ಮಳೆಗಾಲ ಸಂಜೆಗೆ ಹೊರಗೆ ಕಾಲಿಡೋಣವೆಂದರೆ, ಅಚಾನಕ್ಕಾಗಿ ಮೋಡಗಳು ಕವಿದು ಸುರಿವ ಮಳೆ, ನಿಲ್ಲುವವರೆಗೆ ಮನೆಯಲ್ಲಿ ಮುದುರಿ ಕುಳಿತು ನಮ್ಮ ಭಾಗದ ಫೇವರಿಟ್ ಬೆಚ್ಚಗಿನ ಮಂಡಾಳು, ಮೇಲೊಂದಿಷ್ಟು ಚುರುಕ್ಕೆನಿಸುವ ಖಾರ, ಈರುಳ್ಳಿ ಓಳು ಮೆಲ್ಲುತ್ತಾ ಕೂಡುವುದು ಜಾಯಮಾನ. ಅದು ಟೈಂಪಾಸ್ ಗಾಗಿ. ಹಾಗೇನೇ ಅದು ಬಿಟ್ಟು ಹುರಿಗಡಲೆ, ಕಾಳು, ಇತ್ಯಾದಿ ಖಯಾಲಿಯವರು ಖಾಲಿ ಮಾಡುವವರಿದ್ದಾರೆ. ಖಾಲಿಯಾಗುತ್ತಲೇ ಕೈ ಕೊಡವಿ ಮೇಲೆದ್ದು ಮಳೆ ನಿಂತಿತಾ? ಇಲ್ಲವಾ? ಅನ್ನುವುದರ ಕಡೆ ಲಕ್ಷ್ಯ ಹೊರಳುತ್ತದೆ.
ಆದರೆ, ಕೊಪ್ಪಳದಲ್ಲೊಬ್ಬ ನನ್ನ ಸ್ನೇಹಿತರು, ವಕೀಲರೂ, ರಾಜ್ಯ ವಕೀಲರ ಸಾಹಿತ್ಯ ಪರಿಷತ್ತಿನ ಸದಸ್ಯರೂ ಆಗಿರುವ ಶ್ರೀ. ವಿಜಯ ಅಮೃತರಾಜ್ ಇವರು ಹಿಡಿಯಷ್ಟು ಕವಿತೆಗಳನ್ನು “ಹುರಿಗಾಳು” ಆಗಿಸಿ ತಂದಿದ್ದಾರೆ. ಆದರೆ, ಅವ್ಯಾವು “ಕಡ್ಡಾಯವಾಗಿ ಟೈಂಪಾಸ್ ಗಾಗಿ ಅಲ್ಲ” ಅನ್ನುವುದು ಓದುಗರಿಗೆ ಅವರ ವಿನಂತಿಯೂ ಹೌದು ಪುಸ್ತಕದೊಳಗಿನ ಕಡಿಮೆ ಸಮಯದಲ್ಲಿ ಓದಿ ನಮ್ಮ ಅನುಭವಕ್ಕೂ ಹೋಲಿಸಿಕೊಂಡು ಹೌದಲ್ಲಾ? ಅನ್ನುವಂಥ ಹುರಿಗಾಳಿನಂಥ ಅಕ್ಷರಗಳ ಹೂರಣವೂ ಹೌದು. ಆ ಸಣ್ಣ ಪುಸ್ತಕದಲ್ಲಿ ಮುಖಪುಟದ ಶೀರ್ಷಿಕೆ, ಲೇಖಕರ ವಿಳಾಸದ ಹೊರತಾಗಿ ಉಳಿದೆಲ್ಲವೂ ಇರುವುದು. ಓದಿಸಿಕೊಂಡು ಹೋಗುವ ಸಣ್ಣ ಪದ್ಯಗಳಷ್ಟೇ. ಅವಕ್ಕೂ ಶೀರ್ಷಿಕೆಗಳ ಹಂಗಿಲ್ಲ. ಅವರು ಬರೆಯುತ್ತಾರೆ;
ಮೈಕು,
ವೇದಿಕೆ, ದೂರವಿದ್ದ
ನನಗೆ,
ಅಕ್ಕರೆಯ ಆಹ್ವಾನಕ್ಕೆ
ಮಣಿದ
ಕ್ಷಣವೇ,
ನಾ
ಮೈಲಿಗೆಯಾದ
ದಿನ!
