನ್ನು ಓಡಿಸುವ, ಅಥವಾ ಖಿನ್ನರಾಗದೇ ಇರುವ ರೀತಿಯನ್ನು ಎಲ್ಲಿ ಹೇಳಿಕೊಡುತ್ತಾರೆ?  ಕೆಲವು ಶಾಲೆಗಳಾದರೂ ವಿಭಿನ್ನವಾಗಿ ಕಲಿಸುವ ಧ್ಯೇಯವನ್ನು ಮೋದ ಮೊದಲಿಗೆ ಇಟ್ಟುಕೊಂಡಿರುತ್ತವೆ. ಆದರೆ ಅವರಿಗೆ ಹಾಗೆ ಮಾಡಲು  ಪೋಷಕರು ಬಿಡಬೇಕಲ್ಲ! ಬೇರೆಯ ಶಾಲೆಗಳ ಜೊತೆಗೆ ಹೋಲಿಕೆ ಮಾಡಿ, ಇಂತಹ ಶಾಲೆಗಳ ಮ್ಯಾನೇಜ್ಮೆಂಟ್ ಗೆ ಹೆದರಿಕೆ ಹುಟ್ಟಿಸುತ್ತಾರೆ. ತಮ್ಮ ಅಸ್ತಿತ್ವದ ಭಯದಿಂದ ಆ ಶಾಲೆಗಳೂ ಕ್ರಮೇಣ ತಮ್ಮ ಧೆಯೋದ್ದೆಶಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತವೆ. ಅವೂ ಎಲ್ಲರೊಳಗೊಂದಾಗುತ್ತವೆ!

– ಗುರುಪ್ರಸಾದ ಕುರ್ತಕೋಟಿ, ಬೆಂಗಳೂರು 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

15 Comments
Oldest
Newest Most Voted
Inline Feedbacks
View all comments
Sunil Kumar
8 years ago

ನಿಜ

ಲಗೋರಿಬಾಬಾ
ಲಗೋರಿಬಾಬಾ
8 years ago

ಸೂಪರ್ ಗುರು

chaithra
chaithra
8 years ago

super !!!!

ಗುರುಪ್ರಸಾದ ಕುರ್ತಕೋಟಿ

ಓದಿ ಮೆಚ್ಚಿಕೊಂಡ ಎಲ್ಲರಿಗೂ ಧನ್ಯವಾದಗಳು 🙂

ಮಮತಾ ಅರಸೀಕೆರೆ
ಮಮತಾ ಅರಸೀಕೆರೆ
8 years ago

ಬಹು ಒಳ್ಳೆ ಲೇಖನ. ಆಪ್ತವಾಗಿದೆ. ವಿಭಿನ್ನ ನಿರೂಪಣೆ.

umesh desai
8 years ago

ಇಂದಿನ ವಾಸ್ತವ ಇದು ಸರಿಯಾಗಿ ಅವಲೋಕನ ಮಾಡೀರಿ ಅಲ್ಲಲ್ಲೆ

ನಿಮ್ಮ ಪಂಚ್ ತುಂಬಿದ ಡೈಲಾಗು ಖುಶಿ ಕೊಟ್ಟವು…

ಗುರುಪ್ರಸಾದ ಕುರ್ತಕೋಟಿ
Reply to  umesh desai

ಉಮೇಶ್, ಓದಿ ಮೆಚ್ಚಿಕೊಂಡಿದ್ದಕ್ಕೆಧನ್ಯವಾದಗಳು! 'ಪಂಚ್-ಕಜ್ಜಾಯ' ಅಂತ ಹೆಸರ ಇಟ್ಟದ್ದು ಸಾರ್ಥಕ ಆತು ಹಂಗಂದ್ರ:)

