ಒಡಲ ಕಿಚ್ಚಿನ ಹಿಲಾಲು ಹಿಡಿದ ಕವಿತೆಗಳು: ಅಶ್ಫಾಕ್ ಪೀರಜಾದೆ

ನಾಗೇಶ ಜೆ ನಾಯಕ ಒಬ್ಬ ಹೆಸರಾಂತ, ಕ್ರೀಯಾಶೀಲ, ಸೂಕ್ಷ್ಮಗ್ರಾಹಿ ಸಾಹಿತಿಯಾಗಿ ಕನ್ನಡ ಸಾರಸ್ವತ ಲೋಕವನ್ನು ತಮ್ಮ ಅನನ್ಯ ಅನುಭವಗಳನ್ನು ಅಕ್ಷರಗಳಲ್ಲಿ ಕಟ್ಟಿಕೊಡುವ ಮೂಲಕ ಶ್ರೀಮಂತಗೊಳಿಸುವಲ್ಲಿ ಅವಿರತವಾಗಿ ಶ್ರಮಿಸುತ್ತಿರುವಂಥವರು. ಆಡು ಮುಟ್ಟದ ಗಿಡವಿಲ್ಲ ಎಂಬ ಮಾತಿನಂತೆ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿ ಸೈ ಎನಿಸಿಕೊಂಡವರು. ಅವರು ಬರೆದ ಅಂಕಣ ಬರಹ, ವ್ಯಕ್ತಿ ಚಿತ್ರಣ, ಲೇಖನ, ಕತೆ, ಕವಿತೆ, ವಿಮರ್ಶೆಗಳು ನಾಡಿನ ಪ್ರಕಟಗೊಂಡಿದಷ್ಟೆಯಲ್ಲದೆ ಅವರು ರಚಿಸಿ ಪ್ರಕಟಿಸಿರುವ ಗ್ರಂಥಗಳು ಪ್ರಸಿದ್ದಿ ಪ್ರಶಸ್ತಿಗಳನ್ನು ತಂದು ಕೊಟ್ಟಿವೆ. ಹೀಗಾಗಿ ಅವರು ಜನಮಾನಸದಲ್ಲಿ ಸದಾ ಉಳಿಯುವ ಸಾಹಿತಿಯಾಗಿದ್ದಾರೆ.

ಪ್ರಸ್ತುತ “ಒಡಲು ಕಿಚ್ಚಿನ ಹಿಲಾಲು ಹಿಡಿದು” ಕೃತಿ ಸಹ ಸಾಕಷ್ಟು ಖ್ಯಾತಿ ಮತ್ತು ಪ್ರಶಸ್ತಿಗಳನ್ನು ತಂದು ಕೊಟ್ಟ ಕವನ ಸಂಕಲನ. ಈ ಕೃತಿಯ ಕುರಿತು ಸಾಕಷ್ಟು ಚರ್ಚೆ ವಿಮರ್ಶೆಗಳು ನಡೆದು ನಾಗೇಶ ನಾಯಕ ಒಬ್ಬ ಭರವಸೆಯ ಕವಿಯಂದು ಸಾಬೀತು ಪಡೆಸಿವೆ. ಈ ಕೃತಿಗೆ ಮುನ್ನುಡಿ ಮಂಡಿಸಿರುವ ಹಿರಿಯ ಸಾಹಿತಿ ಡಾ ಟಿ ಯಲ್ಲಪ್ಪ ಅವರು ಈ ಕೃತಿಯನ್ನು ” ಜೀವಪರ ಆಶಯಗಳ ಬಣ್ಣದ ಕೌದಿ ” ಎಂದು ಬಣ್ಣಿಸಿದ್ದಾರೆ. ಅಲ್ಲದೆ ಇಲ್ಲಿನ “… ಹಿಲಾಲು ಹಿಡಿದು ” ಕವಿತೆಯಿಂದ ಹಿಡಿದು “ಬೆನ್ನಿಗಿರಿದ ಚೂರಿ ಮರಗುತಿದೆ” ಕವಿತೆಯವರೆಗೆ ತನ್ನ ವೈವಿಧ್ಯತೆ ಹಾಗೂ ಹಲವು ಜೀವಪರ ಆಶಯಗಳ ಕಳಕಳಿಯ ಒಟ್ಟಂದದಿಂದ ಕಲಾತ್ಮಕವಾದ ಕೌದಿಯಂತೆ ಕಾಣುತ್ತದೆ. ಜಾತಿ ಶ್ರೇಣಿಕೃತವಾದ ಭಾರತೀಯ ಸಮಾಜದಲ್ಲಿನ ಪಾರಂಪರಿಕವಾದ ಶೋಷಣೆಯ ಮುಖಗಳ ಜೊತೆಗೆ, ಅಧುನಿಕ ಕಾಲಘಟ್ಟದಲ್ಲಿ ಮುಖವಾಡ ಹಾಕಿಕೊಂಡೇ ಬಹಳ ನಾಜೂಕಾಗಿಯೇ ಶೋಷಣೆಗೆ ಇಳಿದಿರುವುದು, ಶೋಷಣೆಯ ಹೊಸ ರೂಪಗಳನ್ನು ಹೊಸ ರೂಪಕಗಳ ಮೂಲಕ ಕಟ್ಟುವ ಕೆಲಸವನ್ನು ನಾಗೇಶ ಅವರು ಶ್ರದ್ಧೆಯಿಂದ ಮಾಡಿದ್ದಾರೆ. ಹೊಸ ಹಗಲಿನ ಮೇಲೆ ಕುಳಿತು, ಬೆಳಕಿನ ಕನಸು ನೇಯುವ ಭರವಸೆಯನ್ನು ಹೊಂದಿದ್ದಾರೆ” ಎಂದು ಹೇಳಿರುವುದು ಈ ಕವಿ ಮತ್ತು ಕವಿತೆಗಳ ಒಟ್ಟಾರೆ ಆಶಯವನ್ನು ಧ್ವನಿಸುತ್ತದೆ.

