ಪ್ರೇಮ ಪತ್ರಗಳು

ಒಂದು ಹಳೆಯ ಪತ್ರ: ವೀರ್ ಸಂತೋಷ್

ದಿನಾಂಕ ೧೪ ಫೆಬ್ರವರಿ ೨೦೧೩

ಪ್ರೀತಿಯ  ಹೆಸರು  ಹೇಳಲಾಗದವಳೇ/ಪಲ್ಲವಿ,

ಧನ್ಯವಾದಗಳು. ಖಾಲಿ ಹಾಳೆಯಂತಿದ್ದ ನನ್ನನ್ನು ಎಲ್ಲರೂ ಓದುವಂತಹ ಕೃತಿಯನ್ನಾಗಿ ಮಾಡಿದ ನಿನಗೆ ಪ್ರೀತಿಪೂರ್ವಕ ಧನ್ಯವಾದಗಳು. ಇದು ನಾನು ನಿನಗಾಗಿ ಬರೆಯುತ್ತಿರುವ ೩೬೫ನೇ ಪತ್ರ. ನಿನ್ನೆ ಬರೆಯುವಾಗಿದ್ದ ಪ್ರೇಮ, ಅದೇ ಉತ್ಕಟತೆಯೊಂದಿಗೆ ಇದನ್ನೂ ನಿನಗೆ ಅರ್ಪಿಸುತ್ತಿದ್ದೇನೆ. ನಿನ್ನ ಭಕ್ತನ ಈ ಕಿರು ಕಾಣಿಕೆಯನ್ನು ಸ್ವೀಕರಿಸುತ್ತೀಯಲ್ಲವೇ?

ಆಯ್ತು ಕೋಪ ಮಾಡ್ಕೋಬೇಡ. ಹೀಗೆಲ್ಲಾ ಹುಚ್ಚು ಪ್ರೇಮಿಯಂತೆ ಮಾತಾಡೋದು ನಿನಗೆ ಇಷ್ಟವಿಲ್ಲ ಅನ್ನೋದು ನೆನಪಿದೆ. ಅದೆಲ್ಲಾ ಒತ್ತಟಿಗಿರಲಿ. ಇವತ್ತು ಫೆಬ್ರವರಿ ೧೪. ವ್ಯಾಲೆಂಟೈನ್ಸ್ ಡೇ. ಕನ್ನಡದಲ್ಲಿ ಪೇಮಿಗಳ ದಿನ. ಶುಭಾಶಯಗಳು.  ಏನೂ? ನಿನಗೆ ಗೊತ್ತು ಅನ್ನುತ್ತಿದ್ದೀಯಾ? ಹೌದು. ನಿನಗೆ ಎಲ್ಲಾ ಗೊತ್ತು. ಆದರೆ ಅವತ್ತೊಂದು ದಿನ ನನ್ನ ಹುಟ್ಟಿದ ದಿನವನ್ನೇ ಮರೆತುಬಿಟ್ಟಿದ್ದೆ. ಇಲ್ಲಾ. ಮರೆತವಳಂತೆ ನಟಿಸಿದ್ದೆ. ಹತ್ತನೇ ಕ್ಲಾಸಿನ ಪಬ್ಲಿಕ್ ಪರೀಕ್ಷೆಗಳು ಮುಗಿದ ದಿನ. ಪರೀಕ್ಷೆ ಮುಗಿಸಿದವಳೇ ಎಲ್ಲರೆದುರು ನನ್ನನ್ನು ಅಪ್ಪಿಕೊಂಡು ಇಡೀ ಜಗತ್ತಿಗೆ ಕೇಳುವಂತೆ ಕೂಗಿ ವಿಷ್ ಮಾಡುತ್ತೀಯೆಂದು ಕಾಯುತ್ತಾ ನಿಂತ್ತಿದ್ದರೆ, ಬಂದವಳೇ ಮನೆಗೆ ಹೋಗುತ್ತೇನೆಂದು ಓಡಿಬಿಟ್ಟೆ. ತಿರುಗಿ ಬಂದು ಹೇಳುವೆಯೇನೋ ಎಂದು ನೀನು ಹೋದ ದಾರಿಯನ್ನೇ ಆಸೆ ತುಂಬಿದ ಕಂಗಳಿಂದ ನೋಡುತ್ತಿದ್ದೆ. ಆದರೆ ನೀನು ಬರಲಿಲ್ಲ. ಕಣ್ಣ ಮೂಲೆಯಲ್ಲೊಂದು ಹನಿ ಚಿಗುರೊಡೆದಿತ್ತು ಹಾಗೆಯೇ ನಿನ್ನ ಮೇಲೆ ಕೋಪವೂ ಕೂಡ.

