ಒಂದ್ ರೂಪಾಯ್ ಕೊಡವ್ವ ಸೇಂದಿ ಕುಡಿಯಾಕೆ: ಡಾ. ಗವಿ ಸ್ವಾಮಿ

 


ನಾನು ಕಂಡ ಕೆಲವು ವ್ಯಕ್ತಿಗಳ ಬಗ್ಗೆ ಬರೆಯಬೇಕೆನಿಸುತ್ತಿದೆ. ನನಗೆ ಇಂಥವರೇ ನೆನಪಿನಲ್ಲುಳಿಯುತ್ತಾರೆ. ಇವರನ್ನು ನೆನೆವಾಗ ನನ್ನ ನೆಚ್ಚಿನ ಲೇಖಕ ಆಂಟನ್ ಚೆಕೊವ್ ನೆನಪಾಗುತ್ತಾನೆ. ಆತ ಮಾತೃ ಹೃದಯದ ಬರಹಗಾರ.ತನ್ನ ಪಾತ್ರಗಳನ್ನು ತಾಯಿಯಂತೆ ಮುದ್ದು ಮಾಡುತ್ತಾನೆ. ಚೆಕೊವ್ ಬಳ್ಳಿಯಲ್ಲಿ ನಳನಳಿಸುತ್ತಿರುವ ಕುಸುಮಗಳನ್ನು ಮುಟ್ಟುವುದಿಲ್ಲ. ನೆಲದ ಮೇಲೆ ಬಿದ್ದಿರುವ, ದಾರಿಹೋಕರ ಪಾದಗಳಿಗೆ ಸಿಲುಕಿ ನಲುಗುತ್ತಿರುವ ಹೂಗಳನ್ನು ಆಯ್ದು ಅಪ್ಪಿಕೊಳ್ಳುತ್ತಾನೆ .
ಕ್ಷಮಿಸಿ, ಚೆಕೊವ್ ನ ನೆನಪಾದಗಲೆಲ್ಲಾ I tend to get carried away.
 
ನಾನು ಬರೆಯಬೇಕೆಂದಿರುವವರ ವಿಷಯಕ್ಕೆ ಬರೋಣ. ಗುಂಡ್ಲುಪೇಟೆ ಬಸ್ ನಿಲ್ದಾಣವನ್ನು ನೋಡಿರುವವರು ಈತನನ್ನು ನೋಡದಿರಲು ಸಾಧ್ಯವೇ ಇಲ್ಲ . ಆರೂವರೆ ಅಡಿಯಷ್ಟು ಎತ್ತರವಿದ್ದಾನೆ. ಚೂಪು ಮೂಗು, ತೀಕ್ಷ್ಣ ಕಣ್ಣುಗಳು, ಉದ್ದಕ್ಕೆ ಬೆಳೆದು ನರೆತು ಚೆದುರಿಕೊಂಡಿರುವ ತಲೆ ಕೂದಲು, ಪ್ಯಾಚುಗಳೇ ತುಂಬಿರುವ ಮಾಸಲು ಕೋಟು  .ವಯಸ್ಸು ಐವತ್ತೈದರಿಂದ ಅರವತ್ತಿರಬಹುದು. ಯಾವಾಗಲೂ ಅವನ ಕೈಯಲ್ಲಿ ಕೆಲವು ಪೇಪರ್ ಗಳಿರುತ್ತವೆ. ನಿಮಗೆ ಅನಿಸುತ್ತಿರಬಹುದು ನಾನು ಒಬ್ಬ ಮಾನಸಿಕ ಅಸ್ವಸ್ಥನ ಬಗ್ಗೆ ಹೇಳುತ್ತಿದ್ದೇನೆಂದು. ನಾನು first time ಅವನನ್ನು ನೋಡಿದಾಗ ಆಗತಾನೇ ಮಳೆ ಹುಯ್ದು ನಿಂತಿತ್ತು. ಆತ ಹತ್ತು ರೂಪಾಯಿ ನೋಟನ್ನು ನೀರಿಗೆ ಅದ್ದುತ್ತಿದ್ದ, ಮತ್ತೆ ತೆಗೆದು ಬಟ್ಟೆಗೆ ಒರಸಿಕೊಳ್ಳುತ್ತಿದ್ದ,ಮತ್ತೆ ಅದ್ದುತ್ತಿದ್ದ, ಮತ್ತೆ ಒರೆಸಿಕೊಳ್ಳುತ್ತಿದ್ದ . ಇದು typical mental case ಅಂದುಕೊಂಡಿದ್ದೆ .
 
