ಗಿಡ ಮರ ಪ್ರಾಣಿ ಪಕ್ಷಿ ಕ್ರಿಮಿ ಕೀಟಗಳು ತನ್ನಂತೆ ಪ್ರಕೃತಿಯ ಮಮತೆಯ ಮಕ್ಕಳು ಅವುಗಳಿಗೂ ಮಾನವನಂತೆ ಬದುಕುವ ಹಕ್ಕೂ, ಸ್ವಾತಂತ್ರ್ಯವೂ ಇದೆ ಎಂದು ಮಾನವ ಭಾವಿಸದೆ ಅವುಗಳನ್ನು ಮನಬಂದಂತೆ ತನಗೆ ಅನುಕೂಲವಾಗುವಂತೆ ದುಡಿಸಿಕೊಳ್ಳುತ್ತಲು ಹಿಂಸಿಸುತ್ತಲು ಕೊಲ್ಲುತ್ತಲೂ ಇದ್ದಾನೆ. ಇದು ಸರಿಯಲ್ಲ! ಇತ್ತೀಚೆಗೆ ಪ್ರಕೃತಿಯ ಉಳಿವಿನಲ್ಲಿ, ಬದುಕಿನಲ್ಲಿ, ನಲಿವಿನಲ್ಲಿ ಮಾನವನ ನಗು ಅಡಗಿದೆ! ಪ್ರಕೃತಿಯ ಗಿಡ ಮರ ಪ್ರಾಣಿ ಪಕ್ಷಿ ಜಲಚರಗಳನ್ನೂ ಮಾನವನ ಬದುಕು ಅವಲಂಬಿಸಿದೆ! ಅದರ ನಾಶ ಮಾನವನ ಸರ್ವನಾಶ! ಎಂದು ತಿಳಿದಾಗಿನಿಂದ ಪ್ರಕೃತಿಯನ್ನು ಅದನ್ನು ಆಶ್ರಯಿಸಿರುವ ಜೀವಿಗಳನ್ನು ರಕ್ಷಿಸಲು ಮುಂದಾಗಿದ್ದಾನೆ! ಆದರೂ ಅವುಗಳು ತನ್ನ ಸಂತೋಷಕ್ಕಾಗಿಯೇ ಸೃಷ್ಟಿಯಾಗಿವೆಯೆಂದು ಭಾವಿಸಿ ಅವುಗಳ ಮೇಲೆ ದುರಾಕ್ರಮಣ ಮಾಡುವುದನ್ನು ನಿಲ್ಲಿಸಿಲ್ಲ! ತಡೆಯುವ ಪ್ರಯತ್ನಗಳು ಆಮೆಗತಿಯಲ್ಲಿ ನಡೆದಿರುವುದು ಸರಿಯಲ್ಲ! ಆದರೂ ಪರಿಸರ ಉಳಿಸುವ ಹೋರಾಟಗಳು ನಿಂತಿಲ್ಲ!
ಪರಿಸರದ ಉಳಿವಿನ ಹೋರಾಟವಾಗಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡ ಚಿಪ್ಕೋ ಚಳುವಳಿ ಒಂದು ಹಳ್ಳಿಯ ಜನರ ಉಳಿವಿನ ಹೋರಾಟವಾಗಿ ಆರಂಭಗೊಂಡಿತ್ತು ಎಂಬುದು ಅಚ್ಚರಿ! ಹಳ್ಳಿ ಜನರಿಗೆ ಅವರ ಉಳಿವಿನ ಹೋರಾಟವಾಗಿದ್ದರೂ ಪ್ರಪಂಚಕ್ಕೆ ಅರಣ್ಯದ ರಕ್ಷಣೆಯ ಹೋರಾಟ ಅನ್ನಿಸಿದ್ದು ಸತ್ಯ! ಕಾಡಿನ ರಕ್ಷಣೆಗಾಗಿ ನಡೆದ ಹೋರಾಟ ಎನ್ನುವುದಕ್ಕಿಂತಲೂ ಅಲ್ಲಿನ ಜನರ ಜೀವನೋಪಾಯದ ರಕ್ಷಣೆಗಾಗಿ ನಡೆದ ಹೋರಾಟ ಎಂಬುದು ಹೆಚ್ಚಿನ ಪರಿಸರವಾದಿಗಳ ಮಾಪನದಿಂದ ತಿಳಿದು ಬಂದಿದೆ. ಸುಂದರ ಲಾಲ್ ಬಹುಗುಣ ಅವರಿಂದ ವಿಶ್ವ ಮಾನ್ಯತೆ ಪಡೆಯುವಂತಾದ ಈ ಚಳವಳಿ ಅನಕ್ಷರಸ್ಥ ಸ್ತ್ರೀಯರು ಆರಂಭಿಸಿದ ಚಳವಳಿ ಎಂಬುದು ಸಹ ಅಚ್ಚರಿ! ಈ ಚಳುವಳಿಗೆ ಸುಂದರ್ ಲಾಲ್ ಬಹುಗುಣ, ಚಂಡಿ ಪ್ರಸಾದ್ ಭಟ್, ಗೋವಿಂದ ಸಿಂಗ್ ರಾವತ್, ಪರಿಸರ ಗೀತೆಗಳ ರಚನಕಾರ ಘನ್ ಶ್ಯಾಮ್ ರಾವೊರಿ ಮುಂತಾದ ಗಣ್ಯ ಪುರುಷರ ಮುಂದಾಳತ್ವದ ಹೋರಾಟಗಾರರಿದ್ದರೂ ಸ್ತ್ರೀಯರಿಂದ ಆರಂಭಗೊಂಡಿದ್ದರಿಂದ ಸ್ತ್ರೀಯರ ಚಳವಳಿ ಎಂದೇ ಹೆಸರಾಗಿದೆ! ದುಸ್ತರವಾಗುತ್ತಿರುವ ಬದುಕನ್ನು ಕಟ್ಟಿಕೊಳ್ಳಲು ಗಾಂಧೀಜಿಯವರ ಮೂಲ ಮಂತ್ರವಾದ ಸತ್ಯಾಗ್ರಹ ಮತ್ತು ಅಹಿಂಸೆಗಳ ಮೂಲಕ ಮರಗಳನ್ನು ಅಪ್ಪಿಕೊಂಡು ಅವುಗಳನ್ನು ಕಡಿಯುವುದರ ಬಗ್ಗೆ ಅಸಹಕಾರ ತೋರಿದ ಪ್ರಮುಖ ಚಳವಳಿಯಾಗಿ ಆರಂಭಿಸಿದರೂ ಅದು ಭೂಮಿಯ ಸಕಲ ಜೀವಸಂಕುಲದ ಉಳಿವಿನ ಮಹಾ ಹೋರಾಟವಾಗಿ ವಿಶ್ವವಿಖ್ಯಾವಾಗುತ್ತದೆಂದು ಹೋರಾಟಗಾರರಿಗೆ ಗೊತ್ತಿರಲಿಲ್ಲವೆಂಬುದು ಸುಂದರ ಸತ್ಯ! ಆ ಸ್ತ್ರೀಯರು ರಾತ್ರಿಯೆಲ್ಲಾ ಮರ ತಬ್ಬಿಕೊಂಡು ರಕ್ಷಿಸಿದ, ಮರ ಕಡಿಯುವವರ ಬೇರೆ ಬೇರೆ ಬೆದರಿಕೆಗಳಿಗೆ ಬಾಗದ ಚಿಪ್ಕೋ ಚಳುವಳಿ ಅರಣ್ಯವನ್ನು ರಕ್ಷಿಸುವ ರೋಚಕ ಹೋರಾಟವಾಗಿತ್ತು! ಅವರ ಹೋರಾಟ ದಿಟ್ಟತೆ ಸಹನೆ ತಾಳ್ಮೆ ಅಹಿಂಸೆಯಿಂದ ಕೂಡಿದ್ದರಿಂದ ಬದುಕಿಗಾಗಿನ ಹೋರಾಟವಾದ್ದರಿಂದ ಗರ್ವಾಲಹಿಮಾಲಯದ ಸುತ್ತಮುತ್ತಲ ಅನೇಕ ಹಳ್ಳಿಗರಿಗೆ ಸಂಬಂಧಿಸಿದುದೂ ಆದ್ದರಿಂದ ಸುತ್ತಮುತ್ತಲ ಎಲ್ಲ ಹಳ್ಳಿಯವರಿಗೂ ಪ್ರೇರಣೆಯಾಯಿತು. ಇಂದೂ ಆ ಸ್ತ್ರೀಯರ ಹೋರಾಟ ಸಾಧಕರಿಗೆ ಪ್ರೇರಣೆಯಾಗಿದೆ!
