ಈತನದು ಮುಂಬಯಿಯ ನವಿ ಮುಂಬಯಿಯಲ್ಲೊಂದು ದುಖಾನು. ದುಖಾನೆಂದರೆ ಸಣ್ಣ ಕಿರಾಣಿ ಅಂಗಡಿಯೇನಲ್ಲ.ಈತ ತನ್ನೂರಿನವರಿಗೆ ಹೇಳಿದ್ದ ಹೆಸರಷ್ಟೆ. ಅದು ದೊಡ್ಡದೇ. ದುಡ್ಡಿರೋರಿಗೆ ಸಣ್ಣ ಸಣ್ಣ ಮನೆಗಳನ್ನೂ ದೊಡ್ಡ ಬೆಲೆಗೆ ಮಾರೋ ಅದೇನೋ ಅಂತಾರಲ್ಲಾ, ಹಾ ರಿಯಲ್ ಎಸ್ಟೇಟು.. ಆ ತರದ್ದು. ನವಿ ಮುಂಬಯಿಯಲ್ಲಿ ಒಂದು ಶಯನ ಗೃಹ, ಒಂದು ಅಡುಗೆ ಮನೆಯಿರೋ ಮನೆಗೇ ೩೦ ಸಾವಿರ ದಾಟಿಸಿದ್ದರಲ್ಲಿ ಈತನ ತರದ ಅದೆಷ್ಟೋ ದುಖಾನುಗಳ ಸಾಥ್ ಇತ್ತು. ಮುಂಬಯಿ ಬೋರ್ ಬಂತಾ ಅಥವಾ ನಿನ್ನ ನೋಡ್ದೇ ವರ್ಷಗಟ್ಲೇ ಆಗೋಯ್ತು, ಯಾವಾಗ ಮನೆಗೆ ಬರ್ತೀಯೋ ಅಂತ ಗೋಗರೆಯುತ್ತಿದ್ದ ತಂದೆ ತಾಯಿಗಳ ಮಾತು ಕರಳು ಕರಗಿಸ್ತೋ ಅಥವಾ ಅದರಲ್ಲೂ ಇನ್ನೇನೋ ವ್ಯವಹಾರ ಹೊಳೆಯಿತೋ ಗೊತ್ತಿಲ್ಲ. ಹೆತ್ತೂರಿಗೆ ಇನ್ನೂ ವಿಮಾನ ಬಿಟ್ಟಿಲ್ಲ. ಇವೆಲ್ಲಾ ಯಾವಾಗ ಉದ್ದಾರ ಆಗ್ತವೋ ಗೊತ್ತಿಲ್ಲ ಎಂಬ ಗೊಣಗಾಟದಲ್ಲೇ ಬೆಂಗಳೂರಿನ ತನಕ ವಿಮಾನದಲ್ಲಿ ಬಂದು ಅಲ್ಲಿಂದ ಹೆತ್ತೂರಿಗೆ ರೈಲು ಹತ್ತಿದ. ರೈಲು ಹತ್ತಿ ಮಲಗಿದಾಗ ಅಲ್ಲಿ ತಾನಿದ್ದಾಗಿದ್ದ ಸೊಂಪಾದ ಹೊಲಗದ್ದೆಗಳು, ಅದರಲ್ಲಿ ಬರ್ತಿದ್ದ ಮೂರು ಕಾಸಿಗೆ ವರ್ಷವಿಡೀ ಕಷ್ಟಪಟ್ಟು ಕೆಲಸ ಮಾಡ್ತಿದ್ದ ಮೂರ್ಖ(?) ರೈತರೂ ನೆನಪಾದರು. ಅವರನ್ನು ಹೇಗಾರೂ ಬಖರಾ ಮಾಡಿ ಆ ಜಾಗವನ್ನೇನಾದ್ರೂ ಕೊಂಡು ಕೊಂಡು ಅಲ್ಲೂ ರಿಯಲ್ ಎಸ್ಟೇಟ್ ಶುರು ಮಾಡಿದ್ರೆ ಎಷ್ಟೆಷ್ಟು ಲಾಭ ಬರಬಹುದೆಂಬ ಲೆಕ್ಕಾಚಾರದಲ್ಲೇ ನಿದ್ದೆ ಹತ್ತಿತು.
