ಇಂದಿನ ಆಧುನಿಕ ಜೀವನದ ಧಾವಂತದ ಬದುಕಿನಲ್ಲಿ ಮಾನವೀಯ ಹಾಗೂ ಸಂವೇದನಾಶೀಲ ಗುಣಗಳ ಕೊರತೆ ಎದ್ದುಕಾಣುತ್ತಿದೆ.ಪರಸ್ಪರ ಕಾಲೇಳದಾಟದಲ್ಲಿ ಮೌಲ್ಯಯುತ ಜೀವನ ಕಾಣದಂತಾಗಿದೆ.ನಮ್ಮ ಪೂರ್ವಜರ ಬದುಕನ್ನು ಕಂಡಾಗ ಮನಸ್ಸು ಹಳಹಳಿಸುತ್ತದೆ.ಇಂದು ದಯಾಪರ ಜೀವನ ಎಂದಿಗಿಂತ ತುಂಬ ಆವಶ್ಯಕವೆನಿಸುತ್ತಿದೆ.
ಮನುಷ್ಯ ಮನುಷ್ಯರ ಮಧ್ಯ ಪರಸ್ಪರ ಕೊಡಮಾಡಲು ಸಾಧ್ಯವಿರುವ ಉಡುಗೊರೆಗಳೆಲ್ಲ ಮೌಲ್ಯಯುತವಾದುದು ಎಂದರೆ ದಯೆ. ಅದು ಕಾರುಣ್ಯ,ಸಹಾನುಭೂತಿ,ಅನುಕಂಪ ಎಂಬ ಇತರ ಹೆಸರುಗಳಿಂದಲೂ ಕರೆಯಲ್ಪಡುತ್ತದೆ.ಮನುಷ್ಯ ತೋರ್ಪಡಿಸುವ ದಯೆ ಹುಟ್ಟುಗುಣವಾಗಿದ್ದರೂ ಅದು ಆತನಲ್ಲಿ ಸ್ಥಿರವಾಗಿ ನೆಲೆಗೊಳ್ಳಲು ಅದನ್ನು ಮಾದರಿಯಾದ ಗುಣವಿಶೇಷಗಳಿಂದ ಬೆಳೆಸಬೇಕಾಗುತ್ತದೆ. ಮನುಷ್ಯ ಸ್ವತಂತ್ರ ಜೀವನವನ್ನು ಕೈಕೊಂಡ ಮೇಲೆ ಆತನಲ್ಲಿ ದಯೆಯೊಟ್ಟಿಗೆ ಆಸೆ,ಆಮಿಷ,ತಾಮಸ,ಹುಸಿ,ವಿಷಯ,ಕುಟಿಲ,ಕುಹಕ,ಕ್ರೋಧ,ಕ್ಷುದ್ರ,ಮಿಥ್ಯ ಎಂಬ ಇತರ ಪ್ರವೃತ್ತಿಗಳು ದಯೆಯೊಟ್ಟಿಗೆ ಸ್ಪರ್ಧೆಗೆ ನಿಲ್ಲುವದನ್ನು ಮನಗಂಡು ಬಸವಣ್ಣನವರು ಈ ಪ್ರವೃತ್ತಿಗಳನ್ನು ದಯೆಯಿಂದ ಬೇರ್ಪಡಿಸಿ ತಮ್ಮ ‘ನಾಲಿಗೆಯ ಮೇಲಿಂದತ್ತ ತೆಗೆದು ಕಳೆಯಯ್ಯ’ ಎಂದು ಪ್ರಾರ್ಥಿಸುತ್ತಾರೆ. ನಮ್ಮಲ್ಲಿ ಮೊಳೆಯುವ ಸ್ವಾರ್ಥ,ದ್ವೇಷದಂತಹ ಮನೋಭಾವಗಳು ಅತ್ಯುನ್ನತ ಗುಣವಾದ ದಯೆಯನ್ನು ಮಸುಕು ಮಾಡುತ್ತವೆ.ನಾವು ಕ್ಷುದ್ರಮನಸ್ಸಿನವರಾಗುವುದಕ್ಕಿಂತ ದಯಾಪರ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು.
ನಾವು ಅನುಸರಿಸುವ ಧರ್ಮ,ನಾವು ಇತರ ಜೀವರಾಶಿಯೊಡನೆ ತೋರ್ಪಡಿಸುವ ವರ್ತನೆಗಳಲ್ಲಿ ದಯೆ ಮೂಲಭೂತ ಜೀವಾಳವಾಗಿದೆ.ಅಂತೆಯೇ ಬಸವಣ್ಣನವರು ತಮ್ಮ ವಚನದಲ್ಲಿ ಹೇಳಿದ್ದಾರೆ.
