-1-
ದುಂಡಾಪುರ ! ಎಲ್ಲ ಜಾತಿಯ , ಎಲ್ಲ ವರ್ಗದ ಜನ ಒಟ್ಟಾಗಿ,ಒಗ್ಗಟ್ಟಾಗಿ ಬದುಕುವ ಒಂದು ಪುಟ್ಟ ಗ್ರಾಮ. ಜಾತಿಯಾಧಾರಿತ ಕಸಬುಗಳಲ್ಲಿ ನಿರತ ಗ್ರಾಮಸ್ಥರು ತಂತಮ್ಮ ಯೋಗ್ಯತೆಯನುಸಾರ ನಡೆದುಕೊಳ್ಳುವುದರಿಂದ ವಿವಿಧ ಕೋಮುಗಳ ನಡುವೆ ಮನಸ್ತಾಪವಿಲ್ಲ, ಗಲಭೆಗಳಿಲ್ಲ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ತತ್ತ್ವದಲ್ಲಿ ನಂಬಿಕೆಯಿಟ್ಟು ಶಾಂತಿಯಿಂದ, ನಂಬಿಕೆಯಿಂದ ಬದುಕು ಸಾಗಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಈ ಗ್ರಾಮವನ್ನು ಒಂದು ಆದರ್ಶ ಗ್ರಾಮ ಒಂದು ಮಾದರಿ ಗ್ರಾಮವೆಂದೇ ಬಣ್ಣಿಸಬಹುದು. ಜಾತಿಯಾಧಾರಿತ ಕಸಬುಗಳಾದ ಚಮ್ಮಾರಿಕೆ, ಕುಂಬಾರಿಕೆ,ಕಂಬಾರಿಕೆ, ಪತ್ತಾರಿಕೆ, ಬಡಿಗತನ, ಕುರಿ ಸಾಕಾಣಿಕೆ, ಕೃಷಿ ಮುಂತಾದ ಕಾಯಕಗಳಲ್ಲಿ ಇಲ್ಲಿನ ಜನ ತೊಡಗಿ ಕಾಯಕವೇ ಕೈಲಾಸವೆಂಬ ಮಾತು ಅಕ್ಷರಶಃ ನಿಜವಾಗಿಸಿದ್ದಾರೆ. ಕೆಳಜಾತಿಯವರು ಮೇಲ್ಜಾತಿಯವರಿಗೆ ಗೌವರವದಿಂದ ಕಾಣುತ್ತ, ಮೇಲ್ಜಾಜಾತಿಯ ಜನ ಕೆಳಜಾತಿಯ ಜನರಿಗೆ ಪ್ರೀತಿ ತೋರಿಸುತ್ತ ಅವರಿಗೆ ಕೈಲಾದಷ್ಟು ಸಹಾಯ ಮಾಡುತ್ತ ಪರಸ್ಪರ ಸಾಮರಸ್ಯದಿಂದ ಜೀವಿಸುತ್ತಿದ್ದಾರೆ. ಹೀಗಾಗಿ ಇಡೀ ದೇಶವೆಲ್ಲ ಕೋಮಗಲಭೆಗಳಿಂದ, ಅರಾಜಕತೆಯಿಂದ ತತ್ತರಿಸುತ್ತಿದ್ದರೂ ದುಂಡಾಪುರ ಮಾತ್ರ ಕಲಹ, ಕೋಲಾಹಲ, ಸಂಘರ್ಷ ರಹಿತವಾಗಿದೆಯಂದರೆ ಇಲ್ಲಿನ ನಾಗರಿಕರು ಅದೆಷ್ಟು ಶಾಂತಿಪ್ರಿಯರೆಂಬುದು ಅರ್ಥವಾಗುತ್ತದೆ. ಬಹುಸಂಖ್ಯಾತ ಮೇಲ್ವರ್ಗದವರಿಂದ ಕೆಳವರ್ಗದವರ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆದ ಉದಾಹರಣೆಗಳಿಲ್ಲ. ಇದರ ಬದಲಾಗಿ ಅವರ ನೋವಿನಲ್ಲಿ ಸಂಕಷ್ಟದಲ್ಲಿ ಭಾಗಿಯಾಗುತ್ತ , ಸಹಾಯ ಹಸ್ತ ಚಾಚುತ್ತ, ಅವರಿಗೆ ಆರ್ಥಿಕ ನೆರವು ಒದಗಿಸುತ್ತಾ ಪರೋಪಕಾರದ ಜೀವನ ನಡೆಸುತ್ತಿದ್ದಾರೆ. ಕೆಳವರ್ಗದವರು ಅಷ್ಟೇ!, ಅವರು ಒದಗಿಸುವ ಉಪಕಾರಕ್ಕೆ ಋಣಿಯಾಗಿ,ವಿನಮ್ರರಾಗಿ ಅವರು ಹೇಳುವ ಎಲ್ಲ ಕೆಲಸ ಕಾರ್ಯಗಳನ್ನು ಮಾಡುತ್ತ ಶ್ರಮದ ಬದುಕು ಸಾಗಿಸುತ್ತ ಮೇಲಿನವರು ಮತ್ತಷ್ಟು ಮೇಲಕ್ಕೇರುವಂತೆ ಮಾಡುತ್ತಿದ್ದಾರೆ.
ಸಕಲ ಕುಲಗಳಿಗೂ ಒಂದೊಂದು ಕುಲದೇವರುಗಳಿರುವಂತೆ ಇಲ್ಲಿನ ಉಚ್ಚವರ್ಗಕ್ಕೂ ಒಂದು ದೇವರಿದ್ದಾನೆ. ದುಂಡೇಶ್ವರ ಎಂಬುದು ಆ ಕುಲದೇವರ ಹೆಸರು. ದುಂಡಾಪುರದ ಗ್ರಾಮ ದೇವರು, ಗ್ರಾಮದ ರಕ್ಷಣೆ ಮಾಡಲು ನಿಂತ ದೈವೀಶಕ್ತಿ. ಭಾರಿ ಭಯಂಕರ ಸಿಟ್ಟಿನ ಬೆಂಕಿಯಂಥ ಉಗ್ರ ಸ್ವರೂಪದ ದೇವರು. ಅವನ ಹೆಸರೆತ್ತಿದರೆ ಸಾಕು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಹೆದರುತ್ತಾರೆ. ಗಡಗಡನೆ ನಡಗುತ್ತಾರೆ. ಅವನಿಗೆ ತೋರಬಹುದಾದ ಭಯಭಕ್ತಿಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸರಿ ಭಾರಿ ಕೆಡಕನ್ನುಂಟು ಮಾಡುವ ದುಷ್ಟ ದೇವರೆಂದೇ ಪ್ರಖ್ಯಾತಿ. ದುಂಡೇಶ್ವರನ ಆಣೆಯಾದೀತು ಎಂದು ಯಾರಾದರು ಹೇಳಿದರೆ ಸಾಕು ಆಗಬೇಕಾದ ಕೆಲಸ ಆಗಲೇಬೇಕು. ಇಲ್ಲವೆಂದ್ರೆ ಕೆಲಸ ಮಾಡದವನ ಕಥೆ ಮುಗಿತೆಂದೇ ಭಾವಿಸಬೇಕು. ಕೇವಲ ಒಂದೇ ಒಂದು ವರ್ಷದಲ್ಲಿ ಆತ ಸರ್ವನಾಶವಾಗಿ ಹೋಗುವನೆಂದು ಹೇಳಲಾಗುತ್ತದೆ. ಮೇಲ್ಜಾತಿಯ ಕುಲ ದೇವರಾದ ದುಂಡೇಶ್ವರ ಅವರ ನಾಲಿಗೆಗಳ ಮೇಲೆ ಸಲಿಸಾಗಿ ಹರಿದಾಡುವಂತೆ ದಲಿತರ ನಾಲಿಗೆಗಳ ಮೇಲೆ ಹರಿದಾಡುವದಿಲ್ಲ. ಏಕೆಂದರೆ ಆ ಕೆಟ್ಟ ದೇವರ ಹೆಸರು ಎತ್ತಲು ಕೂಡ ಇವರು ಹೆದರುತ್ತಾರೆ. ದುಂಡೇಶ್ವರನ ಆಣೆ ಮಾಡಿ ಈ ಕೆಲ್ಸಾ ಮಾಡಲೇಬೇಕೆಂದು ಉಚ್ಚ ಜಾತಿಯವರು ನೀಚ ಜಾತಿಯವರಿಗೆ ಆದೇಶ ಮಾಡಿದರೆ ಇವರು ಅದನ್ನು ಪಾಲಿಸಲೇಬೇಕು. ಇಲ್ಲವಾದರೆ ತನ್ನ ಕುಲಬಾಂಧವರಿಗೆ ಅವಮಾನವಾಗುವುದು ದುಂಡೇಶ್ವರ ಎಂದಿಗೂ ಸಹಿಸುವದಿಲ್ಲ ಎಂಬುದು ಜನರ ನಂಬಿಕೆ, ನಿಜವೋ ಸುಳ್ಳೋ ಗೊತ್ತಿಲ್ಲ, ಆದರೆ ಮೇಲ್ಜಾತಿಯ ಜನ ಕೆಳಜಾತಿಯ ಜನರ ಮೇಲೆ ಹಿಡಿತ ಸಾದಿಸಲು ಬಳಸುವ ತಂತ್ರವೆನ್ನುವುದು ಕೆಲ ಬುದ್ದಿ ಜೀವಿಗಳ ವಾದ. ತನ್ನ ವಿರೋಧಿಗಳ ಬಾಯಿ ಮುಚ್ಚಿಸಲು ಅವರು ದೇವರ ಹೆಸರನ್ನು ಅಸ್ತ್ರವನ್ನಾಗಿ ಉಪಯೋಗಿಸುತ್ತಾರೆ. ಅವರ ವಿರುದ್ಧ ಏನಾದರು ಮಾಡುವದಿರಲಿ, ಮಾತಾಡಿದರೂ ಅವರ ದೇವ ದುಂಡೇಶ ಸಿಟ್ಟಾಗಿ ಶಾಪ ಕೊಡ್ತಾನೆ ಎನ್ನುವ ನಂಬಿಕೆ ಎಲ್ಲರಲ್ಲಿ ಮನೆಮಾಡಿದೆ. ಊರಲ್ಲಿ ವರ್ಗ ಸಂಘರ್ಷ, ಬಂಡಾಯ ಕಾಣದೆ ಕೇವಲ ಶಾಂತಿ ನೆಲಸಿರುವುದಕ್ಕೆ ಈ ದುಂಡೇಶನ ಆತಂಕ ಪ್ರಭಾವ ಎಂಬುದು ಅಷ್ಟೇ ಸತ್ಯ.