ನಾನು ಕಂಡುಕೊಂಡ ಪ್ರಕಾರ ಇಲ್ಲಿನ ಕಾವ್ಯವನ್ನು ಮುಖ್ಯವಾಗಿ ಎರಡು ವಿಭಾಗಗಳಾಗಿ ನೋಡಬಹುದು. ಒಂದು ಬಂಡಾಯದ ಮನೋಭೂಮಿಕೆಯಲ್ಲಿ ಅರಳಿದ ಕೆಂಡಸಂಪಿಗೆ, ಇನ್ನೊಂದು ವಂಚನೆಗೊಳಗಾದ ಭಗ್ನ ಪ್ರೇಮದ ತಹತಹಿಕೆಯಾಗಿ ಭಾವತೀವೃತೆಯಿಂದ ಮನ ಇರಿಯುವ ಮೊನಚಾದ ಮುಳ್ಳುಗಳಾಗಿ ಆಸ್ವಾಧಿಸಬಹುದು.

“ನಮ್ಮ ಕನಸಿಗೆ ಕೊಳ್ಳಿಯಿಟ್ಟು
ಕೇಕೆ ಹಾಕುವ ಕಿರಾತಕರ
ಹಾದಿಗೆ ಅದೆಷ್ಟು ದಿನ
ಹೂ ಮಳೆಗರೆಯುವುದು ಹೇಳಿ…

ಎಂದು ಪ್ರಶ್ನಿಸುವ ನಾಗೇಶ ನಾಯಕರು

ಗರಿ ಮುರಿದಕೊಂಡ ರೆಕ್ಕೆಗಳ
ಇನ್ನಾದರೂ ಬಿಚ್ಚಬೇಕಿದೆ
ಕುಕ್ಕಿ ತಿನ್ನುವ ರಣಹದ್ದುಗಳ
ರಕ್ತ ಹೀರಬೇಕಿದೆ
ಬಚ್ಚಿಟ್ಟ ಒಡಲ ಕಿಚ್ಚಿನ
ಹಿಲಾಲು ಹಿಡಿದು
ಹಲಾಲುಕೋರರ ಮಹಲಿಗೆ
ಮುತ್ತಿಗೆ ಹಾಕಬೇಕಿದೆ

ಎಂದು ಶೋಷಣೆಯ ವಿರುದ್ಧ ಅಕ್ಷರದ ಚಾಟಿ ಬೀಸುವ ಕವಿ ಕೊನೆಗೆ –

ಬನ್ನಿ….
ಸಮತೆಯ ಬಾವುಟವೂರಿ
ಹೊಸ ಹಗಲಿನ ಹೆಗಲು ತಬ್ಬೋಣ ! (…. ಹಿಲಾಲು ಹಿಡಿದು)

ಎಂದು ಶೋಷಣಾಮುಕ್ತ ಸಮತಾ ಸಮಾಜದ ಕನಸು ಕಾಣುವುದು ಮತ್ತು ಇದೇ ಕವನದ ಶೀರ್ಷಿಕೆಯನ್ನು ಇಡೀ ಸಂಕಲನಕ್ಕೆ ಕೊಟ್ಟಿರುವುದರಿಂದ ಇಡೀ ಸಂಕಲನದ ಕಾವ್ಯಧೋರಣೆಯನ್ನು ದಲಿತರ, ಬಡವರ, ಶೋಷಿತರ ಪರ ಎತ್ತಿದ ಪರಿವರ್ತನೆಯ ಬಂಡಾಯದ ಧ್ವನಿಯಾಗಿ ನೋಡಬೇಕಾಗುತ್ತದೆ.

