ಒಂದು ಹಲ್ಲಿಯ ಕತೆ: ಪ್ರಸನ್ನ ಆಡುವಳ್ಳಿ


ಇತಿಹಾಸದ ಈ ದಂತಕತೆ ನಿಮಗೆ ಗೊತ್ತಿರಲಿಕ್ಕೂ ಸಾಕು:

ಮರಾಠರ ಇತಿಹಾಸದಲ್ಲಿ ಶಿವಾಜಿಯಷ್ಟೇ ಹಿರಿಮೆ ಆತನ ಸೇನಾಪತಿ ತಾನಾಜಿಗೂ ಇದೆ. ಈತ ಶಿವಾಜಿಯ ಬಲಗೈ ಬಂಟ, ಅಪ್ರತಿಮ ಸಾಹಸಿ. ಪುರಂದರಗಢ, ಪ್ರತಾಪಗಢ, ಕೊಂಡಾಣಾ ಕೋಟೆಗಳನ್ನು ಶಿವಾಜಿಯ ವಶಕ್ಕೊಪ್ಪಿಸುವಲ್ಲಿ ಈತನ ಪಾತ್ರ ಮಹತ್ವದ್ದು. ಇದು ತಾನಾಜಿಯ ಕೊನೆಯ ಹೋರಾಟದ ಕತೆ.

ಅದು ಕ್ರಿ.ಶ. ೧೬೭೦ರ ಚಳಿಗಾಲದ ಒಂದು ದಿನ. ಪುಣೆಯಿಂದ ಸುಮಾರು ಮೂವತ್ತು ಕಿಲೋಮೀಟರು ದೂರದಲ್ಲಿರುವ ಕೊಂಡಾಣಾ ಕೋಟೆ ಆಗ ಮೊಘಲರ ಒಡೆತನದಲ್ಲಿತ್ತು. ಸಹ್ಯಾದ್ರಿ ಬೆಟ್ಟಗಳ ತುದಿಯಲ್ಲಿದ್ದ ದುರ್ಗಮ ಕೋಟೆಗೆ ತಲುಪುವುದು ಕಷ್ಟವಿತ್ತು. ಮಹಾರಾಜ ಜೈಸಿಂಗ್‍ನ ಪ್ರತಿನಿಧಿಯಾಗಿ ಅಲ್ಲಿ ಉದಯಭಾನು ಎಂಬ ದಳವಾಯಿ ಇದ್ದ. ಅವನೊಟ್ಟಿಗೆ ಐದುಸಾವಿರಕ್ಕೂ ಮಿಕ್ಕ ಸೈನಿಕರು ಕೋಟೆಯ ಪಹರೆ ಕಾಯುತ್ತಿದ್ದರು.