ಗ್ರಾಮ ಪ್ರವೇಶದ್ವಾರದ ಹತ್ತಿರವೇ ದುಂಡೇಶ್ವರನ ಗುಡಿಯಿದೆ. ಪ್ರಸಿದ್ಧ ಶಿಲ್ಪಿಗಳು ಹಗಲಿರುಳು ಶ್ರಮಿಸಿ ಗುಡಿಯನ್ನು ತಮ್ಮ ಶಿಲ್ಪಕಲೆಯಿಂದ ಅಂದಗೊಳಿಸಿದ್ದಾರೆ. ದೇವರ ದರ್ಶನಕ್ಕೆಂದು ಬರುವ ಭಕ್ತರು ಇಲ್ಲಿನ ಶಿಲ್ಪ ಕಲಾಕೃತಿಗಳನ್ನು, ಅಲೌಕಿಕ ವಾತಾವರಣವನ್ನು ಅನುಭವಿಸಿ ಪ್ರಫುಲ್ಲಿತರಾಗುತ್ತಾರೆ. ಮಂತ್ರ ಮುಗ್ಧರಾಗುತ್ತಾರೆ. ನಯನಮನೋಹರ ವೃಕ್ಷ ಸಂಕುಲದ ನಡುವೆ ಗುಡಿ, ಅದರ ಸುತ್ತಲೂ ಕಲೆಯಾಗಿ ಅರಳಿದ ಆವೃತ ಗೋಡೆ. ಎದುರಗಡೆ ಅದಕ್ಕೊಂದು ಪ್ರವೇಶದ್ವಾರ, ನೋಡುವ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುವ ಸಾಕ್ಷಾತ್ ಸ್ವರ್ಗ !!. ಮುಖ್ಯ ಪ್ರವೇಶದ್ವಾರದಿಂದ ಗರ್ಭಗುಡಿಯ ತನಕ ನೇರವಾದ ದಾರಿ. ಗುಡಿಯ ಪಕ್ಕದಲ್ಲಿ ಸ್ವಲ್ಪ ದೂರದಲ್ಲೇ ಒಂದು ಬಾವಿ. ಜನರಿಗೆ ಬಾವಿಯಿಂದ ನೀರೆತ್ತಲು ಅನಕೂಲವಾಗುವಂತೆ ನಾಲ್ಕೂ ಕಡೆ ಗಡಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ದಲಿತರು ಮಾತ್ರ ಈ ಪವಿತ್ರ ಜಲವನ್ನು ಮುಟ್ಟುವಂತಿಲ್ಲ. ಅಷ್ಟೇಯಲ್ಲ ಈ ಜನಕ್ಕೆ ಗುಡಿಯ ಆವರಣದಲ್ಲೂ ಪ್ರವೇಶವಿಲ್ಲ. ಅವರೆನಿದ್ದರೂ ಆವರಣದ ಹೊರಗೆ ನಿಂತ್ಕೊಂಡೇ ನಮಸ್ಕರಿಸಿ ಮುಂದಕ್ಕೆ ಸಾಗಬೇಕು. ಈ ನಿಯಮ ಮೊದಲಿನಿಂದಲೂ ಪಾಲಿಸಿಕೊಂಡು ಬರಲಾಗಿದೆ. ಇದರ ಬಗ್ಗೆ ದಲಿತ ಜನಕ್ಕೆ ಬೇಸರವಿರಲಿಲ್ಲ. ಅವರು ಅನಾದಿ ಕಾಲದಿಂದಲೂ ಈ ಸಂಪ್ರದಾಯನ್ನು ಸ್ವಇಚ್ಚೆಯಿಂದ ಮುಂದವರಿಸಿಕೊಂಡು ಬಂದಿದ್ದಾರೆ. ಅದು ದುಂಡೇಶ್ವರನಿಗೆ ಅವರು ತೋರುವ ಭಯಭಕ್ತಿಯಾಗಿದೆ.ಆಕಸ್ಮಿಕವಾಗಿ ಅಲ್ಲಿ ಯಾರಾದರು ಅಪ್ಪಿ-ತಪ್ಪಿ ಗುಡಿ ಆವರಣದೊಳಗೆ ಹೆಜ್ಜೆಯಿಟ್ಟರೆ ಮುಗಿಯಿತು!. ಅಂಥವರ ಮೇಲೆ ದುಂಡೇಶನ ಅವಕೃಪೆಯಾಗಿ ಕಣ್ಣು ಕುರಡಾಗಿಯೋ, ಮೈತುಂಬ ಹುಳ ಬಿದ್ದೋ, ನರಳಿನರಳಿ ಸಾಯುತ್ತಾರೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳನ್ನು ಸ್ವತಃ ಈ ದಲಿತರೇ ನೀಡುತ್ತಾರೆ. ಹಿಂದಿನ ದಿನಗಳಲ್ಲಿ ಬರಗಾಲವಿದ್ದಾಗಲೂ ದಾಹ ತಾಳಲಾರದೇ ಗುಡಿ ಆವರಣದೊಳಕ್ಕೆ ನುಸುಳಿ ಬಾವಿಯ ನೀರು ತಂದು ಕುಡಿದದ್ದಕ್ಕೆ ಸಾಕಷ್ಟು ಅನಾಹುತಗಳಾಗಿವೆಯಂತೆ. ಈ ದೇವರ ಶಾಪದಿಂದಲೇ ಬಹಳಷ್ಟು ಜನ ವಿವಿಧ ಬಗೆಯ ವ್ಯಾಧಿಗಳಿಂದ ಸತ್ತಿದ್ದಾರೆಂದು ಸ್ವತಃ ದಲಿತರೇ ಆಡಿಕೊಳ್ಳುತ್ತಾರೆ. ಆ ಕಾರಣಕ್ಕೆ ಗುಡಿ ಆವರಣದೊಳಗೆ ತಪ್ಪಿಯೂ ಹೆಜ್ಜೆ ಇಡಬಾರದೆಂದು ಹಿರಿಯರು ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ.
ಮೇಲ್ಜಾತಿಯವರು ಕೂಡ ದಲಿತವರ್ಗವನ್ನು ತಮ್ಮ ಅವಶ್ಯಕತೆಗಳ ಮಟ್ಟಿಗೆ ಉಪಯೋಗಿಸಿಕೊಂಡು ಅವರನ್ನು ಇದೇ ದೇವರ ಹೆಸರಿನಲ್ಲಿ ಹೊರಗಿಡುತ್ತಲೇ ಬಂದಿದ್ದಾರೆ. ಮೇಲ್ಜಾತಿಯ ಜಮೀನ್ದಾರರಿಗೆ ಮನೆ ಹೊಲೆಯರೂ ಅಂತಾ ಇರುತ್ತಾರೆ. ಇವರು ಯಜಮಾನರ ಪ್ರತಿಯೊಂದು ಕಾರ್ಯಕ್ಕೂ ಬೇಕು. ಮನೆಯಲ್ಲಿ ಒಂದು ಕೂಸು ಕುನ್ನಿ ಹುಟ್ಟಿದರು ಬೇಕು. ಶುಭ ಕಾರ್ಯಕ್ಕೂ ಬೇಕು. ಅಶುಭ ಕಾರ್ಯಕ್ಕೂ ಬೇಕು. ಊರಿನ ಜನಕ್ಕೆ , ದೂರದ ಸಂಬಂದಿಗಳಿಗೆ ಮನೆಯ ಸಿಹಿಕಹಿ ಸುದ್ದಿಗಳನ್ನು ಹರಡಲು ಇವರು ಬೇಕೇಬೇಕು. ಇದು ಮನೆ ಹೊಲೆಯರ ಹಕ್ಕು ಕೂಡ. ಇವರು ಸುಖ ಸಂತೋಷಕ್ಕೆ ಬೇಕಾಗುವಂತೆ ಸತ್ತಾಗ ಹೆಣ ಹೊರಲು. ಅತ್ತು ಹೆಣ ಚಂದ ಮಾಡಲು ಇವರು ಇರಲೇಬೇಕು. ಇದಷ್ಟೇಯಲ್ಲ ಸಾಕಿದ ನಾಯಿಯಂತೆ ಮನೆ, ತೋಟವೆಲ್ಲ ಕಾವಲು ಕಾಯಬೇಕು. ಹಗಲು-ರಾತ್ರಿ ಎನ್ನದೇ ಇವರ ಜಮೀನನಲ್ಲಿ ದುಡಿದು,ಬೆಳೆ,ಫಸಲು ಕಾಪಾಡುವುದಕ್ಕೆ ಬೇಕು. ಬೆವರು ರಕ್ತ ಒಂದು ಮಾಡಿ ಇವರನ್ನು ಉದ್ಧರಿಸಲು ಬೇಕು. ಇಷ್ಟೆಲ್ಲ ಮಾಡುವ ಇವರ ಗತಿ? ದೇವರೇ ಗತಿ…!!. ಆದರೆ ಆ ದೇವ ದುಂಡೇಶನಿಗೂ ಇವರ ಮೇಲೆ ಕರುಣೆ ಬಾರದು. ಮೇಲ್ವರ್ಗದವರ ಜೀವನ ಪ್ರಗತಿಯಲ್ಲಿ ತನ್ನ ಜೀವನವನ್ನೇ ಅರ್ಪಿಸುವ ಇವರು ತಮ್ಮ ದೇಹವನ್ನು ಒಂದು ಪ್ರಾಣಿಗಿಂತ ಕಡೆಯಾಗಿ ಅವರ ದನದ ಕೊಟ್ಟಿಗೆಯಲ್ಲಿ ಜೀವನಪರ್ಯಂತ್ ಕಳೆಯಬೇಕು. ಇವರಿಗೆ ಉಳ್ಳವರ ಮನೆಯೊಳಗೆ ಹೆಜ್ಜೆಯಿಡಲು ಅನುಮತಿ ಸಿಕ್ಕಿಲ್ಲ ಅಥವಾ ಸಿಕ್ಕ ಅನುಮತಿಯನ್ನು ಇವರಾಗಿಯೇ ನಿರಾಕರಿಸಿದ್ದಾರೋ ಗೋತ್ತಿಲ್ಲ. ಏಕೆಂದರೆ ದುಂಡೇಶನ ಭೀತಿ. ಮನೆಯಿಂದ ಮಾರು ದೂರ ಯಾವುದೋ ಮರಕ್ಕೋ ಅಥವಾ ದನದ ಕೊಟ್ಟಿಗೆ ಗೋಡೆ ಗೂಟಕ್ಕೂ ನೇತು ಹಾಕಿದ ಒಡಕು ಪಾತ್ರೆಗಳು ಹಿಡಿದು ಮನೆಯಂಗಳದಲ್ಲಿ ಮನೆಯೊಡತಿಯ ಮುಂದೆ ಭೀಕ್ಷಾಂದೇಹಿ ಎನ್ನುವಂತೆ ನಿಂತರೆ ಮನೆ ಯಜಮಾನತಿ ಸ್ವಲ್ಪ ದೂರದಲ್ಲೇ ನಿಂತು, ತನ್ನ ಸೀರೆ ಸೆರಗಿನಿಂದ ಗಟ್ಟಿಯಾಗಿ ಮೂಗ ಮುಚ್ಚಿಕೊಂಡು ತಿಂದುಳಿದ ಅನ್ನವನ್ನು ನಾಯಿಗೆ ಹಾಕುವಂತೆ ಹಾಕಿದರೆ ಏನೆನ್ನಬೇಕು, ಸಾಕ್ಷಾತ್ ಅನ್ನಪೂರ್ಣೆಯೇ!. ಇಷ್ಟಾದರು ಮನೆ ಆಳಿಗೆ ಬೇಸರವಿಲ್ಲ. ಇವರು ಮನೆಹೊಲೆಯ ಎಂಬ ಈ ಜೀತದಾಳದ ಪಾತ್ರ ಬಹು ಪ್ರಾಮಾಣಿಕವಾಗಿಯೇ ನಿರ್ವವಹಿಸುತ್ತ ನಡದಿದ್ದಾರೆ . ಇದಕ್ಕೆ ಪ್ರತಿಯಾಗಿ ಯಜಮಾನ ಇವರ ಜೀವನ ನಿರ್ವಹಣೆಗೆಂದು ಒಂದಿಷ್ಟು ಹಣ, ಕಾಳು, ಬಟ್ಟೆ ಬರೆಯಲ್ಲ ಕೊಟ್ಟು ಸಹಾಯ ಮಾಡಿದರೆ ಅದು ದೊಡ್ಡ ಉಪಕಾರ.
