ಒಂದು ಸ್ನೇಹದ ಸುತ್ತ…: ವಿದ್ಯಾ ಭರತನಹಳ್ಳಿ

” ವಿದ್ಯಾ ಊಟ ಕೊಡೆ” ದೊಡ್ಡದಾದ ಧ್ವನಿ ಕೇಳಿಸಿತು. ಇದು ರವಿಯವರ ಧ್ವನಿಯೆಂದು ಗೊತ್ತಾಗಿ ಕೈ ತೊಳೆಯುತ್ತಿದ್ದವಳು ಓಡಿ ಬಂದೆ. ದೊಡ್ಡಪ್ಪ ಅನ್ನುತ್ತಾ ಮಗಳು ಪೂರ್ವಿಯೂ ಹೊರಬಂದಳು. ಉಮೇಶ್ ಮತ್ತು ವಾದಿರಾಜ ಅವರನ್ನು ವ್ಹೀಲ್ ಚೇರಲ್ಲಿ ಕುಳಿಸಿಕೊಂಡು ಒಳಗೆ ಕರೆದುಕೊಂಡು ಬರುತ್ತಿದ್ದರು. “ನಿಮ್ಮನ್ನ ನೋಡ್ಬೇಕು ಅನಸ್ತು ಬಂದ್ಬಿಟ್ನೆ. ” ಅಂದರು. ಒಂದು ಕಾಲದಲ್ಲಿ ಸಿಂಹದಂತಿದ್ದವರು ಅದೇ ಧ್ವನಿ ಇದ್ದರೂ ಮಗುವಿನಂತೆ ಕುಳಿತಿದ್ದು ನೋಡಿ ಸಂಕಟವಾಗುತ್ತಿದ್ದಾಗ, ಪೂರ್ವಿಯ ಹತ್ತಿರ ಅವಳ ಉದ್ಯೋಗ, ಮುಂದಿನ ಓದು ಎಲ್ಲ ವಿಚಾರಿಸಿದರು. ನನ್ನ ನೋಡಿ ” ಹೇಗಿದೀಯೆ? ಲಲ್ತಾಳ ಹತ್ರ ಹೋಗಿದ್ಯಾ? ನಾನು ಅವಳಿಗೆ ಮೋಸ ಮಾಡ್ಬಿಟ್ಟೆ. ಮತ್ತೊಂದು ಮದುವೆ ಆಗಬಾರದಿತ್ತು” ಅಂತ ಅಳಲು ಪ್ರಾರಂಭಿಸಿದರು. “ಅದು ಹಳೆಯ ವಿಚಾರ, ಈಗ್ಯಾಕೆ “ಅಂದೆ. ಇಬ್ಬರ ಕಣ್ಣಲ್ಲೂ ನೀರಿತ್ತು. ನಾವು ಹೊಸ ಮನೆಗೆ ಬಂದು ಎರಡು ವರ್ಷಗಳ ಮೇಲೆ ತಾವಾಗಿಯೇ ಪ್ರೀತಿಯಿಂದ ಬಂದು ಮೂರು ದಿನ ಉಳಿದು ಹೋದರು. ಹಗಲು, ರಾತ್ರಿಯೆನ್ನದೆ ಮಲಗಿದರು. ಹಸಿವಾದಾಗ ತಿಂದರು. ಮಾತಾಡಬೇಕೆನಿಸಿದಾಗ ನಾವು ಮೂವರನ್ನೂ ಸುತ್ತ ಕೂಡ್ರಿಸಿಕೊಂಡು ಮಾತಾಡಿದರು. ಅಷ್ಟೆ, ಅದು