ಇತ್ತ ತಾನಾಜಿ ತನ್ನ ಮಗನ ಮದುವೆಯ ಸಂಭ್ರಮದಲ್ಲಿದ್ದಾಗ ಶಿವಾಜಿಯಿಂದ ಕೊಂಡಾಣಾ ಕೋಟೆಯ ಮೇಲೆ ಧಾಳಿಮಾಡಲು ಬುಲಾವ್ ಬಂತು. ಅರ್ಧಕ್ಕೇ ಬಿಟ್ಟು ಹೊರಟ ತಾನಾಜಿ ಬರೀ ಮುನ್ನೂರು ಮಾವಳಿಗಳೊಟ್ಟಿಗೆ ಕೊಂಡಾಣದತ್ತ ಹೊರಟ. ರಾತ್ರಿಯವರೆಗೆ ಕಾದು ಹೆಚ್ಚು ಕಾವಲಿಲ್ಲದ ಕಲ್ಯಾಣ ಬಾಗಿಲಿನ ಬಳಿ ಬಂದ. ತನ್ನೊಡನೆ ತಂದಿದ್ದ ಉಡದ ಬಾಲಕ್ಕೆ ಹಗ್ಗ ಕಟ್ಟಿ ಕೋಟೆಯ ಗೋಡೆಗೆ ಹತ್ತಿಸಲು ನೋಡಿದ. ತಾನಾಜಿಯ ಪ್ರೀತಿಯ ಉಡ ’ಯಶವಂತಿ’ ಒಲ್ಲೆ ಎಂದಿತು. ಮೂರನೇ ಬಾರಿಯೂ ಹತ್ತದಿದ್ದರೆ ಕೊಂದು ತಿನ್ನುವುದಾಗಿ ಬೆದರಿಸಿದ. ಯಶವಂತಿ ಈ ಬಾರಿ ಕೋಟೆಯ ಗೋಡೆ ಹತ್ತಿ, ಕಲ್ಲಿನ ಸಂದಿಗೊಂದಲುಗಳಲ್ಲಿ ಬಲವಾಗಿ ಹಿಡಿದು ನಿಂತಿತು. ಅದಕ್ಕೆ ಕಟ್ಟಿದ್ದ ಹಗ್ಗದ ಸಹಾಯದಿಂದ ತಾನಾಜಿಯ ಪಡೆ ಕೋಟೆಯೊಳಗೆ ನುಸುಳಿತು.

ಉದಯಭಾನುವಿನೊಡನೆ ಕಾದಾಡುತ್ತ ತಾನಾಜಿ ವೀರಸ್ವರ್ಗ ಸೇರಿದ. ಅವನ ಸೈನಿಕರು ಬೆದರಿ ಹಿಂದೋಡಲು ನೋಡಿದರು. ಉಪಸೇನಾಪತಿಯಾಗಿದ್ದ ತಾನಾಜಿಯ ಸೋದರ ಸೂರ್ಯಾಜಿ ಕೋಟೆಯ ಗೋಡೆಗೆ ಇಳಿಬಿಟ್ಟಿದ್ದ ಹಗ್ಗವನ್ನು ತುಂಡರಿಸಿದ. ರಣಾಂಗಣದಲ್ಲಿ ವೀರರಂತೆ ಹೋರಾಡಿ ಹುತಾತ್ಮರಾಗಿ, ಇಲ್ಲವೇ ಎತ್ತರದ ಕೋಟೆಯಿಂದ ಜಿಗಿದು ಹೇಡಿಗಳಂತೆ ಸಾಯಿರಿ ಎಂದ. ಮಾವಳಿಗರು ಸೆಣಸಿದರು. ಕೋಟೆ ಮರಾಠರ ವಶವಾಯ್ತು. ಸುದ್ದಿ ತಿಳಿದ ಶಿವಾಜಿ ’ಕೋಟೆ ಗೆದ್ದೆವು, ಆದರೆ ಸಿಂಹವನ್ನು ಕಳೆದುಕೊಂಡೆವು’ ಎಂದು ಉದ್ಘರಿಸಿದ. ಕೊಂಡಾಣ ಕೋಟೆ ಹೀಗೆ ’ಸಿಂಹಗಢ’ವೆಂದು ಹೆಸರಾಯ್ತು.

(ಈ ಬಗ್ಗೆ ಕುವೆಂಪು ಒಂದು ಚಂದದ ಕಥನ ಕವನ ಬರೆದಿದ್ದಾರೆ. ಇಲ್ಲಿ ಓದಿ.) 

ಮೊನ್ನೆ ಗೆಳೆಯರೊಂದಿಗೆ ಸಿಂಹಗಢದ ಬೆಟ್ಟ ಸುತ್ತಲು ಹೋಗಿದ್ದಾಗ ಉಡ ಎಲ್ಲಾದರೂ ನೋಡಲು ಸಿಕ್ಕೀತೇ ಎಂದು ಗಮನಿಸುತ್ತಿದ್ದೆ. ಸ್ಥಳೀಯರನ್ನೂ ವಿಚಾರಿಸಿದೆ. ಎಲ್ಲರಿಗೂ ಕತೆ ಗೊತ್ತೇ ವಿನಾ ಉಡ ನೋಡಿರಲಿಲ್ಲ.