-2-
ಗಣಪ್ಪಗೌಡ ! ದುಂಡಾಪುರದ ಒಬ್ಬ ಪ್ರಭಾವಿ ಮುಖಂಡ. ನೂರಾರು ಎಕರೆ ಭೂಮಿಗೆ ಒಡೆಯ. ಆತನ ವಯಸ್ಸು ಸುಮಾರು ನಲ್ವತ್ತೆಂಟರ ಆಸು ಪಾಸು ಇರಬಹುದು. ಶ್ವೇತ ಅಂಗಿ, ಧೋತಿ ಇವನ ಉಡುಗೆ. ಮನೆಯಲ್ಲಿದ್ದಾಗ ಖಾದಿ ಕ್ರಾಸ ಬನಿಯಾನ, ಧೋತರದಲ್ಲಿ ಉಡುಗೆಯಾಗಿತ್ತು. ಎತ್ತರದ ನಿಲುವು, ದಷ್ಟಪುಷ್ಟವಾದ ದೇಹ. ವ್ಯಕ್ತಿತ್ವಕ್ಕೆ ಮೆರಗು ನೀಡುವ ಪೊಗದಸ್ತಾದ ವೀರಪ್ಪನ ಮೀಸೆ. ಇವನ ಆದೇಶದ ಹೊರತು ಊರಲ್ಲಿ ಒಂದು ಹುಲ್ಲು ಕಡ್ಡಿಯೂ ಅಳ್ಳಾಡುವಂತಿಲ್ಲ. ತಮ್ಮ ಕ್ಷೇತ್ರದ ಪ್ರಭಾವಿ ರಾಜಕಾರಣಿಗಳ ಜತೆ ನಿಕಟ ಸಂಬಂದ. ಊರಿನ ಜನ ಯಾರಿಗೆ ಮತ ಚಲಾಯಿಸಬೇಕೆಂದು ತೀರ್ಮಾನಿಸುವನು ಇವನೇ. ಗ್ರಾಮ ಅಧ್ಯಕ್ಷರು ಸದಸ್ಯರು ಇವನ ಮರ್ಜಿಯಂತೆ ಕೆಲಸ ಮಾಡಬೇಕು. ಇವನು ಹೇಳಿದ್ದೇ ಅಂತಿಮ. ಹೇಳಿದ ಕೆಲಸ ಆಗಲೇಬೇಕು. ಈತ ಶ್ರೀ ದುಂಡೇಶ್ವರ ದೇವರ ಗುಡಿಯ ಸಮಿತಿಯ ಚೇರಮನ್ನನೂ ಹೌದು. ಇಷ್ಟೆಲ್ಲ ಇರುವ ಗಣಪ್ಪಗೌಡನ ಮನೆಗೆ ಮನೆಹೊಲೆಯ ಇಲ್ಲದೇ ಇರುತ್ತಾನೆಯೇ? ಅವನೇ ಬಸ್ಯಾ! . ಗಣಪ್ಪಗೌಡನ ವ್ಯಕ್ತಿತ್ವಕ್ಕೆ ವ್ಯತಿರಿಕ್ತವೆನಿಸುವಂಥ ಬಡಕಲು ಶರೀರ, ಬೆವರು ವಾಸನೆ ತುಂಬಿದ ಚಿಂದಿಯಾದ ಬಟ್ಟೆ. ನಿಸ್ತೇಜ ಕಂಗಳು, ಮುಖದ ತುಂಬ ಕಸ ಬೆಳೆದಂತೆ ಬೆಳೆದ ಗಡ್ಡ ಮೀಸೆ, ತೆಲೆಗೆ ಸುತ್ತಿದ ಕೊಳಕ ಟಾವಲು. ಗೌಡನ ಭೂಮಿಯಲ್ಲಿ ಗಾಣದ ಎತ್ತಿನಂತೆ ಸತತವಾಗಿ ದುಡಿಯುವುದೇ ಇವನ ಕಾಯಕ. ಹಗಲು ರಾತ್ರಿಯನ್ನದೇ ನಾಯಿಯಂತೆ ತೋಟ-ಮನೆಯಲ್ಲ ಕಾವಲು ಕಾಯಬೇಕು. ಬಸ್ಯಾನ ದುಡಿಮೆಯ ಕಾರಣವೇ ಪ್ರತಿ ವರ್ಷ ಗೌಡನ ಹೊಲ ಸಮೃದ್ಧವಾಗಿ ಬೆಳೆಯುತ್ತದೆ. ಅದಕ್ಕೆಂದೇ ಗೌಡ ಪ್ರತಿ ವರ್ಷ ಎರಡ್ಮೂರ ಎಕರೆ ಫಲವತ್ತಾದ ಜಮೀನ ಖರೀದಿಸುತ್ತಲೇ ಇರುತ್ತಾನೆ. ಇದೆಲ್ಲ ಬಸ್ಯಾನ ದುಡಿಮೆ ಫಲ ಎನ್ನುವುದು ಗೌಡನಿಗೆ ಗೊತ್ತು. ಅದಕ್ಕೆಂದೇ ಬಸ್ಯಾನ ಕುಟುಂಬದ ಮೇಲೆ ಅವನ ಕೃಪಾ ದೃಷ್ಟಿ!!. ಮನೆಹೊಲೆಯಾ ಆನಂದವಾಗಿದ್ದರೆ ತಮಗೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಹಿಂದಿನಿಂದಲೂ ಬಂದಿದ್ದು. ಬಸ್ಯಾನ ಪೂರ್ವಜರು ಕೂಡ ಇಲ್ಲೇ ದುಡಿಯುತ್ತಿದ್ದರು. ಮುಂದೆ ಕೂಡ ಬಸ್ಯಾನ ಮಕ್ಕಳು ಇದನ್ನೇ ಮುಂದವರಿಸಿಕೊಂಡು ಹೋಗಬೇಕು. ಇಷ್ಟೆಲ್ಲ ಇದ್ದರೂ ಇವರಿಗೆ ಗೌಡನ ಮನೆಯಲ್ಲಿ ಪ್ರವೇಶವಿರಲಿಲ್ಲ. ಅಷ್ಟೇಯಲ್ಲ ದುಂಡೇಶನ ಗುಡಿ ಆವರಣಕ್ಕೂ ಪ್ರವೇಶವಿರಲ್ಲ. ದೇವರ ಬಾವಿಯ ಪವಿತ್ರ ಜಲ ಸೇವಿಸುವಂತಿಲ್ಲ. ಅದೇ ಒಡಕು ಚಂಬು, ಒಡೆದ ಪಾತ್ರೆಯೇ ಗತಿ. ಗೌಡತಿಯ ಅದೇ ಅನ್ನಪೂರ್ಣೆಯ ಪೋಜು!. ಯಾವುದೂ ಬದಲಾವಣೆಯಿಲ್ಲ, ತೆಲೆತೆಲಾಂತರದಿಂದ ವ್ಯವಸ್ಥಿತವಾಗಿ ನಡೆದುಕೊಂಡು ಬಂದ ಪದ್ಧತಿಯಿದು. ಈ ಪದ್ಧತಿಯಲ್ಲಿ ದುಡಿಯುವರಿಗೂ ದುಡಿಸಿಕೊಳ್ಳುವರಿಗೂ ಅದ್ಯಾವುದೋ ಸಮಾಧಾನವಿದೆ. ಈ ಪದ್ಧತಿ ಬಸ್ಯಾನಿಗೆ ಮಾತ್ರ ಸಿಮೀತವಾಗಿರದೇ ಈ ಊರಿನ ಪ್ರತಿ ದಲಿತನಿಗೂ ಅನ್ವಯಿಸುವಂಥದ್ದು . ಮರಿ ಗಣಪ್ಪಗೌಡರಂಥವರಿಗೂ ಕೂಡ ಊರಲ್ಲಿ ಕೊರತೆ ಇಲ್ಲ.