ದಯವಿಲ್ಲದ ಧರ್ಮ ಅದಾವುದಯ್ಯ?
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ.
ದಯವೇ ಧರ್ಮದ ಮೂಲವಯ್ಯ.
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯ.
ಬಸವಣ್ಢನವರು ವಿಶ್ಲೇಷಿಸಿದಂತೆ ನಾವು ಮಾನವರನ್ನೊಳಗೊಂಡ ಎಲ್ಲ ಜೀವರಾಶಿಗಳಲ್ಲಿ ದಯೆ ತೋರಬೇಕು.ಅದನ್ನು ತೋರ್ಪಡಿಸದ ಧರ್ಮವೇ ಇಲ್ಲ. ದಯವೇ ಎಲ್ಲ ಧರ್ಮಗಳ ಅಡಿಪಾಯವೆಂದು ಸಾರಿದ್ದಾರೆ. ಈ ಅಂಶವನ್ನು ಜಪಾನಿನಲ್ಲಿ ಪ್ರಚಲಿತವಿರುವ ನಾಣ್ಣುಡಿ ಹೀಗೆ ಪ್ರತಿಧ್ವನಿಸುತ್ತದೆ.’ಒಂದು ಸಾಂತ್ವನಪರ ನುಡಿ ಚಳಿಗಾಲದ ಮೂರು ತಿಂಗಳನ್ನು ಬೆಚ್ಚಗಿರಿಸಬಲ್ಲದು’.
ನಾಗರಿಕ ಜಗತ್ತಿನಲ್ಲಿ ಜೀವನ ನಡೆಸುವ ನಾವು ದಯೆಯನ್ನು ನಮ್ಮ ವಿಶಿಷ್ಟ ಗುಣಧರ್ಮವನ್ನಾಗಿ ಬೆಳೆಸಿಕೊಳ್ಳಬೇಕು.ಅದನ್ನು ಚಾರ್ಲಸ್ ಲೂಕಾಸ ಪುಷ್ಟಿಕರಿಸುತ್ತ ‘ನಾಗರಿಕತೆಯೆಂದರೆ ದಯೆಯನ್ನು ತಿಳಿದುಕೊಳ್ಳುವ ನಿಧಾನಗತಿಯ ಪ್ರಕ್ರಿಯೆ ಎಂದಿದ್ದಾರೆ’ ಈ ಅಂಶವನ್ನು ಜಗತ್ತಿನ ಅನೇಕ ಜನಪದಗಳು ಒಪ್ಪಿವೆ.ಫ್ರೆಂಚ ಗಾದೆಯೊಂದು “ದಯೆಯಿಂದ ಮಾತನಾಡುವದರಿಂದ ನಾಲಿಗೆ ಘಾಸಿಗೊಳ್ಳದು ಎಂದು ಹೇಳುತ್ತದೆ. ನಮ್ಮ ದೈನಂದಿನ ಜೀವನದಲ್ಲಿ,ನಮ್ಮ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ದಯೆಯನ್ನು ಬಹುಮುಖ್ಯ ಭಾಗವಾಗಿ ರೂಡಿಸಿಕೊಳ್ಳಬೇಕು.ಅದರಿಂದ ಹೆಚ್ಚಿನ ಪ್ರತಿಫಲವನ್ನು ಜೀವನದಲ್ಲಿ ಪಡೆದುಕೊಳ್ಳುತ್ತೆವೆ. ದಯೆ ಬಗ್ಗೆ ಎಲ್ಲರೂ ತುಂಬ ಮಹತ್ವ ನೀಡಿದ್ದಾರೆ. ಇಂಗ್ಲೀಷ ಕವಿ ವಿಲಿಯಂ ಕೌಪರ “ಮನುಷ್ಯ ತನ್ನ ಹೃದಯದಿಂದ ದಯೆಯನ್ನು ತೆಗೆದುಹಾಕಬಹುದು.ಆದರೆ ದೇವರು ಎಂದೆಂದೂ ಹಾಗೆ ಮಾಡುವದಿಲ್ಲ” ಎಂದು ಉದ್ಗರಿಸಿದ್ದಾನೆ.ಇದೇ ಅಂಶವನ್ನು ಅಮೇರಿಕನ್ ಲೇಖಕ ವಾಷಿಂಗ್ಟನ್ ಇರ್ವಿಂಗ ಹೇಳಿರುವದು ಹೀಗೆ,” ದಯೆಯಿಂದ ಕೂಡಿದ ಹೃದಯ ಆಹ್ಲಾದಕತೆಯ ಕಾರಂಜಿಯಿದ್ದಂತೆ”. ಅದು ತನ್ನ ಪರಿಸರದಲ್ಲಿರುವುದನ್ನೆಲ್ಲ ಸಂತೋಷಭರಿತವನ್ನಾಗಿಸುತ್ತದೆ. ಮತ್ತೊಬ್ಬ ಅಮೇರಿಕನ್ ಲೇಖಕ ಕ್ರಿಶ್ಚಿಯನ್ ಬೊವೀ ಹೀಗೆ ಹೇಳಿದ್ದಾರೆ. “ದಯೆಯೆಂಬ ಭಾಷೆಯನ್ನು ಮೂಕ ಮಾತನಾಡಬಲ್ಲ,ಮತ್ತು ಅದನ್ನು ಕಿವುಡ ಕೇಳಿ ಅರ್ಥಮಾಡಿಕೊಳ್ಳಬಲ್ಲ”.