ಅವರ ಕೊನೆಯ ಭೇಟಿಯಾಗಬಹುದೆಂದು ನಮಗೆ ಗೊತ್ತಿರಲಿಲ್ಲ. ” ಎಷ್ಟು ಚಂದದ ಮನೆ ಕಟ್ಟಿಸಿದ್ದೀರೊ, ನಾನು ಬರೆಯಲು ಬರುತ್ತೇನೆ” ಎಂದಾಗ ಖುಷಿಯಾಗಿ ಮುದ್ದಾಮ್ ಬರಬೇಕು ಅಂದೆವು. ಹಾಗೆ ಹೇಳುವಾಗ ಅವರು ತಿರುಗಿ ಬಾರದ ಜಗತ್ತಿಗೆ ಅಷ್ಟು ಬೇಗ ಹೋಗುತ್ತಾರೆಂದು ಗೊತ್ತಾಗಲೇ ಇಲ್ಲ. ನಮ್ಮನ್ನಗಲುವ ಕೇವಲ ಹದಿನೈದು ದಿನ ಮುಂಚೆ ಹೀಗೆ ಅಚಾನಕ್ಕಾಗಿ ನಮ್ಮನೆಗೆ ಬಂದು ಹೋದ, ಮೂವತ್ತು ವರ್ಷಗಳ ಆತ್ಮೀಯ ಸ್ನೇಹಿತ, ತಂದೆ, ಅಣ್ಣ ನಮ್ಮ ಪ್ರೀತಿಯ ರವಿ, ಗ್ರೇಟ್ ರವಿ ಬೆಳಗೆರೆ ಇಲ್ಲ ಅನ್ನುವುದನ್ನು ಈಗಲೂ ನಂಬಲಾಗುತ್ತಿಲ್ಲ.
ಎಂಭತ್ತರ ದಶಕದಲ್ಲಿ ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕದಿಂದ ಶುರುವಾದ ಬಾಂಧವ್ಯ ನಮ್ಮದು. ಭರತನಹಳ್ಳಿ ಕುಟುಂಬ, ಬೆಳಗೆರೆ ಕುಟುಂಬಗಳ ನಡುವೆ ಇರುವುದು ನಿರ್ಮಲ ಸ್ನೇಹ ಮಾತ್ರ. ದುಡ್ಡು ದುಗ್ಗಾಣಿ ಯಾವುದೂ ನಮ್ಮ ನಡುವೆ ಬರಲೇ ಇಲ್ಲ. ಅಂದರೆ, ದುಡ್ಡು ಇದೆ, ಇಲ್ಲ ಎನ್ನುವುದು ಸ್ನೇಹಕ್ಕೆ ಕಾರಣವೂ ಅಲ್ಲ. ಅಡ್ಡವಾಗಲೂ ಇಲ್ಲ. ಉದ್ದ ಬೆಳೆಯಲೂ ಇಲ್ಲ. ನಮ್ಮ ನಡುವೆ ಇದ್ದಿದ್ದು ಕೇವಲ ಮಮತೆ, ಪ್ರೀತಿ, ಸಾಹಿತ್ಯ, ಸಂಗೀತ, ಗೌರವ, ಮತ್ತು ಪರಸ್ಪರ ನಿಷ್ಕಲ್ಮಷ ನಂಬುಗೆ, ಅವಲಂಬನೆ ಮಾತ್ರ. ಅಪ್ಪಟ ಭಾವನಾತ್ಮಕ ಬೆಸುಗೆ.