ಬಹುಶ: ಇದವರ ಗುಣವೂ ಆದದ್ದರಿರಬೇಕು. ಆದ್ದರಿಂದಲೇ ಒಂದು ಪುಸ್ತಕ ರೂಪಕ್ಕೆ ಪದ್ಯಗಳನ್ನು ತಂದು ರೇಖಾ ಚಿತ್ರ, ಮುನ್ನುಡಿ, ಬೆನ್ನುಡಿ ಇದ್ಯಾವುವೂ ಇಲ್ಲದೇ ಸರಳವಾಗಿ, ನೇರವಾಗಿ ಬರೆದದ್ದನ್ನು ಓದುಗನಿಗೆ ತಲುಪಿಸಲು ಹೊಸದೊಂದು ಪ್ರಯತ್ನ ಮಾಡಿದ್ದಾರೆ. ಕೇವಲ ಇಪ್ಪತ್ನಾಲ್ಕು ಪುಟದ ಪುಸ್ತಕದಲ್ಲಿ ನಲವತ್ತೆಂಟು ಪದ್ಯಗಳನ್ನು ನೀಡಿದ್ದಾರೆ. ಪುಸ್ತಕದ ಬೆಲೆ ಕೇವಲ ಐದು ರೂಪಾಯಿ. ಆಂಧ್ರಪ್ರದೇಶದಲ್ಲಿ ದೊಡ್ಡ ದೊಡ್ಡ ಲೇಖಕರು, ಅವರ ಸಣ್ಣ ಕಥೆ, ಕವನಗಳನ್ನು, ಈ ಮಾದರಿಯಲ್ಲಿ ತಂದು ಹೆಚ್ಚು ಓದುಗರನ್ನು ತಲುಪಿ ಆರ್ಥಿಕ ಹೊರೆಯಿಲ್ಲದೇ ಓದಿಗೆ ಹಚ್ಚುವ ಮತ್ತು ಬರಹಗಾರರಿಗೂ ಮುದ್ರಣ, ಬಿಡುಗಡೆ, ಮಾರಾಟದ ಭರದಲ್ಲಿ ಅನುಭವಿಸುವ ಆರ್ಥಿಕ ಸಂಕಷ್ಟದಿಂದ ಹೊರಬರುವ ಇಂಥಾದ್ದೊಂದು ಪ್ರಯತ್ನವನ್ನು ಮಾಡುತ್ತಿದ್ದಾರೆಂತಲೂ ಲೇಖಕರು ಹೇಳುತ್ತಾರೆ. ಅದಲ್ಲದೇ ಒಟ್ಟಾರೆ ಕತೆಗಳ, ಸಣ್ಣ ಕತೆಗಳ, ಕವಿತೆಗಳ ಸಂಕಲನ ಪುಸ್ತಕ ರೂಪದಲ್ಲಿ ತರಲು ಪ್ರಕಾಶಕರ ಹುಡುಕಾಟ, ಅವುಗಳ ಬಿಡುಗಡೆ, ಮಾರಾಟ ಎಲ್ಲಾ ಹಂತ ದಾಟಿ ಓದುಗರ ಕೈತಲುಪಲುಪುವಲ್ಲಿ ಸಮಯ, ವೆಚ್ಚ, ಸಂಪರ್ಕವನ್ನು ಅದಕ್ಕೇ ಆದಂತೆ ಮೀಸಲಿಡಬೇಕಾಗುತ್ತದಲ್ಲದೇ ಅದು ಸೀಮಿತ ಓದುಗರ ಮೀಸಲಾತಿಗೆ ಒಳಗಾಗಬಹುದೆನ್ನುವ ಕಾರಣದಿಂದಲೇ ಅತ್ಯಂತ ಸರಳವಾಗಿ ಈ ಪುಸ್ತಕದ ಬಿಡುಗಡೆಗೊಳಿಸಿ ನಿರುಮ್ಮಳವಾಗಿದ್ದಾರೆ. ಇನ್ನೇನಿದ್ದರೂ ಆಸಕ್ತರು ಕೊಂಡು ಓದಿ ಈ ಪ್ರಯತ್ನಕ್ಕೆ ತಮ್ಮ ಅಭಿಪ್ರಾಯಗಳನ್ನು ತಲುಪಿಸುವ ಹೊಣೆಯನ್ನು ಓದುಗರಿಗೆ ಬಿಟ್ಟಿದ್ದಾರೆ.