ಬಸ್ಯಾನ ಸಹೋದರ ಆನಂದ ಚಾರುಚೂರು ಅಕ್ಷರ ಕಲಿತವ. ರಾಜ್ಯ ದಲಿತ ಸಂಘಟನೆಯೊಂದರ ಸದಸ್ಯ. ಸಮಾಜ ಸೇವೆ, ಅದೂ, ಇದೂ ಅಂತಾ ಓಡಾಡಿಕೊಂಡಿದ್ದವ. ನಲ್ವತ್ತರ ಯುವಕ. ಬಸ್ಯಾನ ಕುಟುಂಬದಲ್ಲಿ ಅವನ ಹೆಂಡತಿ ಸುಂದರಿ. ಮಗಾ ನಾಗ್ಯಾ ಮತ್ತು ಮಗಳು ದುರ್ಗಿ ಇದ್ದಾಳೆ. ಸುಂದರಿ ಹೆಸರಿಗೆ ತಕ್ಕ ಹಾಗೆ ಮೂವ್ವತ್ತೈದರ ತುಂಬ ಹರೆಯದ ಸುಂದರಿ. ನಾಗ್ಯಾಗೆ ಇಪ್ಪತ್ತು, ದುರ್ಗಿ ಅವನಿಗಿಂತ್ ಒಂದೆರಡು ವರ್ಷ ಚಿಕ್ಕವಳು. ಸುಂದರಿ ಸಹ ಆಗಾಗ ಗೌಡನ ತೋಟಕ್ಕೆ ಹೋಗಿ ಗಂಡನ ಕೆಲಸದಲ್ಲಿ ನೆರವಾಗುತ್ತಿರುತ್ತಾಳೆ. ನಾಗ್ಯಾ ಕೂಡ ತಂದೆಗೆ ಸಹಾಯ ಮಾಡಲೆಂದು ಅವನ ಜತೆಗೆ ಹೋಗುತ್ತಿರುತ್ತಾನೆ. ಮುದೊಂದು ದಿನ ಅಪ್ಪನ ಸ್ಥಾನ ತುಂಬ ಬೇಕಾದವನು ಇವನೇ ಅಲ್ಲವೇ?. ದುರ್ಗಿ ಮನೆಗೆಲಸ ಮಾಡಿಕೊಂಡು ಇರುತ್ತಾಳೆ. ಬಸ್ಯಾನಿಗೆ ಬೆಳೆದ ನಿಂತ ಮಗಳ ಬಗ್ಗೆ ಚಿಂತೆಯಿಲ್ಲ. ಏಕಂದರೆ ಸುಂದರಿಯಂತೆ ಇವಳೂ ಚೆಲುವೆ. ಬಂಗಾರದ ಬಣ್ಣ. ಅಷ್ಟೇಯಲ್ಲ ತಮ್ಮ ಕುಲ ದೇವತೆಯ ಹೆಸರಿನಲ್ಲಿ ಸಮಾಜದ ಒಳಿತಿಗಾಗಿ ಅವಳನ್ನು ಬಿಡುವುದೆಂದು ಹೆಣ್ಣು ಹುಟ್ಟಿದಾಗಲೇ ನಿರ್ಧಾರವಾಗಿ ಹೋದ ಸಂಗತಿ.
-3-
ವಾರದ ನಂತರ ಅಂಬೇಡ್ಕರ ಜಯಂತಿ ಬರಲಿತ್ತು. ಆನಂದ ಇದಕ್ಕಾಗಿ ತಯಾರಿ ನಡೆಸಿದ್ದ. ಬಸ್ಯಾ ಆನಂದನೊಂದಿಗೆ ಧಣಿ ಗಣಪ್ಪಗೌಡನ ಮನೆಯಂಗಳಕ್ಕೆ ದಾವಿಸಿದ್ದ. ಗೌಡನಿಗೆ ಅಣ್ಣತಮಂ್ಮದಿರನ್ನು ಒಟ್ಟಿಗೆ ನೋಡಿ ಆಶ್ಚರ್ಯ!
“ಅಣ್ಣತಮ್ಮರ„ ಸವಾರಿ ಇತ್ತಕಡೆ ಬಂದೈತಲ್ಲ„? ಭಾಳ ದಿವ್ಸಾತ„ ಆನಂದ ಬಂದೇ ಇಲ್ಲ” ಎಂದು ಮಾತಿಗಾರಂಭಿಸಿದ.
“ಏನ್ ಮಾಡೂದ್ರಿ ಕೆಲ್ಸಾನ„ ಹೆಚ್ಚಾಗೈತಿ. ನಮ್ಮ ಸಂಘದ ಕೆಲ್ಸಾ, ನಮ್ಮ ಮಂದಿ ಕೆಲ್ಸಾ, ಕೋರ್ಟ, ಕಚೇರಿ, ಜಾತಿ, ಉತಾರ, ವಾರಸಾ ಅಂತಾ ನೂರಾ ಎಂಟ ಕೆಲ್ಸಾ. ಹಂತಾದರಾಗನ “ದಲಿತ ವಾಣಿ” ಅಂತಾ ಪತ್ರಿಕೆ ಬ್ಯಾರೆ ತಗ್ಯಾಕ ಹತ್ತೀನ್ರೀ. ಹಿಂಗಾಗಿ ಬೆಳಗಾವಿದಾಗನ„ ಜಾಸ್ತಿ ಇರತನ್ರೀ..”ಅಂತ್ಹೇಳಿ ಆನಂದ ವಿವರಣೆ ನೀಡಿದಾಗ ಗೌಡ-
“ಛಲೂ ಆತ್ ಬಿಡ ಮತ್ತ…ಉತ್ತಮ ಕೆಲ್ಸಾನ„ ಮಾಡಾಕ ಹತ್ತಿ. ಹಿಂಗ„ ಛಲೂತಂಗ ಕೆಲ್ಸಾ ಮಾಡ್ದಿ ಅಂದ್ರ ನಿನ್ನ ಹೆಸರ ಮುಂದ್ಕ ಬರತೈತಿ ನೋಡ, ಇದರಿಂದ ನಮ್ಮೂರ ಹೆಸರ್ನೂ ಬಂದಾಂಗಾಗತೈತಿ.” ಅಂದಿದಕ್ಕ ಬಸ್ಯಾ-
“ಎನೋ ನಿಮ್ಮಂಥವರ ದಯಾ ನೋಡ್ರೀ” ಎಂದು ವಿನಯದಿಂದ ನುಡದಿದ್ದ.
“ಹೋಗ್ಲಿ ಬಿಡೋ ಅದ್ರಾಗ ನಮ್ಮ ದಯಾ ಏನ್ಬಂತ್..ಅಂವನ ಖಟಪಟಿ ದ್ವಾಡ್ದೈತಿ” ಎಂದಾಗ ಗೌಡನ ದೊಡ್ಡ ಮಾತಿಗೆ ಇಬ್ಬರೂ ಮೌನವಾದರು. ಗೌಡ ಮುಂದವರಿದು-
“ಅದೆಲ್ಲ ಹೊಗ್ಲಿಬಿಡ್, ಬಂದ ಕೆಲ್ಸಾ ಮೊದ್ಲ ಹೇಳ ಮತ್ತ„?” ಅಂದ.
“ಅಂತಾದೆನಿಲ್ರೀ..ನಮ್ಮ ಸಂಘದಿಂದ ಅಂಬೇಡ್ಕರ ಜಯಂತಿ ಹಮ್ಮಕೊಂಡಿವ್ರಿ. ಈ ಸಲ ಭಾಳಾ ಧೂಮಧಾಮಂತಾ ಮಾಡಬೇಕಂತೀವಿ…ಅದಕ„ …”
“ಅದ್ಕಾ ನನಗೇನ ಮಾಡಂತಿ ಹೇಳ ಮತ್ತ„ ?”
‘ಅದ್ಕ್ ತಮ್ಮಿಂದೇನಾರ„ ಸಾಯ್ ಆಗತೈತೆನಂತ್„?”
“ಇಟ ಅಲ್ಲೇನ„, ಅದಕ್ಯಾಕ ಕಾಳಜಿ ಮಾಡತೀ ತಗೋ” ಎಂದು ಒಳಂಗಿ ಕೀಸೆಯಲ್ಲಿ ಕೈಹಾಕಿ ಗರಿಗರಿಯಾದ ಸಾವಿರದ ಎರಡು ನೋಟ ತಗೆದು ಆನಂದನ ಕೈಗಿಟ್ಟಾಗ ಸಹೋದರರ ಮುಖದಲ್ಲಿ ಆನಂದ ಕಳೆ ಮೂಡಿತ್ತು.
“ನಿಮ್ಮಿಂದ ಬಾಳಾ ಉಪಕಾರಾತ್ರೀ…” ಎಂದು ಇಬ್ರೂ ಹೊಗಳಬೇಕಾದರೆ.
“ಇದ್ರಾಗ„ ಉಪಕಾರೇನ ಬಂತ್ ಬಿಡ್!. ಅಂಬೇಡ್ಕರಂದ್ರ ನಿಮ್ಮಾಂಗನ ನಮ್ಮ ಮನಶ್ಯಾ ಅಲ್ಲೇನ„! ನಮ್ಮ ದೇಸದ ಸಂವಿಧಾನ ಬರ್ದ ಮಹಾಪುರಸಾ…” ಎಂದು ನಕ್ಕಾಗ –
“ಗೌಡ್ರದು ಬಾಳ ದೊಡ್ಡ ಗುಣಾ ..ನಾವಿನ್ನ ಬರ್ತೀವ್..” ಅಂತ ಕಾಲ ಕಿತ್ತರು.
ಆನಂದನದು ದಿನ ಬೆಳಗೆದ್ದರೆ ಇದೇ ಕಾಯಕ. ಅದೂ ಇದೂ ಅಂತಾ ಹೇಳಿಕೊಂಡು ಶ್ರೀಮಂತರಿಂದ, ಅಧಿಕಾರಿಗಳಿಂದ ಹಣ ಎತ್ತುವುದೇ ಇವನ ಉದ್ಯೋಗ. ಬೇಡಿದಷ್ಟು ಕೊಡದೆ ಹೋದರೆ ಪೇಪರನಲ್ಲಿ ಬರೀತೀನಿ ಅಂತಾ ಹೆದರಿಸುವುದು, ಸರ್ಕಾರಿ ಸಾಲ, ಮನೆ-ಜಾಗ, ಅದೂ ಇದೂ ಮಂಜೂರ ಮಾಡಿಸಿ ಕೊಡ್ತಿನಂತ್ ಜನರಿಂದ ಹಣ ಸಂಗ್ರಹಿಸುವುದು. ಬೀರಬ್ರ್ಯಾಂಡಿ, ಚಿಕನ್-ಗಿಕನ್ ಅಂತಾ ಮಜಾ ಉಡಾಯಿಸುವುದು ಇವನ ದಿನಚರಿಯಾಗಿತ್ತು. ದುಂಡಾಪುರದಲ್ಲಿ ತನ್ನ ಸಂಘಕ್ಕೆ ಹುಡಗ್ರನ್ನಾ ತಯಾರ ಮಾಡಿದ್ದ. ಗುಂಪು ಕಟ್ಟಿಕೊಂಡು ಹೆಗಲಮೇಲೊಂದು ನೀಲಿ ವರ್ಣದ ಟಾವಲ್ ಹಾಕಿಕೊಂಡು ವಸೂಲಿಗೆ ಹೊರಡುತ್ತಿದ್ದ. ಹೀಗಾಗಿ ಜನ ಭಯದಿಂದ ತನ್ನನ್ನು ಆನಂದರಾವ್ ಎಂದು ಸಂಭೋದಿಸುತ್ತಿದ್ದರು.