ಅದೇ ದಿನ ಸಂಜೆ ಶಾಲೆಯಲ್ಲಿ ಎಲ್ಲ ಗೆಳೆಯರೂ ಬಂದಿದ್ದರು. ನೀನೂ ಬಂದಿದ್ದೆ. ಕೆಂಪು ಹಸಿರು ಲಂಗ ದಾವಣಿ ಹಾಕಿಕೊಂಡು ಮುದ್ದಾಗಿ ಕಾಣುತ್ತಿದ್ದೆ. ಬಿಟ್ಟ ಕಣ್ಣು ಬಿಟ್ಟಂತೆ ನಿನ್ನನ್ನೇ ನೋಡುತ್ತಾ ನಿಂತು ಬಿಟ್ಟಿದ್ದೆ ನಾನು. ರಮೇಶ! ರಮೇಶ! ಯಾವುದೋ ಸ್ವರ್ಗಲೋಕದಿಂದ ಕೆಳಗೆ ಬಿದ್ದಂತಾಯಿತು. ನನ್ನಿಂದ ಕೆಲವೇ ದೂರದಲ್ಲಿ ನೀನು ನಿಂತಿದ್ದೆ. ನಿನ್ನ ಪುಟ್ಟ ಕೈಗಳು ನನ್ನ ತೋಳನ್ನು ಹಿಡಿದಿದ್ದವು. ಈ ಭೂಮಿಯ ಮೇಲೆ ನನ್ನಮ್ಮನ ನಂತರ ನಾನು ತುಂಬಾ ಪ್ರೀತಿ ಮಾಡಿದ ಹೆಣ್ಣು ನೀನು. ಆ ಕ್ಷಣದಲ್ಲಿ ನಿನ್ನ ಕಣ್ಣುಗಳಲ್ಲಿ ಕಂಡದ್ದು ನಮ್ಮ ಸುಂದರ ನಾಳೆಗಳು ಹಾಗೂ ಬರಲಿರುವ ನಮ್ಮ ಪುಟ್ಟ ಕನಸುಗಳು. ಹಿಂದಿದ್ದ ಕೈಗಳಿಂದ ಏನನ್ನೋ ಕೈಗಿಟ್ಟೆ ನೀನು. ನನಗಿನ್ನೂ ಚೆನ್ನಾಗಿ ನೆನಪಿದೆ. ನಿಮ್ಮನೆ ಅಂಗಳದಲ್ಲಿ  ಬೆಳೆದ ಕೆಂಪು ಗುಲಾಬಿ ಹಾಗೂ ನಾಲ್ಕಾಣೆಯ ಎರಡು  ಆಸೆ ಚಾಕ್ಲೇಟುಗಳು. 

ನಗ್ತಾ ಇದೀಯಾ? ಇವತ್ತಿನ ದಿನದಲ್ಲಿ ನಾಲ್ಕಾಣೆ ಚಲಾವಣೆಯಲ್ಲೇ ಇಲ್ಲ. ನಮ್ಮ ದಿನಗಳು ಎಷ್ಟು ಚೆನ್ನಾಗಿದ್ದೋ ಅಲ್ವಾ?  ನಮ್ಮಿಬ್ಬರ ಮಧ್ಯೆ ಪ್ರೀತಿ ಹೇಗೆ ಶುರುವಾಗಿದ್ದು ಹೇಗೆಂದು ಇನ್ನೂ ಗೊತ್ತಾಗಿಲ್ಲ. ಬಹುಶ: ಪರಿಶುಧ್ಧ ಪ್ರೀತಿಗೆ ಆರಂಭ ಅಂತ್ಯವೇ ಇರುವುದಿಲ್ಲ ಅನ್ಸುತ್ತೆ. ಎರಡು ಜೀವಗಳ ಸುಂದರ ದಿನಗಳೇ ಅವರ ಪ್ರೀತಿಗೆ ಸಾಕ್ಷಿ. ಪ್ರೇಮ ನಿವೇದನೆ ಮಾಡದೇ ಪ್ರೀತಿ ಮಾಡಿದವರು ನಾವು. ಇವತ್ತಿನಂತೆ ಮೊಬೈಲ್ ಇಂಟರ್ನೆಟ್ ಫೇಸ್‌ಬುಕ್ ಇರಲಿಲ್ಲ ಆ ದಿನಗಳಲ್ಲಿ. ಇದ್ದಿದ್ದು ಕೇವಲ ಖಾಲಿ ಹಾಳೆಗಳು ಹಾಗೂ ನೀಲಿ ಇಂಕಿನ ರೆನಾಲ್ಡ್ಸ್ ಪೆನ್ನು. ನನ್ನ ಸ್ಕೂಲಿನ ಶರ್ಟಿನ ಮೇಲೆ ಪಲ್ಲವಿ ರಮೇಶ್ ಎಂದು ದಪ್ಪದಾಗಿ ಬರೆದ ದಿನ ಮನೆಗೆ ಬರಿ ಮೈಯಲ್ಲೇ ಹೋಗಿದ್ದೆ. ಅಮ್ಮ ಕೇಳಿದಾಗ ಏನೋ ಕುಂಟು ನೆಪ ಹೇಳಿ ಪಾರಾಗಿದ್ದೆ. ಅದೇ ನೆಪದಲ್ಲಿ ಶಾಲೆಗೆ ಚಕ್ಕರ್ ಹೊಡೆದು ಅಣ್ಣಾವ್ರ ನಾ ನಿನ್ನ ಮರೆಯಲಾರೆ ಸಿನಿಮಾಗೆ ಹೋಗಿದ್ದು ನೆನಪಿದೆ ತಾನೇ?

ಕೆಲವೊಮ್ಮೆ ಯೋಚಿಸ್ತೀನಿ. ನನ್ನ ಬದುಕಿನಲ್ಲಿ ನೀನಿರದೇ ಹೋಗಿರದಿದ್ದರೇ ಇವತ್ತು ನಾನು ಏನಾಗಿರುತ್ತಿದ್ದೆ ಅಂತ. ಹೆಚ್ಚೇನೂ ಬದಲಾವಣೆ ಇರುತ್ತಿರಲಿಲ್ಲ. ನನ್ನ ಹೆಂಡತಿಯ ಹೆಸರು ಬೇರೆ ಇರುತ್ತಿತ್ತಷ್ಟೆ. ಹಾಗೆಂದ ಮಾತ್ರಕ್ಕೆ ನನ್ನ ಮಗಳಿಗೇನೂ ನಿನ್ನ ಹೆಸರಿಡುತ್ತಿರಲಿಲ್ಲ. ಮೇಲಿದ್ದವನ ಕೃಪೆ. ಹಾಗೇನೂ ಆಗಲಿಲ್ಲ.  ನನ್ನ ಜೀವದ ಗೆಳತಿಯಾದ ನೀನೆ ನನ್ನ ಬಾಳ ಸಂಗಾತಿಯೂ ಆದೆ. ನಿನ್ನ ಕೊರಳಿಗೆ ತಾಳಿ ಕಟ್ಟಿದ ದಿನ ನನ್ನ ಬದುಕು ಸಾರ್ಥಕವಾಯಿತು. ತಂದೆಯಿಲ್ಲದವನಾದ ನನ್ನನ್ನು ನಿನ್ನ ಮಡಿಲಿಗೆ ಹಾಕಿದ್ದಳು ನನ್ನನ್ನು. ಅಷ್ಟು ನಂಬಿಕೆ ನಿನ್ನ ಮೇಲೆ ಅವಳಿಗೆ.