ಮಲೆನಾಡ ಒಂದು ಹಳ್ಳಿ ಅವನ ಹುಟ್ಟೂರು.ವರ್ಷದ ನಾಲ್ಕು ತಿಂಗಳೂ ಇರುತ್ತಿದ್ದ ಮಳೆಗಾಲ ಈಗ ಮೂರಕ್ಕೆ ಇಳಿದಿದ್ದರೂ ಮಳೆಗೆ, ನೀರಿಗೆ ಏನೂ ಕೊರತೆಯಿರಲಿಲ್ಲ. ಮಳೆಗೆ ಉಗಿಯೆಲ್ಲಾ ಕೊಚ್ಚಿಹೋದರೂ ಮಳೆಗಾಗಿ ಕೆಲವೊಮ್ಮೆ ಕಾದು ಬಿತ್ತನೆ ತಡವಾದರೂ ರೈತರು ತೀರಾ ಕಂಗಾಲಾಗುತ್ತಿರಲಿಲ್ಲ. ನಮ್ಮ ನಸೀಬಿದ್ದಿದ್ದೇ ಇಷ್ಟು ಈ ವರ್ಷಕ್ಕೆ. ದೇವರು ಕೊಟ್ಟಿದ್ದು ನಮಗೆ, ನಮ್ಮ ಮಕ್ಕಳಿಗೆ ಬೇಕಾದಷ್ಟಿದೆ, ಆತ ಎಂದೂ ಕೈಬಿಡಲಾರನೆಂಬ ನಂಬಿಕೆಯಲ್ಲೇ ಬಾಳು ಸಾಗಿಸುತ್ತಿದ್ದವರು. ಗದ್ದೆಯಲ್ಲದೇ ಅಡಿಕೆ, ತೆಂಗಿನ ತೋಟವಿದ್ದವಿದ್ದರೂ ಅವರೇನೂ ತೀರಾ ಶ್ರೀಮಂತರಾಗಿರಲಿಲ್ಲ. ತೆಂಗಿನ ನುಸಿರೋಗ, ಅಡಿಕೆಯ ಕೊಳೆ, ಕಾಂಡ ಕೊರಕ, ಹಳದಿಹುಳ.. ಹೀಗೆ ತರ ತರದ ರೋಗಗಳು ಬಾಧಿಸಿ ಅವರ ಫಸಲುಗಳೂ ಪೂರಾ ಕೈಸಿಕ್ಕದೇ ಕಂಗೆಡತ್ತಿದ್ದರು. ಆದರೂ ಮೊದಲಿನವರಂತೆ ಇವರೂ ಅಲ್ಪತೃಪ್ತರು. ಇಲ್ಲದಿದ್ದದುಕ್ಕೆ ತೀರಾ ಆಸೆಪಡದೇ ಇದ್ದಿದ್ದುರಲ್ಲೇ ಜೀವನ ಸಾಗಿಸುವುದು ಇವರ ರೀತಿ. ನೀರುಳ್ಳಿಗೆ ೭೫ ರೂಪಾಯಂತೆ ಕಣೋ, ಟೊಮಾಟೋಗೆ ೫೦ ಅಂತೆ ಕಣೋ ಎಂಬಂತ ಸುದ್ದಿಗಳೆಲ್ಲಾ ಇವರಿಗೆ ಟೀವಿಯಲ್ಲಿ ನೋಡಿದ, ರೇಡಿಯೋಲಿ ಕೇಳಿದ ಅಂತೆಕಂತೆಗಳಷ್ಟೆ. ತಿನ್ನಲು ಬೇಕಿದ್ದ ತರಕಾರಿ,ಸೊಪ್ಪುಗಳನ್ನೆಲ್ಲಾ ಮನೆಹಿತ್ತಲಲ್ಲೇ ಬೆಳೆಯುತ್ತಿದ್ದ ಇವರಿಗೆ ವಾರಕ್ಕೊಮ್ಮೆಯ ಊರಸಂತೆಗೆ ಹೋಗೋ ಜರೂರತ್ತೂ ಇರಲಿಲ್ಲ. ಹೋದರೂ ೨೫-೩೦ರೂಗಳಲ್ಲಿ ಸಂತೆ ಖರೀದಿ ಮುಗಿದು ಹೋಗುತ್ತಿತ್ತು. ಐದಾರು ರೂಪಾಯಿಗೆ ಕೇಜಿ ತರಕಾರಿಗಳು ಸಿಗುತ್ತಿದ್ದವು. ೨೫ ರೂ ಅಂದರೆ ಬೇರೆ ಬೇರೆ ತರದ ತರಕಾರಿಗಳೇ ಬೇಜಾರಾಗುವಷ್ಟು ಬಂದು ಬರುತ್ತಿತ್ತು. ಹೊರಗಡೆಯಿಂದ ಬರಬೇಕಿದ್ದ ಕ್ಯಾರೇಟಿನಂತ ತರಕಾರಿಗಳು ಮಾತ್ರ ತುಸು ದುಬಾರಿ. ಉಳಿದಿದ್ದೆಲ್ಲಾ ಸೋವಿಯೇ. ಅಕ್ಕಿ ಮನೆಯಲ್ಲಿ ಬೆಳೆಯದವರಾಗಿದ್ದರೆ ಒಂದೂವರೆ ಎರಡು ತಿಂಗಳಿಗೊಮ್ಮೆ ಅಕ್ಕಿ ಕೊಳ್ಳುತ್ತಿದ್ದರು. ಅದಿಲ್ಲದಿದ್ದರೆ ಬೇಳೆ ಮಾತ್ರ ಕೊಳ್ಳುತ್ತಿದ್ದುದು. ಒಟ್ನಲ್ಲಿ ತಿಂಗಳಿಗೆ ನಾಲ್ಕಂಕಿ ಸಂಪಾದನೆಯಿದ್ದರೆ ಅದು ಸಿಕ್ಕಾಪಟ್ಟೆ ಶ್ರೀಮಂತಿಕೆಯ ಜೀವನ.