ಪರಿಚಯಕ್ಕೆ ನಾನು ಕೇವಲ ನೆಪ ಮಾತ್ರ. ರವಿ ಮತ್ತು ಲಲ್ತಕ್ಕ, ಚೇತನಾ, ಭಾವನಾ, ಕರ್ಣ ಭರತನಹಳ್ಳಿಯ ಒಂದು ಭಾಗವೇ ಆದರು. ನಾವು ಕೂಡ ಅಷ್ಟೆ. ಅವರ ಮನೆಯ ಭಾಗವೇ ಆದೆವು. ಬೆಂಗಳೂರಲ್ಲಿ ಅಕ್ಕ ಪಕ್ಕದ ಮನೆಯಲ್ಲಿ ವಾಸಿಸಿದೆವು. ಮಗಳು ಪೂರ್ವಿಯನ್ನಂತೂ ಎಲ್ಲರೂ ಸೇರಿ ಬೆಳೆಸಿದೆವು. ಅವರ ‘ಖಾಸ್ ಬಾತ’ಲ್ಲಿ ಹಲವಾರು ಬಾರಿ ನಾನು, ಉಮೇಶ್, ಪೂರ್ವಿ, ಅಪ್ಪ, ಅಬ್ಬೆ, ಅಕ್ಕಂದಿರು, ಬಾವಂದಿರು, ನನ್ನ ಅತ್ತೆ, ಮಾವ ಎಲ್ಲರೂ ಬಂದೆವು. “ನಾನು ಕವಯಿತ್ರಿಯಾಗಿ ಗುರುತಿಸಿಕೊಂಡಿದ್ದಕ್ಕಿಂತ ಹೆಚ್ಚು ನೀನು ನನ್ನ ಬಗ್ಗೆ ಬರೆದು ಬರೆದೇ ಫೇಮಸ್ ಆದೆ ಅಂತ ಕಾಣಿಸುತ್ತದೆ. ಇನ್ನು ಬರೆಯಬೇಡ. ಇದ್ದಿದ್ದು, ಇಲ್ಲದ್ದು ಎಲ್ಲ ಕಟ್ಟಿಕೊಂಡು ಆಡಿಕೊಳ್ಳುತ್ತಾರೆ “ಅಂದೆ. ‘ಕುರಿ ಕೇಳಿ ಸಾಂಬಾರ ಅರಿತಾರೆನೇ’ ಅಂತ ದೊಡ್ಡದಾಗಿ ನಕ್ಕು, ನನಗೆ ನಿನ್ನ ನೇರವಂತಿಕೆ, ಸ್ಫಟಿಕದಷ್ಟು ಸ್ವಚ್ಛ ಮನಸ್ಸು ಇಷ್ಟವಾಗುತ್ತದೆ ನೋಡು ಅಂದರು. ಮುಂದೇನು ಹೇಳಬೇಕೆಂದು ನನಗೆ ಗೊತ್ತಾಗಲಿಲ್ಲ. ಅವರು ಬರೆಯುವುದನ್ನು ಬಿಡಲಿಲ್ಲ. ಅನಿಸಿದಾಗೆಲ್ಲ ಬರೆದರು.

ಸಂಯುಕ್ತದಲ್ಲಿ ಸೇರಿದ ಕೆಲವೇ ದಿನಗಳಲ್ಲಿ ರವಿಯವರು ‘ಸಾಪ್ತಾಹಿಕ ಸೌರಭ’ದ ಮುಖ್ಯಸ್ಥರಾದರು. ಸಾಪ್ತಾಹಿಕ ಕ್ಕೆ ಹೊಸ ರೂಪ ಕೊಟ್ಟರು. ಆ ಕಾಲದಲ್ಲಿ ನನ್ನಿಂದ ಒಂದಷ್ಟು ಕವಿತೆಗಳನ್ನು ಬರೆಸಿದರು. ಫಿಲ್ಲರ್ ಗಳಂತೆ. ಆಶು ಕವಯಿತ್ರಿ ಎಂದು ತಮಾಷೆ ಮಾಡುತ್ತಿದ್ದರು. ಮೂಲತಃ ಸಾಹಿತ್ಯ ದ ಕುಟುಂಬದಿಂದ ಬಂದವಳಾದ್ದರಿಂದ ಸಹಜವಾಗಿಯೇ ನಾನೂ ಸ್ವಲ್ಪಮಟ್ಟಿಗೆ ಓದಿಕೊಂಡಿದ್ದೆ. ಆ ಓದು ವಿಸ್ತಾರಗೊಳ್ಳುವಂತೆ ಮಾಡಿದ್ದು ರವಿಯವರು. ಬೇಂದ್ರೆ, ಅಡಿಗ, ಎ. ಕೆ ಆರ್, ಎಚ್ ಎಸ್ವಿ, ನರಸಿಂಹ ಸ್ವಾಮಿ, ಬಿ. ಆರ್. ಎಲ್, ನಿಸಾರ್ ಅಹಮದ್, ಕಮು, ಕಾಫ್ಕ, ಎಲ್ಲರೂ ನಮ್ಮ ಮಾತುಗಳಲ್ಲಿರುತ್ತಿದ್ದರು. ನಮ್ಮಿಬ್ಬರ ಅತಿ ಭಾವುಕತೆ ಎಲ್ಲೋ ಹೊಂದುತ್ತಿತ್ತು. ಯಾರದೋ ಕವಿತೆಗಳನ್ನ ಓದಿ, ಇಲ್ಲಿ ನಾವು ಕಣ್ಣೀರಾಗುತ್ತಿದ್ದೆವು. ಉಮೇಶ್ ಇಟ್ಟುಕೊಂಡಿದ್ದ ಟೇಪ್ ರೆಕಾರ್ಡರಲ್ಲಿ ಅಬಿದಾ ಪರ್ವೀನಳೊ, ಗುಲಾಮ್ ಅಲಿಯ ಗಜಲ್ ಗಳನ್ನೋ ಹಾಕಿಕೊಂಡು ಮತ್ತೆ ಮತ್ತೆ ಅದನ್ನೇ ಕೇಳುತ್ತಿದ್ದೆವು. ಗಜಲ್ಲಿನ ಗ್ರಾಮರ್ ಅರ್ಥ ಆಗದಿದ್ದರೂ, ಭಾವ, ನಾದ ನನ್ನೊಳಗೆ ಇಳಿಯುತ್ತಿತ್ತು. ಅವರಮ್ಮ ಪಾರ್ವತಮ್ಮ ಬೆಳಗೆರೆ ನೆನಪಾದರೆ ಮುಗಿಯಿತು. ‘ಮಲಗಿಸೆನ್ನನು ತಾಯೆ ನಲ್ಜೋಗುಳವ ಹಾಡಿ’ ಹಾಡನ್ನು ಹತ್ತಾರು ಸಲವಾದರೂ ಹಾಡಬೇಕಿತ್ತು. ತುಸು ಹೂತು ಹೋದ ಧ್ವನಿಯ ನನ್ನ ಹಾಡನ್ನು ಅವರು ಅಷ್ಟು ಪ್ರೀತಿಯಿಂದ ಕೇಳುತ್ತಿದ್ದರು. ಅಲ್ಪ ಸ್ವಲ್ಪ ಸಂಗೀತ ಕಲಿತಿದ್ದರೂ ಚೆನ್ನಾಗಿ ಹಾಡಲಿಕ್ಕೆ ಬರುವುದಿಲ್ಲ ಎನ್ನುವುದು ನನಗೆ ಗೊತ್ತಾಗುತ್ತಿದ್ದರೂ ಅವರ ಆಗ್ರಹಕ್ಕೆ ಹಾಡುತ್ತಾ ಇರುತ್ತಿದ್ದೆ. ಈಗ ನೆನಪಾದರೆ ನಗು ಬರುತ್ತದೆ.

ಹಾಗೆ ಆ ಕಾಲದಲ್ಲಿ ಹುಬ್ಬಳ್ಳಿಯ ನಮ್ಮ ಮನೆಯಲ್ಲೇ ಕುಳಿತು ‘ಮಾಂಡೋವಿ’ಯನ್ನು ಬರೆದರು. ಅದರ ಮೊದಲ ಕೇಳುಗರಾಗಿ ನಾನು, ಉಮೇಶ್ ಇರುತ್ತಿದ್ದೆವು. ನನಗೆ ಬೆರಗು. ಉಮೇಶ್ ಚರ್ಚಿಸುತ್ತಿದ್ದರು. ಅವರ ಮಾತು, ಹಾಸ್ಯ, ಎಲ್ಲ ಕವಿಗಳ ಕವಿತೆಗಳನ್ನೂ ನೆನಪಿಟ್ಟುಕೊಂಡು ಅವರು ಹೇಳುತ್ತಿದ್ದ ರೀತಿ, ನನಗೆ ಅವರೆಡೆಗೆ ಒಂದು ಆರಾಧನಾ ಭಾವ ಬೆಳೆದುಬಿಟ್ಟಿತ್ತು. ಹಾಗೇ ಭರತನಹಳ್ಳಿ ಅವರ ಪ್ರೀತಿಯ ಜಾಗವಾಗಿತ್ತು. ಮನಸಿಗೆ ನೋವಾದರೆ ಸೀದಾ ಭರತನಹಳ್ಳಿಗೆ ಹೋಗಿ ಬರುತ್ತಿದ್ದರು. ಅಪ್ಪ ಅಣ್ಣ ರೊಂದಿಗೆ ಹರಟಿ, ಅಬ್ಬೆ ಅತ್ತಿಗೆ ಮಾಡುವ ರುಚಿಯಾದ ಅಡುಗೆ ಉಂಡು, ಅತ್ತಿಗೆ ಹತ್ತಿರ ಹಾಡಿಸಿ ಮತ್ತೆ ಬೈಕ್ ಹತ್ತಿಬಿಡುತ್ತಿದ್ದರು. ಕೆಲವೊಮ್ಮೆ, ಲಲ್ತಕ್ಕ, ಮಕ್ಕಳನ್ನೂ ಕರೆದೊಯ್ಯುತ್ತಿದ್ದರು. ಪಾವೆಂ ಹೇಳಿದ ಕತೆಯನ್ನು ಭರತನಹಳ್ಳಿಯ ಮಾಳಿಗೆಯ ಮೇಲೆ ಕುಳಿತು ಬರೆದಿದ್ದರು. ಅದಕ್ಕೆ ಮಾಸ್ತಿ ಪ್ರಶಸ್ತಿ ಬಂದಾಗ ನಾನು, ಲಲ್ತಕ್ಕ ಭರತನಹಳ್ಳಿಯಲ್ಲಿದ್ದೆವು. ಆ ಸಂಭ್ರಮ ಹಂಚಿಕೊಳ್ಳಲು ಸೀದಾ ಭರತನಹಳ್ಳಿಗೇ ಬಂದಿದ್ದರು.

ರವಿಯವರು ಪರಿಚಯವಾಗುವಾಗ ಕೇವಲ ಕತೆಗಾರ ರವಿ ಬೆಳಗೆರೆ. ಆಮೇಲೆ ಅವರು ನಮ್ಮ ಕಣ್ಣೆದುರೇ ತಮ್ಮ ಪ್ರತಿಭೆ, ಶ್ರದ್ಧೆ ಗಳಿಂದ ಏಣಿಮೆಟ್ಟಿಲ ತುದಿಗೇರಿದರು. ಈ ಕಾಲದಲ್ಲಿ ನಾನು ಆದಷ್ಟು ಅವರಿಂದ ದೂರವೇ ಉಳಿಯುತ್ತಿದ್ದೆ. ಸ್ಟಾರ್ ಗಳಿಗೆ ಮಾಡಿದಂತೆ ಜನರು ಅವರನ್ನು ಮುತ್ತಿದಾಗ, ಪ್ರೀತಿ ತೋರಿದಾಗೆಲ್ಲ ಎಷ್ಟು ಕಷ್ಟದಲ್ಲಿದ್ದವನು ಈ ಸ್ಥಿತಿಗೆ ತಲುಪಿದನಲ್ಲಾ ಅಂತ ಖುಷಿಯಾಗುತ್ತಿತ್ತು. ನಾನು ಸಂಕೋಚದಲ್ಲಿ ಹಿಂದೆಲ್ಲೊ ಕುಳಿತರೆ ನೂರಾರು ಜನರ ಮಧ್ಯೆಯೂ ಅದು ಹೇಗೋ ಅವರ ಕಣ್ಣಿಗೆ ಬಿದ್ದು ಮುಂದೆ ಬಾ ಎಂದು ಕರೆಯುತ್ತಿದ್ದರು. ಜನರೆಲ್ಲ ತಿರುಗಿ ನೋಡುವಾಗ ಮತ್ತೂ ಸಂಕೋಚವಾಗುತ್ತಿತ್ತು. ತಮ್ಮ ಸ್ನೇಹಿತರ ಬಗ್ಗೆ ಅವರು ಇರುವುದೇ ಹೀಗಾಗಿತ್ತು. ಹಣ, ಖ್ಯಾತಿ ಯಾವುದೂ ಸುಳಿಯುತ್ತಿರಲಿಲ್ಲ. ಮನುಷ್ಯನ ಅಪ್ರಾಮಾಣಿಕತೆಯನ್ನು ಬಹುಬೇಗ ಅಳೆಯಬಲ್ಲವರಾಗಿದ್ದರು.