ಮದುವೆಯಾದ ಒಂದು ವರ್ಷದಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದೆ ನೀನು. ನಿನ್ನ ಕೈ ಬೆರಳುಗಳನ್ನು ಹಿಡಿದು ನಿನ್ನ ಹಣೆಗೆ ಮುತ್ತಿಟ್ಟ ಆ ದಿನವಿನ್ನೂ ನನ್ನ ಎದೆಗೂಡಿನಲ್ಲಿ ಹಸಿರಾಗಿದೆ. ಮಗುವಿಗೆ ಹೆಸರೇನಿಡುವುದೆಂದು ಕೇಳಿದರೆ ಹಿಂದೆ ಮುಂದೆ ಯೋಚಿಸದೇ ಲಕ್ಷ್ಮಿ ಎಂದುತ್ತರಿಸಿದೆ. ನನ್ನ ಹಡೆದವಳ ಹೆಸರದು. ಆದರೆ ಮುದ್ದಿನ ಮೊಮ್ಮಗಳ ನೋಡುವ ಭಾಗ್ಯವೇ ಇರಲಿಲ್ಲ ಅವಳಿಗೆ. ನಮ್ಮ ಮದುವೆಯಾದ ಮೂರೇ ತಿಂಗಳಲ್ಲಿ ನಮ್ಮನ್ನೆಲ್ಲ ಬಿಟ್ಟು ಹೊರಟುಬಿಟ್ಟಳು. ತನ್ನ ಗಂಡನ ಬಳಿಗೆ. ಪ್ರೀತಿಯ ಮೊದಲ ಪಾಠ ಹೇಳಿಕೊಟ್ಟವಳು ನಿನಗೆ ಆ ಜವಾಬ್ದಾರಿ ವಹಿಸಿದ್ದಳು.

ಎಲ್ಲರಂತೆ ಮೊದಲು ಅಮ್ಮ ಎಂದೇ ತೊದಲಿದಳು ಲಕ್ಷ್ಮಿ. ನಿನ್ನ ಕಣ್ಣುಗಳು ಏನೋ  ಹೇಳಲು ಪ್ರಯತ್ನಿಸುತ್ತಿದ್ದವು. ಅರ್ಥವಾದವನಂತೆ ನಿನ್ನ ತಲೆ ನೇವರಿಸಿದ್ದೆ. ಲಕ್ಷ್ಮಿಗೆ ಆಗ ಒಂದೂವರೆ ವರ್ಷ. ಯಾಕೋ ದೇವರಿಗೆ ನನ್ನ ಮೇಲೆ ಮುನಿಸಿರಬೇಕು. ನೀನು ಮತ್ತೊಮ್ಮೆ ತಾಯಿಯಾಗುವುದಿಲ್ಲವೆಂಬ ಆಘಾತವನ್ನು ನೀಡಿದ. ಅಂದೇ ಕೊನೆ. ಇರುವುದೆಲ್ಲ ನೀನು ನನ್ನ ಮಗಳು. ದೇವರೆನನ್ನುವವನ ಮೇಲೆ ನಂಬಿಕೆಯೇ ಹೊರಟುಹೋಯಿತು. 

ನೋಡು ನೋಡುತ್ತಿದ್ದಂತೆ ಲಕ್ಷ್ಮಿಗೆ ಐದು ವರ್ಷ ತುಂಬಿತು. ಸೈಕಲ್ ಮೇಲೆ ಕೂರಿಸಿಕೊಂಡು ಶಾಲೆಗೆ ಬಿಟ್ಟು ಬಂದಿದ್ದೆ. ಬೇರೆ ಮಕ್ಕಳಂತೆ ರಚ್ಚೆ ಹಿಡಿದಿರಲಿಲ್ಲ. ಎಲ್ಲಾ ನಿನ್ನಂತೆ. ಆದರೆ ನೀನು ಮಾತ್ರ ಚಿಕ್ಕವಳಂತೆ ಅಳುತ್ತಿದ್ದೆ. ಮಗಳು ಮನೆಗೆ ಬಂದಾಗ ನಿನ್ನ ಅಳು ನಿಂತಿದ್ದು. ರಾತ್ರಿ ಮಲಗಿದ್ದಾಗ ಕೇಳಿದಾಗ ಅವಳು ನಮ್ಮ ಮಗಳಿರಬಹುದು. ಆದರೆ ನನಗೆ ಅವಳಲ್ಲಿ ಕಾಣುವುದು ನೀವು. ನೀವೇ ನನ್ನಿಂದ ದೂರ ಹೋದಂತಾಯಿತು ಎಂದುತ್ತರಿಸಿದ್ದೆ.  