ಚಿಪ್ಕೊ – ಈ ಚಳವಳಿ ಉತ್ತರ ಪ್ರದೇಶದ ಚಮೋಲಿ ಜಿಲ್ಲೆಯ ಮಂಡಲ್ ಹಳ್ಳಿಯಲ್ಲಿ 1973 ರಲ್ಲಿ ಆರಂಭಗೊಂಡಿತು. ಚಿಪ್ಕೊ ಇದು ಹಿಂದಿ ಭಾಷೆಯ ಪದ. ಇದರ ಅರ್ಥ ತಬ್ಬಿಕೋ, ಅಪ್ಪಿಕೋ! ಮರವನ್ನು ಅಪ್ಪಿಕೊಳ್ಳುವುದರ ಮೂಲಕ ಮರ ಕಡಿಯುವುದರ ಬಗ್ಗೆ ಅಸಹಕಾರ ತೋರಿದ ಪ್ರಮುಖ ಚಳವಳಿ! ಮಂಡಲ್ ಹಳ್ಳಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡುಗಳು ನಾಶವಾದಂತೆ ಆ ಪ್ರದೇಶದ ಜನರನ್ನು ಪ್ರವಾಹಗಳು ತೀವ್ರತರ ತೊಂದರೆಗೆ ಸಿಲುಕಿದವು! 1970 ರಲ್ಲಿಯಂತೂ ಅಲಕಾನಂದ ನದಿ ಪ್ರವಾಹದ ಹಾವಳಿಯಿಂದ ಜನ ತತ್ತರಿಸಿ ಹೋಗಿದ್ದರು! ಅರಣ್ಯಗಳು ಮಾಯವಾದಂತೆ ನೀರಿನ ಸೌದೆಯ ಮೇವಿನ ಅಭಾವ ಹೆಚ್ಚತೊಡಗಿತು. ಸೌದೆಗಾಗಿ ಮೇವಿಗಾಗಿ ನೀರಿಗಾಗಿ ಹಳ್ಳಿಯ ಹೆಣ್ಣು ಮಕ್ಕಳು ಹತ್ತಾರು ಕಿಲೋಮೀಟರುಗಳಷ್ಟು ದೂರ ಅಲೆದಾಡಬೇಕಾಗಿತ್ತು! ಈ ಕಷ್ಟ ಕೋಟಲೆಗಳಿಗೆಲ್ಲಾ ಅರಣ್ಯ ನಾಶವೇ ಕಾರಣವೆಂಬುದು ಮನಗಂಡ ಹಳ್ಳಿಯ ಸ್ತ್ರೀಯರು ಅರಣ್ಯಗಳನ್ನು ರಕ್ಷಿಸಲು ನಿರ್ಧರಿಸಿದರು! ಅಂದರೆ ಜೀವನಾವಶ್ಯಕಗಳ ಪಡೆಯಲು ಚಳುವಳಿ ಅರಂಭಿಸಿದರು!
1960 ರಲ್ಲಿ ಭಾರತ ವಾಣಿಜ್ಯ ಬೆಳವಣಿಗೆ ಸಾಧಿಸಲು ಮರಗಳನ್ನು ಕಡಿದು ಹೊರದೇಶಕ್ಕೆ ಸಾಗಿಸುವ ಮೂಲಕ ವದೇಶಿವಿನಿಮಯ ಗಳಿಸಿತಾದರೂ ಭೂಮಿ ಬರಡಾಗಿ ಅನೇಕ ಸಮಸ್ಯೆಗಳಿಗೆ ರಹದಾರಿಯಾಯಿತು. ಮಂಡಲ್ ಗ್ರಾಮದ ದೂರದ ಗುಡ್ಡದ ತಪ್ಪಲಲ್ಲಿ ಅರಣ್ಯವಿತ್ತು. ಅದನ್ನು ಕಡಿಯುವುದನ್ನು ಸರ್ಕಾರ ನಿಷೇಧಿಸಿ ರಕ್ಷಿಸುತ್ತಿತ್ತು. ಉಲುಸಾಗಿ ಬೆಳೆದಮೇಲೆ ಆಟದ ಸಾಮಾನುಗಳ ತಯಾರಿಕ ಕಂಪನಿಯೊಬ್ಬನಿಗೆ ಸರ್ಕಾರ 3000 ಸಾವಿರ ಮರಗಳ ಕಡಿಯಲು ಅನುಮತಿ ನೀಡಿತು. ಅದನ್ನು