ಇನ್ನು ಪುಸ್ತಕದಲ್ಲಿ “ಬೆಕ್ಕು ಸಾಕಿದವ “ ಎನ್ನುವ ಪದ್ಯದಲ್ಲಿ ಬದುಕಿದ್ದಾಗ ಬೆಕ್ಕಿಗೆ ತುತ್ತು ನೀಡದೇ ಇಲ್ಲಿಗಳಿಗೆ ವಿಷವಿಕ್ಕಿದ ಮನುಷ್ಯ ಬೆಕ್ಕು ಹಸಿವಿನಿಂದ ಸತ್ತ ನಂತರ ಅದರ ಬೆಳ್ಳಿ ಮೂರ್ತಿ ಮಾಡಿಸಿ, ಪೂಜಿಸಿ ಶಾಪ ವಿಮೋಚನೆ ಪಡೆದನೆಂದು ಹೇಳುತ್ತಾರೆ. ಇಲ್ಲಿ ನಮ್ಮ ನಡುವೆ ನಡೆದ, ಸಹಜವೆಂಬಂತೆ ನಡೆವ ತಪ್ಪು ಹೆಜ್ಜೆಗಳನ್ನು ಗುರುತಿನ ಸಮೇತ ಹೇಳುತ್ತಾರೆ. ಅದೇ ರೀತಿ “ಹಾಫ್ ರೇಟ್ “ ನಿಂದ ಶುರುವಾಗುವ ಪದ್ಯದಲ್ಲಿ ಚೀಪ್ ರೇಟ್ ವಸ್ತುಗಳೆಲ್ಲಾ ಭಿಕರಿಯಾಗುವುದು ಪ್ರತಿಷ್ಠಿತರ ಬಡಾವಣೆಯಲ್ಲಿ ಎನ್ನುವುದರಲ್ಲೇ ಅವರು ಶ್ರೀಮಂತಿಕೆಯಲ್ಲಿನ ಮನಸ್ಥಿತಿಯನ್ನು ಬಿಂಬಿಸುತ್ತಾರೆ.
“ನೋಣಗಳು ಮೂಸುವುದಿಲ್ಲ, ಭಾವನೆಯಿಲ್ಲದ ಬೆಲ್ಲದ ಕೈಯನ್ನು” ಎನ್ನುವ ಸಾಲಲ್ಲಿ ಸ್ಪಷ್ಟವಾಗಿ ಅವರು ಹೇಳವುದೇನೆಂದರೆ, ಎಷ್ಟೇ ದೊಡ್ಡ ಶ್ರೀಮಂತನಾದರೂ ಸ್ವಲ್ಪವೂ ಕರುಣೆಯಿಲ್ಲದ, ಮಾನವೀಯ ಗುಣವಿಲ್ಲದೇ ಬದುಕುವವರನ್ನು, ಪ್ರಖಾಂಡ ಪಂಡಿತರೆಂಥವರೇ ಇದ್ದರೂ ಅವರ ವಿದ್ಯೆ ಹಂಚದೇ, ಮುಂದಿನ ಪೀಳಿಗೆಗೆ ಧಾರೆಯೆರೆಯದವರನ್ನು ಬೆಲ್ಲವೆನ್ನುತ್ತಿರಬಹುದು. ಅಥವಾ ನಾನು ಅರ್ಥೈಸಿಕೊಂಡದ್ದಿರಬಹುದು.
ಮಧು ಶಾಲೆಯ
ಮೈದಾನದಲ್ಲಿ
ಹಣ ಕೇಳುವವನ ಮುಖದಲ್ಲಿ,
ಕ್ಷಣ, ನನ್ನ ಪ್ರತಿಬಿಂಬ,!
ಏರಿದ ನಶೆಯು
ತಣ್ಣಗೆ ಇಳಿಯಿತು.
ಬಹುಶ: ಈ ಸಾಲುಗಳನ್ನು “ಅನುಭವ” ಸ್ಥರು ಒಪ್ಪಿಕೊಳ್ಳುವವರು;
ಹಿತಶತ್ರುಗಳ
ಸಣ್ಣ ಸಣ್ಣ
ಉಳಿಪೆಟ್ಟು
ಸಿಕ್ಕಿದ್ದು
ಭಾಗ್ಯವಲ್ಲವೇ?