ಎಲ್ಲದರಲ್ಲೂ ಅಸಾಮಾನ್ಯರೇ. ಗಂಡಸರು ಹೀಗಿರುತ್ತಾರೆ ಎನ್ನುವ ಸಾಮಾನ್ಯೀಕರಣಕ್ಕೆ ಸಿಗದವರು ಅವರು. ಹಾಗಾಗಿಯೇ ಅವರು ಕೆಲವರಿಗೆ ತುಂಬಾ ಕೆಟ್ಟವರಾಗಿಯೂ, ಇನ್ನು ಕೆಲವರಿಗೆ ತುಂಬಾ ಹೃದಯವಂತರಾಗಿಯೂ ಕಂಡರು. ನನ್ನ ಪಾಲಿಗೆ ಅವರು ಯಾವತ್ತೂ ಆರ್ದ್ರ ಹೃದಯಿಯೇ. ಒಮ್ಮೊಮ್ಮೆ ಅವರು ನಿಜವಾಗಿ ಇರುವುದಕ್ಕೂ ವ್ಯಕ್ತವಾಗುವ ರೀತಿಗೂ ಬೇರೆ ಬೇರೆ ಅನಿಸುತ್ತಿತ್ತು. ಕೆಲವೊಮ್ಮೆ ಇದ್ಯಾಕೆ ಹೀಗೆ ಅಂತ ಅರ್ಥ ವಾಗುತ್ತಿರಲಿಲ್ಲ. ಒಮ್ಮೆ ಯಾರೋ ನಿಮ್ಮ ಕತೆಗಳ ಬಗ್ಗೆ ಮಾತಾಡುತ್ತೇವೆ ನೀವು ಕೂಡ ಕತೆಗಳ ಬಗ್ಗೆ ಹೇಳಿ ಅಂತ ಅವರನ್ನೇ ಕರೆದಿದ್ದಾರೆ. ಆದರೆ ಅಲ್ಲಿ ಹೋಗಿ ತನ್ನ ವೈಯಕ್ತಿಕ ವಿಷಯಗಳನ್ನು ಮಾತಾಡಿ, ತಮ್ಮ ಎರಡನೇ ಮದುವೆ, ಮಗ ಇತ್ಯಾದಿ ಮಾತಾಡಿದ್ದಾರೆ. ಅದು ಕೆಲವರಿಗೆ ಹಿಡಿಸಲಿಲ್ಲ. ಕತೆ ಬಗ್ಗೆ ಅಥೆಂಟಿಕ್ ಆಗಿ ಏನೂ ಹೇಳದೇ ಇನ್ನೇನೊ ಮಾತಾಡಿ ಮರುಳು ಮಾಡಲು ನೋಡ್ತಾರೆ ಅನ್ನುವ ಅರ್ಥದಲ್ಲಿ ಯಾರೊ ಬರೆದಿದ್ದ ಓದಿದೆ. ಆಫೀಸಲ್ಲಿ ಸಿಕ್ಕಾಗ ಆ ವಿಷಯ ಕೇಳಿದೆ. ಕತೆ ಬಗ್ಗೆ ಮಾತಾಡಿದ್ದರೆ ಉಪಯೋಗವಾಗ್ತಿತ್ತಲ್ಲವೆ ಅಂದಾಗ, ನನ್ನ ಕತೆ ಬಗ್ಗೆ ನಾನು ಮಾತಾಡುವುದು ತುಂಬಾ ಮುಜುಗರದ ವಿಷಯ. ಕತೆ ಎಲ್ಲೋ ಇರುವುದಿಲ್ಲ. ನನ್ನ ಮಾತಲ್ಲಿ ಅವರು ಹುಡುಕಿಕೊಳ್ಳಬೇಕು ಅಂದರು. ನನಗೆ ಅಲ್ಲಿ ಪಾಠ ಸಿಕ್ಕಿತ್ತು.