“ಮಂಗಗಳ ಅಂಗಳಕೆ ನೆಗೆಯುವ
ಶೋಕಿಲಾಲರಿಗೆ ನೆಲದ
ಕರುಣೆಯ ದನಿ ಕೇಳಲು ಪುರುಸೊತ್ತಿಲ್ಲ “
ಎಂದು ಆ ಗ್ರಹ ಈ ಗ್ರಹಗಳ ಶೋಧನೆಗೆ, ಬಾಂಬ್‌ ಮಿಸಾಯಿಲ್ ಗಳ ತಯಾರಿಕೆಗೆ ಸಾವಿರಾರು ಕೋಟಿ ಖರ್ಚು ಮಾಡುವ ನಾಯಕರು ಜನರ ಬಡತನ ದಾರಿದ್ರ್ಯ ಹಸಿವು ನೀಗಿಸುವಲ್ಲಿ ಸೋತಿದ್ದಾರೆ. ಅತಿವೃಷ್ಟಿ ಅನಾವೃಷ್ಟಿ ಮತ್ತು ಕೊರೋನಾಗಳಂಥ ವೈರಸ್ ಸೃಷ್ಟಿಸುವ ದುರಂತಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದ್ದಾರೆ ಎಂದು ಅಪರೋಕ್ಷವಾಗಿ ಗುಡುಗುತ್ತಾರೆ. ಮುಂದುವರೆದು –
“ಅದ್ಯಾವ ರಾಮ
ನಮ್ಮ ಕಲ್ಲ ಬದುಕಿಗೆ
ಜೀವ ತುಂಬುತ್ತಾನೋ?
ಮತ್ತ್ಯಾವ ಗಾಂಧಿ ತೋಳು ತಬ್ಬಿ
ನೆತ್ತಿ ನೇವರಿಸುತ್ತಾನೋ ಗೊತ್ತಿಲ್ಲ
ಎಂದು ಸಮಾಜೋದ್ಧಾರಕ್ಕೆ ಇನ್ನೊಮ್ಮೆ ರಾಮ ಗಾಂಧಿಯಂಥವರು ಹುಟ್ಟಿ ಬರಲಿ ಎಂದು ಆಶಿಸುತ್ತಾರೆ.

“ನಿತ್ಯ ನರಕದ ನಾವಿಕರು” ಎನ್ನುವ ಕವಿತೆ ಈ ಸಂಕಲನದ ಮುಖ್ಯವಾದ ಕವಿತೆಯ ಎನಿಸುತ್ತದೆ. ಕವಿ ಇಲ್ಲಿ ಕಾಣಿಸುವ ಶೋಷಣೆಯ ಮುಖಗಳು ಎದೆ ನಡುಗಿಸುವಂಥವುಗಳು.
“ಅವರು ಹಚ್ಚಿದ ಬೆಂಕಿ
ನನ್ನವರ ಧಗಧಗಿಸಿ
ಉರಿದು ಬೂದಿಯಾಗಿಸಿತು
….
ತೆಲೆಯತ್ತಿ ತಿರುಗಿದಕ್ಕೆ
ಚರ್ಮ ಎಬ್ಬಿದರು
ರಕ್ತ ಹರಿಸಿದರು…”
ಎಂದು ದಮನಿತರ ಮೇಲೆ ಆಗುವ ಅನ್ಯಾಯ ಅತ್ಯಾಚಾರಗಳನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಡುವ ಕವಿ –
“ನನ್ನವರ ನೋವಿಗೆ
ಯಾರ ಕರುಳೂ ಚುರಕ್ಕೆನ್ನುವದಿಲ್ಲ
ನನ್ನವರ ಸಾವಿಗೆ
ಯಾರ ಕಣ್ಣೂ ಹನಿಗೂಡುವದಿಲ್ಲ
ನಿತ್ಯ ನರಕದ ನಾವಿಕರು ನಾವು
ನಮ್ಮ ಬದುಕಿನ ದೋಣಿ
ಸ್ವರ್ಗದ ಬಾಗಿಲು ಮುಟ್ಟುವದೇ ಇಲ್ಲ ! “
ಎನ್ನುವ ಹತಾಶ ಭಾವನೆಯನ್ನು ಅಭಿವ್ಯಕ್ತಿಸುವುದು ಓದುಗರಲ್ಲಿ ಒಂದು ತಣ್ಣನೆಯ ವಿಷಾದ ಹೆಪ್ಪುಗಟ್ಟವಂತೆ ಮಾಡುತ್ತದೆ.

ಪೇಪರ ಮಾರಿ ಬದುಕುವ ಹುಡುಗನ ಜೀವನ ವೃತ್ತಾಂತವನ್ನು ಹಿಡಿದಿಡುವ ಕವಿತೆಯಲ್ಲಿ-
” ಓದಿ ಎಸೆದ ಇಂದಿನ ಸುದ್ದಿ
ನಾಳೆಗೆ ರದ್ದಿಯಾಗುವುದು
ನೋವುಣ್ಣುತ್ತ, ನಗುನಗುತ್ತ
ನಿಯತ್ತಲೇ ಕಳೆದ ಬದುಕು
ಸುದ್ದಿಯಾಗುವುದು ಯಾವಾಗ? ” ಎಂದು ನಮ್ಮ ಅಸಮಾನತೆಯ ವ್ಯವಸ್ಥೆಯ ಕುರಿತು ಪ್ರಶ್ನೆ ಎತ್ತುತ್ತಾರೆ.