ಆದರೆ, ದಿನಕಳದಂತೆ ಅವನ ಬಗ್ಗೆ ಹೊಸ ಹೊಸ ವಿಷಯಗಳು ತಿಳಿಯಲಾರಂಭಿಸಿದವು. ಗುಂಡ್ಲುಪೇಟೆಯಲ್ಲಿ ಸುಮಾರು 20 ಜನ ಮಾನಸಿಕ ಅಸ್ವಸ್ಥರನ್ನು ನೋಡಿದ್ದೇನೆ. ಟೌನಿನ ಜನ ಅವರನ್ನೆಲ್ಲಾ typical ಹುಚ್ಚರ categoryಗೆ ಸೇರಿಸಿಬಿಟ್ಟಿದ್ದಾರೆ. ಆದರೆ ಅವನ  ಬಗ್ಗೆ soft corner ಇಟ್ಟುಕೊಂಡಿದ್ದಾರೆ. ಯಾರೂ ಅವನನ್ನು ಹುಚ್ಚ ಎನ್ನಲು ತಯಾರಿಲ್ಲ. ಅವನನ್ನು ಚೆನ್ನಾಗಿ ಬಲ್ಲವರ ಬಾಯಲ್ಲಿ ನಾನು ಕೇಳಿಸಿಕೊಂಡಿದ್ದನ್ನು ನಿಮಗೆ ಹೇಳುತ್ತೇನೆ. ಆತನನ್ನು ಅವರು ಕುಮಾರ್ ಎನ್ನುತ್ತಾರೆ. ಆತ SSLC, PUCಯಲ್ಲಿ ಟೌನಿಗೇ rank student ಅಂತೆ. ಪ್ರತಿಷ್ಟಿತ national ಬ್ಯಾಂಕೊಂದರಲ್ಲಿ ಪ್ರೊಬೇಷನರಿ ಆಫಿಸರಾಗಿ ಕೆಲಸ ಮಾಡುತ್ತಿದ್ದನಂತೆ, ಕೆಲವರು ಅಕೌಂಟೆಂಟ್ ಅನ್ನುತ್ತಾರೆ; ಒಟ್ಟಿನಲ್ಲಿ ಅವನು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದುದಂತೂ ಸತ್ಯ.
 
ಒಮ್ಮೆ ನಾನು ಬಸ್ಸಿನಲ್ಲಿ ಕುಳಿತಿದ್ದಾಗ ನನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದವರೊಬ್ಬರು ಅವನನ್ನು ಹೆಸರು ಹಿಡಿದು ಕೂಗಿದಾಗ, ಅವರಿಗೆ ಪರಿಚಿತನೆಂಬಂತೆ ಹತ್ತಿರ ಬಂದ. ' ಏನೋ ಕುಮಾರ್ ಚೆನ್ನಾಗಿದ್ದಿಯಾ?' ಅಂದರು. ಹೌದೆಂಬಂತೆ ಮುಗುಳ್ನಕ್ಕ. ಅವನು ನನ್ನ ಕಿಟಕಿಯ ಪಕ್ಕದಲ್ಲೇ ನಿಂತಿದ್ದ. ಆಗಲೇ ನಾನು ಅವನ ಮುಖವನ್ನು ತೀರಾ ಸಮೀಪದಿಂದ ನೋಡಿದ್ದು . ಥೇಟ್ ಓಶೋನಂತೆ ಕಾಣುತ್ತಿದ್ದ. ಮತ್ತೆ ಅವರು ಕೇಳಿದರು. ' ಏನೋ ಕೈಲಿರೋದು ಸೈಟ್ ಪೇಪರ್ಸೇನೋ? ಅವನು ಮುಗುಳ್ನಗುತ್ತಾ ಹೊರಟು ಹೋದ. ಪಕ್ಕದಲ್ಲಿ ಕುಳಿತಿದ್ದ ಅವರ ಹೆಂಡತಿ ಕೇಳಿದರು,' ಯಾರ್ರೀ ಅವನು ಮೆಂಟ್ಲು, ಒಳ್ಳೇ friend ಥರಾ ಮಾತಾಡಿಸ್ತಿದ್ರಿ?' ಅಂದರು. ಹೌದು ಕಣೇ ಅವನು ನನ್ನ ಕ್ಲಾಸ್ ಮೇಟು, ತುಂಬಾ brilliant ಮನುಷ್ಯ times of india ಎಷ್ಟು ಚೆನ್ನಾಗಿ ಓದ್ತಾನೆ ಗೊತ್ತೇನೆ ಅಂದರು.
 