ಈ ಉಡ (Monitor lizard) ನಮ್ಮ ಮನೆಗಳ ಗೋಡೆಯ ಮೇಲೆಲ್ಲಾ ಅಡ್ದಾಡುತ್ತ ಹುಳ ಹೆಕ್ಕುವ ಹಲ್ಲಿಗಳ ಹತ್ತಿರದ ಸಂಬಂಧಿ. ಇವುಗಳಲ್ಲೇ ಸುಮಾರು ಎಪ್ಪತ್ತೂ ಅಧಿಕ ಪ್ರಭೇದಗಳಿವೆಯೆಂಬ ಅಂದಾಜಿದೆ. Varanus bengalensis ಅನ್ನೋದು ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಉಡಕ್ಕೆ ವಿಜ್ಞಾನಿಗಳಿಟ್ಟ ಹೆಸರು. ಹುಳಹುಪ್ಪಟೆ, ಚೇಳು, ಇರುವೆ, ಬಾವಲಿ, ಹಕ್ಕಿ, ಮೊಟ್ಟೆ, ಮೀನು ಇತ್ಯಾದಿ ಇದರ ಆಹಾರ. ಕಲ್ಲು ಬಂಡೆಗಳ ಸಂದಿಯಲ್ಲಿ ಇಲ್ಲವೇ ಅವೇ ತೋಡಿಕೊಂಡ ಹೊಂಡಗಳಲ್ಲಿ ಇವುಗಳ ವಾಸ. ಇವುಗಳ ಉಸಿರಾಟ ಕ್ರಿಯೆಯ ವಿಕಸನವೂ ಹಕ್ಕಿಗಳಂತೆ ವಿಶಿಷ್ಟದ್ದು.

ಉಡಗಳಿಗೆ ಬುದ್ದಿವಂತಿಕೆಯೂ ಸಾಕಷ್ಟಿದೆ. ಅವಕ್ಕೆ ಸ್ವಲ್ಪಮಟ್ಟಿಗೆ ಸಂಖ್ಯೆಗಳ ಜ್ಞಾನವೂ ಇದೆ ಅಂತಾರೆ ಸ್ಯಾನ್ ಡಿಯಾಗೋದ ವಿಜ್ಞಾನಿಗಳು. ಇವುಗಳಲ್ಲೇ ಒಂದು ಪ್ರಬೇಧವಾದ ಕೊಮೋಡೋ ಡ್ರಾಗನ್‍ಗಳು ಪ್ರಾಣಿ ಸಂಗ್ರಹಾಲಯದ ಸಹಾಯಕರನ್ನು ಗುರುತಿಸಬಲ್ಲವಂತೆ! ತಾನಾಜಿಯಂತೆ ಉಡಗಳನ್ನು ಮನೆಯಲ್ಲಿ ಸಾಕುವ ಜನರೂ ಸಾಕಷ್ಟಿದ್ದಾರೆ. ಪಶ್ಚಿಮ ದೇಶಗಳಲ್ಲೂ ಈ ಪರಿಪಾಠವಿದೆ. ಉಡ ಮನೆಯೊಳಕ್ಕೆ ನುಸುಳಿದರೆ ಅಶುಭವೆಂದು ಹೋಮ-ಹವನ ಮಾಡಿಸುವವರೂ ಇದ್ದಾರೆ. 