ಇಲ್ಲಿಯವರೆಗೆ ಜಗದ ಎಲ್ಲ ಅತ್ಯಾಚಾರಗಳನ್ನು ಶೋಷಣೆಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ಬದುಕುತ್ತಿರು ಹೆಣ್ಣು ಈಗ ಸ್ವಾತಂತ್ರ್ಯಕ್ಕೆ ತುಡಿಯುವ, ಗರಿಬಿಚ್ಚಿ ನೀಲಾಗಸಕ್ಕೆ ನೆಗೆಯಬೇಕೆನ್ನುವ ಸಮಯ. ಕೊರಳಿಗೆ ನೇತು ಹಾಕಲಾದ ಎಲ್ಲ ಸುಳ್ಳು ಬಿರಿದು ಬಾವಲಿಗಳ ಕಿತ್ತೆಸೆದು ನಯವಿನಯದಿಂದ ಹಲವು ವಿಧದಲ್ಲಿ ತನ್ನನ್ನು ಶೋಷಿಸಿದ ಪುರುಷ ಸಮಾಜವನ್ನು ಬುದ್ದಿ ಕಲಿಸಬೇಕಾದ ಅಗತ್ಯವನ್ನು “ಒಂದು ಹೆಣ್ಣಿನ ಸ್ವಗತ” ದ ಮೂಲಕ ತುಂಬ ಸಶಕ್ತವಾಗಿ ಕವಿ ಎಲ್ಲ ಶೋಷಿತ ಹೆಣ್ಣಿನ ಸಂವೇದನೆಯಾಗಿ ಮುಂದಿಡುತ್ತಾರೆ.

” ಸಾಕಿನ್ನು ಕ್ಷಮಯಾ ಧರಿತ್ರಿಯ ಪಟ್ಟ
ನಿನ್ನೊಳಗಿನ ರಾವಣನ
ತಲೆ ಕತ್ತರಿಸಲು ಭದ್ರ ಕಾಳಿಯಾಗಬೇಕಿದೆ
ನಾನುಣಿಸುವ ಮಮತೆಯನುಂಡು
ವಿಷ ಕಾರುವ ರಕ್ತ ಬೀಜಾಸುರರ
ಚಂಡ ಕತ್ತರಿಸುವ
ರಣಚಂಡಿಯಾಗಬೇಕಿದೆ…”

” ಹಸಿರು ನೆಲದಲ್ಲಿ ಕಪ್ಪು ಹೊಗೆ” ಈ ಸಂಕಲನದ ಇನ್ನೊಂದು ಮುಖ್ಯ ಕವಿತೆ. ಅಪ್ಪ ಬಿಟ್ಟುಹೋದ ಅಂಗೈಯಗಲ ಹೊಲದಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗುವ ರೈತ ಮಗನ ಜೀವನ ಚಿತ್ರಣ ಈ ಕವಿತೆಯಲ್ಲಿದೆ. ಅದೆಷ್ಟೋ ವರ್ಷಗಳಿಂದ ಬದುಕಿನ ತುತ್ತಿನ ಚೀಲವನ್ನು ತುಂಬಿಸುತ್ತ ಬಂದಿದ್ದ ಫಲವತ್ತಾದ ಭೂಮಿತಾಯಿ ಮಳೆ ಕಾಣದೆ ಭೀಕರ ಕ್ಷಾಮಕ್ಕೆ ತುತ್ತಾಗಿದೆ.

“ಬಂಜರಾದ ಆಕೆಯ ಮಡಿಲಲ್ಲಿ ನಿಂತು
ಅಪ್ಪನನ್ನು ನೆನೆದು ಬಿಕ್ಕಳಿಸುವಾಗ
ಆಕೆ ಎದೆಗವಿಚಿಕೊಳ್ಳುತ್ತಾಳೆ
ತನ್ನ ಅಸಹಾಯಕತೆಗೆ ಮೌನಿಯಾಗುತ್ತಾಳೆ….”
ಆಗ ಬೇರೆ ಗತಿ ಕಾಣದೆ ಕಂಗಾಲಾದ ಮಣ್ಣಿನ ಮಗ
ಅಪ್ಪನ ಕನಸು ಬಿಕರಿಗಿಟ್ಟು ಬದುಕನ್ನು ಒಕ್ಕಲೆಬ್ಬಿಸುವ ಅನಿವಾರ್ಯ ಸಂಕಷ್ಟದ ಸಂದರ್ಭದಲ್ಲಿ ಇರುತ್ತಾನೆ.

” ಹಸಿರು ಚಿಗುರುವ ನೆಲದಲ್ಲೀಗ
ಕಪ್ಪು ಹೊಗೆಯೇಳುತ್ತದೆ
ಅಪ್ಪನ ಆತ್ಮ ಅತೃಪ್ತಿಯಿಂದ
ನರಳುವ ಸದ್ದು ಕಿವಿಯಲಿ ಮಾರ್ದನಿಸುತ್ತದೆ”

“ಅನಾಥ ಆತ್ಮಗಳು” ಎಂಬ ಕವಿತೆ ಕೂಡ ಈ ಸಂಕಲದ ಇನ್ನೊಂದು ಮಹತ್ವದ ಕವಿತೆ. ಇಲ್ಲಿ ಅನಾಥ ಬದುಕಿನ ರೋದನವಿದೆ. ಒಂದು ಅದ್ಭುತವಾದ ರೂಪಕದ ಮುಖೇನ-