ಅವನ ಸಂಬಂಧಿಕರಾರೋ ಅವನ ಆಸ್ತಿಯನ್ನೆಲ್ಲ ಹೊಡೆದುಕೊಂಡು ಬೀದಿಗೆ ತಳ್ಳಿದರು. ಅದಕ್ಕೀಗ ಈ ರೀತಿ ಆಗಿದ್ದಾನೆ ಎಂದರು. ಮತ್ತೆ ಕೆಲವರ ಬಾಯಲ್ಲಿ ಕೇಳಿದಾಗ, love failure ನಿಂದ ಹೀಗಾದ ಎನ್ನುತ್ತಾರೆ. ನಾನು ಅವನ ಬಗ್ಗೆ ತಿಳಿದುಕೊಳ್ಳುತ್ತಲೇ ಇದ್ದೇನೆ. ಅವನ ಪ್ರಸ್ತುತ ಸ್ಥಿತಿಗೆ ಕಾರಣವಾದ ಘಟನೆಯೇನೆಂಬುದನ್ನು ತಿಳಿದುಕೊಂಡು, ಮುಂದೊಂದು ದಿನ ಸ್ಪಷ್ಟವಾಗಿ ನಿಮ್ಮ ಮುಂದಿಡುತ್ತೇನೆ.
 
ಇವನನ್ನು ನೆನೆದಾಗಲೆಲ್ಲ ನನ್ನ ಪ್ರೀತಿಯ ಲೇಖಕನ ಕಥೆ ward no.6 ನೆನಪಿಗೆ ಬರುತ್ತದೆ. ಓದಲೇ ಬೇಕಾದ ಕಥೆ. ಓದಿರದಿದ್ದರೆ ಖಂಡಿತ ನೀವು ಏನನ್ನೋ ಮಿಸ್ ಮಾಡಿಕೊಂಡಿದ್ದೀರಿ ಎಂದರ್ಥ.
 
ಇನ್ನೊಬ್ಬಳು ಘಾಟಿ ಮುದುಕಿಯ ಬಗ್ಗೆ ಹೇಳುತ್ತೇನೆ. ಬಸ್ ಸ್ಟಾಂಡಿನಲ್ಲಿ ಇವಳನ್ನು ನೋಡದಿರುವವರೇ ಇಲ್ಲ. ಕಿಟಕಿ ಹತ್ರ ಬರ್ತಾಳೆ. ಹೆಂಗಸರು ಅವಳ ಮೊದಲ target. 'ಇಂಜೊಲಿಂದ ತಿಂಡಿ ತಿಂದಿಲ್ಲಕಾ ಕೂಸು, ಎರಡ್ ರುಪಾಯಿ ಕೊಡು ತಾಯಿ '  ಅಂತಾಳೆ. ಹೊಸಬರು ಒಂದೋ ಎರಡೋ ಕೊಟ್ಟು ಸುಮ್ಮನಾಗ್ತಾರೆ. ಅವಳನ್ನು ಮೊದಲಿನಿಂದಲೂ ನೋಡಿರುವ ಹಳಬರು ಅವಳ ಕಡೆ ತಿರುಗುವುದಿಲ್ಲ. ಮುದುಕಿ ಬಿಡುವುದಿಲ್ಲ. ಮತ್ತೆ ಕಿಟಕಿಗೆ ನೇತಾಕಿಕೊಂಡು, ' ಕೊಡು ತಾಯಿ ದೊಡ್ ಮನ್ಸ್ ಮಾಡಿ ಕೊಡು ತಾಯಿ,  ಬಸ್ ಹೊಂಟೋಯಿತ್ತಾ ಕೊಡು ತಾಯಿ ಅಂತಾಳೆ.
ಅವರು ಕಿಟಕಿ ಮುಚ್ಚಿಬಿಟ್ಟರೆ, 'ನಿನ್ ದಮ್ಮಯ್ಯಾ ಅಂತಿನಿ ಕೊಡು ತಾಯಿ ಕೊಡು ನಮ್ಮವ್ವ', ಅಂತಾ ರಪರಪಾ ಅಂತ ಕಿಟಕಿ ಬಡೀತಾಳೆ. ಅವರು ಅದಕ್ಕೂ ಜಗ್ಗದೇ ಇದ್ದರೆ, 'ಅಯ್ಯ ಹೋಗು, ನಿನ್ನೇನ್ ಸಾಮ್ರಾಜ್ಯ ಕೇಳಿದ್ನಾ, ಏಡ್ ರೂಪಾಯಿಗ್ ಜೂಟ್ ಆಡ್ತಿದಯಲ್ಲಾ ನಿನಗ್ ಮನಸತ್ವೇ ಇಲ್ಲಾ ಅನ್ನಗದಾ' ಅಂತಾ ಹಿಡಿಶಾಪ ಹಾಕ್ತಾಳೆ.
 