ಊರು ಬಿಟ್ಟು ಕೆಲಸ ಹುಡುಕಿ ಮುಂಬಯಿ ಸೇರಿದವನಿಗೆ ಅಲ್ಲಿ ನೆಲೆ ಸಿಕ್ಕ ನೆಂಟನದು ಮನೆ ಮಾರೋ ಬಿಸಿನೆಸ್ಸು. ಅಲ್ಲೇ ಉಳಿದ ಈತ ಆತನ ವ್ಯವಹಾರಗಳನ್ನು ಕಲಿಯುತ್ತಾ ತನ್ನದೇ ಒಂದು ಬಿಸಿನೆಸ್ಸು ತೆರೆಯೋವಷ್ಟು ಬೆಳೆದ. ಅಲ್ಲೇ ಸುತ್ತಮುತ್ತಲ ಹಳ್ಳಿಗಳಿಗೆ ಹೋಗೋದು. ಅಲ್ಲಿನ ರೈತರಿಗೆಲ್ಲಾ ಕರೆಯೋದು. ನೀವು ವರ್ಷಪೂರ್ತಿ ದುಡಿದರೂ ಒಂದು ಲಕ್ಷ ಸಂಪಾದನೆ ಮಾಡಲಾರಿರಿ. ಅಂತದ್ದರಲ್ಲಿ ನಿಮಗೆ ಒಂದೇ ಸಲಕ್ಕೆ ನಾಲ್ಕು ಲಕ್ಷ ಕೊಡ್ತೀನಿ. ಆರಾಮ್ಗಿದ್ಬಿಡಿ ಅನ್ನೋದು. ಆ ರೈತರಿಗೂ ಪಾಪ ಕಷ್ಟ. ಮದುವೆಯಾಗಬೇಕಿರೋ ಮಗಳೋ, ರೋಗಿ ಪತ್ನಿಯೋ ಇರೋರು. ಈ ಊರು ಬಿಟ್ಟು ಪಟ್ಟಣದಲ್ಲಿ ಚಂದದ ಬದುಕು ಕಟ್ಟೋ ಕನಸುಗಳು ಮೂಡುತ್ತಿದ್ದವು . ಅಪ್ಪಂದಿರಿಗೆ ಇಷ್ಟವಿಲ್ದಿದ್ರೂ ಅವರ ಗಂಡುಮಕ್ಕಳಿಗೆ ಪೇಟೆ ಸೇರೋ ಆಸೆ ತೋರಿಸಿ ಜಮೀನು ಮಾರಿಸುವಂತೆ ಮಾಡಿ ಬಿಡ್ತಿದ್ದ ಈತ. ಜಮೀನನ್ನು ವ್ಯವಸಾಯ ಉದ್ದೇಶಕ್ಕೆ ಕೊಳ್ಳೋ ಯಾರೂ ಕೂಡ ಎರಡೂವರೆಯಿಂದ ಮೂರು ಲಕ್ಷಕ್ಕಿಂತ ಜಾಸ್ತಿ ಕೊಡೋಲ್ಲ. ಅಬ್ಬಬ್ಬಾ ಅಂದರೆ ಮೂರೂವರೆ ಕೊಡಬಹುದು. ಅಂತದ್ದರಲ್ಲಿ ಐದು ಲಕ್ಷ ಅಂದ್ರೆ ಸಾಮಾನ್ಯನಾ ? ತಗೊಂಡು ಏನಾದ್ರೂ ಮಾಡ್ಕೊಳ್ಳಲಿ ನಮಗೇನು ಅನ್ನೋದು ಕೆಲವರ ಯೋಚನೆಯಾಗಿತ್ತು. ಅಂತೂ ಊರಿಗೆ ಊರೇ ಖಾಲಿ ಮಾಡಿದ ಮೇಲೆ ಎಲ್ಲೆಲ್ಲೋ ಪೆಟ್ಟಿಗೆ ಕಳಿಸಿ ಡಿನೋಟಿಫಿಕೇಶನ್ ಮಾಡಿಸೋದು. ಆಮೇಲೆ ಅಲ್ಲೊಂದು ಅಪಾರ್ಟುಮೆಂಟು !!! ಸೊಂಪು ಹಸಿರು ಗದ್ದೆಗಳಿದ್ದ ಜಾಗದಲ್ಲೀಗ ಖಾಲಿ ಬರಡು ಭೂಮಿ. ಅದರ ತುಂಬೆಲ್ಲಾ ಬೌಂಡರಿಗಳು.. ಅಲ್ಲಲ್ಲ ಭಾವೀ ಮನೆಗಳಿಗಾಗಿನ ಸೈಟುಗಳು.