“ಹಗಲಿನ ಹೆಗಲಿಗೆ
ಜೋತು ಬಿದ್ದ ರಾತ್ರಿ ಕವಿಯುತ್ತಿದ್ದಂತೆ
ಮುದುರಿಕೊಳ್ಳಲು ಹವಣಿಸುವ
ಅನಾಥ ಆತ್ಮಗಳು
ಕಣ್ಣೀರಾಗುತ್ತವೆ” ಎಂದು ಪ್ರಸ್ತಾಪಿಸುವ ಕವಿ ಕವಿತೆಯ ಕೊನೆಯ ಅಧ್ಯಾಯದಲ್ಲಿ-
” ಕತ್ತಲ ರಾತ್ರಿಯ ಕಾರಸ್ಥಾನಗಳು/ಚೆಲ್ಲುವ ಬಿಸಿಬಿಸಿ ನೆತ್ತರಿನ ಬಿಸುಪು/ಅಸಡ್ಡಾಳರ ಅನೈತಿಕ ಧಂದೆ
ಅಪರಾತ್ರಿಯ ಆ ಚಿತ್ಕಾರ/ಇದೀಗ ಅವರ ಸಾಲಿಗೆ ಸೇರಿಕೊಂಡ/ಮುಗ್ಧರ ಕಣ್ಣೊಳಗಿನ ದಿಗಿಲು
ಎಲ್ಲವೂ ಕೈಗೆಟಕುವಷ್ಟು ಹತ್ತಿರ/ತಿರಸ್ಕಾರದ ಕಾಕದೃಷ್ಟಿಗೆ ಸಿಲುಕಿದ ಅನಾಥರ ಬದುಕು/ಎಲ್ಲೆಂದರಲ್ಲಿ ಉಸಿರು ನಿಂತು ಸಂಭವಿಸುವ ಸಾವು/ಹನಿಗೂಡುವರಿಲ್ಲ, ಬೆನ್ನಿಗಾತುಕೊಳ್ಳುವರಿಲ್ಲ/ ಮುನಿಸಿಪಾಲಟಿಯ ಶವವಾಹನದ/ಖಾಯಂ ಜೊತೆಗಾರರು/ಯಾರಿಗೂ ಬೇಡವಾದವರು..

ಹೀಗೆ ಅನಾಥ ಜೀವಿಗಳ ಬದುಕಿನ ದಾರುಣತೆಯನ್ನು ತುಂಬ ಆರ್ದ್ರವಾಗಿ ಹೃದಯ ಮುಟ್ಟುವಂತೆ ಅನಾವರಣಗೊಳಿಸಿದ್ದಾರೆ.

ಈ ಸಂಕಲನದ ತುಂಬ ಹೀಗೆ ರೂಪಕಗಳು ಮಾತಾಡುತ್ತವೆ. ಉದಾಹರಣೆಗೆ-
ಮುಖವಾಡಗಳ ಮರೆಯಲ್ಲಿ/
ಸತ್ಯದ ಹೆಣ ಕೊಳೆತು ನಾರುತ್ತಿದೆ
ಮುಂದೆ-
ಎದೆ ಸುಡುವ ನೋವುಗಳಿಗೆ
ಮಡಿಲು ಸಿಕ್ಕಿತೆಂದು ನಿರಾಳ ಬೇಡ
ಗಾಯಗಳಿಗೆ ಉಪ್ಪ ಸವರಲು
ಸದಾ ಸಿದ್ಧವಾಗಿಯೇ ಇವೆ ಹಸ್ತಗಳು
ಉಬ್ಬಿಸುವ ಬಲೂನಿನ ಹಿಂದೆ
ಚುಚ್ಚಲು ಅಣಿಯಾದ ಸೂಜಿಯಂತೆ
(ಬೂದಿ ಮುಚ್ಚಿದ ಕೆಂಡ)

ಇನ್ನೊಂದು ಕವನದಲ್ಲಿ –
ಕಬ್ಬಿಣದ ಸಲಾಖೆಗಳು
ಕರಗಿ ಮೃದುವಾಗಲಿ
ಅಂದುಕೊಳ್ಳುತ್ತೇನೆ
ಸಾಕಿನ್ನು ಪ್ರಾಮಾಣಿಕತೆಯ ಸೋಗು
ಇನ್ನಾದರು ತೆರೆಯಬೇಕು
ಮುಚ್ಚಿಕೊಂಡ ಎದೆಕಿಟಕಿಯ ಕದಗಳು
ಹಾರಲಿ ಪ್ರೀತಿ ಹಕ್ಕಿ
ಗರಿಗೆದರಿ ಒಲವ ಬಾನಿಗೆ
ಒಲೆ ತೆರೆದು ಹೊಂಚು ಹಾಕಿ
ಕುಳಿತವರು ಕೈ ಹೊಸೆದುಕೊಳ್ಳಲಿ
ಬಂದೂಕು ಗುರಿಯಿಟ್ಟವರು
ಬೆಕ್ಕಸ ಬೆರಗಾಗಲಿ
ಎಲ್ಲ ಗಡಿಗಳು ದಾಟಿ
ಒಲವು ಹಬ್ಬಿಕೊಳ್ಳಲಿ
ಕಬ್ಬಿನದ ಸಲಾಖೆಗಳು
ಕರಗಿ ಮೃದುವಾಗಲಿ (ಎಲ್ಲ ಗಡಿಗಳು ದಾಟಿ)
ಎಂದು ಗಡಿಗಡಿಗಳನ್ನು ದಾಟಿ ಪ್ರೀತಿಯ ಸಂದೇಶ ರವಾನಿಸುವ ಮೂಲಕ ಕವಿ ಶಾಂತಿಯ ವಕ್ತಾರನಾಗುತ್ತಾನೆ. ಇನ್ನೊಂದು ರೂಪಕ ನೋಡಿ –

