ಇಂದಿನ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ಒತ್ತಡಯುಕ್ತ ಜೀವನವನ್ನು ನಾವು ನಮಗೆ ಅರಿವಿಗೆ ಬಂದೋ ಬಾರದೆಯೋ ಅದನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದೇವೆ. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದೇವೆ. ಸ್ವಲ್ಪ ಹೊತ್ತು ಕುಳಿತು ಕಾಫಿ ಹೀರಲು ನಮ್ಮಲ್ಲಿ ಸಮಯವಿಲ್ಲ. ತಂದೆ – ತಾಯಿ, ಬಂಧು – ಬಳಗವನ್ನು ಹತ್ತಿರದಿಂದ ಮಾತನಾಡಲು ನಮ್ಮ ಉದ್ಯೋಗ ಬಿಡುತ್ತಿಲ್ಲ. ಮೊಬೈಲ್ ನಲ್ಲಿ ನಾವು ಗಂಟೆಗಟ್ಟಲೆ ವ್ಯವಹರಿಸುತ್ತೇವೆ. ಆದರೆ ನಮ್ಮ ಮಕ್ಕಳ ಜೊತೆ, ಅವರ ಆಸಕ್ತಿ – ಅಭಿರುಚಿಗಳೊಂದಿಗೆ ಬೆರೆಯುವ ಆಸ್ಥೆ ನಮಗಿಲ್ಲ. ಅವರ ಅನುಭವಗಳನ್ನು ನಮ್ಮೊಡನೆ ಹಂಚಿಕೊಳ್ಳಲು ಬಿಡುತ್ತಿಲ್ಲ ನಾವು. ನಮಗೆ ಒಂದು ನಿಮಿಷ ಪ್ರಾರ್ಥಿಸಲು, ಧ್ಯಾನಿಸಲು ಮನಸ್ಸಿಲ್ಲ. ಅವಧಾನವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಸಮಯವಿಲ್ಲ. ನಮ್ಮ ನಡುವೆ ಏನು ನಡೆಯುತ್ತಿದೆ ? ಇದಕ್ಕೆಲ್ಲ ಮುಖ್ಯ ಕಾರಣವೇನು ? ನಾಗಲೋಟದಿಂದ ಓಡುತ್ತಿರುವ ನಮ್ಮ ಜೀವನವೇ ?
ನಿಜಕ್ಕೂ ಚಿಂತಿಸಬೇಕಾದ ವಿಚಾರ ಇದು. ಎಲ್ಲಿಯೋ ನಾವು ನಮ್ಮ ಗುರಿ ಸಾಧಿಸುವಲ್ಲಿ ಎಡವಿ ಬೀಳುತ್ತಿದ್ದೇವೆ. ಇದು ನಮ್ಮ ಜೀವನದ ಮೇಲೆ ನಂಬಲಸಾಧ್ಯವಾದ ಆಘಾತಕಾರಿ ಪರಿಣಾಮವನ್ನುಂಟು ಮಾಡುತ್ತದೆ. ಎಲ್ಲದಕ್ಕೂ ಮುಖ್ಯ ಕಾರಣ ನಮ್ಮ ಒತ್ತಡಯುಕ್ತ ಜೀವನ ಎಂಬುದು ನನ್ನ ಅಭಿಪ್ರಾಯ. ಒತ್ತಡವನ್ನು ಮುಖ್ಯವಾಗಿ ಎರಡು ರೀತಿಯಲ್ಲಿ ಕಾಣಬಹುದು. ಮೊದಲನೆಯದಾಗಿ ಸಕಾರಾತ್ಮಕ ಒತ್ತಡ. ಎರಡನೆಯದಾಗಿ ನಕಾರಾತ್ಮಕ ಒತ್ತಡ.