-4-
ಮತ್ತೊಂದು ದಿನ ಗಣಪ್ಪಗೌಡ ಎಂದಿನಂತೆ ಗಜಗಂಭೀರನಾಗಿ ಗೌಡಕಿ ಗತ್ತಿನಲ್ಲಿ ಮೀಸೆ ತೀಡುತ್ತ ತೋಟದ ಮನೆಯಂಗಳದಲ್ಲಿ ಕುಳಿತಿರುವಾಗಲೇ ಬಸ್ಯಾ ಬಂದು ಶಿರಬಾಗಿ ಗೌರವ ತೋರಿದ ನಂತರ-
“ಗೌಡ್ರ ನಿಮ್ಮಿಂದ ಒಂದೂಪಕಾರ ಆಗಬೇಕ್ರೀ…” ಎಂದ.
“ಅದೇನ ಉಪಕಾರ ಹೇಳ„, ಅದಕ್ಯಾಕ ಹೆದರ್ತೀ” ಎಂದು ಗೌಡ ಹೇಳುತ್ತಿದಂತಯೇ ಬಸ್ಯಾ ಪೀಠಿಕೆಗೆ ಮುಂದಾದ_
“ನಿಮ್ಮಿಂದ ನನ್ಗ, ನನ್ ಕುಟಂಬಕ ಭಾಳಾ ಉಪಕಾರ ಆಗೈತ್ರಿ, ನೂರ ಜನ್ಮದ ತಕಾನೂ ನಿಮ್ಮ ಸೇವಾ ಮಾಡಿದ್ರನು ಈ ಉಪಕಾರ ತೀರಾಂಗಿಲ್ರೀ…”
“ಬಸ್ಯಾ ಅದೆಲ್ಲ ಈಗ್ಯಾಕೋ?”
“ಕಾರಣಾ ಐತ್ರೀ”
“ಅಂತಾದ್ದೇನ ಕಾರಣ ಬಂತೋ?“
“ನಿಮ್ಗ್ ತಿಳ್ದಾಂಗ ನನ್ಮಗಳ ಈಗ ಬೆಳ್ದ ದೊಡ್ಡಾಕಿಯಾಗ್ಯಾಳ್ರೀ”
“ಅದಕ್ಯಾಕ ಅಸ್ಟ್ ಚಿಂತಿ ಮಾಡ್ತಿ? ನಿನ್ನ ಜ್ಯಾತ್ಯಾಗ ಉತ್ತಮ ಹುಡಗ್ನಾ ನೋಡಿ ಮದ್ವಿ ಮಾಡಿದ್ರಾತ್”
“ವಿಸ್ಯಾ ಅದಲ್ರೀ… ಅಕೀನ„ ದೇವರಿಗೆ ಬೀಡಬೇಕಂತಾ ದಂವೇದಾವರ ಮೊದಲ„ ನಿರ್ಧಾರ ಮಾಡ್ಯಾರ್ರೀ..”
“ಅದಕ„ ನನಗೇನ ಮಾಡಂತಿ ಹೇಳ ಮತ್ತ„” ಆತುರದಿಂದ ಕೇಳಿದಾಗ ಅಷ್ಟೇ ಆತುರತೆಯಿಂದ ಬಸ್ಯಾ-
“ಈ ಶುಭಕಾರ್ಯ, ಪೂಜಾ ನಿಮ್ಮಿಂದನ„ ಶರು ಆಗಬೇಕಂತಾ ನಮ್ದ ಇಚ್ಚಾ ಐತ್ರೀ”
ಗೌಡ ಒಂದ ಕ್ಷಣ ಯೋಚನಾ ಮಗ್ನನಾದ.
“ನಮಗೆಲ್ಲ ಅನ್ನಾ ಹಾಕಿದ ಧಣಿ ನೀವರೀ, ಈ ಶುಭ ಕಾರ್ಯ ನಿಮ್ಮಿಂದನ„ ಶುರು ಆಗಬೇಕ್ರೀ”
“ ಆತ ಬಿಡ ಮತ್ತ„ ನೀವೆಲ್ಲಾ ತೀರ್ಮಾನ ಮಾಡಿದ ಮ್ಯಾಗ, ಇದರಾಗ ನಂದೇನ ಐತಿ! ನಿವ್ ಹೇಳಿದಾಂಗನ„ ಆಗಲಿ” ಎಂದು ಗೌಡ ಹಸಿರು ನಿಶಾನೆ ತೋರಿಸಿದ ಮೇಲೆ ಬಸ್ಯಾನ ಮುಖ ಹೂವಿನ ಹಾಗೆ ಅರಳಿತ್ತು.
“ನಾಡ್ದನ„ ಮುತ್ತೈದಿ ಹುಣವಿ, ಅದ ದಿವ್ಸ ದೇವ್ರ ಹೆಸರಿನಾಗ ದೇವಿ ಸನ್ನಿಧಾನದಾಗ ಗೆಜ್ಜೆಪೂಜೆ ಮಾಡಿ, ತಾಳಿ ಕಟ್ಟಿ ಬಿಡ್ತಿವಿರ್ರೀ..ನಿವ್ ಅದ„ ದಿನಾ ರಾತ್ರಿ ಮನಿಗ ಬಂದ ಬಿಡ್ರೀ..ನಾವ್ ಅಸ್ಟರಾಗ ದುರ್ಗಿನಾ ತಯಾರ ಮಾಡಿತೀವ್ರೀ…” ಎಂದಾಗ ಒಳಗೊಳಗ ಖುಷಿಗೊಂಡಿದ್ದ ಗಣಪ್ಪಗೌಡ-
“ತಗೋ ಹಂಗಾರ, ಛಲುತಂಗ ಏರ್ಪಾಡ ಮಾಡ ಮತ್ತ„” ಎನ್ನುತ್ತ ಮುಂಡಾಸ ಕೀಸೆಯಿಂದ ನೋಟಿನ ಕಂತೆ ತಗೆದು ಎದುರಿಗೆ ಹಿಡಿದಾಗ ಬಸ್ಯಾ –
“ಇದೆಲ್ಲಾ ಯಾಕ್ರೀ ಈಗ„… ನಿಮ್ಮ ಉಪಕಾರ ಬಾಳಾಗೇತ್ರೀ…”
“ಇರಲಿ ತಗೋ ಖಾಲಿ ಕೈಲಿ ಇದೆಲ್ಲಾ ಹೆಂಗ ಮಾಡ್ತೀ!” ಎಂದು ಒತ್ತಾಯಪೂರ್ವಕವಾಗಿ ಅವನ ಕೈಗಿಟ್ಟ. ಅದನ್ನು ಬಸ್ಯಾ ತಗೆದುಕೊಂಡ-
“ಆತ್ರೀ ನಿವ್ ಹೇಳಿದಾಂಗನ„ ಆಗಲಿ. ದುರ್ಗಿಗ ತಾಳಿ, ಬಳಿ, ಸರಾ, ರೇಶಮಿ ಪತ್ತಲಾ ಎಲ್ಲಾ ಪಟ್ಟಣಕ ಹೋಗಿ ಇದ ರೊಕ್ದಾಗ ತರ್ತೀವ್ರೀ ಎಂದು ನೋಟಿನ ಕಂತೆ ತನ್ನ ಹರಕ ಟಾವಲನಲ್ಲಿ ಕಟ್ಟಿ ಹೆಗಲ ಮೇಲೆ ಹಾಕಿಕೊಂಡು ಮುನ್ನಡೆದ.
ರಾತ್ರಿ ಮನೆಗೆ ಬಂದು ಹೆಂಡತಿ ಸುಂದರಿ ಮುಂದೆ ವಿಷಯ ಪ್ರಸ್ತಾಪಿಸಿದ ಬಸ್ಯಾ ಹುಣವಿ ದಿನ ದುರ್ಗಿಗೆ ಸಿದ್ದ ಪಡಿಸಬೇಕೆಂದು ತಿಳಿಸಿದ. ಅಲ್ಲೇ ಒಂದು ಕೋಣೆಯಲ್ಲಿ ಮಲಗಿದ್ದ ದುರ್ಗಿ ದಂಪತಿಗಳ ಸಂಭಾಷಣೆಯನ್ನು ಕದ್ದು ಕೇಳುತ್ತಿದ್ದಳು.. ಆಗಾಗ ಅಪ್ಪ ಮನೆಯಲ್ಲಿ ಇಲ್ಲದ ರಾತ್ರಿ ಮನೆಗೆ ಬಂದು ತನ್ನ ತಾಯಿ ಸುಂದರಿ ಜೊತೆ ಚಲ್ಲಾಟವಾಡಿ ಮಲಗೆದ್ದು ಹೋಗುತ್ತಿದ್ದ ಗಣಪ್ಪಗೌಡನ ಭಯಂಕರ ವಿಕೃತ ಬೆತ್ತಲೆ ಶರೀರ ಅವಳ ಕಣ್ಮುಂದೆ ಬಂದಂತಾಗಿ ಹೆದರಿಕೆಯಿಂದ ರಾತ್ರಿಯಿಡೀ ನಿದ್ರೆ ಬಾರದೆ ಒದ್ದಾಡಿದಳು.
-5-
ಮಾರನೇಯ ದಿನ ಬೆಳಿಗ್ಗೆ ಎದ್ದು ಸಂತೆ ಮಾಡಲಿಕ್ಕೆಂದು ಆರರ ಬಸ್ಸಿಗೆ ಬೆಳಗಾವಿಗೆ ಹೋರಟು ನಿಂತರು. “ಏನ್ ಬೇಕೆಲ್ಲಾ ನಾನ„ ನಿಂತ್ ಸಂತಿ ಮಾಡಕೋಡತೀನಿ ಬರ್ರೀ. ಅಂಗಡ್ಯಾರೆಲ್ಲಾ ನನಗ ಭಾಳಾ ಪರಿಚಯ” ಎಂದು ಮೊಬೈಲ ಮುಖಾಂತರ ತಿಳಿಸಿದ್ದ ಆನಂದ ತಾ ಅಲ್ಲೇ ಇರುವದಾಗಿ ರಾತ್ರಿನೇ ಹೇಳಿದ್ದ. ಬಸ್ಯಾ, ಸುಂದರಿ ಇಬ್ಬರೂ ಆನಂದ ಅದಾನ ಎನ್ನುವ ಕಾರಣಕ್ಕೇ ಧೈರ್ಯದಿಂದಲೇ ನಡೆದಿದ್ದರು.