ಕಣ್ಣು ಹನಿಗಳು ಕೆರೆಗಟ್ಟಿವೆ
ದೀಪದ ಹುಳ ರೆಕ್ಕೆ ಕಳೆದುಕೊಂಡಿದೆ (ದೀಪದ ಹುಳ)

ಅದೋ ಸೈಕಲ್ಲಿನ ಗಂಟೆ ಸದ್ದು
ನಿಶ್ಯಬ್ಧವನ್ನು ಕದಡುತಿದೆ (ಸುದ್ದಿ ತರುವ ಹನ್ನೆರಡರ ಪೋರ)

ಹೀಗೆ ತಮ್ಮ ಕಾವ್ಯದುದ್ದಕ್ಕೂ ಅನಾಥ ಪ್ರಜ್ಞೆ, ಸ್ತ್ರೀ ಶೋಷಣೆ, ದಲಿತ ಪ್ರಜ್ಞೆ, ಬಂಡಾಯದ ಧ್ವನಿ, ಸಮಾನತೆಯ ಕೂಗನ್ನು ರೂಪಕಗಳ ಮೂಲಕ ತನ್ನ ಹೃದಯ ರಕ್ತದಲ್ಲಿ ಅದ್ದಿತಗೆದವರಂತೆ ನಮ್ಮ ಮುಂದೆ ಇಡುವ ಕವಿ ಮುಂದಿನ ಬಹುತೇಕ ಕವಿತೆಗಳಲ್ಲಿ ಭಗ್ನ ಪ್ರೇಮಿಯಾಗಿ ಕಾವ್ಯಪ್ರೇಮಿಗಳ ರಸಸ್ವಾದನೆಗೆ ಕಾರಣರಾಗುತ್ತಾರೆ. ಒಂದು ಕಾವ್ಯದಲ್ಲಿ ಭಗ್ನಪ್ರೇಮಿಯೊಬ್ಬನನ್ನು ಸಂತೈಸಲು ಮುಂದಾಗುವ ಕವಿ-
“ಇಷ್ಟು ವರ್ಷದಲ್ಲಿ/ಒಮ್ಮೆಯಾದರೂ/ನಿನ್ನ ಹೆತ್ತವರಿಗಾಗಿ/ಅತ್ತಿದಿದೆಯಾ?” ಪ್ರಶ್ನಿಸಿ –
“ಎದೆ ಕೋಣೆಯಲ್ಲಿ ತಳವೂರಿದ/ ಅವಳ ನೆನಪುಗಳ ಪೇರಿ ಕೀಳಿಸು/ಬೆಚ್ಚಗೆ ಬಚ್ಚಿಕೊಂಡ/ ಭಾವದೋಲೆಗಳಿಗೆ ಬೆಂಕಿಯಿಡು/ಅವಳಿಗಾಗಿ ಅತ್ತದ್ದು ಸಾಕು ಎಂದು ನಿರ್ಧರಿಸು/ನಿನ್ನವರಿಗಾಗಿ ನಗುವುದನ್ನು ಕಲಿ” ಎಂದು ಹೇಳಿ ಸೃಷ್ಟಿಸುವ ಪರಿವರ್ತನೆಯ ಪವಾಡ ನೋಡಿ-
“ಹುಡುಗ ಎದ್ದು ನಡೆದ/ ಹಾದಿ ತುಂಬ/ ಗೆಲವಿನ ಹೆಜ್ಜೆ ಗುರುತು/ಚಿತ್ತಾರ ಬಿಡಿಸಿದವು…” (ಪ್ರೀತಿಯ ಇನ್ನೊಂದು ಮುಖ) ಹೀಗೆ ವಂಚನೆಗೊಳಗಾದ ಯುವಕನಿಗೆ ಬುದ್ದಿವಾದ ಹೇಳಿ ಸರಿದಾರಿ ತೋರುವ ಕವಿ ಕೆಲವೊಂದು ಕವಿತೆಗಳಲ್ಲಿ ತಾನೇ ಖುದ್ದು ಭಗ್ನ ಪ್ರೇಮಿಯಾಗಿ ಆಲಾಪಿಸುವುದು ಕಾಣುತ್ತವೆ. ಕೊನೆಗೆ ಒಬ್ಬ ಪ್ರಮಾಣಿಕ ಪ್ರೇಮಿಯಾಗಿ ಮೋಸ ಮಾಡಿ ಹೋದ ಹೆಣ್ಣಿನ ಬಾಳು ಕೂಡ ಹಸನಾಗಲಿ ಎಂದು ಹಾರೈಸುವುದು ಕವಿಯ ಹೃದಯ ವೈಶಾಲ್ಯತೆ ತೋರಿಸುತ್ತದೆ. ಇಂಥದ್ದೇ ವಿರಹ ಪ್ರೇಮದ ಹಳಹಳಿಕೆಗಳು, ಕೋರಿಕೆಗಳು ಇಲ್ಲಿ ಹೇರಳವಾಗಿ ಕಾಣಸಿಗುತ್ತವೆ‌ ಇದಕ್ಕೆ ಸಾಕ್ಷಿಯಾಗಿ ಇನ್ನೂ ಅಷ್ಟು ಕವನಗಳು ನೋಡಬಹುದು.