ಸಕಾರಾತ್ಮಕ ಒತ್ತಡವನ್ನು ವಿಶ್ಲೇಷಿಸುವುದಾದರೆ ಈ ರೀತಿಯ ಒತ್ತಡವು ನಮ್ಮ ಜೀವನಕ್ಕೆ ಬೇಕಾದ ಆವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧಿಸುವಿಕೆ ಆಗಿದೆ. ಇಲ್ಲಿ ಒತ್ತಡ ಉಂಟಾಗುವುದು ನಮ್ಮ ಜೀವನದ ಸಾಧನೆಗಾಗಿ. ಅಂದರೆ ಆರ್ಥಿಕ ಸುಧಾರಣೆಗಾಗಿ, ಸುಂದರ ಜೀವನದ ಸಫಲತೆಗಾಗಿ, ಒಳ್ಳೆಯ ಶಿಕ್ಷಣ ಪಡೆಯುವುದು, ಉದ್ಯೋಗ ಗಿಟ್ಟಿಸಿಕೊಳ್ಳುವುದು, ಉತ್ತಮ ವ್ಯಕ್ತಿ ಸಂಬಂಧ ಹೊಂದುವುದಕ್ಕಾಗಿ ಹೀಗೆ ಹತ್ತು ಹಲವು ಸಂದರ್ಭಗಳಲ್ಲಿ ನಾವು ಒತ್ತಡಕ್ಕೆ ಒಳಗಾಗುತ್ತೇವೆ. ಇದು ಒಳ್ಳೆಯ ಓತ್ತಡವೇ ಆಗಿದೆ. ಸಾಧಿಸುವ ಛಲದ ಸಾಧನೆಗೆ ಈ ರೀತಿಯ ಒತ್ತಡ ಸಹಕಾರಿಯಾಗಿದೆ. ಒಟ್ಟಾರೆಯಾಗಿ ಸಕಾರಾತ್ಮಕ ಒತ್ತಡವು ಧನಾತ್ಮಕವಾಗಿದ್ದು ಸಾಕಷ್ಟು ಅನುಭವಗಳನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ.
ಇನ್ನು ಎರಡನೆಯದಾಗಿ ನಕಾರಾತ್ಮಕ ಒತ್ತಡ. ಈ ರೀತಿಯ ಒತ್ತಡಕ್ಕೆ ಒಳಗಾಗಲೇಬಾರದು. ಇದು ನಮ್ಮ ಜೀವಕ್ಕೆ ಅಪಾಯವನ್ನು ಒಡ್ಡುತ್ತವೆ. ಚಿಕ್ಕ ಚಿಕ್ಕ ವಿಷಯಗಳಿಗೆ ದೊಡ್ಡದಾಗಿ ಆಲೋಚಿಸಿ ಅನಾಹುತಗಳನ್ನು ತಂದುಕೊಳ್ಳುವುದು. ಇತರರಿಗೂ ಕಿರಿಕಿರಿಯನ್ನು ಉಂಟುಮಾಡುವುದು. ಋಣಾತ್ಮಕ ಭಾವನೆಗಳನ್ನು ಬೆಳೆಸಿಕೊಂಡಾಗ ತಮ್ಮ ದೈನಂದಿನ ಕೆಲಸದಲ್ಲಿ ತೊಡಗಿಸಿಕೊಳ್ಳಲು ಅಸಾಧ್ಯ. ಇತರರೊಂದಿಗೆ ಬೆರೆಯಲು ಕೂಡ ಸಾಧ್ಯವಾಗುತ್ತಿಲ್ಲ. ದಿನೇ ದಿನೇ ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ತನ್ನಿಂದ ಏನೂ ಸಾಧ್ಯವಿಲ್ಲ, ತಾನು ಜೀವನದಲ್ಲಿ ಬೆಳೆಯುವುದಿಲ್ಲ ಇತ್ಯಾದಿ ನಕಾರಾತ್ಮಕ ಧೋರಣೆಗಳ ಸರಮಾಲೆ ಬೆಳೆಯುತ್ತಾ ಹೋಗುತ್ತದೆ. ದುಸ್ತರ ಬದುಕು ನಮ್ಮದಾಗುತ್ತದೆ. ಸಕಾರಾತ್ಮಕ ಒತ್ತಡದ ನಡುವೆ ನಾವಿಂದು ಬದುಕುತ್ತಿದ್ದೇವೆ. ಇದು ಸರಿ. ಆದರೆ ನಕಾರಾತ್ಮಕ ಒತ್ತಡದೊಂದಿಗೆ ನಮ್ಮ ಸುಂದರವಾದ ಬದುಕು ಸಾಗಬಾರದು. ಋಣಾತ್ಮಕ ಭಾವನೆಗಳನ್ನು ಮನಸ್ಸಿನಿಂದ ಬೇರು ಸಹಿತ ಕಿತ್ತೊಗೆಯಬೇಕು. ಜೊತೆ ಜೊತೆಗೆ ಸೆಣಸಾಡಿ ಗೆದ್ದು ಜೀವನ ನಿರ್ವಹಣೆಗೆ ಅಣಿಯಾಗಬೇಕು.
ನಕಾರಾತ್ಮಕ ಒತ್ತಡದಿಂದ ಹೊರಬರಲು ಕೆಲವೊಂದು ಚಟುವಟಿಕೆಗಳನ್ನು ಈ ಕೆಳಗಿನಂತೆ ದಾಖಲಿಸಬಹುದು.
- ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಮುಕ್ತವಾಗಿ ಇತರರೊಂದಿಗೆ ಚರ್ಚಿಸಬಹುದು.