ಆ ಹಳ್ಳಿಯ ಜನ ವಿರೋಧಿಸಿದರು. ಕಡಿಯಲೆಂದು ಗುರುತು ಮಾಡಿದ ಮರಗಳನ್ನು ತಬ್ಬಿಕೊಂಡು ಕಡಿಯದಂತೆ ತಡೆದರು. ಮರ ಕಡಿಯುವವರು ಬೆದರಿಸಿದಾಗ ಕಡಿಯುವುದಾದರೆ ತಮ್ಮನ್ನು ಮೊದಲು ಕಡಿದು ನಂತರ ಮರಗಳನ್ನು ಕಡಿಯುವಂತೆ ಆಗ್ರಹಿಸಿ ಮರ ಕಡಿಯುವವರನ್ನು ಬೆದರಿಸಿದರು! ರಾಮಾಪುರ ಘಾಟ್ ನಲ್ಲಿ ಮರಗಳನ್ನು ಕಡಿಯಲು ಗುತ್ತಿಗೆದಾರರು ಬರುವರೆಂಬ ಸುದ್ದಿ ಕೇಳಿ ಅಲ್ಲಿಗೆ ಈ ಮಂಡಳದ ಜನ ಹಾಡುಗಳ ಹಾಡುತ್ತಾ ನಗಾರಿಗಳ ಬಾರಿಸುತ್ತಾ ಹೋಗಿ ಅಲ್ಲಿಯೂ ಮರಗಳನ್ನು ಕಡಿಯುವುದನ್ನು ತಡೆದರು! ನಂತರ 1974 ರಲ್ಲಿ ರೇನಿ ಎಂಬಲ್ಲಿ ಐವತ್ತು ವರ್ಷದ ಗೌರಾದೇವಿ ಇಪ್ಪತ್ತೇಳು ಸ್ತ್ರೀಯರೊಂದಿಗೆ ಕಾಡಿಗೆ ಹೋಗಿ ಮರಗಳನ್ನು ತಬ್ಬಿಕೊಂಡು, ಬೆದರಿಕೆಗಳಿಗೆ ಬಾಗದೆ ಕಡಿಯದಂತೆ ತಡೆದಳು! ಇವಳ ಮುಂದಾಳತ್ವದಲ್ಲಿ ಒಂದು ಸಂಘಟನೆಯೇ ಹುಟ್ಟಿ ನಿರಂತರ ಹೋರಾಟ ಮಾಡಿತು! ನಿಜವಾಗಿಯೂ ಇದು ಆ ಹಳ್ಳಿಯವರ ಬದುಕನ್ನು ಕಟ್ಟಿಕೊಳ್ಳುವ ದಾವಂತದ ಹೋರಾಟವಾಗಿತ್ತು ಇದು ಪರೋಕ್ಷವಾಗಿ ಸರಕಾರದ ವಿರುದ್ದದ ಹೋರಾಟವೂ ಆಗಿತ್ತೆಂದರೆ ಅಚ್ಚರಿಯಲ್ಲ! ಅನೇಕರಿಗೆ ಸ್ಫೂರ್ತಿಯಾಗಿ ಕೈಜೋಡಿಸಲು ಅನುಕೂಲವಾಯಿತು. ಹರಾಜು ಪಡೆದವ ಮರ ಕಡಿದು ತನ್ನ ಹಣವನ್ನು ಹಿಂದಕ್ಕೆ ಪಡೆಯುವುದರ, ಲಾಭ ಗಳಿಸುವುದರ ಹೋರಾಡುವ ಮಟ್ಟ ತಲುಪಿತು! ಇವರು ಮರ ಕಡಿಯುವುದರ ವಿರುದ್ದ ಚಿಪ್ಕೋ ಚಳುವಳಿ ಹೋರಾಡಬೇಕಾಯಿತು. ನಂತರ ಸೇರಿಕೊಂಡ ಪರಿಸರ ರಕ್ಷಕರ ಬೇರೆ ದೃಷ್ಟಿಯ ಆಯಾಮಗಳ ಸಂಕೀರ್ಣ ಹೋರಾಟ! ಕೊಟ್ಟ ಕೊನೆಗೆ ಪರಿಸರ ರಕ್ಷಿಸುವ ಹೋರಾಟವಾಗಿಯೇ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದು ಅಚ್ಚರಿ!