ಎನ್ನುವ ಸಾಲುಗಳನ್ನೂ ಸಲೀಸಾಗಿ ಒಪ್ಪಿಕೊಳ್ಳಬೇಕು.
ಹೂ
ಮಾತ್ರ
ಹಣ ನೀಡಿ
ಕೊಳ್ಳಬಹುದು,
ಘಮಲು ಮಾತ್ರ
ಉಚಿತ,
ಸಾರ್ವತ್ರಿಕ
ಈ ಸಾಲುಗಳಲ್ಲೇ ಅವರು ಈ ಪುಸ್ತಕದ ಆಶಯವಿಟ್ಟುಕೊಂಡು ಇನ್ನೊಂದು ಪದ್ಯ ಬರೆಯುತ್ತಾರೆ;
ಮಲ್ಲಿಗೆ
ಹುಚ್ಚಿ
ಮುಡಿದರೂ
ಜಾಣೆ
ಮುಡಿದರೂ,
ಸುವಾಸನೆ
ಕಡಿಮೆಯಾಗದು….
ಒಂದು ತಂಪು ಸಂಜೆಗೆ ವೇಳೆಗೆ ಕೈ ಹಿಡಿದು ಕುಳಿತರೆ ಹೀಗೆ ಇನ್ನು ಹಲವು “ಹುರಿಗಾಳು” ಪದ್ಯಗಳು ಕಡಿಮೆ ಸಮಯದಲ್ಲೇ ಖಾಲಿಯಾಗುತ್ತವೆ. ಆಸಕ್ತರು “ಹುರಿಗಾಳು” ಕೊಳ್ಳಲು. (ಪುಸ್ತಕದ ಮುಖಪುಟದಲ್ಲಿ ಅವರ ವಿಳಾಸವಿದೆ) ಲೇಖಕರನ್ನು ಸಂಪರ್ಕಿಸಬಹುದು.
****
ಶ್ರೀ ವಿಜಯ್ ಅಮೃತರಾಜ್ ರ 'ಹುರಿಗಾಳು' ಹಿಡಿಯಷ್ಟು ಕವಿತೆಗಳನ್ನು ಓದಿದ್ದೇನೆ.
ನಿಜವಾಗಿಯೂ ಅವು ಟೈಮ್ ಪಾಸ್ ಗಾಗಿ ಬರೆದ ಕವಿತೆಗಳಲ್ಲ.
ಪ್ರತಿಯೊಬ್ಬ ಜೀವನದಲ್ಲಿ ನಡೆಯಬಹುದಾದಂತಹ
ಸಹಜ ಘಟನೆಗಳು. ಅದರಲ್ಲಿ ತುಂಬಾ ಇಷ್ಟವಾದದ್ದು –
"ಮಾತು ಭಾರವವೇ?
ಮೌನ ಭಾರವೇ?
ಮಹಾಮೌನಿ
ವಾಚಾಳಿಗಂತು
ಹೆಣದ ಭಾರ। "
'ಹುರಿಗಾಳು' ಕಡ್ಡಾಯವಾಗಿ ಟೈಮ್ ಪಾಸ್ ಗಲ್ಲ – ಬರೆದ
ಶ್ರೀ ವಿಜಯ್ ಅಮೃತರಾಜ್ ರವರಿಗೂ ಹಾಗೂ ಅದನ್ನು ನನಗೆ ನೀಡಿದ
ಶ್ರೀ ಪಿ.ಎಸ್. ಅಮರದೀಪ್ ರವರಿಗೂ ನನ್ನ ಧನ್ಯವಾದಗಳು.
ಚಂದದ ಹುರಿಗಾಳು
hurigadaleya ruchi tindavne balla
ಹುರಿಗಾಳು ಚೆನ್ನಾಗಿತ್ತು… ಬಾಯಲ್ಲಿ ನೀರೂರಿಸಿತ್ತು.. ಕೆಟ್ಟುಹೋದ ನಾಲಿಗೆಗೆ ಹೇಗೆ ಹುರಿಗಾಳು ಚೆಂದವೋ… ನೋವುಂಡ ಮನಸ್ಸಿಗೆ amruth raj ರವರ ಹುರಿಗಳು ಕವಿತೆಗಳು…
Very nice Article Sir