ಒಂದೊಂದು ಸೈಟುಗಳೂ ಅದೆಷ್ಟೋ ಲಕ್ಷಕ್ಕೆ ಮಾರಾಟವಾಗುತ್ತಿದ್ದವು. ಕೋಟಿ ಕೋಟಿಯ ಬಿಸಿನೆಸ್ಸು. ಕೆಲವೆಡೆ ಈತನೇ ಇನ್ಯಾವುದೋ ಬಿಲ್ಡರುಗಳ ಸಹಭಾಗಿತ್ವದಲ್ಲಿ ಅಪಾರ್ಟುಮೆಂಟು ಕಟ್ಟಿಸಲು ಶುರುಮಾಡುತ್ತಿದ್ದ. ಅಲ್ಲಿ ಬಿಲ್ಡಿಂಗು ಮುಗಿಯೋ ಮೊದಲೇ ಪ್ರತೀ ಫ್ಲಾಟು ನಮಗೆ ಬೇಕೆಂದು ಬುಕ್ಕಿಂಗು ! ಮತ್ತೆ ಕೋಟಿಗಳ ವ್ಯವಹಾರ. ಜಮೀನುಗಳು ಸಾಲದೆಂದು ಊರಿನ ಕೆರೆಗಳಿದ್ದ , ದನಗಾವಲಿನ ಜಾಗಗಳನ್ನೂ ಅಕ್ರಮವಾಗಿ ಆಕ್ರಮಿಸಿ ಫ್ಲಾಟ್ ಕಟ್ಟೋಕೆ ಮುಗಿಬಿದ್ದಿದ್ದರು ಜನ. ಸಮೃದ್ಧ ಭತ್ತ, ಗೋಧಿ ಬೆಳೆಯುತ್ತಿದ್ದ ಜಾಗದಲ್ಲಿ ಈಗ ಬರಡು ಬಯಲು. ಅತ್ತ ಜಮೀನು ಮಾರಿ ಪೇಟೆ ಸೇರಿದ್ದ ಜನ ಬೀದಿಪಾಲಾಗಿದ್ದರು. ಕೈಗೆ ಸಿಕ್ಕ ಲಕ್ಷ ಕೆಲವೇ ದಿನಗಳಲ್ಲಿ ಖಾಲಿಯಾಗಿತ್ತು. ನಮಗೊಂದಿಷ್ಟು ನಮಗೊಂದಿಷ್ಟು ಎಂದು ಕೇಳಿ ಪಡೆದಿದ್ದ ನೆಂಟರು ನಾಪತ್ತೆಯಾಗಿದ್ದರು. ತಮ್ಮ ಪಾಲಲ್ಲಿ ಏನೋ ಬಿಸಿನೆಸ್ಸು ಮಾಡ್ತೀವಿ ಅಂತ ತಗೊಂಡಿದ್ದ ಮಕ್ಕಳು ಪೇಟೆಯಲ್ಲಿ ಮೂರ್ಖರಾಗಿ ಕೈಖಾಲಿ ಮಾಡ್ಕೊಂಡಿದ್ದರು, ಕೆಲವರು ಜೂಜಲ್ಲಿ ಕಳೆದು ಮರಳಿದ್ದರು. ಕೆಲವರು ಪೇಟೆಯ ಶ್ರೀಮಂತಿಕೆಯ ಜೀವನಕ್ಕೆ ಹೊಂದೋಕೆ ಅಂತ ಖರ್ಚು ಮಾಡಿದ್ದರು. ಒಟ್ನಲ್ಲಿ ಅತ್ತಲೂ ಇಲ್ಲ. ಇತ್ತಲೂ ಇಲ್ಲದ ತ್ರಿಶಂಕು ಸ್ವರ್ಗದ ಸ್ಥಿತಿ. ಊರಲ್ಲಾದರೆ ಮೂರು ಹೊತ್ತು ಊಟಕ್ಕೆ ಏನೂ ತೊಂದರೆಯಿರಲಿಲ್ಲ. ಸಾವಿರದ ನೋಟನ್ನು ವರ್ಷಕ್ಕೊಮ್ಮೆಯೂ ನೋಡಿರದೇ ಇದ್ದಿರಬಹುದು. ಆದರೆ ನೂರರ ನೋಟಿದ್ದರೆ ವಾರಪೂರ್ತಿಯ ದಿನಸಿ ತರಬಹುದಿತ್ತು. ಅಕ್ಕಿ ಬೆಳೆಯದವರಿದ್ದರೂ ಇನ್ನೂರೋ ಮುನ್ನೂರೋ ಇದ್ದರೆ ಎರಡು ತಿಂಗಳು ಮನೆಗೆ ಬೇಕಾಗುವಷ್ಟು ಅಕ್ಕಿ ಸಿಗುತ್ತಿತ್ತು. ಆದರೆ ಈಗ, ಐನೂರರ ನೋಟು ತಗೊಂಡು ಹೋದರೂ ಒಂದು ತಿಂಗಳಿಗಾಗುವಷ್ಟು ಅಕ್ಕಿ ತರಬಹುದಷ್ಟೇ. ನೂರರಲ್ಲಿ ಎರಡು ಕೇಜಿ ತರಕಾರಿ ಸಿಕ್ಕರೆ ಹೆಚ್ಚು. ಬೆಳೆಯುವಂತೆಯೂ ಇಲ್ಲ, ಕೊಳ್ಳುವಂತೆ ಮೊದಲೇ ಇಲ್ಲ !!! ಇನ್ನು ಉಳಿಯಲು ಮನೆ ? ತಿಂಗಳಿಗೆ ವಿಪರೀತ ಬಾಡಿಗೆ ೨೫-೩೦ ಸಾವಿರ ತಿಂಗಳಿನ ಬಾಡಿಗೆ !!! ಇಷ್ಟೆಲ್ಲಾ ಆಗಲು ಕಾರಣ ಯಾರೆಂದು ಯೋಚಿಸಿದ ಅವರು ತಮಗೇ ಶಾಪ ಹಾಕಿಕೊಳ್ಳುತ್ತಿದ್ದರು. ತೀರಾ ಸುಖದಲ್ಲಿ ಇಲ್ಲದಿದ್ದರೂ ಯಾವತ್ತೂ ಉಪವಾಸವಿರದ ತಾವು ಅಂದು ಅತಿಯಾಸೆ ಪಟ್ಟಿದ್ದಕ್ಕೆ ಇವತ್ತು ಅನುಭವಿಸಲೇ ಬೇಕೆಂದು ಶಾಪ ಹಾಕಿಕೊಳ್ಳುತ್ತಿದ್ದರು. ಅಂದು ಅವಸರಿಸಿದ ಮಕ್ಕಳಿಗೂ ಇಂದು ಪಾಪ ಪ್ರಜ್ನೆ ಕಾಡುತ್ತಿತ್ತು.