ಸುಂದರಲಾಲ್ ಬಹುಗುಣ ಸುತ್ತಮುತ್ತಲ ಹಳ್ಳಿಗಳಿಗೆ ಕಾಶ್ಮೀರದಿಂದ ಕೋಹಿಮಾದವರೆಗೆ 4000 ಕಿಲೋಮೀಟರು ಸಂಗಡಿಗರೊಂದಿಗೆ ಹೋಗಿ ಜನಗಳ ಸಂಘಟಿಸಿ ಗಿಡ ಮರ ಪ್ರಾಣಿ, ಪಕ್ಷಿಗಳ ಪ್ರಕೃತಿಯ ಮಹತ್ವ ತಿಳಿಸುತ್ತಾ ಜನ ಜಾಗೃತಿ ಮೂಡಿಸಿ ಕಾಡನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. 1980 ರ ಹೊತ್ತಿಗೆ ಭಾರತದಾದ್ಯಂತ ಈ ಚಳುವಳಿ ವ್ಯಾಪಿಸಿತು. 1983 ರಲ್ಲಿ ಶಿರಸಿಯ ಬೆಳಗಲ್ ಅಡವಿಗೆ ( ಬಾಳೆ ಗದ್ದೆ ) ಸುಂದರಲಾಲ್ ಬಹುಗುಣ ಭೇಟಿ ನೀಡಿ ಅರಣ್ಯ ರಕ್ಷಣೆಗೆ ಪ್ರೇರೇಪಿಸಿದರು. ಇಲ್ಲಿ ಅದು ‘ ಅಪ್ಪಿಕೋ ‘ ಚಳವಳಿ ಎಂದು ಬಹಳ ಪ್ರಸಿದ್ದವಾಯಿತು. ಮಲೆನಾಡಿನಾದ್ಯಂತ ವಿಸ್ತರಿಸಿ ಪಶ್ಚಿಮ ಘಟ್ಟಗಳ, ವಿಂಧ್ಯಾ ವರ್ವತದ ಕಾಡು ನಾಶವಾಗುವುದನ್ನು ತಡೆಯಿತು!
18 ನೇ ಶತಮಾನದಲ್ಲಿ ರಾಜಸ್ಥಾನದಲ್ಲಿ ಜೋಧಪುರದ ಮಹಾರಾಜ ಮರಗಳನ್ನು ಕಡಿಯಲು ಆದೇಶಿಸಿದ. ಆಗ ಬಿಷ್ಣೋಯಿ ಸಮುದಾಯಕ್ಕೆ ಸೇರಿದ ದೊಡ್ಡ ಸಂಖ್ಯೆಯ ಗುಂಪು ಮರಗಳನ್ನು ತಬ್ಬಿಕೊಂಡು ಮರ ಕಡಿಯುವುದನ್ನು ವಿರೋಧಿಸಿತು. ಇದೇ ಆಧುನಿಕ ಭಾರತದಲ್ಲಿ ಹಲವು ಪರಿಸರ ಸಂರಕ್ಷಣೆ ಹೋರಾಟಕ್ಕೆ ಸ್ಫೂರ್ತಿಯಾಗಿರಬಹುದೆಂದರೆ ಅಚ್ಚರಿಯಲ್ಲವೇ!
ಅಭಿವೃದ್ಧಿ ಕಾರ್ಯಕ್ರಮಗಳು ಪರಿಸರವನ್ನು ಹಾಳು ಮಾಡಬಾರದು ಪರಿಸರಕ್ಕೆ ಪೂರಕವಾಗಿರಬೇಕು ವಿನಾಶ ಇಲ್ಲದ ಅಭಿವೃದ್ಧಿಯೇ ನಮ್ಮ ಗುರಿಯಾಗಬೇಕು – ಇದು ಚಿಪ್ಕೊ ಚಳುವಳಿ ಮೂಲಮಂತ್ರ! ಅರಣ್ಯಗಳು ಮರ ಮುಟ್ಟುಗಳನ್ನು ರಾಳವನ್ನು ಒದಗಿಸುವ ಬೃಹತ್ ಸಾಗರ! ಇದು ಸರ್ಕಾರದ ವಾಣಿಜ್ಯ ದೃಷ್ಟಿ !