ಒಮ್ಮೆ ಯಾರೋ ಹೆಂಗಸು ಇವಳ ಕಿರುಕುಳ ತಡೆಯಲಾಗದೇ ಐದು ರುಪಾಯಿ ಕೊಟ್ಟಾಗ, ಕಂಡಕ್ಟರ್ ಹೇಳ್ತಿದ್ರು; 'ಯಾಕಮ್ಮಾ ಕೊಟ್ಟೇ, ಅವಳಿಗೆ ಏನ್ ಕಮ್ಮಿ ಅಂತಾ ಕೊಟ್ಟೆ. ಗಂಡ ಮಕ್ಳು ಎಲ್ಲಾ ಅವ್ರೇ, ಆಸ್ತಿ ಅದೆ. ಕುಡಿಯೋ ಚಟ ಆ ಮುದುಕಿಗೆ, ಇನ್ನತ್ತು ರುಪಾಯಿ ಸೇರಿಸಿಕೊಂಡು ಒಂದು ಪೆಗ್ ಹಾಕಂಬತ್ತಾಳೆ ನೋಡ್ತಾ ಇರು '. ಅಂದ್ರು. ಕಂಡಕ್ಟರ್ ಗಳಿಗೊಂದು trick ಗೊತ್ತು. ಅವಳೇನಾದರೂ ದುಡ್ಡು ಕೇಳಲು ಬಂದರೆ ಒಂದು ಖಾಲಿ ಪೇಪರ್ ಮುಂದೆ ಹಿಡಿದು, ಇದಕ್ಕೆ sign ಹಾಕು ಅಂತಾರೆ. ಅಷ್ಟೇ, ಆಕೆ ಓಡಿ ಹೋಗ್ಬಿಡ್ತಾಳೆ!
 
ಇನ್ನೊಬ್ಬನ ಬಗ್ಗೆ ಹೇಳುತ್ತೇನೆ. ಈತನ ಹೆಸರು ಬಸಪ್ಪ ಅಂತಾ. ವಯಸ್ಸು ಎಪ್ಪತ್ತರ ಮೇಲಾಗಿದೆ. ನಮ್ಮೂರಿನವ. ಮದುವೆಯಾದ ವರ್ಷಕ್ಕೋ, ಎರಡು ವರ್ಷಕ್ಕೋ ಹೆಂಡತಿ ತೀರಿಕೊಂಡಳಂತೆ. ಮತ್ತೆ ಮದುವೆಯಾಗಲಿಲ್ಲ. ಅಣ್ಣ, ಅಕ್ಕ ಎಲ್ಲರೂ ತೀರಿಕೊಂಡಿದ್ದಾರೆ. ಒಂದು ಗೂಡಿನಂತ ಮನೆಯಲ್ಲಿ ಒಬ್ನೇ ವಾಸಿಸುತ್ತಾನೆ. ಅದನ್ನು ಎಲ್ಲರೂ ಉಪ್ಪಿಟ್ಟಿನ ಮನೆ ಎಂದು ಕರೆಯುತ್ತಾರೆ. ಯಾಕೆ ಆ ಹೆಸರು ಬಂತೆಂದರೆ ಹಿಂದೆ ಆ ರೂಮಿನಲ್ಲಿ ಸ್ಕೂಲ್ ಮಕ್ಕಳಿಗೆ ಮಧ್ಯಾಹ್ನ ದ ಟೈಮು ಉಪ್ಪಿಟ್ಟು ಮಾಡಿಕೊಡುತ್ತಿದ್ದರಂತೆ. ಇದು ಇಪ್ಪತ್ತು -ಇಪ್ಪತ್ತೈದು ವರ್ಷಗಳ ಹಿಂದಿನ ಮಾತು. ಹಬ್ಬದ ದಿನಗಳಲ್ಲಿ, ಅಥವಾ ಇನ್ನಿತರ ಅನಿವಾರ್ಯ ದಿನಗಳಲ್ಲಿ ಬೇರೆಯವರ ಮನೆಗೆ ಊಟಕ್ಕೆ ಹೋಗ್ತಾನೆ ಅಷ್ಟೇ. ಉಳಿದಂತೆ ತಾನೇ ಮಾಡಿಕೊಳ್ತಾನೆ. ಅಪರೂಪಕ್ಕೊಮ್ಮೆ  ನಮ್ಮ ಮನೆಗೆ ಬರ್ತಾನೆ. ನನ್ನನ್ನು ಕಂಡರೆ ಆ ಮುದುಕನಿಗೆ ತುಂಬಾ ಅಕ್ಕರೆ. ನಾನು ಬೀದಿಯಲ್ಲಿ ಹೋಗುತ್ತಿದ್ರೆ ಅಡ್ಡ ಹಾಕಿಕೊಂಡು 'ಮೇಷ್ಟ್ರೆ ಯಾನು ಇಲ್ವಾ' 'ಅಂತಾನೆ. ನನ್ನನ್ನವನು ಕರೆಯುವುದೇ ಹಾಗೆ. ನಾನು ಐದು ರೂಪಾಯಿ ಬಿಲ್ಲೆ ಕೊಟ್ಟರೆ ಒಕ್ಕಣ್ಣಿನಲ್ಲೇ ತಿರುಗಿಸಿ ನೋಡಿ ಜೇಬಿಗೆ ಹಾಕಿಕೊಳ್ಳುತ್ತಾನೆ. ಕೆಲವರು, 'ಅವನಿಗ್ಯಾಕ್ ಕೊಟ್ಟೈ, ವಯ್ಯೇಪಿ ಬತ್ತದಾ ರೇಸನ್ ಕಾರ್ಡ್ ಅದಾ. ಕೊಟ್ಟದ್ನೆಲ್ಲ ಗಂಟಾಕತನ ' ಅಂತಾರೆ.
 