ಬೆಳಕಾಯಿತೆಂದು ರೈಲಲ್ಲಿ ಬರುತ್ತಿದ್ದ ಚಾಯ್ ವಾಲಾಗಳ ಚಾಯ್ ಚಾಯ್ ಎಂಬ ದನಿ ಸಾರುತ್ತಿತ್ತು. ಹೌ ಮಚ್ ಎಂದ. ರೈಲಿನ ಚಾಯ್ ವಾಲಾ ಉತ್ತರಿಸೋ ಮೊದಲೇ ಈತನಿಗೆ ಮುಂಬೈ ಸೇರಿ ಏಸಿ ಕಾರು, ವಿಮಾನಗಳಲ್ಲೇ ಸುತ್ತಾಡಿ ಡಾಲರ್, ಯೂರೋಗಳ ಲೆಕ್ಕದಲ್ಲಿದ್ದವ ಈಗ ರೂಪಾಯಿ ಲೆಕ್ಕಕ್ಕೆ ಬಂದಿದ್ದು ನೆನಪಾಗಿ ನಗು ಬಂದು ಎಷ್ಟಪ್ಪಾ ಎಂದ.ಐದು ರೂಪಾಯಿ ಸಾರ್ ಎಂದ. ಮುಂಬೈಯಲ್ಲಿ ಐವತ್ತು ರೂ ಇದ್ರೂ ಒಂದು ಕಾಫಿ ಸಿಗಲ್ಲ ಅಂತದ್ದರಲ್ಲಿ ಬರೀ ಐದಾ ? ಈ ಜನ ಉದ್ದಾರವಾಗಲ್ಲ ಅಂತ ಬೈದುಕೊಳ್ತಲೇ ಜೋಬಿಗೆ ಕೈ ಹಾಕಿದ. ಅರೇ ಪರ್ಸೇ ಇಲ್ಲ. ರಾತ್ರೆ ಎಲ್ಲೋ ಸಿಗರೇಟು ಸೇದೋಕೆ ಅಂತ ಇಳಿದಾಗ ಆ ಸ್ಟೇಷನ್ನಲ್ಲಿ ರಶ್ಸಿತ್ತು. ಚೇ, ಪರ್ಸು ಹೊಡೆದುಬಿಟ್ಟರಾ ಅಂದುಕೊಂಡ. ಎಲ್ಲಾದರೂ ಪರ್ಸು ಹೊಡೆದರೆ ಬೇಕಾದೀತು ಅಂತ ಬ್ಯಾಗಿನಲ್ಲಿಟ್ಟಿದ್ದ ಮತ್ತೊಂದು ಏಟಿ ಎಮ್ ಕಾರ್ಡೂ, ಅದರ ಪಕ್ಕದಲ್ಲಿ ಐನೂರರ ನೋಟೊಂದು ಇಟ್ಟಿದ್ದ ಹಾಗೆ ನೆನಪಾಯ್ತು. ಅದನ್ನೇ ತೆಗೆದುಕೊಡೋಕೆ ಅಂತ ಚೇಂಚ್ ಇದ್ಯೇನಪ್ಪಾ ಐನೂರಕ್ಕೆ ಅಂದ.. ಸಾರ್ ತಮಾಷೆ ಮಾಡ್ತಾ ಇದೀರಾ ? ಐದರ ಚೇಂಚ್ ಇದ್ದರೆ ಕೊಡಿ, ಇಲ್ದೇ ಇದ್ದರೆ ಈ ತರದ ನಾಟಕ ಎಲ್ಲಾ ಬೇಡ. ನೋಡೋಕೆ ಏನೋ ದೊಡ್ಡೋರ ತರ ಇದೀರ ಅಂದ್ಬುಟ್ಟ ಆ ಚಾಯ್ ವಾಲಾ. ಈತ ಬ್ಯಾಗಿನ ಹುಡುಕಾಟದಲ್ಲಿದ್ದಾಗ ಈತನ ಶರ್ಟಿನ ಜೇಬಿನಿಂದ ಇಪ್ಪತ್ತರ ನೋಟೋಂದು ಕೆಳಗೆ ಬಿದ್ದಿತು. ಚೇಂಜ್ ಇಟ್ಕೊಂಡೂ ಸುಳ್ಳು ಹೇಳ್ತಿರಲಾ ಸಾರ್ ಅಂತ ಆ ಚಾಯ್ ವಾಲಾನೇ ಆ ಇಪತ್ತರ ನೋಟು ತಗೊಂಡು ಹದಿನೈದು ವಾಪಾಸ್ ಕೊಟ್ಟು ಮುಂದಕ್ಕೆ ನಡೆದ. ಬ್ಯಾಗೆಲ್ಲಾ ಹುಡುಕಿದರೂ ಈತನ ಏಟಿ ಎಮ್ಮೂ ಸಿಗಲಿಲ್ಲ. ಐನೂರೂ ಸಿಗಲಿಲ್ಲ. ಈತನೇ ಇಡಲು ಮರೆತಿದ್ದನೋ ಅಥವಾ ಸೈಡಿನ ಜೇಬಲ್ಲಿಟ್ಟಿದ್ದ ಅದನ್ನೂ ಯಾರೋ ಹೊಡೆದಿದ್ದರೋ ಗೊತ್ತಿಲ್ಲ. ಒಟ್ಟಿನಲ್ಲಿ ಈತನ ಬಳಿಯಿದ್ದ ಹದಿನೈದು ರೂಪಾಯಿಗಳು ಏನನ್ನೋ ನೆನೆಸಿ ನಗುತ್ತಾ ಈತನ ಜೇಬಿನಲ್ಲಿ ಭದ್ರವಾಗಿ ಕೂತಿದ್ದವು.