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಇದಕ್ಕೆ ರಕ್ಷಣೆಯಿದೆ. ಇವುಗಳನ್ನು ಕೊಲ್ಲುವುದು-ಮಾರುವುದು ಮಹಾಪರಾಧ. ಹೀಗಿದ್ದೂ ಇವೆಲ್ಲ ಅವ್ಯಾಹತವಾಗಿ ಸಾಗಿವೆ. ಗಜಸಂರಕ್ಷಣೆಯ ನೆಪದಲ್ಲಿ ಉತ್ತರಕನ್ನಡದ ಕಾಡುಗಳಲ್ಲಿ ಸುತ್ತುತ್ತಿದ್ದಾಗ ಸ್ಥಳೀಯರು ಆನೆ ಓಡಿಸಲು ಬಳಸುತ್ತಿದ್ದ ಖಂಜರದಂತಹ ತಾಳವಾದ್ಯವನ್ನು ಗಮನಿಸಿದೆ. ಅದು ಉಡದ ಚರ್ಮದಿಂದ ಮಾಡಿದ್ದು! ಅದರ ಮಾಂಸಕ್ಕೂ ಸಾಕಷ್ಟು ಬೇಡಿಕೆ ಇದೆ. ಅವುಗಳ ದೇಹದ ಕೊಬ್ಬನ್ನು ಕುದಿಸಿ ಔಷಧವಾಗಿ ಬಳಸುವವರೂ ಇದ್ದಾರೆ. ಹೀಗಾಗಿ ಉಡಗಳ ಉಳಿವಿಗೆ ಸಂಚಕಾರ ಬಂದಿದೆ. 

ಮರಾಠರ ಅಧಿಪತ್ಯಕ್ಕೆ ಕಾರಣವಾದ ಉಡ, ಈ ಶತಮಾನದ ಆಧುನಿಕ ಮಾನವನ ಅಧಿಪತ್ಯದಲ್ಲಿ ಉಳಿಯಬಲ್ಲದೇ?


 

ಕನ್ನಡದ ಬರಹಗಳನ್ನು ಹಂಚಿ ಹರಡಿ
2 1 vote
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
9 years ago

ಮಾನವನ ದಬ್ಬಾಳಿಕೆಗೆ, ರಾಕ್ಷಸ ಹಸಿವಿಗೆ ಪ್ರಪಂಚದ ಯಾವ ಪ್ರಾಣಿಗಳಿಗೂ ಉಳಿಗಾಲವಿಲ್ಲ. ಚೆನ್ನಾಗಿ ನಿರೂಪಿಸಿದ್ದೀರಿ ಆಡುವಳ್ಳಿ.

ಶಿವರಾಜ ಯಲಿಗಾರ್
ಶಿವರಾಜ ಯಲಿಗಾರ್
9 years ago

ಮಾಹಿತಿಗಾಗಿ ಪ್ರಸನ್ನರವರಿಗೆ ಧನ್ಯವಾದಗಳು.

ಮಾನವನ ದುರಾಸೆಯು ದೂರವಾದಲ್ಲಿ ನಿಮ್ಮ ಕಳಕಳಿಗೊಂದು ಬೆಲೆ ಬಂದೀತು.

narayan babanagar
narayan babanagar
9 years ago

ಬಾಲದಿಂದ ಜೋರಾಗಿ ಹೊಡೆಯುತ್ತದೆಂದು ಅದರ ಬಾಲಕ್ಕೆ ಹಗ್ಗ ಕಟ್ಟಿ ತರುತ್ತಿದ್ದದ್ದು ಬಾಲ್ಯದಲ್ಲಿ ನೋಡಿದ ಸಂಗತಿ…ಅನೇಕ ಕಾರಣಗಳಿಂದ ಲೇಖನ ಇಷ್ಟವಾಯಿತು