ಕಾಲ ಬೇಗ ಓಡಿತು. ಈಗ ಲಕ್ಷ್ಮಿಗೆ ಇಪ್ಪತೆರಡು ವರ್ಷ. ಇನ್ನೂ ಮೂರು ತಿಂಗಳಲ್ಲಿ ಅವಳ ಮದುವೆ. ನೀನಂದುಕೊಂಡಂತೆ ಶಿಕ್ಷಕಿಯಾಗಿದ್ದಾಳೆ. ಅವಳ ಗಂಡನಾಗಲಿರುವವನು ಕೂಡ ಶಿಕ್ಷಕನೇ . ತುಂಬಾ ಒಳ್ಳೆಯವನು. ಹೇಳಿ ಮಾಡಿಸಿದ ಜೋಡಿ ನಮ್ಮ ಲಕ್ಷ್ಮಿಗೆ. ಅವರನ್ನು ನೋಡಿದರೆ ನಮ್ಮಿಬರನ್ನು ನೋಡಿದಂತಾಗುತ್ತದೆ. ಆದರೆ, ಅದನ್ನು ನೋಡಲು ನೀನು ಜೊತೆಯಲ್ಲಿಲ್ಲವೆಂಬ ಕೊರಗು.

ನೀನು ನನಗೆ ಮೋಸ ಮಾಡಿದೆ. ಕೊನೆ ಉಸಿರುವವರೆಗೆ ಜೊತೆಯಲ್ಲಿರುತ್ತೇನೆಂದವಳು ನಡುದಾರಿಯಲ್ಲಿ ಬಿಟ್ಟು ಹೋದೆ. ಅವತ್ಯಾಕೋ ತಲೆ ಸುತ್ತುತ್ತಿದೆ ಅಂದವಳು ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಮಲಗಿದವಳು ಮತ್ತೆ ಎದ್ದೇಳಲೇ ಇಲ್ಲ. ನಂತರದ ಪರೀಕ್ಷೆಯಲ್ಲಿ ತಿಳಿದಿದ್ದು  ಮೆದುಳಿನಲ್ಲಿ ರಕ್ತಸ್ರಾವವಾಗಿತ್ತೆಂದು. ಲಕ್ಷ್ಮಿ ಎಂಟನೇ ತರಗತಿಯಲ್ಲಿದ್ದಳು. ನನ್ನ ತೋಳಿಗೊರಗಿ  ಬಿಕ್ಕಳಿಸಿ ಅಳುತ್ತಿದ್ದಳು. ಮತ್ತೆಂದೂ ತಿರುಗಿ ಬಾರದ ಲೋಕಕ್ಕೆ ಹೊರಟು ನಿಂತ ನಿನ್ನ ಮೇಲೆ ಅಗಾಧ ಕೋಪವೂ ಇತ್ತು. ಆದರೆ,,,

ಕ್ಷಮೆಯಿರಲಿ. ನಿನ್ನೊಡನೆ ನಾನು ಬರಲಾಗಲಿಲ್ಲವೆಂಬ ನೋವು ನನಗಿನ್ನೂ ಕಾಡುತ್ತಿದೆ. ಮಗಳಲ್ಲಿ ನಿನ್ನನ್ನೂ ನನ್ನಮ್ಮನನ್ನೂ ನೋಡುತ್ತಾ ನಿನ್ನ ಭೇಟಿ ಮಾಡುವ ದಿನಕ್ಕೆ ಕಾಯುತ್ತಿದ್ದೇನೆ. ಬರುತ್ತೇನೆ. ನಮ್ಮ ಪ್ರೀತಿಯ ಮೇಲಾಣೆ. ನೀನು ಹೋದಾಗಿನಿಂದ ನಿನಗಾಗಿ ಪ್ರತಿದಿನವೂ ತಪ್ಪದೇ ಪತ್ರ ಬರೆಯುತ್ತಿದ್ದೇನೆ. ನಿನ್ನ ಮಡಿಲಲ್ಲಿ ಮತ್ತೆ ಮಗುವಾದಾಗ ನಿನಗೆ ನೀಡುತ್ತೇನೆ. ಓದುವಿಯಂತೆ ಆಯ್ತಾ?.  ಇಲ್ಲಾ ನಾನೇ ಓದಿ ಹೇಳುತ್ತೇನೆ. ನಿನ್ನ ಕಣ್ಣಲ್ಲಿ ಕಣ್ಣಿಟ್ಟು. ಬೇಗ ಬರುತ್ತೇನೆ.