ನಾನು ಕಿವಿಗೊಡುವುದಿಲ್ಲ. ತೇಜಸ್ವಿಯವರ ಪರಿಸರದ ಕತೆಗಳು ಪುಸ್ತಕದಲ್ಲಿ ಮಾರ ಎಂಬ ಹೆಸರಿನ, ತೇಜಸ್ವಿಯವರ ತೋಟ ಕಾಯುವ ಒಬ್ಬ ಹಣ್ಣು ಮುದುಕನ ಪಾತ್ರ ಬರುತ್ತದೆ. ಅದರಲ್ಲಿ, ತೇಜಸ್ವಿಯವರ ಮಗಳು ಸುಸ್ಮಿತಾಳಿಗೆ ಮಾರನನ್ನು ಕಂಡರೆ ಅಕ್ಕರೆ. ಆ ಮುದಿಯ ಈ ಮಗುವನ್ನು ಒಂದ್ ರೂಪಾಯ್ ಕೊಡವ್ವ ಸೇಂದಿ ಕುಡಿಯಾಕೆ ಅಂತ ಕೇಳ್ತಿರ್ತಾನೆ. ಆ ಮಗು,ಇವನಿಗೆ ಒಂದು ರೂಪಾಯಿ ಕೊಡುವುದು ತನ್ನ ಕರ್ತವ್ಯವೇನೋ ಎಂಬಂತೆ ಅಕ್ಕರೆಯಿಂದ ಕೊಡುತ್ತಿರುತ್ತದೆ. ಹಾಗೆಯೇ ನಾನೂ ಸಹಾ. ಅವನು ಕೇಳಿದಾಗಲೆಲ್ಲ ಖುಷಿಯಿಂದ ಕೊಡುತ್ತಿರುತ್ತೇನೆ.
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
hipparagi Siddaram
hipparagi Siddaram
11 years ago

ವೈವಿಧ್ಯಮಯ ಪಾತ್ರಗಳು….ಆ ಪಾತ್ರಗಳ ಪ್ರಪಂಚ…..ಪಾತ್ರಗಳ ಪರಿಚಯದ ವಿನ್ಯಾಸ ಚೆನ್ನಾಗಿದೆ…..

sharada moleyar
sharada moleyar
11 years ago

chennagive patragalu
odisikondu hoguvastu uttamavagide writing style

Santhoshkumar LM
11 years ago

🙂 Good one!!

ರಾಜೇಂದ್ರ ಬಿ. ಶೆಟ್ಟಿ

ರಸ್ತೆಯ ಬದಿಯಲ್ಲಿ ಕಾಣುವ ಪಾತ್ರಗಳು ಆತ್ಮೀಯವಾಗಿ ಬಿಡುತ್ತವೆ.

4
0
Would love your thoughts, please comment.x
()
x