vitthal Kulkarni
vitthal Kulkarni
8 years ago

ಭ್ಹಾಳ ಛೊಲೊ ಬರದಿರಿ ಗುರು! ಹಂಗ ವಿಚಾರ ಮಾಡಿದ್ರ ಈ ಶಿಕ್ಷಣ ವ್ಯವಸ್ಥೆ ಕೆಡಲಿಕ್ಕೆ ನಾವ ಕಾರಣ…
ನಿಮ್ಮ ಈ ಲೆಖನಾನು ಓದತಾರ, ಯಸ್ಟೊ ಸಿನೆಮಾ ನೊಡಯತಾರ ( ಇಡಿಯಟ್ಸ, ತಾರೆ ಝ್ಹಮಿನಪರ್ ಇನ್ನು ಯೆಸ್ಟೊ…) ಮತ್ತ ಅದನ್ನ ಮಾಡತಾರ್… ಯಲ್ಲಾರು ಓಡಲಿಕ್ಕಹತ್ತಿದ ದಿಕ್ಕಬಿಟ್ಟು ನೀವು ಅವರ ವಿರುಧ್ಧ ದಿಕ್ಕಿಗೆ ಓಡೊದು ಕಸ್ಟ ಅದ… 
ಕಡಿ ಪ್ಯರಾ ಪುರ್ತಿ ವಿಚಾರ ಮಾಡಲಿಕ್ಕೆ ಬೆಕಾದ್ದು ಅದ… 

ಗುರುಪ್ರಸಾದ ಕುರ್ತಕೋಟಿ

ವಿಟ್ಠಲ, ನಿಮ್ಮ ಅನಿಸಿಕೆ ಓದಿ ಖುಷಿ ಆತು! ನೀವು ಹೇಳಿದ್ದು ಸರಿ…. ಇದಕ್ಕೆಲ್ಲ ನಾವ ಕಾರಣ! ಇದು ಬದಲಾಗಲಿಕ್ಕೂನಾವ ಕಾರಣ ಆಗಬೇಕು! ಅದು ಬರಹದ ಆಶಯ:)

ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
8 years ago

ಗುರು, ಮಕ್ಕಳ ಈಗಿನ ವಿದ್ಯಾಭ್ಯಾಸದ ನಡೆ ಕುರಿತು ನನಗಿರುವ ಗೊಂದಲವನ್ನೇ ನೀವೂ ಹಂಚಿಕೊಂಡಿದ್ದೀರಿ….. ತುಂಬಾ ಚೆನ್ನಾಗಿದೆ.

ಗುರುಪ್ರಸಾದ ಕುರ್ತಕೋಟಿ

ಅಮರ್ , ಪ್ರೀತಿಯಿಂದ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು 🙂

ಶ್ರೀಧರ್. ಜಿ
ಶ್ರೀಧರ್. ಜಿ
8 years ago

ಮಕ್ಕಳ ಶಿಕ್ಷಣ ಒತ್ತಡ-ಹೊರೆ-ತೊಂದರೆ ಬಗ್ಗೆ ತಮ್ಮಂಥಹ ಮೃದು ಧಾರಿ{SOFT WARE }ರವರು ಪುರುಸೊತ್ತಾಗಿ ಪ್ರಭಂದ ಬರೆದಿರುವುದೇ ಸಂತಸ . ಮಕ್ಕಳ ಬಾಲ್ಯ ಕಸಿಯುವ ವ್ಯವಸ್ಥೆ ಅಣಿಕಿಸಿ ,ಪರಿಹಾರ ಸೂಚಿಸಿಲ್ಲ . ತಾಂತ್ರಿಕ ಜಗತ್ತು ಮಕ್ಕಳನ್ನು ಅತಿ ಹೆಚ್ಚಾಗಿ ಸವೆಯುಸುತ್ತಿದೆ . ಚೆನ್ನಾದ ಬಾಲ್ಯ ಕಂಡ ನಾವು ನಮ್ಮ ಮಕ್ಕಳ ಬಾಲ್ಯ ಕಸಿಯುತ್ತಿರುವ ವ್ಯವಸ್ಹ್ತೆಯಲ್ಲಿ ಒಂದಾಗಿರುವುದು ದುರದೃಷ್ಟಕರ . 

ಗುರುಪ್ರಸಾದ ಕುರ್ತಕೋಟಿ

ಧನ್ಯವಾದಗಳು ಗುರುಗಳೆ smile emoticon. ಸಮಸ್ಯೆಗಳನ್ನು ತಮ್ಮಂತಹ ಮಾರ್ಗದರ್ಶಕರ ಅವಗಾಹನೆಗೆ ತರುವುದಷ್ಟೇ ನಮ್ಮ ಕೆಲಸ! grin emoticon

Pavan
Pavan
8 years ago

Very well written… Daily I am facing these 🙁

ಗುರುಪ್ರಸಾದ ಕುರ್ತಕೋಟಿ
Reply to  Pavan

ಧನ್ಯವಾದಗಳು ಪವನ್!

15
0
Would love your thoughts, please comment.x
()
x