- ಬೆಳಿಗ್ಗೆ ಸ್ವಲ್ಪ ಹೊತ್ತು ಸಮಯವನ್ನು ಯೋಗ ಮತ್ತು ಧ್ಯಾನಕ್ಕಾಗಿ ಮೀಸಲಿಡುವುದು. ಆ ಮೂಲಕ ಮನಸ್ಸನ್ನು ಒಂದೆಡೆಗೆ ಕೇಂದ್ರೀಕರಿಸಬಹುದು.
- ವಾಕಿಂಗ್ ನಿಂದ, ವ್ಯಾಯಾಮ ಮಾಡುವುದರಿಂದ ಮನಸ್ಸು ಉಲ್ಲಸಿತವಾಗುತ್ತದೆ.
- ನೋವು ನಲಿವುಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳುವುದು.
- ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು.
- ನಮಗೆ ಪುಸ್ತಕಕ್ಕಿಂತ ಒಬ್ಬ ಒಳ್ಳೆಯ ಸ್ನೇಹಿತ ಸಿಗಲಾರ. ಆದ್ದರಿಂದ ಮನಸ್ಸಿಗೆ ಖುಷಿ ಕೊಡುವ ಪುಸ್ತಕಗಳನ್ನು ಓದುವುದು, ಸಂಗೀತ ಕೇಳುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು.
- ‘ ಅನುಭವವೇ ಶಿಕ್ಷಣ ‘ ಎಂಬಂತೆ ಹಿರಿಯರ ಅನುಭವದ ನುಡಿಗಳನ್ನು ಪಾಲಿಸುವುದು. ಹಾಗೆಯೇ ಕಿರಿಯರ ನುಡಿಗಳನ್ನು ವಿಮರ್ಶಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವುದು.
- ಧಾರ್ಮಿಕ ಕೇಂದ್ರಗಳು, ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ, ದೂರದ ಊರುಗಳಿಗೆ ಪ್ರವಾಸವನ್ನು ಕೈಗೊಳ್ಳುವುದು.
- ತಾನು ಎದುರಿಸುವ ಸಮಸ್ಯೆಗಳನ್ನು ತನ್ನ ಕುಟುಂಬದವರೊಂದಿಗೆ ಶಾಂತಚಿತ್ತರಾಗಿ ಚರ್ಚಿಸಿ ಎಲ್ಲರ ಸಮಕ್ಷಮದಲ್ಲಿ ಪರಿಹಾರ ಕಂಡುಕೊಳ್ಳುವುದು.
ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು.
ದುಡಿದು ಹಣ ಸಂಪಾದಿಸುವ ಧಾವಂತದಲ್ಲಿ ನಮ್ಮ ಜೀವನದ ಸಿಹಿ ಕ್ಷಣಗಳನ್ನು ಅನುಭವಿಸಲು ಮರೆತಿದ್ದೇವೆ. ನಿಜಕ್ಕೂ ಒತ್ತಡ ಮುಕ್ತ ಜೀವನ ನಡೆಸಲು ಸಾಧ್ಯವೇ ?. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ. ಒತ್ತಡದಿಂದ ಪರಿಪೂರ್ಣವಾಗಿ ಅಲ್ಲದಿದ್ದರೂ ನಮ್ಮ ಬದುಕನ್ನು ಇನ್ನಷ್ಟು ಪರಿಪೂರ್ಣಗೊಳಿಸಲು ನಾವೇ ನಕಾರಾತ್ಮಕ ಒತ್ತಡದಿಂದ ಸಾಧ್ಯವಾದಷ್ಟು ಹೊರಬರಲು ಪ್ರಯತ್ನಿಸಬೇಕು. ನಮ್ಮ ಇತಿಮಿತಿಯೊಂದಿಗೆ ಬದುಕು ಕಟ್ಟಿಕೊಳ್ಳಲು ಕಲಿಯಬೇಕು. ಒಟ್ಟಾರೆಯಾಗಿ ಉತ್ತಮ ಹವ್ಯಾಸಗಳನ್ನು, ಅಭ್ಯಾಸಗಳನ್ನು ರೂಢಿಸಿಕೊಂಡು ಬಾಳುವಂತರಾಗಬೇಕು. ಅಂದಾಗ ಮಾತ್ರ ಒತ್ತಡಮುಕ್ತರಾಗಿ ಸಾರ್ಥಕ ಬದುಕನ್ನು ಕಂಡುಕೊಳ್ಳಬಹುದು ಎನ್ನುವುದು ನನ್ನ ಅಭಿಪ್ರಾಯ. ಏನಂತೀರಾ ?…
–ಗಾಯತ್ರಿ ನಾರಾಯಣ ಅಡಿಗ