‘ ಹಾಯ್ ಬೆಂಗಳೂರ್ ‘ಪ್ರಾರಂಭಿಸಿ, ಅದು ಪತ್ರಿಕೋದ್ಯಮದಲ್ಲಿ ಇತಿಹಾಸವನ್ನೇ ಸೃಷ್ಟಿಸಿ, ಆ ನಂತರ ಅವರು ಪ್ರಾರ್ಥನಾ ಶಾಲೆಯನ್ನು ಪ್ರಾರಂಭಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಹಾಗೆ ಪ್ರಾರ್ಥನಾ ಬೆಳೆದು ನಿಂತಾಗ, ಒಂದು ಕಡೆ ಬರೆವಣಿಗೆ, ಟಿವಿಯ ಕಾರ್ಯಕ್ರಮಗಳು, ಕ್ರೈಮ್ ಡೈರಿ, ಎಂದೂ ಮರೆಯದ ಹಾಡು ಇತ್ಯಾದಿಯಲ್ಲಿ ಅವರು ಉತ್ತುಂಗಕ್ಕೇರುತ್ತಿದ್ದಾಗ “ಯಾಕೊ ತನ್ನ ಸುತ್ತ ಒಂದು ಕೋಟೆ ಏಳುತ್ತಿದೆ. ತನಗೇನೂ ತಿಳಿಯುತ್ತಿಲ್ಲ” ಎನ್ನುವ ಭಾವನೆ ಬಂದಿದ್ದನ್ನು ನಮ್ಮೊಂದಿಗೆ ಹೇಳಿದರು. “ಯಾರದೋ ಕೈಗೆ ನನ್ನ ಕನಸನ್ನು ಒಪ್ಪಿಸಲಾರೆ. ಉಮೇಶ, ನೀನು ಬಂದು ನೋಡಿಕೊಳ್ತಿಯೇನೋ “ಅಂದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ರಾಂಚ್ ಮ್ಯಾನೇಜರ್ ಆದವರು ಇಲ್ಲಿ ಬರುವುದು ಎಷ್ಟುಸರಿ ಎಂದು, ನಾನು ಲಲ್ತಕ್ಕ ಎಲ್ಲ ಯೋಚಿಸ್ತಿದ್ದಾಗ, ಯಾರಿಗೋ ಮಾಡುವುದಕ್ಕಿಂತ ನಮ್ಮ ಮನೆಯ ಸಂಸ್ಥೆಗೆ ಮಾಡುವುದು ಖುಷಿಯೆಂದು ಉಮೇಶ್ ಬಂದುಬಿಟ್ಟರು. 2007 ರಿಂದ ಇದುವರೆಗೂ ಜೊತೆಯಲ್ಲಿದ್ದವರು ಕೊನೆಯವರೆಗೂ ಅದೇ ನಂಬಿಕೆ, ಪ್ರೀತಿ ಪರಸ್ಪರ ಉಳಿಸಿಕೊಂಡರು.

ತೀವ್ರ ಅನಾರೋಗ್ಯಕ್ಕೊಳಗಾದಾಗ ಕೂಡ “ಲಲ್ತಾ ಉಮೇಶನ ನಂಬು, ಅವನು ನೋಡಿಕೊಳ್ತಾನೆ” ಎಂದಿದ್ದರಂತೆ. ಬರೆಯುತ್ತ ಹೋದರೆ ನೆನಪುಗಳ ಮೆರವಣಿಗೆಯೇ ಹೊರಡುತ್ತದೆ. ಜೀವಿತದ ಕೊನೆಯ ಅವಧಿಯಲ್ಲಿ ಅವರು ಎದುರಿಸಿದ ಅವಮಾನಗಳು ನಮ್ಮನ್ನೂ ಸದಾ ನೋವಿಗೀಡು ಮಾಡುತ್ತದೆ. ರವಿ ಬೆಳಗೆರೆ ಅಂದರೆ ದೇವರು ಅಂದುಕೊಂಡವರು, ಸಹಾಯ ತೆಗೆದುಕೊಂಡವರು ಎಲ್ಲರೂ ಅವರ ವಿರುದ್ಧ ಮಾತಾಡುವುದು, ಬರೆಯುವುದನ್ನು ನೋಡಿದಾಗ ಈ ಜಗತ್ತು ಇಷ್ಟೇ ಎನ್ನುವ ಅರಿವಾಗುತ್ತದೆ.