ಅರಣ್ಯಗಳು ನೆಲದ ಸಾರವನ್ನು ರಕ್ಷಿಸುವ ನೀರನ್ನು ಹಿಡಿದಿಡುವ ಪರಿಸರವನ್ನು ರಕ್ಷಿಸುವ ಬೃಹತ್ ನೈಸರ್ಗಿಕ ವ್ಯವಸ್ಥೆ – ಇದು ಜನಸಾಮಾನ್ಯರ ದೃಷ್ಟಿ! ಈ ಎರಡು ದೃಷ್ಟಿಗಳ ಅರ್ಥಪೂರ್ಣ ಸಮ್ಮೇಳನಕ್ಕೆ ಚಿಪ್ಕೊ ಚಳುವಳಿ ಶ್ರಮಿಸದೆ! ವಾಣಿಜ್ಯ ಉದ್ದೇಶಗಳಿಗೆ ಮರ ಕಡಿಯುವುದನ್ನು ತಡೆಯುವ ಮತ್ತು ಗಿಡಗಳನ್ನು ನೆಡುವ ಈ ಚಳುವಳಿಯ ಕಾರ್ಯಕ್ರಮ ಹಿಮಾಲಯ ಪರ್ವತದ ಪ್ರದೇಶಗಳಲ್ಲಿ ಜನಪ್ರಿಯವಾಗಿದೆ! ಈ ಚಳುವಳಿ ಅನೇಕ ಆಂದೋಲನ ಜನ್ಮತಾಳಲು ಕಾರಣವಾಯಿತು. ಹಾಲ್ಕೋಹಾಲ್ ಹವ್ಯಾಸದ ವಿರುದ್ದ, ಗಣಿಗಾರಿಕೆ ವಿರುದ್ದ, ವನ್ಯ ಜೀವಿಗಳ ನಾಶದ ವಿರುದ್ದ ಚಳುವಳಿಗಳು ಆರಂಭವಾದವು. ತೆಹ್ರಿ ಹಣೆಕಟ್ಟು ವಿರೋಧಿಸಿ ಭಗೀರಥಿ ನದಿ ಉಳಿಸಲು ಬಹುಗುಣ ಅವಿರತವಾಗಿ ಶ್ರಮಿಸಿದರು. ಇದು ನದಿ ಉಳಿಸುವ ಹೋರಾಟಕ್ಕೆ ನಾಂದಿಯಾಯಿತು. ಸಸ್ಯಗಳ ಮಡುಗಳನ್ನು ಕಾಪಾಡಲು ಬೀಚ್ ಬಚಾವೋ ಚಳುವಳಿ ಹೀಗೆ ಭಾರತದಾದ್ಯಂತ ಪರಿಸರ ಉಳಿಸುವ ವಿವಿದ ಚಳುವಳಿಗಳು ಆರಭವಾಗಲು ಕಾರಣವಾಯಿತು.
ಕಾಡಿದ್ದರೆ ನಾಡು! ಮರಗಳು ಮಳೆ ಮೋಡಗಳನ್ನು ಆಕರ್ಷಿಸಿ ಮಳೆ ಬರುವಂತೆ ಮಾಡುತ್ತವೆ. ಬೇರುಗಳಿಂದ ಮಣ್ಣನ್ನು ಬಿಗಿಯಾಗಿ ಹಿಡಿದುಕೊಂಡು ಮಣ್ಣಿನ ಸವೆತವನ್ನು ತಪ್ಪಿಸಿ ಫಲವತ್ತತೆಯನ್ನು ರಕ್ಷಿಸುತ್ತವೆ! ಹರಿದು ಹೋಗಿ ಸಮುದ್ರ ಸೇರುವ ನೀರನ್ನು ಬೇರಿನ ಮೂಲಕ ಅಂತರ್ಜಲಕ್ಕೆ ತಲುಪಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತವೆ. ಭೂ ತಾಪವನ್ನು ನಿಯಂತ್ರಿಸುತ್ತವೆ! ಪ್ರವಾಹಗಳನ್ನು ತಡೆಯುತ್ತವೆ. ಅನಿಲಗಳ ವಿನಿಮಯದಿಂದ ಅನಿಲಗಳ ಸಮತೋಲನ ಸಾಧಿಸಿ ಜೀವಿಗಳಿಗೆ ಭೂ ಜಗತ್ತಿಗೆ ಹಾನಿಕಾರಕವಾಗಿರುವ ಇಂಗಾಲದ ಡಯಾಕ್ಸೈಡ್ ಹೆಚ್ಚಾಗದಂತೆ ನೋಡಿಕೊಳ್ಳುತ್ತವೆ. ಜೀವಿಗಳ ಉಸಿರಾಗಿರುವ ಆಮ್ಲಜನಕವನ್ನು ದ್ಯುತಿ ಸಂಶ್ಲೇಷಣೆ ಸಂದರ್ಭದಲ್ಲಿ ಗಾಳಿಗೆ ಸೇರಿಸಿ ಜೀವಿಗಳ ಉಸಿರಾಗಿವೆ! ಅನೇಕ ಪ್ರಾಣಿ, ಪಕ್ಷಿ, ಕ್ರಿಮಿ ಕೀಟ ಮುಂತಾದ ಜೀವಿಗಳಿಗೆ ಆಶ್ರಯವಾಗಿವೆ. ಚೌಬೀನೆ, ಕೈಗಾರಿಕಾ ಕಚ್ಚಾ ವಸ್ತುಗಳು, ಸೌದೆ, ರಾಳ, ಗೋಂದು, ವಿವಿಧ ತೈಲಗಳು, ನಾರು, ಫಲ – ಪುಷ್ಪ, ಮರ – ಮುಟ್ಟು, ಮೇವು, ಔಷಧಿ ಮುಂತಾದವನ್ನು ಮಾನವನಿಗೆ ಕೊಡುತ್ತವೆ. ಹೀಗೆ ಮರವನ್ನು ಬೆಲೆ ಕಟ್ಟಲಾಗದು! ನಾವು ಹಣ್ಣು ಮರ ಮುಟ್ಟು ಇವುಗಳಿಗೆ ವ್ಯಾವಹಾರಿಕವಾಗಿ ಬೆಲೆ ಕಟ್ಟುತ್ತೇವೆ ವಿನಃ ಅವುಗಳ ಪರಿಸರ ಮಾಲಿನ್ಯ ತಡೆಗಟ್ಟುವ, ಪರಿಸರವನ್ನು ಶುಚಿಗೊಳಿಸುವ ಮುಂತಾದ ಉಪಯೋಗಗಳಿಗೆ ಬೆಲೆ ಕಟ್ಟುತ್ತಿಲ್ಲ! ಅಂದರೆ ಅವುಗಳ ಮೌಲ್ಯ ತಿಳಿದಿಲ್ಲ! ಅವುಗಳನ್ನು ಪೂಜಿಸುತ್ತೇವಾದರೂ ಅಮೂಲ್ಯವೆಂದು ತಿಳಿದು ಅವುಗಳ ರಕ್ಷಿಸಲು ಹೋರಾಡುತ್ತಿಲ್ಲ! ಬೆಳೆಸಲು ಪ್ರಯತ್ನಿಸುತ್ತಿಲ್ಲ! ನಮಗೆ ಅರಣ್ಯದ ಬೆಲೆ ಗೊತ್ತಾಗಬೇಕಾದರೆ ಮರದ ಇತರ ಉಪಯೋಗಗಳನ್ನು ವ್ಯಾವಹಾರಿಕವಾಗಿ ದುಡ್ಡಿನಿಂದಲೇ ಬೆಲೆ ಕಟ್ಟಿದರೆ ಅದರ ಮಹತ್ವ ತಿಳಿದೀತು!
ಪರಿಸರ ರಕ್ಷಣೆಯ ದೃಷ್ಟಿಯಿಂದ ವಿಜ್ಞಾನಿಗಳು ಸುಮಾರು ನಲವತ್ತೈದು ವರ್ಷದ ಹಿಂದೆ ಐವತ್ತು ವರ್ಷ ತುಂಬಿರುವ ಒಂದು ಮರದ ಬೆಲೆ ಹದಿನೈದು ಲಕ್ಷದ ಎಪ್ಪತ್ತು ಸಾವಿರ ರೂಪಾಯಿಗಳೆಂದು ಲೆಕ್ಕ ಹಾಕಿದ್ದಾರೆ! ಆಮ್ಲಜನಕದ ಉತ್ಪಾದನೆ 2,50,000 ರೂಗಳು. ಪ್ರಾಣಿ ಮೂಲ ಸಸಾರಜನಕ ಉತ್ಪಾದನೆ 20,000 ರೂಗಳು. ಮಣ್ಣಿನ ಸವೆತದ ನಿಯಂತ್ರಣ ಮತ್ತು ಮಣ್ಣಿನ ಸಾರದ ರಕ್ಷಣೆ 2,50,000 ರೂಗಳು, ನೀರಿನ ಪುನರ್ಬಳಕೆ ಮತ್ತು ಆರ್ದ್ರತೆಯ ನಿಯಂತ್ರಣ 