ದಯೆಯನ್ನು ತನ್ನ ಜೀವನದ ಮುಖ್ಯ ಗುಣಧರ್ಮವನ್ನಾಗಿ ಹೊಂದಿದ ವ್ಯಕ್ತಿಯ ಒಳಹೊರಗು ಬಸವಣ್ಣನವರು ವರ್ಣಿಸಿದಂತೆ ‘ಒಂದಾಗಿರುತ್ತದೆ’. ‘ಅವರ ಒಳಗೆ ಕುಟಿಲ,ಹೊರಗೆ ವಿನಯ’ವಾಗಿ ವರ್ತಿಸುವದಿಲ್ಲ.ಎಲ್ಲರೂ ಅಂಥವರ ಸಂಗವನ್ನು ಬಯಸುತ್ತಾರೆ.ಆ ವ್ಯಕ್ತಿಗಳ ಅಂತರಂಗ-ಬಹಿರಂಗವೆರಡೂ ಪರಿಶುದ್ಧ.ಅವರು ಭಕ್ತಿಸುಭಾಷೆಯ ನುಡಿಯನ್ನು’ ನುಡಿಯುತ್ತಾರೆ.ನುಡಿದಂತೆ ನಡೆಯುತ್ತಾರೆ.ತಮ್ಮ ನಡೆಯೊಳಗೆ ನುಡಿಯನ್ನು ಪೂರೈಸುತ್ತಾರೆ.ಅಂತಹ ವ್ಯಕ್ತಿಗಳು ಲೇಸನೇ ಬಯಸುತ್ತಾರೆ.ಅಕ್ಕಮಹಾದೇವಿ ಹೇಳಿದಂತೆ ಈ ವ್ಯಕ್ತಿಗಳ ‘ತನುಶುದ್ಧ, ಮನಶುದ್ಧ,ಭಾವಶುದ್ಧ,’ ಅವರ ನಡೆಯಲ್ಲ ಸದಾಚಾರ,ನುಡಿಯೆಲ್ಲ ಶಿವಾಗಮ’ ಅವರು ‘ನಿತ್ಯಶುದ್ಧರಾದವರು’. ಬಸವಣ್ಣನವರ ನುಡಿಯಂತೆ ಎಲ್ಲ ಜನಪದ ದಯೆ ಎಲ್ಲ ಧರ್ಮಗಳ ಮೂಲವೆಂಬ ಮಾತನ್ನು ಒಪ್ಪಿಕೊಂಡಿದ್ದು ಅದಕ್ಕೆ ಮಹತ್ವ ನೀಡಿವೆ.ಜಗತ್ತಿನ ಎಲ್ಲ ಜೀವರಾಶಿಗಳನ್ನು ದಯೆಯಿಂದ ಕಾಣೋಣ. ದಯೆ ಎಂಬ ಪದದಲ್ಲಿ ಅದ್ಭುತ ಶಕ್ತಿ ಇದೆ.ಆ ಪದವನ್ನು ನಾವು ನಿರಂತರ ಹಸಿರಾಗಿಸೋಣ.
-ಜಯಶ್ರೀ ಭ.ಭಂಡಾರಿ.