ಬೆಳಗಾಗಿತ್ತು. ಊರಿಗೆ ಬಂದಿಳಿದ. ಸರಿ, ಮನೆಗೆ ಹೋಗುವುದು ಹೇಗೆ. ಆಟೋದಲ್ಲಿ ಹೋಗಬಹುದಿತ್ತು. ಆದರೆ ಅಷ್ಟು ದುಡ್ಡಿಲ್ಲ. ನಡೆದು ಹೋಗೋಣವೆಂದರೆ ನಡೆಯೋ ಅಭ್ಯಾಸವೇ ತಪ್ಪಿ ಹೋಗಿದೆ. ಸರಿ ಬಸ್ಸಿಗೆ ಹೋಗೋಣವೆಂದು ಬಸ್ಸು ಹತ್ತಿದ. ಬಸ್ಸು ಹೊರಡೋದು ಲೇಟಿತ್ತು ಅನಿಸುತ್ತೆ. ಖಾಲಿ ಇತ್ತು. ಈತ ಹತ್ತಿ ಕೂರೋ ಹೊತ್ತಿಗೆ ಅಲ್ಲಿ ಎದುರು ಬಂದ ಕಂಡೆಕ್ಟರನ್ನ ನೋಡಿ ಅರೇ ಸೋಮಣ್ಣ ನೀನಿಲ್ಲಿ ಅಂದ. ಆತನಿಗೂ ಈತನ್ಯಾರೆಂದು ನೆನಪಾಗಲಿಲ್ಲ.ಅರೇ, ನಾನ್ಯಾರಂತ ಗೊತ್ತಾಗಲಿಲ್ಲವಾ ? ಸೋಮವಾರಳ್ಳಿ ಪೇಟೆ ಪಕ್ಕದಲ್ಲೇ ಇದ್ದ ಹಳ್ಳಿ ಇಂದ ಬರ್ತಿದ್ದ ಪಟೇಲರ ಮಗ ಸೋಮಣ್ಣ ಅಲ್ವಾ ನೀನು? ಅಂದ ಈತನೇ. ಹೂಂ ಅಂದ ಆತ ಆಶ್ಚರ್ಯದಿಂದ. ಏ ನಾನು ಕಣೋ. ಈ ಹಳ್ಳೀಲಿ ಹೈಸ್ಕೂಲಿಲ್ಲ ಅಂತ ಸೋಮವಾರಳ್ಳಿ ಪೇಟೆ ಪಕ್ಕದ ಅಜ್ಜಿ ಮನೆಯಿಂದ ಹೈಸ್ಕೂಲಿಗೆ ಬರ್ತಿದ್ದೆ ನಾನು. ನಿನ್ನ ಚಡ್ಡಿ ದೋಸ್ತು ಕಣೋ.. ಆಕಾಶ ಆಕಾಶ ಮೂರು, ಆಕಾಶ ಆಕಾಶ ನಾಲ್ಕು .. ನೆನ್ಪಾಯ್ತಾ ಅಂದ.. ಓ, ಅವ್ನೇನೋ ನೀನು… ಅಂತ ಅವ್ನಿಗೂ ಇವನ್ಯಾರು ಅಂತ ನೆನಪಾಯ್ತು. ಸರಿ ಹೀಗೇ ಮಾತಾಡ್ತಾ ಮಾತಾಡ್ತಾ ಇವ ಅವನಿಗೆ ಕೇಳಿದ ಆ ಪೇಟೆಯ ಪಕ್ಕದಲ್ಲೇ ಐದಾರು ಎಕರೆ ಹೊಲ ಗದ್ದೆ ಎಲ್ಲಾ ಇತ್ತಲ್ಲ ನಿಮ್ಮದು , ಈಗ ಏನೋ ಕತೆ ಅಂದ. ಓ ಅದಾ, ಬಿಟ್ಟು ಬಿಡೋ ಕೇಳ್ಬೇಡ ಅಂದ ಆತ. ಈತ ಬಿಡಿಸಿ ಕೇಳಿದ ಮೇಲೆ ಆತ ಹೇಳೋಕೆ ಶುರು ಮಾಡಿದ. ತಮ್ಮೂರಿಗೆ ಅದ್ಯಾರೋ ಬೆಂಗಳೂರಿನ ಕಡೆಯ ಹುಡುಗರು ಬಂದ ಕತೆ. ಲಕ್ಷ ಲಕ್ಷದ ಆಸೆ ತೋರಿಸಿ ಜಮೀನು ಕೊಂಡ ಕತೆ, ಆ ಜಮೀನುಗಳೆಲ್ಲಾ ಈಗ ಸೈಟುಗಳಾಗಿ, ಊರ ತುಂಬಾ ಜನರಿಗೆ ದುಡ್ಡಿನ ಹುಚ್ಚು ಹಿಡಿದಿರೋ ಕತೆ, ಜಮೀನು ಮಾರೋರು, ಕೊಳ್ಳೋರೂ, ಮಧ್ಯವರ್ತಿಗಳು, ಕಪ್ಪುಹಣಾನಾ ಜಮೀನಿನ ಮೂಲಕ ಬಿಳುಪಾಗಿ ಪರಿವರ್ತಿಸೋಕೆ ಅಂತ ಈ ಊರಲ್ಲಿದ್ದ ಜನರ ಮೂಲಕ ಹಣ ತೊಡಗಿಸೋರು..