3,00000 ರೂಗಳು, ಪಕ್ಷಿಗಳಿಗೆ, ಕ್ರಿಮಿ ಕೀಟಗಳಿಗೆ ಮತ್ತು ಇತರ ಸಸ್ಯಗಳಿಗೆ ನೀಡುವ ಆಶ್ರಯ ಮತ್ತು ರಕ್ಷಣೆ 2,50,000 ರೂಗಳು, ವಾಯು ಮಾಲಿನ್ಯ ನಿಯಂತ್ರಣ 5,00,000 ರೂಗಳು! ಒಟ್ಟು ಒಂದು ಮರದ ಬೆಲೆ 15,70,000 ರೂ ಆಗುತ್ತದೆ! ಇಲ್ಲಿ ಚೌಬೀನೆ, ಹೂವು, ಹಣ್ಣು ಮುಂತಾದವುಗಳ ಬೆಲೆಯನ್ನು ಬೇಕೆಂದೇ ಕೈಬಿಡಲಾಗಿದೆ! ಒಂದು ಮರದ ಬೆಲೆ ಇಷ್ಟಾದರೆ ಅರಣ್ಯದಲ್ಲಿರುವ ಒಟ್ಟು ಮರಗಳ ಬೆಲೆ ಎಷ್ಟು? ಅದನ್ನು ಕಡಿಯಬೇಕೋ ರಕ್ಷಿಸಬೇಕೋ ಗಿಡನೆಟ್ಟು ಬೆಳೆಸಬೇಕೋ ಅಂತ ಯೋಚಿಸಿ!
ಚಿಪ್ಕೋ ಚಳುವಳಿ ಆರಂಭಿಸಿದವರಿಗೆ ಆರಣ್ಯದ ಈ ಎಲ್ಲಾ ಮಹತ್ವ ತಿಳಿಯದಿದ್ದರೂ ಜೀವಿಗಳ ಬದುಕು ಪರಿಸರವನ್ನು ಅವಲಂಭಿಸಿದೆ ಎಂಬುದು ಚೆನ್ನಾಗಿ ತಿಳಿದಿತ್ತು! ಆದರೆ ಆ ಅನಕ್ಷರಸ್ಥ ಸ್ತ್ರೀಯರಿಗೆ ತಿಳಿದದ್ದು ಆಧುನಿಕ ಡಿಜಿಟಲ್ ಮಾನವನಿಗೆ ತಿಳಿಯದೇ ಹೋಯ್ತೇ? ಅದಕ್ಕೇ ಈ ಎಲ್ಲಾ ಯಶಸ್ವಿ ಹೋರಾಟಗಳ ನಡುವೆಯೂ ಅನೇಕ ಕಾರಣಗಳಿಂದಾಗಿ ನಿಲ್ಲುತ್ತಿಲ್ಲ ಮರಗಳ ಮಾರಣ ಹೋಮ! ಪ್ರವಾಹ, ಕ್ಷಾಮ, ನೀರಿನ ಅಭಾವ, ಭೂ ಕುಸಿತ, ಮೇಘ ಸ್ಫೋಟ, ಭೂಕಂಪ, ಸುನಾಮಿಗಳಿಂದ ಜೀವಗಳು ಕೊಚ್ಚಿ ಹೋದರೂ, ಬಾಟಲುಗಳಲಿನ ನೀರನ್ನು ಕುಡಿಯುವಂತೆ ಆಕ್ಸಿಜನ್ನನ್ನು ಕೊಂಡು ಕೆಲವು ವಾಯುಮಾಲಿನ್ಯ ನಗರಗಳಲ್ಲಿ ಬಳಸುವ ಕಾಲ ಬಂದಿದ್ದರೂ ಅದರಿಂದ ಪಾಠ ಕಲಿಯದಿದ್ದರೆ ಹೇಗೆ? ಪರಿಸರ ನಾಶವಾಗದಂತೆ ತಡೆಯುವುದು, ಉಳಿಸಿ, ಬೆಳೆಸುವುದು ಪ್ರತಿಯೊಬ್ಬರ ಪವಿತ್ರ ಕರ್ತವ್ಯವಲ್ಲ, ಮಾನವ ತನ್ನ ಸಂತತಿಯನ್ನು ಉಳಿಸಿಕೊಳ್ಳುವ ಮಹಾನ್ ಹೋರಾಟ! ಇದಾಗದಿರಲು ಮಾನವ ಕಾಡನ್ನು ಉಳಿಸಿ ಬೆಳೆಸಬೇಕಿದೆ.
* ಕೆ ಟಿ ಸೋಮಶೇಖರ ಹೊಳಲ್ಕೆರೆ.