” ಆಸೆಯೆಂಬ ತಳ ಒಡೆದ ದೋಣಿಯಲಿ
ಗುರಿಯಿರದ ಯಾನ
ಯಾರ ಲೀಲೆಗೊ ಯಾರೊ
ಏನೊ ಗುರಿಬಿಟ್ಟ ಬಾಣ.. “, ವನ್ನೊ
“ಮುರಿದು ಬಿದ್ದ ಕೊಳಲು ನಾನು
ನಾದ ಬರದು ನನ್ನಲಿ…. ಎಂದು ಅಡಿಗರನ್ನು ನೆನಪಿಸುತ್ತಲೊ

ಪುಂಖಾನುಪುಂಖವಾಗಿ ಕವಿಗಳ ಸಾಲುಗಳ ಹೇಳುತ್ತಿರಬಹುದೆ ? ಸಿದ್ಧಲಿಂಗಯ್ಯನವರ ‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ’ ಎಂದು ಜೋರು ಧ್ವನಿಯಲ್ಲಿ ಹಾಡುತ್ತಿರಬಹುದೆ? ‘ಯಾರಲ್ಲಿ ಕಾಫಿ ಕೊಡಿ ‘ ಎಂದು ಕೂಗುತ್ತ, ಮತ್ತೊಂದು ಕೈಯಲ್ಲಿ ಸಿಗರೇಟು ಸುಡುತ್ತ ಒಂದೂ ಚಿತ್ಕಾಟಿಲ್ಲದೆ, ತಲೆಯ ವಾರೆ ಮಾಡಿಕೊಂಡು ಬರೆಯುತ್ತಿರಬಹುದೆ? ಸುಂದರ ಅಕ್ಷರಗಳ ಜೋಡಿಸುತ್ತ ಆ ಬಾನಿನಲ್ಲಿ, ಕಣ್ಣಿಗೆ ಕಾಣದ ಆ ಲೋಕದಲ್ಲಿ ಆರಾಮು ಕುರ್ಚಿ ಯಲ್ಲಿ ಕುಳಿತಿರಬಹುದೇ. ? ಎಲ್ಲ ನೆನಪಿಸಿಕೊಳ್ಳುತ್ತ, ಕಣ್ಣಲ್ಲಿ ನೀರು ತುಳುಕಿಸುತ್ತ, ವಾಸ್ತವವ ಎದುರಿಸುತ್ತ ಹೇಳುತ್ತೇನೆ ಮತ್ತೊಮ್ಮೆ ಹುಟ್ಟಿ ಬಾ ರವಿ, ಹ್ಯಾಪಿ ಹ್ಯಾಪಿ ಬರ್ತಡೇ ಆಚರಿಸೋಣ..

ವಿದ್ಯಾ ಭರತನಹಳ್ಳಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ದಿಲೀಪ್ ಕುಮಾರ್
ದಿಲೀಪ್ ಕುಮಾರ್
3 years ago

ಬಹಳ ಆರ್ದ್ರವಾದ ಲೇಖನವಿದು. ಒಂದಷ್ಟು ಬೇಸರ ಅನಿಸಿತು ಓದಿದೊಡನೆ. ಇನ್ನೂ ಒಂದೆರಡು ಘಟನೆಗಳನ್ನು ಬರೆಯಬಹುದಿತ್ತು. ಮತ್ತೊಮ್ಮೆ ಆದರೆ ಬರೆಯಿರಿ. ಓದಲು ಕಾಯುತ್ತಿರುತ್ತೇನೆ.

1
0
Would love your thoughts, please comment.x
()
x