ಹೀಗೆ ಒಟ್ನಲ್ಲಿ ಒಂದು ವರ್ಗದ ಜನರಲ್ಲಿ ಹಣ ವಿಪರೀತ ಓಡಾಡತೊಡಗಿ ಊರಲ್ಲಿನ ಸಾಮಗ್ರಿಗಳ ಬೆಲೆಯೆಲ್ಲಾ ಏಕ ಧಂ ಏರಿದ ಕತೆ ಹೀಗೆ ಸಂಕ್ಷಿಪ್ತವಾಗಿ ಹೇಳತೊಡಗಿದ. ಅದೆಲ್ಲಾ ಸರಿ, ನೀನೇಕೆ ಹೀಗಾದೆ ಅಂದ ಈತ. ನಾನೂ ಜಮೀನು ಮಾರಿದ ಒಬ್ಬ ದುರ್ದೈವಿ ಕಣೋ. ಅಪ್ಪನವರು ಬೇಡ ಬೇಡವೆಂದರೂ ಜಮೀನು ಮಾರಿಸಿದೆ. ಅದೇ ದುಃಖದಲ್ಲಿ ಅವರು ಹಾಸಿಗೆ ಹಿಡಿದರು. ಅವರು ಹಾಸಿಗೆ ಹಿಡಿದಿರೋದನ್ನ ನೋಡಿ ಅಮ್ಮ ದಿನವೂ ಕಣ್ಣೀರಿಡುತ್ತಾಳೆ. ಅಂದು ಸಿಕ್ಕ ದುಡ್ಡು ಕೆಲವೇ ಅರ್ಧ ಮೊದಲ ತಿಂಗಳಲ್ಲೇ ಖರ್ಚಾಗಿಹೋಯ್ತು. ಉಳಿದದ್ದನ್ನ ಬಡ್ಡಿಗೆ ಅಂತ ಇಟ್ಟರೂ ಇಲ್ಲಿನ ಜೀವನಕ್ಕೆ ಸಾಕಾಗ್ತಾ ಇಲ್ಲ. ಹೊಟ್ಟೆಗೇನಾದ್ರೂ ಮಾಡ್ಲೇ ಬೇಕಲ್ಲಾ. ಅದಕ್ಕೆ ಈ ಕತೆ ಅಂದ, ನಿನ್ನ ಇಬ್ಬರು ತಮ್ಮಂದಿರಿದ್ದರಲ್ಲಾ ಅವರು ಎಂದ ಈತ. ಪೇಟೆಯ ಕತೆ ನೋಡಿ ನನ್ನ ತಮ್ಮಂದಿರು ಹಳ್ಳಿಗೇ ವಾಪಾಸ್ ಹೋದರು. ಈಗ ನಾವೇ ಕೊಟ್ಟ ಜಮೀನಲ್ಲಿ ತಲೆ ಎತ್ತುತ್ತಿರೋ ಅಪಾರ್ಟುಮೆಂಟಿನ ಕೆಲಸಕ್ಕೆ ಕೂಲಿ ಆಳಾಗಿ ದುಡಿತಿದಾರೆ ಅಂತ ನಿಟ್ಟುಸಿರುಬಿಟ್ಟ ಆತ. ಈತನಿಗೆ ಹಳ್ಳಿಯಲ್ಲಿದ್ದ ತನ್ನ ಕುಟುಂಬದ ನೆನಪಾಗಿ ಯಾಕೋ ಕರುಳು ಚುರುಕ್ಕಂತು. ತನಗೇ ಜಮೀನು ಮಾರಿದ ಮನೆ ಮಕ್ಕಳು ಹೊಟ್ಟೆಗೆ ಹಿಟ್ಟಿಲ್ಲದೇ ತಾನು ಕಟ್ಟಿಸುತ್ತಿರೋ ಕಟ್ಟಡದಲ್ಲಿ ಕೂಲಿಯಾಳಾಗಿ ದುಡಿಯುತ್ತಿದ್ದರೂ ಈತನಿಗೆ ಏನೂ ಅನಿಸುತ್ತಿರಲಿಲ್ಲ. ಅವರವರ ನಸೀಬು ಬಿಡು ಎಂದುಕೊಳ್ಳುತ್ತಿದ್ದ. ಆದರೆ ತನ್ನ ಪ್ರೀತಿ ಪಾತ್ರರಿಗೆ ಆ ಸ್ಥಿತಿಯಾದಾಗ ಆತನಿಗೆ ಪರಿಸ್ಥಿತಿಯ ನಿಜ ಸ್ಥಿತಿಯ ಅರಿವಾಗತೊಡಗಿತು.. ಖಾಲಿ ಜೇಬು ಮತ್ತು ಹಸಿದ ಹೊಟ್ಟೆಗಳು ನೂರು ಪಾಠ ಕಲಿಸುತ್ತವೆ ಅನ್ನೋದು ಇದಕ್ಕೇ ಇರಬೇಕು..