” ಸಂಭ್ರಮಿಸುತ್ತಿದ್ದೇನೆ/ಇಮೇಲು ಫೇಸಬುಕ್ಕಿನ/ಪಾಸ್ ವರ್ಡಾಗಿ/ಉಳಿದು ಹೋದ ಅವಳಿಗೆ
ಹೆಸರುಬೇಕಿಲ್ಲ ಅಲ್ಲವೇ? (ಅವಳು)

ಎಂದಿಗೂ ಬತ್ತದ/ ದುಃಖದ ಮಡುವು/ ನನ್ನ ಬೆಂಗಾವಲಿಗೆದೆ…/ ಕೊನೆಯಲ್ಲಿ ನನ್ದೊಂದು ಕೋರಿಕೆ/ ನೀ ಕೈಹಿಡಿದ ಅನಾಮಿಕನ ಖುಷಿ/ಎಂದಿಗೂ ಮುಗಿಯದಿರಲಿ/ ನಳನಳಿಸುವ ಗುಲಾಬಿ ನನಗಿರಲಿ/ ಅದರಡಿಯ ಮುಳ್ಳಿನೊಡೆಯ ನಾನಾಗುತ್ತೇನೆ/ ಆಮೀನ್…. (ಆಮೀನ್)

ಕೊನೆಗೊಮ್ಮೆ…/ ಬಂದೇ ಬರುತ್ತಿಯಂಬ/ ಹಣತೆ ಹಚ್ಚಿಯಾದರು ಹೋಗು/ ಅದರ ಬೆಳಕಿನಲ್ಲೇ/ಉಳಿದು ಬದುಕು ಕಳೆದು ಬಿಡುತ್ತೇನೆ! (ಹಣತೆ ಹಚ್ಚಿಯಾದರು ಹೋಗು)

ಪ್ರೀತಿಗೆ ಮಣಿಯದ್ದು/ ಜಗದಲ್ಲಿ ಯಾವುದಿದೆ ಅಂತಾರೆ/ ಕಲ್ಲಾದ ನಿನ್ನ ಅದ್ಯಾಕೆ ಕರಗಿಸಲಿಲ್ಲ? (ಹಾರೈಕೆ)

ಅರೆತೆರೆದ ಕಣ್ಣುಗಳ ನೀ ಬರುವ ದಾರಿಗೆ ಚೆಲ್ಲಿಬಿಟ್ಟಿದ್ದೇನೆ/ ಕೊನೆಗೊಮ್ಮೆ ಅವುಗಳ ಮುಚ್ಚಲಾದರು ನೀ ಬರಲೇಬೇಕು (ಅರೆತೆರೆದ ಕಣ್ಣುಗಳು)

ಕಲ್ಲೆಸೆದರೆ ಪೆಟ್ಟು ತಿಂದ ಮರ ಕೂಡ ನೀಡುತ್ತೆ ಹಣ್ಣು/ ಕರುಣೆ ತೋರಿದರೂ, ನೀ ಬೆನ್ನಿಗಿರಿದ ಚೂರಿ ಮರಗುತಿದೆ.(ಬೆನ್ನಿಗಿರಿದ ಚೂರಿ ಮರಗುತಿದೆ)

ಒಟ್ಟಿನಲ್ಲಿ ವೈಯಕ್ತಿಕ ಹಳಹಳಿಕೆಗಳೋ ಸಾಮಾಜಿಕ ಸಮಸ್ಯೆಗಳೋ ಇಲ್ಲಿ ಕವಿಯ ಮಾಗಿದ ಅನುಭವಗಳು ಕಾವ್ಯವಾಗಿರುವದಂತು ನಿಜ. ಒಟ್ಟಾರೆ ಈ ಕವಿತೆಗಳ ಸ್ಥಾಯಿ ಭಾವ ವಿಷಾದವೇ ಆಗಿದೆ. ವಿಷಾದ ಮನೋಭಾವ ಇಲ್ಲಿ ಕವಿಯನ್ನು ತುಂಬಾ ಭಾದಿಸಿದೆ. ಕೆಲವು ಗಜಲ್ ಮಾದರಿಯ ಸಾಮಾಜಿಕ ಕವಿತೆಗಳು ಕೂಡ ಸಹೃದಯ ಓದುಗರರನ್ನು ವಿಷಾದದ ಮಡುವಿಗೆ ತಳ್ಳುವದನ್ನು ನೋಡಬಹುದು.

ಕತ್ತಲೆಯ ತೋಳು ಕವಚಿ ಬಿಕ್ಕುವ ದನಿಗಳಿಗೆ/ ಹೆಗಲಿಗಾಸರೆಯಾಗಿ ಹಗಲತ್ತ ನಡೆಸುವವರು ಈ ಲೋಕದಲ್ಲಿ (ನಗುವವರು ಕಡಿಮೆ ಈ ಲೋಕದಲ್ಲಿ)

ದೈನೇಸಿ ಕಂಗಳ ದೂರ ಚೆಲ್ಲಿ ದಿಕ್ಕೆಟ್ಟು ನಿಂತಿದ್ದೇನೆ ಸ್ವಾಮಿ/ ಉಳುವ ತುಂಡ ನೆಲ ಹಸಿರು ಕಾಣದೆ ಹೈರಾಣಾಗಿದ್ದೇನೆ ಸ್ವಾಮಿ/ಇಸಿದುಕೊಂಡ ಸಾಲ ಚಕ್ರಬಡ್ಡಿ ಸಮೇತ ತ್ರಿವಿಕ್ರಮನಂತೆ ಬೆಳೆಯುತ್ತದೆ/ ಬದುಕೇ ಬೆತ್ತಲಾದ ಮೇಲೆ ಬಾಕಿಯಿರೋದು ನೇಣು ಕುಣಿಕೆಯೊಂದೇ ಸ್ವಾಮಿ/ ನೀವು ಕೊಟ್ಟ ಯಾವ ಭಾಗ್ಯಗಳು ಬದುಕಿಸಲಾಗುತ್ತಿಲ್ಲ ಸ್ವಾಮಿ/ ಗೋರಿ ತೋಡಿ ಹೂತು ಬಿಡಿ ಉಸಿರಾಡುವ ಶವವಾಗಿದ್ದೇವೆ ಸ್ವಾಮಿ(ಉಸಿರಾಡುವ ಶವವಾಗಿದ್ದೇನೆ ಸ್ವಾಮಿ)

ಎಂದು ಸಾವಿಗೆ ಅಂಗಲಾಚುವ ಕವಿ ಇಷ್ಟೆಲ್ಲ ನೋವು ನಂಜಗಳನ್ನು ಸಹಿಸಿಕೊಂಡು ಆತ್ಮಹತ್ಯೆಗೆ ಶರಣಾಗದೆ ಈ ಕಲ್ಲು ಹೃದಯಿಗಳ ಸಮಾಜದಲ್ಲಿ ಹೇಗೆ ಬದುಕಿದ ಎನ್ನುವುದು ಪ್ರಶ್ನೆಯಾದರು ಅವನ ಕೈಹಿಡಿದ ಅಕ್ಷರ, ಸಾಹಿತ್ಯ, ಸಿದ್ಧಾಂತ, ಜ್ಞಾನ, ಪ್ರೀತಿ ಪ್ರೇಮ, ಮಮತೆ ವಾತ್ಸಲ್ಯ ಅವನನ್ನು ಮತ್ತೆ ಮತ್ತೇ ಬದುಕಲು ಪ್ರೇರೇಪಿಸಿದೆ. ಜೀವನ್ಮುಖಿಯಾಗಿಸಿದೆ ಎನ್ನುವುದು ಈ ಕೆಳಗಿನ ಸಾಲುಗಳು ನಿರೂಪಿಸುತ್ತವೆ.

ಈಗೀಗ….
ದುಃಖ ಭಾರವೆನಿಸುವದಿಲ್ಲ
ಒಬ್ಬಂಟಿತನ ಕಾಡುದಿಲ್ಲ
ನನ್ನೊಳಗಿನ ಜೀವಬಂಧುವಿಗೆ
ಪ್ರೀತಿ ಹನಿಸೂತ್ತಿದ್ದೇನೆ (ನನ್ನೊಳಗಿನ ಜೀವ ಬಂಧು)

ಬುದ್ಧನೆಂಬ ದಿವ್ಯ ಬೆಳಕು
ಲೋಕ ಬೆಳಗೋ ದೀವಿಗೆ
ನೊಂದವರಿಗೆ ಬೆಂದವರಿಗೆ
ತಂಪನೆರೆಯುವ ಹೂನಗೆ (ಬುದ್ಧನೆಂಬ ಬೆಳಕು)

ಹೀಗೆ ಹೃದಯದ ರಕ್ತಸ್ರಾವಕೆ ಮದ್ದಾಗುವ, ಎದೆ ನೋವಿಗೆ ಸಾಂತ್ವನವಾಗುವ ಕಾವ್ಯಗುಚ್ಛ ಕೊಟ್ಟ ಮಿತ್ರ ನಾಗೇಶ ಜೆ ನಾಯಕರು ಈ ಸಂಕಲನ ಮೂಲಕ ಸಾಹಿತ್ಯಲೋಕದಲ್ಲಿ ಶಾಶ್ವತವಾದ ಸ್ಥಾನ ಸಂಪಾದಿಸಿದ್ದಾರೆ ಎಂದು ಹೇಳಬಹುದು.

ಅಶ್ಫಾಕ್ ಪೀರಜಾದೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x