“ಮನಿಕಡೀ ಹುಶ್ಯಾರ್ ನಾವ„ ಸಂತಿ ಮಾಡ್ಕೊಂಡ ರಾತ್ರಿ ಬರತೀವ್ ಮತ್ತ„… “ ಎಂದು ದುರ್ಗಿಗೆ ಹೇಳಿ ಇಬ್ಬರೂ ಮನೆ ಬಿಟ್ಟರು. ನಾಗ್ಯಾ ಬೆಳಗಿನ ನಾಲ್ಕು ಘಂಟೆಗೆ ಎದ್ದು ನೀರು ಉಣಿಸಲೆಂದು ಗಣಪ್ಪಗಗೌಡನ ತೋಟಕ್ಕ ಹೋಗಿದ್ದ. ತಂದೆ ತಾಯಿ ಮನೆಯಿಂದ ಹೊರ ಬಿದ್ದಿದ್ದೆ ತಡ ದುರ್ಗಿ ಮಂಚದ ಮೇಲೆ ಡಬ್ಬ ಬಿದ್ದು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ಕೆಲವೇ ಕ್ಷಣದಲ್ಲಿ ಅವಳ ಮುಖದ ಕೆಳಗಿನ ದಿಂಬು ಕಣ್ಣೀರಿನಿಂದ ಸಂಪೂರ್ಣ ತೊಯ್ದು ಹೋಯಿತು. ಸಾಕಷ್ಟು ಕಲಿತು ಏನಾದರು ಸಾಧನೆ ಮಾಡಬೇಕೆಂದು ಕನಸು ಕಂಡಿದ್ದ ಅವಳ ಶಿಕ್ಷಣ ಯಾತ್ರೆ ವರ್ಷ ಮೊದಲೇ ನಿಂತು ಹೋಗಿತ್ತು. ಏಕೆಂದ್ರೆ ದೇವರಿಗೆ ಬಿಡುವುದು ಪೂರ್ವ ನಿರ್ಧಾರವಾಗಿತ್ತು. ಎಷ್ಟು ಬೇಡಿಕೊಂಡರು ಶಾಲೆಗೆ ಕಳಿಸಲು ತಂದೆ ತಾಯಿಗಳು ಒಪ್ಪಿರಲಿಲ್ಲ, ಶಾಲೆಗೆ ಹೋದರೆ ದೇವಿ ಶಾಪ ನೀಡುತ್ತಾಳೆ ಎಂದು ಹೆದರಿಸಿದ್ದರು, ಆದರೀಗ ಅದೇ ದೇವರ ಹೆಸರಿನಲ್ಲಿ ಅವಳನ್ನು ನರಕ ಕೂಪಕ್ಕೆ ತಳ್ಳುವ ತಯಾರಿ ನಡೆಸಿರುವದು ಅವಳ ಆತಂಕಕ್ಕೆ ಕಾರಣವಾಗಿತ್ತು. ತನಗೆ ಎಂಥ ಸ್ಥಿತಿ ಬಂತು ಎಂದು ಹಲುಬಿದಳು, ಮೈ ಮಾರಿ ಬದುಕುವ ಕಸಬು!. ಅಂಥದರಲ್ಲಿ ತಂದೆ ಸಮಾನನಾದ ಗಣಪ್ಪಗೌಡನ ಜೊತೆ ದೇಹ ಹಂಚಿಕೊಳ್ಳುವದೆಂದರೆ?. ಮುಂದೆ ಕೂಡ ಈ ವೃತ್ತಿಯಲ್ಲಿ ಎಷ್ಟೊಂದು ನಾಯಿಗಳಿಗೆ ತನ್ನ ದೇಹದ ಮಾಸ ಆಹಾರವಾಗಿಸಬೇಕೋ…ಛೇ! ಇದೂ ಒಂದು ಬದುಕಾ? ಎಂದು ರೋಧಿಸುತ್ತಿದ್ದಳು, ಬಿಕ್ಕಿದಳು, ಒಳಗೊಳಗೇ ಒದ್ದಾಡಿದಳು. ಅಲ್ಪ ಸ್ವಲ್ಪ ಶಾಲೆ ಕಲ್ತಿದ್ದ ದುರ್ಗಿಯ ಮುಗ್ಧ ಮನಸ್ಸಿಗೆ ಹೆತ್ತವರ ನಿರ್ಧಾರದಿಂದ ತುಂಬಾ ನೋವಾಗಿತ್ತು. ಈ ವೇದನೆಯಲ್ಲಿ ಹಗಲು ಕಳೆದು ರಾತ್ರಿಯಾಗಿದ್ದೇ ತಿಳದಿರಲಿಲ್ಲ. ಮನೆಯ ಕತ್ತಲೆ ಅವಳಿಗೆ ನುಂಗಲು ಬಂದಂತೆ ಭಾಸವಾಗಿ ಲೈಟ್ ಹಚ್ಚಲೆಂದು ಮೇಲೆದ್ದು ಸ್ವೀಚ್ ಆನ ಮಾಡುತ್ತಿದಂತೆಯೇ ಬೆಳಗಿದ ಪ್ರಕಾಶವೆಲ್ಲ ಅವಳ ಮಿದುಳು ಹೊಕ್ಕಂತೆ ಅನಿಸಿತು. ಅದೇ ಕ್ಷಣ ತಕ್ಷಣ ಗೋಡೆ ಗಡಿಯಾರಿನತ್ತ ನೋಡಿದಳು. ಹತ್ತು ಗಂಟೆಗೆ ಕೇವಲ ಹತ್ತೇ ನಿಮಿಷ ಬಾಕಿ ಇತ್ತು. ಹಚ್ಚಿದ ದೀಪ ಹಾಗೆ ಆರಿಸಿ, ಮನೆ ಕದ ಎಳೆದುಕೊಂಡು ಭರ್ರಭರ್ರನೇ ಹೊರ ನಡೆದಳು.
-6-
ಬಸ್ಯಾ, ಸುಂದರಿ ಮತ್ತು ಆನಂದ ರಾತ್ರಿ ಹತ್ತರ ವಸತಿ ಬಸ್ಸು ಹಿಡಿದು ಊರಿಗೆ ಬಂದು ಮನೆ ತಲುಪುವಷ್ಟರಲ್ಲಿ ಹನ್ನೊಂದು ಗಂಟೆಯಾಗಿತ್ತು. ಹೊಟೇಲಿನಲ್ಲಿ ತಿಂದು ಬಂದ ಕರದಂಟ, ಮಸಾಲಾ ದೋಸೆ ಇನ್ನೂ ಕರಗಿರಲಿಲ್ಲವಾದ್ದರಿಂದ ಯಾರಿಗೂ ಹಸಿವು ಇರಲಿಲ್ಲ. ಹಾಗೇ ಮಲಗಿದರಾಯಿತು ಎಂದುಕೊಂಡು ದುರ್ಗಿ ಮಲಗಿರ್ತಾಳೆ ಇನ್ನೇನು ಬಾಗಿಲು ತಟ್ಟಿ ಎಚ್ಚರಿಸಬೇಕು ಎನ್ನುವಷ್ಟರಲ್ಲಿ ಹೊರಗಿನಿಂದ ಚಿಲಕಾ ಹಾಕಿದ್ದು ಕಂಡು, ಕ್ಷಣ ಗಾಬರಿಯಾದರೂ ಅಕ್ಕಪಕ್ಕದಲ್ಲಿ ಅವಳು ಎಲ್ಲಿಯಾದರು ಇರಬೇಕು ಎಂದು ಒಳ ಪ್ರವೇಶಿಸಿದಾಗ ಮನೆಯಲ್ಲಿ ದೀಪ ಕೂಡ ಹತ್ತದಿರುವದು ಇವರೆಲ್ಲರ ಆತಂಕಕ್ಕೆ ಕಾರಣವಾಯಿತು.ಲೈಟು ಹಾಕಿ ನೋಡಿದರೂ ದುರ್ಗಿ ಕಾಣಲಿಲ್ಲ. ನಿನ್ನೆ ಹಾಸಿದ ಹಾಸಿಗೆ ಕೂಡ ಅಸ್ತವ್ಯಸ್ತವಾಗಿ ಹಾಗೇ ಬಿದ್ದಿತ್ತು, ದಿಂಬು ಇನ್ನೂ ಹಸಿಯಾಗಿಯೇ ಇತ್ತು. ಇದನ್ನೆಲ್ಲ ಕಂಡು ಆನಂದ ಏನೋ ಅನಾಹುತವಾಗಿದೆ ಎನ್ನುವ ಗುಮಾನಿಗೆ ಬಿದ್ದ. ಇಂಥದರಲ್ಲಿ ದುರ್ಗಿನೂ ಕಾಣುತ್ತಿಲ್ಲ. ಮಲಗಿದ ಅಕ್ಕಪಕ್ಕದವರನ್ನು ಎಚ್ಚರಿಸಿ ಕೇಳಿದ್ದಾಯ್ತು. ತೋಟದಿಂದ ಆಗತಾನೆ ಬಂದ ನಾಗ್ಯಾನನ್ನು ದುರ್ಗಿ ಎಲ್ಲಿದ್ದಾಳೆಂದು ವಿಚಾರಿಸಿದಾಗ ತನಗೂ ತಿಳಿದಿಲ್ಲವೆಂದು ನುಡಿದಾಗ ಎನೋ ಅನಾಹುತವಾಗಿದೆ ಎನ್ನುವ ತನ್ನ ತರ್ಕ ನಿಜವಾಗಿದೆ ಎನ್ನುವ ತೀರ್ಮಾನಕ್ಕೆ ಆನಂದ ಬಂದಿದ್ದ. ಬಸ್ಯಾನಿಗೆ ತನ್ನ ಕಾಲು ಕೆಳಗಿನ ಭೂಮಿಯೇ ಕುಸಿದಂತೆ ಭಾಸವಾಯಿತು. ನಾಳೆ ತನ್ನ ಸಮಾಜದವರಿಗೆ ಏನಂತ ಹೇಳುವುದು? ಗೌಡರಿಗೆ ಹೇಗೆ ಮುಖ ತೋರಿಸುವುದು? ಎಂದು ಚಿಂತೆಗೆ ಬಿದ್ದ. ಗೌಡರಿಗೂ ಈ ವಿಷಯ ತಿಳಿಸಿ ಬಿಟ್ಟರೆ ಅವಳೆಲ್ಲಿದ್ದರು ಹುಡಕಿ ತಗೆಯುತ್ತಾರೆ ಎನ್ನುವ ವಿಶ್ವಾಸದಿಂದ ನಾಗ್ಯಾನಿಗೆ ಗೌಡರ ಮನೆಗೆ ಕಳಿಸಿ ಸುದ್ದಿ ಮುಟ್ಟಿಸಿದ. ಗೌಡ ಸಹ ತನ್ನ ಆಳುಗಳನ್ನೆಲ್ಲ ತಕ್ಷಣ ನಾಲ್ಕೂ ದಿಕ್ಕಿಗೆ ಬಿಟ್ಟು ಹುಡುಕಿಸಿದರೂ ಪ್ರಯೋಜನವಾಗಲಿಲ್ಲ. ಸುಂದರಿ ತನ್ನ ಕರಳು ಕುಡಿ ಎಲ್ಲಿ ಹೋಯಿತೆಂದು ಎದೆ ಎದೆ ಬಡಿದುಕೊಂಡು ಅಳುತ್ತಿದ್ದಳು. ಕೇರಿಯ ಹೆಂಗಸರೆಲ್ಲ ಸೇರಿ ಅವ್ಳನ್ನ ಸಮಾಧಾನ ಪಡಿಸಲು ಪ್ರಯತ್ನಿಸುತ್ತಿದ್ದರು-