ಆತ ಈತನ ಬಗ್ಗೆ ಕೇಳೋಕೆ ಕರ್ತವ್ಯ ಪ್ರಜ್ನೆ ಅಡ್ಡ ಬಂದಿತ್ತು. ಕಂಡಕ್ಟರು ಬಸ್ಸೊಳಗೆ ಕೂತು ಕತೆ ಹೊಡಿತಾ ಇದ್ರೆ ಬಸ್ಸಿಗೆ ಜನ ಹತ್ತುತ್ತಾರೆಯೇ ? ಹೊರಗೆ ಹೋಗಿ ಕೂಗಲೇಬೇಕು.. ಆತ ಹೊರಗೆ ಕೂಗುತ್ತಿದ್ದಂತೆ ಜನ ಒಳಗೆ ಬಂದು ಹತ್ತುತ್ತಿದ್ದರು. ಕೊನೆಗೆ ಬಸ್ಸು ಹೊರಡೋ ಹೊತ್ತಾಯಿತು. ಈತನೂರಿಗೆ ಟಿಕೆಟ್ ತಗೊಂಡ ಈತನಿಗೆ ಮತ್ತೆ ಆಶ್ಚರ್ಯ . ಟಿಕೆಟಿಗೆ ಐದು ರೂಪಾಯಿ. ಊರು ತೀರಾ ದೂರವೇನಾಗಿರ್ಲಿಲ್ಲ. ಐದಾರು ಮೈಲಿಯ ದೂರವಷ್ಟೇ. ಆದರೆ ಮುಂಬೈಗೆ ಹೋಲಿಸಿದ್ರೆ, ಮುಂಬೈ ಬಿಡಿ ಈತ ಹಿಂದಿನ ದಿನ ನೋಡಿದ್ದ ಬೆಂಗಳೂರಿಗೆ ಹೋಲಿಸಿದ್ರೂ ಇದೂ ಸಿಕ್ಕಾಪಟ್ಟೆ ಚೀಪೇ. ಆದ್ರೆ ಈತನ ಉದ್ದಾರವಾಗಲ್ಲ ಅನ್ನೋ ಬದ್ಲು ಇನ್ನೂ ಈ ಊರು ಹಾಳು ರಿಯಲ್ ಎಸ್ಟೇಟ್ ಮಾಯೆಗೆ ಸಿಕ್ಕಿಲ್ಲ ಅನಿಸುತ್ತೆ ಪುಣ್ಯ ಎಂಬ ಭಾವನೆ ಇವನಿಗೇ ಆಶ್ಚರ್ಯವಾಗುವಂತೆ ಮೂಡಿತು. ಒಂದೆರಡು ನಿಮಿಷ ಕಳೆಯುತ್ತಿದ್ದಂತೇ ಹೊಲಗದ್ದೆಗಳ ಮೇಲೆ ಹಾಯುತ್ತಿದ್ದ ಮುಂಜಾನೆಯ ಮಧುರ ಗಾಳಿ ಬೀಸತೊಡಗಿತು. ಮುಂಜಾನೆಯ ಮಧುರ ಸೂರ್ಯ ಇವನ ಮುಖದ ಮೇಲೆ ಬೀಳುತ್ತಿದ್ದಂತೆಯೇ ಸೂರ್ಯನಿಂದ ಕಳೆಯೋ ಕತ್ತಲೆಯಂತೆ, ಕರಗೋ ಮಂಜಿನಂತೆ ಈತನಲ್ಲಿ ಹಿಂದಿನ ದಿನ ಮೂಡಿದ್ದ ಭಾವಗಳು ಕರಗುತ್ತಿದ್ದವು. ತಾನು ಊರು ತಲುಪಿದ ನಂತರ ಏನು ಮಾಡಬೇಕೆಂಬ ಧೃಢ ನಿರ್ಧಾರ ಮೂಡುತ್ತಿತ್ತು. ಈತನ ಜೇಬಿನಲ್ಲಿ ಹಾಗೇ ಉಳಿದಿದ್ದ ಹತ್ತು ರೂಪಾಯಿಗಳು ಏನೋ ನೆನಪಿಸಿಕೊಂಡು ಸಿಕ್ಕಾಪಟ್ಟೆ ನಗುತ್ತಿದ್ದವು.
chennagide
nice