ಹ್ಙಾ! ಮರೆತುಬಿಟ್ಟಿದ್ದೆ. ನಾಳೆ ನಮ್ಮ ಮಗಳು , ಅಳಿಯನನ್ನು ಮನಗೆ ಕರೆತರುತ್ತಿದ್ದಾಳೆ. ಅವರ ಬಗ್ಗೆ ಮುಂದಿನ ಪತ್ರದಲ್ಲಿ ಹೇಳುತ್ತೇನೆ. ತಡವಾಯಿತು, ಮಲಗ್ತೀನಿ. ಕನಸಲ್ಲಿ ಬರೋದು ಮರೀಬೇಡ. ಕೊನೆಯದಾಗಿ ಭೂಮಿಯೆಂಬ ತೋಟದಲ್ಲಿ ಪವಿತ್ರವಾದ ಪ್ರೇಮದ  ಹೆಸರಿನಲ್ಲಿ ಕಾಮವೆಂಬ ಬಳ್ಳಿಯನ್ನು ಬೆಳೆಯುತ್ತಿದ್ದಾರೆ ಇಂದಿನ ಯುವಜನಾಂಗ. ಅವರಿಗಷ್ಟು ಬುಧ್ಧಿ ನೀಡೆಂದು ನಿನ್ನನ್ನು ಬೇಗನೆ ಕರೆಸಿಕೊಂಡವನಿಗೆ ಹೇಳು ಹಾಗೆಯೇ ಅವನಿಗೊಂದು ನನ್ನ ಧಿಕ್ಕಾರವನ್ನು ತಲುಪಿಸು.

ಸದಾ ನಿನ್ನವನು

ರಮೇಶ

ವಿ.ಸೂ: ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಬರುತ್ತಿರುವಾಗ ಕಂಡ ಅಜ್ಜಿ ತಾತನಿಗೆ ಅರ್ಪಣೆ. ಹಾಗೆಯೇ ಎಲ್ಲ ನಿಜವಾದ ಪ್ರೇಮಿಗಳಿಗೆ ಶುಭಾಶಯಗಳು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

9 thoughts on “ಒಂದು ಹಳೆಯ ಪತ್ರ: ವೀರ್ ಸಂತೋಷ್

    1. ಧನ್ಯವಾದಗಳು ಉತ್ತಮ್ . ಎರಡನೇ ಪತ್ರವನ್ನು ಆದಷ್ಟು ಬೇಗ ಬರೆಯುತ್ತೇನೆ. ನಿಮಗಾಗಿ

  1. ಹಲೋ ನಮ್ಮ ಪ್ರೇಮ ಪತ್ರ ತುಂಬಾ ಚನ್ನಾಗಿ ಬಂದಿದೆ.

  2. ಹಾಯ್, ಸಂತೋಷ್,
    ಜೀವನದ ಅಷ್ಟೂ ಮಜಲುಗಳನ್ನು ಒಂದೇ ಒಂದು ಪತ್ರದಲ್ಲಿ ದರ್ಶನ ಮಾಡ್ಸಿಬಿಟ್ಟೀದ್ದೀರಾ…
    ತುಂಬಾ ಧನ್ಯವಾದಗಳು ಒಳ್ಳೆಯ ಪತ್ರವೊಂದನ್ನು ಹಂಚಿಕೊಂಡಿದ್ದಕ್ಕೆ…. 🙂

Leave a Reply

Your email address will not be published. Required fields are marked *