“ಆಕಿ ಎಲ್ಲಿ ಹೋಗ್ತಾಳ…ಯಾಂವ್ನರ ಕೂಡ ಓಡಿ ಹೋಗಿರ್ತಾಳ ಬಿಡ್…ಕರ್ಕೊಂಡ ಹ್ವಾದ ಗೆನ್ಯಾ ಕೈಕೊಟ್ಟ ಮ್ಯಾಗ ತಾನ„ ಬರ್ತಾಳ …ಅದಕ್ಯಾಕÀ ಅಳತೀ?” ಎಂದು ಬಾಯಿಗೆ ಬಂದಂತೆ ಏನೇನೋ ಆಡುತ್ತಿದ್ದರು. ಇವರದು ಸುಂದರ ಕುಟುಂಬ, ಅದರಲ್ಲಿ ಗೌಡನ ಭರಪೂರ ಸಹಾಯ ಎನ್ನುವ ಹೊಟ್ಟೆಕಿಚ್ಚಿನಿಂದ ಇಂಥ ಮಾತುಗಳು ಬರುತ್ತಿದ್ದವು. ಹುಡುಕಲು ಹೋದ ಬಸ್ಯಾ, ಆನಂದ, ನಾಗ್ಯಾ ಬೆಳಗಿನ ನಾಲ್ಕಾದರು ಹಿಂದಿರುಗಿ ಬರಲಿಲ್ಲ. ಮನೆಯಲ್ಲಿ ಇದೇ ಗೋಳಾಟ. ಸುಂದರಿಯ ಕಣ್ಣೀರು, ನೆರೆಹೊರೆಯವರ ಚುಚ್ಚು ನುಡಿಗಳು ಬೇರೆ. ಎರಡು ದಿನ ಕಳೆದರು ದುರ್ಗಿ ಪತ್ತೆ ಇಲ್ಲ
-7-
ಮೂರನೇಯ ದಿನ ಮುಂಜಾನೆ ಐದರ ಹೊತ್ತಿಗೆ ನೀರು ತರಲೆಂದು ದುಂಡೇಶ್ವರನ ಬಾವಿಗೆ ಹೋಗಿದ್ದ ಹೆಂಗಸ್ಸೊಬ್ಬಳು ಬಾವಿಯಲ್ಲಿ ಹೆಣ ತೇಲುತ್ತಿರುವುದು ಕಂಡು ಬೆಚ್ಚಿಬಿದ್ದು, ಹಗ್ಗಕ್ಕೆ ಕಟ್ಟಿದ್ದ ಕೊಡ ಬಾವಿಯಲ್ಲೇ ಬಿಟ್ಟೋಡಿ ಊರ ತುಂಬೆಲ್ಲ ಸುದ್ದಿ ಮಾಡಿದಳು. ಊರ ಹಿರಿಯುರು, ಗುಡಿಯ ಸದಸ್ಯರು, ಭಕ್ತಾದಿಗಳು ಸೇರಿ ಬಾವಿಯಲ್ಲಿ ತೇಲುತ್ತಿದ್ದ ಹೆಣ ಹೊಲ್ಯಾರ ಹುಡ್ಗಿ ದುರ್ಗಿಯದ್ದೇ ಎಂದು ಖಾತ್ರಿ ಮಾಡಿ ಬಸ್ಯಾನಿಗೆ ಸುದ್ದಿ ತಿಳಿಸಿದರು.
“ದುಂಡೇಶನ ಬಾಂವ್ಯಾಗ ಹೊಲ್ಯಾರ ಹುಡ್ಗಿ ದುರ್ಗಿ ಬಿದ್ದ ಸತ್ತಾಳ„” ಅನ್ನುವ ಸುದ್ದಿ ಊರ ತುಂಬೆಲ್ಲ ಆತಂಕ ಮೂಡಿಸಿತು. ಇನ್ನು ಮೇಲೆ ಅಲ್ಲಿನ ನೀರು ಕುಡಿಯಬೇಕೋ ಬೇಡವೋ ಎನ್ನುವುದರ ಕುರಿತು ದೊಡ್ಡ ಚರ್ಚೆಯೇ ನಡೆಯಿತು. ಗುಡಿ ಕಟ್ಟೆಗೆ ಪಂಚಾಯಿತಿ ಸೇರಿತು.
“ದುಂಡೇಸನ ಬಾಂವಿ ನೀರಂದ್ರ ತೀರ್ಥ ಇದ್ದಾಂಗ. ಹೊಲ್ಯಾರ ಹುಡಗಿ ಇದರಾಗ ಬಿದ್ದ ಸತ್ತ ಮ್ಯಾಗ ತೀರ್ಥಾ ಮಲೀನ ಆಗಿಹೋತ್ ಮುಂದೇನ ಮಾಡುದ್?” ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡಿತು.
“ಹೊಲ್ಯಾರ ಹುಡ್ಗಿ ಸತ್ತ ಬಿದ್ದ ನೀರ ಹೊಲಸ ಆಗೇತಿ ಇನ್ಮ್ಯಾಕ ಈ ನೀರ ಕುಡಿಬಾರದ್”
“ಮುಂದ ನೀರಗೇನ ಮಾಡುದ?”
“ರಗ್ಡ ಬಾಂವಿ ಅದಾವ್ ನೀರ್ಕ ಬರಾ ಇಲ್ಲ, ಆದರ ಇಂಥಾ ಪವಿತ್ರ ದುಂಡೇಶನ ತೀರ್ಥಾ ಎಲ್ಲಿ ಸಿಗತೈತಿ?”
“ಈ ಬಾಂವಿ ಮುಚ್ಚಿ. ಅದರ ಪಕ್ಕಕನ„ ಇನ್ನೊಂದ ಬಾಂವಿ ತಗ್ದ್ರ ಆತ.”
“ಹೌದೌದ್ ಇದ ಸರಿಯಾದ ವಿಚಾರ, ಇನ್ನೊಂದ ಬಾಂವಿನ ತೆಗಸಬೇಕು” ಎನ್ನುವ ಪರಿಹಾರ ಸರ್ವಸಮ್ಮತವಾಯಿತಾದರೂ, ಅಷ್ಟರಲ್ಲಿ ಇನ್ನೊಬ್ಬ ತನ್ನ ವಿಚಾರ ಹರಡಿದ.
“ಮತ್ತೂ…ಹಿಂಗ„ ಆದರ? ಆ ಬಾಂವ್ಯಾಗನು ಈ ಮಂದಿ ಬಿದ್ದ ಸತ್ತರ„?”
“ಹಿಂಗ ಆದರ ಬಾಳ ಜಡಾ ಆಗತೈತಿ, ಎಸ್ಟಂತಾ ಬಾಂವಿ ತಗ್ಯಾಕ ಆಗತೈತಿ?”
“ಹಿಂಗ„ ಆಗಬಾರದಿತ್ತ. ನಮ್ಮೂರಗ ಅದೇನ ಕೆಡಗಾಲ ಕಾದೈತ್ಯೋ!”
“ಈ ಹೊಲ್ಯಾರಂತೂ ಮೈಯ್ಯಾಗ ಹುಳಾ ಬಿದ್ದ ಒದ್ದಾಡಿ ಸಾಯ್ತಾರ ನೋಡ”
“ಹೌದ ನೋಡ! ದುಂಡೇಸನ ಸಾಪಾ ಅವರಗ್ ತಟ್ಟದ„ ಹೋಗಾಂಗಿಲ್ಲ”
ಹಾಗೊಂದು, ಹೀಗೊಂದು, ಬಾಯಿಗೊಂದು ಮಾತು, ತೆಲೆಗೊಂದು ತೀರ್ಮಾನ!
ಎಲ್ಲರ ಮಾತುಗಳು ಮುಗಿದ ಮೇಲೆ ಗಣಪ್ಪಗೌಡ ಅಕ್ಕಪಕ್ಕದಲ್ಲಿ ಆಸೀನರಾಗಿದ್ದ ಸದಸ್ಯರ ಕಿವಿಯಲ್ಲಿ ಗುಸುಗುಸು ಮಾಡಿ ನಿರ್ಧಾರ ಪ್ರಕಟಿಸಿಲು ಮುಂದಾದ-
“ಮೊಟ್ಟ ಮೊದಲಕ„ ಬಾಂವ್ಯಾಂಗ ಬಿದ್ದ ಹೆಣಾ ಮ್ಯಾಗ ಎತ್ತಬೇಕ. ಆ ಮ್ಯಾಕ ಎಲ್ಲಾ ನೀರ ಖಾಲಿ ಮಾಡಿಸಿ ಬಾಂವಿ ಸ್ವಚ್ಚ ಮಾಡಸಿ ನಂತರ ದುಂಡೇಸನ ಪೂಜಾ ಮಾಡಿ ಹೊಸ ನೀರ ಭರ್ತಿ ಮಾಡಿ ಬಳಸಿದ್ರಾತು. ಹುಡ್ಗಿ ಬಾಂವ್ಯಾಗ ಬಿಳಬೇಕಂದ್ರ ಅದರಾಗ ಈ ದುಂಡೇಶನ ಇಚ್ಚಾ ಏನೈತೋ ಎನೋ?. ಅದಕ್ ಬಾಂವಿ ಸ್ವಚ್ಚ ಮಾಡಿಸಿ, ಪೂಜಾ ಮಾಡಿಸಿದ ಮ್ಯಾಗ ನೀರ ಉಪಯೋಗಿಸುವದಂತಾ ಈ ಪಂಚಾಯಿತಿ ತೀರ್ಮಾನ ಮಾಡೈತಿ. ಎನಂತ್ರೀ?” ಎಂದು ಪ್ರಶ್ನಿದಾಗ ಬೇರೆ ಬಾವಿ ತಗಸಿದರೂ ಇದೇ ಘಟನೆ ಪುನರಾವರ್ತನೆ ಅಗುವ ಸಂಭವ ಇರುವದರಿಂದ ಬೇರೆ ದಾರಿ ಕಾಣದ ಜನ ಅರೆಬರೆ ಮನಸ್ಸಿನಿಂದ “ಆತು ನೀವ್ ಹೇಳಿದಾಂಗನ„ ಆಗಲಿ, ಆದರ ಆ ನೀರ ಕುಡ್ದ ರೋಗ ರುಜಿನ ಬಂದ್ರ?” ಎನ್ನುವ ಆತಂಕ ಜೊತೇನ ದುಂಡೇಶ ದೊಡ್ಡಾಂವ ತಮಗೆಲ್ಲ ಕಾಪಾಡತಾನ ಅನ್ನುವ ನಂಬಿಕೆಯೊಂದಿಗೆ ಸಮ್ಮತಿ ನೀಡಿದರು.