ಅಶೋಕವರ್ಧನ ಜಿ.ಎನ್

ಈಗ ಕೆಲವೇ ವರ್ಷಗಳ ಹಿಂದಿನವರೆಗೂ ದಾರಿಬದಿಯಲ್ಲಿ ರಾಜಾರೋಷವಾಗಿ ಸೊಂಟಮುರಿಸಿಕೊಂಡ ಜೀವಂತ (ರಾಜಾಸ್ತಾನೀ ಎನ್ನುತ್ತಿದ್ದರು) ಉಡಗಳನ್ನು ನೆರಹಿಕೊಂದು, ಪಕ್ಕದಲ್ಲೇ ಅದನ್ನು ಕಚಕ್ಕೆನಿಸಿ ಎಣ್ಣೆ ತೆಗೆಯುವ ವ್ಯವಸ್ಥೆ ಮಾಡಿಕೊಂಡ ಕಟುಕ-ವೈದ್ಯರು ಕಾಣಸಿಗುತ್ತಿದ್ದರು. ಪರಿಸರ ಇಲಾಖೆಗೆ ತಾರಾಮೌಲ್ಯ ಕೊಟ್ಟ ಮೇನಕಾ ಗಾಂಧಿಯ ಪರಿಣಾಮವಾಗಿ ಈಗ ಬಹಿರಂಗವಾಗಿ ಕಾಣಸಿಗುವುದಿಲ್ಲ, ಅಷ್ಟೆ. ಆಗ ಅವಕಾಶ ಸಿಕ್ಕಲ್ಲೆಲ್ಲ ನಾನು ಹೇಳುವುದಿತ್ತು “ಸ್ವಂತ ಸೊಂಟಕ್ಕೇ ಎರವಾದ ಉಡದ ಶಕ್ತಿ ಮನುಷ್ಯನ ಸೊಂಟವೇನು ಉಳಿಸೀತು.” ಅಂಡಮಾನಿನ ಅತಿ ದೊಡ್ಡ ಸಹಜ ವನ್ಯಜೀವಿ ಉಡಗಳೇ ಎಂದು ಅಲ್ಲಿ ಹೋಗಿದ್ದಾಗ ಕೇಳಿದ್ದೆ ಮತ್ತು ಚಿಡಿಯಾ ಟಾಪಿನಲ್ಲಿ ಒಂದು ಕಾಣಲೂ ಸಿಕ್ಕಿತ್ತು.

prashasti.p
9 years ago

ಉಡದ ಕತೆ ಚೆನ್ನಾಗಿದೆ.. ನಮ್ಮ ಕಡೆ ಬಲವಾದ ಪಟ್ಟು ಅನ್ನೋಕೆ ಉಡದ ಹಿಡಿತ ಅಂತ್ಲೇ ಕರೀತಿದ್ರು. ಅದೇಕೆ ಅಂತ ಈಗ ಅರ್ಥ ಆಗ್ತಾ ಇದೆ

Pallavi Srinivas
Pallavi Srinivas
9 years ago

Nice article sir..

Anitha Naresh Manchi
Anitha Naresh Manchi
9 years ago

ಉಡ ನಮ್ಮ ಮನೆಯ ಪರಿಸರದಲ್ಲಿ ಮಳೆಗಾಲದಲ್ಲಿ ಓಡಾಟ ನಡೆಸುತ್ತಾ ಇರುತ್ತೆ.. ಒಂದು ಸಲವೂ ಮನೆ ಗೋಡೆ ಹತ್ತಿ ಒಳಗೆ ಬಂದಿಲ್ಲ ಎನ್ನುವುದು ಸಮಾಧಾನದ ವಿಷಯ 🙂 

Guruprasad Kurtkoti
9 years ago

ಪ್ರಸನ್ನ, ಈ ಕಥೆ ನಾನೂ ಕೇಳಿದ್ದೇನೆ. ಉಡದ ಬಗ್ಗೆ ಇನ್ನೂ ತಿಳಿಯುವ ಹಂಬಲವಿದೆ. ನಿಮ್ಮ ಅಂಕಣ ತುಂಬಾ ಮಾಹಿತಿಪೂರ್ಣವಿರಲಿದೆಯೆಂಬ ನಂಬಿಕೆ ನನ್ನದು. ಮುಂದಿನ ವಾರಕ್ಕೆ ಕಾಯುತ್ತಿದ್ದೇನೆ.

8
0
Would love your thoughts, please comment.x
()
x