-8-
ದುಂಡೇಶನ ಗುಡಿಯ ಮುಖ್ಯದ್ವಾರದ ಮುಂದೆ ನಿಂತು ಕೆಳಜಾತಿಯ ಜನ ದುರ್ಗಿಯ ಹೆಣ ಯಾವಾಗ ಬರುತ್ತೆ, ಅದನ್ನು ಯಾವಾಗ ಸ್ಮಶಾನಕ್ಕೆ ಒಯ್ದು, ಬೆಂಕಿ ಇಟ್ಟು ತಂತಮ್ಮ ಮನೆಗಳಿಗೆ ಹೋಗ್ತಿವೋ ಎಂದು ಕಾಯುತ್ತಿದ್ದರು. ಈ ನಡುವೆ ಸುಂದರಿ ಮತ್ತು ಬಸ್ಯಾನ ಆಕ್ರಂದನ ಮುಗಿಲು ಮುಟ್ಟಿತ್ತು. ಗೌಡ ಬಂದು ಸುಂದರಿಯನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಿದ್ದರೆ, ಆನಂದ ಈ ಸಾವಿಗೆ ಗಣಪ್ಪಗೌಡನೇ ಕಾರಣನೆಂದು ಪೇಪರನಲ್ಲಿ ಹಾಕ್ತೀನಿ ಎಂದು ಹೆದರಿಸಿ ಅವನಿಂದ ದುಡ್ಡು ವಸೂಲ ಮಾಡಲು ಹೊಂಚು ಹಾಕಿ ಕುಳಿತ್ತಿದ್ದ. ಅಷ್ಟರಲ್ಲಿ ಧೂಳೆಬ್ಬಿಸುತ್ತ ಬಂದ ಪೊಲೀಸ್ ಜೀಪ ಗುಡಿಯ ಪ್ರವೇಶದ್ವಾರದ ಮುಂದೆ ನಿಂತಿತು. ಜೀಪಿನಿಂದ ಒಬ್ಬ ಇನ್ಸಪೆಕ್ಟರ್, ಇಬ್ಬರೂ ಕಾನ್ಸಟೇಬಲ್ ಇಳಿದು ಗಡಿಬಿಡಿಯಿಂದ ಗುಡಿ ಆವರಣದೊಳಗೆ ಪ್ರವೇಶಿಸಿದರು. ಆವರಣದ ಹೊರಗೆ ನಿಂತಿದ್ದ ಗೌಡ, ಆನಂದ ಮುಂತಾದವರಿಗೆ ಆಶ್ಚರ್ಯ!. ಯಾರೂ ಹುಡುಗಿ ಸತ್ತ ವಿಷಯ ಪೋಲಿಸರಿಗೆ ತಿಳಸಿರಲಿಲ್ಲ. ಅವರ್ಯಾಕೆ ಬಂದರು ಅನ್ನುವ ಪ್ರಶ್ನೆ ಎಲ್ಲರ ಮುಖದ ಮೇಲೆ. ಒಳಗೆ ಹೋದ ಪೋಲಿಸರು ಅರ್ಧ ಗಂಟೆಯ ನಂತರ ಹಿಂದಿರುಗಿದರು.
ಬರುವಾಗ ದೇವಸ್ಥಾನದ ಪೂಜಾರಿ ಪೂಜಾರಪ್ಪನ್ನನ್ನು ಎಳೆದು ತಂದಿದ್ದರು. ಮಧ್ಯ ವಯಸ್ಕ, ದಷ್ಟ ಪುಷ್ಟ ಶರೀರದ ಪೂಜಾರಪ್ಪನ್ನನ್ನು ಗೌಡನ ಮುಂದೆ ನಿಲ್ಲಿಸಿದ ಇನ್ಸಪೆಕ್ಟರ್-
“ನಮಗೆ ಒಂದು ತಾಸಿನ ಹಿಂದೆ ಅನಾಮಿಕ ಫೋನ ಕರೆಯೊಂದು ಹುಡುಗಿ ಸಾವಿನ ವಿಷಯ ತಿಳಿಸಿ ಅದು ಆತ್ಮಹತ್ಯೆಯಲ್ಲ ಕೊಲೆ ಎನ್ನುವ ಸುಳಿವು ನೀಡಿತು. ವಿಚಾರಣೆಗೆಂದು ಬಂದು ನಾವು ಇಲ್ಲಿ ಪರೀಕ್ಷಿಸಿಲಾಗಿ ಶವದ ದೇಹದ ಮೇಲೆ ಪರಚಿದ, ಎಳದಾಡಿದ ಗಾಯದ ಗುರ್ತುಗಳು ಇದ್ದವು. ಪೂಜಾರಿಗೆ ವಿಚಾರಿಸಿದರೆ ಏನಾದರೂ ಗೊತ್ತಾಗಬಹುದು ಎಂದು ವಿಚಾರಿಸಲು ಹೋದರೆ ಆತ ತುಂಬ ಹೆದರಿದಂತೆ ಕಂಡು ಬಂದ ಮತ್ತು ತನ್ನ ಶರೀರವನ್ನು ಕೇಸರಿ ವಸ್ತ್ರದಿಂದ ಮುಚ್ಚಲು ಪ್ರಯತ್ನಿಸುತ್ತಿದ್ದ. ಮೈ ಮೇಲಿನ ವಸ್ತ್ರ ತಗೆಸಿ ನೋಡಿದರೆ ಕೈಗಳ ಮೇಲೆ ಶರೀರದ ಮೇಲೆ ಗಾಯದ ಗುರ್ತುಗಳು. ಒಂದು ಕೈ ಮೇಲಂತೂ ಕಚ್ಚಿದ ಗಾಯವಿತ್ತು. ಇದನ್ನೆಲ್ಲ ನೋಡಿ ಪೂಜಾರಿಗೆ ಒಂದೆರಡು ಏಟು ಹಾಕಿ ಕೇಳಿದಾಗ ಸತ್ಯ ಹೊರಬಿತ್ತು” ಎಂದು ಹೇಳುತ್ತಿದ್ದಂತೆಯೇ-
“ಹೌದ್ರೀ ಗೌಡ್ರ, ನಾನ„ ಆ ಹುಡುಗಿ ಸಾವೀಗಿ ಕಾರಣಾ! ನಿನ್ನೆ ರಾತ್ರಿ ಗುಡಿ ಬಾಗಿಲ ಹಾಕ್ಕೊಂಡು ಮನೆಗೆ ಹೊರಡಬೇಕಾದರೆ ಮುಖ್ಯದ್ವಾರದ ಹತ್ರಾ ಯಾವುದೋ ಹೆಣ್ಣು ಅಳುವ ದ್ವನಿ ಕೇಳಿಸಿತು.
ಆಕೆಯ ಬಳಿ ಹೋಗಿ ನೋಡಿದರೆ ಈ ಹುಡುಗಿ ಒಂಟಿಯಾಗಿ ಅಳುತ್ತ ಕುಳಿತ್ತಿದ್ದು ನೋಡಿ, ನಾ ಗುಡಿ ಆವರಣದೊಳಕ್ಕೆ ಕರೆದೆ, ಅದಕ್ಕವಳು ತಾನು ಹೊಲ್ಯಾರ ಹುಡ್ಗಿ ಒಳಗೆ ಬರುವದಿಲ್ಲವೆಂದಳು. ಅದಕ್ಕ ನಾ, ಹೊಲ್ಯಾರು, ಐನಾರು, ಲಿಂಗಾಯತರು, ಎಲ್ಲಾರು ಒಂದೇ. ನಾವೆಲ್ಲರು ಮನುಷ್ಯ ಜಾತಿಯವರು, ದೇವರ ದೃಷ್ಠಿಯಲ್ಲಿ ಭೇದ ಭಾವ ಅನ್ನೂದ ಇರುದಿಲ್ಲವೆಂದು ಹೇಳಿ ಕರೆದಾಗ ಅವಳು ಒಳಗೆ ಬಂದಳು. ಗರ್ಭಗುಡಿಯಲ್ಲಿ ಕುಳಿತು ತನ್ನ ಕಥೆಯಲ್ಲ ಹೇಳಿದಳು. ತನ್ನನ್ನು ದೇವರಿಗೆ ಬಿಡುತ್ತಿರುವ ವಿಷಯ ಹೇಳಿ ಅಳುತ್ತಿರುವಾಗಲೇ ನಾನು ಅವಳನ್ನು ಸಮಾಧಾನ ಪಡಿಸುವ ನೆಪದಲ್ಲಿ ಮೈ ಮೇಲೆ ಕೈ ಹಾಕಿದೆ. ಅದಕ್ಕವಳು ಪ್ರತಿಭಟಿಸಿದಳು. ಆಗ ನನ್ನ ಬುದ್ದಿ ನನ್ನ ಕೈಯಲ್ಲಿ ಇರಲಿಲ್ಲ. ನಾನು ಬಲಾತ್ಕಾರಕ್ಕಿಳಿದೆ. ಅವಳು ಮತ್ತು ನನ್ನ ನಡುವೆ ಎಳೆದಾಟ, ಜಗ್ಗಾಟ ನಡೆಯಿತು. ನಾನು ಗಟ್ಟಿಯಾಗಿ ಅವಳನ್ನು ಹಿಡಿದುಕೊಂಡಾಗ ನನ್ನ ಕೈ ಕಚ್ಚಿ ಬಿಡಿಸಿಕೊಂಡು ಓಡಿ ಹೋಗಿ ಭಾವಿಗೆ ಹಾರಿದಳು, ಹುಡ್ಗಿ ಹೀಗೆ ಮಾಡಬಹುದಂತಾ ನನಗೂ ಅನಿಸಿರಲಿಲ್ಲ” ಎಂದು ಹೇಳಿ ಮುಗಿಸಿದಾಗ ಕೆಂಡಾಮಂಡಲವಾದ ಗೌಡ _
“ಎಳ್ಕೊಂಡ್ ಹೋಗ್ರಿ… ಈ ಭೋಸಡೀ ಮಗನ್ನಾ, ಒದ್ದ್ ಛಲೂತಂಗ ಬುದ್ದಿ ಕಲಸರೀ” ಎಂದಾಗ ಪೊಲೀಸ ಜೀಪ ಪೂಜಾರಪ್ಪನ್ನನ್ನು ಹೇರಿಕೊಂಡು ಬೆಳಗಾವಿ ದಾರಿ ಹಿಡಿಯಿತು, ಎಲ್ಲರು ಗರ ಬಡಿದವರಂತವರಾಗಿ ಅವಕ್ಕಾಗಿ ನಿಂತರು. ಒಬ್ಬರ ಮುಖವನ್ನೊಬ್ಬರು ನೋಡುತ್ತ.
-ಅಶ್ಫಾಕ್ ಪೀರಜಾದೆ